ಅಂಡಾಂಡಭಂಡ ಸ್ವಾಮಿಗಳ ಜತೆ ಸಪ್ತಗಿರಿವಾಸಿ

ಅಂಡಾಂಡಭಂಡ ಸ್ವಾಮಿಗಳ ಜತೆ ಸಪ್ತಗಿರಿವಾಸಿ

ಬಹಳ ದಿನಗಳಿಂದ ನಾಪತ್ತೆಯಾಗಿರುವ ಅಂಡಾಂಡಭಂಡ ಸ್ವಾಮಿಯವರನ್ನು ಹುಡುಕುವ ಕೆಲಸ ಭರದಿಂದ ಸಾಗಿತ್ತು. ದಿನ ಕಳೆದಂತೆ (ಕ್ಷಮಿಸಿ. ರಾತ್ರಿ ಕಳೆದಂತೆ) ಒಬ್ಬೊಬ್ಬರಾಗಿ ಎಲ್ಲಾ ಹಿಂದೆ ಸರಿದರು. ಚಾ ಬಿಡದ ಚಿಕ್ಕುವಿನಂತೆ(=ಛಲ ಬಿಡದ ತ್ರಿವಿಕ್ರಮನಂತೆ) ಸಪ್ತಗಿರಿವಾಸಿ, ಸಂಪದದ ಬ್ಲಾಗ್‌ಗಳನ್ನೆಲ್ಲಾ ಒಂದೂ ಬಿಡದೇ ಓದಿ, ಅದರಲ್ಲಿರುವ ಕ್ಲೂಗಳನ್ನು ಅನುಸರಿಸಿ, ಸ್ವಾಮಿಗಳು ಇರುವ ಏರಿಯಾ ಕಂಡುಹಿಡಿದೇ ಬಿಟ್ಟರು. ಆದರೆ..


ಗೇಟ್ ಕೀಪರ್ ಒಳ ಹೋಗಲು ಬಿಡಲೇ ಇಲ್ಲ. ಯಾವುದೇ ಆಮಿಷಗಳಿಗೂ ಬಗ್ಗಲೇ ಇಲ್ಲ.


"ನಾನು ಜ್ಯೂಸೀ ನ್ಯೂಸ್ ಚಾನಲ್‌ನಿಂದ ಬಂದದ್ದು. ಅವರ ಸಂದರ್ಶನಕ್ಕೆ ಅಂತಾ ಒಂದೇ ಒಂದು ಬಾರಿ ಹೇಳು. ಬಿಡುತ್ತಾರೆ. ನಿನ್ನನ್ನೂ ಟಿ.ವಿಯಲ್ಲಿ ತೋರಿಸುವೆನು." ಅಂದಾಗ, ಗೇಟ್ ಕೀಪರ್ ಒಳ ಹೋಗಿ ಮಾತನಾಡಿ ಬಂದವನು-"ಇನ್ನೊಮ್ಮೆ ಜ್ಯೂಸೀ ನ್ಯೂಸ್ ಚಾನಲ್ ಅಂತ ಯಾರಾದರೂ ಬಂದರೆ, ಆ ಚ್ಯಾನಲ್ಲನ್ನೇ ಪರ್ಚೇಸ್ ಮಾಡಿ ಯಾರಾದರೂ ಜ್ಯೂಸ್ ಅಂಗಡಿಯವನಿಗೆ ಫ್ರೀ ಆಗಿ ಕೊಡುವೆ ಅಂತ ಸ್ವಾಮೀಜಿ ಹೇಳಿದರು...ನಿಮ್ಮಿಂದಾಗಿ ನನ್ನ ಕೆಲಸವೂ ಹೋದೀತು. ಹೋಗ್ರೀ.."ಅಂದನು.


"ನಿನ್ನ ಕೆಲಸಕ್ಕೆ ನಾನು ಗ್ಯಾರಂಟಿ ಕೊಡುವೆ. ಇನ್ನೊಮ್ಮೆ ಕೇಳು..ಸಂಪದದಿಂದ ಬಂದುದು ಅನ್ನು"


"ಇದೇ ಕೊನೆಯ ಬಾರಿ.." ಎಂದು ಏನೋ ಗೊಣಗಿಕೊಂಡು ಒಳ ಹೋದನು.


ಹತ್ತು ನಿಮಿಷವಾಯಿತು..


ಇಪ್ಪತ್ತು ನಿಮಿಷ ಕಳೆಯಿತು...


ಪಾಪ ಗೇಟ್ ಕೀಪರ್‌ಗೆ ಏನಾಯಿತೋ ಎಂದು ಯೋಚಿಸುತ್ತಿದ್ದಾಗ..ನಿದಾನಕ್ಕೆ ಗೇಟು ತೆರೆಯಿತು!


"ಅಬ್ಬಾ..ಸಂಪದದ ಹೆಸರು ಹೇಳಿದ್ದು ಕೆಲಸ ಮಾಡಿತು." ಅಂದು ತಲೆ ಎತ್ತಿ ನೋಡಿದರೆ, ಅಡ್ಡಕ್ಕೆ ಗೋಡೆ!


"ಅಲ್ಲಯ್ಯಾ.. ಬೇಡ ಹೋಗ್ರೀ ಅಂದ್ರೆ ಆಗ್ತಿತ್ತು. ಅದು ಬಿಟ್ಟು ದಾರಿಗಡ್ಡ ಗೋಡೆ ಕಟ್ಟಿದ್ಯಲ್ಲಾ?"


"ಸಾರ್. ನಿಮ್ಮನ್ನು ಮಾತನಾಡಿಸಲು ಸ್ವತಃ ಸ್ವಾಮೀಜಿಯೇ ಗೇಟಿನವರೆಗೆ ಬಂದಿರುವರು!" ಎಂದಾಗ ಪೂರ್ತಿ ಕಣ್ಣರಳಿಸಿ ನೋಡಿದ ಸಪ್ತಗಿರಿವಾಸಿ ಮನದಲ್ಲೇ - "ಈ ಪಾರ್ಥರು ಹೇಳುತ್ತಿದ್ದುದು ಸುಳ್ಳಲ್ಲ. ಪೂರ್ತಿ ಆರು ಸಾಲು ಇಟ್ಟಿಗೆಯ ಗೋಡೆ ಅಂತ ನಾನು ತಿಳಿದದ್ದು, ಸ್ವಾಮೀಜಿಯ ಸಿಕ್ಸ್ ಪ್ಯಾಕ್(ಪದರ) ಹೊಟ್ಟೆ! ಈ ಜನ ಆಶೀರ್ವದಿಸಲು ತಲೆ ಮೇಲೆ ಕೈ ಇಟ್ಟರೆ ಸಪ್ತಗಿರಿ ಏಕಗಿರಿ ಆಗಬಹುದು" ಎಂದಾಲೋಚಿಸಿ, ಸ್ವಲ್ಪ ಡಿಸ್ಟೆನ್ಸ್ ಇಟ್ಟುಕೊಂಡೇ ನಮಸ್ಕರಿಸಿದರು.


ಸ್ವಾಮೀಜಿಯ ಜತೆ ಆಶ್ರಮದ ಒಳಗೆ ಹೋಗುವಾಗ, ಸ್ವಾಮೀಜಿಯನ್ನು ಹುಡುಕಲು ತಾನು ಪಟ್ಟ ಪಾಡನ್ನು ವಿವರಿಸಿದ..


ಸ್ವಾಮೀಜಿ ನಕ್ಕು" ವಿಚಿತ್ರ ಅಂದರೆ ಇದೇ..ಮಿಲ್ಕೀ ವೇನಲ್ಲಿರುವ PSR B1257+12 ಮತ್ತು ಇತರ ಎಕ್ಸ್ಟ್ರಾ ಸೋಲಾರ್ ಪ್ಲಾನೆಟ್‌ನಲ್ಲಿರುವವರಿಗೆ ಸಿಗುತ್ತಿದ್ದೇನೆ..ಪಕ್ಕದಲ್ಲಿರುವವರಿಗೆ ನಾನು ಸಿಗುತ್ತಿಲ್ಲ.."


"ಆಶ್ಚರ್ಯ! ಸೌರ ಮಂಡಲದಾಚೆಗೆ ಇರುವವರು! ಅದು ಹೇಗೆ ಸಾಧ್ಯ?"


ಸ್ವಾ : ಮೊದಲು ಊಟ ಮಾಡೋಣ. ಮತ್ತೆ ರಾತ್ರಿ ಇಡೀ ವಿವರಿಸಿ ಹೇಳುವೆ.


(ಮುಂದಿನ ಭಾಗ ಊಟವಾದ ನಂತರ)


-ಗಣೇಶ.


 

Rating
No votes yet

Comments