"ಗುಮ್ಮನ ಕರೆಯದಿರೆ.."
ಡಬ್ಬಾ ಟಾಕೀಸ್!
ಸುಮಾರು ವರ್ಷಗಳ ಹಿಂದೆ ಅಂಥದೊಂದು ಹೆಸರಿನ ಸಿನೆಮಾ ಟಾಕೀಸು ಗದುಗಿನಲ್ಲಿತ್ತು.ತಮಾಷೆಯೆಂದರೆ,
'ಮಹಾಲಕ್ಷ್ಮಿ ಚಿತ್ರಮಂದಿರ' ಎಂಬ ಸುಂದರವಾದ ಡೀಸೆಂಟ್ ಹೆಸರೊಂದು ಈ ಟಾಕೀಸಿಗಿತ್ತಾದರೂ ಗದುಗಿನಲ್ಲಿ ಯಾರೊಬ್ಬರೂ
ಅದನ್ನು ಅದರ ನಿಜನಾಮಧೇಯದಿಂದ ಗುರುತಿಸುತ್ತಿರಲಿಲ್ಲ.ಅವರಿಗೆಲ್ಲ 'ಡಬ್ಬಾ ಟಾಕೀಸ್' ಅಂದರೆ ಮಾತ್ರ ಗೊತ್ತಾಗುತ್ತಿತ್ತು.
ಇಂಥದೊಂದು ಟಾಕೀಸಿನ interior ದೃಶ್ಯ ನಿಜಕ್ಕೂ ನೋಡುವಂತಿರುತ್ತಿತ್ತು.
ಸಿನೆಮಾ ನೋಡುತ್ತಿರುವಾಗ ಹುಚ್ಚಾಗಿಯೋ,ಥ್ರಿಲ್ಲಾಗಿಯೋ ಪ್ರೇಕ್ಷಕ ಮಹಾಶಯ ತೂರಿಬಿಟ್ಟ ಪೇಪರ್ ರಾಕೆಟ್ಟುಗಳು
ಟಾಕೀಸಿನ ಸೀಲಿಂಗಿಗೆ ವರ್ಷಗಟ್ಟಲೇ ಅಂಟಿಕೊಂಡಿದ್ದರೆ,ಎಲೆಅಡಿಕೆಯ ಪ್ರೋಕ್ಷಣೆಯಿಂದ ನೆಲವೆಲ್ಲ ರೆಡ್ಡುರೆಡ್ದಾದ
ಕಾರ್ಪೆಟ್ಟಿನಂತೆ ಕಂಗೊಳಿಸುತ್ತಿತ್ತು.ಅಪರೂಪಕ್ಕೊಮ್ಮೆ ಪ್ರದರ್ಶಿಸುತ್ತಿದ್ದ ದೆವ್ವದ ಸಿನೆಮಾ ನೋಡಲು ಬಂದ ಪ್ರೇಕ್ಷಕರ ಕಾಲಡಿ
ಇಲಿ,ಜಿರಳೆಗಳು ಸದ್ದಿಲ್ಲದೇ ಹರಿದಾಡಿ ಆ ಇಡೀ ಹಾರರ್ ಸೀನಿಗೆ ಡಬಲ್ ಕಿಕ್ ಕೊಡುತ್ತಿದ್ದವು.ಯಾವತ್ತಾದರೊಮ್ಮೆ ಹಿಟ್ಟಾದ
ಸಿನೆಮ ಬಂದುಬಿಟ್ಟರೆ ಟಿಕೆಟ್ಟುಗಳನ್ನು ಸಿಕ್ಕಂತೆ ಸೇಲು ಮಾಡಿ ಪ್ರೇಕ್ಷಕರಿಗೆ ಕುಳಿತುಕೊಳ್ಳಲೂ ಸೀಟು ಸಿಗದೇ ತಗಡಿನ ಕುರ್ಚಿ,
ಮರದ ಕುರ್ಚಿ,ಕೊನೆಗೆ ಬೆಂಚೂ ಕೂಡ ಹಾಕಲಾಗುತ್ತಿತ್ತು.ಅದು ಬಿಡಿ,ಥೇಟರ್ ನೊಳಗೆ pillar ಗಳಿರುವದನ್ನು ಎಲ್ಲಾದರೂ
ಕೇಳಿದ್ದೀರಾ?ಇಲ್ಲಿ ಪ್ರೇಕ್ಷಕ ಮತ್ತು ಪರದೆಯ ಮಧ್ಯೆ ಅಲ್ಲಲ್ಲಿ ಐದಾರು ಕಂಬಗಳಿದ್ದು,ಅಂಥ ಕಂಬಗಳ ಹಿಂದೆ ಕುಳಿತುಕೊಳ್ಳುವದು
ಯಾರಿಗೂ ಇಷ್ಟವಿರಲಿಲ್ಲವಾದ್ದರಿಂದ ಸೀಟಿಗಾಗಿ ಆಗಾಗ ಸಣ್ಣಪುಟ್ಟ ಯುದ್ಧಗಳಾಗುತ್ತಿದ್ದವು.
ಇಷ್ಟಾದರೂ ಡಬ್ಬಾ ಟಾಕೀಸು ಎಲ್ಲರ ಮನದಲ್ಲಿ ನೆಲೆಯೂರಿತ್ತು.ಯಾಕೆಂದರೆ,ಆ ಟಾಕೀಸಿನವರ ಪ್ರಾಮಾಣಿಕತೆಯ ಪರಾಕಾಷ್ಟತೆ
ಎಷ್ಟಿತ್ತೆಂದರೆ,ಜನರೇಟರ್ ಸೌಲಭ್ಯವಿಲ್ಲದ ಈ ಥೇಟರ್ ನಲ್ಲಿ ಕರೆಂಟು ಕೈಕೊಟ್ಟರೆ ಸಿನೆಮಾ ಅಲ್ಲಿಗೇ ಶುಭಂ!
ಹಾಗೆ ಸಿನೆಮಾ ಅರ್ಧಕ್ಕೆ ಬಿಟ್ಟು ಮನೆಗೆ ಹೊರಟ ಪ್ರೇಕ್ಷಕರಿಗೆ ಅವರವರ ಟಿಕೆಟ್ಟಿನಲ್ಲಿ ಮಾರ್ಕ್ ಮಾಡಿ ಮರುದಿನ ಅದೇ ಸಿನೆಮ
ಮತ್ತೊಮ್ಮೆ ನೋಡಲು ಅವಕಾಶ ಕಲ್ಪಿಸಲಾಗುತ್ತಿತ್ತು.
ಇಂತಿಪ್ಪ ಡಬ್ಬಾ ಟಾಕೀಸು ನನ್ನ ಬಾಲ್ಯದ ಮಲ್ಟಿಪ್ಲೆಕ್ಸ್ ಆಗಿತ್ತು.ಆವತ್ತಿನ ಅತ್ಯುತ್ತಮ ಸಂದೇಶವುಳ್ಳ ಚಿತ್ರಗಳನ್ನು ನಾನು
ನೋಡಿದ್ದು ಇಲ್ಲಿಯೇ.ಈ ಟಾಕೀಸಿನಲ್ಲಿ ನನಗೆ free entry ಅಷ್ಟೇ ಅಲ್ಲ,wild card entry ಥರ ನಾನು ಯಾವಾಗ
ಬೇಕಾದರೂ ನುಗ್ಗಿ ಹೊರಬರಬಹುದಿತ್ತು.ಯಾಕೆಂದರೆ,ನಮ್ಮಜ್ಜ ಇಲ್ಲಿ projector operator ಆಗಿದ್ದ! ನನ್ನ ಸೋದರಮಾವ
ಟಿಕೇಟು ಹರಿದುಕೊಡುತ್ತಿದ್ದ.ಹೀಗಾಗಿ ಟಾಕೀಸಿಗೆ ಬರುವ ಎಲ್ಲ ಸಿನೆಮಾಗಳಿಗೂ ನಮ್ಮ ಇಡೀ ಕುಟುಂಬಕ್ಕೆ ಎಂಟ್ರಿ ಫ್ರೀ ಇತ್ತು.
ಹಾಗಂತ ನನ್ನದೇನೂ ಖುಷಿಪಡುವ ಪರಿಸ್ಥಿತಿ ಇರಲಿಲ್ಲ.ಮನೆಮಂದಿಯೆಲ್ಲ ಎಂಥ ಸಿನೆಮಾಗೆ ಹೋಗಬೇಕು ಎಂಬುದನ್ನು
ಅಜ್ಜ ಸೆನ್ಸಾರ್ ಮಾಡುತ್ತಿದ್ದ.ಹಾಗಾಗಿ ನಾವೆಲ್ಲ ನೋಡಿದ್ದು ಸತಿ ಸಕ್ಕೂಬಾಯಿ,ಚಂದ್ರಹಾಸ,ಕೃಷ್ಣದೇವರಾಯ,ಲವಕುಶ,
ದೇವರ ಮಕ್ಕಳು,ಮಕ್ಕಳ ಸೈನ್ಯ-ಬರೀ ಇಂಥ ಚಿತ್ರಗಳನ್ನೇ! ಹಾಗೆ ಸಿನೆಮಾ ನೋಡಲು ಹೋದಾಗ ನಮಗೆಲ್ಲ ಬಾಲ್ಕನಿ
ಸೀಟಿನ ಎತ್ತರದ row ಒಂದನ್ನು ಕಾಯ್ದಿರಿಸಲಾಗುತ್ತಿತ್ತು.ಮತ್ತು ಇದೇ ಸೀಟು ನನ್ನಲ್ಲಿ ಒಂಥರಾ ಸಿಟ್ಟು ತರಿಸುತ್ತಿತ್ತು.
ಜಾಸ್ತಿ ದುಡ್ಡು ಕೊಟ್ಟು ಸಿನೆಮಾ ನೋಡುವವರಿಗೆ ಪರದೆಯ ಎದುರಿಗೇ ಕೂಡಿಸುತ್ತಾರೆಂದೂ,ಕಡಿಮೆ ದುಡ್ಡು ಕೊಟ್ಟವರಿಗೆ
ಹಿಂದಿನ ಬಾಲ್ಕನಿ ಸೀಟು ಕೊಡುತ್ತಾರೆಂದೂ ಮತ್ತು ನಮ್ಮಂಥ 'ಫ್ರೀ' ಗಿರಾಕಿಗಳಿಗೆ ಎಲ್ಲಕ್ಕಿಂತ ಹಿಂದೆ ಜಾಗ
ಕೊಡುತ್ತಾರೆಂದೂ ನನ್ನ ನಂಬಿಕೆಯಾಗಿತ್ತು.ಹಾಗಾಗಿ ಪ್ರತೀಬಾರಿ ಪಿಕ್ಚರ್ ಗೆ ಹೋದಾಗಲೂ ಮುಂದಿನ ಸೀಟಾದ
'ಗಾಂಧೀಕ್ಲಾಸ್' ಗೆ ಹೋಗುತ್ತೇನೆಂದು ಮನೆಯವರಿಗೆ ಗಂಟು ಬೀಳುತ್ತಿದ್ದೆ.ಅಕ್ಕನಿಗೆ ಏನು ಹೇಳಬೇಕೆಂಬುದು ಗೊತ್ತಾಗದೆ
ತಲೆ ತಲೆ ಚಚ್ಚಿಕೊಳ್ಳುತ್ತಿದ್ದಳು..
ಹೀಗಿದ್ದಾಗ,ಅದೊಮ್ಮೆ ಬಹುಶಃ ನಾನು ಮೂರೋ,ನಾಲ್ಕೋ ಕ್ಲಾಸಿನಲ್ಲಿರಬೇಕು.'ಸಂಪೂರ್ಣ ರಾಮಾಯಣ' ಅಂತ ಪಿಕ್ಚರ್ರು ಬಂತು.
ದೇವರ ಸಿನೆಮಾ ಅಂದಮೇಲೆ ಕೇಳಬೇಕೆ?ಸಿನೆಮಾಗೆ ಹೋಗಲು ಮನೆಯಲ್ಲಿ ತಯಾರಿ ನಡೆಯತೊಡಗಿತು.ಆದರೆ ನನ್ನ
ಕರ್ಮ,ಯಾವುದ್ಯಾವುದೋ ಕಾರಣಗಳಿಂದಾಗಿ ಮನೆಯಲ್ಲಿ ಸಿನೆಮಾ ನೋಡುವದು postpone ಆಗತೊಡಗಿತು.
ನನಗೋ,ಒಳಗೊಳಗೇ ತಳಮಳ;ನಾವುಗಳು ನೋಡದೇ 'ರಾಮಾಯಣ' ಎತ್ತಂಗಡಿಯಾಗಿ ಬಿಟ್ಟರೇ?
ಲೆಕ್ಕಾಚಾರ ಸರಳವಾಗಿತ್ತು.ಅಷ್ಟೊತ್ತಿಗಾಗಲೇ ನಮ್ಮ ಬಾಲ್ಯಕಾಲದ ಆಟಗಳಾದ ಗೋಲಿ,ಬುಗುರಿ,ಚಿಣಿಪಣಿ ಎಲ್ಲ ಒಂದು ರೌಂಡು
ಮುಗಿಸಿ ಬೋರುಹೊಡೆದು ರಾಮಾಯಣದ ಬಿಲ್ಲಿಗೆ ಬಂದು ನಿಂತಿದ್ದೆವು.ಮರದ ಟೊಂಗೆಯ ಬಿಲ್ಲು ನಮ್ಮ ಹೈಟಿಗೆ
ನಿಲುಕುತ್ತಿರಲಿಲ್ಲವಾದ್ದರಿಂದ ತೆಂಗಿನಗರಿಯ ಪೊರಕೆಕಡ್ಡಿ ಬಿಲ್ಲಿಗೇ ತೃಪ್ತಿಯಾಗಿದ್ದೆವು.ಈಗ 'ಸಂಪೂರ್ಣ ರಾಮಾಯಣ'ದ
ಪೋಸ್ಟರಿನ ಹೊಳೆಯುವ ಬಿಲ್ಲನ್ನು ನೋಡಿ ಹ್ಯಾಗಾದರೂ ಮಾಡಿ ಅಂಥದೇ ಬಿಲ್ಲು ತಯಾರಿಸಬೇಕೆಂಬ ಪ್ಲಾನು ತಲೆಯಲ್ಲಿ
ಅರಳತೊಡಗಿತ್ತು.ಇಲ್ಲಿ ನೋಡಿದರೆ,ಮನೆಯಲ್ಲಿ ಯಾವುದ್ಯಾವುದೋ ಸುಡುಗಾಡು ಕಾರಣಗಳಿಂದಾಗಿ ಸಿನೆಮಾಗೆ
ಹೋಗುವದನ್ನೇ ಮುಂದೂಡುತ್ತಿದ್ದಾರೆ.
ನಾನಾದರೂ ಎಷ್ಟು ದಿನ ಅಂತ ಕಾಯೋದು?ನೋಡೋವರೆಗೂ ನೋಡಿದೆ:ಆಮೇಲೆ ನನಗಿಂತ ಚಿಕ್ಕವನಾಗಿದ್ದ
ಕಸಿನ್ ನೊಬ್ಬನನ್ನು ಜೊತೆಯಾಗಿಸಿಕೊಂಡು ಮನೆಯಲ್ಲಿ ಹೇಳದೇ ಕೇಳದೆ ಸೀದಾ ಥೇಟರ್ ಗೆ ನುಗ್ಗಿದೆ.
ಅಜ್ಜನಿಗೆ ಈ ವಿಷಯ ಗೊತ್ತಿಲ್ಲ;ಸೋದರಮಾವನಿಗೂ ಗೊತ್ತಿಲ್ಲ.ಸಿದ್ಧ ಕವಲೂರಿಗೆ ಕೈಬೀಸಿಗೊಂಡು ಹೋದಂತೆ,
ಥೇಟರ್ ನೊಳಗೆ ನುಗ್ಗುತ್ತಿದ್ದ ನಮ್ಮಿಬ್ಬರನ್ನು ಅಲ್ಲಿದ್ದ ಗೇಟ್ ಕೀಪರ್,"ಯಾರ್ರಲೇ ನೀವು? ಟಿಕೀಟು ಎಲ್ಲಿದಾವೆ..?"
ಅಂತ ಹಾಕ್ಕೊಂಡು ಉಗಿಯತೊಡಗಿದ.
ಗಾಬರಿಬಿದ್ದ ನಾನು,"ರೀ,ನಾನು ರೀಲು ಬಿಡೋವ್ರ ಮೊಮ್ಮೊಗ ರೀ.." ಅಂತೆಲ್ಲ ತಡಬಡಿಸತೊಡಗಿದೆ.ಅಷ್ಟರಲ್ಲಿ
ನಮ್ಮ ಮನೆಗೆ ಆಗಾಗ ಬರುತ್ತಿದ್ದ (ಇದೇ ಟಾಕೀಸಿನಲ್ಲಿದ್ದ) ಅಜ್ಜನ ಗೆಳೆಯರೊಬ್ಬರು ನಮ್ಮನ್ನು ನೋಡಿ ಬಳಿಗೆ ಬಂದು
ಗೇಟ್ ಕೀಪರ್ ಗೆ,"ರಾಯರ ಮೊಮ್ಮೊಗ ಬಿಡಪ್ಪಾ.." ಅಂತ ಒಳಗೆ ಕಳಿಸಿದರು.
ಅಂತೂ ಇಂತೂ ನನ್ನ ಬಹುದಿನದ ಆಸೆ ನೆರವೇರಿತ್ತು.ಕಾತರಿಸಿ ಕಾಯುತ್ತಲಿದ್ದ ಪರದೆ ಮುಂದಿನ ಗಾಂಧಿಕ್ಲಾಸಿನ
ಮೊಟ್ಟ ಮೊದಲನೇ ಸೀಟಿನಲ್ಲಿ ಪದ್ಮಾಸನ ಹಾಕಿದೆ..
ಸರಿ,'ಸಂಪೂರ್ಣ ರಾಮಾಯಣ' ಶುರುವಾಯಿತು.ರಾಮ ಹುಟ್ಟಿ,ಬೆಳೆದು,ದೊಡ್ಡವನಾಗಿ,ಸೀತೆಯನ್ನು ಮದುವೆಯಾಗಿ,
ರಾವಣ ಅವಳನ್ನು ಕಿಡ್ನಾಪ್ ಮಾಡಿದ್ದೂ ಆಯಿತು.ರಾಮ,ಲಕ್ಷ್ಮಣನೊಂದಿಗೆ ಸೀತೆಗಾಗಿ ಕಾಡಿನಲ್ಲಿ ಹುಡುಕಾಡುತ್ತಿದ್ದಾನೆ.
ರಾತ್ರಿಯಾಗಿದೆ.ಕಗ್ಗತ್ತಲಿನಲ್ಲಿ ಎಲ್ಲೋ ನರಿಯೊಂದು ಕರ್ಕಶವಾಗಿ ಊಳಿಡುತ್ತಿದೆ.ಸುತ್ತಲೂ ಚಿತ್ರವಿಚಿತ್ರವಾದ ಸದ್ದುಗಳು.
ಆಗಾಗ ರಾಮನ ಮೇಲೆ ಬೀಳುವ ಫ್ಲಾಶ್ ನ ಬೆಳಕು,ಗುಡುಗಿನ ಶಬ್ದ ಇಡೀ ಸೀಕ್ವೆನ್ಸ್ ಗೆ ಒಂದು ಭಯಂಕರವಾದ
ಹಾರರ್ ಥೀಮನ್ನು ತಂದುಕೊಟ್ಟಿವೆ.ಆಗ ಬಂದಳು ನೋಡಿ!
ದೊಡ್ಡ ಮೂಗಿನ ಕಪ್ಪುವರ್ಣದ ದೇಹ.ತನ್ನ ಕೆಂಪು ಕಣ್ಣುಗಳನ್ನು ತಿರುಗಿಸುತ್ತ,ವಿಕಾರಮುಖದ ತಾಟಕಿ ರಾಕ್ಷಸಿ ಗಹಗಹಿಸಿ
ನಗುತ್ತ ಎದುರಿಗಿದ್ದ ಸೈಜುಗಲ್ಲೊಂದನ್ನು ಅನಾಮತ್ತಾಗಿ ಎತ್ತಿ ರಾಮನ ಮೇಲೆ ಎಸೆದೇಬಿಟ್ಟಳು..
"ಅಯ್ಯಯ್ಯಪೋ..ಸತ್ವಿ.." ಅಂತ ಕಿರುಚಿದ ನಾವು,ನಮ್ಮ ತಲೆ ಮೇಲೇ ಕಲ್ಲು ಬಿತ್ತು ಅಂತ ಮನೆ ಕಡೆ ಓಟ ಕಿತ್ತಿದ್ದೆವು!
ಮರ್ಯಾದೆ ಯಾರಪ್ಪನ ಮನೆಯದು ನೋಡಿ:ಭಯಬಿದ್ದ ವಿಷಯ ಯಾರಲ್ಲೂ ಬಾಯ್ಬಿಡಲಿಲ್ಲ.ಅಷ್ಟೇ ಅಲ್ಲ,ಪ್ರತೀಬಾರಿಯೂ ಈ ಸಲ
ಗಟ್ಟಿಧೈರ್ಯ ಮಾಡಿ ಪೂರ್ತಿ ಸಿನೆಮಾ ನೋಡೇಬಿಡೋಣ ಅಂದುಕೊಂಡು ಗದುಗಿನ ವೀರನಾರಾಯಣನ ಅಂಗಾರ ಹಣೆಗೆ
ಮೆತ್ತಿಕೊಂಡು ರಘುಕುಲತಿಲೋತ್ತಮರಂತೆ ಟಾಕೀಸಿಗೆ ಹೋಗುತ್ತಿದ್ದ ನಮಗೆ ತಾಟಕಿಯ ದರುಶನವಾಗುತ್ತಿದ್ದಂತೆ ನಮ್ಮ
ರಾಮಾಯಣ ಅಲ್ಲಿಗೇ ಸಂಪೂರ್ಣವಾಗುತ್ತಿತ್ತು.ಕೊನೆಗೂ ನನಗೆ "ಸಂಪೂರ್ಣ ರಾಮಾಯಣ" ಪೂರ್ಣವಾಗಿ ನೋಡಲಾಗಲೇ ಇಲ್ಲ!
ಎಷ್ಟು ನಿಜ?ಭಯವೊಂದಿದ್ದೊಡೆ ಹಗ್ಗವೂ ಹಾವಾಗಿ ಕಾಡಿತ್ತು ನೋಡಾ..
ಈ ಭಯ ಅನ್ನುವದು ಒಮ್ಮೊಮ್ಮೆ ಎಷ್ಟೊಂದು ಸುಂದರ ಮತ್ತು ಭಯಂಕರ.ಬಾಲ್ಯದಲ್ಲಿ ತಾಟಕಿಗೆ ಭಯಬಿದ್ದು ಓಡಿದೆವು.
ಆಮೇಲೆ ಎಕ್ಸಾಮ್ ರಿಸಲ್ಟಿಗಾಗಿ ಭಯಬಿದ್ದೆವು.ಮುಂದೆ ಬೆಳೆದಂತೆಲ್ಲ adult ಸಿನೆಮಾಗಳ interval ನಲ್ಲಿ
ಯಾರಾದರೂ ಪರಿಚಯದವರು ನೋಡಿಯಾರೆಂದು ಭಯಬಿದ್ದೆವು.ಅದೇ ಭಯದಲ್ಲಿ ಸುಳ್ಳುಸುಳ್ಳೇ ನೆಗಡಿಯ ನೆಪಮಾಡಿ
ಕರ್ಚಿಫ್ ನಿಂದ ಮುಖ ಮುಚ್ಚಿಕೊಂಡೆವು.ಪ್ರೇಮ ಸಫಲವಾಗಲಿಲ್ಲವೆಂದು ಭಯಬಿದ್ದೆವು;ಕಾಮ ವಿಫಲವಾದಾಗಲೂ ಭಯಬಿದ್ದೆವು.
ಮತ್ತು ಇದೇ ಭಯದಿಂದಾಗಿ ಒಮ್ಮೊಮ್ಮೆ ಎಂಥೆಂಥದೋ ಕೆಟ್ಟಕೆಲಸಗಳನ್ನು ಆದಷ್ಟು ಮುಂದೂಡುತ್ತ ಬಂದೆವು.
Fine.No regrets!
ಆದರೇನು ವೈಚಿತ್ರ್ಯವೋ,ದುರಂತವೋ- ಕೊನೆಗೊಮ್ಮೆ ಎಲ್ಲ ಭಯಗಳನ್ನು ಮೆಟ್ಟಿನಿಂತ ಮೇಲೆ ಎಲ್ಲವನ್ನೂ ಮರೆತುಬಿಟ್ಟೆವು.
ಹಾಗಾಗಿ ಇವತ್ತು,ಊಟ ಮಾಡದ ಮಗುವಿಗೆ,ತಂಟೆ ಮಾಡುವ ಕಂದಮ್ಮಗಳಿಗೆ ಶೂನ್ಯದಲ್ಲಿ ಬೆರಳು ತೋರಿಸುತ್ತ
"ದೆವ್ವ ಬರ್ತದೆ ನೋಡು.." ಅಂತಲೋ,"ಗುಮ್ಮ ಬರ್ತಾನೆ ನೋಡೂ.." ಅಂತಲೋ,ಮಗುವಿನ ಮುಗ್ಧ ತಲೆಯೊಳಗೆ
ರೂಪಿಲ್ಲದ,ರೂಹಿಲ್ಲದ,ಅಸಲಿಗೆ ಅಸ್ತಿತ್ವದಲ್ಲೇ ಇರದ entity ಬಗ್ಗೆ ವಿಚಿತ್ರ ಹೆದರಿಕೆ ತುಂಬುತ್ತಿರುವ ಈ ಘಳಿಗೆಯಲ್ಲಿ-
ಊಹುಂ,ನಮಗೆ ಯಾವ ಭಯವೂ ಕಾಡುತ್ತಿಲ್ಲ...
---
Comments
ಉ: "ಗುಮ್ಮನ ಕರೆಯದಿರೆ.."
In reply to ಉ: "ಗುಮ್ಮನ ಕರೆಯದಿರೆ.." by bhalle
ಉ: "ಗುಮ್ಮನ ಕರೆಯದಿರೆ.."
ಉ: "ಗುಮ್ಮನ ಕರೆಯದಿರೆ.."
In reply to ಉ: "ಗುಮ್ಮನ ಕರೆಯದಿರೆ.." by makara
ಉ: "ಗುಮ್ಮನ ಕರೆಯದಿರೆ.."
ಉ: "ಗುಮ್ಮನ ಕರೆಯದಿರೆ.."
In reply to ಉ: "ಗುಮ್ಮನ ಕರೆಯದಿರೆ.." by harishsharma.k
ಉ: "ಗುಮ್ಮನ ಕರೆಯದಿರೆ.."