ಕಥೆ : ಒ೦ದು ಐ.ಟಿ ಪ್ರೇಮಕಥೆ

ಕಥೆ : ಒ೦ದು ಐ.ಟಿ ಪ್ರೇಮಕಥೆ

"ಪ್ರಜ್ಞಾ ಇನ್ಫೋಟೆಕ್" ಸೂರ್ಯನ ಕಿರಣಗಳು ಬೋರ್ಡಿನ ಮೇಲೆ ಬಿದ್ದು ಪ್ರತಿಫಲಿಸುತ್ತಿತ್ತು. ಬಹುಮಹಡಿ ಕಟ್ಟಡದ ಆಚೆ ನಿಂತು ಎರಡೆರಡು ಬಾರಿ ಕನ್ನಡ ಹಾಗೂ ಇಂಗ್ಲಿಷ್ ನಲ್ಲಿ ಇದ್ದ ಬೋರ್ಡನ್ನು ಓದಿ ಒಳಗೆ ಅಡಿ ಇಟ್ಟೆ ಅಲ್ಲೇ ಪಕ್ಕದಲ್ಲಿದ್ದ ಸೆಕ್ಯೂರಿಟಿ ಗಾರ್ಡ್ ವಿಸಿಟರ್ ಪಾಸ್ ತೆಗೆದುಕೊಂಡು ಹೋಗಬೇಕು ಎಂದ. ನಾನು ಕೈನಲ್ಲಿ ಇಟ್ಟುಕೊಂಡಿದ್ದ ಅಪಾಯಿಂಟ್ಮೆಂಟ್ ಲೆಟರ್ ಅನ್ನು ಅವನಿಗೆ ತೋರಿಸಿ ಇಂದಿನಿಂದ ಕೆಲಸಕ್ಕೆ ಸೇರುತ್ತಿದ್ದೇನೆ ಎಂದೆ. ಅದಕ್ಕವನು ಒಳಗೆ ಹೋಗಿ ರಿಸೆಪ್ಶನ್ ಅಲ್ಲಿ ನಿಮ್ಮ ಐ ಡಿ ಕಾರ್ಡ್ ತೆಗೆದುಕೊಳ್ಳಿ ಎಂದ. ಸೀದಾ ರಿಸೆಪ್ಶನ್ ಬಳಿ ಬಂದು ಲೆಟರ್ ಅನ್ನು ಅವರಿಗೆ ತೋರಿಸಿದೆ. ರಿಸೆಪ್ಶನ್ ಅಲ್ಲಿ ಕೂತಿದ್ದ ಚೆಲುವೆ ಇದಕ್ಕೆ ಮುಂಚೆ ಎರಡು ಬಾರಿ ಇಂಟರ್ವ್ಯೂಗೆ ಬಂದಿದ್ದಾಗ ನೋಡಿದ್ದಳಾದ್ದರಿಂದ ತುಸು ಮಂದಹಾಸ ಬೀರಿ ನನ್ನ ಐ.ಡಿ ಕಾರ್ಡ್ ಕೊಟ್ಟು ವೆಲ್ಕಮ್ ಟು ಪ್ರಜ್ಞಾ ಇನ್ಫೋಟೆಕ್ ಎಂದು ಹೇಳಿ ಇದು ಟೆಂಪೊರರಿ ಐ.ಡಿ ಕಾರ್ಡ್ ಒಂದು ವಾರದ ನಂತರ ಒರಿಜಿನಲ್ ಕಾರ್ಡ್ ಕೊಡುತ್ತೇನೆ ಎಂದು ಹೇಳಿ ಕಿಸಕ್ಕನೆ ನಕ್ಕಳು. ನಾನು ಮನದಲ್ಲೇ ಆಹಾ ನೀನೋ ನಿನ್ನ ಸ್ಮೈಲೋ ಅದ್ಯಾವ ಪುಣ್ಯಾತ್ಮ ನಿನ್ನನ್ನು ರಿಸೆಪ್ಶನ್ ಅಲ್ಲಿ ಕೂಡಿಸಿದನೋ ಅವನಿಗೊಂದು ದೊಡ್ಡ ನಮಸ್ಕಾರ ಎಂದುಕೊಂಡು ಥ್ಯಾಂಕ್ ಯೂ ಎಂದು ಹೇಳಿ ಲಿಫ್ಟ್ ಬಳಿ ಬಂದೆ.

 ೮,೭,೬....೦ ಲಿಫ್ಟ್ ಕೆಳಗೆ ಬಂತು. ನಾನು ಒಳಗೆ ಹೋಗಿ ನಿಂತ ಕೆಲ ಕ್ಷಣದಲ್ಲಿ ಲಿಫ್ಟ್ ಬಾಗಿಲು ತಂತಾನೇ ಮುಚ್ಚಿಕೊಳ್ಳುವುದರಲ್ಲಿತ್ತು ಇನ್ನೇನು ಪೂರ್ತಿ ಮುಚ್ಚಬೇಕು ಅಷ್ಟರಲ್ಲಿ ಕೈಯೊಂದು ಆ ಸಂದಿಯಲ್ಲಿ ತೋರಿ ಬಂತು. ನಾನು ತಕ್ಷಣ ಲಿಫ್ಟ್ ಬಾಗಿಲನ್ನು ತೆಗೆಯುವ ಬಟನ್ ಒತ್ತಿದೆ. ಲಿಫ್ಟ್ ಬಾಗಿಲು ತೆರೆಯಿತು. ಒಂದು ಕ್ಷಣ ಮೈಗೆ ಕರೆಂಟ್ ಹೊಡೆದ ಅನುಭವವಾಯಿತು. ಅಂತಿಂಥ ಚೆಲುವೆ ಅಲ್ಲ ಅವಳು. ಆಗಷ್ಟೇ ಬಾನಿಂದ ಬುವಿಗೆ ಇಳಿದು ಬಂದ ಗಂಧರ್ವ ಕನ್ಯೆಯಂತೆ ಇದ್ದಳು. ಒಳಗೆ ಬಂದು ಥ್ಯಾಂಕ್ ಯೂ ಎಂದಳು. ನಾನು ಬಿಟ್ಟ ಕಣ್ಣು ಬಿಟ್ಟ ಹಾಗೆ ಅವಳನ್ನು ನೋಡುತ್ತಿದ್ದೆ. ಅವಳು ಎಕ್ಷ್ಕ್ಯುಸ್ ಮಿ ಎಂದಳು. ನಾನು ಮತ್ತೆ ವಾಸ್ತವಕ್ಕೆ ಬಂದು ಎಸ್ ಅಂದೆ. ಥ್ಯಾಂಕ್ ಯೂ ಎಂದಳು. ನಾನು ಏನೋ ಹೇಳುತ್ತಿದ್ದೇನೆ ಆದರೆ ಮಾತುಗಳು ಗಂಟಲಲ್ಲೇ ಉಳಿದು ಬಿಟ್ಟಿದೆ. ಲಿಫ್ಟ್ ನಾಲ್ಕನೇ ಮಹಡಿಯಲ್ಲಿ ನಿಂತಿತು, ನಾನು ಹಾಗೆಯೇ ನೋಡುತ್ತಿದ್ದೆ ಅವಳು ಆಚೆ ಹೋಗುತ್ತಿದ್ದಳು ಹಾಗೆ ಬಾಗಿಲು ಮುಚ್ಚಿಕೊಂಡಿತು.

ಮತ್ತೆ ಲಿಫ್ಟ್ ಎಂಟನೆ ಮಹಡಿಯಲ್ಲಿ ನಿಂತಾಗ ಆಚೆ ಬಂದು ಸೀದಾ ಹೋಗಿ ನನ್ನ ರಿಪೋರ್ಟಿಂಗ್ ಮ್ಯಾನೇಜರ್ ಹತ್ತಿರ ರಿಪೋರ್ಟ್ ಮಾಡಿಕೊಂಡು ನನ್ನ ಟೀಮ್ ನ ಹತ್ತಿರ ಹೋಗಿ ನನ್ನ ಕ್ಯುಬಿಕೆಲ್ ನಲ್ಲಿ ಕುಳಿತೆ. ಮೊದಲ ದಿನವಾದ್ದರಿಂದ ಹೆಚ್ಚಾಗಿ ಕೆಲಸ ಇರಲಿಲ್ಲ. ಸಹೋದ್ಯೋಗಿಗಳು ಬಂದು ಶುಭಾಷಯ ಕೋರಿ ಪಾರ್ಟಿ ಯಾವಾಗ, ಮುಂಚೆ ಎಲ್ಲಿ ಕೆಲಸ, ಮನೆ ಎಲ್ಲಿ, ಯಾರ್ಯಾರು ಇದ್ದೀರಾ ಮನೇಲಿ ಹೆಚ್ಚುಕಮ್ಮಿ ನನ್ನ ಇಪ್ಪತ್ತೈದು ವರ್ಷದ ಕಥೆಯನ್ನು ಕೇವಲ ೨-೩ ಗಂಟೆಗಳಲ್ಲಿ ಅವರಿಗೆ ಹೇಳಿದ್ದೆ.

 ಪ್ರಜ್ಞಾ ಇನ್ಫೋಟೆಕ್ ಪ್ರಸಿದ್ಧ ಸಾಫ್ಟ್ವೇರ್ ಕಂಪನಿ. ಅದರಲ್ಲಿ ನಾನು ಟೆಕ್ನಿಕಲ್ ಸಪೋರ್ಟ್ ಉದ್ಯೋಗಿಯಾಗಿ ಸೇರಿದ್ದೆ. ಮೊದಲ ಬಾರಿ ಸಾಫ್ಟ್ವೇರ್ ಕಂಪನಿ ಒಂದಕ್ಕೆ ಸೇರಿದ್ದರಿಂದ ಅಲ್ಲಿನ ವಾತಾವರಣ ಎಲ್ಲ ಹೊಸದಾಗಿ, centralized AC ಇದ್ದಿದ್ದರಿಂದ ಸ್ವಲ್ಪ ಚಳಿ ಜಾಸ್ತಿ ಎನಿಸಿ ಒಂದು ರೀತಿ ಚೆನಾಗಿತ್ತು. ಸುತ್ತಲೂ ಸೊಗಸಾದ ಹುಡುಗಿಯರು, ಅವರ ಡ್ರೆಸ್ ಗಳು, ಅವರು ಮಾತನಾಡುವ ಶೈಲಿ ಎಲ್ಲವೂ ಹೊಸದೊಂದು ಲೋಕದಲ್ಲಿ ಸಂಚರಿಸಿದಂತೆ ಆಗುತ್ತಿತ್ತು. ಮಧ್ಯಾಹ್ನ ಊಟದ ಹೊತ್ತಿಗೆ ಒಂಭತ್ತನೇ ಮಹಡಿಯಲ್ಲಿ ಇದ್ದ ಕ್ಯಾಂಟೀನ್ ಗೆ ಹೋಗಿ ಊಟ ಮಾಡಿ ಆಚೆ ಬಂದು ನಿಂತರೆ ಅಲ್ಲಿಂದ ಬೆಂಗಳೂರಿನ ವಿಹಂಗಮ ನೋಟ ಕಾಣುತ್ತಿತ್ತು. ಸ್ವಲ್ಪ ಹೊತ್ತು ಅಲ್ಲಿ ನಿಂತು ಸಹೋದ್ಯೋಗಿಯೊಡನೆ ಮಾತಾಡಿಕೊಂಡು ಕೆಳಗೆ ಬರುತ್ತಿದ್ದಾಗ ಮತ್ತದೇ ಲಿಫ್ಟ್ ಸುಂದರಿ ಕಂಡಳು. ನಾನು ತದೇಕಚಿತ್ತದಿಂದ ಅವಳನ್ನೇ ನೋಡುತ್ತಿದ್ದೆ. ಅವಳು ಒಮ್ಮೆ ನನ್ನನ್ನು ನೋಡಿ ನಾನು ಯಾರೋ ಗೊತ್ತೇ ಇಲ್ಲವೆಂಬಂತೆ ತನ್ನ ಗೆಳತಿಯರೊಡನೆ ಮಾತಾಡಿಕೊಂಡು ಹೋಗುತ್ತಿದ್ದಳು. ನಾನು ನನ್ನ ಸಹೋದ್ಯೋಗಿಯನ್ನು ಗುರು ಯಾವುದು ಗುರು ಇದು ಫಿಗರ್ ಎಂದೆ. ಅದಕ್ಕವನು ಆಸೆ ಬಿಟ್ಟು ಬಿಡು ಮಗ ಅವಳು ಅಷ್ಟು ಸುಲಭವಾಗಿ ಯಾರಿಗೂ ಬೀಳಲ್ಲ. ಇಡೀ ಕಂಪನಿಗೆ ಬ್ಯೂಟಿ ಅವಳು ಅದೆಷ್ಟು ಹುಡುಗರು ಅವಳ ಹಿಂದೆ ಬಿದ್ದಿದ್ದಾರೋ ಆದರೆ ಅವಳಿಗೆಷ್ಟು ದುರಹಂಕಾರ ಎಂದರೆ ಒಬ್ಬರನ್ನೂ ಮೂಸಿ ಕೂಡ ನೋಡುವುದಿಲ್ಲ ಅನ್ನುತ್ತಾಳೆ ಎಂದ. ಹೋಗಲಿ ಅವಳ ಹೆಸರು ಏನು ಎಂದು ಕೇಳಿದೆ. ಅದಕ್ಕವನು "ಪ್ರಜ್ಞಾ" ಎಂದ. ನಾನು ಕೂಡಲೇ ಏನ್ ಗುರೂ ಈ ಕಂಪನಿ ಅವಳದೇನ ಎಂದೆ. ಹಲೋ ಹಲೋ ಕೂಲ್...ಅವಳಿಗೆ ಅಷ್ಟೆಲ್ಲ ಸೀನ್ ಇಲ್ಲ. ಅವಳ ಹೆಸರು ಪ್ರಜ್ಞಾ ಅಷ್ಟೇ ಎಂದ.

 ಮೊದಲ ದಿನ ಜಾಸ್ತಿ ಮಾತು, ಕಮ್ಮಿ ಕೆಲಸ ಎಂದು ಮುಗಿಸಿ ಮನೆಗೆ ಹೊರಡುವ ಹೊತ್ತಿಗೆ ಮತ್ತೊಮ್ಮೆ ಲಿಫ್ಟ್ ನಲ್ಲಿ ಪ್ರಜ್ಞಾ"ಳ ದರ್ಶನ ಮಾಡಿಕೊಂಡು ಮನೆಗೆ ಬಂದು ಊಟ ಮಾಡಿ ಅಪ್ಪ ಅಮ್ಮನಿಗೆ ಹೊಸ ಕೆಲಸದ ವಿವರಣೆ ಕೊಟ್ಟು ರೂಮಿಗೆ ಬಂದು ಹಾಸಿಗೆ ಮೇಲೆ ಉರುಳಿದೆ. "ಪ್ರಜ್ಞಾ" ಎಷ್ಟು ಸುಂದರ ಹೆಸರು.....

ಮುಂದುವರಿಯುವುದು...

Rating
No votes yet

Comments