ಕಣಿಪುರ ಉಳಿಸಿ
ಕಾಸರಗೋಡು ಈಗ ಕೇರಳದಲ್ಲಿ ಇರುವ ಕನ್ನಡ ಪ್ರದೇಶ.ಸಾಂಸ್ಕೃತಿಕವಾಗಿ ಕನ್ನಡವನ್ನು ಉಳಿಸಿಕೊಂಡ ತಾಣ.ಈ ಪ್ರದೇಶಕ್ಕೆ ಮೊದಲು ಕುಂಬಳೆ ಸೀಮೆ ಎಂಬ ಹೆಸರು ಇತ್ತು.ಕುಂಬಳೆ ಎಂದರೆ
ಕಾಸರಗೋಡಿನಿಂದ ೧೨ ಕಿ.ಮೀ.ಉತ್ತರಕ್ಕೆ ,ಮಂಗಳೂರಿನಿಂದ ೪೦ ಕಿ.ಮೀ.ದಕ್ಷಿಣಕ್ಕೆ ಇರುವ ಊರು.ರಾಷ್ಟ್ರೀಯ ಹೆದ್ದಾರಿ ನಂ.೬೬[ಹಳೆ ನಂ.೧೭] ಕುಂಬಳೆಯ ಮೂಲಕ ಹಾದು ಹೋಗುತ್ತದೆ.ಇತ್ತೀಚೆಗೆ ಈ ಹೆದ್ದಾರಿಯನ್ನು ಅಗಲಗೊಳಿಸುವ ಕೆಲಸಕ್ಕೆ ಚಾಲನೆ ಕೊಡಲು ಅಧಿಸೂಚನೆ ಹೊರಡಿಸಲಾಗಿದೆ.ಇದರಂತೆ ಕುಂಬಳೆಯಲ್ಲಿ ಇರುವ
ಶ್ರೀ ಗೋಪಾಲಕೃಷ್ಣ ದೇಗುಲದ ಬಹು ಭಾಗವನ್ನೂ ಸ್ವಾಧೀನಪಡಿಸಲು ಆಲೋಚಿಸಲಾಗುತ್ತಿದೆ.
ಈ ಪ್ರದೇಶದ ಜನರ ಮನಸ್ಸಿಗೆ ತುಂಬಾ ಆಘಾತಕಾರಿಯಾದ ಈ ಕ್ರಮವನ್ನು ಪ್ರತಿಭಟಿಸಲು ಇಂದು ಕಾಸರಗೋಡಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಈ ದೇಗುಲ ಅತಿ ಪ್ರಾಚೀನವಾದದ್ದು.ಪೌರಾಣಿಕ ಹಿನ್ನೆಲೆಯಂತೆ ಯಶೋದಾ ದೇವಿಯು ಪೂಜಿಸುತ್ತಿದ್ದ ಬಾಲಗೋಪಾಲ ವಿಗ್ರಹವನ್ನು ಕೃಷ್ಣನು ಕಣ್ವ ಋಷಿಗೆ ದಯಪಾಲಿಸಿದ್ದನು;ಕಣ್ವ ಋಷಿಯು ಆ ವಿಗ್ರಹವನ್ನು ಇಲ್ಲಿ ಸ್ಥಾಪಿಸಿದನು.ಅದರಿಂದ ಈ ಊರು ಕಣ್ವಪುರ,ಕಣಿಪುರ ,ಕಣ್ಯಾರ ಎಂದು ಪ್ರಸಿದ್ಧವಾಯಿತು.ಕೃಷ್ಣನಿಗೆ ಅಭಿಷೇಕ ಮಾಡಿದ ನೀರು ಹೊಳೆಯಾಗಿ ಹರಿದು ಕುಂಭ+ಹೊಳೆ=ಕುಂಬಳೆ ಎಂಬ ಹೆಸರು ಬಂತು. ಈ ದೇಗುಲದ ಅನತಿ ದೂರದಲ್ಲಿ ಈ ಹೊಳೆ ಇದೆ.
ಚಾರಿತ್ರಿಕ ಹಿನ್ನೆಲೆ--
ಈ ದೇಗುಲವನ್ನು ಸಂದರ್ಶಿಸಲು ಕದಂಬ ವಂಶದ ರಾಜ ಮಯೂರವರ್ಮನು ಬಂದಾಗ ಅವನ ಪುತ್ರಿ ಸುಶೀಲಾದೇವಿಯು ಹೊಳೆಯಲ್ಲಿ ಸ್ನಾನ ಮಾಡುತ್ತಿರುವಾಗ ಮೂರ್ಛೆ ಹೋದಳು..ಅವಳನ್ನು
ಎಬ್ಬಿಸಲು ಯಾರಿಂದಲೂ ಆಗಲಿಲ್ಲ.ಆಗ ಬ್ರಾಹ್ಮಣನೊಬ್ಬನು ಬಂದು ಅವಳನ್ನು ಗುಣಪಡಿಸಿದನು.ರಾಜನು ಆ ಬ್ರಾಹ್ಮಣನಿಗೆ ಮಗಳನ್ನು ವಿವಾಹ ಮಾಡಿ ಕೊಟ್ತನು.ಮುಂದೆ ಅವಳಲ್ಲಿ ಜನಿಸಿದ ಜಯಸಿಂಹನಿಗೆ ಈಸೀಮೆಯ ರಾಜ್ಯಾಧಿಕಾರವನ್ನು ಕೊಟ್ಟು ಪಟ್ಟಾಭಿಷೇಕ ಮಾಡಿದನು.[ಇದು ಸುಮಾರು ೧೦ನೇ ಶತಮಾನದ ಘಟನೆ ಇರಬಹುದು.]
ಈ ವಂಶದ ರಾಜರು ಅಳಿಯ ಸಂತಾನ ಪರಂಪರೆಯಂತೆ ಈ ಸೀಮೆಯನ್ನು ಬೇರೆ ಬೇರೆ ಸಾಮ್ರಾಟರ ಕೆಳಗೆ ಆಳಿದರು.ಕುಂಬಳೆಯಲ್ಲಿ ಇದ್ದ ರಾಜಧಾನಿಯನ್ನು ಕೆಲಕಾಲಾನಂತರ
ಸುಮಾರು೧೦ ಕಿ.ಮೀ.ದೂರದ ಮಾಯಿಪ್ಪಾಡಿಗೆ ಸ್ಥಳಾಂತರಿಸಿದರು.ಈ ರಾಜರು ಅಡೂರು,ಮಧೂರು,ಕಾವು, ಕಣಿಯಾರ ಎಂಬ ನಾಲ್ಕು ದೇವಸ್ಥಾನಗಳನ್ನು ಸೀಮೆಯ ಪ್ರಧಾನ
ದೇಗುಲಗಳೆಂದು ಆರಾಧಿಸಿ,ಪೋಷಿಸಿದರು.ಇದರಲ್ಲಿ ಅಡೂರು,ಮಧೂರು ಶಿವಕ್ಷೇತ್ರಗಳು.ಕಾವು[ಮುಜುಂಗಾವು],ಮತ್ತು ಕಣಿಪುರ ಕೃಷ್ಣನ ದೇಗುಲಗಳು.ಕಾಲಕ್ರಮದಲ್ಲಿ ಮಧೂರಿನಲ್ಲಿ
ಮಹಾಗಣಪತಿಯೇ ಪ್ರಸಿದ್ಧನಾಗಿದ್ದಾನೆ.
ಇಂದಿಗೂ ಈ ಸೀಮೆಯ ಜನರು ಯಾವುದೇ ಶುಭಕಾರ್ಯ ತೊಡಗುವಾಗ ಈ ನಾಲ್ಕು ದೇಗುಲಗಳ ದೇವರನ್ನು ಸ್ಮರಿಸುತ್ತಾರೆ.ಮಾಯಿಪ್ಪಾಡಿ ಅರಸರ ಪಟ್ಟಾಭಿಷೇಕವು ಕಣಿಯಾರ ದೇವಸ್ಥಾನದಲ್ಲೇ ಆಗುತ್ತಿತ್ತು.
ಯಕ್ಷಗಾನದ ಮೇರು ವ್ಯಕ್ತಿ ಪಾರ್ತಿಸುಬ್ಬನು ಈ ಕುಂಬಳೆಯ ದೇವರ ಭಕ್ತನು.ಈ ದೇವರನ್ನೇ ಸ್ಮರಿಸಿ ಪ್ರಸಂಗ ರಚನೆ ಮಾಡಿದ್ದಾನೆ.
ಇಲ್ಲಿ ಹಲವಾರು ಕಲಾವಿದರು ಆಗಿಹೋಗಿದ್ದಾರೆ.ಎಲ್ಲಾ ಧಾರ್ಮಿಕ,ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರಸ್ಥಾನ ಈ ದೇವಾಲಯ.ಯಾವುದೇ ಆಸ್ತಿ ಇಲ್ಲದ ಈ ದೇಗುಲವನ್ನು ಆಸ್ತಿಕ ಜನರು ದೇಣಿಗೆಯಿಂದ ಪೋಷಿಸಿದ್ದಾರೆ,ಅಭಿವೃದ್ಧಿಪಡಿಸಿದ್ದಾರೆ.ಇಲ್ಲಿನ ಅರ್ಚಕರು ದೇವರ ಅಲಂಕಾರದಲ್ಲಿ,ದೇವರನ್ನು ಹೊತ್ತು
ಉತ್ಸವ ಆಚರಿಸುವಲ್ಲಿ ತಮ್ಮ ನೈಪುಣ್ಯ ಮೆರೆದಿದ್ದಾರೆ.ಮಕರ ಮಾಸದ ಸಂಕ್ರಮಣ ಮೊದಲ್ಗೊಂಡು ನಡೆಯುವ[ಜನವರಿಯಲ್ಲಿ] ಜಾತ್ರೆ ಬಹಳ ಚಂದ.೫ ದಿನಗಳ ಉತ್ಸವದಲ್ಲಿ ೪ನೇ ದಿನ ಬೆಡಿ ಉತ್ಸವ ಪ್ರಸಿದ್ಧ.
ಇಂತಾ ಮಹತ್ವದ ಕ್ಷೇತ್ರವನ್ನು ರಕ್ಷಿಸುವುದು ಎಲ್ಲರ ಕರ್ತವ್ಯ. ಹೆದ್ದಾರಿಯನ್ನು ಸ್ವಲ್ಪ ವ್ಯತ್ಯಾಸಗೊಳಿಸಿದರೆ ಈ ತಾಣ ಉಳಿಯುತ್ತದೆ.
ಹೆದ್ದಾರಿ ಇಲಾಖೆಯವರೂ ಕೇರಳ ಸರಕಾರವೂ ಇದನ್ನು ಗಮನಿಸಬೇಕು.
Comments
ಉ: ಕಣಿಪುರ ಉಳಿಸಿ