ಪ್ರಜಾಸತ್ತೆಯ ವಿವೇಕಾವಿವೇಕ!

ಪ್ರಜಾಸತ್ತೆಯ ವಿವೇಕಾವಿವೇಕ!

ಬರಹ

 ಶಾಸಕರೊಬ್ಬರು ಸಚಿವರನ್ನು ಸದನದಲ್ಲಿ ’ಅವಿವೇಕಿ’ ಎಂದು ಸಂಬೋಧಿಸಿದ್ದಾಗಿ, ಮಾಧ್ಯಮದಲ್ಲಿ ವರದಿಯಾಗಿದೆ.  Expunge ಆಗದೆ ಉಳಿದುಕೊಂಡಿದೆ ಎಂದಮೇಲೆ 'ಅವಿವೇಕಿ' ಶಬ್ದ ಅಸಂಸದಿಯವಲ್ಲವೆಂದಾಯಿತು. ಸಹಜವೇ; ಶಾಸಕರಾಗಲೀ ಸಚಿವ-ಸಂಸದರಾಗಲೀ ಮೂಲಭುತವಾಗಿ ರಾಜಕಾರಣಿಗಳು ತಾನೆ? ರಾಜಕಾರಣಕ್ಕೆ ವಿವೇಕಕ್ಕಿಂತಲೂ ಹೆಚ್ಚಾಗಿ ಬುದ್ಧಿ-ಕೌಶಲ - Cunningness ತಾನೇ ಬೇಕಾದದ್ದು?! 
ಹೇಳಿ-ಕೇಳಿ ವಿವೇಕಶಾಲಿತ್ವ ಸಾಮಾಜಿಕ ಮೌಲ್ಯದ ಗುಣ. ಆದರೆ ಪ್ರಚಲಿತ ರಾಜಕಾರಣದಲ್ಲಾದರೋ ಅದು ಗೌಣ ಎನ್ನುವುದು ಕಣ್ಣಿಗೆ ಕಾಣುವ ಸತ್ಯವೇ ಅಲ್ಲವೇ? ಅಲ್ಲವೆನ್ನುವುದಾದರೆ, ಸಂವಿಧಾನದ ಭಾವಾಶಯಗಳು, ಶ್ರಾದ್ಧ ನಿಯಮದಂತೆ ಕಾಟಾಚಾರವಾಗುತ್ತಿತ್ತೇ? ಕೃತಕ ಆಪರೇಷನ್ ಬಲದ ಸರಕಾರದ ಉಳಿಕೆಗಾಗಿ, ಸ್ಪೀಕರ್, ಬಂಡುಕೋರ ಶಾಸಕರನ್ನು ದಂಡೆತ್ತಿ ಓಡಿಸಲು ಸ್ಥಾನದತ್ತ ಅಧಿಕಾರ ಬಳಸುವ; ಎಡಬಿಡಂಗಿತನವನ್ನೇ ಮಾರಾಟದ ಸರಕುಮಾಡಿಕೊಂಡ ಶಾಸಕರು, ನ್ಯಾಯಾಂಗದಲ್ಲಿ ಸಂದರೂ ಶಾಸಕಾಂಗದ ಬಾವಿಯೊಳಗಿಂದ ವಟಗುಟ್ಟುವ; ಅಳಿಯನಲ್ಲದ, ಮಗಳ ಗಂಡ’ನ ರೂಪದ ಸರಕಾರವೂ ಕಾನೂನು ಪ್ರಕಾರ ಮಾನ್ಯವಾಗುವ ಪ್ರಹಸನಗಳನ್ನು ನೋಡುವುದು ಸಾಧ್ಯವಾಗುತ್ತಿತ್ತೇ?
ನ್ಯಾಯಾಂಗ, ಶಾಸಕಾಂಗದ ಕೆಲವೊಂದು ಪ್ರಕ್ರಿಯೆಗಳ ಸಂವಿಧಾನಿಕ ಅಥವಾ ಕಾಯ್ದೆ ಬಗೆಗಿನ ಸಿಂಧುತ್ವ, ಅಸಿಂಧುತ್ವವನ್ನು  ವ್ಯಾಖ್ಯಾನಿಸುವುದು, ಸಂಬಂಧಿತ ವ್ಯಕ್ತಿವಿಶೇಷಗಳ ಸಂಸ್ಕಾರ, ಆತ್ಮಸಾಕ್ಷಿ ಮತ್ತು ಸಮಾಜ ಪ್ರಜ್ಞೆಗಳಿಗೆ ನೀಡುವ Certificate ಆಗುವುದಿಲ್ಲ. ಸಭ್ಯ ಸಮಾಜದ ಮನುಷ್ಯರು, ಮನುಷ್ಯರಂತಿರುವುದಕ್ಕೆ ನ್ಯಾಯಾಲಯದಿಂದ ಹೇಳಿಸಿಕೊಳ್ಳುವುದಿಲ್ಲ. ಅಂಥಲ್ಲಿ, ಅಧಿಕಾರಕ್ಕಾಗಿ ತಲೆಗಳ ಸಂಖ್ಯೆಯಿದ್ದರೆ ಸಾಕು; ಅವುಗಳಲ್ಲಿ ಆತ್ಮವೇನೂ ಬೇಕಾಗಿಲ್ಲ ಎಂಬ ಆಡಳಿತರಂಗದ ಧೋರಣೆ ಮತ್ತು ಇಲ್ಲದ ಮನೆಯಲ್ಲಿ ಅದೇ ಭಿಕ್ಷೆ ಬೇಕೇಬೇಕೆಂದು ವರಾತ ಹತ್ತುವ ಭಿಕ್ಷುಕನಂತೆ, ’ನೈತಿಕ ಹೊಣೆಗಾರಿಕೆ’ಗಾಗಿ ಒತ್ತಾಯಿಸಿ, ಪ್ರತಿಪಕ್ಷಗಳು ಧರಣಿ ಹೂಡುವುದೂ ಸಮಾನವಾಗಿ ತಮಾಷೆ ಎನಿಸುತ್ತದೆ!
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet