ಯಾರಿಗೂ ಹೇಳೋನೂ ಬ್ಯಾಡ!

ಯಾರಿಗೂ ಹೇಳೋನೂ ಬ್ಯಾಡ!

 ಯಾರಿಗೂ ಹೇಳೋನೂ ಬ್ಯಾಡ!
 



ಮೊನ್ನೆ ಬೇಂದ್ರೆಯವರ 'ಯಾರಿಗೂ ಹೇಳೋನೂ ಬ್ಯಾಡ!' ಹಾಡನ್ನು ಕೇಳುತಿದ್ದೆ. ನನ್ನೊಳಗೆ ಬಾಲ್ಯದ ನೆನಪುಗಳು ಮರಳಿ, ನನಗರಿಯದೆ ಮುಗಳ್ನಗತೊಡಗಿದೆ. ಯಾರಿಗೂ ಹೇಳೋನೂ ಬ್ಯಾಡ ಎಂದು ಅನಿಸುವುದು ಅಥವಾ ಹಾಗಂತ ಗೆಳಯರೊಡನೆ ನಾವು ಮಾತಾಡಿಕೊಳ್ಳುವುದು, ನಾವು ಯಾವುದಾದರು ಎಡವಟ್ಟು ಅಥವಾ ಗುಪ್ತವಾದ ರೋಮಾಂಚನ ಅನುಭವಿಸುವ ಕೆಲಸ ಮಾಡಿದಾಗಲೇ. ಸ್ವಲ್ಪ ಬೆಳದ  ಮೇಲೆ ಆ ಯಡವಟ್ಟು ಪ್ರಸಂಗಗಳೇ ಸವಿನೆನಪುಗಳಾಗಿ ಉಳಿಯುವುದು. 

 

ಹೇಳುವುದೇ ಬೇಡ, ಮುಗ್ದ ಬಾಲ್ಯದ ನೆನಪುಗಳು ಮತ್ತೂ ವಿಶೇಷ.

 

ನಾನೊಮ್ಮೆ ಆರೇಳು ವರುಷದವನಿದ್ದಾಗ ನನ್ನ ಗೆಳಯನ ಜೊತೆ, ರೈಸ್ ಮಿಲ್ಲಿನ ಹೊಟ್ಟಿನ ರಾಶಿಯಲ್ಲಿ ಆಟವಾಡುತ್ತಾ, ಕೊನೆಗೆ ಮನೆಗೆ ಹೊಗುವುದು ಬೇಡ ಎಂದು ನಿರ್ಧರಿಸಿ ಕತ್ತಲಾಗುವವರೆಗೆ ಅಲ್ಲೇ ಆಟವಾಡುತ್ತಾ ಕುಳಿತಿದ್ದೆವು. ನಮ್ಮ ಮನದಿಂದ ಪರಮಾತ್ಮನ ಸೃಷ್ಟಿಯೇ ಮಾಯವಾಗಿ,  ಬತ್ತದ ಹೊಟ್ಟಿನ ರಾಶಿಯೇ ನಮ್ಮ ಬ್ರಹ್ಮಾಂಡವಾಗಿತ್ತು...ತನ್ಮಯರಾಗಿ ಆಟವಾಡುತಿದ್ದವರಿಗೆ ಮದ್ಯಾಹ್ನದಿಂದ ಸಂಜೆವರಗೆ ಹೊತ್ತುಕಳೆದಿದ್ದೆ ಗೊತ್ತಾಗಲಿಲ್ಲ. ಕೊನೆಗೆ ಕತ್ತಲಾಗುತ್ತಿದ್ದಂತೆ ಸಣ್ಣಗೆ ಹೆದರಿಕೆ ಶುರುವಾಗಿ ಮೆಲ್ಲನೆ ಮನೆ ಕಡೆ ಹೊರಟಿದ್ದೆವು. ಹೋಗುವಾಗ ನಾವು ಗುಪ್ತವಾಗಿ ಒಬ್ಬರಿಗೊಬ್ಬರು ಹೇಳಿಕೊಂಡಿದ್ದೆವು 'ಯಾರಿಗೂ ಹೇಳೋದು ಬ್ಯಾಡ, ಮತ್ತೆ ನಾಳೆ ಮತ್ತೆ ಇಲ್ಲಿಗೆ ಆಟವಾಡುವುದಕ್ಕೆ ಬರೋಣ'

 

ಸ್ವಲ್ಪ ದೊಡ್ದವರಾಗುತಿದ್ದಂತೆ ಕದ್ದು ಕಾಲುವೆಯಲ್ಲಿ ಈಜಾಡಲು ಹೋಗುತ್ತಿದ್ದೆವು... ಮನೆಯಲ್ಲಿ ಗೊತ್ತಾಗಬಾರದೆಂದು ಕೈ-ಕಾಲಿಗೆ ಮಣ್ಣುಹಾಕಿಕೊಂಡು ಸಾಕಷ್ಟು ಕೊಳೆಮಾಡಿಕೊಂಡು ಮನೆಗೆ ಹೋಗುತ್ತಿದ್ದೆವು. ಮನೆಗೆ ಹೋಗುವುದಕ್ಕಿಂತ ಮುಂಚೆ ಅದೇ ಪಿಸುಮಾತು 'ಯಾರಿಗೂ ಹೇಳೋದು ಬ್ಯಾಡ...' ಕೊನೆಗೆ ಅಪ್ಪನಿಗೆ ಹೇಗೋ ಗೊತ್ತಾಗಿ ಅನಾಹುತ, ಎಡವಟ್ಟು ಮಾಡಿಕೊಳ್ಳುವ ಮುನ್ನವೇ, ಬೇಸಿಗೆ ರಜೆಯಲ್ಲಿ ಶಾಸ್ತ್ರೋಕ್ತವಾಗಿ ಈಜನ್ನು ಹೇಳಿಕೊಟ್ಟಿದ್ದರು.  ಬಳ್ಳಾರಿ ಬೇಸಿನ ಬೇಗೆ ತಾಳಲಾರದೆ ಕದ್ದು ಮುಚ್ಚಿ ದಿನಕ್ಕೆ ಮೂರು-ನಾಲ್ಕು ಬಾರಿ ಈಜುವುದಕ್ಕೆ ಹೋಗುತಿದ್ದೆವು. 

 


ಬಾಲ್ಯದಲ್ಲಿ ವಿಪರೀತ ಎನ್ನುವಷ್ಟು ದೇವರ ಭಕ್ತಿ. ಅದೇನೋ ಗೊತ್ತಿಲ್ಲ ಎಲ್ಲಿ ದೇವರ ಪಟ, ಮೂರ್ತಿ ಕಂಡರೂ ಶ್ರದ್ದೆಯಿಂದ ಅಡ್ಡ ಬೀಳುತಿದ್ದೆವು. ಸಿನಿಮಾಗೆ ಹೋದಾಗ, ಸಿನಿಮಾ ಪ್ರಾರಂಭದಲ್ಲಿ ತೋರಿಸುತ್ತಿದ್ದ ವೆಂಕಟೇಶ್ವರ, ಗಣೇಶ ಚಿತ್ರಕ್ಕೆ ಚಿತ್ರ ಭಕ್ತಿಯಿಂದ ಕೈ ಮುಗಿಯುತ್ತಿದ್ದು. ಆ ತನ್ಮಯತೆ, ಭಕ್ತಿ ಈಗ ದೇವಸ್ಥಾನಕ್ಕೆ ಹೋದರು ಬರಲ್ಲ ಬಿಡಿ! ದೇವರನ್ನು ಎನನ್ನು ಬೇಡುತ್ತಿರಲಿಲ್ಲ, ದೊಡ್ಡವರು ಏನು ಹೇಳಿಕೊಟ್ಟರೆ ಅದನ್ನೇ ಹೇಳುತ್ತಿದ್ದೆವು.... ನನ್ನನ್ನು ಜಾಣ ಮಾಡಪ್ಪ... ನನ್ನ ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್-ನಲ್ಲಿ ಪಾಸ್ ಮಾಡಪ್ಪ... ಒಳ್ಳೆ ಬುದ್ಧಿ ಕೊಡಪ್ಪ... ಇತ್ಯಾದಿ ಇತ್ಯಾದಿ... ಒಂದು ಸಲ ನಮ್ಮ ತಂದೆ ನನ್ನ ತಮ್ಮನಿಗೆ 'ನನಗೆ ಒಳ್ಳೆ ಬುದ್ಧಿ ಕೊಡಪ್ಪ ಅಂತ ಕೇಳಿಕೊಳ್ಳೋ..' ಅಂತ ಅಂದರೆ ಅವನು ಶ್ರದ್ಧೆಯಿಂದ 'ನಮ್ಮಪ್ಪನಿಗೆ ಒಳ್ಳೆ ಬುದ್ಧಿ ಕೊಡಪ್ಪ ಎಂದು ಮುದ್ದಾಗಿ ಹೇಳಿದ್ದ!


 

ಬೆಂಕಿಪೊಟ್ಟಣ, ಸೀಗರೇಟು ಪ್ಯಾಕಿನಾಟದ ಹುಚ್ಚು ಎಷ್ಟಿತ್ತೆಂದರೇ... ಅದಕ್ಕಾಗಿ ಒಂದು ಪಾಳು ಬಾವಿಗೆ ಇಳಿದು ಪಜೀತಿ ಪಟ್ಟಿದೆ. ರಸ್ತೆಯಲ್ಲಿ ನಡೆಯುವಾಗಲು ಕಣ್ಣು ಯಾವಾಗಲು ರಸ್ತೆಯಲ್ಲಿ ಬಿದ್ದಿರುತಿದ್ದ ಖಾಲಿ ಬೆಂಕಿಪೊಟ್ಟಣ, ಸೀಗರೇಟು ಪ್ಯಾಕನ್ನೇ ಹೊಡುಕುತಿತ್ತು. ಒಂದು ದಿನ ಅಚಾನಕ್ ಆಗಿ ಸಿಕ್ಕ ಸೀಗರೇಟು ಪ್ಯಾಕ್ ತುಂಬಾ ಸೀಗರೇಟಿತ್ತು... ಏನು ಮಾಡುವುದೆಂದು ತಿಳಿಯದೆ ಗಾಬರಿಯಾಗಿ, ಗಲಿಬಿಲಿಗೊಂಡಿದ್ದೆ (ಈಗ ಆ ಸಮಸ್ಯೆ ಇಲ್ಲ ಬಿಡಿ!). ನಮ್ಮ ಮುಗ್ದ ಲೋಕದಲ್ಲಿ ಒಂದೊಂದು ಸೀಗರೇಟು ಬ್ರಾಂಡಿನ ಪ್ಯಾಕಿಗೆ ಒಂದೊಂದು ಪಾಯಿಂಟ್.... ಯಾರು ಆ ಪಾಯಿಂಟ್ ಸಿಸ್ಟಮ್ ಕಂಡು ಹಿಡಿದರೋ ಆ ದೇವರಿಗೆ ಗೊತ್ತು... ಬರ್ಕ್ಲಿ ಪ್ಯಾಕ್-ಗೆ ೨೦, ಚಾರ್ಮಿನಾರ  ಪ್ಯಾಕ್-ಗೆ ೨೦, ಗೋಲ್ಡ್ ಫ್ಲೇಕ್ ಪ್ಯಾಕಾದರೆ ೫೦, ವಿಲ್ಲ್ಸ್ ೧೦೦ ಇತ್ಯಾದಿ... ಇತ್ಯಾದಿ... ಹೈಸ್ಕೂಲ್ ಸೇರುವವರೆಗೂ ಈ ಪ್ಯಾಕಿನ ಹುಚ್ಚಿತ್ತು! ನಮ್ಮ ಈ ಅತ್ಯಮೂಲ್ಯ ಆಸ್ತಿಯನ್ನು ಬಚ್ಚಿಡುವುದಕ್ಕೆ ಹಲವು ಗುಪ್ತ ಸ್ಥಳಗಳು... ಅಮ್ಮನ ಕೈಯಿಗೆ ಏನಾದರು ಸಿಕ್ಕರೆ ಕಸವೆಂದು ಎಸೆದುಬಿಡುತ್ತಿದ್ದರು... ಅಥವಾ ಬಚ್ಚಲು ಮನೆಯ ಒಲೆ ಉರುವಲಾಗುತ್ತಿದ್ದು... ಮನೆಯಲ್ಲಿ ಕಸ ಪೇರಿಸಿದ್ದಕ್ಕೆ ನಮಗೆಲ್ಲ ಫ್ರೀ ಅರ್ಚನೆ! ಎಷ್ಟೊಂದು ಸಲ ತುಂಬಾ ಎಮೋಶನಲ್ಲಾಗಿ ವಾದಕ್ಕೆ ನಿಂತಿದ್ದು ಇದೆ... ಈಗ ಅದೆಲ್ಲ ನೆನಪು ಮಾಡಿಕೊಂಡು ನಾನು ಅಮ್ಮ ನಗುತಿರುತ್ತೇವೆ... ಈಗ ನನ್ನ ಮಗನು ಸಾಕಷ್ಟು ಮನೆಯಲ್ಲಿ ಪೇರಿಸಿದ್ದಾನೆ... ಕಸವೆನ್ನಲಾರೆ ಅವನಿಗೆ ಅದೇ ಅಮೂಲ್ಯ ಆಸ್ತಿ!

 

ಹೀಗೆ ನೆನಪು ಮಾಡಿಕೊಳ್ಳುತ್ತಾ ಹೋದರೆ ಎಷ್ಟೋ ಸಾವಿರ, ಸಾವಿರ ಮಧುರ ನೆನಪುಗಳು...ಆ ಬಾಲ್ಯದ ಪುಟ್ಟ ಪುಟ್ಟ ಗುಟ್ಟುಗಳನ್ನು, ಘಟನೆಗಳನ್ನು ನೆನದರೆ ಈಗ ಸಣ್ಣಗೆ ಮುಗುಳ್ನಗೆ... ಯವ್ವನದ್ದೋ ಏನಿದೆ ಬಿಡಿ ಬರೇ ಹಳವಂಡಗಳೇ....

 

                                                                    

                                                                                                                                                                            - ವಿದ್ಯಾಶಂಕರ ಹರಪನಹಳ್ಳಿ