ತಳ್ಳುಗಾಡಿಗಳನ್ನು ತಳ್ಳಿಯೇಬಿಟ್ಟರು!

ತಳ್ಳುಗಾಡಿಗಳನ್ನು ತಳ್ಳಿಯೇಬಿಟ್ಟರು!

ಬರಹ

ಬೆಳಿಗ್ಗೆ ಬೇಗನೇ ಏಳುವ ಅಭ್ಯಾಸವಿದ್ದವರು ಸುಮ್ಮನೆ ಬೆಂಗಳೂರಿನ ಬೀದಿಗಳಿಗೆ ಕಿವಿ ತೆರೆದಿಟ್ಟು ಕುಳಿತುಕೊಳ್ಳಿ. ಚಿತ್ರ ವಿಚಿತ್ರ ಸ್ವರ, ಸದ್ದುಗಳು ಬಂದು ಅಪ್ಪಳಿಸುತ್ತವೆ: ರಾತ್ರಿಯಿಡೀ ಕುಡಿದೂ ಕುಡಿದೂ ತೂರಾಡಿ ಎಗರಾಡಿ ಮಲಗಿದ್ದ ಆಚೆ ಮನೆಯವನು ಬೆಳಿಗ್ಗೆ ಗಂಟಲಲ್ಲಿ ಏನೋ ಸಿಕ್ಕಿ ಹಾಕಿಕೊಂಡವನಂತೆ `ಕ್ರ್ಯಾ...' ಎಂದು ಸರಿಪಡಿಸಿಕೊಳ್ಳುತ್ತಾ, ಕಂಡ ಕಂಡಲ್ಲಿ ಉಗಿಯುವ ಸದ್ದನ್ನು ಕೇಳಿಸಿಕೊಂಡರೆ ನಮ್ಮ ಮೈಮೇಲೇ ಉಗಿದುಬಿಟ್ಟನೇನೋ ಎಂಬಷ್ಟು ಜಿಗುಪ್ಸೆಯಾಗಿಬಿಡುತ್ತದೆ. ರಾತ್ರಿ ಜಗಳವಾಡಲು ಸಮಯವೇ ಸಿಗದ ಗಂಡ-ಹೆಂಡತಿ ಬೆಳಿಗ್ಗೆ ಎದ್ದೊಡನೆ ಸಹಸ್ರ ನಾಮಾವಳಿಗಳನ್ನು ಶುರು ಹಚ್ಚಿಕೊಳ್ಳುವುದನ್ನು ಕೇಳುವುದೂ ಒಮ್ಮೊಮ್ಮೆ ಖುಷಿಕೊಟ್ಟರೆ ಇನ್ನೂ ಕೆಲವೊಮ್ಮೆ ಕಿರಿಕಿರಿಯೋ ಕಿರಿಕಿರಿ. ಗಂಡ, ಹೆಂಡತಿಗೆ `ಲೋಫರ್‌' ಎಂದು ಬಯ್ಯುವುದೂ ಹೆಂಡತಿಯೂ `ನಾನಾ ಲೋಫರು? ನೀನು' ಎಂದು ಎದುರು ವಾದಿಸುವುದೂ ತಮಾಷೆಯ ಪರಾಕಾಷ್ಠೆ. ಕೆಲವೊಮ್ಮೆ ಆಚೆ ಮನೆಯವನು ಮತ್ತು ಈಚೆ ಮನೆಯವನು ವಿನಾಕಾರಣ ಕ್ಯಾತೆ ತೆಗೆದು ಬೆಂಗಳೂರಿನ ಶಬ್ದ ಭಂಡಾರದಲ್ಲಿರುವ ಬೈಗುಳಗಳನ್ನೆಲ್ಲ ಹರಾಜಿಗೆ ಹಾಕುವುದುಂಟು. ಇಷ್ಟಾಗಿಯೂ ಬೈಗುಳಗಳ ಹೊರತಾಗಿ ಅವರು ಮುಂದುವರಿಯುವುದಿಲ್ಲ ಎಂಬುದು ಗೊತ್ತಿದ್ದೋ ಏನೋ ಸದಾ ಜಗಳಾಡುವ ಈ ಇಬ್ಬರ ಹೆಂಡಂದಿರು ಅಚ್ಚರಿ ಹುಟ್ಟಿಸುವ ರೀತಿಯಲ್ಲಿ ತಮ್ಮಷ್ಟಕ್ಕೆ ತಾವು ಸುಮ್ಮನಿದ್ದುಬಿಡುತ್ತಾರೆ. ಈ ಬೈಗುಳಗಳೂ ವಿಚಿತ್ರವೇ. ಇವು ಮನಸ್ಸಿಗೆ ತಟ್ಟುವ ಬೈಗುಳಗಳಲ್ಲ. ಕಿವಿಗೆ ಅಪ್ಪಳಿಸುವ ಬೈಗುಳಗಳಷ್ಟೆ; ಆ ಮಗ, ಈ ಮಗ, ಕೊಚ್ಚೆ ನನ್ಮಗ, ಕಜ್ಜಿ, ಕಂತ್ರಿ ನಾಯಿ ನನ್ಮಗ, ಅಪ್ಪಾ ನನ್ಮಗ... ಹೀಗೆ. ಈ ಬೈಗುಳಗಳನ್ನು ಕೇಳಿಸಿಕೊಂಡ ಹಳ್ಳಿಯವರು `ಥೂ! ಅವ್ನ... ಬೈಯಾಕೂ ಬರಾಂಗಿಲ್ಲಲ್ಲೋ' ಎಂದು ಗೊಣಗಿದ್ದನ್ನು ನಾನು ಕೇಳಿದ್ದೇನೆ. ಇಷ್ಟಕ್ಕೂ ಇದು ನಿಜವೇ ಅಲ್ಲವೇ? ಮೇಲ್ಕಾಣಿಸಿದ ಒಂದಿಷ್ಟು ಬೈಗುಳಗಳ ಹೊರತಾಗಿ ಬೇರೆ ಯಾವುದಾದರೂ ಬೈಗುಳಗಳು ಬೆಂಗಳೂರಿನ ಶಬ್ದ ಭಂಡಾರದಲ್ಲಿದ್ದರೆ ಹೇಳಿ!

ಬೆಳ್ಳಂಬೆಳಿಗ್ಗೆ ಕಿವಿಗಪ್ಪಳಿಸುವ ಸದ್ದುಗಳ ಕುರಿತಾಗಿ ಹೇಳಲು ಹೋಗಿ ಏನೇನೋ ಹೇಳುತ್ತಿದ್ದೇನೆ. ಕ್ಷಮಿಸಿ. ಇವಿಷ್ಟರ ಹೊರತಾಗಿ ಕೆಲವು ಆಪ್ತವೆನಿಸುವ ಕೂಗಾಟಗಳು ನಿಮ್ಮ ಕಿವಿಯನ್ನು ತಲುಪಿರಬಹುದು. ಅದು ನಸುಕಿನಲ್ಲಿ ಬಂದು, ಬಾಗಿಲು ತಟ್ಟಿ ತನ್ನ ಮಟ್ಟಿಗೆ ಸಣ್ಣದು ಎಂದುಕೊಂಡರೂ ದೊಡ್ಡ ಸ್ವರದಲ್ಲೇ `ಹಾಲೂ' ಎನ್ನುವ ಹಾಲು ಮಾರುವಾತನ ಧ್ವನಿಯಿರಬಹುದು, ಪೇಪರ್‌ ಹಾಕುವ ಹುಡುಗ ರಸ್ತೆಯಲ್ಲೇ ನಿಂತುಕೊಂಡು ಅಖ್ತರ್‌ ಶೈಲಿಯಲ್ಲಿ ಬೀಸಿ ಒಗೆಯುವ ಪೇಪರ್‌ ಬಿದ್ದ ಸದ್ದಿರಬಹುದು, ಹೆಣ್ಣುಮಕ್ಕಳು ಎದ್ದತಕ್ಷಣ ಅವರಿಗೆ ಮಲ್ಲಿಗೆ ಕೊಟ್ಟು ಮುಖವನ್ನು ಇನ್ನಷ್ಟು ಅರಳಿಸಿಬಿಡೋಣ ಎಂಬ ಧಾವಂತದಲ್ಲಿ `ಹೂವಾ... ಮಲ್ಲಿಗೆ, ಕಾಕಡ... ಹೂವಾ' ಎಂದು ರಾಗವಾಗಿ ಕೂಗಿಕೊಂಡು ಬರುವ ಹೂವಮ್ಮನ ಸ್ವರವಿರಬಹುದು, `ಸೊಪ್ಪೋ...' ಎನ್ನುತ್ತಾ ಸೈಕಲ್‌ ತಳ್ಳಿಕೊಂಡು ಬರುವ ಸೊಪ್ಪಪ್ಪನ ಕೂಗಿರಬಹುದು, ತನ್ನ ಗಾಡಿಯಲ್ಲಿ ಇರುವ, ಇಲ್ಲದಿರುವ ತರಕಾರಿಗಳ ಹೆಸರುಗಳನ್ನೆಲ್ಲ ಕೂಗಿ ತಾನು ಹೋದಲ್ಲೆಲ್ಲ ಪುಟ್ಟ ಮಾರ್ಕೆಟ್‌ ಸೃಷ್ಟಿ ಮಾಡುವ ತಳ್ಳುಗಾಡಿಯವನ ಅರಚಾಟವಿರಬಹುದು, `ಏಲಕ್‌ ಬಾಳೆ' ಎನ್ನುತ್ತಾ ಬರುವ ಬಾಳೆಹಣ್ಣನ ವ್ಯಾಪಾರಿಯಿರಬಹುದು, `ಎಳ್‌ನೀರ್‌' ಎನ್ನುತ್ತಾ ಮಚ್ಚು ಹಿಡಿದೇ ಬರುವ ಎಳನೀರು ವ್ಯಾಪಾರಿಯ ಕರೆಯಿರಬಹುದು... ಎಲ್ಲವೂ ನಿಮ್ಮ ಸುಖನಿದ್ದೆಗೆ ಭಂಗ ತಂದರೂ, ತುತ್ತು ಅನ್ನಕ್ಕಾಗಿ ನಮ್ಮಂತೆಯೇ ಅವರು ಕಷ್ಟಪಡುತ್ತಿದ್ದಾರೆ ಎಂತಲೇ ಆ ಕೂಗಾಟ, ಅರಚಾಟ, ಕಿರುಚಾಟಗಳನ್ನೆಲ್ಲ ಮನಸ್ಸು ಮುಕ್ತವಾಗಿ ಸ್ವೀಕರಿಸಿಬಿಡುತ್ತೆ.

ಬೆಂಗಳೂರಿನಲ್ಲಿ ಇಂಥ ಆಪ್ತವೆನಿಸುವ ಕೂಗಾಟಗಳು ಇನ್ಮುಂದೆ ಕಡಿಮೆಯಾಗಲಿವೆಯೇನೋ ಎಂಬ ಯೋಚನೆ ಈಗ ಕಾಡಲು ಶುರುವಾಗಿದೆ. ಕಾರಣವಿಷ್ಟೆ: ತಳ್ಳುಗಾಡಿಗಳು ಮಾಡುವ ವ್ಯಾಪಾರ, ವ್ಯವಹಾರಗಳನ್ನು ದೊಡ್ಡ ದೊಡ್ಡ ಕಂಪೆನಿಗಳು ಮಾಡಹೊರಟಿವೆ. ಮೆಟ್ರೋ ಬಂದು ಸಗಟು ವ್ಯಾಪಾರಿಗಳು ಕಂಗಾಲಾದರು, ದೊಡ್ಡ ದೊಡ್ಡ ಮಾಲ್‌ಗಳು ಬಂದು ಸಣ್ಣಪುಟ್ಟ ಅಂಗಡಿಗಳವರು ಆತಂಕಕ್ಕೊಳಗಾದರು. ಈಗ ತಳ್ಳುಗಾಡಿ ವ್ಯವಹಾರಗಳ ಮೇಲೂ ಕಂಪೆನಿಗಳ ವಕ್ರದೃಷ್ಟಿ ಬಿದ್ದಿದೆ. ರಿಲಾಯನ್ಸ್‌, ಸ್ಪೆನ್ಸರ್‌, ಹೆರಿಟೇಜ್‌ನಂಥ ಕಂಪೆನಿಗಳು ತಾಜಾ ತರಕಾರಿಗಳನ್ನು ತಳ್ಳುಗಾಡಿಗಳಿಗಿಂತಲೂ ಕಡಿಮೆ ಬೆಲೆಯಲ್ಲಿ ಕೊಡುತ್ತೇವೆ ಎಂದು ಪ್ರಕಟಿಸುವ ಮೂಲಕ ಇಂಥ ಗಾಡಿವಾಲಾಗಳ ನಿದ್ದೆಗೆಡಿಸಿದ್ದಾರೆ. ಪ್ರತಿಯೊಂದು ಕಂಪೆನಿಗೂ ಬೆಂಗಳೂರಿನಲ್ಲಿ ನೂರಾರು ಮಳಿಗೆಗಳನ್ನು ತೆರೆಯುವ ಯೋಚನೆಯಿದೆಯಂತೆ. ತಳ್ಳುಗಾಡಿಯವರೂ ಬೇಕಾದರೆ ಇಲ್ಲಿಂದಲೇ ಖರೀದಿ ಮಾಡಬಹುದಂತೆ. ಮಳಿಗೆಗಳು ಆರಂಭವಾದಾಗಿನಿಂದ ಕಾಲಿಡಲೂ ಆಗದಷ್ಟು ಗ್ರಾಹಕರಿಂದ ತುಂಬಿ ತುಳುಕುತ್ತಿದೆಯಂತೆ.... ಇಂಥ ಅಂತೆ ಕಂತೆಗಳ ಬೊಂತೆಯ ವರದಿಗಳನ್ನೇ ಮಾಧ್ಯಮಗಳು ಉತ್ಸಾಹದಿಂದ ಪ್ರಕಟಿಸುತ್ತಿವೆ.

ಈ ಮಳಿಗೆಗಳ ಒಂದು ಕ್ರಮವನ್ನು ನೀವು ಗಮನಿಸಿರಬಹುದು. ಉದಾಹರಣೆಗೆ ಟೊಮ್ಯಾಟೋ ಹೆಸರಿನ ಮುಂದೆ ಅದರ ಬೆಲೆ 3.75 ಎಂದಿದ್ದರೆ, ಆ ಪೈಸೆಯ ಮುಂದೊಂದು * ಗುರುತಿರುತ್ತದೆ. ಅದು `ಷರತ್ತುಗಳು ಅನ್ವಯಿಸುತ್ತವೆ' ಎಂಬುದರ ಗುರುತು ಎನ್ನುವುದು ನಿಮಗೂ ಗೊತ್ತು. ಈ ಷರತ್ತುಗಳೇನು? ನೀವು ಅದರ ಮೇಲೆ ಪ್ರತ್ಯೇಕ ಟ್ಯಾಕ್ಸ್‌ ಕೊಡಬೇಕು ಅಂತಿರಬಹುದು ಅಥವಾ ಹತ್ತತ್ತು ಕೆಜಿ ತೆಗೆದುಕೊಂಡರೆ ಮಾತ್ರ ಆ ಬೆಲೆಯಲ್ಲಿ ಕೊಡಲಾಗುವುದು ಅಂತಲೂ ಇರಬಹುದು ಅಥವಾ ಜಾಹೀರಾತಿನಲ್ಲಿ ತೋರಿಸಿರುವ ಪ್ರಾಡಕ್ಟಿಗೂ ಮಳಿಗೆಯಲ್ಲಿರುವ ಪ್ರಾಡಕ್ಟಿಗೂ ತಾಳೆಯಾಗದಿರಬಹುದು ಎಂತಲೂ ಇರಬಹುದು. ಒಟ್ಟಿನಲ್ಲಿ ಷರತ್ತುಗಳೆಲ್ಲ ಸೇರಿ ಟೊಮ್ಯಾಟೋ ಬೆಲೆ ಕೇಳಿದರೆ ನಿನ್ನೆ ಜಗಳವಾಡಿದ ತಳ್ಳುಗಾಡಿಯವನ ಮೇಲೆ ನಿಮಗೆ ಭಯಂಕರ ಪ್ರೀತಿ ಹುಟ್ಟಿಬಿಡುತ್ತದೆ. ಏಕೆಂದರೆ, ಅವನು ತನ್ನ ಗಾಡಿಯಲ್ಲಿ ಎಲ್ಲೂ `ಷರತ್ತುಗಳು ಅನ್ವಯಿಸುತ್ತವೆ' ಎಂಬ * ಅಂಟಿಸಿಕೊಂಡಿರುವುದಿಲ್ಲ. ಏನಿದ್ದರೂ ಅವನದ್ದು `ಸ್ಟ್ರೈಟ್‌' ವ್ಯವಹಾರ. ಚೌಕಾಶಿ ಮಾಡಿದರೆ ಬೇಕಾದರೆ ಒಂದೆರಡು ರೂಪಾಯಿ ಇಳಿಸಬಲ್ಲನೇ ಹೊರತು, ತೆರಿಗೆ ಅಂತ ಎರಡು ರೂಪಾಯಿ ನಿಮ್ಮಿಂದ ಕಕ್ಕಿಸುವುದಿಲ್ಲ.

ಇಷ್ಟಾಗಿಯೂ `ಪ್ರತಿಷ್ಠೆ' ಎಂಬ ಅಘೋಷಿತ ಭ್ರಮೆಯೊಳಗೆ ಮುಳುಗಿರುವ ಬೆಂಗಳೂರಿಗರಿಗೆ ತಳ್ಳುಗಾಡಿಯವನ ಜೊತೆಗಿನ ವ್ಯಾಪಾರ ವ್ಯವಹಾರ ಎಷ್ಟೆಂದರೂ `ನಮ್ಮಂಥವರಿಗಲ್ಲ.' ಹಾಗಾಗಿ ಕೈಚೀಲ ಹಿಡಿದುಕೊಂಡು ರಿಲಾಯನ್ಸ್‌, ಸ್ಪೆನ್ಸರ್‌ನಂಥ ತರಕಾರಿ ಮಳಿಗೆಗಳನ್ನು ಅರಸಿಕೊಂಡು, ಗಾಡಿಗೊಂದಿಷ್ಟು ಪೆಟ್ರೋಲ್‌ ತುಂಬಿಸಿಕೊಂಡು ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ.

***

ಬಡವರ ಹೊಟ್ಟೆ ಮೇಲೆ ತಣ್ಣೀರ ಬಟ್ಟೆ ಎಂದರೆ ಇದೇ ಇರಬಹುದು. ಒಂದೆಡೆ ಸರ್ಕಾರ, ಇನ್ನೊಂದೆಡೆ ಇಂಥ ಬಹುರಾಷ್ಟ್ರೀಯ ಕಂಪೆನಿಗಳು ಬಡ, ಮಧ್ಯಮ ವರ್ಗದವರ ಮೇಲೆ ಪ್ರಹಾರ ನಡೆಸುತ್ತಲೇ ಇವೆ. ಇವನ್ನೆಲ್ಲ ಸಹಿಸಿಕೊಂಡೂ ಬೆಂಗಳೂರಿನಲ್ಲಿ ತೃಪ್ತಿಯ ಜೀವನ ನಡೆಸುವ ಬಡವರು, ಮಧ್ಯಮ ವರ್ಗದವರು ನಿಜವಾದ ಶ್ರಮಿಕರು; ನಿಜ ನಾಗರಿಕರು.
ಏನಂತೀರಿ?

-ಸುರೇಶ್ ಕೆ.