ಕಥೆ - ಹರಿದ ಪುಸ್ತಕ ಭಾಗ ೧
ನಾನು ಎಂದಿನಂತೆ ಅಂದೂ ಸಹ ನನ್ನ ಕೆಲಸ ಮುಗಿಸಿಕೊಂಡು ರೂಮಿಗೆ ಮರಳಲು ಮಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬಂದೆ.. ಇನ್ನೇನು ಬಸ್ ಬರಲು ಹತ್ತು ನಿಮಿಷ ಇರಬಹುದು. ಅಷ್ಟರಲ್ಲಿ ನಾನು ನಿತ್ಯದಂತೆ ನನ್ನ ಮೊಬೈಲ್ ಹಾಗೂ ಪರ್ಸು ಎರಡು ಭದ್ರವಾಗಿದೆ ಎಂದು ಖಚಿತಪಡಿಸಿಕೊಂಡು ಸಿದ್ಧನಾದೆ. ಹಾಗೆ ಸುಮ್ಮನೆ ದಿನಾಲೂ ನೋಡುವ ಹಾಗೆ ಮೂಲೆಯಲ್ಲಿ ಕುಳಿತಿದ್ದ ಹುಡುಗಿಯ ಕಡೆ ನೋಡಿದೆ. ಆದರೆ ಅಲ್ಲಿ ಹುಡುಗಿ ಕಾಣಲಿಲ್ಲ. ಈಗ ಒಂದೆರಡು ತಿಂಗಳಿನಿಂದ ದಿನಾ ನೋಡುತ್ತಿದ್ದೇನೆ ಆ ಹುಡುಗಿಯನ್ನು. ಪ್ರತಿದಿನ ಅದೇ ಮೂಲೆಯಲ್ಲಿ ಕುಳಿತಿರುತ್ತಿದ್ದಳು. ಯಾವಾಗಲೂ ಒಂದು ಡೈರಿ ಯಲ್ಲಿ ಏನನ್ನೋ ಬರೆಯುತ್ತ ಕುಳಿತಿರುತ್ತಿದ್ದಳು. ಅವಳು ಒಮ್ಮೆಯೂ ಆ ಜಾಗ ಬಿಟ್ಟು ಕದಲಿರಲಿಲ್ಲ. ಅದೇನೋ ಗೊತ್ತಿಲ್ಲ ಆ ಹುಡುಗಿಯ ಮುಖದಲ್ಲಿ ಒಂಥರಾ ಕಳೆ ಇತ್ತು. ಅಥವಾ ನನಗೆ ಹಾಗೆನಿಸಿತ್ತೋ ಗೊತ್ತಿಲ್ಲ. ಒಟ್ಟಿನಲ್ಲಿ ಬೆಳಿಗ್ಗೆ ಆಫೀಸಿಗೆ ಹೋಗುವಾಗ ಸಂಜೆ ಬರುವಾಗ ಒಂದು ಸಲ ಆ ಹುಡುಗಿಯನ್ನು ನೋಡಿ ಹೋಗುತ್ತಿದ್ದೆ. ನೆನ್ನೆ ಸಂಜೆ ನೋಡಿದ್ದೆ ಇಂದು ಬೆಳಿಗ್ಗೆ ತಡವಾಗಿ ಬಂದಿದ್ದರಿಂದ ಅವಳನ್ನು ಗಮನಿಸಿರಲಿಲ್ಲ. ಈಗ ನೋಡಿದರೆ ಅಲ್ಲಿ ಅವಳು ಕಾಣಲಿಲ್ಲ. ಅವಳು ಕಾಣದಿದ್ದದ್ದು ನನಗೇನೂ ನಷ್ಟವಿರಲಿಲ್ಲ ಆದರೆ ಇಷ್ಟು ದಿನದಲ್ಲಿ ಯಾವತ್ತೂ ಅವಳು ಆ ಜಾಗ ಬಿಟ್ಟು ಕದಲಿರಲ್ಲ ಎಂದು ಯೋಚಿಸುವಷ್ಟರಲ್ಲಿ ಬಸ್ ಬಂದು ನನ್ನ ಯೋಚನೆಗಳಿಗೆ ಬ್ರೇಕ್ ಬಿತ್ತು. ಗಡಿಬಿಡಿಯಲ್ಲಿ ಪರ್ಸು ಮತ್ತು ಮೊಬೈಲನ್ನು ಕೈಯಲ್ಲಿ ಬಿಗಿಯಾಗಿ ಹಿಡಿದು ಆ ಗುಂಪಿನಲ್ಲಿ ನುಗ್ಗಿ ಬಸ್ ನ್ನು ಹತ್ತಿದೆ.
ಮತ್ತೆ ಮರುದಿನ ಬೆಳಿಗ್ಗೆ ನಿಲ್ದಾಣಕ್ಕೆ ಬರುವವರೆಗೂ ಆ ಹುಡುಗಿಯ ಬಗ್ಗೆ ಯೋಚನೆ ಬಂದಿರಲಿಲ್ಲ. ಈ ಬಾರಿಯೂ ನಿಲ್ದಾಣದಲ್ಲಿ ಆಕೆ ಕಾಣಲಿಲ್ಲ. ಹಾಗೆಯೇ ಒಂದೆರಡು ದಿನ ಆಕೆ ಕಾಣಲಿಲ್ಲ. ಮೂರನೇ ದಿನ ನೀರಿನ ಅವಶ್ಯಕತೆ ಬಂದು ಅವಳು ಕುಳಿತಿದ್ದ ಜಾಗದ ಪಕ್ಕದಲ್ಲಿದ್ದ ಅಂಗಡಿಯವನ ಬಳಿ ಹೋಗಿ ಒಂದು ನೀರಿನ ಬಾಟಲ್ ತೆಗೆದುಕೊಂಡು ವಾಪಸ್ ಬರುವಾಗ ಸುಮ್ಮನೆ ಅಂಗಡಿಯವನನ್ನು ಕೇಳಿದೆ ಭಾಯಿ ಇಲ್ಲಿ ಒಬ್ಬಳು ಹುಡುಗಿ ಇರುತ್ತಿದ್ದಳಲ್ಲ ಎಲ್ಲಿ ಹೋದಳು. ಅದಕ್ಕವನು ಆ ಹುಡುಗಿ ಸತ್ತು ಹೋದಳು ನಾಲ್ಕು ದಿನ ಆಯಿತು. ಕಾರ್ಪೋರಶನ್ ಅವರು ಬಂದು ಶವ ತೆಗೆದುಕೊಂಡು ಹೋದರು ಎಂದು ಹೇಳಿ ಯಾಕೆ ನಿಮಗೆ ಏನಾದರೂ ಆಗಬೇಕಿತ್ತೇ ಆ ಹುಡುಗಿಯಿಂದ ಎಂದು ವಿಚಿತ್ರವಾಗಿ ನೋಡಿದ. ನಾನು ಹಾಗೇನು ಇಲ್ಲ ಸುಮ್ಮನೆ ಕೇಳಿದೆ ಎಂದು ಪಕ್ಕಕ್ಕೆ ಬಂದು ಅವಳು ಕುಳಿತಿದ್ದ ಸ್ಥಳ ನೋಡಿದೆ ಅವಳು ಕುಳಿತಿದ್ದ ಜಾಗದಲ್ಲಿ ಒಂದು ಗೋಣೀ ಚೀಲ ಮತ್ತು ಒಂದು ಡೈರಿ ಕಂಡಿತು. ಏನೋ ಕುತೂಹಲದಿಂದ ಡೈರಿ ತೆಗೆದುಕೊಂಡು ನನ್ನ ಬ್ಯಾಗಿನಲ್ಲಿಟ್ಟುಕೊಂಡು ಮನೆಗೆ ಬಂದೆ.
ನಂತರ ನನ್ನ ಕೆಲಸ ಬದಲಾದ ಕಾರಣ ಮಜೆಸ್ಟಿಕ್ ಗೆ ಹೋಗುವುದು ನಿಲ್ಲಿಸಿದೆ. ಹಾಗೆಯೇ ಆ ಹುಡುಗಿ ಹಾಗೂ ಆ ಡೈರಿಯನ್ನು ಮರೆತು ಹೋದೆ. ಹೀಗೆ ಒಂದು ವಾರಾಂತ್ಯದಲ್ಲಿ ಸುಮ್ಮನೆ ರೂಮನ್ನು ಸ್ವಚ್ಛ ಮಾಡುವ ಸಲುವಾಗಿ ಎಲ್ಲ ಒಪ್ಪವಾಗಿ ಜೋಡಿಸುತ್ತಿದ್ದೆ. ಆಗ ಆ ಡೈರಿ ಕಣ್ಣಿಗೆ ಬಿತ್ತು. ಮೊದಲಿಗೆ ಯಾವುದೆಂದು ಗೊತ್ತಾಗಲಿಲ್ಲ. ನಂತರ ಸ್ವಲ್ಪ ಹೊತ್ತು ಯೋಚಿಸಿದ ಮೇಲೆ ಓಹ್ ಇದು ಬಸ್ ಸ್ಟ್ಯಾಂಡ್ ಹುಡುಗಿಯ ಡೈರಿ ಎಂದು ನೆನಪಾಗಿ ಎತ್ತಿ ಪಕ್ಕಕ್ಕೆ ಇಟ್ಟಿ ಮತ್ತೆ ರೂಮನ್ನು ಸ್ವಚ್ಛ ಮಾಡುವ ಕಾರ್ಯದಲ್ಲಿ ತೊಡಗಿದೆ. ಮಧ್ಯಾಹ್ನದ ಹೊತ್ತಿಗೆ ಎಲ್ಲ ಕೆಲಸ ಮುಗಿದು ಸ್ನಾನ ಮಾಡಿ ಆಚೆ ಹೋಟೆಲ್ ಗೆ ಹೋಗಿ ತಿಂಡಿ ತಿಂದು ಬಂದು ಸ್ವಲ್ಪ ಹೊತ್ತು ಇಂಟರ್ನೆಟ್ ನೋಡುವ ಎಂದು ಸಿಸ್ಟಂ ಆನ್ ಮಾಡಿದೆ. ಆದರೆ ಅಷ್ಟರಲ್ಲಿ ಡೈರಿಯ ನೆನಪಾಗಿ ಸಿಸ್ಟಂ ಆಫ್ ಮಾಡಿ ಡೈರಿಯನ್ನು ಕೈಗೆತ್ತಿಕೊಂಡೆ. ಓದಲೋ ಬೇಡವೋ ಎಂಬ ಗೊಂದಲದಿಂದಲೇ ಮೊದಲ ಪುಟವನ್ನು ತಿರುಗಿಸಿದೆ "ಹರಿದ ಪುಸ್ತಕ" ಎಂಬ ಶೀರ್ಷಿಕೆ ಕಂಡಿತು. ನಂತರದ ಪುಟವನ್ನು ತಿರುಗಿಸಿದೆ.
ನನ್ನ ಹೆಸರು.....ಬೇಡ ಬಿಡಿ. ನನ್ನ ಊರು ಮಂಡ್ಯ ಹತ್ತಿರ ಒಂದು ಹಳ್ಳಿ. ನಮ್ಮದು ತೀರ ಬಡ ಕುಟುಂಬ ಅಲ್ಲದಿದ್ದರೂ ಶ್ರೀಮಂತರಂತೂ ಆಗಿರಲಿಲ್ಲ. ಇದ್ದ ಒಂದಷ್ಟು ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೆವು. ನನಗೊಬ್ಬ ಅಣ್ಣ ಹಾಗೂ ಒಬ್ಬಳು ತಂಗಿ ಇದ್ದಳು. ಅವರಿಬ್ಬರೂ ಓದಿನಲ್ಲಿ ಮುಂದಿದ್ದರು. ಅದೇಕೋ ಗೊತ್ತಿಲ್ಲ ನನಗೆ ಓದು ಹತ್ತಲಿಲ್ಲ. ಒಂಭತ್ತನೇ ತರಗತಿಗೆ ಸ್ಕೂಲಿಗೆ ವಿದಾಯ ಹೇಳಿಬಿಟ್ಟಿದ್ದೆ. ಆ ನಂತರ ಮನೆಯಲ್ಲೇ ಅಮ್ಮನಿಗೆ ಸಹಾಯ ಮಾಡಿಕೊಂಡು ಅಪ್ಪನಿಗೆ ಹೊಲಕ್ಕೆ ಬುತ್ತಿ ತೆಗೆದುಕೊಂಡು ಹೋಗುವುದು ಹೀಗೆ ಮನೆಯ ಕೆಲಸಗಳನ್ನು ಮಾಡಿಕೊಂಡಿದ್ದೆ. ಓದಿನಲ್ಲಿ ಆಸಕ್ತಿ ಕಳೆದುಕೊಂಡ ನನಗೆ ಸಿನೆಮಾಗಳ ಮೇಲೆ ವಿಪರೀತ ಆಸಕ್ತಿ ಹುಟ್ಟಿತು. ಸಿನೆಮಾಗಳಲ್ಲಿ ಬರುತ್ತಿದ್ದ ನಾಯಕಿಯರ ಹಾಗೆ ನಾನೂ ಆಗಬೇಕು, ಅವರ ಹಾಗೆ ರಂಗು ರಂಗಿನ ಪೋಷಾಕು ಧರಿಸಬೇಕು, ಅವರ ಹಾಗೆ ಪ್ರಪಂಚದ ಎಲ್ಲೆಡೆ ಸುತ್ತಬೇಕು ಹೀಗೆ ಏನೇನೋ ಕನಸು ಕಾಣುತ್ತಿದ್ದೆ. ಒಂದೆರೆಡು ಬಾರಿ ಅಮ್ಮನ ಮುಂದೆ ನನ್ನ ಕನಸನ್ನು ಹೇಳಿದ್ದಕ್ಕೆ ಬಾಯಿಗೆ ಬಂದ ಹಾಗೆ ಬೈದು, ಮನೆಯಲ್ಲಿದ್ದ ಬೆತ್ತದಿಂದ ನಾಲ್ಕು ಬಿಗಿದಿದ್ದರು. ಇಷ್ಟೆಲ್ಲಾ ಆದರೂ ನನ್ನ ಕನಸಂತೂ ಸತ್ತಿರಲಿಲ್ಲ.
ಹೀಗೆ ಒಮ್ಮೆ ಮಧ್ಯಾಹ್ನ ಅಪ್ಪನಿಗೆ ಬುತ್ತಿ ಕೊಡಲೆಂದು ಹೊಲದ ಕಡೆ ಹೊರಟಿದ್ದಾಗ ಸುಮಾರು ಜನ ಕೆರೆಯ ಕಡೆ ಹೋಗುತಿದ್ದದ್ದು ಕಣ್ಣಿಗೆ ಬಿತ್ತು. ಒಬ್ಬ ಹುಡುಗನನ್ನು ನಿಲ್ಲಿಸಿ ಏನು ನಡೆಯುತ್ತಿದೆ ಅಲ್ಲಿ ಎಂದು ಕೇಳಿದ್ದಕ್ಕೆ ಯಾವುದೋ ಸಿನೆಮಾ ಶೂಟಿಂಗ್ ನಡೆಯುತ್ತಿದೆಯಂತೆ ಅಲ್ಲಿ. ಶಿವಣ್ಣ ಬಂದವರಂತೆ ಎಂದು ಓಡಿ ಹೋದ. ತಕ್ಷಣ ನನ್ನಲ್ಲಿದ್ದ ಅಸೆ ಮತ್ತೆ ಗರಿಗೆದರಿತು. ಆದರೆ ತಲೆಯ ಮೇಲೆ ಬುತ್ತಿ ಇದೆ, ಅಪ್ಪನಿಗೆ ಸಮಯಕ್ಕೆ ಸರಿಯಾಗಿ ಬುತ್ತಿ ಕೊಡದಿದ್ದರೆ ಬೈಗಳು ಖಂಡಿತ ಏನು ಮಾಡುವುದು ಎಂದು ಗೊತ್ತಾಗದೆ ಚಕಚಕನೆ ಹೊಲದ ಕಡೆ ಹೆಜ್ಜೆ ಹಾಕಿದೆ. ಅಪ್ಪನಿಗೆ ಬುತ್ತಿ ಕೊಟ್ಟು ಅಪ್ಪ ಊಟ ಮುಗಿಸುವ ತನಕ ಕಾಯುತ್ತಿದ್ದೆ. ಅಪ್ಪನ ಊಟ ಮುಗಿದ ತಕ್ಷಣ ಅಪ್ಪ ನಾನು ಹೊರಡುತ್ತೇನೆ ಎಂದು ಬುಟ್ಟಿಯನ್ನು ತೆಗೆದುಕೊಂಡು ಕೆರೆಯ ಕಡೆ ಒಡಲು ಶುರು ಮಾಡಿದೆ. ಅಷ್ಟರಲ್ಲಿ
"ತೇರಿ ಮೇರಿ ಮೇರಿ ತೇರಿ ಪ್ರೇಂ ಕಹಾನಿ ಹೇ ಮುಶ್ಕಿಲ್" ಎಂದು ನನ್ನ ಮೊಬೈಲ್ ರಿಂಗಣಿಸಲು ಶುರು ಮಾಡಿತು. ಆಮೇಲೆ ಓದೋಣ ಎಂದುಕೊಂಡು ಡೈರಿಯನ್ನು ಮುಚ್ಚಿಟ್ಟು ಫೋನ್ ತೆಗೆದುಕೊಂಡು ಆಚೆ ಬಂದೆ. ಅದು ನನ್ನ ಸ್ನೇಹಿತ ವಿಕ್ರಂ ನ ಕರೆ ಆಗಿತ್ತು. ವಾರಾಂತ್ಯದಲ್ಲಿ ಮಾತ್ರ ಅವನು ನನಗೆ ಫೋನ್ ಮಾಡುತ್ತಿದ್ದ. ಇಬ್ಬರೂ ಆಚೆ ಹೋಗಿ ಯಾವುದಾದರೂ ಸಿನಿಮಾ ನೋಡಿಕೊಂಡು ಬರುವಾಗ ಆಚೆ ಊಟ ಮಾಡಿಕೊಂಡು ಮನೆಗೆ ಬರುವುದು ನಮ್ಮ ಪರಿಪಾಟಲಾಗಿತ್ತು. ಅಂದೂ ಸಹ ಫೋರಂ ಗೆ ಹೋಗಿ "ದಿ ಡರ್ಟಿ ಪಿಕ್ಚರ್" ಸಿನೆಮಾ ನೋಡಿಕೊಂಡು ಊಟಕ್ಕೆ ಹೋದೆವು. ಊಟ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಯಾಕೋ ಆ ಡೈರಿ ಹುಡುಗಿ ನೆನಪಾದಳು. ಆ ಹುಡುಗಿಯದು ದಿ ಡರ್ಟಿ ಪಿಕ್ಚರ್ ಸಿನೆಮಾ ಕಥೆಯ? ಅವಳೂ ಸಿನೆಮಾ ಗುಂಗಿನಲ್ಲಿ ಇದ್ದವಳು. ಹಾಗಿರಕ್ಕೆ ಸಾಧ್ಯವಿಲ್ಲ ಎಂದು ಮನಸಿನಲ್ಲಿ ಅಂದುಕೊಂಡು ಎದುರಿಗಿದ್ದ ಮೊಸರನ್ನ ತಿನ್ನುತ್ತ ಸ್ನೇಹಿತನ ಮುಖ ನೋಡಿದೆ. ಅವನು ಯಾಕೋ ವಿದ್ಯಾ ಬಾಲನ್ ನೆನಪಾಗುತ್ತಿದ್ದಾಳ ಎಂದು ಛೇಡಿಸಿದ. ನಾನು ಥೂ ಅದೂ ಒಂದು ಸಿನೆಮಾನ ಎಂದು ಬೈದು ಊಟ ಮುಗಿಸಿ ಬಿಲ್ ಪಾವತಿಸಿ ಅಲ್ಲಿಂದ ಹೊರಟು ರೂಮಿಗೆ ಬಂದೆ. ಆಗಲೇ ಸಮಯ ಹನ್ನೊಂದಾಗಿತ್ತು. ಆದರೆ ನಿದ್ರೆ ಬರುತ್ತಿರಲಿಲ್ಲ. ಸರಿ ಎಂದು ಮತ್ತೆ ಡೈರಿ ಕೈಗೆತ್ತಿಕೊಂಡೆ.
ಓಡುತ್ತ ಓಡುತ್ತ ಕೆರೆಯ ಸಮೀಪ ಬಂದೆ. ಆಗಲೇ ಅಲ್ಲಿ ಸುಮಾರು ಜನ ಜಮಾಯಿಸಿದ್ದರು. ನಾನು ಗುಂಪಿನಲ್ಲಿ ತೂರಿಕೊಂಡು ಶೂಟಿಂಗ್ ಜಾಗಕ್ಕೆ ಬಂದೆ. ಅಲ್ಲಿ ಶಿವಣ್ಣ ಸಹ ನರ್ತಕಿಯರೊಡನೆ ನೃತ್ಯ ಮಾಡುತ್ತಿದ್ದ ದೃಶ್ಯ ಸೆರೆಹಿಡಿಯಲಾಗುತ್ತಿತ್ತು. ನಾನು ಬಿಟ್ಟ ಕಣ್ಣು ಬಿಟ್ಟ ಹಾಗೆ ಶೂಟಿಂಗ್ ನೋಡುತ್ತಾ ಕುಳಿತಿದ್ದೆ. ಸಮಯದ ಪರಿವೆ ಇರಲಿಲ್ಲ. ಶೂಟಿಂಗ್ ಮುಗಿಯುವ ಹೊತ್ತಿಗೆ ಸಂಜೆ ಆಗಿತ್ತು. ಪ್ಯಾಕಪ್ ಮಾಡುವ ಮುಂಚೆಯೇ ಶಿವಣ್ಣ ಅಲ್ಲಿಂದ ಹೊರಟು ಬಿಟ್ಟರು. ಶೂಟಿಂಗ್ ನೋಡಲು ಬಂದಿದ್ದ ಜನರೂ ಹೊರಡುತ್ತಿದ್ದರು. ಅಷ್ಟರಲ್ಲಿ ಅಲ್ಲೊಬ್ಬ ಟೋಪಿ ಹಾಕಿಕೊಂಡು ಕೈಯಲ್ಲಿ ರಟ್ಟು ಹಿಡಿದುಕೊಂಡು ಏನೋ ಬರೆಯುತ್ತಿದ್ದ. ನಾನು ನೇರ ಅವನ ಬಳಿ ಹೋಗಿ ಅಣ್ಣ ಎಂದೆ. ಅವನು ಒಮ್ಮೆ ನನ್ನನ್ನು ನೋಡಿ ಮತ್ತೆ ತನ್ನ ಕೆಲಸದಲ್ಲಿ ಮಗ್ನನಾದ. ನಾನು ಮತ್ತೊಮೆ ಕೂಗಿದಾಗ ಕೈಲಿದ್ದ ರಟ್ಟನ್ನು ಕೆಳಗಿಟ್ಟು ಏನೆಂದು ಕೇಳಿದ. ಅಣ್ಣ ಇನ್ನು ಎಷ್ಟು ದಿನ ಇಲ್ಲಿ ಶೂಟಿಂಗ್ ಮಾಡುತ್ತೀರಾ ಎಂದು ಕೇಳಿದೆ. ಅದಕ್ಕೆ ಅವನು ಇವತ್ತೇ ಕೊನೆ ದಿನ ಅಷ್ಟೇ ಇಲ್ಲಿ ಶೂಟಿಂಗ್ ಮುಗಿಯಿತು ಎಂದು ಆಕಡೆ ಯಾರನ್ನೋ ಕರೆಯುತ್ತಿದ್ದ. ನಾನು ಮತ್ತೊಮ್ಮೆ ಅಣ್ಣ ಎಂದೆ. ಅದಕ್ಕವನು ಮತ್ತೇನು ಎಂದ. ಅಣ್ಣ ನಾನು ಸಿನೆಮಾದಲ್ಲಿ ನಟಿಸಬೇಕು ಎಂದೆ. ಅದಕ್ಕವನು ನನ್ನನ್ನು ಮೇಲಿಂದ ಕೆಳಕ್ಕೆ ಒಮ್ಮೆ ಕೆಟ್ಟದಾಗಿ ನೋಡಿ ನಕ್ಕು ಸುಮ್ಮನೆ ಮನೆಗೆ ಹೋಗು ಎಂದು ಹೊರಟು ಹೋದ. ಅಷ್ಟರಲ್ಲಿ ನನ್ನ ಹಿಂದಿನಿಂದ ಯಾರೋ ನನ್ನನ್ನು ತಟ್ಟಿ ಕರೆದಂತಾಯಿತು ಯಾರು ಎಂದು ತಿರುಗಿದರೆ ಅಪ್ಪ. ಅಪ್ಪ ಎಂದೆ ಅಷ್ಟೇ ಕೆನ್ನೆಗೆ ಎರಡು ಏಟು ಕೊಟ್ಟು ಮನೆಗೆ ಬರೋದು ಬಿಟ್ಟು ಇಲ್ಲಿ ಶೂಟಿಂಗ್ ನೋಡ್ತಾ ನಿಂತಿದ್ಯ. ನಡಿ ಮನೆಗೆ ಓದಿಲ್ಲ ಕಥೆಯಿಲ್ಲ ನಿನಗೆ ಸಿನೆಮಾ ಬೇಕಾ ಎಂದು ದರದರ ಎಳೆದುಕೊಂಡು ಮನೆಗೆ ಕರೆದುಕೊಂಡು ಬಂದರು.
ಮು೦ದುವರಿಯುವುದು.......
Comments
ಉ: ಕಥೆ - ಹರಿದ ಪುಸ್ತಕ ಭಾಗ ೧
In reply to ಉ: ಕಥೆ - ಹರಿದ ಪುಸ್ತಕ ಭಾಗ ೧ by kamath_kumble
ಉ: ಕಥೆ - ಹರಿದ ಪುಸ್ತಕ ಭಾಗ ೧
In reply to ಉ: ಕಥೆ - ಹರಿದ ಪುಸ್ತಕ ಭಾಗ ೧ by partha1059
ಉ: ಕಥೆ - ಹರಿದ ಪುಸ್ತಕ ಭಾಗ ೧
In reply to ಉ: ಕಥೆ - ಹರಿದ ಪುಸ್ತಕ ಭಾಗ ೧ by Jayanth Ramachar
ಉ: ಕಥೆ - ಹರಿದ ಪುಸ್ತಕ ಭಾಗ ೧
In reply to ಉ: ಕಥೆ - ಹರಿದ ಪುಸ್ತಕ ಭಾಗ ೧ by ಗಣೇಶ
ಉ: ಕಥೆ - ಹರಿದ ಪುಸ್ತಕ ಭಾಗ ೧
In reply to ಉ: ಕಥೆ - ಹರಿದ ಪುಸ್ತಕ ಭಾಗ ೧ by kamath_kumble
ಉ: ಕಥೆ - ಹರಿದ ಪುಸ್ತಕ ಭಾಗ ೧
ಉ: ಕಥೆ - ಹರಿದ ಪುಸ್ತಕ ಭಾಗ ೧
In reply to ಉ: ಕಥೆ - ಹರಿದ ಪುಸ್ತಕ ಭಾಗ ೧ by venkatb83
ಉ: ಕಥೆ - ಹರಿದ ಪುಸ್ತಕ ಭಾಗ ೧
ಉ: ಕಥೆ - ಹರಿದ ಪುಸ್ತಕ ಭಾಗ ೧