(ಕಥೆ) ನಿಧಿ = ವಿಧಿ
ನನ್ನೆದುರಿಗೆ ಸಚಿನ್ ನಿಂತಿದ್ದಾನೆ. ಸಚಿನ್ ಕೈಯಲ್ಲಿ ಮೊನಚಾದ ಆಯುಧ ಒಂದಿದೆ.
ಆಯುಧ ರಕ್ತದಲ್ಲಿ ನೆಂದು ಆಯುಧದ ತುದಿಯಿಂದ ರಕ್ತ ತೊಟ್ಟಿಕ್ಕುತ್ತಿದೆ.
ಎದುರಿನಲ್ಲಿ ಸೌರವ್ ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ.
ಸಚಿನ್ ನ ಮುಖ ಕೋಪದಿಂದ ಕೆಂಪಾಗಿದೆ. ಅವನು ಹಾಕಿದ್ದ ಶರ್ಟ್ ಎಲ್ಲ ರಕ್ತದ ಕಲೆಗಳಾಗಿದೆ.
ಆಯುಧ ಹಿಡಿದು ಸಚಿನ್ ನನ್ನೆಡೆಗೆ ಬರುತ್ತಿದ್ದಾನೆ....
------------------------------
ಸಚಿನ್, ಸೌರವ್ ಮತ್ತು ನಾನು ಅಂದರೆ ರಾಹುಲ್ ಮೂವರು ಬಾಲ್ಯ ಸ್ನೇಹಿತರು. ಎಲ್ಲೇ ಹೋದರು ಮೂವರೂ ಕಲೆತು ಹೋಗುತ್ತಿದ್ದೆವು. ಮೂವರಲ್ಲೂ ಯಾವುದೇ ಮುಚ್ಚು ಮರೆ ಇರಲಿಲ್ಲ. ಸೌರವ್ ಮತ್ತು ನಾನು ಸಾಫ್ಟ್ವೇರ್ ಕಂಪನಿ ಒಂದರಲ್ಲಿ ನೌಕರಿ ನಿರ್ವಹಿಸುತ್ತಿದ್ದರೆ ಸಚಿನ್ ಪ್ರಾಚ್ಯ ವಸ್ತು ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ. ನಾವು ಮೂವರೂ ಒಬ್ಬರನ್ನು ಬಿಟ್ಟು ಒಬ್ಬರು ಅಗಲಿ ಇರುತ್ತಿರಲಿಲ್ಲ. ನಾವು ಸ್ಕೂಲ್ ಮುಗಿಸಿ ಒಂದೇ ಕಾಲೇಜ್ ಗೆ ಅಪ್ಲೈ ಮಾಡಿದ್ವಿ. ಆದರೆ ಸಚಿನ್ ಗೆ ಒಬ್ಬನಿಗೆ ಸೀಟ್ ಸಿಕ್ಕಿರಲಿಲ್ಲ. ಅದರಿಂದ ಮನ ನೊಂದ ನಾವಿಬ್ಬರೂ ಆ ಕಾಲೇಜ್ ಗೆ ಸೇರಲಿಲ್ಲ. ನಂತರ ಮೂವರೂ ಒಂದೇ ಕಾಲೇಜ್ ಸೇರಿದೆವು. ಕಾಲೇಜ್ ಮುಗಿಸಿದ ಮೇಲೆ ನಾನು ಮತ್ತು ಸಾಫ್ಟ್ವೇರ್ ಕಡೆ ಆಸಕ್ತಿ ವಹಿಸಿದರೆ ಸಚಿನ್ ಗೆ ಸಾಫ್ಟ್ವೇರ್ ನಲ್ಲಿ ಆಸಕ್ತಿ ಇರಲಿಲ್ಲ. ಕೇಳಿದರೆ ಲೇ ಯಾವನಿಗೆ ಬೇಕು ಆ ಕೆಲಸ, ಬೆಳಗಿನಿಂದ ರಾತ್ರಿವರೆಗೂ ಆ ಕಂಪ್ಯೂಟರ್ ಮುಂದೆ ಕೂತು ಒದ್ದಾಡುವುದು ನನಗೆ ಇಷ್ಟವಿಲ್ಲ. ಇದೊಂದು ವಿಷಯದಲ್ಲಿ ನನ್ನನ್ನು ಬಲವಂತ ಮಾಡಬೇಡಿ ಎಂದು ಹೇಳಿದ. ಮೊಟ್ಟ ಮೊದಲ ಬಾರಿಗೆ ನಮ್ಮ ಆಯ್ಕೆಗಳು ಬೇರೆಯಾದವು. ನಾನು ಮತ್ತು ಸೌರವ್ ಒಂದೇ ಕಂಪನಿ ಗೆ ಸೇರಿದೆವು. ಸಚಿನ್ ತನ್ನ ತಂದೆಯ ಶಿಫಾರಸಿನಿಂದ ಪ್ರಾಚ್ಯ ವಸ್ತು ಇಲಾಖೆಯಲ್ಲಿ ಕೆಲಸ ಗಿಟ್ಟಿಸಿದ.
ಮೊದಮೊದಲು ದಿನಾಲು ತಪ್ಪದೆ ನಡೆಯುತ್ತಿದ್ದ ನಮ್ಮ ಭೇಟಿ ಕ್ರಮೇಣ ಎರಡು ದಿನಕ್ಕೊಮ್ಮೆ, ಮೂರು ದಿನಕ್ಕೊಮ್ಮೆ ಕಡೆಗೆ ವಾರಾಂತ್ಯದಲ್ಲಿ ಭೇಟಿ ಮಾಡುವುದು ಆಗಿತ್ತು. ವಾರಾಂತ್ಯದಲ್ಲಿ ಮೂವರೂ ಕಲೆತು ಬೇರೆ ಬೇರೆ ಊರುಗಳನ್ನು ಸುತ್ತುತ್ತಿದ್ದೆವು. ಒಮ್ಮೊಮ್ಮೆ ಸಚಿನ್ ಕೆಲಸದ ಮೇಲೆ ಬೇರೆ ಬೇರೆ ಊರುಗಳನ್ನು ಸುತ್ತುತ್ತಿದ್ದ ಆಗ ನಾನು ಮತ್ತು ಸೌರವ್ ಮಾತ್ರ ಆಚೆ ಹೋಗುತ್ತಿದ್ದೆವು.
ಅಂದು ಗುರುವಾರ, ರಾತ್ರಿ ಹತ್ತು ಗಂಟೆ ಆಗಿತ್ತು. ನಾನು ಆಗಷ್ಟೇ ಆಫೀಸಿನಿಂದ ಮನೆಗೆ ಬಂದು ಊಟ ಮಾಡಿ ಟಿ ವಿ ನೋಡುತ್ತಾ ಕುಳಿತಿದ್ದೆ. ನನ್ನ ಮೊಬೈಲ್ ರಿಂಗಣಿಸಿತು. ನೋಡಿದರೆ ಸಚಿನ್ ಎಂದು ತೋರಿಸುತ್ತಿತ್ತು. ಈ ಸಮಯದಲ್ಲಿ ನಾವು ಕರೆ ಮಾಡಿಕೊಳ್ಳುವುದು ಬಹಳ ಕಡಿಮೆ. ಏನಾದರೂ ತುರ್ತು ಕೆಲಸವಿದ್ದರೆ ಮಾತ್ರ ಕರೆ ಮಾಡುತ್ತಿದ್ದೆವು. ಇದೇನಪ್ಪ ಇಷ್ಟೊತ್ತಿನಲ್ಲಿ ಎಂದುಕೊಂಡು ಹಲೋ ಎಂದೇ. ರಾಹುಲ್ ಎಲ್ಲಿದ್ಯ ಎಂದ. ನಾನು ಮನೇಲಿ ಇದ್ದೀನಿ ಅಂದೆ. ಈ ವಾರಾಂತ್ಯ ಎಲ್ಲಿ ಪ್ಲಾನ್ ಮಾಡಿದ್ದೀರಾ ಎಂದು ಕೇಳಿದ. ಸೌರವ್ ಹೇಳುತ್ತಿದ್ದ ಅವರ ಹಳ್ಳಿಗೆ ಹೋಗೋಣ ಎಂದು. ನಾಳೆ ನಾನೇ ನಿನಗೆ ಫೋನ್ ಮಾಡೋಣ ಎಂದುಕೊಂಡಿದ್ದೆ. ಹೋಗಲಿ ಬಿಡು ನೀನೆ ಮಾಡಿದ್ಯಲ್ಲ. ಬರ್ತಾ ಇದ್ಯಾ ತಾನೇ ಎಂದೇ. ನೋಡು ಬೇಕಾದರೆ ಮುಂದಿನ ವಾರ ಸೌರವ್ ಅವರ ಹಳ್ಳಿಗೆ ಹೋಗೋಣ. ಈ ಬಾರಿ ನನ್ನ ಜೊತೆ ಬನ್ನಿ. ಈ ವೀಕೆಂಡ್ ನನಗೊಂದು ಕೆಲಸ ಬಂದಿದೆ. ಜಲಗೆರಹಳ್ಳಿ ಎಂಬ ಒಂದು ಊರಿಗೆ ಹೋಗಬೇಕು. ಬರ್ತೀರಾ ಎಂದು ಕೇಳಿದ. ನಾನು ಅಯ್ಯೋ ಹೋಗಪ್ಪ ನಿನ್ನ ಪಾಡಿಗೆ ನೀನು ಕೆಲಸದಲ್ಲಿ ಇರ್ತೀಯ ನಾವು ಏನ್ ಮಾಡಬೇಕು ಬರಲ್ಲ ಎಂದೆ. ಅದಕ್ಕವನು ಲೋ ನನ್ನ ಕೆಲಸ ಬರೀ ಅರ್ಧ ದಿವಸ ಅಷ್ಟೇ ಅದಾದ ಮೇಲೆ ನಿಮ್ಮ ಜೊತೆಯೇ ಇರುತ್ತೇನೆ. ಅದು ಅಲ್ಲದೆ ಅಲ್ಲೊಂದು ಸುಂದರ ಕೋಟೆ ಇದೆ ಕಣೋ. ಒಳ್ಳೆ ಟೈಮ್ ಪಾಸ್ ಆಗುತ್ತದೆ. ಅದೂ ಅಲ್ಲದೆ ಈ ಸಲ ನಾನು ಹೋಗುತ್ತಿರುವ ಕೆಲಸ ಬಹು ಮುಖ್ಯವಾದದ್ದು. ಅದರ ಬಗ್ಗೆ ನಿನಗೆ ಆಮೇಲೆ ಹೇಳುತ್ತೇನೆ. ಶುಕ್ರವಾರ ಅಂದರೆ ನಾಳೆ ರಾತ್ರಿ ಹೊರಡೋಣ. ಸೌರವ್ ಗೆ ನಾನೇ ಫೋನ್ ಮಾಡುತ್ತೇನೆ ಎಂದು ಹೇಳಿ ಕಟ್ ಮಾಡಿದ.
ಮಾರನೆ ದಿವಸ ರಾತ್ರಿ ಹತ್ತು ಗಂಟೆ ಹೊತ್ತಿಗೆ ಸೌರವ್ ನನ್ನು ಕರೆದುಕೊಂಡು ಸಚಿನ್ ಕಾರ್ ಡ್ರೈವ್ ಮಾಡಿಕೊಂಡು ಮನೆ ಬಳಿ ಬಂದ. ನಾನು ಇದೇನಪ್ಪ ಆಫೀಸ್ ಕೆಲಸಕ್ಕೆ ನಿನ್ನ ಸ್ವಂತ ಕಾರ್ ತರ್ತಾ ಇದ್ದೀಯ ಏನಪ್ಪಾ ವಿಷಯ ಎಂದೆ. ಏನೂ ಇಲ್ಲ ಮೊದಲು ಗಾಡಿ ಹತ್ತು ಎಂದು ಗಾಡಿ ಶುರು ಮಾಡಿದ. ಸ್ವಲ್ಪ ಹೊತ್ತು ಅದೂ ಇದೂ ಹರಟುತ್ತಿದ್ದೆವು. ನಂತರ ನಾನು ಕೇಳಿದೆ ಏನೋ ಸಚಿನ್ ಏನೋ ಬಹು ಮುಖ್ಯವಾದ ಕೆಲಸ ಅಂತ ಹೇಳ್ತಾ ಇದ್ದೆ. ಒಹ್ ಅದಾ ಬೆಳಿಗ್ಗೆ ಅಲ್ಲಿ ಹೋದ ಮೇಲೆ ಹೇಳುತ್ತೇನೆ ಎಂದ. ನಾನು ಸರಿನಪ್ಪ ನನಗೆ ನಿದ್ದೆ ಬರ್ತಾ ಇದೆ ನಾನು ಮಲಗುತ್ತೇನೆ ಎಂದು ಮಲಗಿದೆ. ಸೌರವ್ ಹಾಗೂ ಸಚಿನ್ ಮಾತಾಡುತ್ತಲೇ ಇದ್ದರು. ನಾನು ಕಣ್ಣು ಬಿಡುವಷ್ಟರಲ್ಲಿ ಬೆಳಕು ಹರಿದಿತ್ತು. ಕಾರು ಯಾವುದೋ ಒಂದು ಮರದ ಕೆಳಗೆ ನಿಂತಿತ್ತು. ಇವರಿಬ್ಬರೂ ಕಾಣಲಿಲ್ಲ. ನಾನು ಕಾರಿನಿಂದ ಕೆಳಗಿಳಿದು ನೀರಿನ ಬಾಟಲಿನಿಂದ ಮುಖ ತೊಳೆದು ಸುತ್ತಲೂ ನೋಡುತ್ತಿದ್ದೆ. ಯಾವುದೋ ಹಳ್ಳಿಯ ಹಾಗೆ ಕಾಣುತ್ತಿತ್ತು. ದೂರದಲ್ಲಿ ಸಚಿನ್ ಹಾಗೂ ಸೌರವ್ ನಡೆದು ಬರುತ್ತಿದ್ದರು. ಏನಪ್ಪಾ ಜೋರು ನಿದ್ದೆ ಆಯ್ತಾ ಎಂದ ಸಚಿನ್. ಆಯ್ತಪ್ಪ ಈಗ ಎಲ್ಲಿ ಇಳಿದುಕೊಳ್ಳುವುದು, ತಿಂಡಿ ಎಲ್ಲಿ ತಿನ್ನುವುದು, ನಂತರದ ಕೆಲಸವೇನು ಎಂದು ಒಂದಾದ ಮೇಲೆ ಒಂದು ಪ್ರಶ್ನೆಯನ್ನು ಎಸೆದೆ. ಮಹಾಪ್ರಭುಗಳೇ ಎಲ್ಲ ವ್ಯವಸ್ಥೆಯನ್ನು ಮಾಡಿದ್ದೇವೆ ಬನ್ನಿ ಎಂದು ಕರೆದುಕೊಂಡು ಹಳ್ಳಿಯ ಆಚೆ ಬಂದು ರಸ್ತೆಯ ಪಕ್ಕದಲ್ಲಿದ್ದ ಹೋಟೆಲ್ ಒಂದರ ಮುಂದೆ ನಿಲ್ಲಿಸಿದ. ಇಲ್ಲೇ ಇಳಿದುಕೊಳ್ಳುವುದು, ಸ್ನಾನ ತಿಂಡಿ ಎಲ್ಲ ಮುಗಿದ ಮೇಲೆ ಕೋಟೆಯ ಬಳಿ ಹೋಗೋಣ ಎಂದ.
ಸ್ನಾನ ತಿಂಡಿ ಎಲ್ಲ ಮುಗಿಸಿ ಕಾರನ್ನೇರಿ ಕೋಟೆಯ ಬಳಿ ಬಂದೆವು. ಅದೊಂದು ಅದ್ಭುತ ಕೋಟೆ. ಸಚಿನ್ ಹೇಳಿಕೆಯ ಪ್ರಕಾರ ಆ ಕೋಟೆ ಸುಮಾರು ಆರುನೂರು ವರ್ಷಗಳ ಹಿಂದಿನದು. ಆಗಿನ ಕಾಲದ ರಾಜನಾಗಿದ್ದ ರಾಜ ಶೂರಸಿಂಹ ಆಳುತ್ತಿದ್ದ ಕಾಲದ ಕೋಟೆ ಅದು. ಅವನಿಗೆ ಸಂತಾನವಿರದಿದ್ದ ಕಾರಣ ಅವನ ಸಾವಿನ ನಂತರ ಯಾರೊಬ್ಬರೂ ಆ ಕೋಟೆಯ ನಿರ್ವಹಣೆ ತೆಗೆದುಕೊಳ್ಳಲಿಲ್ಲ. ಅಂದಿನಿಂದ ಆ ಕೋಟೆ ಶಿಥಿಲಗೊಳ್ಳುತ್ತ ಬಂದಿದೆ. ಸರ್ಕಾರದವರೂ ಇದರ ಬಗ್ಗೆ ಕಾಳಜಿ ವಹಿಸಲಿಲ್ಲ. ಈ ಪಕ್ಕದ ಹಳ್ಳಿಯ ಜನ ಈ ಕೋಟೆಯಲ್ಲಿ ದೆವ್ವ ಭೂತಗಳಿದೆಯೆಂದು ಯಾರೊಬ್ಬರೂ ಈ ಕೋಟೆಯ ಕಡೆ ಬರುವುದಿಲ್ಲ ಎಂದು ಹೇಳಿದ. ತಕ್ಷಣ ನಾನು ಮತ್ತೆ ನೀನ್ಯಾಕೆ ನಮ್ಮನ್ನು ಇಲ್ಲಿಗೆ ಕರೆದುಕೊಂಡು ಬಂದೆ. ದೆವ್ವಗಳ ಜೊತೆ ಏನಾದರೂ ಮೀಟಿಂಗ್ ಇದೆಯಾ ಎಂದು ಕೇಳಿದೆ. ಅದಕ್ಕವನು ನೋಡ್ರೋ ನಾನು ನಿಮಗೆ ಒಂದು ಸುಳ್ಳು ಹೇಳಿದ್ದೇನೆ ಎಂದ. ನಾನು ಮತ್ತು ಸೌರವ್ ಒಬ್ಬರ ಮುಖ ಒಬ್ಬರು ನೋಡಿಕೊಂಡು ಸಚಿನ್ ಕಡೆ ತಿರುಗಿ ಇಬ್ಬರೂ ಒಟ್ಟಿಗೆ ಏನದು ಎಂದು ಕೇಳಿದೆವು. ಅದಕ್ಕೆ ಸಚಿನ್ ನನ್ನ ಜೊತೆ ಬನ್ನಿ ಬಂದು ಕೋಟೆಯ ಕೆಳಭಾಗಕ್ಕೆ ಕರೆದುಕೊಂಡು ಹೋದ. ಅಲ್ಲಿ ಕಾರ್ಗತ್ತಲು ತುಂಬಿತ್ತು. ಸಚಿನ್ ಗೆ ಮೊದಲೇ ಇದರ ಅರಿವಿತ್ತೇನೋ ಎನ್ನುವ ಹಾಗೆ ತನ್ನ ಜೇಬಿನಿಂದ ಟಾರ್ಚ್ ತೆಗೆದು ಆ ಬೆಳಕಿನಲ್ಲಿ ಕರೆದುಕೊಂಡು ಹೋದ. ನನಗೆ ಏನು ನಡೆಯುತ್ತಿದೆ ಎಂಬ ಅನುಮಾನ ಕಾಡುತ್ತಿತ್ತು.
ಕೆಳಭಾಗದಲ್ಲಿ ಒಂದು ದೊಡ್ಡ ಹಾಲಿನ ಹಾಗೆ ಇತ್ತು, ಅದಕ್ಕೆ ಹೊಂದಿಕೊಂಡಂತೆ ಐದಾರು ಕೋಣೆಗಳಿದ್ದವು. ಆ ಹಾಲಿನ ಮಧ್ಯ ಭಾಗದಲ್ಲಿ ನಾವು ಕುಳಿತುಕೊಂಡೆವು. ಸಚಿನ್ ತನ್ನ ಜೇಬಿನಿಂದ ಒಂದು ಹಳೆ ಕಾಗದವನ್ನು ತೆಗೆದು ನೆಲದ ಮೇಲೆ ಹರಡಿದ. ಟಾರ್ಚ್ ಬೆಳಕನ್ನು ಆ ಹಾಳೆಯ ಮೇಲೆ ಬಿಟ್ಟು ನಮ್ಮಿಬ್ಬರ ಕಡೆ ನೋಡಿದ. ನಾವಿಬ್ಬರೂ ಏನೂ ಅರಿವಾಗದಂತೆ ಅವನ ಮುಖ ನೋಡುತ್ತಿದ್ದೆವು. ಅವನು ನಿಧಾನವಾಗಿ ನೋಡಿ ನಾನು ಈಗ ಹೇಳುವ ವಿಷಯ ತುಂಬಾ ರಹಸ್ಯವಾದದ್ದು. ಈ ವಿಷಯ ನಮ್ಮ ಮೂವರ ಮಧ್ಯೆಯೇ ಇರಬೇಕು. ಅಪ್ಪಿ ತಪ್ಪಿ ಈ ವಿಷಯ ಆಚೆ ಬಿದ್ದರೆ ಬಹಳ ತೊಂದರೆ. ನೀವಿಬ್ಬರೂ ನನ್ನ ಬಾಲ್ಯ ಸ್ನೇಹಿತರು ಹಾಗೆಯೇ ನಂಬಿಕಸ್ತರು ಅದಕ್ಕಾಗಿ ನಿಮ್ಮ ಬಳಿ ಹೇಳುತ್ತಿದ್ದೇನೆ. ಎಂದು ಮತ್ತೆ ಕಾಗದದ ಮೇಲೆ ಬೆಳಕು ಚೆಲ್ಲಿದ. ಆ ಕಾಗದ ಯಾವುದೋ ಪುರಾತನ ನಕ್ಷೆ ಇದ್ದಂತೆ ಇತ್ತು. ನಾವಿಬ್ಬರೂ ಕುತೂಹಲದಿಂದ ಏನೋ ಸಚಿನ್ ಈ ಕಾಗದ ಏನು, ರಹಸ್ಯ ವಿಷಯ ಏನು, ಆಚೆ ಬಿದ್ದರೆ ತೊಂದರೆ ಏಕೆ? ಅಪ್ಪಿ ತಪ್ಪಿ ನಿಧಿ ಏನಾದರೂ ಸಿಕ್ಕಿದೆಯೇನೋ ಎಂದು ನಕ್ಕೆ. ಅದಕ್ಕವನು ಒಮ್ಮೆ ತೀಕ್ಷ್ಣವಾಗಿ ನನ್ನನ್ನು ನೋಡಿ ಹೌದು ಇದು ನಿಧಿಯ ನಕ್ಷೆ ಎಂದ. ನನಗೆ ಕರೆಂಟ್ ಹೊಡೆದ ಅನುಭವವಾಯಿತು. ಸೌರವ್ ಅಂತೂ ಬಿಟ್ಟ ಬಾಯಿ ಬಿಟ್ಟ ಹಾಗೆ ಕುಳಿತಿದ್ದ. ನಾನು ಎರಡು ನಿಮಿಷ ಸುಧಾರಿಸಿಕೊಂಡು ಸಚಿನ್ ತಮಾಷೆ ಮಾಡಬೇಡ. ನಡಿ ಮೊದಲು ಇಲ್ಲಿಂದ ಹೊರಡೋಣ ಆಮೇಲೆ ಯಾವುದಾದರೂ ದೆವ್ವ ಭೂತ ಬಂದು ಆಟಕಾಯಿಸಿಕೊಂಡರೆ ಕಷ್ಟ ಎಂದು ಎದ್ದು ನಿಂತೆ. ನನ್ನೊಡನೆ ಸೌರವ್ ಹಾಗೂ ಸಚಿನ್ ಕೂಡ ಎದ್ದು ನಿಂತರು.
ನೋಡು ರಾಹುಲ್ ಇದು ತಮಾಷೆಯಲ್ಲ, ನಾನು ಇತ್ತೀಚಿಗೆ ಎರಡು ತಿಂಗಳ ಕೆಳಗೆ ಯಾವುದೋ ಒಂದು ದಾಖಲೆ ಹುಡುಕುತ್ತಿದ್ದಾಗ ಈ ಕೋಟೆಯ ಬಗ್ಗೆ ಮಾಹಿತಿ ದೊರಕಿತು. ಆಗಿನ ಕಾಲದ ರಾಜ ಶೂರ ಸಿಂಹ ತನ್ನ ಸಕಲ ಐಶ್ವರ್ಯಗಳನ್ನು ಈ ಕೋಟೆಯ ನೆಲಮಹಡಿ ಅಂದರೆ ನಾವು ಈಗ ನಿಂತಿರುವ ಜಾಗದ ಆ ಮೂರನೇ ಕೊಠಡಿಯಲ್ಲಿ ಇಟ್ಟಿರುವುದಾಗಿ ಹಾಗೂ ಅದರ ನಕ್ಷೆ ಎರಡೂ ದೊರೆಯಿತು. ಅದು ಹೇಗೆ ಈ ಮಾಹಿತಿ ಇದುವರೆಗೂ ಸರ್ಕಾರಕ್ಕೆ ಸಿಕ್ಕಿಲ್ಲವೋ ನನಗೆ ಗೊತ್ತಾಗಲಿಲ್ಲ. ಹೇಗೋ ಮಾಡಿ ಅಲ್ಲಿಂದ ಆ ದಾಖಲೆಯನ್ನು ಲಪಟಾಯಿಸಿ ಕಳೆದ ತಿಂಗಳು ಒಮ್ಮೆ ಈ ಜಾಗಕ್ಕೆ ಒಬ್ಬನೇ ಬಂದು ಎಲ್ಲವನ್ನೂ ಪರೀಕ್ಷಿಸಿಕೊಂಡು ಹೋಗಿದ್ದೆ. ಬನ್ನಿ ನನ್ನ ಜೊತೆ ಎಂದು ಆ ಮೂರನೇ ಕೊಠಡಿಯ ಬಳಿ ಕರೆದುಕೊಂಡು ಹೋದ. ಅಲ್ಲಿ ದೊಡ್ಡ ದೊಡ್ಡ ಮೂರು ಕಬ್ಬಿಣದ ಪೆಟ್ಟಿಗೆ ಗಳಿದ್ದವು. ಆ ಪೆಟ್ಟಿಗೆಗಳನ್ನು ತೋರಿಸಿ ಈ ನಕ್ಷೆಯಲ್ಲಿ ಎಲ್ಲವೂ ಇದೆ ಆದರೆ ಈ ಪೆಟ್ಟಿಗೆಗಳನ್ನು ತೆಗೆಯುವ ಬಗೆ ಹೇಗೆಂದು ಮಾತ್ರ ಕೊಟ್ಟಿಲ್ಲ, ನೋಡಿ ನೀವಿಬ್ಬರೂ ಈ ವಿಷಯದಲ್ಲಿ ನನಗೆ ಸಹಕರಿಸಿದರೆ ನಮಗೆ ಅಪಾರ ಆಸ್ತಿ ದೊರೆಯುತ್ತದೆ. ನಿಮ್ಮಿಬ್ಬರನ್ನು ಬಿಟ್ಟರೆ ನನಗೆ ಬೇರೆ ಯಾರೂ ನಂಬಿಕಸ್ತರೆಂದು ಅನಿಸಲಿಲ್ಲ. ಅದಕ್ಕೆ ನಿಮಗೆ ಸುಳ್ಳು ಹೇಳಿ ಇಲ್ಲಿಗೆ ಕರೆದುಕೊಂಡು ಬಂದೆ ಎಂದು ಹೇಳುತ್ತಿದ್ದ ಅಷ್ಟರಲ್ಲಿ ಸೌರವ್ ಶುರುಮಾಡಿದ. ಸಚಿನ್ ನಿನಗೆ ತಲೆ ಏನಾದರೂ ಕೆಟ್ಟಿದೆಯ ಇದು ಸರ್ಕಾರದ ಆಸ್ತಿ ನಮಗೆ ಇದರ ಮೇಲೆ ಯಾವುದೇ ಹಕ್ಕು ಇಲ್ಲ. ನೀನು ಮಾಡುತ್ತಿರುವುದು ಸರಿ ಇಲ್ಲ ಮೊದಲು ಇಲ್ಲಿಂದ ಹೊರಡೋಣ ಬಾ. ಮೊದಲು ಹೋಗಿ ಪೊಲೀಸರಿಗೆ ತಿಳಿಸೋಣ ಎಂದು ಮೇಲಕ್ಕೆ ಓಡಲು ಶುರು ಮಾಡಿದ. ನಾನೂ ಸಚಿನ್ ನ ಮುಖ ಒಂದು ಸಲ ನೋಡಿ ಸೌರವ್ ಹಿಂದೆಯೇ ಓಡಿ ಮೇಲಕ್ಕೆ ಬಂದೆ. ಮೇಲೆ ಬಂದು ಸೌರವ್ ಬಳಿ ಮಾತಾಡುತ್ತಿದ್ದೆ. ಸೌರವ್ ಹೇಳುತ್ತಿದ್ದ. ರಾಹುಲ್ ಸಚಿನ್ ಗೆ ತಲೆ ಕೆಟ್ಟಿದೆ ನೀನಾದರೂ ಅವನಿಗೆ ಬುದ್ಧಿ ಹೇಳು ಎನ್ನುತ್ತಿದ್ದ ಅಷ್ಟರಲ್ಲಿ ಮೇಲಕ್ಕೆ ಬಂದ ಸಚಿನ್. ನಾನು ಸಚಿನ್ ಗೆ ನೋಡು ಸಚಿನ್ ರಾಹುಲ್ ಹೇಳುತ್ತಿರುವುದು ನೂರಕ್ಕೆ ನೂರು ಸರಿ. ಮೊದಲಿಗೆ ಆ ಪೆಟ್ಟಿಗೆಗಳಲ್ಲಿ ನಿಧಿ ಇದೆಯೋ ಇಲ್ಲವೋ ನಮಗೆ ಗೊತ್ತಿಲ್ಲ, ಎರಡನೆಯದು ಅದನ್ನು ಹೇಗೆ ತೆಗೆಯುವುದು ಎಂದೂ ನಮಗೆ ಗೊತ್ತಿಲ್ಲ ಅದನ್ನು ತೆಗೆಸಲು ಆದರೂ ನಾವೂ ಅದನ್ನು ಆಚೆ ತರುವುದು ತಪ್ಪಲ್ಲ. ಮೂರನೆಯದು ರಾಹುಲ್ ಅಂದಂತೆ ಪ್ರಾಮಾಣಿಕವಾಗಿ ನೋಡಿದರೆ ಇದು ಸರ್ಕಾರಕ್ಕೆ ಸೇರಬೇಕು. ನಡಿ ಮೊದಲು ಪೊಲೀಸರಿಗೆ ತಿಳಿಸೋಣ ಎಂದೆ. ಈಗ ಸಚಿನ್ ಸ್ವಲ್ಪ ಕೋಪಗೊಂಡಂತೆ ಕಂಡು ಬಂದ. ನೋಡ್ರೋ ಇಂಥ ಅವಕಾಶ ನಮ್ಮ ಜನ್ಮದಲ್ಲಿ ಮತ್ತೆ ಸಿಗಲ್ಲ ಸುಮ್ಮನೆ ನನ್ನ ಮಾತು ಕೇಳಿ ಇಲ್ಲ ಎಂದರೆ ಸರಿ ಇರುವುದಿಲ್ಲ ಎಂದ. ತಕ್ಷಣ ಸೌರವ್ ಯಾಕೆ ಸಚಿನ್ ದುಡ್ದೆಂದ ತಕ್ಷಣ ಹೀಗೆ ಬದಲಾಗುತ್ತಿದ್ದೀಯ. ನೀನು ಏನಾದರೂ ಮಾಡಿಕೊ ಇದಕ್ಕೆ ನನ್ನ ಸಹಕಾರವಂತೂ ಇರುವುದಿಲ್ಲ ನಾನು ಈಗಲೇ ಹೋಗಿ ಪೊಲೀಸರಿಗೆ ಮಾಹಿತಿ ತಿಳಿಸುತ್ತೇನೆ ಎಂದು ಅಲ್ಲಿಂದ ಹೊರಡಲು ಅನುವಾದ ನಾನು ಅವನ ಹಿಂದೆಯೇ ಹೋಗಲು ಶುರು ಮಾಡಿದೆ. ಇನ್ನೇನು ನಾವು ಅಲ್ಲಿಂದ ಆಚೆ ಬರಬೇಕು ಎನ್ನುವಷ್ಟರಲ್ಲಿ ಸೌರವ್ ಜೋರಾಗಿ ಕಿರುಚಿಕೊಂಡ ಏನಾಯಿತು ಎಂದು ಅರಿವಾಗುವಷ್ಟರಲ್ಲಿ ಸೌರವ್ ನ ಹೊಟ್ಟೆಯಲ್ಲಿ ಮೊನಚಾದ ಆಯುಧವೊಂದು ಇಳಿದಿತ್ತು. ರಕ್ತ ಫೌಂಟೆನ್ ನಲ್ಲಿ ಚಿಮ್ಮುವ ಹಾಗೆ ಚಿಮ್ಮುತ್ತಿತ್ತು.
ಒಂದು ಕ್ಷಣ ಅಲ್ಲಿ ಏನಾಗುತ್ತಿದೆ ಎಂದು ಗೊತ್ತಾಗಲಿಲ್ಲ. ಸೌರವ್ ಕೆಳಗೆ ಬಿದ್ದು ನೋವಿನಿಂದ ಒದ್ದಾಡುತ್ತಿದ್ದಾನೆ. ನನ್ನೆದುರಿಗೆ ಸಚಿನ್ ನಿಂತಿದ್ದಾನೆ. ಸಚಿನ್ ಕೈಯಲ್ಲಿ ಮೊನಚಾದ ಆಯುಧ ಒಂದಿದೆ. ಆಯುಧ ರಕ್ತದಲ್ಲಿ ನೆಂದು ಆಯುಧದ ತುದಿಯಿಂದ ರಕ್ತ ತೊಟ್ಟಿಕ್ಕುತ್ತಿದೆ. ಎದುರಿನಲ್ಲಿ ಸೌರವ್ ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ. ಸಚಿನ್ ನ ಮುಖ ಕೋಪದಿಂದ ಕೆಂಪಾಗಿದೆ. ಅವನು ಹಾಕಿದ್ದ ಶರ್ಟ್ ಎಲ್ಲ ರಕ್ತದ ಕಲೆಗಳಾಗಿದೆ. ಆಯುಧ ಹಿಡಿದು ಸಚಿನ್ ನನ್ನೆಡೆಗೆ ಬರುತ್ತಿದ್ದಾನೆ. ಅಷ್ಟರಲ್ಲಿ ಸೌರವ್ ನ ಒದ್ದಾಟ ನಿಂತು ಹೋಯಿತು. ನಾನು ಸಚಿನ್ ಗೆ, ಸಚಿನ್ ನೀನು ಹೀಗೆ ಮಾಡಬಾರದಿತ್ತು ಅನ್ಯಾಯವಾಗಿ ಸೌರವ್ ನನ್ನು ನಿನ್ನ ಸ್ವಾರ್ಥಕ್ಕೆ ಬಲಿ ತೆಗೆದುಕೊಂಡು ಬಿಟ್ಟೆ ಎಂದು ಅಳಲು ಶುರು ಮಾಡಿದೆ. ಆದರೆ ಸಚಿನ್ ನ ಕಣ್ಣಲ್ಲಿ ಕ್ರೌರ್ಯ ತುಂಬಿತ್ತೆ ಹೊರತು ಯಾವುದೇ ಭಾವವಿರಲಿಲ್ಲ. ನೋಡು ರಾಹುಲ್ ನನಗೆ ನಿಮ್ಮ ಸ್ನೇಹಕ್ಕಿಂತ ಈ ಆಸ್ತಿಯೇ ಮುಖ್ಯ. ನೋಡು ಅವನಿಗಂತೂ ಅದೃಷ್ಟ ಇಲ್ಲ. ನೀನು ಅವನ ದಾರಿಯಲ್ಲಿ ಹೋಗುತ್ತೀಯ ಅಥವಾ ನನ್ನ ದಾರಿಯಲ್ಲಿ ಬರುತ್ತೀಯ ಎಂದು ಆ ಆಯುಧವನ್ನು ಹಿಡಿದು ನನ್ನೆದುರು ಬರುತ್ತಿದ್ದ. ನನಗೆ ಸೌರವ್ ನ ಸಾವಿನಿಂದ ಏನು ಮಾತಾಡಬೇಕೋ ಗೊತ್ತಾಗದೆ ಸುಮ್ಮನೆ ಕಣ್ಣು ಮುಚ್ಚಿ ನಿಂತಿದ್ದೆ. ಇದ್ದಕ್ಕಿದ್ದಂತೆ ಧಪ್ ಎಂದು ಸದ್ದಾಯಿತು. ಏನೆಂದು ಕಣ್ಣು ಬಿಟ್ಟು ನೋಡಿದರೆ ಸಚಿನ್ ನೆಲದ ಮೇಲೆ ಬಿದ್ದಿದ್ದಾನೆ. ಬಾಯಿ ತುಂಬಾ ನೊರೆ ಬರುತ್ತಿದೆ. ನೋವಿನಿಂದ ಒದ್ದಾಡುತ್ತಿದ್ದಾನೆ. ನನಗೆ ಏನಾಯಿತೋ ಗೊತ್ತಾಗುತ್ತಿಲ್ಲ. ಅಲ್ಲಿ ಪಕ್ಕದಲ್ಲಿದ್ದ ಪೊದೆಯಲ್ಲಿ ಏನೋ ಸರ ಸರ ಎಂದು ಸದ್ದು ಮಾಡಿಕೊಂಡು ಹೋದಂತಾಯಿತು.....
Comments
ಉ: (ಕಥೆ) ನಿಧಿ = ವಿಧಿ
ಉ: (ಕಥೆ) ನಿಧಿ = ವಿಧಿ
In reply to ಉ: (ಕಥೆ) ನಿಧಿ = ವಿಧಿ by Jayanth Ramachar
ಉ: (ಕಥೆ) ನಿಧಿ = ವಿಧಿ
In reply to ಉ: (ಕಥೆ) ನಿಧಿ = ವಿಧಿ by ಗಣೇಶ
ಉ: (ಕಥೆ) ನಿಧಿ = ವಿಧಿ
ಉ: (ಕಥೆ) ನಿಧಿ = ವಿಧಿ
In reply to ಉ: (ಕಥೆ) ನಿಧಿ = ವಿಧಿ by venkatb83
ಉ: (ಕಥೆ) ನಿಧಿ = ವಿಧಿ
In reply to ಉ: (ಕಥೆ) ನಿಧಿ = ವಿಧಿ by venkatb83
ಉ: (ಕಥೆ) ನಿಧಿ = ವಿಧಿ
In reply to ಉ: (ಕಥೆ) ನಿಧಿ = ವಿಧಿ by ಗಣೇಶ
ಉ: (ಕಥೆ) ನಿಧಿ = ವಿಧಿ
In reply to ಉ: (ಕಥೆ) ನಿಧಿ = ವಿಧಿ by venkatb83
ಉ: (ಕಥೆ) ನಿಧಿ = ವಿಧಿ
In reply to ಉ: (ಕಥೆ) ನಿಧಿ = ವಿಧಿ by ಗಣೇಶ
ಉ: (ಕಥೆ) ನಿಧಿ = ವಿಧಿ
In reply to ಉ: (ಕಥೆ) ನಿಧಿ = ವಿಧಿ by ಗಣೇಶ
ಉ: (ಕಥೆ) ನಿಧಿ = ವಿಧಿ
ಉ: (ಕಥೆ) ನಿಧಿ = ವಿಧಿ
In reply to ಉ: (ಕಥೆ) ನಿಧಿ = ವಿಧಿ by kavinagaraj
ಉ: (ಕಥೆ) ನಿಧಿ = ವಿಧಿ
In reply to ಉ: (ಕಥೆ) ನಿಧಿ = ವಿಧಿ by Jayanth Ramachar
ಉ: (ಕಥೆ) ನಿಧಿ = ವಿಧಿ