ಕಥೆ : ಒ೦ದು ಐ.ಟಿ ಪ್ರೇಮಕಥೆ ‍ಕೊನೆಯ ಭಾಗ‌

ಕಥೆ : ಒ೦ದು ಐ.ಟಿ ಪ್ರೇಮಕಥೆ ‍ಕೊನೆಯ ಭಾಗ‌

ದಿನಗಳು ಕಳೆಯುತ್ತಾ ಕಳೆಯುತ್ತಾ ನಾನು ಪ್ರಜ್ಞಾಳ ಬಗ್ಗೆ ಯೋಚಿಸುವುದನ್ನು ಬಿಟ್ಟು ಕೆಲಸದಲ್ಲಿ ಹೆಚ್ಚು ಮಗ್ನನಾಗಿ ಎರಡು ಬಾರಿ "Employee of the Month " ಎಂದು ಗುರುತಿಸಲ್ಪಟ್ಟೆ. ಎಲ್ಲರೂ ನನ್ನ ಕೆಲಸವನ್ನು ಮೆಚ್ಚಿಕೊಂಡು ಅಭಿನಂದಿಸಿದರು. ಪ್ರಜ್ಞಾ ಸಹ ಅಭಿನಂದಿಸಿದಳು. ಆದರೆ ಅದರಲ್ಲಿ ಹೆಚ್ಚು ಉತ್ಸುಕತೆ ಏನೂ ಇರಲಿಲ್ಲ. ಬಹುಶಃ ಮುಂಚೆ ಆಗಿದ್ದರೆ ನಾನು ಕುಣಿದು ಕುಪ್ಪಳಿಸಿ ಬಿಡುತ್ತಿದ್ದೆ. ಆದೆ ಈಗ ಅದೆಲ್ಲ ಏನೂ ಇಲ್ಲ. ಸುಮ್ಮನೆ ನಕ್ಕೆ ಅಷ್ಟೇ. ಟೀಮ್ ನ ಎಲ್ಲರಿಗೂ ಸ್ವೀಟ್ಸ್ ತಂದು ಆಫೀಸಿನಲ್ಲಿ ಕೊಟ್ಟೆ. ಅಂದು ಕೆಲಸ ಮುಗಿಸಿ ಮನೆಗೆ ಬಂದಾಗ ಮನೆಗೆ ಯಾರೋ ಒಬ್ಬ ಹೆಂಗಸರು ಬಂದಿದ್ದರು. ನಾನು ಒಳಗೆ ಬಂದ ತಕ್ಷಣ ನಮ್ಮಮ್ಮ ಅವರಿಗೆ ನನ್ನನ್ನು ತೋರಿಸಿ ಇವನೇ ನೋಡಮ್ಮ ನನ್ನ ಮಗ ಎಂದರು. ನಾನು ಅವರನ್ನು ನೋಡಿ ಒಂದು ಸಲ ನಕ್ಕು ಅಮ್ಮ ನನಗೆ ವಿಪರೀತ ಹಸಿವಾಗುತ್ತಿದೆ ಮೊದಲು ಊಟ ಹಾಕಮ್ಮ ಎಂದೆ. ಅಷ್ಟರಲ್ಲಿ ಆ ಹೆಂಗಸು ಸಹ ಹೊರಡಲು ಸಿದ್ಧರಾದರು. ಅವರು ಹೋದ ಮೇಲೆ ನಾವು ಊಟಕ್ಕೆ ಕುಳಿತಾಗ ಕಳೆದ ಬಾರಿ ನಿನಗೆ ಹೇಳಿದ್ದೆ ಗೊತ್ತ ನನ್ನ ಸ್ನೇಹಿತೆಯ ಮಗಳು ಒಬ್ಬಳು ಇದ್ದಾಳೆ. ನಿನಗೆ ಮದುವೆ ಮಾಡಲು ಯೋಚಿಸುತ್ತಿದ್ದೇನೆ ಎಂದು ಇವರ ಮಗಳೇ ಅವಳು. ನೋಡು ನೀನು ಬೇಡ ಅಂದ ಮೇಲೆ ಅವರು ಬೇರೆ ಹುಡುಕಲು ಶುರು ಮಾಡಿದ್ದರು ಆದರೆ ಅಷ್ಟರಲ್ಲಿ ಹುಡುಗಿಯ ತಾತ ಅಂದರೆ ನನ್ನ ಸ್ನೇಹಿತೆಯ ಗಂಡನ ತಂದೆ ತೀರಿಕೊಂಡರು. ಹಾಗಾಗಿ ಒಂದು ವರ್ಷ ಮುಂದೂಡಿದ್ದರು. ಈಗ ಮತ್ತೆ ಹುಡುಕಲು ಶುರು ಮಾಡಿದ್ದಾರೆ. ನೀನು ಒಂದು ವರ್ಷ ಸಮಯ ಕೇಳಿದ್ದೆ. ಈಗ ಒಂದು ಸಲ ನೋಡುತ್ತೀಯ ಹೇಳು. ಅಮ್ಮ ನನಗೆ ಬಹಳ ಸುಸ್ತಾಗಿದೆ ಮೊದಲು ಮಲಗುತ್ತೇನೆ ಆಮೇಲೆ ನೋಡೋಣ ಎಂದು ಎದ್ದು ಮಲಗಲು ಬಂದೆ. ಅಮ್ಮ ಏನೋ ಗೊಣಗುತ್ತಿದ್ದರು..

 


ಮಾರನೆಯ ದಿನ ಬೆಳಿಗ್ಗೆ ಆಫೀಸಿಗೆ ಬಂದು ಸಿಸ್ಟಮ್ ಆನ್ ಮಾಡಿ ಮೇಲ್ ಚೆಕ್ ಮಾಡೋಣ ಎಂದು outlook ಓಪನ್ ಮಾಡಿದರೆ ಮೊದಲು ಕಂಡ ಮೇಲ್ ಪ್ರಜ್ಞಾಳಿಂದ ಬಂದಿತ್ತು. ಏನೋ ಮೀಟಿಂಗ್ ರಿಕ್ವೆಸ್ಟ್ ಅಥವಾ ಇನ್ನೇನೋ ಇರತ್ತೆ ಎಂದು ಓಪನ್ ಮಾಡಿದರೆ ಸಬ್ಜೆಕ್ಟ್ ಲೈನ್ ನಲ್ಲಿ " TODAY IS MY LAST DAY " ಎಂದಿತ್ತು, ಹೆಚ್ಚೇನೂ ಆಘಾತ ಆಗಲಿಲ್ಲ. ತನಗೆ ಬೇರೊಂದು ಕಂಪನಿ ಯಲ್ಲಿ ಕೆಲಸ ಸಿಕ್ಕಿರುವುದರಿಂದ ಕೆಲಸ ಬಿಡುತ್ತಿದ್ದೇನೆ ಎಂದು ಕಳಿಸಿದ್ದಳು. ಅವಳ ಮೇಲ್ ಓದಿ ಮುಗಿಸುವಷ್ಟರಲ್ಲಿ ಅವಳೇ ಬಂದಿದ್ದಳು. ಎಲ್ಲರೂ ಅವಳ ಕ್ಯುಬಿಕಲ್ ಸುತ್ತ ತುಂಬಿದ್ದರು. ಏನು ಪ್ರಜ್ಞಾ ಯಾರಿಗೂ ಹೇಳೇ ಇಲ್ಲ. ಸರ್ಪ್ರೈಸ್ ಕೊಟ್ರಿ ಎಂದು ಕೇಳುತ್ತಿದ್ದರು. ಹೌದು ಬರಿ ಶೀಲ ಗೆ ಮಾತ್ರ ಹೇಳಿದ್ದೆ ಅಷ್ಟೇ ಎಂದು ಹೇಳಿ ನಕ್ಕಳು. ಇಂದು ಸಂಜೆ ನನ್ನ ಕಡೆ ಇಂದ ಪಾರ್ಟಿ ಇದೆ ಎಲ್ಲರೂ ಖಂಡಿತ ಬರಬೇಕು ಎಂದಳು. ನನಗೆ ಹೋಗಲು ಆಸಕ್ತಿ ಇರಲಿಲ್ಲ.. ಪ್ರಜ್ಞಾ ನನಗೆ ಬೇರೆ ಕೆಲಸ ಇದೆ ಆದ್ದರಿಂದ ನನಗೆ ಬರಲು ಆಗುವುದಿಲ್ಲ ಎಂದು ಹೇಳಿ ಮನೆಗೆ ಬಂದು ಬಿಟ್ಟೆ. ಯಾಕೋ ಮನಸೆಲ್ಲ ತುಂಬಾ ಭಾರವಾಗಿತ್ತು. ಊಟ ಮಾಡಿ ರೂಮಿನಲ್ಲಿರಬೇಕಾದರೆ ಅಮ್ಮ ಬಂದು ಏನೋ ಏನು ನಿರ್ಧಾರ ಮಾಡಿದ್ಯ ನಾನು ಹೇಳಿದ ವಿಷಯದ ಬಗ್ಗೆ ಎಂದರು. ನಾನು ಯಾವ ವಿಷಯದ ಬಗ್ಗೆ ಎಂದು ಕೇಳಿದೆ. ಅದೇ ನನ್ನ ಗೆಳತಿಯ ಮಗಳ ಬಗ್ಗೆ....ಅಮ್ಮ ನಿನ್ನಿಷ್ಟ ಏನಾದರೂ ಮಾಡು ಎಂದೆ. ನಮ್ಮಮ್ಮನ ಖುಷಿಗೆ ಪಾರವೇ ಇರಲಿಲ್ಲ. ಹಾಗಿದ್ದರೆ ನಾಳೆನೆ ಜಾತಕ ತರಿಸಿ ನೋಡುತ್ತೇನೆ ಆಮೇಲೆ ಜಾತಕ ಹೊಂದಿದರೆ ಮುಂದುವರಿಯೋಣ ಎಂದು ಹೊರಟು ಹೋದರು. ನನಗೆ ಅಂದು ರಾತ್ರಿ ಪೂರ ನಾಳೆ ಇಂದ ಪ್ರಜ್ನಾಳನ್ನು ನೋಡಲು ಆಗುವುದಿಲ್ಲವಲ್ಲ ಎಂಬ ಆಲೋಚನೆಯಲ್ಲೇ ನಿದ್ದೆ ಬರಲಿಲ್ಲ.

 

ಮರುದಿನ ಆಫೀಸಿಗೆ ಹೋದರೆ ಯಾಕೋ ಆಫೀಸ್ ತನ್ನ ಕಳೆ ಕಳೆದುಕೊಂಡು ಮರುಭೂಮಿ ಆದಂತೆ ಆಗಿತ್ತು. ಪ್ರಜ್ಞಾಳ ಜಾಗಕ್ಕೆ ಮತ್ತೊಬ್ಬ ಸಹೋದ್ಯೋಗಿಯನ್ನು ಹಾಕಿದ್ದರು. ನನ್ನಂತೆ ಉಳಿದ ಸಹೋದ್ಯೋಗಿಗಳು ಅಂದರೆ ಪ್ರಜ್ಞಾಳ ಮಾಜಿ ಪ್ರೇಮಿಗಳು ಸಹ ಬಹಳ ನೊಂದುಕೊಂಡಿದ್ದರು. ಒಬ್ಬನಂತೂ ಆಫೀಸಿಗೆ ಬರಲಿಲ್ಲ. ನನಗೂ ಒಂದು ರೀತಿ ಮೂಡ್ ಔಟ್ ಆಗಿತ್ತು. ಅಷ್ಟರಲ್ಲಿ ಮೊಬೈಲ್ ರಿಂಗಾಯಿತು. ಯಾರೆಂದು ನೋಡಿದರೆ ಅಮ್ಮ. ಹೇಳಮ್ಮ. ಲೋ ಜಾತಕ ಬಂತು ಆಚಾರ್ ಹತ್ರ ಹೋಗಿದ್ದೆ ಇಬ್ರುದು ಜಾತಕ ತುಂಬಾ ಚೆನ್ನಾಗಿ ಕೂಡಿ ಬಂದಿದೆ. ೨೩ ಗಣಗಳು ಕೂಡಿ ಬಂದಿದೆ. ಅದಕ್ಕೆ ನೀನು ಒಂದು ಕೆಲಸ ಮಾಡಬೇಕು ಇಂದು ಸಂಜೆ ಸ್ವಲ್ಪ ಬೇಗ ಬಂದರೆ ಅವರ ಮನೆಗೆ ಹೋಗಿ ಹುಡುಗಿ ನೋಡಿಬರುವ ಶಾಸ್ತ್ರ ಮಾಡಬಹುದು ಎಂದರು. ಅಮ್ಮ ಮೊದಲು ಫೋಟೋ ತರಿಸು ಆಮೇಲೆ ನೋಡೋಣ ಸುಮ್ಮನೆ ನೇರವಾಗಿ ಹೋಗಿ ಹುಡುಗಿ ನೋಡುವುದೆಲ್ಲ ನನಗಿಷ್ಟವಿಲ್ಲ ಎಂದೆ. ಅಲ್ಲ ಕಣೋ ಫೋಟೋಲಿ ಸರಿಯಾಗಿ ಗೊತ್ತಾಗಲ್ಲ. ನನ್ನ ಮಾತು ಕೇಳು ಒಂದು ಸಲ ನೇರವಾಗಿ ಹೋಗಿ ನೋಡೋಣ ನಿನಗಿಷ್ಟ ಆದರೇನೆ ಮದುವೆ ಇಲ್ಲ ಎಂದರೆ ಇಲ್ಲ ಎಂದರು. ಹೇ ಇನ್ನೊಂದು ವಿಷಯ ಗೊತ್ತ ನಿನಗೆ, ಅವಳು ನಿನ್ನ ಆಫೀಸಿನಲ್ಲೇ ಕಣೋ ಕೆಲಸ ಮಾಡುತ್ತಿರುವುದು ಎಂದರು ಅಮ್ಮ. ನನಗೆ ಆಶ್ಚರ್ಯವಾಯಿತು. ಏನು ನಮ್ಮ ಆಫೀಸಿನಲ್ಲೇ ಕೆಲಸ ಮಾಡುವುದ ಎಂದೇ ಜೋರಾಗಿ. ಅಕ್ಕ ಪಕ್ಕದವರೆಲ್ಲ ಕ್ಯುಬಿಕಲ್ ಬಿಟ್ಟು ಒಂದು ಚೂರು ಮೇಲೆದ್ದು ನನ್ನ ಕಡೆ ನೋಡಿದರು. ನಾನು ಸಾರಿ ಎಂದು ಹೇಳಿ ನಿಧಾನವಾಗಿ ಏನು ನಮ್ಮ ಆಫೀಸಿನಲ್ಲಿ ಕೆಲಸ ಮಾಡುವುದ ಎಂದೆ. ಹೌದು ಕಣೋ ಎಂದರು. ಆ ಹುಡುಗಿಯ ಹೆಸರು ಏನು ಎಂದೆ. ಪರಿಮಳ ಅಂತ ಕಣೋ ಎಂದರು. ಪರಿಮಳನ ಸರಿ ಬಿಡು ನಾನು ನೋಡುತ್ತೀನಿ ಎಂದು ಹೇಳಿ ಫೋನ್ ಕಟ್ ಮಾಡಲು ಹೋದೆ.ಅಷ್ಟರಲ್ಲಿ ಮತ್ತೊಮ್ಮೆ ಲೋ ಸಂಜೆ ಬೇಗ ಬರೋದು ಮರೀಬೇಡ ಕಣೋ ಎಂದರು. ಆಯ್ತಮ್ಮ ನೀನು ಮೊದಲು ಫೋನ್ ಇಡು ಎಂದು ಕಟ್ ಮಾಡಿದೆ.

 

ಅಷ್ಟರಲ್ಲಿ ಇಬ್ಬರು ಸಹೋದ್ಯೋಗಿಗಳು ನನ್ನ ಪಕ್ಕದಲ್ಲಿ ಬಂದು ನಿಂತಿದ್ದರು. ಏನಪ್ಪಾ ರಾಜ ಮದುವೆ, ಹುಡುಗಿ ಆಫೀಸ್ ಅಂತ ಏನೇನೋ ಹೇಳ್ತಾ ಇದ್ದೆ. ಏನಪ್ಪಾ ವಿಷಯ ಎಲ್ಲಿ ಪಾರ್ಟಿ ಅಂದರು. ಹಲೋ ಹಲೋ ಏನು ಬರೀ ಪಾರ್ಟಿ ನೆ ಕೆಲಸನ ನಿಮಗೆ ಬೇರೆ ಗೊತ್ತಿಲ್ವಾ ಎಂದೆ. ಸರಿ ಬಿಡಪ್ಪ ಎಂದು ಹೊರಡಲು ಅನುವಾದರು. ಲೇ ಒಂದು ನಿಮಿಷ ಬನ್ನಿ ಇಲ್ಲಿ ನಮ್ಮ ಆಫೀಸಿನಲ್ಲಿ ಯಾರಾದರೂ ಪರಿಮಳ ಅಂತ ಹುಡುಗಿ ಇದ್ದಾಳ ಎಂದು ಕೇಳಿದೆ. ಅವರಿಬ್ಬರೂ ಸ್ವಲ್ಪ ಹೊತ್ತು ಆಲೋಚಿಸಿ ಹಾ ಹೌದು ಕಣೋ ಒಬ್ಬರು ಇದ್ದಾರೆ ಆದರೆ ಅವರು ಹುಡುಗಿ ಅಲ್ಲ, ಆಂಟಿ ಎಂದರು. ಅವರಿಗೆ ಮದುವೆ ಆಗಿ ಹತ್ತು ವರ್ಷದ ಮಗ ಇದ್ದಾನೆ ಅಂದರು. ಯಾಕೆ ಎಂದರು. ನಾನು ಏನೂ ಇಲ್ಲ ಸುಮ್ಮನೆ ಕೇಳಿದೆ ಎಂದು ಹೇಳಿ. ಒಮ್ಮೆ ಇಂಟ್ರಾನೆಟ್ ಓಪನ್ ಮಾಡಿದೆ. ಅದರಲ್ಲಿ ಪರಿಮಳ ಅಂತ ಕೊಟ್ಟೆ ಅವರು ಹೇಳಿದ ಹಾಗೆ ಅದು ಯಾರೋ ಮದುವೆ ಆದ ಹೆಂಗಸಿನ ಫೋಟೋ. ಇದೇನಪ್ಪ ಇದು ಅಂತ ಆಲೋಚಿಸುತ್ತ ಹಾಗೆ ಶೀಲ ಕ್ಯಾಬಿನ್ ಗೆ ಹೋಗಿ ಶೀಲ ಇವತ್ತು ಸ್ವಲ್ಪ ಬೇಗ ಹೋಗಬೇಕು ಎಂದೆ. ಸರಿ ಎಂದು ಒಪ್ಪಿಗೆ ಕೊಟ್ಟಳು.

 

ಅಮ್ಮ ಹೇಳಿದ ಹಾಗೆ ಬೇಗ ಮನೆಗೆ ಬಂದದ್ದಕ್ಕೆ ಅಮ್ಮನಿಗೆ ಬಹಳ ಖುಷಿಯಾಗಿತ್ತು. ಅಬ್ಬ ಅಂತೂ ಸಧ್ಯ ಬಂದೆಯಲ್ಲ. ಎಲ್ಲಿ ಬರುವುದಿಲ್ಲವೋ ಎಂದುಕೊಂಡಿದ್ದೆ. ಸರಿ ಸರಿ ಬೇಗನೆ ಸಿದ್ಧವಾಗು, ಇನ್ನೇನು ನಿಮ್ಮಪ್ಪನು ಬರುತ್ತಾರೆ. ಬಂದ ಮೇಲೆ ಒಟ್ಟಿಗೆ ಹೊರಡೋಣ. ಅದು ಸರಿ ಅಮ್ಮ ಆ ಹುಡುಗಿ ನಮ್ಮ ಆಫೀಸಿನಲ್ಲೇ ಕೆಲಸ ಮಾಡುವುದು ಅಂತ ಹೇಳಿದೆ ಆಲ್ವಾ. ಆದರೆ ಆ ಹೆಸರಿನ ಯಾವ ಹುಡುಗಿಯೂ ನಮ್ಮ ಆಫೀಸಿನಲ್ಲಿ ಇಲ್ಲಮ್ಮ. ಹೌದಾ ಕಳೆದ ಬಾರಿ ನನ್ನ ಉಷಾ ಅದೇ ನನ್ನ ಸ್ನೇಹಿತೆ ಹೇಳಿದ್ದಳು. ಸರಿ ಬಿಡು ಹೇಗಿದ್ದರೂ ಅಲ್ಲೇ ಹೋಗುತ್ತೀವಲ್ಲ ಎಲ್ಲ ಅಲ್ಲೇ ಮಾತಾಡೋಣ ಎಂದರು. ಅಮ್ಮ ಆ ಹುಡುಗಿಗೆ ನನ್ನ ಫೋಟೋ ಕೊಟ್ಟಿದ್ದೆಯ? ಆಕೆಗೆ ನಾನು ಒಪ್ಪಿಗೆ ಆಗಿದ್ದೇನ?. ಇಲ್ಲ ಕಣೋ ಇಬ್ಬರೂ ಮೊದಲು ಜಾತಕ ನೋಡಿ ಹೊಂದಿದರೆ ಆಮೇಲೆ ಫೋಟೋ ಕೊಡೋಣ ಎಂದುಕೊಂಡಿದ್ದೆವು. ಹೇಗಿದ್ದರೂ ಜಾತಕ ಹೊಂದಿದೆ. ನೇರವಾಗೇ ನೋಡಿ ಬಿಡಿ ಎಂದರು.

 

ಅಷ್ಟರಲ್ಲಿ ಅಪ್ಪ ಕೂಡ ಬಂದರು. ಅವರು ಸಿದ್ಧವಾಗುವಷ್ಟರಲ್ಲಿ ನಾನು ಸಿದ್ಧನಾದೆ. ಅಷ್ಟರಲ್ಲಿ ಮನೆ ಫೋನ್ ರಿಂಗಾಯಿತು. ಅಮ್ಮ ಫೋನ್ ತೆಗೆದುಕೊಂಡು ಹಾ ಉಷಾ ಹೊರಡುತ್ತಾ ಇದೀವಿ ಇನ್ನೇನು ಕಾಲು ಘಂಟೆಯಲ್ಲಿ ಅಲ್ಲಿರುತ್ತೇವೆ ಎಂದು ಹೇಳಿ ಫೋನ್ ಇಟ್ಟರು. ಸರಿ ನಡಿ ಹೊರಡೋಣ ಎಂದು ಕೆಳಗೆ ಬಂದು ಆಟೋ ಕೂಗಿದೆವು. ಅಮ್ಮ ಎಲ್ಲಿ ಅವರ ಮನೆ ಎಂದು ಕೇಳಿದೆ. ಶಂಕರಪುರಂ ಎಂದರು. ತಕ್ಷಣ ಅರೇ ಪ್ರಜ್ಞಾ ಮನೆ ಕೂಡ ಶಂಕರಪುರಂ ಅಲ್ಲವೇ ಎಂದುಕೊಂಡು ಆಟೋ ಹತ್ತಿದೆ. ಹತ್ತು ನಿಮಿಷದಲ್ಲಿ ಅಟೋ ಶಂಕರಪುರಂನ ಮನೆಯೊಂದರ ಮುಂದೆ ನಿಂತಿತು. ಗೇಟಿನ ಮುಂದೆಯೇ ಅಮ್ಮನ ಸ್ನೇಹಿತೆ ಹಾಗೂ ಅವರ ಯಜಮಾನರು ಕಾಯುತ್ತ ನಿಂತಿದ್ದರು. ಅಪ್ಪ ಅಮ್ಮನಿಗೆ ನಮಸ್ಕಾರ ಮಾಡಿ ನನಗೆ ಕೈ ಕುಲುಕಿ ಒಳಗೆ ಕರೆದುಕೊಂಡು ಹೋದರು. ಮನೆ ಬಹಳ ಹಳೆಯ ಕಾಲದ್ದಾದರೂ ತುಂಬಾ ಚೆನ್ನಾಗಿತ್ತು. ಎಲ್ಲರೂ ಸೋಫಾದಲ್ಲಿ ಕುಳಿತೆವು. ಉಷಾ ಆಂಟಿ ಯಜಮಾನರು ತಮ್ಮ ಪರಿಚಯವನ್ನು ಮಾಡಿಕೊಂಡು ನನ್ನ ಕೆಲಸದ ಬಗ್ಗೆ ವಿಚಾರಿಸಿದರು. ನಾನು ಎಲ್ಲ ಹೇಳಿದ ಮೇಲೆ ಅವರು ನನ್ನ ಮಗಳು ನಿನ್ನ ಕಂಪನಿಯಲ್ಲೇ ಕೆಲಸ ಮಾಡುತ್ತಿದ್ದಳು. ಈಗ ಬೇರೆ ಕಂಪನಿಯಲ್ಲಿ ಇದ್ದಾಳೆ ಎಂದರು. ನಾನು ಹೊಸ ಪರಿಚಯವಾದ್ದರಿಂದ ಹೆಚ್ಚೇನೂ ಮಾತಾಡದೆ ಸುಮ್ಮನೆ ಕುಳಿತಿದ್ದೆ. ಉಷಾ ಆಂಟಿ ಒಂದು ನಿಮಿಷ ಪರಿ ರೆಡಿ ಆಗ್ತಾ ಇದಾಳೆ ನಾನು ಅಷ್ಟರಲ್ಲಿ ನಿಮಗೆ ಕುಡಿಯಲು ಏನಾದರೂ ತರುತ್ತೀನಿ ಎಂದು ಅಡಿಗೆ ಮನೆಗೆ ಹೋದರು. ನಮ್ಮಪ್ಪ, ಅಮ್ಮ ಹಾಗೂ ಅಂಕಲ್ ಮದುವೆಯ ಬಗ್ಗೆ ಮಾತಾಡುತ್ತಿದ್ದರು. ಎಲ್ಲಿ ನಿಶ್ಚಿತಾರ್ಥ ಮಾಡೋಣ, ಮದುವೆ ಯಾವಾಗ ಮಾಡೋಣ ಎಂದೆಲ್ಲ ಮಾತಾಡುತ್ತಿದ್ದರು. ನಾನು ಸುಮ್ಮನೆ ತಲೆ ತಗ್ಗಿಸಿಕೊಂಡು ಕೈ ಬೆರಳುಗಳ ಜೊತೆ ಆಟ ಆಡಿಕೊಂಡು ಕುಳಿತಿದ್ದೆ. ಅಷ್ಟರಲ್ಲಿ ಅtಡಿಗೆ ಮನೆಯಿಂದ ಉಷಾ ಆಂಟಿ "ಪಾರಿ" ಒಂದು ನಿಮಿಷ ಇಲ್ಲಿ ಬರ್ತೀಯ ಎಂದರು. ತಕ್ಷಣ ನನ್ನ ಕಿವಿ ನೆಟ್ಟಗಾಯಿತು. ಇನ್ನೊಂದು ಸ್ವಲ್ಪ ಹೊತ್ತಿನಲ್ಲೇ ಹುಡುಗಿ ಮುಂದೆ ಬರುತ್ತಾಳೆ. ಆದರೂ ಒಂದು ಸಲ ನೋಡಬೇಕೆನ್ನುವ ತವಕ. ನಿಧಾನವಾಗಿ ತಲೆ ಮೇಲೆತ್ತಿದೆ. ಮನೆ ಒಳಗಡೆಯೇ ಮೆಟ್ಟಿಲು ಇತ್ತು. ಮೆಟ್ಟಿಲಿನಿಂದ ಒಂದೊಂದೇ ಹೆಜ್ಜೆ ಇಟ್ಟು ಬಂದೆ ಅಮ್ಮ ಎಂದು ಸೀರೆ ಉಟ್ಟ ಹುಡುಗಿಯೊಬ್ಬಳು ಕೆಳಗಿಳಿದು ಬರುತ್ತಿದ್ದಳು. ತನ್ನ ನೀಳವಾದ ಜಡೆಗೆ ಹೂ ಮುಡಿದುಕೊಳ್ಳುತ್ತಾ ಮೆಟ್ಟಿಲಿಳಿದು ಅಡುಗೆ ಮನೆಗೆ ಹೋಗುವ ಮುನ್ನ ಒಮ್ಮೆ ನಮ್ಮ ಕಡೆ ನೋಡಿ ಅಮ್ಮನನ್ನು ನೋಡಿ ನಕ್ಕು ಒಳಗೆ ಹೋದಳು. ನಾನು ಮನಸಿನಲ್ಲೇ ಪರವಾಗಿಲ್ಲ ಹುಡುಗಿ ನನ್ನ ಪ್ರಜ್ಞಾಳಷ್ಟು ಸುಂದರ ಅಲ್ಲದಿದ್ದರೂ ಒಂದು ಮಟ್ಟಿಗೆ ಚೆನ್ನಾಗಿದ್ದಾಳೆ ಎಂದು ಕೊಳ್ಳುತ್ತಿದ್ದೆ.

 

 

ಮತ್ತೆ ಆ ಹುಡುಗಿ ಅಡಿಗೆ ಮನೆಯಿಂದ ಆಚೆ ಬಂದು ಈ ಸಲ ನನ್ನ ಕಡೆ ನೋಡಿ ಕಿಸಕ್ಕನೆ ನಕ್ಕು ಚಕ ಚಕನೆ ಮೆಟ್ಟಿಲೇರಿ ಹೋಗಿ ಬಿಟ್ಟಳು. ಉಷಾ ಆಂಟಿ ಎಲ್ಲರಿಗೂ ಕುಡಿಯಲು ಜ್ಯೂಸ್ ತಂದು ಕೊಟ್ಟರು. ಒಂದೆರಡು ನಿಮಿಷ ಬಿಟ್ಟು ಬಂದೆ ಎಂದು ಅವರು ಮೆಟ್ಟಿಲೇರಿ ಮೇಲೆ ಹೋದರು. ಹತ್ತು ನಿಮಿಷದ ನಂತರ ಅಂಕಲ್ ಅಲ್ಲಿಂದಲೇ ಉಷಾ ಎಷ್ಟು ಹೊತ್ತು ಅಳಿಯಂದಿರನ್ನು ಕಾಯಿಸುವುದು ಬೇಗನೆ ಬಾ ಎಂದು ನನ್ನ ನೋಡಿ ನಕ್ಕರು. ನಾನು ಸಣ್ಣಗೆ ನಕ್ಕೆ. ಅಷ್ಟರಲ್ಲಿ ಮೆಟ್ಟಿಲಿನಿಂದ ಇಳಿದು ಬರುವ ಸದ್ದಾಯಿತು. ನಾನು ನನ್ನ ಪಾಡಿಗೆ ತಲೆ ತಗ್ಗಿಸಿ ಕುಳಿತಿದ್ದೆ. ನನ್ನ ಎದುರಿನಲ್ಲಿ ಒಬ್ಬರು ಬಂದು ಕೂತರು, ಅವರ ಪಕ್ಕದಲ್ಲಿ ಉಷಾ ಆಂಟಿ ಕೂತರು, ಇನ್ನೊಂದು ಪಕ್ಕದಲ್ಲಿ ಇನ್ನೊಬ್ಬರು ನಿಂತರು. ನನಗೆ ಅವಾಗಲೇ ಬರೀ ಮೂರೇ ಜನ ಇರುವುದು ಎಂದುಕೊಂಡರೆ ಇದ್ಯಾರಪ್ಪ ಇನ್ನೊಬ್ಬರು ಎಂದು ನಿಂತವರನ್ನು ನೋಡಿದೆ. ಅವಾಗಲೇ ಅಡಿಗೆ ಮನೆಗೆ ಹೋದ ಹುಡುಗಿ ನಿಂತಿದ್ದಾಳೆ. ಈಗ ಕೂತವಳ ಕಡೆ ಒಮ್ಮೆ ನೋಡಿದೆ. ಆಶ್ಚರ್ಯ, ಸಂತೋಷ, ಉದ್ವೇಗ ಎಲ್ಲ ಒಟ್ಟಿಗೆ ಆಯಿತು. ಅರೇ ಪ್ರಜ್ಞಾ ಇಲ್ಯಾಕೆ ಕೂತಿದ್ದಾಳೆ. ಅಥವಾ ಇದು ನನ್ನ ಭ್ರಮೆಯ ಎಂದುಕೊಂಡು ಮತ್ತೊಮ್ಮೆ ನೋಡಿದೆ. ಹೌದು ಅದೇ ಪ್ರಜ್ಞಾ. ಅಷ್ಟರಲ್ಲಿ ಉಷಾ ಆಂಟಿ ಪರಿ ಒಹ್ ಸಾರಿ ಪರಿಮಳ ಒಂದು ಸಲ ನೋಡಮ್ಮ ಹುಡುಗನನ್ನು ಎಂದರು. ಪ್ರಜ್ಞಾ ನಿಧಾನವಾಗಿ ತಲೆ ಎತ್ತಿ ನೋಡಿದಳು. ಅವಳಿಗೂ ಅತೀವ ಆಶ್ಚರ್ಯ ಉಂಟಾಯಿತು. ಉಷಾ ಆಂಟಿ ನೋಡಪ್ಪ ಇವಳೇ ನನ್ನ ದೊಡ್ಡ ಮಗಳು ಪರಿಮಳ, ಅವಳು ಎರಡನೇ ಮಗಳು ಪಾರಿಜಾತ ಎಂದು ನಿಂತಿದ್ದ ಹುಡುಗಿಯ ಕಡೆ ತೋರಿಸಿದರು.

 


ನನ್ನ ಮನಸು ಗೊಂದಲದ ಗೂಡಾಗಿ ಹೋಗಿತ್ತು. ಇದೇನು ಒಂದೂ ಅರ್ಥ ಆಗುತ್ತಿಲ್ಲ. ಪ್ರಜ್ಞಾ ಹೇಗೆ ಪರಿಮಳ ಆದಳು. ಅದೂ ಅಲ್ಲದೆ ನನಗಿಂತ ಒಂದು ವರ್ಷ ದೊಡ್ಡವಳು ಇವಳು ಅದು ಹೇಗೆ ನಮ್ಮಮ್ಮ ಒಪ್ಪಿಬಿಡುತ್ತಾರೆ. ನಿಧಾನವಾಗಿ ಬಗ್ಗಿ ಅಮ್ಮನ ಕಿವಿಯಲ್ಲಿ ಅಮ್ಮ ಒಂದು ನಿಮಿಷ ನಾನು ನಿನ್ನ ಜೊತೆ ಮಾತಾಡಬೇಕು ಆಚೆ ಬಾ ಎಂದೆ. ಅಮ್ಮ ಉಷಾ ಆಂಟಿಯ ಕಡೆ ನೋಡುತ್ತಾ ಒಂದು ನಿಮಿಷ ಉಷಾ ನನ್ನ ಮಗ ಏನೋ ಮಾತಾಡಬೇಕಂತೆ ಎಂದು ಆಚೆ ಬಂದೆವು. ಏನಪ್ಪಾ ಏನನ್ನುತ್ತೀಯ, ಹೇಗಿದಾಳೆ ಹುಡುಗಿ (ನಾನು ಮನಸಿನಲ್ಲಿ ದಂತದ ಗೊಂಬೆ ಇದ್ದ ಹಾಗೆ ಇದಾಳೆ ಎಂದುಕೊಂಡೆ) ಎಂದರು. ಅಮ್ಮ ಹುಡುಗಿ ಏನೋ ಓಕೆ. ಆದರೆ ಅವಳ ಹೆಸರು ಪ್ರಜ್ಞಾ ಅಲ್ವ ಎಂದೆ. ನಿನಗೆ ಹೇಗೆ ಗೊತ್ತು ಎಂದರು. ಅಮ್ಮ ಮುಂಚೆ ಇದೆ ಹುಡುಗಿ ನನ್ನ ಟೀಮ್ ಲೀಡ್ ಆಗಿದ್ದಿದ್ದು ಎಂದೆ. ಹೌದಾ ಅದೇನೋ ಗೊತ್ತಿಲ್ಲಪ್ಪ. ಬಿಡು ಹೆಸರಲ್ಲೇನಿದೆ ಕೇಳಿ ತಿಳಿದುಕೊಳ್ಳೋಣ. ನಿನಗೆ ಹುಡುಗಿ ಒಪ್ಪಿಗೆ ತಾನೇ ಎಂದರು. ಅಮ್ಮ ಇನ್ನೊಂದು ಸಮಸ್ಯೆ ಇದೆ ಎಂದೆ. ಏನು ಎಂದರು. ಅಮ್ಮ ಆ ಹುಡುಗಿ ನನಗಿಂತ ಒಂದು ವರ್ಷ ದೊಡ್ಡವಳು ಅದು ಹೇಗೆ ನೀನು ಒಪ್ಪಿದೆ ಎಂದು ಅರ್ಥ ಆಗುತ್ತಿಲ್ಲ. ನಮ್ಮಮ್ಮ ಆಶ್ಚರ್ಯದಿಂದ ಇದು ಹೇಗೆ ಸಾಧ್ಯ. ನಾನೇ ಆ ಹುಡುಗಿ ಜಾತಕ ಹುಟ್ಟಿದ ದಿನ ಎಲ್ಲ ನೋಡಿದ್ದೇನೆ. ನನಗೆ ಸರಿಯಾಗಿ ದಿನಾಂಕ ನೆನಪಿಲ್ಲ ಆದರೆ ನಿನಗಿಂತ ಆರು ತಿಂಗಳು ಚಿಕ್ಕವಳು ಕಣೋ ಅವಳು. ಅದೆಲ್ಲ ಒಳಗೆ ಹೋಗಿ ಮಾತಾಡೋಣ ನಿನಗೆ ಒಪ್ಪಿಗೆ ತಾನೇ ಎಂದರು. ನನಗೆ ಒಳಗೊಳಗೇ ಸಂತೋಷ ಉಕ್ಕಿ ಹರಿಯುತ್ತಿದ್ದರೂ ಸುಮ್ಮನೆ ನನಗೆ ಓಕೆ ಎಂದೆ.

 

ಇಬ್ಬರೂ ಒಳಗೆ ಬಂದು ಕೂತೆವು. ನಮ್ಮಮ್ಮ ಉಷಾ ಆಂಟಿಯನ್ನು ಕುರಿತು ಉಷಾ ನನ್ನ ಮಗನಿಗೆ ಒಪ್ಪಿಗೆ ಆಗಿದೆಯಮ್ಮ. ನಿನ್ನ ಮಗಳ ಟೀಮ್ ನಲ್ಲೆ ಇವನು ಕೆಲಸ ಮಾಡುತ್ತಿದ್ದದ್ದು. ಇಬ್ಬರಿಗೂ ಚೆನ್ನಾಗಿ ಪರಿಚಯ ಇದೆ. ಆದರೆ ಕೆಲವು ಅನುಮಾನಗಳು ಇವೆ ಎಂದರು. ಏನು ಕೇಳಮ್ಮ ಎಂದರು. ನಿನ್ನ ಮಗಳ ಹೆಸರು ಪ್ರಜ್ಞಾ ನ? ಒಹ್ ಅದಾ ನಾವು ಅವಳನ್ನು ಮನೆಯಲ್ಲಿ ಕರೆಯುವುದು ಪರಿಮಳ ಅಂತ, ಆದರೆ ಸ್ಕೂಲಿಗೆ ಸೇರಿಸಬೇಕಾದರೆ ನಮ್ಮ ಯಜಮಾನರು ಪ್ರಜ್ಞಾ ಅಂತ ಬದಲಿಸಿದರು. ಅಂದಿನಿಂದ ಅವಳಿಗೆ ಎರಡು ಹೆಸರು. ಆಚೆಯವರಿಗೆ ಅವಳು ಪ್ರಜ್ಞಾ ಆದರೆ ಮನೆಯಲ್ಲಿ ಪರಿಮಳ ಎಂದು ನಕ್ಕರು. ಆಮೇಲೆ ಇನ್ನೊಂದು ಉಷಾ, ನಿನ್ನ ಮಗಳ ಹುಟ್ಟಿದ ದಿನಾಂಕ?? ತಕ್ಷಣ ಉಷಾ ಆಂಟಿ ಯಜಮಾನರು ಒಹ್ ಅದು ನಾವು ಸ್ಕೂಲಿಗೆ ಸೇರಿಸಬೇಕಾದರೆ ಒಂದು ವರ್ಷ ಕಮ್ಮಿ ಕೊಟ್ಟಿದ್ದೆ ಎಂದರು. ಈಗ ನನ್ನ ದೇಹ ಮಾತ್ರ ಅಲ್ಲಿತ್ತು ಆದರೆ ಮನಸು ಆಚೆ ಬಂದು ಹುಚ್ಚೆದ್ದು ಕುಣಿಯುತ್ತಿತ್ತು. ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದು ಹಾಲು ಅನ್ನ. ನಾನು ನಗು ನಗುತ್ತಾ ಪ್ರಜ್ಞಾ ಅಲಿಯಾಸ್ ಪರಿಮಳಳನ್ನು ನೋಡುತ್ತಿದ್ದೆ. ಅವಳು ತಲೆ ತಗ್ಗಿಸಿ ಕುಳಿತಿದ್ದಳು.

ಈಗ ನಿರ್ಧಾರ ಅವಳ ಮೇಲೆ ಬಿಟ್ಟಿದೆ. ಅವಳು ಒಪ್ಪುತ್ತಾಳ ಇಲ್ಲವೋ ಒಪ್ಪದೇ ಇದ್ದಾರೆ ಏನು ಮಾಡುವುದು ಏನೇನೋ ಯೋಚಿಸುತ್ತಿದ್ದೆ. ಅಷ್ಟರಲ್ಲಿ ಉಷಾ ಆಂಟಿ ಎದ್ದು ಒಂದು ನಿಮಿಷ ಎಂದು ಪ್ರಜ್ಞಾಳನ್ನು ಒಳಗೆ ಕರೆದುಕೊಂಡು ಹೋದರು. ಎರಡು ನಿಮಿಷದ ನಂತರ ಆಚೆ ಬಂದು ಉಷಾ ಆಂಟಿ ನನ್ನ ಮಗಳು ಸಹ ಒಪ್ಪಿಗೆ ನೀಡಿದ್ದಾಳೆ ಎಂದು ಎಲ್ಲರಿಗೂ ಸಿಹಿ ಹಂಚಿದರು.


 

ಆರು ತಿಂಗಳ ನಂತರ...

 

ಪರೀಕ್ಷಿತ್

ವೆಡ್ಸ್

ಪರಿಮಳ (ಪ್ರಜ್ಞಾ)

 

ಎಂದು ಮದುವೆ ಮಂಟಪದ ಮುಂದೆ ಹೂವಿನಲ್ಲಿ ಮಾಡಿದ ಕಮಾನು ಕಂಗೊಳಿಸಿತ್ತು. ಒಳಗಡೆ ನಾನು ಮೊದಲ ಬಾರಿಗೆ ಸೂಟಿನಲ್ಲಿ ನಿಂತಿದ್ದರೆ, ನನ್ನ ಪಕ್ಕದಲ್ಲಿ ನನ್ನ "ಹೆಂಡತಿ" ಪ್ರಜ್ಞಾ ಅಲಿಯಾಸ್ ಪರಿಮಳ ನಿಂತಿದ್ದಾಳೆ. ಒಬ್ಬೊಬ್ಬರಾಗೆ ವೇದಿಕೆ ಏರಿ ಬರುತ್ತಿದ್ದಾರೆ. ಈಗ ನನ್ನ ಸಹೋದ್ಯೋಗಿಗಳ ಸರದಿ ಒಬ್ಬ ನನ್ನ ಪಕ್ಕ ಬಂದು ಕಿವಿಯಲ್ಲಿ ಲೋ ಮಗನೆ ಹುಡುಗಿ ಯಾರು ಯಾರು ಅಂತ ಕೇಳಿದರೆ ಪರಿಮಳ ಅಂತ ಹೇಳಿ ಯಾಮರಿಸಿದೆ ಎಂದು ಕಿಸಕ್ಕನೆ ನಕ್ಕರು

 

Rating
No votes yet

Comments