ತೋಟದಾಚೆಯ ತೋಡು

ತೋಟದಾಚೆಯ ತೋಡು

ಚಿತ್ರ

ಜುಳು ಜುಳು ಹರಿಯುವ ನೀರು ಸಂಗೀತವನ್ನು ಹಾಡುತ್ತದೆ ಎನ್ನುತ್ತಾರೆ ಕವಿಗಳು. ದಟ್ಟವಾದ ಕಾಡಿನ ಮರಗಳು ಮೆಲ್ಲುಸಿರಿನ ಗಾನವನ್ನು ನುಡಿಯುತ್ತಿರುತ್ತವೆ ಎಂಬುದು ಭಾವಜೀವಿಗಳ ಅಂಬೋಣ. ತಣ್ಣನೆ ಬೀಸುವ ಮಂದ ಮಾರುತವೂ ಕವಿತೆಯೊಂದರ ಪಲುಕನ್ನು ಪಲ್ಲವಿಸುತ್ತಿರುತ್ತದೆ ಎಂದು ನಮಗೂ ಆಗಾಗ ಅನಿಸುತ್ತಿರುತ್ತದೆ ಅಲ್ಲವೆ? ಬೆಳದಿಂಗಳ ರಾತ್ರಿಯಲ್ಲಿ ಅಲುಗಾಡುವ ಗಿಡಮರಗಳ ಎಲೆಗಳು ಹನಿಗವನಗಳನ್ನು ನುಡಿಯುತ್ತಾ, ಎದೆಯಲ್ಲಿ ಬೆಚ್ಚನೆಯ ಭಾವನೆಗಳನ್ನು ಹುಟ್ಟಿಸುತ್ತವೆ. ಈ ಎಲ್ಲಾ ಮೂರ್ತ-ಅಮೂರ್ತ ಸಂಗೀತಾನುಭಗಳಲ್ಲಿ, ನೀರು ನುಡಿಸುವ ಗಾಯನವನ್ನು ಕಿವಿಯಾರೆ ಕೇಳಬಹುದು ಎಂಬುದು ನಿಜವಾದ ಸಂಗತಿ.

 

ನಮ್ಮ ಬೈಲಿನಿಂದಾಚೆ ಮತ್ತು ತೋಟದಿಂದಾಚೆ ಒಟ್ಟು ಎರಡು ತೋಡುಗಳು ಹರಿಯುತ್ತವೆ. ನಿಶ್ಶಬ್ದ ರಾತ್ರಿಯಲ್ಲಿ ಅಲ್ಲಿ ಹರಿಯುವ ನೀರಿನ ಜುಳು ಜುಳು ಶಬ್ದ ನಮ್ಮ ಮನೆಯ ತನಕ ಕೇಳುತ್ತದೆ. ಎಲ್ಲಾ ಗದ್ದೆಬೈಲುಗಳಿಗೆ ಸಮಾಂತರವಾಗಿ, ಹಾಡಿಯ ಪಕ್ಕದಲ್ಲಿ ಒಂದು ತೋಡು ಇರುವುದು ಒಂದು ಸಾಮಾನ್ಯ ಸಂಗತಿ. ಆದರೆ, ಆ ತೋಡಿನ ನೀರಿನಲ್ಲಿ ಗಾಯನದ ಇಂಪು ಅಥವಾ ಜೀವನದ ಕಂಪು ಕಂಡುಬಂದರೆ, ಅದು ಮನಸ್ಸಿನ ಮೂಲೆಯಲ್ಲಿ ಮೂಡುವ ಬೆಚ್ಚನೆಯ ನೆನಪಾಗಿ, ತನ್ನ ಛಾಪು ಒತ್ತಬಲ್ಲದು.


 

ನಮ್ಮ ಮನೆಯ ಅಂಗಳದಿಂದಾಚೆ, ಚಿಕ್ಕದಾದ ಅಡಿಕೆ ತೋಟ; ಅದರ ಮಧ್ಯೆ ಸಾಗುವ ಒಂದು ಕಾಲುದಾರಿಯು, ಪುರಾತನ ಧೂಪದ ಮರದ ಅಡಿಯಲ್ಲಿ ಸಾಗಿ, ಪುಟ್ಟ ತೋಡನ್ನು ಸೇರುತ್ತದೆ. ಬೇಸಿಗೆಯಲ್ಲಿ ಕಲ್ಲು, ಕಸ ಮತ್ತು ಗಂಟಿಯ ಸೆಗಣಿಯಿಂದ ತುಂಬಿರುವ ಈ ತೋಡಿಗೆ ಜೀವ ಬರುವುದು ಜೂನ್ ತಿಂಗಳಿನಲ್ಲಿ - ಮುಂಗಾರಿನ ಮಳೆ ಪ್ರಾರಂಭವಾದಕೂಡಲೆ. "ಮಳೆಗಾಲ ಹಿಡಿತು, ಮಾರಾಯ್ರೆ!" ಜೂನ್ ಮೊದಲನೆಯ ವಾರ ರಭಸದ ಮಳೆ ಬಿದ್ದ ನಂತರ, ನಾಲ್ಕಾರು ದಿನಗಳಲ್ಲಿ ಹಾಡಿ ಗುಡ್ಡೆಯ ಇಬ್ಬದಿಗಳಲ್ಲಿ ಉಜರು ಕಣ್ಣು ಒಡೆಯುತ್ತದೆ.

 

ಸ್ಪಟಿಕ ಶುದ್ದನೀರು ನಿರಂತರವಾಗಿ ಆ ಉಜರುಗಳ ಮೂಲಕ, ಹನಿ ಹನಿಯಾಗಿ ಹೊರಬಂದು ಚಿಕ್ಕ ಚಿಕ್ಕ ಧಾರೆಗಳಾಗಿ ತಗ್ಗಿನತ್ತ ಓಡತೊಡಗುತ್ತದೆ. ಅಷ್ಟು ದಿವಸ ಅದೆಲ್ಲಿ ಅಡಗಿರುತ್ತವೋ, ಚಿಕ್ಕ ಚಿಕ್ಕ ಕಾಣಿ ಮೀನುಗಳು ಆ ಪುಟ್ಟತೋಡಿನ ನೀರಿನಲ್ಲಿ ಪ್ರತ್ಯಕ್ಷ! ಹತ್ತಾರು ಪುಟ್ಟ ಪುಟ್ಟ ಕಪ್ಪೆಗಳೂ ಸಹಾ, ಹರಿಯುವ ಆ ನೀರಿನಲ್ಲಿ, ಪ್ರವಾಹಕ್ಕೆ ವಿರುದ್ದವಾಗಿ ತೇಲುತ್ತಾ ಚುರುಕಾಗಿ ನೆಗೆಯುತ್ತಾ ಮುದ ನೀಡುತ್ತವೆ. ಆ ಮೀನುಗಳು, ಕಪ್ಪೆಗಳು ಮಳೆ ಬರುವ ಮುಂಚಿನ ದಿನಗಳ ತನಕ, ಬಿರು ಬೇಸಿಗೆಯಲ್ಲಿ ಅದೆಲ್ಲೆ ಬಚ್ಚಿಟ್ಟಿಕೊಂಡಿದ್ದವು? ಮಳೆ ಬಿದ್ದ ಕೂಡಲೆ, ಭೂಗರ್ಭದ ತಮ್ಮ ಗುಹೆಯಿಂದ ಹೊರಬಂದವೆ, ಅವು? ಮಳೆರಾಯನು ಜೀವಸೃಷ್ಟಿಗೆ ಓಂಕಾರ ಹಾಡುತ್ತಾನೆ ಎಂಬ ಸಂಗತಿಯೇ ಸೋಜಿಗ ಹುಟ್ಟಿಸುವಂತಹದ್ದು.

 

ನಮ್ಮ ಹಳ್ಳಿಯಲ್ಲಿ ಮುಂಚಿನ ದಿನಗಳಲ್ಲಿ ತೋಡಿನ ನೀರು ಉಪಯೋಗವಾಗುತ್ತಿದ್ದ ರೀತಿಯಲ್ಲಿ ಹಲವು ವೈವಿಧ್ಯಗಳಿದ್ದವು. ಬಟ್ಟೆ ಒಗೆಯಲು, ಪಾತ್ರೆ ತೊಳೆಯಲು, ಗಂಟಿಗಳ ಸ್ನಾನಕ್ಕೆ, ಕೈ ತೊಳೆಯಲು ಹೀಗೆ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಸರಿಯೋ, ತಪ್ಪೋ, ಬೆಳಗಿನ ಆ ಮೊದಲ ಕಾರ್ಯಕ್ಕೂ ತೋಡಿನ ನೀರೇ ಬೇಕಿತ್ತು! ಆಗೆಲ್ಲಾ ಬೆಳಗಿನ ಮೊದಲ ಕರ್ತವ್ಯಕ್ಕೆ ಈಗಿನಂತೆ ಪ್ರತೇಕವಾದ ಪುಟ್ಟಮನೆಗಳು ಇರಲಿಲ್ಲವಲ್ಲ. ಬೆಳಗ್ಗೆ ಎದ್ದ ಕೂದಲೇ ಗುಡ್ಡೆಗೋ, ಹಾಡಿಗೋ ಹೋಗಬೇಕಿತ್ತು. ಮಳೆಗಾಲದಲ್ಲಿ ತೋಡಿನಲ್ಲಿ ನೀರು ಹರಿಯುತ್ತಾ ಇರುವಾಗ, ಆ ನೀರೇ ಎಲ್ಲವನ್ನೂ ಶುದ್ಧಮಾಡುವ ಅಮೃತಧಾರೆ! ಹರಿಯುವ ನೀರಿನ ಮಧ್ಯ ಅಗತ್ಯವೆನಿಸಿದರೆ ಎರಡು ಕಲ್ಲುಗಳನ್ನು ಜೋಡಿಸಿಕೊಂಡು, ನಾವು ಮಕ್ಕಳು ಕೂರುತ್ತಿದ್ದೆವು. ಇದರಿಂದ, ಆ ನೀರನ್ನು ಕಲುಷಿತಗೊಳಿಸಿದಂತೆ ಆಗುವುದಿಲ್ಲವೆ? ಈ ಅನುಮಾನಕ್ಕೆ ಪರಿಹಾರ ರೂಪದಲ್ಲಿ ಒಂದು ಗಾದೆಯಿತ್ತು " ಹರಿಯುವ ನೀರಿಗೆ, ಸಾವಿರ ಕೊಡ ನೀರಿಗೆ ಶಾಸ್ತ್ರವಿಲ್ಲ!"

 

ಮಳೆ ಆರಂಭವಾಗಿ, ಮಧ್ಯದಲ್ಲಿ ಹೊಳವಾದಾಗ, ಆ ತೋಡಿನ ನೀರು ನಿಜಕ್ಕೂ ಸ್ಪಟಿಕ ಶುದ್ಧ! ಬಣ್ಣ ಬಣ್ಣದ ಕಲ್ಲುಗಳ ನಡುವೆ ನಿಧಾನವಾಗಿ ಜುಳುಜುಳು ಹರಿಯುತ್ತಿದ್ದ ಸ್ಪಟಿಕ ಶುದ್ಧವಾದ ನೀರನ್ನು ನೋಡುತ್ತಾ ಇದ್ದಾರೆ, ನಿರಂತರ ಕಾವ್ಯವೊಂದರ ನೆನಪಾದೀತು. ಜೋರಾಗಿ ಮಳೆ ಬಂದಾಗ ಅದೇ ತೋಡಿನ ತುಂಬಾ ನೆರೆ ಉಕ್ಕುತ್ತದೆ. ತೋಟದಾಚೆಯ ತೋಡಿನ ನೀರು, ಸ್ವಲ್ಪ ದೂರ ಹರಿದು ಬೈಲಿನಾಚೆಯ ದೊಡ್ಡತೋಡಿಗೆ ಸೇರುತ್ತದೆ. ಚೇರ್ಕಿಹರದಿಂದ ಇಳಿದು ಬರುವ ಆ ತೋಡು, ಬೈಲಿನುದ್ದಕ್ಕೂ ಹರಿದು ಬರುವುದರಿಂದಾಗಿ ಅದರಲ್ಲಿ ನೀರು ಜಾಸ್ತಿ. ಜೋರಾಗಿ ಮಳೆ ಬಂದಾಗ, ಅದರಲ್ಲಿ ನೆರೆ ಉಕ್ಕಿ, ಭತ್ತದ ಗದ್ದೆಗೂ ನುಗ್ಗಿ ಪೈರನ್ನು ಕೆಡಿಸುತ್ತಿತ್ತು. ಅದೇ ತೋಡು ಕೆಳಗೆ ಸಾಗಿ, ಕಟ್ಟಿನಗುಂಡಿಯ ಹತ್ತಿರ ಉಕ್ಕಿ ಹರಿದು, ಇಡೀ ಬೈಲಿನ ತುಂಬಾ ತುಂಬಿಕೊಂಡು, ಬೈಲಿನ ಗದ್ದೆಗಳನ್ನೆಲ್ಲಾ ಒಂದು ಮಾಡುತ್ತಿತ್ತು. ಮಳೆ ಕಡಿಮೆಯಾದಾಗ, ತೋಡಿನಲ್ಲಿರುವ ಮೀನು, ಎಡಿಗಳ ಆಸೆಯಿಂದ ಅದನ್ನು ಹಿಡಿಯುತ್ತಿರುವವರೂ ಇದ್ದರು. ಆ ನೀರಿಗೆ ಅದ್ಯಾವುದೋ ಒಂದು ಗಿಡದ ಕಾಯಿಗಳನ್ನು ಜಜ್ಜಿ ಹಾಕಿ, ಮೀನುಗಳಿಗೆ ಮತ್ತು ಬರಿಸಿ ಅವುಗಳನ್ನು ಹಿಡಿಯುತ್ತಿದ್ದರು.

 

ದೀಪಾವಳಿ ಕಳೆದ ನಂತರ, ಸುಗ್ಗಿ ಬೇಸಾಯಕ್ಕಾಗಿ ಬೈಲಿನಾಚೆಯ ತೋಡಿಗೆ ಕಟ್ಟು ಕಟ್ಟುತ್ತಿದ್ದರು. ಉದ್ದನೆಯ ಮರವನ್ನು ಅಡ್ಡಲಾಗಿ ಹಾಕಿ, ಅದರ ಮಧ್ಯೆ ಚಿಕ್ಕ ಚಿಕ್ಕ ಮರದ ತುಂಡು, ಸೊಪ್ಪು ಮತ್ತು ಮಣ್ಣು ಪೇರಿಸಿ ಕಟ್ಟುವ ಕಟ್ಟು ಮುಂದಿನ ನಾಲ್ಕಾರು ತಿಂಗಳುಗಳ ತನಕ ನೀರಿನ ಖಜಾನೆಯೇ ಸರಿ. ಚಳಿಗಾಲದುದ್ದಕ್ಕೂ, ಇದರಲ್ಲಿ ತುಂಬಿರುವ ನೀರನ್ನು ಗದ್ದೆಗೆ ಹಾಯಿಸಿ, ಸುಗ್ಗಿ ಬೇಸಾಯ ಮಾಡುವ ಕ್ರಮ. ಅದಾದ ಮೇಲೂ ನೀರಿದ್ದರೆ, ಕೆಲವು ಬೈಲುಗಳಲ್ಲಿ, ತೋಡಿನ ನೀರನ್ನು ಬೆಳಸಿ, ಕೊಳ್ಕೆ ಬೆಳೆಯನ್ನೂ ತೆಗೆಯುತ್ತಿದ್ದರು. ನಮ್ಮ ಬೈಲಿನುದ್ದಕ್ಕೂ ಸಾಗಿರುವ ತೋಡಿಗೆ, ಅಲ್ಲಲ್ಲಿ ನಾಲ್ಕಾರು ಕಟ್ಟುಗಳನ್ನು ಹಾಕುತ್ತಿದ್ದರು. ಕಟ್ಟಿನಲ್ಲಿ ನೀರಿದ್ದರೆ, ಉತ್ತಮ ಬೆಳೆ ಬಂದು, ಮುಂದಿನ ವರ್ಷಕ್ಕೆ ಊಟಕ್ಕೆ ತೊಂದರೆ ಇಲ್ಲ ಎಂಬ ನೆಮ್ಮದಿ. ನೀರು ಕಡಿಮೆ ಇರುವ ವರ್ಷಗಳಲ್ಲಿ, ಕಟ್ಟಿನ ನೀರನ್ನು ಬಳಸಲು ಮಿತವ್ಯಯ ಅಗತ್ಯ, ಜೊತೆಗೆ ಅದಕ್ಕೆ ಪೈಪೋಟಿ ಸಹಾ. ಒಂದೊಂದು ರಾತ್ರಿ ಕೆಳಗಿನ ಕಟ್ಟಿನವರು ಗುಟ್ಟಾಗಿ ಬಂದು, ಮೇಲಿನ ಕಟ್ಟುಗಳಿಗೆ ಸ್ವಾಟೆಯಿಂದ ತೂತು ಕೊರೆದು, ಮೇಲಿನ ಕಟ್ಟಿನ ನೀರನ್ನು ದರೋಡೆ ಮಾಡಿ ಕೆಳಗಿನ ತಮ್ಮ ಕಟ್ಟು ತುಂಬುವಂತೆ ಮಾಡುವುದೂ ನಡೆಯುತ್ತದೆ. ಮಳೆ ಕಡಿಮೆ ಬಿದ್ದಾಗ ಈ ರೀತಿಯ ಸಾಹಸಗಳ ಅನಿವಾರ್ಯತೆ! ಅಮೂಲ್ಯ ನೀರಿನ ಈ ರೀತಿಯ ದರೋಡೆಯು ಸಣ್ಣ ಪುಟ್ಟ ಜಗಳಗಳಿಗೂ ಬುಡ ಹಾಕುತ್ತಿದ್ದುದುಂಟು. ಪಂಪ್ ಸೆಟ್ ಬಳಕೆ ಆರಂಭವಾದ ನಂತರ, ತೋಡಿಗೆ ಹಾಕುವ ಕಟ್ಟುಗಳ ನೀರಿನ ಪ್ರಾಮುಖ್ಯತೆ ಕಡಿಮೆಯಾಗಿದ್ದೂ ನಿಜ. ವಿದ್ಯುತ್ ಚಾಲಿತ ಪಂಪುಗಳು ನೇರವಾಗಿ ಭೂಗರ್ಭದ ನೀರನ್ನೇ ರಭಸವಾಗಿ ಹೀರುತ್ತಾ, ಭೂಗರ್ಭದ ನೀರಿನ ಪಾತಳಿಯನ್ನೇ ತಗ್ಗಿಸುವುದರಿಂದಾಗಿ,ಬೇರೆ ರೀತಿಯ ಸಮಸ್ಯೆಗಳಿಗೆ ಎಡೆಮಾಡಿ ಕೊಟ್ಟಿವೆ.

 

ಒಳ್ಳೆಯ ಜಲಮೂಲವಿರುವ ತೋಡುಗಳು, ವರ್ಷವಿಡೀ ನೀರನ್ನು ಕೊಡುವುದೂ ಉಂಟು. ಮಳೆಗಾಲದಲ್ಲಿ ರಭಸವಾಗಿ ಹರಿಯುವ ಅವು, ನಂತರದ ಚಳಿಗಾಲ ಮತ್ತು ಬೇಸಗೆಯ ಬಹುಪಾಲು ದಿನಗಳಲ್ಲಿ ನೀರನ್ನು ಹಿಡಿದಿಟ್ಟುಕೊಂಡಿರುತ್ತವೆ. ಆ ರೀತಿಯ ನೀರಿನ ಸಂಗ್ರಹಕ್ಕೆ ಆ ತೋಡಿನ ಸುತ್ತ ಇರುವ ಕಾಡು-ಹಾಡಿಗಳ ಆರೋಗ್ಯ ಮುಖ್ಯ. ನಮ್ಮ ಬಂಧುಗಳಿರುವ ಅಬ್ಲಿಕಟ್ಟೆಯಲ್ಲಿ ಆ ರೀತಿಯ ಒಂದು ತೋಡು ಇತ್ತು. ಚಳಿಗಾಲ ಕಳೆದು ಬೇಸಗೆಯಲ್ಲೂ ಬಟ್ಟೆ ಒಗೆಯಲು ಅಲ್ಲಿ ನೀರು ಇರುತ್ತಿತ್ತು. ಅದಕ್ಕೆ ಕಟ್ಟಿದ ಚಣಕಿಕಟ್ಟೆಯಲ್ಲಿ ಬೇಸಗೆಯ ದಿನಗಳಲ್ಲೂ ನೀರು ತುಂಬಿರುತ್ತಿತ್ತು. ಆದರೆ, ಈಚಿನ ದಶಕಗಳಲ್ಲಿ ಎಲ್ಲಾ ಕಡೆ, ಹಾಡಿ, ಹಕ್ಕಲು, ಮರಗಿಡಗಳು ನಾಶವಾಗಿರುವುದರಿಂದ, ಬೇಸಗೆಯಲ್ಲೂ ಹರಿಯುವ ತೋಡುಗಳು ತುಂಬಾ ಅಪರೂಪ.

 

ದೀಪಾವಳಿಯ ಮರುದಿನ ಗೋಪೂಜೆಯ ಸಂದರ್ಭದಲ್ಲಿ, ಮನೆಯ ಎಲ್ಲಾ ದನ ಕರುಗಳಿಗೆ ಸ್ನಾನ ಮಾಡಿಸಲು ಬೈಲಿನಾಚೆಯ ತೋಡಿನ ನೀರನ್ನೇ ಉಪಯೋಗಿಸುತ್ತಿದ್ದೆವು. ಎಲ್ಲಾ ದನ ಕರುಗಳನ್ನು ತೋಟದಾಚೆಯ ತೋಡಿನ ಮೂಲಕ ಓಡಿಸಿಕೊಂಡು, ಎರಡೂ ತೋಡುಗಳು ಸೇರುವ ಗುಂಡಿಯಲ್ಲಿದ್ದ ನೀರಿಗೆ ಬಿಡುತ್ತಿದ್ದೆವು. ಅವು ಅತ್ತಿತ್ತ ಬೆದರಿ ಓಡದಂತೆ ಸುತ್ತಲೂ ಮಕ್ಕಳ ಕಾವಲು. ತೆಂಗಿನ ನಾರಿನ ಚಂಡೆಗಳನ್ನು ಮಾಡಿಕೊಂಡು ದೊಡ್ದವರೆಲ್ಲಾ ಅವುಗಳ ಮೈಯನ್ನು ತಿಕ್ಕಿ ತಿಕ್ಕಿ ತೊಳೆಯುತ್ತಿದ್ದರು. ಬೆದರಿ ಕೊಸರಾಡುವ ಅವುಗಳನ್ನು ಮನೆಗೆ ಕರೆತಂದು, ಉದ್ದನೆಯ ಹೂವನ ಹಾರವನ್ನು ಹಾಕಿ, ಕುಂಕುಮ ಹಚ್ಚಿ, ಸೇಡಿಬಣ್ಣದ ಮತ್ತು ಕುಂಕುಂಮ ಬಣ್ನದ ವರ್ತುಲಗಳನ್ನು ಅವುಗಳ ಮೈಮೇಲೆ ಮೂಡಿಸಿ, ಅವುಗಳಿಗೆ ಪೂಜೆ. ನಂತರ, ಅವಕ್ಕೆ ಅರಸಿನದ ಎಲೆ ಕಡುಬಿನ ತಿನಿಸು. ತೋಡಿನ ನೀರು ನಮ್ಮ ಸಂಸ್ಕೃತಿಯಲ್ಲಿ ಬೆರೆತು ಹೋಗಿರುವ ಹಲವು ಉದಾಹರಣೆಗಳಲ್ಲಿ ಇದೂ ಒಂದು. ಜುಳು ಜುಳು ಹರಿಯುವ ತೋಡಿನ ನೀರು, ಕೇವಲ ಸಂಗೀತದ ಮೆಲುಕಿಗೆ ಮಾತ್ರವಲ್ಲ, ಲವಲವಕೆಯ ಸಂಸ್ಕೃತಿಗೂ ಪೂರಕವಾಗಿರುವ ಪರಿ ಅನನ್ಯ.

 

ಚಿತ್ರಕೃಪೆ : ಹೈಕಿಂಗ್ ಬೂಟ್ಸ್.ಕಾಮ್

 

(ಕೆಲವು ಪದಗಳ ಅರ್ಥ: ತೋಡು = ತೊರೆ. ಉಜರು = ಭೂಮಿಯೊಳಗಿನಿಂದ ಬರುವ ನೀರಿನ ಸೆಲೆ. ಕೊಳ್ಕೆ = ಭತ್ತದ ಮೂರನೆಯ (ಬೇಸಿಗೆಯ) ಬೆಳೆ. ಸ್ವಾಟೆ = ದೊಣ್ಣೆ )

 

(ತೋಡಿನ ನೀರಿನಲ್ಲಿ ನಾವು ಮಕ್ಕಳು ಸ್ನಾನ ಮಾಡುತ್ತಿದ್ದುದೂ ಉಂಟು. ಆದರೆ, ಅದಕ್ಕೆ ಮನೆಯ ಹಿರಿಯರ ಪ್ರೋತ್ಸಾಹವೇನೂ ಇರಲಿಲ್ಲ - ಅವರು ಮಕ್ಕಳಾಗಿದ್ದಾಗ ತೋಡು, ಹೊಳೆಗಳಲ್ಲಿ ಸ್ನಾನ ಮಾಡಿಬೆಳೆದವರಾಗಿದ್ದರೂ, ನಾವು ತೋಡಿನಲ್ಲಿ ಸ್ನಾನ ಮಾಡುತ್ತೇವೆಂದರೆ "ಬೇಡ, ಬೇಡ" ಎಂದು ಗದರುತ್ತಿದ್ದರು. ನೆಗಡಿ ಆಗುತ್ತೆ ಎಂದು ಒಂದು ಕಾರಣವಾದರೆ, ನೀರಿನ ಆಟದಲ್ಲಿ ಅಪಾಯವೂ ಸೇರಿರುತ್ತದೆಂಬ ಕಾಳಜಿಇನ್ನೊಂದೆಡೆ. ನಮ್ಮ ಮನೆ ಎದುರು ಎರಡು ತೋಡುಗಳು ಸೇರುವ ಗುಂಡಿಯಲ್ಲಿ ಅಪರೂಪಕ್ಕೊಮ್ಮೆ ನಾನು ಸ್ನಾನ ಮಾಡುತ್ತಿದ್ದುದುಂಟು. ಮಳೆಗಾಲ ಹೊಳವಾದ ದಿನಗಳಲ್ಲಿ, ಅಲ್ಲಿ ಶುದ್ದವಾದ ನೀರು ಹರಿಯುತ್ತಿತ್ತು - ಬಿಸಿಲು ಬೀಳುತ್ತಿದ್ದ ದಿನಗಳಲ್ಲಿ ಆ ನೀರಿನಲ್ಲಿ ಸ್ನಾನ ಮಾಡುವ ಅನುಭವವೇ ಅನಿರ್ವಚನೀಯ.)
Rating
No votes yet

Comments