ಆಪಲ್ (ಐಫೋನ್ ) ಇಲ್ಲ:ಗದ್ದಲ

ಆಪಲ್ (ಐಫೋನ್ ) ಇಲ್ಲ:ಗದ್ದಲ

 ಆಪಲ್ (ಐಫೋನ್ ) ಇಲ್ಲ:ಗದ್ದಲ



ಚೀನಾದಲ್ಲಿ ಈ ವಾರ ಐಫೋನ್4s ಮಾರಾಟ ಆರಂಭವಾಗಬೇಕಿತ್ತು.ಆದರೆ ಮೊದಲ ದಿನದ ಜನರ ಗುಂಪು,ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತು.ನೂಕು ನುಗ್ಗಲು ಏರ್ಪಟ್ಟಾಗ ಮಾರಾಟವನ್ನು ಮುಂದೂಡಬೇಕಾಯಿತು.ರಾತ್ರಿಯೇ ಸಾಲುಗಟ್ಟಿ ನಂತ ಜನರು,ಈ ಪ್ರಕಟಣೆಯಿಂದ ಕಂಗೆಟ್ಟು ಮೊಟ್ಟೆಗಳನ್ನೆಸೆದು ಪ್ರತಿಭಟನೆ ವ್ಯಕ್ತ ಪಡಿಸಿದರು.ಆಪಲ್ ಐಫೋನ್‌ಗೆ ಚೀನಾದಲ್ಲೂ ಬಹು ಬೇಡಿಕೆಯಿರುವುದು  ವ್ಯಕ್ತವಾಯಿತು.ಕೆಲವರು ಐಫೋನಿಗೆ ನಿಗದಿತ ದರದ ಒಂದೂವರೆ ಪಟ್ಟು ದರ ನೀಡಲೂ ತಯಾರಿದ್ದರು.ಕಾಳಸಂತೆಯಲ್ಲಿ ಮಾರಾಟ ಮಾಡಲು ಬಯಸಿದವರು ಮತ್ತು ನೈಜ ಖರೀದಿದಾರರ ಪ್ರತಿನಿಧಿಗಳು ಸಾಲುಗಟ್ಟಿ ನಿಂತಿದ್ದದ್ದು ಗದ್ದಲಕ್ಕೆ ಮುಖ್ಯ ಕಾರಣ.ಆಪಲ್ ಚೀನಾದಲ್ಲಿ ಐಪೋನ್ ಮಾರಾಟವನ್ನು ಬೇಕೆಂದೇ ತಡ ಮಾಡಿ,ಅದಕ್ಕೆ ಜನರು ಮುಗಿ ಬೀಳುವಂತೆ ಮಾಡಿದೆ ಎಂದು ಆರೋಪಗಳೂ ಕೇಳಿ ಬರುತ್ತಿದೆ.
---------------------------------------------
ಡೆಸ್ಕ್‌ಟಾಪ್‌ಗಳು ಕಣ್ಮರೆ:ಇನ್ನೇನಿದ್ದರೂ ಅಲ್ಟ್ರಾಬುಕ್‌ಗಳ ಕಾಲ
ಡೆಸ್ಕ್‌ಟಾಪ್‌ಗಳ ದಿನಗಳಿನ್ನು ಬೆರಳೆಣಿಕೆಯಲ್ಲಿವೆ.ಕಂಪ್ಯೂಟರ್ ಆಟಗಳನ್ನಾಡುವವರು,ವಿನ್ಯಾಸ-ಚಿತ್ರ ರಚನೆಯಲ್ಲಿ ತೊಡಗುವವರು ಮುಂತಾದ ಕೆಲವು ರೀತಿಯ ಬಳಕೆದಾರರನ್ನು ಹೊರತು ಪಡಿಸಿ,ಇತರ ರೀತಿಯ ಬಳಕೆದಾರರು ಡೆಸ್ಕ್‌ಟಾಪ್ ಬಳಕೆಯನ್ನು ನಿಲ್ಲಿಸಿ,ಲ್ಯಾಪ್‌ಟಾಪ್.ಟ್ಯಾಬ್ಲೆಟ್,ಸ್ಮಾರ್ಟ್‌ಫೋನುಗಳತ್ತ ವಾಲುತ್ತಿದ್ದಾರೆ.ಡೆಸ್ಕ್‌ಟಾಪ್ ಬಳಕೆದಾರರು ನಾಲ್ಕು ಜೀಬಿ ರಾಮ್,ಒಂದು ಟೆರಾಬೈಟು ಸ್ಮರಣಕೋಶವನ್ನು ಹೊಂದಿರುವುದು ಸಾಮಾನ್ಯ.ಎ ಎಂ ಡಿ ಮತ್ತು ಇಂಟೆಲ್‌ನ ಬಹುಸಂಖ್ಯೆಯ ಸಂಸ್ಕಾರಕವನ್ನು ಹೊಂದಿರುವುದು ಸಾಮಾನ್ಯ.ವಿಶಾಲ ತೆರೆ ಮತ್ತು ಟೈಪಿಸುವುದನ್ನು ಸಲೀಸಾಗಿಸುವ ಕೀಲಿಮಣೆಯನ್ನು ಇವು ಹೊಂದಿರುವುದರಿಂದ,ಇದಕ್ಕೆ ಅಭಿಮಾನಿಗಳೂ ಇದ್ದಾರೆ.ಸ್ಪರ್ಶ ಸಂವೇದಿ ತೆರೆಯನ್ನು ಹೊಂದಿರುವ ಡೆಸ್ಕ್‌ಟಾಪ್‌ಗಳು ಕಡಿಮೆಯಾದರೂ,ಇಲ್ಲವೇ ಇಲ್ಲವೆಂದಿಲ್ಲ.
ಮರೆಯಾಗುತ್ತಿರುವ ಡೆಸ್ಕ್‌ಟಾಪುಗಳ ಸ್ಥಾನವನ್ನು ಉಲ್ಟ್ರಾಬುಕ್‌ಗಳು ಆಕ್ರಮಿಸಬಹುದು.ಉಲ್ಟ್ರಾಬುಕ್‌ಗಳೆಂದರೆ ಲೋಹದ  ಮೇಲ್ಮೈಹೊಂದಿರುವ ತೆಳುವಾದ,ಲ್ಯಾಪ್‌ಟಾಪುಗಳು.ಇವುಗಳನ್ನು ಹಗುರ ಮಾಡಲು,ಇವುಗಳಲ್ಲಿ ಹಾರ್ಡ್‌ಡಿಸ್ಕ್ ಬದಲಿಗೆ ಫ್ಲಾಶ್ ಸ್ಮರಣಕೋಶಗಳನ್ನು ಬಳಸಲಾಗುತ್ತಿದೆ.ಡೆಸ್ಕ್‌ಟಾಪುಗಳಲ್ಲಿ ಸ್ಪರ್ಶಸಂವೇದಿ ತೆರೆಗಳು ಜನಪ್ರಿಯವಾಗಿಲ್ಲವಾದರೂ,ಅಲ್ಟ್ರಾಬುಕ್‌ಗಳಲ್ಲಿ ಇಂತಹ ತೆರೆಗಳು ಕಡ್ಡಾಯವಾಗಿ ಬೇಕೇ ಬೇಕು.ಡೆಲ್ ಕಂಪೆನಿಯು ಟ್ಯಾಬ್ಲೆಟ್ ಮತ್ತು ಸ್ಮಾರ್ಟ್‌ಫೋನು ತಯಾರಿಸಿ,ಮಾರಾಟಕ್ಕೆ ಒದಗಿಸಿದರೂ ಯಶಸ್ಸು ಕಾಣಲಿಲ್ಲ.ಏಸರ್ ಮತ್ತು ಡೆಲ್ ಕಂಪೆನಿಗಳು ನೆಟ್‌ಬುಕ್ ಮಾರಾಟದಲ್ಲಿ ಸಫಲತೆ ಕಂಡಿವೆ.
-------------------------------------------------
ಬಿಲಿಯನ್ ಬಳಕೆದಾರರತ್ತ ಫೇಸ್‌ಬುಕ್ ದಾಪುನಡಿಗೆ
ಭಾರತದಲ್ಲಿ ಫೇಸ್‌ಬುಕ್,ಗೂಗಲ್,ಅರ್ಕುಟ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೇಲೆ ಕ್ರಮ ತೆಗೆದುಕೊಳ್ಳುವ ಸರಕಾರದ ನಿರ್ಧಾರ ಪ್ರಕಟಣೆಯಾಗಿದೆ.ಅತ್ತ ಈ ಸಾಮಾಜಿಕ ಜಾಲತಾಣಗಳ ಜನಪ್ರಿಯತೆ ಎಗ್ಗಿಲ್ಲದೆ ಮುಂದುವರಿದಿದೆ.ಸದ್ಯ ಫೇಸ್‌ಬುಕ್ ಎಂಬತ್ತು ದಶಲಕ್ಷ ಬಳಕೆದಾರರನ್ನು ಹೊಂದಿ,ಈ ಜಾಲತಾಣಗಳ ಪೈಕಿ ಅಗ್ರಗಣ್ಯ ಸ್ಥಾನ ಪಡೆದಿದೆ.ಈ ಬೆಳವಣಿಗೆ ದರ ಹೀಗೇ ಮುಂದುವರಿದರೆ,ಆಗಸ್ಟ್ ವೇಳೆಗೆ ಅದು ಒಂದು ಬಿಲಿಯನ್ ಬಳಕೆದಾರರನ್ನು ಹೊಂದುವುದು ಸಂಭವನೀಯವೆಂದು ಸಂಶೋಧನೆಯೊಂದು ಭವಿಷ್ಯ ನುಡಿದಿದೆ.
ಭಾರತ ಸರಕಾರವು ದ್ವೇಷ ಹಬ್ಬಿಸುವ ಬರಹಗಳ ಪ್ರಕಟಣೆ ಮಾಡದಂತೆ ಸಾಮಾಜಿಕ ಜಾಲತಾಣಗಳಿಗೆ ಎಚ್ಚರಿಕೆ ನೀಡಿದೆ.ಆಕ್ಷೇಪಾರ್ಹ ಮಾಹಿತಿಯನ್ನು ಕಿತ್ತೆಯಲು ಸಾಮಾಜಿಕ ಜಾಲತಾಣಗಳಿಗೆ ಸರಕಾರ ಹೇಳಿದೆ.ಆದರೆ ಸಾಮಾಜಿಕ ಜಾಲತಾಣಗಳ್ ಹಾಗೆ ಮಾಡಲು ನಿರಾಕರಿಸಿ ಸಡ್ಡು ಹೊಡೆದಿರುವುದು,ಸಮಸ್ಯೆಯ ಮೂಲ.ಇಪ್ಪತೊಂದು ಜಾಲತಾಣಗಳ ಮೇಲೆ ಕ್ರಮಕ್ಕೆ ಸರಕಾರ ನಿರ್ಧರಿಸಿದೆ.
--------------------------------------------------------------
ಗೂಗಲ್ ಶೋಧ:ಹೊಸ ವರಸೆ
ಗೂಗಲನ್ನು ಬಳಸಿ ಶೋಧ ನಡೆಸಿದಾಗ,ಅಂತರ್ಜಾಲದ ಪುಟಗಳ ಮಾಹಿತಿಯಲ್ಲಿ  ಶೋಧ ನಡೆಯುತ್ತದೆ.ಆದರೆ ಈಗ ಗೂಗಲ್ ಈ ಶೋಧದಲ್ಲಿ ಗೂಗಲ್ ಪ್ಲಸ್ ಅಲ್ಲಿ ಶೋಧ ನಡೆಸುವವನ ಖಾತೆಯಲ್ಲಿ ಆತನ ಸಹಚರರು ಹಾಕಿದ ಮಾಹಿತಿಯನ್ನೂ ಪ್ರತ್ಯೇಕವಾಗಿ ಶೋಧಿಸಿ,ಫಲಿತಾಂಶದಲ್ಲಿ ಸೇರಿಸುವ ಕ್ರಮ ತೆಗೆದುಕೊಂಡಿದೆ.ಹೀಗಾಗಿ,ಶೋಧವು ಅದನ್ನು ನಡೆಸುವವನಿಗೆ ಹೆಚ್ಚು ಪ್ರಸ್ತುತವಾದ ಫಲಿತಾಂಶವನ್ನು ನೀಡುವ ಸಾಧ್ಯತೆ ಉಜ್ವಲವಾಗುತ್ತದೆ.ಪೇಸ್‌ಬುಕ್ ಜಾಲತಾಣವು ತನ್ನಲ್ಲಿನ ಮಾಹಿತಿಗೆ ಗೂಗಲ್ ಕೈಹಾಕದಂತೆ ಎಚ್ಚರಿಕೆ ವಹಿಸಿರುವುದು,ಗೂಗಲ್‌ಗೆ ಬಹಳ ದೊಡ್ಡ ಹಿನ್ನಡೆ.ಫೇಸ್‌ಬುಕ್‌ನ ಎಂಭತ್ತು ದಶಲಕ್ಷ ಬಳಕೆದಾರರು ಹಾಕಿರುವ ಅಗಾಧ ಮಾಹಿತಿಯು ಗೂಗಲ್ ಶೋಧದಲ್ಲಿ ಸೇರ್ಪಡೆಯಾಗದೆ ಹೊರಗುಳಿಯುವುದು,ಗೂಗಲಿಗೆ ದೊಡ್ಡ ಹೊಡೆತವೇ ಸರಿ.
ಗೂಗಲ್ ಶೋಧದತ್ತ ಕಣ್ಣಿಟ್ಟರೆ,ಸಾಂಕ್ರಾಮಿಕ ರೋಗಗಳ ಹಬ್ಬುವಿಕೆ ಬಗ್ಗೆ ಮುನ್ಸೂಚನೆ ಸಿಗುತ್ತದೆ ಎನ್ನುವುದು ವ್ಯಕ್ತವಾಗಿದೆ.ಯಾವುದೇ ರೋಗ ಹಬ್ಬಿದಾಗ,ಜನರು ಅವುಗಳ ಬಗ್ಗೆ ಶೋಧ ನಡೆಸಿ,ರೋಗಗಳಿಗೆ ಕಾರಣ,ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ,ಔಷಧದ ಲಭ್ಯತೆ ಇತ್ಯಾದಿಗಳ ಬಗ್ಗೆ ತಿಳಿದುಕೊಳ್ಳಲು ಆ ರೋಗಗಳ ಬಗ್ಗೆ ಶೋಧ ನಡೆಸುವುದರಿಂದ,ಆ ರೋಗದ ಬಗೆಗಿನ ಶೋಧ ಸಂಖ್ಯೆಯಲ್ಲಿ ಏರಿಕೆಯಾಗುತ್ತದೆ.ಇದನ್ನು ಅರಿತರೆ,ರೋಗಗಳ ಹಬ್ಬುವಿಕೆಯ ಬಗ್ಗೆ ಮುನ್ಸೂಚನೆ ಸಿಗುತ್ತದೆ.
---------------------------------------------------
ಆಂಡ್ರಾಯಿಡ್:ಸ್ಟೈಲ್‌ಶೀಟ್
ಆಂಡ್ರಾಯಿಡ್ ತಂತ್ರಾಂಶ ಅಭಿವೃದ್ಧಿ ಪಡಿಸುವವರು ನಿಗದಿತ ವಿನ್ಯಾಸ ಮತ್ತು ನಿಗದಿತ ಗುಣಮಟ್ಟದ ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸುವತ್ತ ಗಮನಹರಿಸ ಬೇಕೆಂದು ಗೂಗಲ್ ಬಯಸಿದೆ.ಹೀಗಾಗಿ ಅದು ತಂತ್ರಾಂಶ ಅಭಿವೃದ್ಧಿ ಪಡಿಸುವವರಿಗಾಗಿ ಸ್ಟೈಲ್‌ಶೀಟ್ ಮತ್ತು ಸಲಹೆ ಸೂಚನೆಗಳನ್ನು ನೀಡಿದೆ.ಇದರಿಂದ ಆಂಡ್ರಾಯಿಡ್ ಅಪ್ಲಿಕೇಶನ್‌ಗಳ ಬಳಕೆ ಸುಲಭವಾದೀತು.ಒಂದೊಂದು ಅಪ್ಲಿಕೇಶನ್ ಒಂದೊಂದು ನಮೂನೆ ಕಾಣಿಸುವ ಸಾಧ್ಯತೆಯಿನ್ನು ಕಡಿಮೆಯಾಗಲಿದೆ.
--------------------------------------------
ಕಾರುಗಳೀಗ ಸ್ಮಾರ್ಟ್
ತಂತ್ರಜ್ಞಾನದ ಬಗೆಗಿನ ವಾರ್ಷಿಕ ಪ್ರದರ್ಶನದಲ್ಲಿ ಪ್ರದರ್ಶಿತವಾದ ಹೊಸ ತಂತ್ರಜ್ಞಾನಗಳ ಪೈಕಿ,ಕಾರು ತಯಾರಕರ ಪ್ರದರ್ಶನ ಜನರ ಗಮನ ಸೆಳೆಯಿತು.ಇದರಲ್ಲಿ ಮರ್ಸಿಡೀಸ್ ಬೆಂಜ್,ಫೋರ್ಡ್,ಆಡಿ ಮುಂತಾದ ಕಾರುಗಳು ಸೇರಿದ್ದುವು.ಮರ್ಸಿಡೀಸ್ ಬೆಂಜ್ ಕಾರಿನಲ್ಲಿ ಕಾರಿನ ವಿಂಡ್‌ಶೀಲ್ಡ್‌ನ ಸ್ಪರ್ಶಸಂವೇದಿ ತೆರೆಯಲ್ಲಿ ರಸ್ತೆಯ ದೃಶ್ಯದ ಜತೆ,ರಸ್ತೆಯಲ್ಲಿನ ಕೆಲವು ಮಾರಾಟಮಳಿಗೆಗಳ ಮತ್ತು ಸ್ಮಾರಕ-ಮ್ಯೂಸಿಯಂ ಅಂತಹ ಪ್ರವಾಸಿ ತಾಣಗಳ ವಿವರಗಳೂ ಮಿಳಿತವಾಗಿ ಕಾಣಿಸಿಕೊಳ್ಳುತ್ತವೆ.ಇವುಗಳನ್ನು ಸ್ಪರ್ಶಿಸದರೆ,ಅವುಗಳ ಬಗೆಗಿನ ವಿವರಗಳು ಗೋಚರವಾಗುತ್ತವೆ.ಮಾತ್ರವಲ್ಲದೆ,ಬೇಕಿದ್ದರೆ ಟಿಕೆಟ್ ಖರೀದಿ,ಮುಂಗಡ ಸ್ಥಳ ಕಾದಿರಿಸುವಿಕೆ ಮುಂತಾದ ಸವಲತ್ತುಗಳನ್ನೂ ಪಡೆಯಬಹುದು.ಪೋರ್ಡ್ ಕಾರಿನಲ್ಲಿ ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿ ಹಾಕಿಕೊಂಡಾಗ,"ನಾನು ಬರುವುದು ತಡವಾಗಬಹುದು"ಎನ್ನುವ ಸಂದೇಶ ಕಾಣಿಸಿಕೊಳ್ಳುತ್ತದೆ.ಸಂದೇಶವನ್ನು ಧ್ವನಿ ಅಥವಾ ಸ್ಪರ್ಶದ ಮೂಲಕ ಸಂದೇಶವಾಗಿ ಕಳುಹಿಸಲು ಸಾಧ್ಯವಿದೆ.ಹೀಗಾಗಿ ಟೈಪಿಸುವ ಅಗತ್ಯ ಇಲ್ಲದೆಯೇ ಸಂದೇಶ ರವಾನಿಸಲು ಸಾಧ್ಯವಾಗುತ್ತದೆ.
-------------------------------------------------------------


Udayavani 
ಅಶೋಕ್‌ಕುಮಾರ್ ಎ

 
 

Comments