ಆರತಿಗೊಬ್ಬ ಮಗಳು, ಕೀರ್ತಿಗೊಬ್ಬ ಮಗ?

ಆರತಿಗೊಬ್ಬ ಮಗಳು, ಕೀರ್ತಿಗೊಬ್ಬ ಮಗ?

ಪದ್ಯಪಾನದಲ್ಲಿ ಈ ಪಕ್ಷದಲ್ಲಿ ಕೇಳಿದ ಪ್ರಶ್ನೆ ಇದು: "ಕೀರ್ತಿಗೊಬ್ಬ ಮಗ ಆರತಿಗೊಬ್ಬ ಮಗಳು" ಎಂಬ ಕುಟುಂಬ ಯೋಜನೆಯ ಘೋಷಣೆಯ ಬಗ್ಗೆ ನಿಮ್ಮ ನಿಲುವೇನು? ಅಂತ. ಅದಕ್ಕೆ ನನ್ನ ಉತ್ತರ - ಎರಡು ಚೌಪದಿ ಮತ್ತೆ ಎರಡು ಷಟ್ಪದಿಗಳಲ್ಲಿ:


ಪದವರಿತು ನಡೆಯಲಿಕೆ ಎರಡು ಹೆಜ್ಜೆಯು ಬೇಕು
ಚದುರ ದಿಟ್ಟಿಗೆ ಬೇಕು ಕಣ್ಗಳೆರಡು
ಮದುವೆ ಕಳೆದೈದಾರು ವರುಷದಲಿ ಇರಬೇಕು
ಹದುಳವನು ತರಲಿಕಿಬ್ಬರು ಮಕ್ಕಳು ||1||
 
ಹಿಂದಿತ್ತು  ಹಾರಯ್ಕೆ ಎಂಟು ಮಕ್ಕಳು ಇರಲಿ
ಇಂದು ಬದಲಾಗಿಹುದದೆರಡೆ ಸಾಕು;
ಚಂದದಲಿ ಹೇಳಿಹುದು ಘೋಷಣೆಯ  ಸರಕಾರ
ಒಂದು ಆರತಿಗಿರಲಿ ಒಂದು ಕೀರುತಿಗೆ ||2||

ಸುಳಿದಾಡುತಿಹ ಮಗಳು
ಬೆಳಗುಕಣ್ಗಳ ಹುಡುಗಿ
ಹೊಳೆವ ಮಿಂಚಿನ ನೋಟ ಅವಳದಿರಲು
ಬೆಳೆವ ಪೈರಿನ ಸೊಬಗ
ಮೊಳಕೆಯಲ್ಲಿಯೆ ನೋಡು
ಹಳಿಯದೆಲೆ ಕೀರುತಿಯ ತಾರಳೆನುತ! ||3||


ಬರಿಯ ಆರತಿ  ಏಕೆ ಹೆಣ್ಣಿಗೆ?
ತರಲು ಬಲ್ಲಳು ಅವಳು ಕೀರುತಿ!
ಇರುವುದೇನದು ಗಂಡು ಮಗುವಿಗೆ ಕೋಡು ತಲೆಯಲ್ಲಿ?
ಎರಡು ಮಕ್ಕಳು ಗಂಡೊ ಹೆಣ್ಣೋ
ಇರಲಿ ಸೊಗಸನು ತರಲಿ ನಮ್ಮಯ
ಹರುಷಕವರೇ ದಾರಿ ದೀಪವು ಬಾಳಪಯಣದಲಿ! ||4||


-ಹಂಸಾನಂದಿ


ಕೊ: 1 ಮತ್ತು 2 ಪಂಚಮಾತ್ರಾ ಚೌಪದಿ ಛಂದಸ್ಸಿನಲ್ಲಿವೆ. 3 ನೆಯದು ಕುಸುಮ ಷಟ್ಪದಿಯಲ್ಲೂ,. 4 ನೆಯದು ಭಾಮಿನಿ ಷಟ್ಪದಿಯಲ್ಲೂ ಇವೆ.

Rating
No votes yet

Comments