ಟ್ಯಾಬ್ಲೆಟ್ ತಂದೀತು ನೋವು!

ಟ್ಯಾಬ್ಲೆಟ್ ತಂದೀತು ನೋವು!

ಟ್ಯಾಬ್ಲೆಟ್ ತಂದೀತು ನೋವು!
ಟ್ಯಾಬ್ಲೆಟ್ ಸಾಧನದ ಬಳಕೆಯನ್ನು ಮಾಡುವಾಗ,ಕುತ್ತಿಗೆ ನೋವು ತಂದುಕೊಳ್ಳುವ ಅಪಾಯ ಇದೆ.ಲ್ಯಾಪ್‌ಟಾಪ್‌ನ್ನು ತೊಡೆ ಮೇಲೆ ಇಟ್ಟು ಬಳಸುವಂತೆ,ಟ್ಯಾಬ್ಲೆಟನ್ನೂ ಬಳಸಿದರೆ,ಕುತ್ತಿಗೆ ನೋವು ಬಂದೀತು ಎನ್ನುವುದು,ಸಂಶೋಧಕರ ಎಚ್ಚರಿಕೆ.ಟ್ಯಾಬ್ಲೆಟ್‌ನ್ನು ಮೇಜಿನ ಮೇಲಿರಿಸಿ,ಓರೆಯಾಗಿಸಿ,ಅದರತ್ತ ದೃಷ್ಟಿ ಹರಿಸಿದರೆ,ಬಳಸುವವನ ಕುತ್ತಿಗೆಗೆ ಕ್ಷೇಮ ಎನ್ನುವುದು ಅವರು ಕಂಡುಕೊಂಡಿರುವ ಸತ್ಯ.ಟ್ಯಾಬ್ಲೆಟ್ ಬಳಸುವ ಹದಿನೈದು ಬಳಕೆದಾರರ ಅಧ್ಯಯನ ಮಾಡಿದಾಗ,ಅವರುಗಳು ಸಾಮಾನ್ಯವಾಗಿ ನಾಲ್ಕು ವಿಧಗಳಲ್ಲಿ ಟ್ಯಾಬ್ಲೆಟ್ ಹಿಡಿಯುವುದು ಕಂಡುಬಂತು.ಟ್ಯಾಬ್ಲೆಟನ್ನು ತೊಡೆ ಮೇಲಿಟ್ಟು ಬಳಸುವುದು,ಟ್ಯಾಬ್ಲೆಟ್‌ನ ಚೀಲದಲ್ಲಿಟ್ಟು ತೊಡೆ ಮೇಲಿರಿಸಿ ಬಳಸುವುದು ಕಂಡು ಬಂತು.ಇನ್ನು ಮೇಜಿನ ಮೇಲೆ ಟ್ಯಾಬ್ಲೆಟ್‌ನ ಚೀಲದಲ್ಲಿ ಓರೆಯಾಗಿರಿಸಿ,ಎರಡೂ ಕೈಯಿನಿಂದ ಅದರ ತೆರೆಯ ಮೇಲೆ ಕೆಲಸ ಮಾಡುವುದು ಮತ್ತು ಟ್ಯಾಬ್ಲೆಟ್‌ನ್ನು ಅದರ ಚೀಲದಲ್ಲಿ ಓರೆಯಾಗಿರಿಸಿ,ಅದರಲ್ಲಿ ಬರುತ್ತಿರುವು ವಿಡಿಯೋವನ್ನೋ,ಅಥವಾ ಬೇರೇನನ್ನೋ ನೋಡುವುದು ಇನ್ನು ಕೆಲವರು ಟ್ಯಾಬ್ಲೆಟ್ ಬಳಸುವ ಪರಿ.ಟ್ಯಾಬ್ಲೆಟ್‌ನ್ನು ಮೇಜಿನ ಮೇಲೆ ಬಹಳ ಓರೆಯಾಗಿಸಿರಿಸಿ,ಅದನ್ನು ಬಳಸುವುದು ಕುತ್ತಿಗೆಯ ಸ್ನಾಯುಗಳಿಗೆ ಕ್ಷೇಮ ಎನ್ನುವುದು ಸಂಶೋಧಕರ ಕಿವಿ ಮಾತು.ತೊಡೆಯ ಮೇಲಿರಿಸಿ,ಅದನ್ನು ಬಳಸಿದರೆ,ಕುತ್ತಿಗೆಯನ್ನು ಬಗ್ಗಿಸಿ,ಅದರತ್ತ ನೋಡಬೇಕಾದ್ದರಿಂದ,ಅದು ಕುತ್ತಿಗೆ ಸ್ನಾಯುಗಳಿಗೆ ಪ್ರಯಾಸವನ್ನು ನೀಡುತ್ತದೆ.ಮುಂದೆ ಇದರಿಂದ ಕುತ್ತಿಗೆ ನೋವು ಬರುವ ಸಾಧ್ಯತೆ ಹೆಚ್ಚು ಎನ್ನುವುದರಲ್ಲಿ ಅನುಮಾನ ಬೇಡ.
--------------------------------------------------
ಸಾಮಾಜಿಕ ಜಾಲತಾಣ:ಮಿಲಿಟರಿ ನಿಯಮ
ಫೇಸ್‌ಬುಕ್,ಅರ್ಕುಟ್  ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಭಾರತದ ಮಿಲಿಟರಿ ಅಧಿಕಾರಿಗಳ ಖಾತೆಗಳು ಸಕ್ರಿಯವಾಗಿವೆ.ಮಿಲಿಟರಿಯು ತನ್ನ ಅಧಿಕಾರಿ ಮತ್ತು ಸೈನಿಕರ ವೈಯುಕ್ತಿಕ ಖಾತೆಗಳನ್ನು ಈ ತಾಣಗಳಲ್ಲಿ ಹೊಂದುವುದಕ್ಕೆ ನಿಷೇಧ ಹೇರಿಲ್ಲವಾದರೂ,ಬಿಗಿಯಾದ ನಿಯಮಗಳನ್ನು ಅನುಷ್ಠಾನಕ್ಕೆ ತಂದಿದೆ.ಹಲವು ಅಧಿಕಾರಿಗಳ ಖಾತೆಗಳು ಹ್ಯಾಕ್ ಆದ ನಂತರ ಈ ನಿಯಮಗಳನ್ನು ಬಿಗಿಗೊಳಿಸಲಾಗಿದೆ.ದೇಶದ ರಕ್ಷಣೆಯ ಭಾರ ಹೊತ್ತ ಮಿಲಿಟರಿ,ಎಚ್ಚರಿಕೆ ವಹಿಸದಿದ್ದರೆ,ದೇಶದ ಭದ್ರತೆ ಅಪಾಯಕ್ಕೀಡಾಗಲೂ ಈ ಮಿಲಿಟರಿ ಅಧಿಕಾರಿಗಳ ಖಾತೆಗಳೂ ಬಳಕೆಯಾಗುವುದು ನಿಶ್ಚಿತ.ಅಧಿಕಾರಿಗಳು ತಮ್ಮ ಕೆಲಸದ ಬಗೆಗಿನ ವಿವರಗಳನ್ನು ನೀಡುವುದಾಗಲೀ,ಅದರ ಬಗ್ಗೆ ಚರ್ಚಿಸುವುದಕ್ಕಾಗಲೀ ನಿಷೇಧ ಇದೆ.ತಾವಿರುವ ಪ್ರದೇಶ,ಮಾಡುವ ಕೆಲಸ,ಕರ್ತವ್ಯದ ವಿವರಗಳು,ಮಿಲಿಟರಿಯ ಕೆಲಸ ಕಾರ್ಯಗಳು ಇವ್ಯಾವುದನ್ನೂ ಬಹಿರಂಗಗೊಳಿಸಬಾರದು ಎನ್ನುವ ನಿಯಮವಿದೆ.
----------------------------------------------------------
ಗೂಗಲ್ ಪ್ಲಸ್:ಎಳೆಯರಿಗೂ ತೆರೆದಿದೆ



ಗೂಗಲ್ ಪ್ಲಸ್ ಇದುವರೆಗೂ ಹದಿನೆಂಟು ವರ್ಷ ಮೀರಿದವರಿಗೆ ಮಾತ್ರಾ ತೆರೆದಿತ್ತು.ಇದೀಗ ಗೂಗಲ್ ಪ್ಲಸ್ ತನ್ನ ಬಳಕೆದಾರ ಹದಿಮೂರು ಮೀರಿದವರಾದರೆ ಸಾಕು ಎಂದು ತನ್ನ ನಿಯಮ ಸಡಿಲಿಸಿದೆ.ಫೇಸ್‌ಬುಕ್ ತಾಣವೂ ಹದಿಮೂರು ವರ್ಷ ಮೀರಿದವರಿಗೆ ಪ್ರವೇಶಾವಕಾಶ ನೀಡುತ್ತದೆ.ಹಾಗೆಂದು ಹದಿಮೂರಕ್ಕಿಂತ ಕೆಳಗಿನ ವಯಸ್ಸಿನವರು ಈ ತಾಣಗಳಲ್ಲಿ ಖಾತೆ ಹೊಂದಿಲ್ಲವೆಂದಲ್ಲ.ಹೆತ್ತವರ ಆಕ್ಷೇಪ ಇಲ್ಲವಾದರೆ,ಇನ್ನೂ ಎಳೆಯರು ಇಲ್ಲಿ ಖಾತೆ ಹೊಂದಿರುವುದು ಸಾಮಾನ್ಯ.ಇನ್ನು ಸುಳ್ಳು ವಿವರ ನೀಡಿ ಖಾತೆ ತೆರೆಯುವವರಂತೂ ಇದ್ದೇ ಇರುತ್ತಾರೆ.ಗೂಗಲ್ ಪ್ಲಸ್ ಎಳೆಯರನ್ನು ತನ್ನ ಸದಸ್ಯರಾಗಲು ಬಿಟ್ಟುಕೊಂಡಿದ್ದರೂ,ಅವರ ಖಾತೆಗಳ ಖಾಸಗಿತನದ ನಿಯಮಗಳನ್ನು ಬಿಗಿಯಾಗಿ ಪಾಲಿಸುತ್ತದೆ.ಅವರು ಬಯಸಿದ ವಿನ: ಇತರರು ಅವರ ಜತೆ ಪಟ್ಟಾಂಗ ಹೊಡಿಯಲು ಬಿಡದೆ,ಅಪರಿಚಿತರಿಂದ ಎಳೆಯರನ್ನು ರಕ್ಷಿಸುತ್ತದೆ.ಹಾಗೆಯೇ ಅವರ ಚಿತ್ರ,ವಿವರಗಳು ಅವರ ಖಾಸಗಿ ಗುಂಪಿನಿಂದ ಹೊರತಾದ ಇತರ ಜನರಿಗೆ ತಲುಪದು.ಎಳೆಯ ಸದಸ್ಯರು ಬಯಸಿದ ಹೊರತು ಅವರ ಜತೆ ಇತರರಿಗೆ ಯಾವ ರೀತಿಯೂ ವ್ಯವಹರಿಸಲು ಕಷ್ಟಸಾಧ್ಯವಾಗುವ ರೀತಿ,ನಿಯಮಗಳನ್ನು ವಿಧಿಸಿ ಗೂಗಲ್ ಪ್ಲಸ್ ಎಳೆಯರ ಶೋಷಣೆಯಾಗದಂತೆ ಎಚ್ಚರಿಕೆ ತೆಗೆದುಕೊಳ್ಳಲು ಹಿಂದೆ ಬಿದ್ದಿಲ್ಲ.
------------------------------------------
ಆಧಾರಕ್ಕೆ ಹೊಸ ಆಧಾರ
ಆಧಾರ್ ಎಂದೇ ಜನಪ್ರಿಯವಾಗಿರುವ ವಿಶಿಷ್ಟ ಗುರುತು ಸಂಖ್ಯೆ ಯೋಜನೆಯ ಬಗ್ಗೆ ಎದ್ದಿದ್ದ ಪ್ರಶ್ನಾರ್ಥಕ ಚಿಹ್ನೆಯೀಗ ಮಾಯವಾಗಿದೆ.ಬಹು ನಿರೀಕ್ಷೆಯೊಂದಿಗೆ ನಂದನ್ ನೀಲೇಕಣಿ ಸಾರಥ್ಯದೊಂದಿಗೆ ಆರಂಭವಾಗಿದ್ದ ಆಧಾರ್ ಯೋಜನೆಯು ಮುಂದುವರಿಯುತ್ತದೋ ಎನ್ನುವ ಬಗ್ಗೆ ಪ್ರಶ್ನೆಗಳೆದಿದ್ದುವು.ರಾಷ್ಟ್ರೀಯ ಜನಸಂಖ್ಯಾ ಯೋಜನೆ ಮತ್ತು ಆಧಾರ್ ಎರಡೂ ಯೋಜನೆಗಳು,ಭಾರತೀಯ ನಾಗರಿಕರಿಗೆ ತಮ್ಮ ಸಾಚಾತನ ಸಿದ್ಧಪಡಿಸಲು ಅವಕಾಶ ನೀಡುತ್ತಿದ್ದುವು.ಆಧಾರ್ ಯೋಜನೆಯು ಖಾಸಗಿಯವರಿಂದ ನಿರ್ವಹಿಸಲ್ಪಡುವುದರಿಂದ ಇದು ಭದ್ರತೆಯ ದೃಷ್ಟಿಯಿಂದ ಅಪಾಯಕಾರಿ ಎನ್ನುವ ವಾದ ಇತ್ತು.ಹಾಗಾಗಿ ಸಂಧಾನದ ಬಳಿಕ,ಆಧಾರ್ ತನ್ನ ನಿಯಮಗಳನ್ನು ಬಿಗಿಗೊಳಿಸಿ,ಅವಶ್ಯಕ ಭದ್ರತಾ ಕ್ರಮಗಳನ್ನು ಕೈಗೊಳ್ಳಲು ಒಪ್ಪಿದೆ.ಈಗ ಐದುಸಾವಿರದೆಂಟುನೂರು ಕೋಟಿ ರುಪಾಯಿಗಳ ನಿಧಿಯನ್ನು ಆಧಾರ್ ಯೋಜನೆಗೆ ಹೊಸದಾಗಿ ಒದಗಿಸಿ,ಮುಂದಿನ ವರ್ಷದ ವೇಳೆ ಇನ್ನೂ ನಲುವತ್ತು ಕೋಟಿ ಜನರಿಗೆ ಆಧಾರ್ ಯೋಜನೆಯಡಿ ಗುರುತಿಸಿ ಸಂಖ್ಯೆ ಒದಗಿಸಲು ಅವಕಾಶ ನೀಡಲು ಕೇಂದ್ರ ಮಂತ್ರಿ ಮಂಡಲ ಸಮ್ಮತಿಸಿದೆ.ಹದಿನಾರು ರಾಜ್ಯಗಳಲ್ಲಿ ಆಧಾರ್ ಸಕ್ರಿಯವಾಗಿರುತ್ತದೆ.ಇನ್ನುಳಿದ ರಾಜ್ಯಗಳಲ್ಲಿ ರಾಷ್ಟ್ರೀಯ ಜನಸಂಖ್ಯಾ ಯೋಜನೆಯು ಜನರ ವಿವರಗಳನ್ನು ಸಂಗ್ರಹಿಸಲಿದೆ.ಆಧಾರ್ ಯೋಜನೆಯ ಸಂಖ್ಯೆ ಪಡೆದವರು,ಅದನ್ನು ನೀಡಿ,ರಾಷ್ಟ್ರೀಯ ಜನಸಂಖ್ಯೆ ಯೋಜನೆಗೂ ಒಳಪಡಬೇಕಿದೆ.ಯಾಕೆಂದರೆ ಅದರಡಿ ದಾಖಲಾಗುವುದು ಭಾರತೀಯರಿಗೆ ಕಡ್ಡಾಯವಾಗಿದೆ.ಆಧಾರ್ ಯೋಜನಾ ಆಯೋಗದ ಅಡಿ ಬರುವ ಯೋಜನೆಯಾಗಿದೆ.ರಾಷ್ಟೀಯ ಜನಸಂಖ್ಯಾ ನೋಂದಣಿಯು ಗೃಹಖಾತೆಯ ಕೂಸು.ಆಧಾರ್ ಬೆರಳಚ್ಚು,ಕಣ್ಣಿನ ಐರಿಸ್ ಅನ್ನು ದಾಖಲಿಸುತ್ತದೆ.
-----------------------------------------------
ಟ್ವಿಟರ್‌ನಿಂದ ಸೆನ್ಸಾರ್‌ಗೆ ಅಸ್ತು,ಒಲ್ಲೆನೆಂದ ಗೂಗಲ್
ಗೂಗಲ್ ವ್ಯಕ್ತಿಸ್ವಾತಂತ್ರ್ಯವನ್ನು ಗೌರವಿಸುತ್ತದೆ.ಪ್ರತಿಯೋರ್ವನಿಗೂ ತನಗನಿಸಿದ್ದನ್ನು ವ್ಯಕ್ತ ಪಡಿಸಲು ಅಂತರ್ಜಾಲ ಮುಕ್ತವಿರಬೇಕು.ಹಾಗಾಗಿ ಅಂತರ್ಜಾಲದಲ್ಲಿ ಪ್ರಕಟವಾಗುವ ವಿಷಯಗಳನ್ನು ಮುಂದಾಗಿ ಪರಿಶೀಲಿಸಬೇಕು,ಅದನ್ನು ಶೋಧಿಸಿ ನಂತರವಷ್ಟೇ ಅದನ್ನು ಬಹಿರಂಗಗೊಳಿಸಬೇಕು ಎನ್ನುವ ಸರಕಾರ ಕಡೆಯಿಂದ ಬಂದಿರುವ ಹುಕುಂ ಅನ್ನು ಪಾಲಿಸಲು ಸಾಧ್ಯವಿಲ್ಲವೆಂದು ಸ್ಪಷ್ಟವಾಗಿ ಹೇಳಿದೆ.ಭಾರತದಲ್ಲಿ ಗೂಗಲ್ ಕಂಪೆನಿಯ ಅಧಿಕಾರಿ ನಿಕೇಶ್ ಅರೋರಾ ಇದನ್ನು ಟಿವಿ ಕಾರ್ಯಕ್ರಮದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.ಭಾರತ ಸರಕಾರವು ಗೂಗಲ್,ಫೇಸ್‌ಬುಕ್ ಸೇರಿದಂತೆ ಇಪ್ಪತ್ತೊಂದು ಸಾಮಾಜಿಕ ಜಾಲತಾಣಗಳು ಆಕ್ಷೇಪಾರ್ಹ ಮಾಹಿತಿಗಳನ್ನು ತಮ್ಮ ತಾಣದಲ್ಲಿ ಪ್ರಕಟಿಸುವುದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ಈ ಹೇಳಿಕೆ ಬಂದಿದೆ.ಸರಕಾರವು, ತಾನು ಬಯಸುವುದು ಸೆನ್ಸಾರ್ ಅಲ್ಲ,ಪ್ರಕಟವಾದ ಮಾಹಿತಿಗಳ ವಿರುದ್ಧ ಆಕ್ಷೇಪವಿದ್ದಾಗ,ಅವನ್ನು ಕಿತ್ತೆಸೆಯಲು ಅವಕಾಶ ಇರಬೇಕು ಎನ್ನುವ ವಿವರಣೆ ನೀಡಿದೆ.ಅಂತರ್ಜಾಲ ವಿರುದ್ಧ ನಿಯಂತ್ರಣ ಅಥವಾ ಅದನ್ನು ಸೆನ್ಸಾರ್‌ಗೊಳ ಪಡಿಸುವ ಉದ್ದೇಶ ತನಗಿಲ್ಲ ಎನ್ನುವ ಸಮಜಾಯಿಷಿಕೆ ನೀಡಿದೆ.
ಟ್ವಿಟರ್ ತಾಣ ಇದಕ್ಕೆ ತುಸು ವಿರುದ್ಧ ನಿಲುವು ಪ್ರಕಟಿಸಿ,ಬಳಕೆದಾರರ ಹುಬ್ಬೇರುವಂತೆ ಮಾಡಿದೆ.ಸದ್ಯ ನೂರು ದಶಲಕ್ಷ ಬಳಕೆದಾರರ ಕಣ್ಮಣಿಯಾಗಿರುವ ಟ್ವಿಟರ್,ತನ್ನ ತಾಣಗಳಲ್ಲಿ ಜನರು ಪ್ರಕಟಿಸಿದ ವಿಚಾರಗಳ ಬಗ್ಗೆ ಇತರರು ಆಕ್ಷೇಪ ವ್ಯಕ್ತಪಡಿಸಿದರೆ,ಅವನ್ನು ಆ ದೇಶದಲ್ಲಿ ಕಣ್ಮರೆಯಾಗಿಸಲು ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದೆ.ದೇಶವಾರು ನೆಲೆಯಲ್ಲಿ ಈ ಸೆನ್ಸಾರ್ ನಿಯಮಗಳನ್ನು ಅನುಷ್ಠಾನಕ್ಕೆ ತರಲು ಟ್ವಿಟರ್ ಒಲವು ತೋರಿದೆ.ನಿಜಕ್ಕಾದರೆ,ಗೂಗಲ್ ನೀತಿಯೂ ಹೀಗೆಯೇ ಇದ್ದು,ಅದೂ ಕೂಡಾ ಸಂದೇಶಗಳ ಬಂದಾಗ ಆಕ್ಷೇಪ ಬಂದಾಗ,ಇದೇ ರೀತಿ ವ್ಯವಹರಿಸುತ್ತದೆ.ಟ್ವಿಟರ್ ಸಂದೇಶಗಳ ಬಗ್ಗೆ ಆಕ್ಷೇಪ ಇದ್ದವರು chillingeffects.org  ತಾಣದ ಮೂಲಕ ಅದನ್ನು ಟ್ವಿಟರ್ ಗಮನಕ್ಕೆ ತರಬಹುದಾಗಿದೆ.
ನಿಷೇಧಿತ ತಾಣಗಳನ್ನು ಶೋಧದಲ್ಲಿ ಒಳಪಡಿಸದೆ,ಅವುಗಳ ಮಾಹಿತಿಯು ಪ್ರಸಾರವಾಗುವುದನ್ನು ತಡೆಯಲು,ಶೋಧ ಸೇವೆಗಳ ಮೇಲೀಗ ಒತ್ತಡ ಹೆಚ್ಚಿದೆ.ಲೈಸನ್ಸ್ ನಿಯಮ ಉಲ್ಲಂಘಿಸಿದ ಸಾಮಗ್ರಿ ಪಸರಿಸುವ ತಾಣಗಳ ಕ್ರಮಾಂಕ ಕೆಳಗಿರಿಸಿ,ಅವುಗಳ ಮೇಲೆ ಅಪರೋಕ್ಷ ನಿಯಂತ್ರಣ ಸಾಧಿಸುವ ಸಲಹೆಯೂ ಬಂದಿದೆ.

Udayavani 


ಅಶೋಕ್‌ಕುಮಾರ್ ಎ