ನಾನೇಕೆ ಹೀಗೆ?

ನಾನೇಕೆ ಹೀಗೆ?

ನಾನೇಕೆ ಹೀಗೆ? ನಾನು ನಾನಾಗಿರಬೇಕೆಂಬ ಆಸೆ! ನಾನು ನಾನಾಗಿರುವುದೆಂದರೆ ಏನು? ನಾನೆಂದರೆ ಏನು? ಅದೇ ಗೊತ್ತಿಲ್ಲ, ನನ್ನತನದ ನೆನಪಿಲ್ಲ, ನಾನೇಕೆ ಹೀಗೆ? 


ಮನಬಿಚ್ಚಿ ಮಾತನಾಡುವ ಆಸೆ, ಬರೀ ನಿರಂತರ ಮೌನದಲ್ಲಿಯೇ ಕಳೆಯುವ ಆಸೆ, ಮನಬಿಚ್ಚಿ ಮಾತನಾಡುವುದಾದರೂ ಏನೆಂದು ಮಾತನಾಡಲಿ? ಯಾರೊಂದಿಗೆ ಮಾತನಾಡಲಿ? ನನಗೆ ನನ್ನ ಮಾತೇ ಅಲ್ಪ ಪ್ರಾಣ, ಮಹಾ ಪ್ರಾಣ, ಪಂಚ ಪ್ರಾಣ! ನನ್ನ ಪುರಾಣವನ್ನು ಕೇಳುವ ವ್ಯವಧಾನವಾದರೂ ಇತರಿಗೇಕೆ ಇರಬೇಕು? ಇತರಿಗೇಕೆ ತೊಂದರೆ ಕೊಡುವುದೆಂದು ನನ್ನೊಳಗೇ ನಾ ಮಾತನಾಡುತ್ತಾ, ಮಾತನಾಡುತ್ತ ಧ್ವನಿ ಕ್ಷೀಣವಾಗಿ, ಮೌನದ ಚಾದರವನ್ನು ಹೊದ್ದು ಸುಮ್ಮನೆ ಮಲಗೋಣವೆಂದರೆ ಗುಂಯಿಗುಡುವ ಹಾಳು ಸೊಳ್ಳೆಗಳು ನಿದ್ದೆಯನ್ನೇ ಹತ್ತಿರ ಸುಳಿಯಲು ಬಿಡುವುದಿಲ್ಲ, ನಿದ್ದೆಯಿಲ್ಲದೇ ಸುಮ್ಮನೇ ಮಲಗುವುದಾದರೂ ಏಕೆ? ಮೌನದ ಚಾದರಕ್ಕೂ ಸೊಳ್ಳೆಯ ಶಬ್ದವನ್ನು ತಡೆಯಲು ಆಗದಿದ್ದ ಮೇಲೆ ಮೌನವಾದರೂ ಏಕೆ? ಇಷ್ಷಕ್ಕೂ ಮೌನವೆಂದರೆ ಏನು? ಮೌನವಾಗಿದ್ದೂ ಮೌನವಾಗಿರದೇ, ಕುಳಿತರೂ ಕುಳಿತುಕೊಳ್ಳದೇ ಜಗತ್‌ಸಂಚಾರಿಯಾಗಿರುವ ನಾನೇಕೆ ಹೀಗೆ?


 ನನಗೆ ಸಂಗಾತಿಯಿಲ್ಲ, ಸಂಕ್ರಾಂತಿ ಇದೆಯಲ್ಲ, ನೂರು ಜನರ ಮಧ್ಯದಲ್ಲಿದ್ದರೂ ನನಗೆ ಒಂಟಿತನ ಕಾಡುತ್ತದೆ, ಒಂಟಿಯಾಗಿದ್ದಾಲೂ ಒಂಟಿತನ ಕಾಡುತ್ತದೆ! ಅಂದರೆ ಒಂಟಿತನವೆಂದರೆ ಅದು ಮನಸ್ಸಿನ ಬಯಕೆಯಾ ಅಥವಾ ಮನಸ್ಸಿನ ವೈರಾಗ್ಯವಾ? ಒಂಟಿತನಕಾಡುವುದಾದರೂ ಯಾರಿಗೆ ಮನಸ್ಸಿಗೋ, ಹೃದಯಕ್ಕೋ, ಬಯಕೆಗೋ, ವೈರಾಗ್ಯವಿದ್ದರೆ ರಾಗದ ಚಿಂತೆ ಏಕೆ? ಕೆಲವೊಮ್ಮೆ ಒಬ್ಬಂಟಿಯಾಗಿದ್ದರೂ ಒಬ್ಬಂಟಿ ಅನಿಸುವುದೇ ಇಲ್ಲವಲ್ಲ! ಅಷ್ಟಕ್ಕೂ ಒಬ್ಬಂಟಿತನವೆಂದರಾದರೂ ಏನು? ಅಂದರೆ ಮನಸ್ಸಗೂ ಹೃದಯಕ್ಕೂ ಬೆಳೆಯುತ್ತಿರುವ ಅಂತರ ಒಬ್ಬಂಟಿತನವೇ? ಏನೆಲ್ಲ ಪ್ರಶ್ನೆಗಳ ಪಂಜರವನ್ನು ಹೆಣೆದು ದಿನದ ಕೊನೆಗೆ ಶಾಂತವಾಗಿ ಕಣ್ಣುಮುಚ್ಚುತ್ತೇನೆ, ನಾನೇಕೆ ಹೀಗೆ?


 ಏನೆಲ್ಲ ಬರೆಯುತ್ತೇನೆ, ಅರ್ಥವಿಲ್ಲದೇ ಬರೆಯುತ್ತೇನೆ, ಅದು ಅಪಾರ್ಥವಾಗಿದ್ದೂ ಇದೆ, ಅಪಾರ ಅರ್ಥವನ್ನು ಪಡೆದುಕೊಂಡದ್ದೂ ಹೌದು, ಅಷ್ಟಕ್ಕೂ ಅಪಾರ್ಥವಾದದ್ದಾದರೂ ಯಾರಿಗೆ, ಅಪಾರ ಅರ್ಥಕಂಡದ್ದಾದರೂ ಯಾರಿಗೆ? ಅರ್ಥವೂ ಇಲ್ಲದ, ರಸವೂ ಇಲ್ಲದ ವ್ಯರ್ಥ ಆಲಾಪ ಅನಿಸಿದ್ದಾದರೂ ಯಾರಿಗೆ? ಯಾರಿಗೆ ಏನಿಸಿದರೇನು? ಏನೋ ಅನಿಸುವುದಂದರಾದರೂ ಏನು? ಅಂದರ ನಿರ್ಜೀವ ಪದಕ್ಕೆ ಅರ್ಥವಿದೆಯಾ? ಅಥವಾ ಸಜೀವ ಓದುಗನ ಭಾವದಲ್ಲಿಯೇ ಎಲ್ಲ ಅಡಗಿದೆಯಾ? ಅಷ್ಟಕ್ಕೂ ಓದುಗನೆಂದರಾದರೂ ಯಾರು? ನಾನು ಓದುಗನೋ, ಬರೆದವನೋ ಅಥವ ಕೇವಲ ನಿರ್ಜೀವ ಅಕ್ಷರವೋ? ಇನ್ನೂ ಅದೇ ತಿಳಿದಿಲ್ಲ, ತಿಳಿಯುತ್ತಿಲ್ಲ! ನಾನೇಕೆ ಹೀಗೆ ???

Rating
No votes yet