ಮೋತಿ, ಕಾಫೀ, ಮೋಹನನ ಸೆಟ್ ಹಾಗೂ ಮೋತಿಯ ಸ್ನಾನ

ಮೋತಿ, ಕಾಫೀ, ಮೋಹನನ ಸೆಟ್ ಹಾಗೂ ಮೋತಿಯ ಸ್ನಾನ

ಚಿತ್ರ
ಸಂಕ್ರಾಂತಿಗೆ ಊರಿಗೆ ಹೋಗಿದ್ದೆ. ಶುಕ್ರವಾರ ಮಧ್ಯಾಹ್ನ ಹೊರತು ಬೆಂಗಳೂರಿಂದ ಪ್ರಯಾಣ ಮಾಡಿ ರಾತ್ರಿ ಮನೆ ತಲುಪಿ ಊಟ ಮಾಡಿ ಗಡಗಡನೆ ನಡುಗುವ ಚಳಿಯಲ್ಲಿ ಮೈಮೇಲೆ ರಗ್ಗನ್ನೆಳೆದುಕೊಂಡು ನಿದ್ರೆ ಮಾಡಿ ಮುಂಜಾನೆ ಎದ್ದು ಬೆಳಗಿನ ಕಾರ್ಯಗಳನ್ನ ಮುಗಿಸಿ ಚಾವಡಿಗೆ ಬಂದು ಪೇಪರ್ ಓದುತ್ತಾ ಕುಳಿತೆ. ಮೋತಿ ನನ್ನನ್ನ ನೋಡಿ ಓಡಿಬಂದು ಹತ್ತಿರ ಡ್ಯಾನ್ಸ್ ಮಾಡಲಾರಂಭಿಸಿತು. ನಾನು ಸಾಕು ಹೋಗು ಆಚೆಗೆ ಎಂದು ಗದರಿದ ಮೇಲೆ ಬಹುಶ ಕೋಪ ಬಂದು ಮೂಲೆಗೆ ಹೋಗಿ ತನ್ನ ಬಾಡಿಯನ್ನ ೫ ರೌಂಡ್ ಸುತ್ತು ಹೊಡೆದು ಮಲ್ಕೊಳ್ತು. ಅಮ್ಮ ಬಂದು ನಂಗೆ ಕಾಫೀ ಕೊಟ್ರು, ಮೋತಿನ ನೋಡಿ ಅದ್ಕೆ ಸ್ನಾನ ಮಾಡ್ಸಿ ತುಂಬಾ ದಿನ ಆಯ್ತು ಕಣೋ ಅಂದ್ಕೊಂಡು ಒಳಗೆ ಹೋದ್ರು. ಮೋತಿ ಮಲ್ಕೊಂಡು ನನ್ನ ಕಡೆಯೇ ನೋಡ್ತಿತ್ತು. ಅದಕ್ಕೂ ಚಳಿಗೆ ಕಾಫೀ ಬೇಕು ಅನ್ಸಿ ಕಾಲು ಲೋಟ ಉಳ್ಸಿ ಅದು ಮಲಗಿದ್ದಲ್ಲಿಗೆ ಹೋದೆ, ಅದಕ್ಕೆ ಗೊತ್ತಾಯ್ತು ಅನ್ಸತ್ತೆ ಖುಷಿಯಿಂದ ಎದ್ದು ನಿಂತಲ್ಲೇ ರೌಂಡ್ ಹಾಕೋಕೆ ಶುರು ಮಾಡ್ತು, ಅಲ್ಲೇ ಕಾಫಿಯನ್ನ ಹಾಕ್ದೆ, ಸಡನ್ನಾಗಿ ಬಾಯಿ ಹಾಕ್ತು ಅಷ್ಟೇ ಫಾಸ್ಟಾಗಿ ಬೆಚ್ಚಿ ಹಿಂದೆ ಬಂದು ನಾಲಗೆನ ಹಿಂದಕ್ಕೆ ಮಾಡ್ಕೊಳ್ತು. ಆಮೇಲೆ ರುಚಿ ಅನ್ಸಿ ಮತ್ತೆ ನೆಕ್ಕೋಕೆ ಶುರುಮಾಡ್ತು. ಸ್ವಲ್ಪಹೊತ್ತಾದ್ಮೇಲೆ ೭-೮ ಜನ ಮನೆಕಡೆ ಬರ್ತಿದ್ರು, ಶನಿವಾರವಾದ್ದರಿಂದ ನಮ್ಮ ಮನೆಯ ಕೆಲಸದವರು ಬಟವಾಡೆಗೆ ಬರ್ತಿದ್ರು, ಆ ಗುಂಪಲ್ಲಿ ಮೋಹನನೂ ಇದ್ದ. ನಮ್ಮಪ್ಪ ಬಂದು ಎಲ್ರಿಗೂ ದುಡ್ಡು ಕೊಡ್ತಿದ್ರು. ಮೋಹನ ಅಲ್ಲೇ ಚಾವಡಿಯ ಬಳಿ ಕೂತ್ಕೊಂಡಿದ್ದ. ಅವನ ಸರದಿ ಇನ್ನೂ ಬಂದಿರ್ಲಿಲ್ಲ ಅನ್ಸತ್ತೆ,. ಕೈನಲ್ಲಿ ಯಾವ್ದೋ ಮೊಬೈಲ್ ಇಟ್ಕೊಂಡಿದ್ದ. ಏನೋ ಮೋಹನ, ಸಿಕ್ತಾ ಅಂತೂ ಹೊಸ ಸೆಟ್? ಹ್ಞೂ ಗೌಡ್ರೆ, ಸೆಕೆಂಡ್ ಹ್ಯಾಂಡ್ ತಗೊಂಡೆ. ಸೆಕೆಂಡ್ ಹ್ಯಾಂಡೆ ಅಂತ ಹೆಂಗೆ ಹೇಳ್ತೀಯಾ?? ಹೌದು ಗೌಡ್ರೆ, ನಮ್ಮ ಚಿಕ್ಕಪ್ಪನ ಮಗ ತಗೊಂಡಿದ್ದ ಹೊಸಾದು ಆಮೇಲೀಗ ನಾನು ತಗೊಂಡೆ ಅವ್ನಿಂದ. ಸರಿ ಸರಿ. ಎಲ್ಲಿ ಕೊಡಿಲ್ಲಿ ಅಂದೆ. ಸೆಟ್ ಕೊಟ್ಟ, ನೋಡಿದೆ. ಏನೋ ೨ ಸಿಮ್ಮಿಂದಾ?? ಆದ್ರೆ ಒಂದೇ ಸಿಮ್ ಇದೆ ಏರ್ಟೆಲ್ ಇನ್ನೊಂದು ನೋ ಸಿಮ್ ಅಂತಿದೆ. ಹ್ಞೂ ಗೌಡ್ರೆ ಒಂದೆಯಾ. ಯಾಕೋ ಇನ್ನೊಬ್ಳು ಮಾವನ ಮಗ್ಳು ಕೈ ಕೊಟ್ಲೇನೋ!!!?? ನಗಾಡಿ ಸುಮ್ನಾದ. ನಾನು, ಹೋಗ್ಲಿ ಬಿಡು ಇನ್ನೊಂದು ಸಿಮ್ ಇದೆಯಲ್ಲ ಹೇಗಿದ್ರೂ ಅಂದು ಸೆಟ್ ವಾಪಸ್ ಕೊಟ್ಟೆ!!!. .................. ಮಾರನೇ ದಿನ ಅಂದ್ರೆ ಭಾನುವಾರ ಸಂಕ್ರಾಂತಿ ದಿನ ಸ್ನಾನ ಮಾಡಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡ್ಸ್ಕೊಂಡು ಮನೆಕಡೆ ಬರ್ತಿದ್ದೆ. ಅಪ್ಪ, ಅಮ್ಮ, ಚಿಕ್ಕ ಕಾಫಿ ಪಲ್ಪರ್ ಮಾಡ್ತಿದ್ರು. ನಮ್ಮಪ್ಪ ಬೇಗ ಹೋಗಿ ಬೇರೆ ಬಟ್ಟೆ ಹಾಕೊಂಡು ಬಾ ಅಂದ್ರು, ನಾನು ಚೇಂಜ್ ಮಾಡ್ಕೊಂಡು ಬಂದು ಕಾಫೀ ಬೀಜವನ್ನ ಚೀಲಕ್ಕೆ ತುಂಬಿಸ್ತಿದ್ದೆ. ಸ್ವಲ್ಪ ಹೊತ್ತಾದ್ಮೇಲೆ ಮೋತಿ ಪಲ್ಪರ್ ಹತ್ರ ಬಂತು. ಅದ್ನ ನೋಡಿ ಅಮ್ಮ ಮನೆ ಹಿಂದ್ಗಡೆ ಒಂದು ಸೋಪಿದೆ ತಗೋಬಾ ಅಂದ್ರು ನಾನು ಓಡಿಹೋಗಿ ತಂದು ಅಲ್ಲಿದ್ದ ಮೋತಿನ ಹಿಡ್ಕೊಳ್ಳಕ್ಕೆ ಹೋದೆ, ನಿಧಾನಕ್ಕೆ ಗುರ್ ಗುರ್ ಅಂತಿತ್ತು. ಅಮ್ಮ ಮಗ್ ತಗೊಂಡು ಬ್ಯಾರಲ್ಲಿಂದ ನೀರು ತೋಡಿ ಅದ್ರ ಮೇಲೆ ಹಾಕೋಕೆ ಹೋದ್ರು. ನಾನು ಸಡನ್ನಾಗಿ ಮೋತಿನ ಹಿಂದಕ್ಕೆ ಎಳ್ಕೊಂಡು 'ಅಲ್ಲಮ್ಮ ಈ ಚಳಿನಲ್ಲಿ ಆ ಕೊರೀತಿರೋ ನೀರು ಹಾಕ್ತಿದೀಯಲ್ಲಾ, ಪಾಪ ಅದು' ಅಂದಿದ್ದಕ್ಕೆ 'ನೀರು ಮುಟ್ಟಿ ನೋಡು, ಬಿಸೀನೇ ಇದೆ' ಅಂದಾಗ ಕೈ ಅದ್ದಿದೆ, ಬೆಚ್ಚಗಿತ್ತು (ಪಲ್ಪರ್ನಿಂದ ಬರೋ ನೀರು ಕ್ಲೀನಾಗಿ ಬ್ಯಾರಲ್ಗೆ ಹೋಗ್ತಿತ್ತು). 'ಸರಿ ಹಾಕು' ಅಂದು ಮೋತಿನ ಗಟ್ಟಿ ಹಿಡ್ಕೊಂಡೆ. ನೀರು ಹಾಕ್ತಿದ್ದ ಹಾಗೆ ಗುರ್ ಅಂತ ಶಬ್ದ ಮಾಡ್ತಿದ್ದ ಮೋತಿ ಸುಮ್ಮನಾಯ್ತು. ನಾನು ಅದರ ನೀರು ಸಿಡಿಬಾರ್ದು ಅಂತ ಸ್ವಲ್ಪ ದೂರಕ್ಕೆ ಹಿಡ್ಕೊಂಡು ನಿಂತಿದ್ದೆ (ಹೆಚ್ಚು ಕಡಿಮೆ ಆದ್ರೆ ಮತ್ತೊಂದ್ಸಲ ಸ್ನಾನ ಮಾಡ್ಬೇಕಿತ್ತು). ಒಂದು ೫ ನಿಮ್ಷ ಆಯ್ತು, ಸೋಪೆಲ್ಲಾ ಹಾಕಿ ಮೈ ಉಜ್ಜಿ ಸ್ನಾನ ಮುಗಿಯೋ ಹೊತ್ತಿಗೆ. ಮುಗಿದ ತಕ್ಷಣ ಅದನ್ನ ಬಿಟ್ಟೆ. ದೂರ ಹೋಗಿ ನೆಲದ ಮೇಲೆ ಹೊರಳಾಡತ್ತೆ ಅಂತ. ಆದ್ರೆ ನನ್ನ ಎಣಿಕೆ ತಪ್ಪಾಗಿತ್ತು :( ಬಿಟ್ಟಿದ್ದೇ ತಡ ತನ್ನ ಮೈನಲ್ಲಿದ್ದ ನೀರನ್ನ ಕೊಡವಲು ತನ್ನ ಬಾಡಿಯನ್ನ ಒಂದೇ ಸಮನೆ ಅಲ್ಲಾಡ್ಸ್ತು. ಆ ನೀರೆಲ್ಲ ನನ್ನ ಮೇಲೆ, ಅಮ್ಮನ ಮೇಲೆ ದೇವಸ್ಥಾನದಲ್ಲಿ ಭಟ್ರು ನೀರನ್ನ ಪ್ರೋಕ್ಷಣೆ ಮಾಡುವ ಹಾಗೆ ಬಂದು ಬಿತ್ತು. ನಂತರ ಮೋತಿ ಇಡೀ ತೋಟ, ಕಣದ ತುಂಬೆಲ್ಲಾ ಓಡಾಡಿ ನೆಲದ ಮೇಲೆ ಬಿದ್ದು ಮೈಯನ್ನು ಒರೆಸಿಕೊಳ್ಳುವ ಪ್ರಯತ್ನ ಮಾಡುತ್ತಿತ್ತು. ನಾನು ವಿಧಿಯಿಲ್ಲದೆ ಪಲ್ಪರ್ ಮುಗಿದ ತಕ್ಷಣ ಸ್ನಾನದ ಕೋಣೆಗೆ ಓಡಿದೆ. http://sampada.net/…
Rating
No votes yet