ಹೊಲದಲ್ಲಿ ಸಿಕ್ಕ ನಿಧಿ: ನ್ಯಾಯವಾಗಿ ಯಾರಿಗೆ ಸೇರಬೇಕು? (ಅಂದಿನ ಮತ್ತು ಇಂದಿನ ನ್ಯಾಯ)
ಬ್ರಿಟೀಷರು ನಮ್ಮನ್ನಾಳಿದ ಪುಣ್ಯವಿಶೇಷವೋ ಏನೋ ಅವರಿಂದ ನಾವು ಕಲಿತುಕೊಳ್ಳಬಾರದ ಎಲ್ಲಾ ಅವಗುಣಗಳನ್ನು ಕಲಿತು ನಮ್ಮ ವ್ಯವಸ್ಥೆಯನ್ನೇ ದೂರಿಕೊಂಡು ಸರ್ವರಿಗೂ ಸಮಾನವಾದ ನ್ಯಾಯ ದೊರಕದೆ ನ್ಯಾಯವೆನ್ನುವುದು ಉಳ್ಳವರ ಸೊತ್ತಾಗಿ ಬಡವನಿಗೆ ನ್ಯಾಯ ಸಿಗುವುದೇ ದುಸ್ತರವಾಗಿದೆ. ಭ್ರಷ್ಟತೆ ಇಡೀ ವ್ಯವಸ್ಥೆಯನ್ನಷ್ಟೇ ಅಲ್ಲ ಇಡೀ ಸಮಾಜವನ್ನೇ ವ್ಯಾಪಿಸಿದೆ. ಈ ಹಿನ್ನಲೆಯಲ್ಲಿ ಈ ಕಥೆ ಹೆಚ್ಚು ಅರ್ಥಪೂರ್ಣವೆನಿಸುತ್ತದೆ. ಇದರ ಪ್ರಾಚೀನ ರೂಪ ಮತ್ತು ಇಂದಿನ ರೂಪಗಳನ್ನು ಇಲ್ಲಿ ಕೊಡುವುದರ ಮೂಲಕ ನಮ್ಮ ವ್ಯವಸ್ಥೆಯನ್ನು ವಿಡಂಬನಾತ್ಮಕವಾಗಿ ನೋಡುವ ಒಂದು ಪ್ರಯತ್ನವನ್ನು ಇಲ್ಲಿ ಮಾಡಿದ್ದೇನೆ. (ಪ್ರಾಚೀನ ಕಥೆ ಹಲವಾರು ವರ್ಷಗಳ ಕೆಳಗೆ ನಾನು ಚಂದಮಾಮ ಮಕ್ಕಳ ಮಾಸ ಪತ್ರಿಕೆಯಲ್ಲಿ ಓದಿದ್ದು ಮತ್ತು ಇಂದಿನ ರೂಪ ಗೆಳಯನೋರ್ವ ಹೇಳಿದ ವಿಷಯಗಳ ಆಧಾರದ ಮೇಲೆ ಬರೆದದ್ದು.)
ಅಂದಿನ ಕಥೆ:
ರಾಜ ಮಹರಾಜರುಗಳ ಕಾಲದಲ್ಲಿ ಬಹು ಹಿಂದೆ ಒಂದು ಊರಿನಲ್ಲಿ ಭೀಮಯ್ಯ ಮತ್ತು ರಾಮಯ್ಯ ಎನ್ನುವ ಇಬ್ಬರು ವ್ಯಕ್ತಿಗಳಿದ್ದರು. ಒಮ್ಮೆ ಭೀಮಯ್ಯನೆನ್ನುವವನಿಗೆ ಹಣದ ಅಡಚಣೆ ಉಂಟಾದ್ದರಿಂದ ಅವನು ತನ್ನ ಹೊಲವನ್ನು ಕ್ರಯ ಹೊಂದಿಸಿಕೊಂಡು ರಾಮಯ್ಯನಿಗೆ ಮಾರಿದ. ಸ್ವಲ್ಪ ದಿನಗಳ ನಂತರ ರಾಮಯ್ಯ ತಾನು ಭೀಮಯ್ಯನಿಂದ ಕೊಂಡುಕೊಂಡ ಹೊಲದಲ್ಲಿ ಉಳುಮೆ ಮಾಡುತ್ತಿದ್ದಾಗ ಅವನ ನೇಗಿಲಿನ ತುದಿಗೆ ಯಾವುದೋ ಒಂದು ವಸ್ತು ತಾಕಿ ಠಣ್ ಎಂದು ಶಬ್ದ ಬಂದಿತು. ಅದೇನೆಂದು ಆ ಜಾಗದಲ್ಲಿ ಅಗೆದು ನೋಡಿದಾಗ ಅವನಿಗೆ ಬಂಗಾರದ ನಾಣ್ಯಗಳಿಂದ ತುಂಬಿದ ಒಂದು ನಿಧಿಯ ಬಿಂದಿಗೆ ದೊರಕಿತು. ಅದನ್ನು ತೆಗೆದುಕೊಂಡ ರಾಮಯ್ಯ ನೇರವಾಗಿ ಭೀಮಯ್ಯನ ಮನೆಗೆ ಬಂದು ಅವನನ್ನು ಕಂಡು ತನಗೆ ಅವನಿಂದ ಕೊಂಡುಕೊಂಡ ಹೊಲದಲ್ಲಿ ಈ ನಿಧಿ ಸಿಕ್ಕಿತೆಂದು ಅದನ್ನು ನೀನು ತೆಗೆದುಕೋ ಎಂದು ಹೇಳಿ ಅವನಿಗೆ ಅದನ್ನು ಕೊಡಲು ಹೋದನು. ಆಗ ಭೀಮಯ್ಯ, "ನಾನು ನಿನಗೆ ಹೊಲದ ಸಮೇತ ಅದರಲ್ಲಿರುವ ವಸ್ತುಗಳನ್ನೆಲ್ಲಾ ಮಾರಿದ್ದೇನೆ; ಆದ್ದರಿಂದ ನೀನೇ ಆ ಸಂಪತ್ತಿಗೆ ನ್ಯಾಯವಾದ ಒಡೆಯ ಅದನ್ನು ನಿನ್ನ ಬಳಿಯೇ ಇಟ್ಟುಕೋ" ಎಂದನು. ಆಗ ರಾಮಯ್ಯ, "ನಾನು ನಿನ್ನಂದ ಕ್ರಯಕ್ಕೆ ತೆಗೆದುಕೊಂಡದ್ದು ಕೇವಲ ಹೊಲವನ್ನು ಮಾತ್ರ, ಅದರಲ್ಲಿರುವ ವಸ್ತುಗಳನ್ನು ಅಲ್ಲ, ಆದ್ದರಿಂದ ಇದು ನಿನಗೇ ನ್ಯಾಯವಾಗಿ ಸೇರಬೇಕು, ಆದ್ದರಿಂದ ಇದು ನಿನ್ನ ಬಳಿ ಇರುವುದೇ ಸರಿ" ಎಂದನು. ಹೀಗೆ ಅದು ನಿನಗೆ ಸೇರಿದ್ದು ಇಲ್ಲಾ ನಿನಗೆ ಸೇರಿದ್ದು ಎಂದು ಅವರಿಬ್ಬರೂ ಆ ನಿಧಿಯನ್ನು ತೆಗೆದುಕೊಳ್ಳಲು ಒಪ್ಪಲಿಲ್ಲ. ಕಡೆಗೆ ಹಿರಿಯರೊಬ್ಬರ ಸಲಹೆಯಂತೆ ಅವರಿಬ್ಬರೂ ಆ ಊರಿನ ನ್ಯಾಯಾಧೀಶರ ಬಳಿ ತಮ್ಮ ಸಮಸ್ಯೆಯನ್ನು ಒಯ್ದರು. ಅವರ ಸಮಸ್ಯೆಯನ್ನು ಆಲಿಸಿದ ಆ ನ್ಯಾಯಧೀಶ ಎರಡು ದಿನಗಳ ನಂತರ ಅವರ ಸಮಸ್ಯೆಗೆ ಪರಿಷ್ಕಾರ ಹೇಳುವುದಾಗಿ ತಿಳಿಸಿ ಅವರನ್ನು ಕಳುಹಿಸಿ ಕೊಟ್ಟ.
ನ್ಯಾಯಾಧೀಶ ಹೇಳಿದಂತೆ ಎರಡು ದಿನಗಳ ನಂತರ ರಾಮಯ್ಯ ಮತ್ತು ಭೀಮಯ್ಯ ಇಬ್ಬರೂ ಅವನಲ್ಲಿಗೆ ಬಂದರು. ಆಗ ನ್ಯಾಯಾಧೀಶ ರಾಮಯ್ಯನನ್ನು ಉದ್ದೇಶಿಸಿ, "ನಿನಗೆ ಯುಕ್ತ ವಯಸ್ಸಿಗೆ ಬಂದ ಮಗಳೇನಾದರೂ ಇದ್ದಾಳೆಯೇ" ಎಂದು ಕೇಳಿದ. ಅದಕ್ಕೆ ರಾಮಯ್ಯ ಹೌದೆಂದ; ಆಗ ಭೀಮಯ್ಯನನ್ನುದ್ದೇಶಿಸಿ ಆ ನ್ಯಾಯಾಧೀಶ ಅವನಿಗೇನಾದರೂ ಯುಕ್ತ ವಯಸ್ಸಿಗೆ ಬಂದಿರುವ ಮಗನಿದ್ದಾನೆಯೇ ಎಂದು ಕೇಳಿದ. ಅದಕ್ಕೆ ಭೀಮಯ್ಯ ಇದ್ದಾನೆಂದು ತಿಳಿಸಿದ. ಆಗ ಆ ನ್ಯಾಯಾಧೀಶ ಅವರಿಬ್ಬರನ್ನುದ್ದೇಶಿಸಿ ಈ ರೀತಿ ತೀರ್ಪಿತ್ತ. ಅದೇನೆಂದರೆ, ಭೀಮಯ್ಯನ ಮಗನಿಗೆ ರಾಮಯ್ಯನ ಮಗಳನ್ನು ಕೊಟ್ಟು ಮದವೆ ಮಾಡಬೇಕು ಮತ್ತು ರಾಮಯ್ಯನು ತನಗೆ ಸಿಕ್ಕ ನಿಧಿಯನ್ನು ಭೀಮಯ್ಯನ ಮಗನಿಗೆ ವರದಕ್ಷಿಣೆಯ ರೂಪದಲ್ಲಿ ಅದನ್ನು ಕೊಡಬೇಕು. ಹೀಗೆ ನ್ಯಾಯಾಧೀಶ ಕೊಟ್ಟ ತೀರ್ಪಿನಿಂದ ಇಬ್ಬರಿಗೂ ಸಂತೋಷವಾಯಿತು. ಭೀಮಯ್ಯನ ಮಗನಿಗೆ ವರದಕ್ಷಿಣೆಯ ರೂಪದಲ್ಲಿ ತನಗೆ ಸಿಕ್ಕಿದ ನಿಧಿಯನ್ನು ಕೊಟ್ಟದ್ದರಿಂದ ಭೀಮಯ್ಯನಿಗೆ ನ್ಯಾಯವಾಗಿ ಸೇರಬೇಕಾದ ಆಸ್ತಿಯನ್ನು ಅವನಿಗೆ ಮುಟ್ಟಿಸಿದ್ದ ತೃಪ್ತಿ ರಾಮಯ್ಯನಿಗೆ ಉಂಟಾಯಿತು. ಭೀಮಯ್ಯನಿಗೆ ತನ್ನ ಮಗನಿಗೆ ವರದಕ್ಷಿಣೆಯ ರೂಪದಲ್ಲಿ ರಾಮಯ್ಯನಿಗೆ ದೊರತ ಸಂಪತ್ತು ಸಂಧದ್ದರಿಂದ ಅದನ್ನು ತಾನು ಅನಾವಶ್ಯಕವಾಗಿ ರಾಮಯ್ಯನಿಂದ ಪಡೆಯಲಿಲ್ಲ ಎನ್ನುವ ಪಾಪ ಪ್ರಜ್ಞೆ ದೂರವಾಗಿ ಮನಸ್ಸಿಗೆ ತೃಪ್ತಿಯಾಯಿತು. ಹೀಗೊಂದು ಸಮಸ್ಯೆ ನ್ಯಾಯ ನಿಷ್ಠೆಯುಳ್ಳ ವ್ಯಕ್ತಿಗಳು ಮತ್ತು ನ್ಯಾಯಾಧೀಶರಿಂದ ಅಂದಿನ ಭಾರತದಲ್ಲಿ ಪರಿಷ್ಕಾರವಾಯಿತು.
ಇಂದಿನ ಕಥೆ:
ರಾಜ ಮಹರಾಜರುಗಳ ಕಾಲ ಮುಗಿದು ಬ್ರಿಟೀಷರು ನಮ್ಮನ್ನಾಳಲು ಪ್ರಾರಂಭಿಸಿದರು ಅವರ ವಿರುದ್ಧ ನಿರಂತರ ಹೋರಾಟ ಮಾಡಿ ನಾವು ಸ್ವಾತಂತ್ರ್ಯವನ್ನು ಗಳಿಸಿಕೊಂಡೆವು. ಈ ಸ್ವತಂತ್ರ ಭಾರತದಲ್ಲಿಯೂ ಹಿಂದೆ ಇದ್ದಂತೆ ಒಂದು ಊರಿನಲ್ಲಿ ಭೀಮಯ್ಯ ಮತ್ತು ರಾಮಯ್ಯ ಎನ್ನುವ ಇಬ್ಬರು ವ್ಯಕ್ತಿಗಳಿದ್ದರು. ಒಮ್ಮೆ ಭೀಮಯ್ಯನೆನ್ನುವವನಿಗೆ ಹಣದ ಅಡಚಣೆ ಉಂಟಾದ್ದರಿಂದ ಅವನು ತನ್ನ ಹೊಲವನ್ನು ಕ್ರಯ ಹೊಂದಿಸಿಕೊಂಡು ರಾಮಯ್ಯನಿಗೆ ಮಾರಿದ. ಸ್ವಲ್ಪ ದಿನಗಳ ನಂತರ ರಾಮಯ್ಯ ತಾನು ಭೀಮಯ್ಯನಿಂದ ಕೊಂಡುಕೊಂಡ ಹೊಲದಲ್ಲಿ ಉಳುಮೆ ಮಾಡುತ್ತಿದ್ದಾಗ ಅವನ ನೇಗಿಲಿನ ತುದಿಗೆ ಯಾವುದೋ ಒಂದು ವಸ್ತು ತಾಕಿ ಠಣ್ ಎಂದು ಶಬ್ದ ಬಂದಿತು. ಅದೇನೆಂದು ಆ ಜಾಗದಲ್ಲಿ ಅಗೆದು ನೋಡಿದಾಗ ಅವನಿಗೆ ಬಂಗಾರದ ನಾಣ್ಯಗಳುಳ್ಳ ನಿಧಿಯ ಬಿಂದಿಗೆಯೊಂದು ದೊರಕಿತು. ಅದನ್ನು ನೋಡಿ ಖುಷಿಗೊಂಡ ರಾಮಯ್ಯ, ಯಾರಿಗೂ ಗೊತ್ತಾಗದ ಹಾಗೆ ತಕ್ಷಣವೇ ಅದನ್ನು ತೆಗೆದುಕೊಂಡು ಹೋಗಿ ತನ್ನ ಮನೆಯಲ್ಲಿ ಗೋಪ್ಯವಾಗಿರಿಸಿದ. ರಾಮಯ್ಯನಿಗೆ ನಿಧಿ ಸಿಕ್ಕ ವಿಷಯ ಅದು ಹೇಗೋ ಭೀಮಯ್ಯನಿಗೆ ಗೊತ್ತಾಗಿ ಹೋಯಿತು. ಭೀಮಯ್ಯ ರಾಮಯ್ಯನಲ್ಲಿಗೆ ಬಂದು ತಾನು ಮಾರಿದ ಹೊಲದಲ್ಲಿ ನಿಧಿ ಸಿಕ್ಕಿರುವುದರಿಂದ ಅದು ತನಗೇ ಸಲ್ಲಬೇಕೆಂದು ಹೇಳಿದ. ಆಗ ಕೋಪಗೊಂಡ ರಾಮಯ್ಯ ನೀನು ಹೊಲವನ್ನು ಮಾರಿದ ಮೇಲೆ ಮುಗಿಯಿತು ಅದರಲ್ಲಿ ಇದ್ದದ್ದು ಎಲ್ಲವೂ ನನ್ನದೇ ಹಾಗಾಗಿ ಆ ನಿಧಿಗೂ ನಿನಗೂ ಯಾವುದೇ ಸಂಭಂದವಿಲ್ಲ ಎಂದು ಕಡಾಖಂಡಿತವಾಗಿ ಹೇಳಿದ. ಆಗ ಭೀಮಯ್ಯ ಅವನಿಗೆ ತಾನು ಕೇವಲ ಹೊಲವನ್ನು ಮಾತ್ರ ಮಾರಿದ್ದೇನೆಯೇ ಹೊರತು ಅದರೊಳಗಿರುವ ವಸ್ತುಗಳನ್ನಲ್ಲ ಆದ್ದರಿಂದ ಆ ನಿಧಿ ತನಗೇ ಸೇರಬೇಕೆಂದು ರಾಮಯ್ಯನಿಗೆ ಮನದಟ್ಟು ಮಾಡಿಸಲು ಪ್ರಯತ್ನಿಸಿದ. ಅದಕ್ಕೆ ಸುತಾರಂ ರಾಮಯ್ಯ ಒಪ್ಪದೆ, ಅದು ತನಗೆ ಸಿಕ್ಕಿದ್ದರಿಂದ ಅದು ತನ್ನದೇ ಎಂದು ಪಟ್ಟು ಹಿಡಿದ. ಹೀಗೆ ಅವರಿಬ್ಬರೂ ಆ ನಿಧಿ ತಮಗೇ ಸೇರಬೇಕೆಂದು ತಮ್ಮ ತಮ್ಮೊಳಗೆ ಕಿತ್ತಾಡ ತೊಡಗಿದರು. ಸ್ವಲ್ಪ ಹೊತ್ತಿನ ನಂತರ ಭೀಮಯ್ಯ, "ನನಗೊಂದು ಉಪಾಯ ಹೊಳೆದಿದೆ, ಅದು ಏನೆಂದರೆ ನನ್ನ ಮಗನಿಗೆ ನಿನ್ನ ಮಗಳನ್ನು ಕೊಟ್ಟು ಮದುವೆ ಮಾಡು ಮತ್ತು ನಿನಗೆ ಸಿಕ್ಕ ನಿಧಿಯನ್ನು ವರದಕ್ಷಿಣೆ ರೂಪವಾಗಿ ನನ್ನ ಮಗನಿಗೆ ಕೊಡು ಆಗ ನೀನು ನನ್ನ ಹಣವನ್ನು ನನಗೆ ಕೊಟ್ಟಂತೆ ಆಗುತ್ತದೆ ಮತ್ತು ನಿನ್ನ ಮಗಳಿಗೆ ವರದಕ್ಷಿಣೆ ಕೊಡುವ ಬಾಬತ್ತು ಉಳಿಯಿತೆಂದು ಸಂತಸಗೊಳ್ಳಬಹುದು" ಎಂದು ನುಡಿದ. ಆಗ ರಾಮಯ್ಯ, "ನಿನ್ನ ಹುಚ್ಚು ಮಾತನ್ನು ಕೇಳಿದರೆ ಯಾರಾದರೂ ನಗುತ್ತಾರಷ್ಟೇ ನಿನ್ನ ಮಗನಿಗೂ ನನ್ನ ಮಗಳಿಗೂ ಎಲ್ಲಿಯ ಹೋಲಿಕೆ. ನೀನು ನನ್ನ ಸರಿಸಮಾನನಾದ ಶ್ರೀಮಂತನಾಗಿದ್ದರೆ ನಿನ್ನ ಹೊಲವನ್ನೇಕೆ ಮಾರಿಕೊಳ್ಳುವ ಪರಿಸ್ಥಿತಿ ಬರುತ್ತಿತ್ತು; ನಿನಗೂ ನನಗೂ ಎಲ್ಲಿಯ ಹೋಲಿಕೆ ನಡೆಯಾಚೆ" ಎಂದು ಅವನನ್ನು ಅವಮಾನಕರ ಶಬ್ದಗಳಿಂದ ಬಯ್ದು ಹೊರಗಟ್ಟಲು ನೋಡಿದ. .
ರಾಮಯ್ಯನ ವರ್ತನೆಯಿಂದ ಮನನೊಂದರೂ ಭೀಮಯ್ಯ ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕೆಂಬ ನಿಟ್ಟಿನಲ್ಲಿ ಆಲೋಚನೆಗೆ ತೊಡಗಿದ. ಆಗ ಅವನಿಗೆ ಹೊಳೆದದ್ದೆ ತಮ್ಮ ಊರಿನ ಮರಿ ಪುಡಾರಿ ಪರಮೇಶಿ. ಅವನ ಬಳಿಗೆ ಹೋದರೆ ತಮ್ಮ ಸಮಸ್ಯೆಗೆ ಪರಿಹಾರ ದೊರಕಬಹುದೆಂದು ರಾಮಯ್ಯನೂ ಒಪ್ಪಿದ; ಏಕೆಂದರೆ ಆ ಪುಡಾರಿ ರಾಮಯ್ಯನ ಜನಾಂಗದವನೇ. ಕೂಡಲೇ ಅವನ ಬಳಿಗೆ ಹೋದ ರಾಮಯ್ಯ ಮತ್ತು ಭೀಮಯ್ಯರು ತಮ್ಮ ಸಮಸ್ಯೆಯನ್ನು ಪರಮೇಶಿಯ ಮುಂದೆ ಹೇಳಿಕೊಂಡರು. ಇವರ ಕಥೆಯನ್ನು ಕೂಲಂಕುಷವಾಗಿ ಕೇಳಿದ ಪರಮೇಶಿ ಈಗ ದಿನಗಳು ಚೆನ್ನಾಗಿಲ್ಲವೆಂದು ಅದಕ್ಕೆ ಸೂಕ್ತ ಪರಿಹಾರವನ್ನು ಅಮವಾಸ್ಯೆ ಕಳೆದ ನಂತರ (ಸುಮಾರು ಹತ್ತು - ಹದಿನೈದು ದಿನಗಳ ನಂತರ) ಸೂಚಿಸುತ್ತೇನೆಂದೂ ಅಲ್ಲಿಯವರೆಗೆ ರಾಮಯ್ಯನಿಗೆ ಸಿಕ್ಕ ನಿಧಿ ತನ್ನ ಬಳಿಯೇ ಇರಲೆಂದು ಹೇಳಿದ. ರಾಮಯ್ಯನಿಗೆ ನಿಧಿ ಅವನ ಬಳಿ ಇದ್ದರೆ ಪೋಲಿಸರಿಂದ ತೊಂದರೆಯಾಗ ಬಹುದೆಂದು ನಯವಾಗಿ ಪೂಸಿ ಹೊಡೆದ ಪರಮೇಶಿ ನಿಧಿ ತನ್ನಲ್ಲಿ ಉಳಿಯುವಂತೆ ನೋಡಿಕೊಂಡ. ತತ್ಕಾಲಕ್ಕೆ ಇವನ ಮಾತನ್ನು ನಂಬಿ ಇಬ್ಬರೂ ಹೊರಟು ಹೋದರು. ಪರಮೇಶಿ ತಿಳಿಸಿದಂತೆ ಅವರಿಬ್ಬರೂ ಅಮವಾಸ್ಯೆಯ ನಂತರ ಪರಮೇಶಿಯ ಬಳಿಗೆ ಬಂದು ಆ ನಿಧಿಯ ಬಗ್ಗೆ ವಿಚಾರಿಸಿದರು. ಆಗ ಪರಮೇಶಿ ಏನೂ ತಿಳಿಯದ ಅಮಾಯಕನಂತೆ, ತಣ್ಣನೆಯ ಧ್ವನಿಯಲ್ಲಿ...."ಯಾವ ನಿಧಿ? ಅದರಲ್ಲಿ ಬಂಗಾರದ ನಾಣ್ಯಗಳಿರುವುದೆಂದರೇನು? ಅದರ ಬಗ್ಗೆ ನೀವಿಬ್ಬರೂ ಕಿತ್ತಾಡಿಕೊಳ್ಳುವುದೆಂದರೇನು? ಮತ್ತು ಅದಕ್ಕೆ ನನ್ನ ಬಳಿ ಪಂಚಾಯ್ತಿಗೆ ಬರುವುದೆಂದರೇನು?....ಛೇ...ಛೇ...ಎಲ್ಲಾದರೂ ಉಂಟೆ. ಹಾಗೊಂದು ವೇಳೆ ನೀವು ತಂದು ಕೊಟ್ಟಿದ್ದರೂ ಕೂಡಾ ಭೂಮಿಯಲ್ಲಿ ಸಿಕ್ಕ ಸ್ವತ್ತು ಸರ್ಕಾರದ ಖಜಾನೆಗೆ ಸೇರಬೇಕು. ನೀವೇನಾದರೂ ನನಗೆ ಹಾಗೆ ತಂದು ಕೊಟ್ಟಿದ್ದರೆ ನನ್ನಂಥ ಸಮಾಜ ಸೇವಕ ಅದನ್ನು ಸರ್ಕಾರಕ್ಕೆ ಯಾವಾಗಲೋ ಮುಟ್ಟಿಸುತ್ತಿದ್ದ. ಹಾಗಾಗಿ ಅದನ್ನು ನಾನೆಲ್ಲಿಯಾದರೂ ಇಟ್ಟುಕೊಳ್ಳುವುದುಂಟೇ....ಛೇ...ಛೇ...! ನನ್ನ ಮುಂದೆ ಮಾತನಾಡಿದಂತೆ ಇನ್ನಾರ ಮುಂದಾದರೂ ಮಾತನಾಡೀರಿ...ಜೋಕೆ! ಜನ ನಿಮ್ಮನ್ನು ಹುಚ್ಚರೆಂದುಕೊಂಡಾರು! ಈಗ ನಾನು 108ಗೆ ಫೋನ್ ಮಾಡಿ ನಿಮ್ಮನ್ನು ಹುಚ್ಚಾಸ್ಪತ್ರೆಗೆ ಕೊಂಡೊಯ್ಯುವ ಮೊದಲು ಇಲ್ಲಿಂದ ಜಾಗ ಖಾಲಿ ಮಾಡಿ ಎಂದ. ಇಲ್ಲದಿದ್ದರೆ ಪೋಲಿಸರಿಗೆ ಹೇಳಿ, ಮೊನ್ನೆ ಪರವೂರಿನ ದೇವಸ್ಥಾನದಲ್ಲಿ ಕಳುವಾಗಿರುವ ಕೇಸಿನಲ್ಲಿ ಫಿಟ್ ಮಾಡಿಸುತ್ತೇನೆ!"
ಪಾಪ ತಮ್ಮ ತಮ್ಮಲ್ಲೇ ಹೊಂದಾಣಿಕೆ ಮಾಡಿಕೊಂಡು ಇಬ್ಬರೂ ತಮಗೆ ದೊರೆತ ನಿಧಿಯನ್ನು ಹಂಚಿಕೊಂಡಿದ್ದರೆ ಒಳ್ಳೇದಿತ್ತು ಎಂದು ಅವರಿಬ್ಬರೂ ಬಂದ ದಾರಿಗೆ ಸುಂಕವಿಲ್ಲವೆಂದು ತಮ್ಮ ತಮ್ಮ ದಾರಿ ಹಿಡಿದು ಹೊರಟರು. ಇವರಿಬ್ಬರ ಜಗಳದಲ್ಲಿ ಖಂಡಿತ ಫಾಯ್ದೆಯಾದದ್ದು ಪರಮೇಶಿಗೆ. ಖಂಡಿತವಾಗಿಯೂ ಈ ರೀತಿಯ ಸಮಸ್ಯೆಗಳಿಗೆ ಬೇರೆ ರೀತಿಯ ಪರಿಷ್ಕಾರವೂ ಇರಬಹುದೆಂದು ನನ್ನ ಅನಿಸಿಕೆ. ಇದಕ್ಕೆ ಸಂಪದಿಗರು ಸೂಕ್ತವಾಗಿ ಸ್ಪಂದಿಸುತ್ತಾರೆಂದು ಆಶಿಸುತ್ತೇನೆ.
Comments
ಉ: ಹೊಲದಲ್ಲಿ ಸಿಕ್ಕ ನಿಧಿ: ನ್ಯಾಯವಾಗಿ ಯಾರಿಗೆ ಸೇರಬೇಕು? (ಅಂದಿನ ...
In reply to ಉ: ಹೊಲದಲ್ಲಿ ಸಿಕ್ಕ ನಿಧಿ: ನ್ಯಾಯವಾಗಿ ಯಾರಿಗೆ ಸೇರಬೇಕು? (ಅಂದಿನ ... by partha1059
ಉ: ಹೊಲದಲ್ಲಿ ಸಿಕ್ಕ ನಿಧಿ: ನ್ಯಾಯವಾಗಿ ಯಾರಿಗೆ ಸೇರಬೇಕು? (ಅಂದಿನ ...
ಉ: ಹೊಲದಲ್ಲಿ ಸಿಕ್ಕ ನಿಧಿ: ನ್ಯಾಯವಾಗಿ ಯಾರಿಗೆ ಸೇರಬೇಕು? (ಅಂದಿನ ...
In reply to ಉ: ಹೊಲದಲ್ಲಿ ಸಿಕ್ಕ ನಿಧಿ: ನ್ಯಾಯವಾಗಿ ಯಾರಿಗೆ ಸೇರಬೇಕು? (ಅಂದಿನ ... by venkatb83
ಉ: ಹೊಲದಲ್ಲಿ ಸಿಕ್ಕ ನಿಧಿ: ನ್ಯಾಯವಾಗಿ ಯಾರಿಗೆ ಸೇರಬೇಕು? (ಅಂದಿನ ...
In reply to ಉ: ಹೊಲದಲ್ಲಿ ಸಿಕ್ಕ ನಿಧಿ: ನ್ಯಾಯವಾಗಿ ಯಾರಿಗೆ ಸೇರಬೇಕು? (ಅಂದಿನ ... by makara
ಉ: ಹೊಲದಲ್ಲಿ ಸಿಕ್ಕ ನಿಧಿ: ನ್ಯಾಯವಾಗಿ ಯಾರಿಗೆ ಸೇರಬೇಕು? (ಅಂದಿನ ...
ಉ: ಹೊಲದಲ್ಲಿ ಸಿಕ್ಕ ನಿಧಿ: ನ್ಯಾಯವಾಗಿ ಯಾರಿಗೆ ಸೇರಬೇಕು? (ಅಂದಿನ ...
In reply to ಉ: ಹೊಲದಲ್ಲಿ ಸಿಕ್ಕ ನಿಧಿ: ನ್ಯಾಯವಾಗಿ ಯಾರಿಗೆ ಸೇರಬೇಕು? (ಅಂದಿನ ... by ಗಣೇಶ
ಉ: ಹೊಲದಲ್ಲಿ ಸಿಕ್ಕ ನಿಧಿ: ನ್ಯಾಯವಾಗಿ ಯಾರಿಗೆ ಸೇರಬೇಕು? (ಅಂದಿನ ...
In reply to ಉ: ಹೊಲದಲ್ಲಿ ಸಿಕ್ಕ ನಿಧಿ: ನ್ಯಾಯವಾಗಿ ಯಾರಿಗೆ ಸೇರಬೇಕು? (ಅಂದಿನ ... by ಗಣೇಶ
ಉ: ಹೊಲದಲ್ಲಿ ಸಿಕ್ಕ ನಿಧಿ: ನ್ಯಾಯವಾಗಿ ಯಾರಿಗೆ ಸೇರಬೇಕು? (ಅಂದಿನ ...