ಹಳ್ಳಿಗಳಿಗೆ ಅಂತರ್ಜಾಲ ತರುವ ಬಸ್‌ಗಳು
ಇ-ಲೋಕ-16 (30/3/2007)
ದೂರದ ಹಳ್ಳಿಗಳಿಗೆ ಅಂತರ್ಜಾಲ ಸಂಪರ್ಕವನ್ನು ಕೇಬಲ್ ಲೈನುಗಳ ಮೂಲಕ ನೀಡುವುದು ತುಂಬಾ ದುಬಾರಿಯಾಗುವುದಿದೆ. ಇನ್ನು ನಿಸ್ತಂತು ಜಾಲದ ಮೂಲಕ ಅಂತರ್ಜಾಲ ನೀಡುವುದು ಸಾಧ್ಯವಾದರೂ ಸೀಮಿತ ಬಳಕೆಗಾಗಿ, ಈ ವ್ಯವಸ್ಥೆಯನ್ನು ಸ್ಥಾಪಿಸಲು ಸರಕಾರ ಅಥವಾ ಖಾಸಗಿಯವರು ಮನ ಮಾಡದಿರಬಹುದು.ಆಫ್ರಿಕಾ,ಭಾರತವೂ ಸೇರಿದಂತೆ ಕೆಲವು ದೇಶಗಳಲ್ಲಿ ಪ್ರಯೋಗಾರ್ಥ ನಡೆಸಲಾಗುತ್ತಿರುವ ಯೋಜನೆಯ ಪ್ರಕಾರ,ಹಳ್ಳಿಗಳಿಗೆ ಬಸ್ ಮೂಲಕ ಅಂತರ್ಜಾಲದ ಮಾಹಿತಿಯನ್ನು ಮುಟ್ಟಿಸುವ ಪ್ರಯತ್ನ ನಡೆದಿದೆ. ಬಸ್ ದಿನಾ ನಗರಕ್ಕೆ ಹೋಗಿ ಬರುತ್ತದೆ. ಬರುವಾಗ ಅದು ನಗರಗಳ ಅಂತರ್ಜಾಲ ಸಂಪರ್ಕದ ಮೂಲಕ ಜನಪ್ರಿಯ ಪುಟಗಳನ್ನು ಅದರಲ್ಲಿರುವ ಕಂಪ್ಯೂಟರಿಗೆ ಡೌನ್‌ಲೋಡ್ ಮಾಡಿಕೊಂಡು ಬರುತ್ತದೆ.ಹಳ್ಳಿಯಲ್ಲಿ ನಿಸ್ತಂತು ಮೂಲಕ ಸಮೀಪದ ಕಂಪ್ಯೂಟರುಗಳಿಗೆ ಬಸ್‌ನ ಕಂಪ್ಯೂಟರಿನ ಮಾಹಿತಿ ಮುಟ್ಟುತ್ತದೆ.ವಸ್ತುಗಳ ಖರೀದಿಗೆ ಅಂತರ್ಜಾಲ ಬಳಸುವವರ, ಖರೀದಿ ಆರ್ಡರುಗಳು ನಗರಕ್ಕೆ ಬಸ್ಸು ಹೋದಾಗ, ಅಂತರ್ಜಾಲ ತಾಣಕ್ಕೆ ಮುಟ್ಟಿಸಿ, ಬಸ್ಸಿನ ಮೂಲಕವೇ ವಸ್ತು ಹಳ್ಳಿ ಸೇರುತ್ತದೆ.ಲಭ್ಯವಿಲ್ಲದ ಪುಟ ಬಯಸಿದವರಿಗೆ ಮುಂದಿನ ಟ್ರಿಪ್‌ನಲ್ಲಿ ಪುಟ ಬರುತ್ತದೆ.ಈ ಕೆಲಸಕ್ಕೆ ಬೈಕ್‌ಗಳ ಬಳಕೆಯಾಗುವುದೂ ಇದೆ.
ಸುನೀತಾ ವಿಲಿಯಮ್ಸ್‌ಗೆ ಇನ್ನಷ್ಟು ದೀರ್ಘ ಗಗನವಾಸ
ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಅಟ್ಲಾಂಟಿಸ್ ಸ್ಪೇಸ್ ಶಟಲ್ ಮೂಲಕ ಬಾಹ್ಯಾಕಾಶ ಕೇಂದ್ರದಲ್ಲಿ ವಾಸಿಸಲು ತೊಡಗಿ ಈಗಾಗಲೇ ಮೂರು ತಿಂಗಳು ಕಳೆಯಿತು. ಡಿಸೆಂಬರ್-ಜುಲೈ ಅವಧಿಗೆ ಗಗನವಾಸಕ್ಕೆಂದು ಹೋದ ಸುನೀತಾ ವಿಲಿಯಮ್ಸ್‌ಗೆ,ಗಗನವಾಸ ದಾಖಲೆ ಅವಧಿಗೆ ಮಾಡಬೇಕಾಗಿ ಬಂದರೂ ಅಚ್ಚರಿಯಲ್ಲವಂತೆ. ಅಟ್ಲಾಂಟಿಸ್ ಇಂಧನ ಕೋಶ ಹಿಮಪಾತಕ್ಕೆ ಸಿಲುಕಿ ಹಾನಿಗೀಡಾಗಿರುವುದೇ ಇದಕ್ಕೆ ಕಾರಣ.ಆಕೆಯ ಆರೋಗ್ಯ ಹಾಗೂ ಮಾನಸಿಕ ಸ್ಥಿತಿಯ ಬಗ್ಗೆ ಸದಾ ಕಣ್ಣಿರಿಸಲಾಗಿದ್ದು ಸದ್ಯ ಯಾವ ಸಮಸ್ಯೆಯೂ ಇಲ್ಲವಂತೆ. ಆಕೆಯ ಈಗಿನ ಬಾಹ್ಯಾಕಾಶ ಕೇಂದ್ರದ ಜತೆಗಾರ ಮೈಕೆಲ್ ಮುಂದಿನ ಏಪ್ರಿಲ್ ಮೂರನೇ ವಾರ ಭೂಮಿಗೆ ಹಿಂದಿರುಗುವಾಗ ಇನ್ನೂರ ಹದಿನಾಲ್ಕು ದಿನಗಳ ಕಾಲ ಬಾಹ್ಯಾಕಾಶ ಕೇಂದ್ರದಲ್ಲಿ ವಾಸ ಮಾಡಿದ ದಾಖಲೆಯಾಗುತ್ತದೆ.ಸುನೀತಾ ಈ ದಾಖಲೆಯನ್ನು ಮುರಿಯವುದು ಅನಿವಾರ್ಯವಾಗಬಹುದು. ಯಾಕೆಂದರೆ,ಸ್ಪೇಸ್ ಶಟಲ್ ನಿಗದಿತ ಸಮಯಕ್ಕಿಂತ ತಡವಾಗಿ ಗಗನಗಾಮಿಯಾಗಬೇಕಾದೀತು. ಸುನೀತಾಳ ಗಗನವಾಸವನ್ನು ಸಾಧ್ಯವಾದಷ್ಟು ಆರಾಮವಾಗಿಸಲು,ಕೆಲವು ಸಾಮಗ್ರಿಗಳ ಪಾರ್ಸೆಲ್ ಇನ್ನೇನು ಆಕೆಗೆ ರವಾನೆಯಾಗಲಿದೆ ಎಂದು ನಾಸಾ ವರದಿ.
ವಿಂಡೋಸ್ ಬದಲಿಗೆ ಲಿನಕ್ಸ್ ಕಾರ್ಯನಿರ್ವಹಣಾ ತಂತ್ರಾಂಶ ಒದಗಿಸಲಿರುವ ಡೆಲ್
ವಿಶ್ವದಲ್ಲಿಯೇ ಅತಿ ಹೆಚ್ಚು ಕಂಪ್ಯೂಟರುಗಳನ್ನು ಮಾರುವ ಡೆಲ್ ಕಂಪೆನಿ ತನ್ನ ಕಂಪ್ಯೂಟರುಗಳಲ್ಲಿ ಮುಕ್ತ ಕಾರ್ಯನಿರ್ವಹಣಾ ವ್ಯವಸ್ಥೆ ತಂತ್ರಾಂಶ ಲೀನಕ್ಸ್ ಒದಗಿಸಲು ನಿರ್ಧರಿಸಿದೆ.ಒಂದು ಲಕ್ಷ ಜನರ ಜತೆ ನಡೆಸಲಾದ ಸಮೀಕ್ಷೆಯ ನಂತರ ಈ ನಿರ್ಧಾರವನ್ನು ಕಂಪೆನಿಯು ತೆಗೆದು ಕೊಂಡಿತು. ಸಮೀಕ್ಷೆಯ ಪ್ರಕಾರ ಹೆಚ್ಚಿನ ಜನರು ಲೀನಕ್ಸ್ ಇರುವ ಕಂಪ್ಯೂಟರ್ ಖರೀದಿಸುವ ಉದ್ದೇಶವನ್ನು ಹೊಂದಿದ್ದರು.ಮಾರಾಟವಾಗುವ ಪ್ರತಿ ನೂರು ಕಂಪ್ಯೂಟರುಗಳಲ್ಲಿ ತೊಂಭತ್ತು ಕಂಪ್ಯೂಟರುಗಳಲ್ಲಿ ವಿಂಡೋಸ್ ವ್ಯವಸ್ಥೆಯಿರುತ್ತದೆ. ಹಣ ಕೊಟ್ಟು ಖರೀದಿಸಬೇಕಾದ ವಿಂಡೋಸ್‌ಗೆ ಹೋಲಿಸಿದರೆ, ಲೀನಕ್ಸ್ ಉಚಿತವಾಗಿ ಲಭ್ಯವಿದೆ. ಕೆಲವು ಕಂಪೆನಿಗಳು ಇದರ ಜತೆ ತಮ್ಮದೇ ಇತರ ತಂತ್ರಾಂಶಗಳ ಗುಚ್ಛವನ್ನು ನಾಮಮಾತ್ರ ಬೆಲೆಗೆ ಮಾರುವುದೂ ಇದೆ. ಆದರೂ ಲೀನಕ್ಸ್ ಇನ್ನೂ ಆರು ಶೇಕಡಾ ಕಂಪ್ಯೂಟರುಗಳಲ್ಲೂ ಬಳಕೆಯಾಗುತ್ತಿಲ್ಲ.
ಸಂಕ್ಷಿಪ್ತವಾಗಿ ಬ್ಲಾಗಿಸಿ!
ಕಿರಿದರಲ್ಲಿ ಹಿರಿದರ್ಥವನ್ನು ಹೇಳಲು ಜನರನ್ನು ಪ್ರಚೋದಿಸುವ ಹೊಸ ಅಂತರ್ಜಾಲ ಜಾಲ ತಾಣ ಟ್ವಿಟ್ಟರ್(www.twitter.com) ಈಗೆರಡು ತಿಂಗಳಿನಿಂದ ಸುದ್ದಿ ಮಾಡುತ್ತಿದೆ.ಮೊಬೈಲ್‌ನಿಂದ ನಿಮ್ಮ ಸ್ನೇಹಿತರಿಗೆ ಕಳುಹಿಸುವ ಕಿರು ಸಂದೇಶಗಳು, ಈ ಅಂತರ್ಜಾಲ ತಾಣದಲ್ಲಿ ಕಾಣಿಸಿಕೊಳ್ಳುತ್ತದೆ. ಅಂತರ್ಜಾಲದ ಮೂಲಕವೂ ಸಂದೇಶ ಕಳುಹಿಸಬಹುದು. "ನೀವು ಈ ಸಮಯದಲ್ಲಿ ಏನು ಮಾಡುತ್ತಿರುವಿರಿ?" ಎನ್ನುವುದನ್ನು ನೀವು ಬರೆಯಬೇಕಾಗುತ್ತದೆ. ಸಂದೇಶಗಳು ಈ ವಿಷಯಕ್ಕೆ ಸಂಬಂಧಿಸಿಯೇ ಇರಬೇಕೆನ್ನುವ ನಿಯಮವಿದೆ.ಕಳೆದ ಒಂದು ತಿಂಗಳಿನಲ್ಲೇ ಟ್ವಿಟ್ಟರ್‌ಗೆ ಮೊದಲಿನ ಇಮ್ಮಡಿ ಸದಸ್ಯರು ನೋಂದಾಯಿಸಿಕೊಂಡಿದ್ದಾರೆ.ಪ್ರತಿ ಹತ್ತು ನಿಮಿಷಕ್ಕೆ ನೀವೀಗ ಮಾಡುತ್ತಿರುವುದೇನು ಎನ್ನುವುದರ ಬಗ್ಗೆ ತಿಳಿಸಿ ಎಂಬ ಕೋರಿಕೆ ಇಲ್ಲಿ ಕಂಡು ಬರುತ್ತದೆ.ಮೊಬೈಲ್ ಸೇವೆ ಉತ್ತರ ಅಮೆರಿಕಾದಲ್ಲಿ ಮಾತ್ರಾ ಸದ್ಯ ಲಭ್ಯ.
ಮಿತಿರಹಿತ ಸ್ಥಳಾವಕಾಶ ಒದಿಸಲಿರುವ ಯಾಹೂ ಮೈಲ್
ಯಾಹೂವಿನ ಇ-ಮೇಲ್ ಬಳಕೆದಾರರು ಮೇ ತಿಂಗಳಿನಿಂದ ಮಿತಿರಹಿತ ಸಂಗ್ರಹಣಾ ಸ್ಥಳಾವಕಾಶ ಪಡೆಯಲಿದ್ದಾರೆ. ಸದ್ಯ ಬಳಕೆದಾರರು ಬರೇ ಒಂದು ಗಿಗಾಬೈಟ್ ಸ್ಥಳಾವಕಾಶ ಪಡೆಯುತ್ತಲಿದ್ದಾರೆ. ಇದರಿಂದ ಇ-ಮೇಲ್‌ಗಳನ್ನು ಓದಿದ ಬಳಿಕ,ಅಳಿಸಿ ಹಾಕಬೇಕಾದ ಪ್ರಮೇಯವಿಲ್ಲದಾಗುತ್ತದೆ. ಸೇವೆಯು ಉಚಿತವಾಗಿಯೇ ಸಿಗಲಿರುವುದು ಮತ್ತೊಂದು ಗಮನಾರ್ಹ ಅಂಶ. ಗೂಗಲ್‌ನ ಜಿ-ಮೇಲ್ ಬಳಕೆದಾರರು ಸದ್ಯ ಎರಡೂವರೆ ಗಿಗಾಬೈಟ್ ಸ್ಥಳಾವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಗೂಗಲ್ ಕೂಡಾ ಯಾಹೂವನ್ನು ಅನುಸರಿಸುತ್ತದೆಯೋ ಕಾದು ನೋಡಬೇಕು.
*ಅಶೋಕ್‌ಕುಮಾರ್ ಎ