ರೂಢಿ ನಾಮ .....3

ರೂಢಿ ನಾಮ .....3

ರೂಢಿ ನಾಮ .....ಮುಂದುವರೆದ ಭಾಗ !

ಅಮ್ಮಾಲಿಯ ಅಪ್ಪಟೆಮೂಗಿನ ವಿಷಯ ಹೇಳುತ್ತಿದ್ದೆ ಕಡೆಯ ಸಂಚಿಕೆಯಲ್ಲಿ. ಅವರಿಗೆ "ಅಪ್ಪಟೆ ಮೂಗಿನ ಚಪ್ಪಟೆ ಚಿಟ್ಟೆ" ಅಂತ ಕರೆಯುತ್ತಿದ್ದರು ಹುಡುಗರೆಲ್ಲ. ಅಮ್ಮಾಲಿ ಹೀಗೇ ಒಂದು ದಿನ ಮಲ್ಲಿಗೆ ಹೂವಿನ ಸುವಾಸನೆ ಸವಿಯುತ್ತಿರುವಾಗ, ಹೂವಿನೊಳಗಿರುವ ಹುಳ ಹೊೞೆಗೆ ಹೋಗಿ ಮೂಗಿನ ಮಧ್ಯೆ ಗೋಡೆಯನ್ನು ತಿಂದು ಹಾಕಿತು ಅಂತ ಪ್ರತೀತಿ ಇದೆ.( ಅರ್ಥಾತ್ ಹಾಗಂತ ಹೇಳುವುದು ರೂಢಿಯಲ್ಲಿದೆ). ಅಂದಿನಿಂದ ಮೂಗು ಅಪ್ಪಟೆಯಾಯಿತಂತೆ. ಈ ವಿಷಯ ಇಲ್ಲಿಗೇ ಬಿಡೋಣ...ರೂಢಿನಾಮಕ್ಕೆ ಬರೋಣ.

"ಪುಟ್ಟಿ" ಅನ್ನೋ ರೂಢಿನಾಮ ತುಂಬಾ ಸಾಮಾನ್ಯ. ಎಲ್ಲರ ಮನೆಯಲ್ಲೂ ಒಬ್ಬಳು ಪುಟ್ಟಿ ಇರುತ್ತಾಳೆ. ಒಬ್ಬಲೇ ಮಗಳಾದ್ರೆ ಬಿಡಿ...ಪುಟ್ಟಿ ಇನ್ನೂ ಸಾಮಾನ್ಯ. ನಮ್ಮ ಮನೆಯಲ್ಲೂ ನಮ್ಮ ಎರಡನೇ ಅಕ್ಕನಿಗೆ "ಪುಟ್ಟಿ" ಅಂತ ಹೆಸರಿತ್ತು. ನಮ್ಮ ನೆಂಟರಿಷ್ಟರಲ್ಲಿ ಸುಮಾರು ಪುಟ್ಟಿಗಳಿದ್ದವು. ಅವುಗಳನ್ನ ಗುರುತಿಸಲು ಇನ್ನೊಂದು ರೂಢಿನಾಮ ಅದರ ಜೊತೆಗೆ ಸೇರಿಸಬೇಕಾಗಿತ್ತು. ಮದುವೆ ಮುಂಜಿ ಮನೆಗಳಲ್ಲಿ "ಪುಟ್ಟಿ" ನ ಕರಿಯೇ ಅಂದ್ರೆ, ನಾವೆಲ್ಲ "ಯಾವ ಪುಟ್ಟಿ"? ಕರಿ ಪುಟ್ಟಿ, ಬಿಳಿ ಪುಟ್ಟಿ, ದೊಡ್ಡ ಪುಟ್ಟಿ, ಸಣ್ಣ ಪುಟ್ಟಿ, ಡುಮ್ಮಿ ಪುಟ್ಟಿ, ಸಿಡಿ ಪುಟ್ಟಿ, ಚಟ್ಣಿಪುಟ್ಟಿ ಹೀಗೆ ದೊಡ್ಡ ಪಟ್ಟಿ ತಟ್ಟುತ್ತಿದ್ವಿ. ನಮ್ಮ ಅಕ್ಕನಿಗೆ "ಚಟ್ನಿ ಪುಟ್ಟಿ " ಅಂತ ಕರೀತಿದ್ರು, ಯಾಕೆಂದರೆ, ಚಟ್ನಿ ನ ಹಾಗಾಗೇ ತಿಂದು ಬಿಡುತ್ತಿದ್ದಳು. ( ದೋಸೆ ಇಡ್ಲಿ ಜೊತೆಗಿರಲಿ). ಒಂದು ದೋಸೆಗೆ ೩-೪ ಸಾರಿ ಚಟ್ನಿ ಹಾಕಬೇಕಿತ್ತು ಅವಳಿಗೆ. ಕಡೆಗೆ ನಮ್ಮಮ್ಮ "ಇನ್ನು ಚಟ್ನಿ ಇಲ್ಲ ಹೋಗು, ಹಾಗೇ ತಿನ್ನು " ಅಂತ ಕಳಿಸುತ್ತಿದ್ದರು. ಈಗ ಚಟ್ನಿ ಪುಟ್ಟಿಗೆ ಇನ್ನೊಬ್ಬ "ಪುಟ್ಟಿ" ಮಗಳಿದ್ದಾಳೆ. ಈಗ "ತಾಯಿ ಪುಟ್ಟಿ" ಮಗಳು ಪುಟ್ಟಿ ಯಾಗಿದ್ದಾರೆ. ಅಂದಹಾಗೆ ಚಟ್ನಿ ತಿನ್ನೋದು ಸ್ವಲ್ಪ ಕಡಿಮೆಯಾಗಿದೆ ಕೊಲೆಸ್ಟರಾಲ್ ಗಲಾಟೆ ಯಿಂದ.

ಗುಂಡಾಡಿಗಳು ಅರ್ಥಾತ್ "ಗುಂಡ" ಅನ್ನೋ ಗಂಡಸರ ರೂಢಿ ನಾಮ ಸರ್ವೇ ಸಾಧಾರಣ. ಗುಂಡ ಗಳು ಮದುವೆಯಾಗಿ ಗಂಡ ಆದಮೇಲೂ "ಗುಂಡಾಡಿಗಳಾಗೇ" ಇರುತ್ತಾರೆ. ಗುಂಡ ಗುಂಡ್ ಹಾಕಕ್ಕೆ ಹೋಗಿದ್ದನೆ ಅನ್ನೋದು ಸ್ವಲ್ಪ ಹಳೆಯ ಜೋಕ್ ಆಯ್ತು. ಗಂಡಂದಿರಿಗೆ ಕೆಲಸ ಹೋದಾಗ್ಲಂತೂ ಸರಿಯೇ ಸರಿ....( ಉಂಡಾಡಿ ಗುಂಡ ) ಗಂಡ ಆಗುತ್ತಾನೆ. ನಿಮಕಡೆ ಯಾರಾದ್ರೂ "ಗಂಡ್" ಇದೆಯಾ? ನಮ್ಮ ಹುಡುಗಿಗೆ ಬೇಕು ಅಂದ್ರೆ, ಯಾರೋ ಹೇಳ್ತಿದ್ರು ..."ನಮ್ಕಡೆ ಇದಾವೆ ಒಂದಷ್ಟು ಗುಂಡಗಳು, ಅವು ಗಂಡ್ ಆಗಕ್ಕೆ ಲಾಯಕ್ಕಿಲ್ಲ" ಅಂತ. ಇನ್ನೂ ಕೆಲಸ ಗಿಲಸ ಸಿಕ್ಕಿಲ್ಲ, ಸಧ್ಯಕ್ಕೆ ಉಂಡಾಡಿ ಗುಂಡಗಳು !

ಮುಂದುವರೆಯುವುದು.........

Rating
No votes yet

Comments