ಉಪನ್ಯಾಸಕನಾಗಿ ನನ್ನ ಅನುಭವಗಳು (ಓಷೋ ರಜನೀಶ್ ಚಿಂತನೆಗಳು)

ಉಪನ್ಯಾಸಕನಾಗಿ ನನ್ನ ಅನುಭವಗಳು (ಓಷೋ ರಜನೀಶ್ ಚಿಂತನೆಗಳು)


ಪ್ರಾಧ್ಯಾಪಕನ ಪೀಠದಲ್ಲಿ

 

ನಾನು ಎಂ.ಎ. ಓದುವಾಗ ಕೊನೆಯ ವರ್ಷದ ವಿದ್ಯಾರ್ಥಿಗಳು ತಮ್ಮ ಪ್ರಮಾಣ ಪತ್ರಗಳನ್ನು ಸ್ವೀಕರಿಸುವ ಮುನ್ನ ಕೆಲವು ಕಾಲ ಮಿಲಿಟರಿ ತರಬೇತಿಯನ್ನು ಪಡೆಯುವುದು ಕಡ್ಡಾಯವಾಗಿತ್ತು. ಮಿಲಿಟರಿ ಎಂಬುದು ಮನುಷ್ಯನ ಸಹಜ ಬುದ್ಧಿವಂತಿಕೆಯನ್ನು, ಸ್ವೋಪಜ್ಞತೆಯನ್ನು ನಾಶ ಮಾಡಲೆಂದೇ ಕಂಡು ಹಿಡಿದ ವ್ಯವಸ್ಥೆ ಎಂಬುದು ನನ್ನ ಅತ್ಯಂತ ಹಳೆಯ ನಂಬಿಕೆ. “ಅಲ್ಲಿಗೆ ಕಳಿಸುವುದಾದರೆ ನಿಮ್ಮ ಡಿಗ್ರಿಯೂ ಬೇಡ, ಚಿನ್ನದ ಪದಕವೂ ಬೇಡ ನಾನು ಈಗಲೇ ಹೊರಡುತ್ತೇನೆ” ಎಂದು ನಮ್ಮ ಕುಲಪತಿಗೆ ಹೇಳಲು ಹಿಂಜರಿಯಲಿಲ್ಲ. ಆಗ ಕುಲಪತಿಗಳು ಹೇಗೋ ವ್ಯವಸ್ಥೆ ಮಾಡಿ ನಾನು ತರಬೇತಿಗೆ ಹೋಗದಿದ್ದರೂ ಸರ್ಟಿಫಿಕೇಟ್‌ಗಳು ಸಿಗುವಂತೆ ಮಾಡಿದರು. ಸಮಾಜವು ಮಕ್ಕಳಲ್ಲಿ ವಿಧೇಯತೆಯ ಹೆಸರಿನಲ್ಲಿ ಹೆದರಿಕೆಯನ್ನು ತುಂಬುತ್ತದೆ. ಪೂರ್ವಗ್ರಹಗಳಿದ್ದವರಿಗೆ ನನ್ನ ವರ್ತನೆಯಲ್ಲಿ ಅಧಿಕಪ್ರಸಂಗತನ, ಅಸಾಮಾಜಿಕ ನಿಲುವುಗಳು ಕಾಣಿಸಬಹುದು. ಸಮಾಜ ಬಯಸುವ ನಡಾವಳಿಗಳನ್ನು ಮನ್ನಿಸಿ ನಾನು ಎಂದೂ ನಡೆದವನಲ್ಲ. ಹಾಗೆ ನಡೆಯಬೇಕೆಂದು ಅಪೇಕ್ಷಿಸುವುದನ್ನೇ ನಾನು ಪೂರ್ವಗ್ರಹ ಎಂದು ಕರೆಯುವುದು. ಇಷ್ಟು ಚಿಕ್ಕ ಬದುಕಿನಲ್ಲಿ ಎಷ್ಟೆಲ್ಲ ಘಟನೆಗಳು ನಡೆದು ಹೋದವು ಎಂದು ಒಮ್ಮೊಮ್ಮೆ ನನಗೇ ಅಚ್ಚರಿಯಾಗುತ್ತದೆ. ಯಾವ ಪರಿಣಾಮವನ್ನೂ ಲೆಕ್ಕಿಸದೆ ಒಮ್ಮೆಲೆ ಸನ್ನಿವೇಶದೊಳಗೆ ಧುಮುಕಿಬಿಡುತ್ತಿದ್ದ ನನ್ನ ಧೋರಣೆಯೇ ನನ್ನ ಬದುಕನ್ನು ಒಂದು ಸಾಹಸಮಯ ಚರಿತ್ರೆಯನ್ನಾಗಿಸಿತು. ಮೊದಲ ದರ್ಜೆಯಲ್ಲಿ ತೇರ್ಗಡೆ ಹೊಂದಿ ಘಟಿಕೋತ್ಸವದಲ್ಲಿ ಚಿನ್ನದ ಪದಕವನ್ನು ಪಡೆದ ನಾನು ಪ್ರಮಾಣ ಪತ್ರವನ್ನು ಮಾತ್ರ ಸ್ವೀಕರಿಸಿ ಚಿನ್ನದ ಪದಕವನ್ನು ಹಿಂದಿರುಗಿಸಿದೆ. ನಾನು ಮೊದಲಿನಿಂದಲೂ ವಿಪರೀತ ಅಹಂಕಾರ, ಆತ್ಮಪ್ರತ್ಯಯಗಳನ್ನು ಹೊಂದಿದ್ದ ವ್ಯಕ್ತಿಯಾದರೂ ಆ ಆತ್ಮಪ್ರತ್ಯಯವು ಇನ್ನೊಬ್ಬನನ್ನು ಕೀಳಾಗಿ ನೋಡುವ ಧೋರಣೆಯನ್ನು ಬೆಳೆಸಿಕೊಳ್ಳಲು ನಾನೆಂದೂ ಆಸ್ಪದ ನೀಡಿದವನಲ್ಲ.

ಕೆಲವು ಕಾಲ ವಿಶ್ವವಿದ್ಯಾಲಯದಲ್ಲಿ ಪಾಠ ಮಾಡಿದರೆ ಉಪನ್ಯಾಸ ಮಾಡುವ ಕಲೆ ನನಗೆ ಕರಗತವಾಗುತ್ತದೆ ಎಂದು ಭಾವಿಸಿ ನನ್ನ ಪ್ರಮಾಣ ಪತ್ರಗಳೊಂದಿಗೆ ನೇರವಾಗಿ ಮಧ್ಯ ಪ್ರದೇಶದ ಅಂದಿನ ಶಿಕ್ಷಣ ಸಚಿವರಾಗಿದ್ದ ಶಂಕರ ದಯಾಳ್ ಶರ್ಮರನ್ನು ಭೇಟಿ ಮಾಡಿದೆ (ಅನಂತರ ಅವರು ಭಾರತದ ರಾಷ್ಟ್ರಪತಿಗಳಾದರು). ನಾನು ಒಳಗೆ ಪ್ರವೇಶಿಸಿದ ಕೂಡಲೇ ಅವರು “ಏನು ವಿಷಯ” ಎಂದು ಕೇಳಿದರು ಅವರು ನಾನು ಎಂ.ಎ. ಓದಿದ ಸಾಗರ್ ವಿಶ್ವವಿದ್ಯಾಲಯದ ಕುಲಪತಿಗಳೂ ಆಗಿದ್ದುದರಿಂದ ನನ್ನನ್ನು ಒಬ್ಬ ಸಾರ್ವಜನಿಕನೆಂದು ಭಾವಿಸದೇ ತಮ್ಮ ವಿದ್ಯಾರ್ಥಿಯಂತೆಯೇ ನಡೆಸಿಕೊಳ್ಳುತ್ತಿದ್ದರು. “ನಾನು ನಿಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿ, ಇಡೀ ವಿಶ್ವವಿದ್ಯಾಲಯಕ್ಕೇ ಮೊದಲಿಗನಾಗಿ ಪಾಸಾಗಿದ್ದೇನೆ. ಚಿನ್ನದ ಪದಕವನ್ನೂ ಪಡೆದಿದ್ದೇನೆ. ನನಗೆ ಯಾವುದಾದರೂ ಕಾಲೇಜಿನಲ್ಲಿ ಉಪನ್ಯಾಸಕನ ಉದ್ಯೋಗ ಬೇಕಾಗಿದೆ” ಎಂದು ನೇರವಾಗಿ ಕೇಳಿದೆ. ಅವರು “ನನಗೆ ಗೊತ್ತು, ನಿನಗೆ ಎಲ್ಲ ಅರ್ಹತೆಯೂ ಇದೆ. ಅಲ್ಲದೆ ವೈಯಕ್ತಿಕವಾಗಿಯೂ ನಾನು ನಿನ್ನನ್ನು ಬಲ್ಲೆ. ನೀನು ನಿರ್ವಹಿಸುತ್ತಿದ್ದ ಎಷ್ಟೋ ಸಭೆಗಳಿಗೆ ನಾನು ಭಾಷಣಕಾರನಾಗಿ ಬಂದಿದ್ದೇನೆ” ಎಂದು ಹೇಳಿ ನನ್ನ ಪ್ರಮಾಣ ಪತ್ರಗಳನ್ನೆಲ್ಲ ಪರಿಶೀಲಿಸಿ ನನ್ನಿಂದ ಅರ್ಜಿ ಬರೆಸಿಕೊಂಡು ಉದ್ಯೋಗ ನೀಡಿದರು. ಮಾತ್ರವಲ್ಲ ನೇಮಕಾತಿ ಆದೇಶವನ್ನೂ ಸ್ಥಳದಲ್ಲೇ ಕೊಟ್ಟರು. ೧೯೫೭ರಲ್ಲಿ ರಾಯ್ಪುರದ ಕಾಲೇಜಿನಲ್ಲಿ ನನ್ನ ನೇಮಕಾತಿ ಆಯಿತು. ಜಾಬಲ್‌ಪುರಕ್ಕೆ ಹೋಗಬೇಕಾದ ನಾನು ಒಬ್ಬ ಗುಮಾಸ್ತನ ದಡ್ಡತನದಿಂದಾಗಿ ರಾಯ್ಪುರಕ್ಕೆ ಹೋಗಬೇಕಾಯಿತು. ಅದೊಂದು ಸಂಸ್ಕೃತ ಕಾಲೇಜು. ಅಲ್ಲಿ ಕೆಲಸವೇ ಇಲ್ಲದೆ ಆರು ತಿಂಗಳು ಕಾಲ ಕಳೆದೆ. ಇಡೀ ದಿನ ನನ್ನ ಕ್ವಾರ್ಟರ್ಸ್‌ನಲ್ಲೇ ಕಳೆಯುತ್ತಿದ್ದೆ. ಆಗೊಮ್ಮೆ ಈಗೊಮ್ಮೆ ಲೈಬ್ರರಿಗೆ ಹೋಗಿ ಬರುತ್ತಿದ್ದೆ.

ನಾನು ರಾಯ್ಪುರದಲ್ಲಿ ಉಪನ್ಯಾಸಕನಾಗಿದ್ದ ದಿನಗಳಲ್ಲಿ ಒಂದು ಘಟನೆ ನಡೆಯಿತು ರಾಯ್ಪುರ ಒಣ ಪ್ರದೇಶ, ವಿಪರೀತ ಬಿಸಿಲಿನ ಸ್ಥಳ. ಒಮ್ಮೆ ನಾನು ವಾಸಿಸುತ್ತಿದ್ದ ಬಂಗಲೆಯ ಸಮೀಪದ ಒಂದು ಮನೆಗೆ ಬೆಂಕಿ ತಗುಲಿತು. ಅಲ್ಲಿ ನೆರೆದಿದ್ದ ಜನ ಬೆಂಕಿಯನ್ನು ಆರಿಸುವುದನ್ನು ಬಿಟ್ಟು ಮತ್ತೇನನ್ನೋ ಕುತೂಹಲದಿಂದ ನೋಡುತ್ತಿದ್ದರು. ಆ ಮನೆಯಲ್ಲಿ ಮೂರು ವರ್ಷಗಳಿಂದ ಪಾರ್ಶ್ವವಾಯುವಿನಿಂದಾಗಿ ಹಾಸಿಗೆಯನ್ನು ಬಿಟ್ಟು ಕದಲಲೂ ಆಗದಿದ್ದ ಒಬ್ಬ ಹೆಂಗಸು ಬೆಂಕಿ ಹೊತ್ತಿದ ಕೂಡಲೆ ಹೆದರಿ ಹಾಸಿಗೆಯಿಂದೆದ್ದು ಹೊರಗೆ ಓಡಿ ಬಂದಳಂತೆ. ಆಗ ನಾನು ಅವಳನ್ನು ಕುರಿತು “ಮನೆಗೆ ಬೆಂಕಿ ಬಿದ್ದದ್ದಕ್ಕೆ ಚಿಂತೆ ಬೇಡ. ಮನೆ ಹೊತ್ತು ಉರಿದು ನಿನಗೆ ಯಾವ ಪಾರ್ಶ್ವವಾಯುವೂ ಇಲ್ಲ ಎಂಬುದನ್ನು ಖಾತ್ರಿ ಮಾಡಿತು ಅಷ್ಟೇ” ಎಂದು ಸಮಾಧಾನ ಪಡಿಸಿ ನನ್ನ ಬಂಗಲೆಗೆ ಕರೆತಂದೆ. ಮೂರು ವರ್ಷಗಳ ಹಿಂದೆ ಆಕೆಯ ಗಂಡ ಸತ್ತ ದಿನದಿಂದಲೂ ಅವಳದ್ದು ಇದೇ ಸ್ಥಿತಿಯಂತೆ. ಭಾರತದಂತಹ ದೇಶದಲ್ಲಿ ಗಂಡನಿಲ್ಲದ ಬದುಕು ನಿಜಕ್ಕೂ ನರಕಯಾತನೆ. ಅಂತಹ ಹೆಣ್ಣು ಮತ್ತೆ ಮದುವೆಯಾಗುವಂತಿಲ್ಲ, ಅವಳ ಇಡೀ ಜೀವನವೇ ವ್ಯರ್ಥವಾಗಿಬಿಡುತ್ತದೆ. ಈಕೆಗಾದರೂ ಇನ್ನೂ ಮೂವತ್ತೂ ತುಂಬಿರಲಿಲ್ಲ. ಕಾಯಿಲೆಯ ಗಂಡ ಬದುಕಿದ್ದಾಗ ಅವರಿವರ ಮನೆಗೆಲಸ ಮಾಡಿಕೊಂಡು ಗಂಡನನ್ನು ಸಾಕುತ್ತಿದ್ದಳು. ಅವನು ಸತ್ತ ಮೇಲೆ ತನ್ನ ಉಳಿದ ಆಯುಸ್ಸೆಲ್ಲವೂ ವ್ಯರ್ಥವಾಯಿತು ಎಂಬ ಆಘಾತ ಅವಳನ್ನು ಪಾರ್ಶ್ವವಾಯುವಿಗೆ ತಳ್ಳಿತ್ತು. ಜನ ಕೊಡುತ್ತಿದ್ದ ಭಿಕ್ಷೆಯನ್ನು ತಿನ್ನುತ್ತ ಅವಳು ಉಸಿರಾಡುತ್ತಿದ್ದಳು. ಅವಳಲ್ಲಿ ಜೀವನಪ್ರೀತಿ ಎಷ್ಟಿತ್ತು ಎಂದರೆ ಬೆಂಕಿ ಹೊತ್ತಿಕೊಂಡಾಗ ಗಂಡ, ಅವನ ಕಾಯಿಲೆ, ಅವನ ಸಾವು, ತನ್ನ ಪಾರ್ಶ್ವವಾಯು ಎಲ್ಲವನ್ನೂ ಒಮ್ಮೆಲೆ ಕಿತ್ತೆಸೆದು ಹೊರಗೆ ಓಡಿ ಬಂದಿದ್ದಳು. :ಬೆಂಕಿ ಹೊತ್ತಿದ್ದು ಒಳ್ಳೆಯದೇ ಆಯಿತು, ಈ ಮೂರ್ಖ ಸಮಾಜದ ನಂಬಿಕೆಗಳಿಗೆ ಬೆಲೆ ಕೊಡಬೇಡ. ಈ ಊರಲ್ಲಿ ಅಲ್ಲದಿದ್ದರೆ ಇನ್ನೊಂದು ಊರಿನಲ್ಲಿ ನಾನೇ ನಿಂತು ನಿನಗೆ ಮದುವೆ ಮಾಡಿಸುತ್ತೇನೆ. ಎಲ್ಲೆಡೆ ನನಗೆ ಸ್ನೇಹಿತರಿದ್ದಾರೆ” ಎಂದು ಅವಳಿಗೆ ಭರವಸೆ ನೀಡಿದೆ. ಅವಳಿಗೆ ಮದುವೆ ಮಾಡಿಸುವ ಉಪದ್ವ್ಯಾಪ ನಿನಗೇಕೆ ಎಂದು ನನ್ನ ಸಹೋದ್ಯೋಗಿಗಳು ಕೇಳಿದರು. ಆದರೆ ಒಂದು ವಿಷಯ ಒಮ್ಮೆ ನನ್ನ ಮನಸ್ಸಿಗೆ ಬಂದಿತೆಂದರೆ ನಾನು ಸುಲಭವಾಗಿ ಬಿಡುವ ಸ್ವಭಾವದವನಲ್ಲ. “ಅವಳ ಬಯಕೆ ಏನೆಂದು ನನಗೆ ಅರ್ಥವಾಗಿದೆ. ಆದರೆ ಹೊರಗೆ ಹೇಳಿಕೊಳ್ಳಲು ಹೆದರುತ್ತಿದ್ದಾಳೆ ಅಷ್ಟೇ. ಅವಳು ಮತ್ತೆ ಮದುವೆಯಾಗಿ ಸುಖವಾಗಿ ಸಂಸಾರ ಮಾಡುವುದನ್ನು ನೋಡುವ ತನಕ ನನಗಂತೂ ನೆಮ್ಮದಿ ಇಲ್ಲ” ಎಂದು ಹೇಳಿದೆ. ಎಂಟೇ ದಿನಗಳಲ್ಲಿ ಗಂಡನನ್ನೂ ಹುಡುಕಿದೆ. ಅವಳಿಗೆ ಗಂಡು ಹುಡುಕಲು ನಾನು ಎಲ್ಲೆಡೆ ಪ್ರಯತ್ನಿಸುತ್ತಿದ್ದುದನ್ನು ಕಂಡು ನಮ್ಮ ಕಾಲೇಜಿನ ಜವಾನ “ಸರ್, ನೀವು ಇಷ್ಟೊಂದು ತೊಂದರೆ ತೆಗೆದುಕೊಳ್ಳುತ್ತಿರುವುದನ್ನು ನೋಡಿದರೆ ನನಗೂ ಕಷ್ಟವಾಗುತ್ತದೆ. ನನ್ನಿಂದೇನಾದರೂ ಸಹಾಯವಾದೀತೇ” ಎಂದು ಕೇಳಿದ. ನನಗೆ ಅಚ್ಚರಿಯಾಯಿತು “ಆ ವಿಧವೆಯನ್ನು ಮದುವೆಯಾಗಬಲ್ಲೆಯಾ?” ಎಂದು ಕೇಳದಿರಲಿಲ್ಲ. “ನೀವು ಹೂ ಎಂದರೆ ಬೆಟ್ಟದಿಂದ ಬೀಳಲೂ ಸಿದ್ಧ. ಆದರೆ ನಿಮ್ಮನ್ನು ಈ ಸ್ಥಿತಿಯಲ್ಲಿ ನೋಡಲಾರೆ” ಎಂದು ಹೇಳಿದ. ಆಮೇಲೆ ನಾನೇ ನಿಂತು ಅವರಿಬ್ಬರ ಮದುವೆ ಮಾಡಿಸಿದೆ. ಆಕೆ ಇನ್ನೂ ಆಘಾತ ವೇದನೆಗಳಿಂದ ಹೊರ ಬಂದಿರಲಿಲ್ಲವಾದ್ದರಿಂದ ಕೆಲಕಾಲ ನನ್ನ ಬಂಗಲೆಯಲ್ಲೇ ಇರಲು ಅವರಿಬ್ಬರಿಗೂ ಅವಕಾಶ ನೀಡಿದೆ. “ನಿಮ್ಮದೇ ಬಂಗಲೆ ಎಂದು ಭಾವಿಸಿ. ನಾನು ನನ್ನ ಕೋಣೆಯನ್ನು ಬಿಟ್ಟು ಹೊರಬರುವವನಲ್ಲ” ಎಂದೆ. ಅವಳ ಮುಖ ಅರಳಿತು. ಆರು ತಿಂಗಳಲ್ಲಿ, ನನಗೆ ಬೇರೆಯ ಕಡೆ ವರ್ಗವಾಗುವ ಹೊತ್ತಿಗೆ ಆಕೆ ಸಂಪೂರ್ಣ ಬದಲಾಗಿದ್ದಳು. ನಮ್ಮ ಕಾಲೇಜಿನ ಜವಾನನು “ನಾನು ಕರುಣಾವಶನಾಗಿ, ನಿಮಗೆ ಉಪಕಾರ ಮಾಡಲೆಂದು ಮದುವೆಗೆ ಒಪ್ಪಿದೆ. ಆದರೆ ಈಗ ಈಕೆ ನನ್ನ ಅರ್ಧಾಂಗಿ, ಈಕೆ ನನ್ನ ಭಾಗ್ಯವನ್ನೇ ಬದಲಾಯಿಸಿದ್ದಾಳೆ. ನನ್ನಂಥ ಬಡವನಿಗೆ ಯಾರು ಹೆಣ್ಣು ಕೊಡಲು ಮುಂದೆ ಬರುತ್ತಿದ್ದರು? ನಿಮ್ಮಿಂದ ನನ್ನ ಬದುಕೇ ಬದಲಾಯಿತು. ಈ ಉಪಕಾರವನ್ನು ಎಂದಿಗೂ ಮರೆಯಲಾರೆ” ಎಂದ. “ನೀವು ಇನ್ನೂ ಕೆಲಕಾಲ ಈ ಬಂಗಲೆಯಲ್ಲಿರಿ ನನ್ನ ಜಾಗಕ್ಕೆ ಹೊಸದಾಗಿ ಬರುವ ಬೇರೊಬ್ಬ ಉಪನ್ಯಾಸಕನೊಂದಿಗೆ ಮಾತನಾಡಿ ಒಪ್ಪಿಸುತ್ತೇನೆ” ಎಂದು ಭರವಸೆ ನೀಡಿದ್ದಲ್ಲದೆ ಆ ಹೊಸ ಉಪನ್ಯಾಸಕನನ್ನೂ ಸಂಪರ್ಕಿಸಲು ಪ್ರಯತ್ನಿಸಿದೆ. ನನ್ನಂತೆಯೇ ಬ್ರಹ್ಮಚಾರಿಯಾಗಿದ್ದ ಅವರು ಫೋನಿನಲ್ಲೇ ಒಪ್ಪಿಗೆ ನೀಡಿಬಿಟ್ಟರು. ಇದಾದ ಎರಡು ವರ್ಷಗಳಾದ ಮೇಲೆ ಒಮ್ಮೆ ರಾಯ್ಪುರಕ್ಕೆ ಭೇಟಿ ನೀಡಿದ್ದೆ. ನನ್ನ ಜಾಗಕ್ಕೆ ಬಂದಿದ್ದ ಉಪನ್ಯಾಸಕ ಅವರನ್ನು ಇನ್ನೂ ಬಂಗಲೆಯಲ್ಲೇ ಇರಿಸಿಕೊಂಡಿದ್ದ, ನನಗಿಂತ ಹೆಚ್ಚು ಆದರದಿಂದ ಆ ಜೋಡಿಯನ್ನು ನೋಡಿಕೊಳ್ಳುತ್ತಿದ್ದ. ನಾನು ಆಕೆಯನ್ನು “ಮತ್ತೆ ಪಾರ್ಶ್ವವಾಯು ಏನಾದರೂ ಉಂಟಾಯಿತೇ?” ಎಂದು ಕೇಳಿದೆ. “ಪಾರ್ಶ್ವವಾಯುವೇ! ಈ ಎರಡು ವರ್ಷಗಳಲ್ಲಿ ಒಂದು ಸಣ್ಣ ನೆಗಡಿಯೂ ಹತ್ತಿರ ಸುಳಿದಿಲ್ಲ” ಎಂದಳು.

 ೧೯೫೭ಕ್ಕೂ ಮುನ್ನ ಜಾಬಲ್‌ಪುರದ ಕಾಲೇಜುಗಳು ಬೇರೆ ವಿಶ್ವವಿದ್ಯಾಲಯಗಳ ಅಧೀನಕ್ಕೆ ಒಳಪಟ್ಟಿತ್ತು. ೧೯೫೭ರಲ್ಲಿ ಜಾಬಲ್‌ಪುರ ವಿಶ್ವವಿದ್ಯಾಲಯ ಸ್ಥಾಪನೆಯಾಯಿತು. ಆಗ ನಾನು ಈ ಹೊಸ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದ ಉಪನ್ಯಾಸಕನಾಗಿ ವರ್ಗಾವಣೆಯಾದೆ. ನನ್ನ ವಿದ್ಯಾರ್ಥಿ ಜೀವನದಲ್ಲಿ ನಾನು ಪಡೆದ ಒಂದೊಂದು ಅನುಭವವೂ ಮರೆಯಲಾಗದ್ದು. ವಿದ್ಯಾರ್ಥಿಯಾಗಿದ್ದಾಗ ತರಗತಿಗಳಲ್ಲಿ ಕ್ರಿಯಾಶೀಲವಾಗಿ ಭಾಗವಹಿಸುತ್ತಿದ್ದರಿಂದ ಅಧ್ಯಾಪಕನಾದ ಮೇಲೆ ವಿದ್ಯಾರ್ಥಿಯ ಮನಸ್ಥಿತಿಯನ್ನು ಅರಿತು ಪಾಠ ಮಾಡಲು ಸಾಧ್ಯವಾಯಿತು. ಅಧ್ಯಾಪಕನಾದ ಮೇಲೆ ನನ್ನ ಪ್ರತಿಯೊಂದು ತರಗತಿಯೂ ಚರ್ಚಾಕೂಟಗಳಾಗಿರುತ್ತಿದ್ದವು. ಪ್ರತಿಯೊಬ್ಬರಿಗೂ ಚರ್ಚಿಸಲು, ವಾದಿಸಲು, ಅವಕಾಶ, ಉತ್ತೇಜನ ಸಿಗುತ್ತಿತ್ತು. ಒಂದೊಂದು ಸಣ್ಣ ವಿಷಯಕ್ಕೂ ಗಂಟೆ ಗಟ್ಟಲೆ ಚರ್ಚೆಗಳಾಗುತ್ತಿದ್ದವು. ಕೆಲವು ಚರ್ಚೆಗಳು ಮಾರನೆಯ ದಿನಕ್ಕೂ ಮುಂದುವರೆಯುತ್ತಿದ್ದವು. ಇದು ಹೀಗೆ ಮುಂದುವರೆದರೆ ಪಠ್ಯಕ್ರಮ ಮುಗಿಯುವುದು ಹೇಗೆ ಎಂದು ಚಿಂತಿಸುತ್ತಿದ್ದ ವಿದ್ಯಾರ್ಥಿಗಳೂ ಇಲ್ಲದಿರಲಿಲ್ಲ. ಅಂಥವರಿಗೆ “ನಿಮ್ಮ ಬುದ್ಧಿ ಚುರುಕುಗೊಳ್ಳುವುದು ಮುಖ್ಯ, ಪಠ್ಯಕ್ರಮವಲ್ಲ, ಒಮ್ಮೆ ಬುದ್ಧಿ ಚುರುಕಾದರೆ ಒಂದೇ ರಾತ್ರಿ ಕುಳಿತು ಪಠ್ಯಕ್ರಮವನ್ನು ಓದಿ ಮುಗಿಸಬಹುದು. ಐನೂರು ಪುಟಗಳನ್ನು ಓದಿದರೂ ಅಲ್ಲಿ ನಮಗೆ ಬೇಕಾಗಿರುವುದು ಬರೀ ಒಂದು ಪ್ಯಾರಾ ಮಾತ್ರ ಎಂಬುದನ್ನು ಗ್ರಹಿಸಲಾರದವನು ಎಷ್ಟು ಓದಿ ಏನು ಲಾಭ?” ಎಂದು ಕೇಳುತ್ತಿದ್ದೆ. ನಾನು ಎಲ್ಲ ವಿದ್ಯಾರ್ಥಿಗಳನ್ನೂ ಗೌರವದಿಂದ ನಡೆಸಿಕೊಳ್ಳುತ್ತಿದ್ದೆ, ತರಗತಿಯ ಒಳಗೆ, ಹೊರಗೆ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡುತ್ತಿದ್ದೆ. ಹಾಗಾಗಿ ಅವರೂ ನನ್ನನ್ನು ಮೆಚ್ಚಿದ್ದರು.

ನಾನು ಎಂದೂ ಸಂಬಳ ತೆಗೆದುಕೊಳ್ಳಲು ಹೋದವನಲ್ಲ. ಸಂಬಳದ ದಿನ ನನ್ನ ಚೆಕ್ಕನ್ನು ಬರೆದು ಯಾರಾದರೂ ವಿದ್ಯಾರ್ಥಿಯ ಮೂಲಕ ತರಿಸಿಕೊಳ್ಳುತ್ತಿದ್ದೆ. “ಆ ಮೊತ್ತದಲ್ಲಿ ನಿನ್ನ ಖರ್ಚಿಗೇನಾದರೂ ಬೇಕಾದರೆ ತೆಗೆದುಕೊಂಡು ಉಳಿದದ್ದನ್ನು ಕೊಡು, ಒಂದು ವೇಳೆ ಪೂರ್ತಿ ಹಣ ಬೇಕೆನಿಸಿದರೆ ಅಷ್ಟನ್ನೂ ಇಟ್ಟುಕೊಳ್ಳಬಹುದು” ಎಂದು ಅಂತಹ ವಿದ್ಯಾರ್ಥಿಗೆ ಹೇಳಿ ಕಳುಹಿಸುತ್ತಿದ್ದೆ. ಹೀಗೆ ನಾನು ಉಪನ್ಯಾಸಕನಾಗಿದ್ದಷ್ಟೂ ದಿನ ಯಾರಾದರೂ ಒಬ್ಬರು ಹೋಗಿ ಸಂಬಳ ತಂದುಕೊಡುತ್ತಿದ್ದರು. ಆದರೆ ಒಮ್ಮೆಯೂ ಒಬ್ಬ ವಿದ್ಯಾರ್ಥಿಯೂ ನನಗೆ ಮೋಸ ಮಾಡಿದ್ದು ನನಗೆ ಜ್ಞಾಪಕವಿಲ್ಲ. ಒಮ್ಮೆ ನನ್ನನ್ನು ಭೇಟಿ ಮಾಡಿದ್ದ ಸಂಬಳ ನೀಡುವ ಗುಮಾಸ್ತನು “ಯಾರಾದರೂ ವಿದ್ಯಾರ್ಥಿ ನಿಮ್ಮಂತೆಯೇ ಸಹಿ ಮಾಡುವುದನ್ನು ಕಲಿತು ಹಣ ತೆಗೆದುಕೊಂಡರೆ ಏನು ಗತಿ” ಎಂದು ಆತಂಕ ವ್ಯಕ್ತಪಡಿಸಿದ. ಆದರೆ ಯಾರನ್ನಾದರೂ ನಾವು ಪ್ರಾಮಾಣಿಕವಾಗಿ ನಂಬಿಬಿಟ್ಟರೆ ಅವರು ನಮಗೆ ಖಂಡಿತ ವಂಚನೆ ಮಾಡಲಾರರು. ಈ ಮೂವತ್ತೈದು ವರ್ಷಗಳಲ್ಲಿ ಎಂದೂ ನಾನು ರೂಪಾಯಿ ನೋಟನ್ನು ಕೈಯಿಂದ ಮುಟ್ಟಿಲ್ಲ. ಲೋಕದಲ್ಲಿ ರೂಪಾಯಿ ನೋಟಿಗಿಂತ ಗಲೀಜಾದ ಪದಾರ್ಥ ಇನ್ನೊಂದುಂಟೇ? ನಾನೇನೂ ಹಣದ ವಿರೋಧಿಯಲ್ಲ. ನನ್ನ ಕಣ್ಣಿಗೆ ರೂಪಾಯಿ ನೋಟು ಜಗತ್ತಿನ ಅತ್ಯಂತ ಕೊಳಕು ಪದಾರ್ಥದಂತೆ ಕಾಣಿಸುತ್ತದೆ. ಅದು ಕ್ಯಾನ್ಸರ್ ರೋಗಿಗಳು, ಏಡ್ಸ್ ರೋಗಿಗಳು, ಕ್ಷಯರೋಗಿಗಳು ಎಲ್ಲರ ಕೈಹಾದುಹೋಗಿರುತ್ತದೆ, ಜನ ನೋಟನ್ನು ಯಾವ ಯಾವ ರೀತಿಗಳಲ್ಲಿ ಬಳಸುವರೋ ಯಾರು ಬಲ್ಲರು? ಜನ ನಿಜಕ್ಕೂ ತುಂಬ ವಿಕೃತ ಮನಸ್ಸಿನವರು. ಮುಂದೆ ಒಂದು ದಿನ “ಇನ್ನು ನೋಟುಗಳನ್ನು ಕೈಯಿಂದ ಮುಟ್ಟಬಾರದು” ಎಂದು ನಿರ್ಧರಿಸಿಕೊಂಡೆ, ಹಾಗು ಅಲ್ಲಿಂದಾಚೆಗೆ ಮುಟ್ಟುವುದನ್ನು ಬಿಟ್ಟೆ.

ನಾನು ಜಾಬಲ್‌ಪುರದಲ್ಲಿ ಉಪನ್ಯಾಸಕನಾಗಿ ಸೇರಿದ ಮೊದಲ ದಿನ ತರಗತಿಯ ಒಳಗೆ ಪ್ರವೇಶಿಸಿದಾಗ ವಿದ್ಯಾರ್ಥಿಗಳು ಹಾಗು ವಿದ್ಯಾರ್ಥಿನಿಯರೂ ಪ್ರತ್ಯೇಕವಾಗಿ ಕೂತಿದ್ದುದು ನನ್ನ ಕಣ್ಣಿಗೆ ಬಿತ್ತು. ನನ್ನ ಎದುರಿಗಿದ್ದ ಮಧ್ಯದ ಬೆಂಚುಗಳು ಖಾಲಿಯಾಗಿದ್ದವು. “ಹೀಗೆ ಪ್ರತ್ಯೇಕವಾಗಿ ಕೂರುವುದು ಅಸಹಜ, ಅವೈಜ್ಞಾನಿಕ, ಎಲ್ಲರೂ ನನ್ನೆದುರು ಒಟ್ಟಿಗೆ ಕುಳಿತುಕೊಳ್ಳಿ” ಎಂದೆ, ಅವರು ಸಂಕೋಚ ಪಡುತ್ತಲೇ ಒಟ್ಟಾಗಿ ಕುಳಿತರು. “ನೀವು ಅತ್ತಿಂದಿತ್ತ ಚೀಟಿಗಳನ್ನು, ಕಾಗದಗಳನ್ನು ಎಸೆಯುವುದನ್ನು ನಾನು ಬಲ್ಲೆ. ಇನ್ನು ಅಂಥದಕ್ಕೆ ಆಸ್ಪದವಾಗುವುದಿಲ್ಲ. ಇನ್ನು ಮುಂದೆ ಪ್ರತಿದಿನ ನೀವು ಒಟ್ಟಿಗೆ ಕೂರತಕ್ಕದ್ದು, ಲೈಂಗಿಕವಾಗಿ ನೀವೆಲ್ಲ ಪ್ರಬುದ್ಧರಾಗಿರುವುದರಿಂದ ನಿಮ್ಮ ಮೇಲೆ ನಿರ್ಬಂಧ ಹೇರುವುದು ಅರ್ಥಹೀನ. ನಿಮ್ಮ ತಾರುಣ್ಯ ಸಹಜವಾದ ಎಲ್ಲ ಚೇಷ್ಟೆಗಳಿಗೂ ನನ್ನ ತರಗತಿಯಲ್ಲಿ ಅನುಮತಿ ಇದೆ. ಇದೇನು ತತ್ವಶಾಸ್ತ್ರವನ್ನು ಓದುವ ವಯಸ್ಸೇ?” ಎಂದು ಹೇಳಿದಾಗ ವಿದ್ಯಾರ್ಥಿಗಳು ನಿಜಕ್ಕೂ ಅವಾಕ್ಕಾದರು. ಕ್ರಮೇಣ ಅವರಿಗೆ ನನ್ನ ಮಾತುಗಳ ಇಂಗಿತ ಅರ್ಥವಾಯಿತು. ತನ್ನ ಸ್ವಾತಂತ್ರ್ಯಕ್ಕೆ ಗೌರವ ಸಿಗುತ್ತದೆ ಎಂದು ಮನವರಿಕೆಯಾದ ಮೇಲೆ ಯಾವ ವ್ಯಕ್ತಿಯೂ ನೀಚತನಕ್ಕೆ ಇಳಿಯುವುದಿಲ್ಲ.  ಕುಲಪತಿಗಳ ಬಳಿಗೆ ನನ್ನ ಬಗ್ಗೆ ಹಲವು ದೂರುಗಳು ಹೋದವು. ಒಂದು ದಿನ ನನ್ನನ್ನು ಕರೆದು ಕೇಳಿದರು “ಇದೇನು ನೀವು ವಿದ್ಯಾರ್ಥಿಗಳಿಗೆ ’ಪ್ರೇಮಪತ್ರ ಬರೆಯಲು ಗೊತ್ತಿಲ್ಲದಿದ್ದರೆ ಹೇಳಿ, ನಾನು ಕಲಿಸುತ್ತೇನೆ, ತತ್ವಶಾಸ್ತ್ರವನ್ನೇನು ಎರಡು ವರ್ಷಗಳ ಪಠ್ಯಕ್ರಮವನ್ನು ಆರು ತಿಂಗಳಲ್ಲೇ ಮುಗಿಸಬಹುದು. ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಕಾಲೇಜಿನಲ್ಲಿ ಆನಂದದಿಂದ ಕಾಲ ಕಳೆಯಿರಿ’ ಎಂದೆಲ್ಲ ಬೋಧಿಸುತ್ತಿರುವಿರಂತೆ” ಎಂದು ವಿಚಾರಿಸಿದರು. ಆಗ ನಾನು “ಏಕೆ ನೀವೆಂದೂ ವಿದ್ಯಾರ್ಥಿ ಜೀವನ ಮಾಡಿದವರಲ್ಲವೇ?” ಎಂದು ಕೇಳಿದೆ, “ಇದೆಂಥ ಪ್ರಶ್ನೆ ನಾನು ವಿದ್ಯಾರ್ಥಿ ಜೀವನ ನಡೆಸದೆ ಕುಲಪತಿಯಾಗಲು ಸಾಧ್ಯವೇ?” ಎಂದರು. “ಹಾಗಿದ್ದರೆ ಸ್ವಲ್ಪ ನೆನಪಿಸಿಕೊಳ್ಳಿ ನಿಮ್ಮ ತರಗತಿಯಲ್ಲಿ ಹುಡುಗಿಯರು ಪ್ರತ್ಯೇಕವಾಗಿ ಕುಳಿತುಕೊಳ್ಳುತ್ತಿದ್ದಾಗ ನಿಮಗೆ ಹೇಗನ್ನಿಸುತ್ತಿತ್ತು?” “ಇದು ಅಸಂಬದ್ಧ, ನಾನು ನಿಮ್ಮನ್ನು ವಿಚಾರಣೆ ಮಾಡಲು ಕರೆಸಿದೆ ಎನ್ನುವುದು ನೆನಪಿರಲಿ” ಎಂದು ರೇಗಿದರು. “ವಿಚಾರಣೆ ಆಮೇಲೆ, ನನಗೆ ನಿಮ್ಮ ಪ್ರಾಮಾಣಿಕ ಉತ್ತರ ಬೇಕು ಇಲ್ಲದಿದ್ದರೆ ಹೇಳಿ. ನಾಳೆಯ ದಿನ ಇದೇ ವಿಷಯದ ಬಗ್ಗೆ ಒಂದು ಬಹಿರಂಗ ಚರ್ಚೆಯನ್ನೇ ನಡೆಸುತ್ತೇನೆ. ಎಲ್ಲ ಪ್ರೊಫೆಸರುಗಳೂ, ವಿದ್ಯಾರ್ಥಿಗಳೂ ಅದರಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತೇನೆ” ಎಂದೆ “ಅಷ್ಟೆಲ್ಲ ಆವೇಶ ಬೇಡ, ಇರಬಹುದು. ಆಗ ನನ್ನ ಗಮನ ಖಂಡಿತವಾಗಿ ಉಪನ್ಯಾಸಕ್ಕಿಂತ ಹುಡುಗಿಯರ ಕಡೆಗೇ ಹರಿಯುತ್ತಿತ್ತು. ಅವರೂ ನಮ್ಮತ್ತ ಚೀಟಿಗಳನ್ನು ಎಸೆಯುತ್ತಿದ್ದರು ಇವೆಲ್ಲ ಬಹಿರಂಗ ಚರ್ಚೆಯಾಗಬೇಕೇ? ನಿಮ್ಮ ವಾದ ಸರಿ ಇರಬಹುದು. ಆದರೆ ಹೊರಗೆ ಈ ವಿಚಾರಗಳು ತಿಳಿದು ಜನ ನನ್ನನ್ನು ಪ್ರಶ್ನಿಸಿದರೆ ನಾನು ಏನು ಉತ್ತರ ಹೇಳಲಿ?”. “ಆ ಚಿಂತೆ ನಿಮಗೆ ಬೇಡ. ಅದಕ್ಕೆಲ್ಲ ನಾನು ಉತ್ತರಿಸುತ್ತೇನೆ. ಈ ವಿಷಯಕ್ಕಾಗಿ ಮತ್ತೆ ನನ್ನನ್ನು ಕರೆಸಬೇಡಿ” ಎಂದು ಹೇಳಿ ಹೊರನಡೆದೆ.

ನಾನು ಯಾವ ವಿದ್ಯಾರ್ಥಿಯ ಹಾಜರಿಯನ್ನೂ ತೆಗೆದುಕೊಳ್ಳುತ್ತಿರಲಿಲ್ಲ. “ಕೇಳುವ ಮನಸ್ಸಿಲ್ಲದಿದ್ದರೆ ಹೊರಟು ಹೋಗಬಹುದು ಅಥವ ಇಷ್ಟ ಬಂದಾಗ ಒಳಗೆ ಬಂದು ಕೂರಬಹುದು. ಇಂಥದಕ್ಕೆಲ್ಲ ಪದೇ ಪದೇ ನನ್ನ ಅನುಮತಿ ಪಡೆಯಬೇಕಿಲ್ಲ. ನನಗೆ ಪಾಠ ಮುಖ್ಯ, ನೀವು ಯಾವಾಗ ಬರುವಿರಿ, ಯಾವಾಗ ಎದ್ದು ಹೋಗುವಿರಿ ಎಂಬುದರಲ್ಲಿ ನನಗೆ ಆಸಕ್ತಿ ಇಲ್ಲ” ಎಂದಿದ್ದೆ. ತಿಂಗಳ ಕೊನೆಗೆ ಯಾರಿಗೂ ಶೇ. ೭೫ಕ್ಕಿಂತ ಕಡಿಮೆ ಆಗದಂತೆ ಎಲ್ಲರಿಗೂ ಸರಾಸರಿ ಹಾಜರಿ ಕೊಟ್ಟುಬಿಡುತ್ತಿದ್ದೆ. ಕ್ರಮೇಣ ನನ್ನ ವಿಷಯವನ್ನು ತೆಗೆದುಕೊಳ್ಳದ ವಿದ್ಯಾರ್ಥಿಗಳೂ ನನ್ನ ತರಗತಿಗಳಿಗೆ ಬರಲಾರಂಭಿಸಿದರು. ಕಿಟಕಿಗಳ ಮೇಲೆ ಕುಳಿತೂ ಪಾಠವನ್ನು ಕೇಳುತ್ತಿದ್ದರು. ನನ್ನ ತರಗತಿಯ ಬಾಗಿಲುಗಳು ಎಲ್ಲರಿಗೂ ತೆರೆದಿದ್ದವು. ಒಮ್ಮೆಯಂತೂ ಕುತೂಹಲಕ್ಕೆ ಸ್ವತಃ ಉಪಕುಲಪತಿಗಳೇ ನನ್ನ ತರಗತಿಗೆ ಭೇಟಿ ನೀಡಿದರು. ಹುಡುಗರು-ಹುಡುಗಿಯರು ಪಕ್ಕಪಕ್ಕದಲ್ಲೇ ಕುಳಿತು ನಿಶ್ಯಬ್ದವಾಗಿ ಪಾಠ ಕೇಳುತ್ತಿದ್ದುದನ್ನು ಕಂಡು ಅವರಿಗೆ ಆಶ್ಚರ್ಯವಾಯಿತು. ಯಾರೊಬ್ಬರೂ ಕ್ಷುಲ್ಲಕ ಚೇಷ್ಟೆಗಳಲ್ಲಿ ತೊಡಗಿರಲಿಲ್ಲ. ಅಂತಹ ಚೇಷ್ಟೆ ತವಕಗಳಿಗೆ ತೊಡಗಲು ಯಾರಿಗೂ ಮನಸ್ಸಿರಲಿಲ್ಲ. ಏಕೆಂದರೆ ಯಾವ ಕಡಿವಾಣವನ್ನೂ ಹಾಕದೇ ಆ ಬಗೆಯ ಚೇಷ್ಟೆಗಳನ್ನು ಚಿಗುರಿಸುವ ಮೂಲವನ್ನೇ ನಾನು ಕತ್ತರಿಸಿದ್ದೆ. ಆಮೇಲೆ ನನ್ನನ್ನು ಕರೆದು ಹೇಳಿದರು “ಎಲ್ಲ ತರಗತಿಗಳೂ ಹೀಗೆಯೇ ನಡೆಯತಕ್ಕದ್ದು ಎಂದು ನನಗೆ ಮನವರಿಕೆ ಆಗಿರುವುದಾದರೂ ಅದನ್ನು ಧೈರ್ಯವಾಗಿ ಹೇಳಲಾರೆ. ಈ ವಿಷಯದಲ್ಲಿ ನಾನು ನಿಮ್ಮಂಥ ಅಸಾಧಾರಣ ಧೈರ್ಯಶಾಲಿಯಲ್ಲ” ಎಂದರು. 

ಪಾಠದ ವಿಷಯದಲ್ಲಿ ನಾನು ನನ್ನದೇ ಕ್ರಮವನ್ನು ಅನುಸರಿಸುತ್ತಿದ್ದೆ. ನಲವತ್ತೈದು ನಿಮಿಷಗಳ ತರಗತಿಯಲ್ಲಿ ಇಪ್ಪತ್ತು ನಿಮಿಷಗಳ ಕಾಲ ನಾನು ಪಠ್ಯವಿಷಯವನ್ನು ಪಾಠ ಮಾಡುತ್ತಿದ್ದೆ. ಇನ್ನು ಇಪ್ಪತ್ತು ನಿಮಿಷಗಳ ಕಾಲ ನಾನು ಮಾಡಿದ್ದ ಪಾಠವನ್ನು ತಾರ್ಕಿಕವಾಗಿ ಹಂತ ಹಂತವಾಗಿ ಭಗ್ನಗೊಳಿಸುತ್ತಿದ್ದೆ. ವಿದ್ಯಾರ್ಥಿಗಳು “ಹೀಗೆಲ್ಲ ಪಾಠ ಮಾಡಿದರೆ ನಾವು ಪರೀಕ್ಷೆಯಲ್ಲಿ ಏನನ್ನು ಬರೆಯುವುದು?” ಎಂದು ಕೇಳುತ್ತಿದ್ದರು. ಆಗ ನಾನು “ಪರೀಕ್ಷಾ ದೃಷ್ಟಿಯಿಂದ ನನ್ನ ಮೊದಲ ಇಪ್ಪತ್ತು ನಿಮಿಷಗಳ ಪಾಠವನ್ನು ಪರಿಗಣಿಸಿದರೆ ಸಾಕು. ಆದರೆ ನೀವು ನಂಬಿದ್ದನ್ನು, ಕಲಿತದ್ದನ್ನು ನೀವೇ ಹೀಗೆ ನಿರಚನಗೊಳಿಸದಿದ್ದರೆ ನಿಮ್ಮ ಕಲಿಕೆ ನಿಮ್ಮ ಮೌಢ್ಯವಾಗಿ ಪರಿಣಮಿಸುತ್ತದೆ” ಎನ್ನುತ್ತಿದ್ದೆ. ವಿಶ್ವವಿದ್ಯಾಲಯದ ಪಠ್ಯಕ್ರಮಕ್ಕೆ ನೆನಪಿನ ಶಕ್ತಿ ಇದ್ದರೆ ಸಾಕು. ಗುಮಾಸ್ತರುಗಳನ್ನು, ಯಂತ್ರಗಳನ್ನು ಸೃಷ್ಟಿ ಮಾಡಲು ಈ ಪಠ್ಯಕ್ರಮ ಸಾಕು. ಆದರೆ ನನ್ನ ಕ್ರಮ ಬುದ್ಧಿ ಶಕ್ತಿಯನ್ನು, ಸೂಕ್ಷ್ಮ ಸಂವೇದನೆಯನ್ನು ಅಪೇಕ್ಷಿಸುತ್ತದೆ.

ನಾನು ಕಾಲೇಜು ಉಪನ್ಯಾಸಕನಾಗಿದ್ದಾಗ ಎರಡೇ ತಿಂಗಳಲ್ಲಿ ಇಡೀ ಪಠ್ಯಕ್ರಮವನ್ನು ಮುಗಿಸಿ ವರ್ಷದ ಉಳಿದ ಹತ್ತೂ ತಿಂಗಳು ಒಂದೇ ಸಮನೆ ಪ್ರವಾಸ ಮಾಡುತ್ತಿದ್ದೆ. ಎರಡನೆಯ ತಿಂಗಳ ಕೊನೆಯ ದಿನ “ನಾನಿನ್ನು ಹೊರಡುತ್ತೇನೆ, ಮತ್ತೆ ಪರೀಕ್ಷೆಯ ದಿನ ಮತ್ತೆ ಭೇಟಿ ಮಾಡೋಣ, ಈ ಮಧ್ಯೆ ಏನಾದರೂ ಸಂಶಯವಿದ್ದರೆ ಆಗೊಮ್ಮೆ ಈಗೊಮ್ಮೆ ಇತ್ತ ಬರುತ್ತೇನೆ, ಆಗ ನನ್ನ ಬಳಿ ಬಂದು ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ” ಎಂದು ಹೇಳಿ ಹೋಗುತ್ತಿದ್ದೆ. ಇದೆಲ್ಲ ನನ್ನ ಸಹೋದ್ಯೋಗಿಗಳಿಗೆ ಅಸಮಾಧಾನದ ವಿಷಯವಾಗಿದ್ದರೂ ಯಾರಿಗೂ ದೂರು ನೀಡುವ ಧೈರ್ಯ ಇರಲಿಲ್ಲ. ಏಕೆಂದರೆ ಕೂಡಲೆ ನಾನು ಇಡೀ ವರ್ಷಕ್ಕಾಗುವಷ್ಟು ಪಠ್ಯಕ್ರಮವನ್ನು ರೂಪಿಸುವ ಸಲಹೆ ಕೊಡುತ್ತಿದ್ದೆ. ಆದರೆ ಆ ಸೋಗಲಾಡಿ ಪ್ರೊಫೆಸರುಗಳಿಗೆ ಪಠ್ಯಕ್ರಮ ಹೀಗೆ ಹೊರೆಯಾಗುವುದು ಬೇಕಿರಲಿಲ್ಲ. ವಿಧಿಯಿಲ್ಲದೇ ಅವರು ತಮ್ಮ ಅಸಮಾಧಾನವನ್ನು ನುಂಗಿಕೊಳ್ಳುತ್ತಿದ್ದರು. ಜಾಬಲ್‌ಪುರದಲ್ಲಿ ಇರಬೇಕಾದವನು ಒಂದು ದಿನ ಕಲ್ಕತ್ತಾದಲ್ಲಿ, ಇನ್ನೊಂದು ದಿನ ದೆಹಲಿಯಲ್ಲಿ, ಮತ್ತೊಂದು ದಿನ ಬನಾರಸ್‌ನಲ್ಲಿ ಪ್ರವಚನಗಳನ್ನು ನೀಡುತ್ತಿದ್ದ ಸುದ್ದಿಗಳು ದಿನ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು. ಕುಲಪತಿಗಳು “ನೀವು ಎಲ್ಲಾದರೂ ಸಂಚರಿಸಿ ಆದರೆ ನಿಮ್ಮ ಪ್ರವಚನದ ಸುದ್ದಿಗಳು ಪತ್ರಿಕೆಗಳಲ್ಲಿ ಪ್ರಕಟವಾಗುವುದು ಬೇಡ” ಎನ್ನುತ್ತಿದ್ದರು. ಆದರೆ ಪತ್ರಕರ್ತರನ್ನು ನಾನು ಹೇಗೆ ತಡೆಯಲಿ? ಅವರನ್ನು ಗುರುತಿಸುವ ಬಗೆಯಾದರೂ ಹೇಗೆ? ಆಗ ನಾನು “ನೀವೇನೂ ಚಿಂತಿಸಬೇಡಿ, ನನ್ನ ಈ ಸಂಚಾರದಿಂದ ನಿಮಗೇನಾದರೂ ತೊಂದರೆ ಇದ್ದರೆ ತಿಳಿಸಿ ಕೂಡಲೆ ರಾಜಿನಾಮೆ ನೀಡುತ್ತೇನೆ ಅಥವ ಯಾರು ಆಕ್ಷೇಪಿಸುವರು ಹೇಳಿ, ಅವರಿಗೆ ನಾನು ವಿವರಣೆ ನೀಡುತ್ತೇನೆ” ಎಂದಿದ್ದೆ. ಹೀಗೆ ೯ ವರ್ಷಗಳನ್ನು ಕಳೆದೆ. ಈ ಒಂಬತ್ತು ವರ್ಷಗಳಲ್ಲಿ ಅವರು ಒಮ್ಮೆಯೂ ನನ್ನ ರಾಜಿನಾಮೆ ಕೇಳಲಿಲ್ಲ ಮತ್ತು ಯಾರೂ ನನ್ನ ತಂಟೆಗೆ ಬರಲಿಲ್ಲ.

ಯೋಗ್ಯರಾದವರು ಇನ್ನೊಬ್ಬರನ್ನು ನಿಂದಿಸುವುದಿಲ್ಲ, ಬದಲಿಗೆ ಕರುಣೆ ತೋರಿಸುತ್ತಾರೆ. ನಾನು ಅಧ್ಯಾಪಕನಾಗಿದ್ದಾಗ ಮೌಲ್ಯಮಾಪನ ಕಾರ್ಯಕ್ಕೆ ಎಂದೂ ಹಾಜರಾದವನಲ್ಲ. ಒಮ್ಮೆ ಕುಲಪತಿಗಳ ಕಛೇರಿಯಿಂದ ಕರೆ ಬಂದಿತು, ನಾನು ಅವರ ಕೋಣೆಗೆ ಹೋಗುತ್ತಿದ್ದಂತೆಯೇ “ಏನು ನಿಮ್ಮ ಸಮಾಚಾರ? ಪ್ರಶ್ನೆಪತ್ರಿಕೆಯನ್ನು ತಯಾರಿಸಿ ಕೊಡಿ ಎಂದರೆ ಒಪ್ಪಲಿಲ್ಲವಂತೆ! ಈಗ ಮೌಲ್ಯಮಾಪನ ಕೆಲಸಕ್ಕೂ ಹಾಜರಾಗುತ್ತಿಲ್ಲವೆಂದು ದೂರು ಬಂದಿದೆ” ಎಂದು ವಿವರಣೆ ಕೇಳಿದರು. “ಇಲ್ಲ ನನಗೆ ನಮ್ಮ ಪರೀಕ್ಷಾ ಕ್ರಮದಲ್ಲೇ ದೋಷಗಳು ಕಾಣಿಸುತ್ತಿವೆ. ಐದು ಪ್ರಶ್ನೆಗಳಿಂದ ಒಬ್ಬ ವಿದ್ಯಾರ್ಥಿಯ ಯೋಗ್ಯತೆ ತೀರ್ಮಾನ ನೀಡುವುದು ಸರಿಯೇ? ಕಾಕತಾಳೀಯ ನ್ಯಾಯದಿಂದ ಅವನಿಗೆ ಐದು ಪ್ರಶ್ನೆಗಳಿಗೆ ಮಾತ್ರ ಉತ್ತರ ಗೊತ್ತಿದ್ದರೆ ಅಥವ ಎಲ್ಲ ಪಾಠಗಳೂ ಗೊತ್ತಿದ್ದು ಆ ಐದು ಪ್ರಶ್ನೆಗಳಿಗೆ ಮಾತ್ರ ಉತ್ತರ ತಿಳಿಯದಿದ್ದರೆ ನಮ್ಮ ಮೌಲ್ಯಮಾಪನ ತಪ್ಪಾಗುವುದಿಲ್ಲವೇ? ಅದು ಬರೀ ತಪ್ಪಲ್ಲ, ಅಪರಾಧವೆಂದೇ ನನ್ನ ಅನಿಸಿಕೆ. ಉತ್ತರ ಪತ್ರಿಕೆಗಳಲ್ಲಿ ವಿದ್ಯಾರ್ಥಿಗಳು ತಪ್ಪು ಉತ್ತರಗಳನ್ನು ಬರೆದಿದ್ದರೆ ನನಗೆ ದುಃಖವಾಗುತ್ತದೆ, ಕರುಣೆ ಉಕ್ಕುತ್ತದೆ. ನಾನು ಕರುಣಾವಶನಾಗಿ ಅಂತಹ ಪತ್ರಿಕೆಗಳಿಗೆ ಅತಿ ಹೆಚ್ಚು ಅಂಕಗಳನ್ನು ಕೊಟ್ಟಿರುವುದೂ ಉಂಟು”. “ಇದೆಂಥ ಮಾತು? ಸರಿಯುತ್ತರಕ್ಕಿಂತ ತಪ್ಪು ಉತ್ತರಗಳಿಗೆ ಹೆಚ್ಚು ಅಂಕಗಳೇ?” “ಹೌದು. ಮೌಲ್ಯಮಾಪನದಂತಹ ಕೆಲಸಕ್ಕೆ ಈಗಾಗಲೇ ಬೇಕಾದಷ್ಟು ಜನ ಅಧ್ಯಾಪಕರು ಹಾತೊರೆಯುತ್ತಿದ್ದಾರೆ, ಈ ಕೆಲಸ ಅವರಿಗೆ ಕೊಡಿ, ನನಗೆ ಬೇಡ” ಎಂದೆ ಆಗ ಕುಲಪತಿಗಳು ಸ್ವಲ್ಪ ಯೋಚಿಸಿ “ಕೆಲವು ಸಲ ಅತಿರೇಕದಿಂದ ವರ್ತಿಸುವೆಯಾದರೂ ನಿನ್ನ ಮಾತುಗಳಲ್ಲಿ ಸತ್ಯ ಇರುತ್ತದೆ. ಯಾಂತ್ರಿಕವಾಗಿ ಕೆಲಸ ಮಾಡದೇ ಪ್ರತಿಯೊಂದು ಪತ್ರಿಕೆಯ ಹಿಂದಿರುವ ವಿದ್ಯಾರ್ಥಿಯ ಜೀವವನ್ನು ಕಾಣಬಲ್ಲವನಿಗೆ ಖಂಡಿತವಾಗಿ ಸೊನ್ನೆ ಅಂಕ ನೀಡಲು ದುಃಖವಾಗುತ್ತದೆ. ಪ್ರತಿಯೊಂದು ಉತ್ತರದ ಹಿಂದೆಯೂ ಎಷ್ಟೊಂದು ಆಸೆ, ಭರವಸೆ, ಕನಸುಗಳು ಇರುತ್ತವೆ. ಉತ್ತರ ತಪ್ಪಾದರೂ ಆ ಕನಸುಗಳನ್ನು ತಪ್ಪೆನ್ನಲಾದೀತೇ? ಯಾರಿಗೆ ಗೊತ್ತು, ಆ ಕಾಣದ ವಿದ್ಯಾರ್ಥಿ ಬಡವನಾಗಿರಬಹುದು, ಬೇರೆಯವರಿಗಿರುವ ಸವಲತ್ತುಗಳಿಲ್ಲದೆ ದುಡಿದು ಕಷ್ಟ ಪಟ್ಟು ವಿದ್ಯಾಭ್ಯಾಸ ನಡೆಸುತ್ತಿರಬಹುದು, ಅಂಥವನಿಗೆ ಸೊನ್ನೆ ಕೊಡುವುದೇ?” ಎಂದು ನನ್ನ ಆಶಯವನ್ನು ಸರಿಯಾಗಿಯೇ ಅರ್ಥ ಮಾಡಿಕೊಂಡರು.

ಒಬ್ಬ ಸಾಧಾರಣ ಶಿಕ್ಷಕನಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ನಂತರ ಪ್ರಾಧ್ಯಾಪಕರಾಗಿ, ಕುಲಪತಿಗಳಾಗಿ ಕೊನೆಗೆ ಭಾರತದ ರಾಷ್ಟ್ರಪತಿಗಳ ಮಟ್ಟವನ್ನು ತಲುಪಿದರು. ಅವರು ರಾಷ್ಟ್ರಪತಿಯಾದ ಮೇಲೆ ಎಲ್ಲ ಶಾಲಾ ಕಾಲೇಜುಗಳಲ್ಲೂ ಅವರ ಹುಟ್ಟು ಹಬ್ಬವನ್ನು ’ಶಿಕ್ಷಕರ ದಿನಾಚರಣೆ’ ಎಂದೇ ಆಚರಿಸಲಾಯಿತು. ಆಗ ಮೊದಲ ಬಾರಿಗೆ ನಮ್ಮ ವಿಶ್ವವಿದ್ಯಾಲಯದಲ್ಲೂ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ಎಲ್ಲರೂ ಅವರನ್ನು ಹೊಗಳಿ ಭಾಷಣ ಮಾಡುತ್ತಿದ್ದರು. ಆದರೆ ನನಗೆ ತಡೆಯಲಾಗಲಿಲ್ಲ. ಭಾಷಣಕಾರರ ಪಟ್ಟಿಯಲ್ಲಿ ನನ್ನ ಹೆಸರೇನೂ ಇರಲಿಲ್ಲ. ಆದರೂ ನಾನು ವೇದಿಕೆಯನ್ನೇರಿ “ನಾನು ಭಾಷಣ ಮಾಡದೇ ಈ ಸಮಾರಂಭ ಮುಕ್ತಾಯವಾಗುವಂತಿಲ್ಲ” ಎಂದು ಹೇಳಿದೆ. ವೇದಿಕೆಯ ಮೇಲೆ ಕುಳಿತಿದ್ದ ಕುಲಪತಿಗಳು ಪೆಚ್ಚುಮುಖದಿಂದಲೇ ಸಮ್ಮತಿಸಿದರು, ಸಮ್ಮತಿಸದೇ ಅವರಿಗೆ ಬೇರೆ ದಾರಿ ಇರಲಿಲ್ಲ. “ಇಷ್ಟು ಹೊತ್ತು ನಿಮ್ಮ ಕುಲಪತಿಗಳು, ಉಪಕುಲಪತಿಗಳು, ಹಿರಿಯ ಪ್ರಾಧ್ಯಾಪಕರು ಎಷ್ಟೆಲ್ಲ ಅಸಂಬದ್ಧವಾಗಿ ಮಾತನಾಡಿದರು! ಇಲ್ಲಿ ಒಬ್ಬ ಶಿಕ್ಷಕನಾದವನು ರಾಜಕಾರಣಕ್ಕೆ ಇಳಿದಿರುವುದು ನಿಮಗೆ ಕಾಣಿಸುವುದಿಲ್ಲವೇ? ಇದೊಂದು ಅವನತಿ, ಗೌರವದ ನಡೆಯಲ್ಲ. ಒಬ್ಬ ಅಧ್ಯಾಪಕನಿಗೆ ಅಧ್ಯಾಪಕನ ಸ್ಥಾನದಲ್ಲಿ ಗೌರವ ಕಾಣಿಸಬೇಕಲ್ಲದೇ ರಾಷ್ಟ್ರಪತಿ ಕುರ್ಚಿಯಲ್ಲಿ ಕಾಣಿಸುವುದೆಂದರೆ ಏನರ್ಥ? ಇದು ಶಿಕ್ಷಕರ ದಿನಾಚರಣೆ ಹೇಗಾದೀತು? ಒಬ್ಬ ರಾಷ್ಟ್ರಪತಿ ತನ್ನ ಹುದ್ದೆಗೆ ರಾಜಿನಾಮೆ ನೀಡಿ ಶಿಕ್ಷಕ ವೃತ್ತಿಯನ್ನು ಕೈಗೆತ್ತಿಕೊಳ್ಳುವ ದಿನವನ್ನು ನಾನು ’ಶಿಕ್ಷಕರ ದಿನ’ವೆಂದು ಕರೆಯುತ್ತೇನೆ” ಎಂದು ಹೇಳಿದೆ. ಇಡೀ ಸಭೆ ಕರತಾಡನ ಮಾಡಿತು. ಆದರೆ ವೇದಿಕೆಯಲ್ಲಿದ್ದವರು ಮಾತ್ರ ತಲೆ ತಗ್ಗಿಸಿ ಸುಮ್ಮನೆ ನಿಂತಿದ್ದರು ಆಗ ನಾನು “ನೀವೂ ಚಪ್ಪಾಳೆ ತಟ್ಟಬೇಕು ಇಡೀ ಸಭೆ ಸಂಭ್ರಮಿಸುತ್ತಿರುವಾಗ. ನೀವು ಹೀಗೆ ಸುಮ್ಮನೆ ಕೂತಿರುವುದು ಅಸಂಗತವಾಗಿ ಕಾಣಿಸುತ್ತದೆ” ಎಂದು ತಮಾಷೆ ಮಾಡಿದೆ. ಅವರು ವಿಧಿಯಿಲ್ಲದೆ ಚಪ್ಪಾಳೆ ತಟ್ಟಿದರು. ಆಗ ಸಭೆಯ ಗದ್ದಲ ಇನ್ನೂ ತಾರಕಕ್ಕೇರಿತು, ನಾನು ಮುಂದುವರೆದು “ಬ್ರಿಟಿಷ್ ಸರ್ಕಾರಕ್ಕೆ ಗುಲಾಮತನ ತೋರಿಸುತ್ತಿದ್ದವನನ್ನು ನಾವು ಗೌರವಿಸಬೇಕೇ? ರಾಧಾಕೃಷ್ಣನ್ ಯಾವ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ? ಅವರು ಕಲ್ಕತ್ತಾ ವಿಶ್ವವಿದ್ಯಾಲಯದ ಪ್ರೊಫೆಸರ್ ಆಗಿದ್ದಾಗ ತಮ್ಮ ವಿದ್ಯಾರ್ಥಿಯ ಪಿಎಚ್.ಡಿ. ಮಹಾಪ್ರಬಂಧವನ್ನೇ ಕದ್ದಿದ್ದರು. ಆ ಮಹಾಪ್ರಬಂಧ ತಮ್ಮ ಹೆಸರಿನಲ್ಲಿ ಇಂಗ್ಲೆಂಡಿನಲ್ಲಿ ಪ್ರಕಟವಾಗುವ ತನಕ ಕಾದಿದ್ದು ಬಳಿಕ ವಿಶ್ವವಿದ್ಯಾಲಯಕ್ಕೆ ಮೌಲ್ಯಮಾಪನ ವರದಿ ನೀಡಿದ್ದರು. ಪಾಪ ಆ ಬಡವಿದ್ಯಾರ್ಥಿ ಅನ್ಯಾಯದ ವಿರುದ್ಧ ಹೋರಾಡಲು ಶಕ್ತಿಯಿಲ್ಲದಿದ್ದರೂ ಹೈಕೋರ್ಟಿನಲ್ಲಿ ಮೊಕದ್ದಮೆ ಹೂಡಿದ್ದ. ಈ ಪ್ರಬಂಧ ರಚನೆಗೂ ಬಹು ಹಿಂದೆಯೇ ನನ್ನ ಪುಸ್ತಕ ಇಂಗ್ಲೆಂಡಿನಲ್ಲಿ ಪ್ರಕಟವಾಗಿತ್ತು ಎಂದು ಅವರು ಕೋರ್ಟಿನಲ್ಲಿ ಬಲವಾಗಿ ವಾದಿಸಿದರು. ನಿಜವೇನೆಂಬುದು ಕಲ್ಕತ್ತಾ ವಿಶ್ವವಿದ್ಯಾಲಯಕ್ಕೆ ಗೊತ್ತಿತ್ತು, ಆದರೆ ಅವರು ಬಾಯಿಬಿಡದೇ ಸುಮ್ಮನಿದ್ದರು. ಕೊನೆಗೆ ರಾಧಾಕೃಷ್ಣನ್ ಆ ವಿದ್ಯಾರ್ಥಿಯನ್ನು ಕರೆದು ಹತ್ತು ಸಾವಿರ ರೂಪಾಯಿಗಳನ್ನು ನೀಡಿ ಮೊಕದ್ದಮೆಯನ್ನು ಮುಚ್ಚಿಹಾಕಿಸಿದರು. ಈ ವ್ಯಕ್ತಿ ಉಪಕುಲಪತಿಯಾಗಲು ಲಂಚ ನೀಡಿದ್ದ ವಿಷಯ ಭಾರತದ ಎಲ್ಲ ವಿಶ್ವವಿದ್ಯಾಲಯಗಳಿಗೂ ಗೊತ್ತು” ಬಳಿಕ ಕುಲಪತಿಗಳ ಕಡೆಗೆ ತಿರುಗಿ ನೋಡಿ “ನಾನು ಯಾರ ಮೇಲೆಯೂ ಆಪಾದನೆ ಮಾಡುತ್ತಿಲ್ಲ ನಿಮ್ಮ ಬಳಿ ಉತ್ತರವಿದ್ದರೆ ದಯವಿಟ್ಟು ಹೇಳಿ, ನನ್ನ ದೃಷ್ಟಿಯಲ್ಲಿ ಆತ ಒಬ್ಬ ವಂಚಕ, ಶಿಕ್ಷಕನಲ್ಲ, ಇಂಥವನು ರಾಷ್ಟ್ರಪತಿ ಭವನವನ್ನು ಪ್ರವೇಶ ಮಾಡುವುದು ಶಿಕ್ಷಕ ಸಮಾಜಕ್ಕೆ ಒಂದು ಗೌರವದ ವಿಷಯವಲ್ಲ, ಅದೊಂದು ಕಳಂಕ. ಈಗಲೂ ಕಾಲ ಮಿಂಚಿಲ್ಲ ಅವರಲ್ಲಿ ಇನ್ನೂ ವಿವೇಕ ಉಳಿದಿದ್ದರೆ ಕೂಡಲೇ ರಾಷ್ಟ್ರಪತಿ ಸ್ಥಾನಕ್ಕೆ ರಾಜಿನಾಮೆ ನೀಡಿ ಮತ್ತೆ ಶಿಕ್ಷಕನಾಗಲಿ” ಎಂದು ಹೇಳಿ ವೇದಿಕೆಯಿಂದ ಕೆಳಗಿಳಿದೆ. ನಾವು ಮಾಡಿಕೊಂಡಿರುವ ವ್ಯವಸ್ಥೆಯಲ್ಲಿ ಕುಲಪತಿಗಳಾದವರು ಇಂಥವರನ್ನು ಹೊಗಳಲೇ ಬೇಕು. ತರುವಾಯ ಕುಲಪತಿಗಳು ನನ್ನನ್ನು ಪ್ರತ್ಯೇಕವಾಗಿ ಕರೆದು “ಅಷ್ಟು ದೊಡ್ಡ ಸಭೆಯಲ್ಲಿ ಹೀಗೆಲ್ಲ ಮಾತನಾಡುವುದು ನಿನಗೆ ಒಳ್ಳೆಯದಲ್ಲ. ನಾಳೆಯ ದಿನ ಇದರ ದುಷ್ಪರಿಣಾಮಗಳನ್ನು ಎದುರಿಸಬೇಕಾಗುವುದು” ಎಂದು ಹೇಳಿದರು “ನನಗೆ ಭಯವಿಲ್ಲ ಯಾವ ಪರಿಣಾಮವನ್ನಾದರೂ ಎದುರಿಸಬಲ್ಲೆ” ಎಂದೆ. ಆದರೆ ನಾನು ನಿನ್ನ ಹಾಗೆ ಮಾತನಾಡಲಾಗುವುದೇ? “ನನ್ನನ್ನು ಈ ವಿಶ್ವವಿದ್ಯಾಲಯಕ್ಕೆ ಕುಲಪತಿಯನ್ನಾಗಿ ನೇಮಿಸಿದ್ದೇ ಅವರು” ಎಂದು ನಾನು ಹೇಗೆ ಹೇಳಿಕೊಳ್ಳಲಿ? ಎಂದರು. ನಮ್ಮ ಇಡೀ ಸಮಾಜವೇ ಮುಖವಾಡತನದಲ್ಲಿ ನಡೆಯುತ್ತಿದೆ. ನಾನಾದರೂ ಎಲ್ಲ ಮುಚ್ಚುಮರೆಗಳನ್ನು ಬಯಲು ಮಾಡುತ್ತ ಬಂದಿದ್ದೇನೆ. ಎಲ್ಲ ಬಗೆಯ ದುಷ್ಪರಿಣಾಮಗಳನ್ನು ಎದುರಿಸಿದ್ದೇನೆ, ಈಗಲೂ ಎದುರಿಸುತ್ತಿದ್ದೇನೆ. ಇನ್ನು ಮುಂದೆಯೂ, ಜೀವನವಿಡೀ ಎದುರಿಸಬೇಕಾಗಿದೆ ಎಂಬುದನ್ನೂ ಬಲ್ಲೆ. ನಾನು ಈ ಕುರಿಮಂದೆಯಲ್ಲಿ ಸೇರಿಲ್ಲ ಎಂಬ ತಿಳುವಳಿಕೆ ನನಗೆ ವಿಚಿತ್ರವಾದ ಖುಷಿ ನೀಡುತ್ತದೆ. ನಮ್ಮ ಬದುಕೇ ಬಲಿದಾನವಾದರೂ ಅದರಿಂದ ಸಿಗುವ ಆನಂದವನ್ನು ಈ ಗುಲಾಮತನ ಎಂದಿಗೂ ನೀಡಲಾರದು.

ವಿಶ್ವವಿದ್ಯಾಲಯದ ಕಾಮನ್ ರೂಮಿನಲ್ಲಿ ನನಗೂ ಒಂದು ಕುರ್ಚಿ, ಮೇಜು, ಎದುರಿಗೆ ಎರಡು ಕುರ್ಚಿಗಳನ್ನು ನೀಡಿದ್ದರೂ ಯಾವ ಅಧ್ಯಾಪಕರೂ ನನ್ನತ್ತ ಸುಳಿಯುತ್ತಿರಲಿಲ್ಲ. ಸುಳಿದರೂ ಮಾತನಾಡಲು ಹಿಂಜರಿಯುತ್ತಿದ್ದರು. ನಾನು ತುಂಬ ನಿರುಪದ್ರವಿಯಾದರೂ ಇವರೇಕೆ ಹೀಗೆ ವರ್ತಿಸುವರೆಂದು ನನಗೆ ಅರ್ಥವಾಗುತ್ತಿರಲಿಲ್ಲ. ಕಾಲೇಜಿನ ಹುಡುಗಿಯರ ಬಗ್ಗೆ ಮಾತನಾಡುವುದು, ಯಾರು ಯಾರನ್ನು ಕಿಚಾಯಿಸಿದರು ಎಂದು ಚರ್ಚಿಸುವುದು, ವಿಶ್ವವಿದ್ಯಾಲಯದ ಕ್ಷುಲ್ಲಕ ರಾಜಕೀಯದ ಬಗ್ಗೆ ಹರಟೆ ಕೊಚ್ಚುವುದು ಇವೇ ಈ ಅಧ್ಯಾಪಕರ ಮಾತುಕತೆಯ ವಿಷಯಗಳಾಗಿದ್ದವು. ನನ್ನ ಬಳಿ ಇಂಥ ಲಘು ಹರಟೆಯಲ್ಲಿ ಕಾಲಹರಣ ಮಾಡಲು ಅವರಿಂದ ಆಗುತ್ತಿರಲಿಲ್ಲ. ಕೆಲವು ಸಲ ಕಾಲೇಜಿನ ಕ್ಷುಲ್ಲಕ ಹಗರಣಗಳ ಕುರಿತು, ಪ್ರೇಮ ಪ್ರಕರಣಗಳ ಕುರಿತು ಕಾಡು ಹರಟೆ ನಡೆಸಲು ನಾನಾಗೇ ಕರೆಯುತ್ತಿದ್ದರೂ ಅದೇಕೋ ಅವರು ಹತ್ತಿರ ಬರುತ್ತಿರಲಿಲ್ಲ. ಯಾರ ಮುಲಾಜೂ ಇಲ್ಲದೆ, ಯಾವ ಮುಖವಾಡವೂ ಇಲ್ಲದೆ ಜೀವಿಸುವ ಮನುಷ್ಯ ಎಷ್ಟು ಬೇಗ ಅಪಾಯಕಾರಿ ಎನಿಸಿಕೊಳ್ಳುತ್ತಾನೆ, ತನ್ನ ಸುತ್ತ ಒಂದು ಚಂಡಮಾರುತವನ್ನೇ ಸೃಷ್ಟಿಸಿಕೊಳ್ಳುತ್ತಾನೆ. ಧೈರ್ಯವಿಲ್ಲದವರು ಅಂಥವನ ಸಮೀಪಕ್ಕೂ ಸುಳಿಯಲಾರರು.

ನನ್ನ ಶಿಷ್ಯರಾದ ಸ್ವಾಮಿ ಮೈತ್ರೇಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ನೆಹರೂ, ಜಯಪ್ರಕಾಶ್ ನಾರಾಯಣ್ ಮೊದಲಾದವರ ಸ್ನೇಹಿತ. ರಾಜಕೀಯವಾಗಿ ಅದ್ಭುತವಾದ ಭವಿಷ್ಯವನ್ನು ಹೊಂದಿದ್ದ ವ್ಯಕ್ತಿ. ನನ್ನ ಪರಿಚಯವಾದ ಮೇಲೆ ಅವರ ರಾಜಕೀಯ ಭವಿಷ್ಯವೇ ಹಾಳಾಯಿತು. ಹಣ, ಅಧಿಕಾರ, ರಾಜಕೀಯ ಪ್ರತಿಷ್ಠೆ, ಎಲ್ಲವನ್ನೂ ಕಳೆದುಕೊಂಡು ಸಾಧಾರಣ ಭಿಕ್ಷುವಿನಂತೆ ನನ್ನೊಂದಿಗೆ ನಿಂತರು. ಸಂಪುಟ ದರ್ಜೆಯ ಸಚಿವರೋ, ಮುಖ್ಯ ಮಂತ್ರಿಯೋ ಆಗಬೇಕಿದ್ದ ವ್ಯಕ್ತಿಯನ್ನು ನಾನು ಫಕೀರನನ್ನಾಗಿಸಿದೆ. ನನ್ನನ್ನು ಮೊದಲ ಸಲ ಭೇಟಿಯಾದಾಗ ಅವರು ಸಂಸದರಾಗಿದ್ದರು. ಆ ಮೊದಲ ಭೇಟಿ ಅವರ ಬದುಕಿನ ದಿಕ್ಕನ್ನೇ ಬದಲಿಸಿತು. ಡಾ. ಗೋವಿಂದ ದಾಸ್ ಎಂಬ ಹಿರಿಯ ರಾಜಕಾರಿಣಿಯೊಬ್ಬರು ನನ್ನನ್ನು ಔತಣಕ್ಕೆ ಆಹ್ವಾನಿಸಿದ್ದರು. ಅವರ ಮನೆಯಲ್ಲೇ ನಾನು ಮೈತ್ರೇಯರನ್ನು ಭೇಟಿಯಾದದ್ದು. ಆ ಹಿರಿಯ ರಾಜಕಾರಿಣಿಯೂ ಹಲವು ದಶಕಗಳಿಂದ ನನ್ನ ಆತ್ಮೀಯರಾಗಿದ್ದರು. ಭಾರತದ ಸಂಸತ್ ಇತಿಹಾಸದಲ್ಲೇ ಅತ್ಯಂತ ದೀರ್ಘಾವಧಿಯ ಸಂಸದರಾಗಿದ್ದವರು ಗೋವಿಂದ ದಾಸ್. ಇಡೀ ಮಧ್ಯಪ್ರದೇಶದಲ್ಲಿಯೇ ಅತ್ಯಂತ ಶ್ರೀಮಂತ ಕುಟುಂಬ ಅವರದು. ಆದರೆ ನನ್ನ ಸಹವಾಸ ಅವರನ್ನು ಯಾವುದೇ ರೀತಿಯಲ್ಲಿ ಪರಿವರ್ತಿಸಿರಲಿಲ್ಲ. ಅವರು ನನ್ನನ್ನು ಬಹುವಾಗಿ ಪ್ರೀತಿಸುತ್ತಿದ್ದರು ಆದರೆ ನನ್ನಿಂದ ಏನನ್ನೂ ಕಲಿಯಲಿಲ್ಲ. ಕೊನೆಗೂ ಒಬ್ಬ ಸಂಸದರಾಗಿಯೇ ತೀರಿಕೊಂಡರು. ಆದರೆ ಮೈತ್ರೇಯ ಹಾಗಾಗಲಿಲ್ಲ, ಸಂವೇದನಾಶೀಲ ಮನಸ್ಸಿಲ್ಲದೇ ಅಧ್ಯಾತ್ಮ ಮಾರ್ಗದಲ್ಲಿ ನಡೆಯಲಾಗುವುದಿಲ್ಲ.

ಡಾಕ್ಟರ್ ಗೋವಿಂದದಾಸ್‌ರ ತಂದೆ ರಾಜಾ ಗೋಕುಲ್‌ದಾಸ್. ಅವರೇನೂ ರಾಜ ವಂಶದವರಲ್ಲ ಆದರೆ ಎಷ್ಟು ಶ್ರೀಮಂತರಾಗಿದ್ದರೆಂದರೆ ಬ್ರಿಟಿಷರು ಅವರಿಗೆ ’ರಾಜಾ’ ಎಂಬ ಬಿರುದನ್ನು ನೀಡಿದ್ದರು. ಜಾಬಲ್‌ಪುರದ ಮುಕ್ಕಾಲು ಪಾಲು ಆಸ್ತಿ ಇವರ ಮನೆತನದ್ದಾಗಿತ್ತು. ಕೊನೆಯವರೆಗೂ ಬ್ರಿಟಿಷರಿಗೆ ವಿಧೇಯರಾಗಿಯೇ ನಡೆದುಕೊಂಡಿದ್ದರಿಂದ ಇವರದ್ದು ಅತ್ಯಂತ ಸಮೃದ್ಧ ಕುಟುಂಬವಾಗಿಯೇ ಉಳಿದುಕೊಂಡು ಬಂದಿತು. ಆದರೆ ಡಾಕ್ಟರ್ ಗೋವಿಂದದಾಸ್ ತುಂಬ ಚಿಲ್ಲರೆ ಸ್ವಭಾವದವನು. ನನ್ನನ್ನು ತುಂಬ ಪ್ರೀತಿಸುತ್ತಿದ್ದ, ಗೌರವಿಸುತ್ತಿದ್ದ. ಗೋವಿಂದದಾಸ್ ಬಗ್ಗೆ ಹೀಗೆಲ್ಲ ಹೇಳಲು ನನಗೆ ತುಂಬ ಬೇಸರವಾಗುತ್ತದೆ, ಆದರೆ ಆತನ ಸ್ವಭಾವ ಅಂತಹುದಾಗಿದ್ದರೆ ಅದಕ್ಕೆ ನಾನು ಹೊಣೆಯೇ? ದೆಹಲಿಯಲ್ಲಿ ಸಂಸತ್ ಅಧಿವೇಶನ ಇಲ್ಲದಿದ್ದಾಗಲ್ಲೆಲ್ಲ ಅವರು ಜಾಬಲ್‌ಪುರದಲ್ಲಿ ಇರುತ್ತಿದ್ದರು. ಜಾಬಲ್‌ಪುರದಲ್ಲಿ ಪ್ರತಿದಿನ ಬೆಳಗ್ಗೆ ೮ ರಿಂದ ೧೧ ಗಂಟೆಯವರೆಗೆ ನನ್ನೊಂದಿಗೆ ಕಾಲ ಕಳೆಯುತ್ತಿದ್ದರು. ಜೊತೆಗೆ ಒಬ್ಬ ಸ್ಟೆನೋ ಹಾಗು ಅವರ ಕಾರ್ಯದರ್ಶಿಯೂ ಇರುತ್ತಿದ್ದರು. ನನ್ನೊಂದಿಗೆ ಕುಳಿತು ದೇಶದ ರಾಜಕೀಯದ ಬಗ್ಗೆ, ಸಾಮಾಜಿಕ ಸಮಸ್ಯೆಗಳ ಬಗ್ಗೆ ಒಂದೊಂದೇ ವಿಷಯಗಳ ಕುರಿತು ಚರ್ಚೆ ಮಾಡುತ್ತಿದ್ದರು. ಮರುದಿನದ ಪತ್ರಿಕೆಗಳಲ್ಲಿ ಹಿಂದಿನ ದಿನದ ನನ್ನ ಒಂದೊಂದು ಅಭಿಪ್ರಾಯವೂ ಅವರ ಹೆಸರಿನಲ್ಲಿ ಲೇಖನಗಳಾಗಿ ಪ್ರಕಟವಾಗುತ್ತಿದ್ದವು. ಈವರೆಗೆ ಗೋವಿಂದದಾಸ್‌ರ ಅಂತಹ ಎರಡು ಕೃತಿಗಳು ಪ್ರಕಟವಾಗಿವೆ. ಆ ಕೃತಿಗಳ ಒಂದೇ ಒಂದು ಸಾಲೂ ಅವರ ಸ್ವಂತದ್ದಲ್ಲ. ಈತ ನನ್ನೊಂದಿಗೆ ಚರ್ಚೆ ಕುಳಿತಾಗಲೇ ಮುಂದೆ ಹೀಗೆಲ್ಲಾ ಆಗಬಹುದು ಎಂದು ಊಹಿಸುತ್ತಿದ್ದೆ. ಅವರು ಗಾಂಧೀ ಅಧ್ಯಕ್ಷರಾಗಿದ್ದ ಹಿಂದೀ ಸಾಹಿತ್ಯ ಸಮ್ಮೇಳನಕ್ಕೆ ಇಪ್ಪತ್ತು ವರ್ಷಗಳ ಕಾಲ ಅಧ್ಯಕ್ಷರಾಗಿದ್ದರು. ಹಿಂದಿಯನ್ನು ರಾಷ್ಟ್ರೀಯ ಭಾಷೆ ಎಂದು ಘೋಷಿಸುವಲ್ಲಿ ಅವರ ಪ್ರಯತ್ನ ತುಂಬ ಹಿರಿದು. ಒಮ್ಮೆ ದೆಹಲಿಯ ಅವರ ನಿವಾಸದಲ್ಲಿ ನಾನು ಅತಿಥಿಯಾಗಿದ್ದಾಗ ಅವರ ಕಾರ್ಯದರ್ಶಿಯನ್ನು “ಶ್ರೀವಾಸ್ತವ್, ಎಲ್ಲ ಸರಿ. ಆದರೆ ಗೋವಿಂದ ದಾಸರ ಲೇಖನಗಳಲ್ಲಿ ಅಲ್ಲಲ್ಲಿ ಸೂರದಾಸರ, ಕಬೀರರ ಸೂಕ್ತಿಗಳು ಸೇರಿಬಿಟ್ಟಿವೆಯಲ್ಲ! ಗೋವಿಂದದಾಸರಿಗೆ ಆ ಸಾಹಿತ್ಯಗಳಲ್ಲಿ ಅಷ್ಟೆಲ್ಲ ಪರಿಶ್ರಮವಿದೆಯೇ?” ಎಂದು ಕೇಳಿದೆ. ಅವರು ತಲೆತಗ್ಗಿಸಿ “ಅದನ್ನೆಲ್ಲ ನಾನೇ ಸೇರಿಸಿದ್ದು” ಎಂದು ಹೇಳಿದರು. “ಹಾಗೆಲ್ಲ ಸೇರಿಸಲು ಯಾರು ನಿಮಗೆ ಹೇಳಿದ್ದು?” ಎಂದು ಕೇಳಿದೆ. “ಲೇಖನ ಯಥಾವತ್ತಾಗಿದ್ದರೆ ಸರಿಯಾಗದು, ಸ್ವಲ್ಪ ಬೇರೆಯ ವಿಷಯಗಳನ್ನೂ ಅದರಲ್ಲಿ ಸೇರಿಸಿ ಎಂದು ಅವರೇ ಸಲಹೆ ನೀಡಿದ್ದರು” ಎಂದ. “ಅದು ಸರಿ, ಆದರೆ ಕಬೀರರ ನಾಲ್ಕೈದು ವಚನಗಳೇ ಎಲ್ಲ ಕಡೆ ಪುನರಾವರ್ತನೆ ಆಗಿದೆಯಲ್ಲ” ಎಂದು ಕೇಳಿದೆ “ಏನು ಮಾಡಲಿ ನನಗೂ ಕಬೀರರ ಸಾಹಿತ್ಯದಲ್ಲಿ ಅಷ್ಟರ ಮಟ್ಟಿಗೆ ಪ್ರವೇಶವಿಲ್ಲ”ಎಂದರು. ಆಗ ನಾನು “ನನ್ನ ಬಳಿ ಬರಬಹುದಿತ್ತಲ್ಲ ನಾನು ಇವಕ್ಕಿಂತಲೂ ಹೆಚ್ಚು ಸೂಕ್ತವಾದ ಇನ್ನೂ ಅದ್ಭುತವಾದ ಕಬೀರನ ವಚನಗಳನ್ನು ಸೂಚಿಸುತ್ತಿದ್ದೆ. ಇನ್ನು ಮುಂದೆ ಹೀಗಾಗಬಾರದು ನಿನ್ನ ಮಾಲೀಕರು ಇಡೀ ಲೇಖನವನ್ನೇ ಕದಿಯಬೇಕಾದರೆ ನೀನು ಒಂದೆರಡು ಕಬೀರ್ ವಚನಗಳನ್ನು ನನ್ನಿಂದ ಕೇಳಿ ಪಡೆದರೆ ತಪ್ಪೇನು? ಇಷ್ಟೆಯೇನು ನೀನು ಅವರಿಂದ ಕಲಿತಿರುವುದು?” ಎಂದು ಹೇಳಿದೆ.

ನಾನು ಗೋವಿಂದದಾಸ್‌ರ ವಿಷಯದಲ್ಲಿ ಜಾಣಕುರುಡು ತೋರಿಸುವಲ್ಲಿ ನನ್ನ ಸ್ವಾರ್ಥವೂ ಇತ್ತು. ಅವರಿಂದ ನನಗೂ ತುಂಬ ಪ್ರಯೋಜನವಾಗಿದೆ. ನಾನು ವಿಶ್ವವಿದ್ಯಾಲಯದ ಪ್ರಾಧ್ಯಾಪಕನಾಗಿದ್ದಾಗ ತಿಂಗಳುಗಟ್ಟಲೆ ರಜೆಯ ಮೇಲೆ ದೇಶ ಸುತ್ತಲು ಹೊರಟುಬಿಡುತ್ತಿದ್ದೆ. ಗೋವಿಂದದಾಸ್‌ರ ಕಾರು ಪ್ರತಿದಿನ ನನ್ನ ಮನೆಯ ಮುಂದೆ ನಿಂತಿರುತ್ತಿದ್ದುದನ್ನು ಕುಲಪತಿಗಳು ಗಮನಿಸುತ್ತಿದ್ದರು, ಹಾಗಾಗಿ ಯಾವ ಕುಲಪತಿ ಬಂದರೂ ನನ್ನ ವಿರುದ್ಧ ಯಾವುದೇ ಕಠಿಣ ಕ್ರಮ ತೆಗೆದುಕೊಳ್ಳುತ್ತಿರಲಿಲ್ಲ. ಸಾಲದ್ದಕ್ಕೆ ಗೋವಿಂದದಾಸ್ ಹಲವು ರಾಜಕಾರಿಣಿಗಳನ್ನು ನನ್ನ ಬಳಿ ಕರೆತರುತ್ತಿದ್ದರು. ನಾನು ಜಾಬಲ್‌ಪುರದಲ್ಲಿ ಇದ್ದಷ್ಟೂ ಕಾಲ ಅಧಿಕಾರದಲ್ಲಿ ಇರುತ್ತಿದ್ದ ಎಲ್ಲ ಮುಖ್ಯಮಂತ್ರಿಗಳನ್ನು, ಶಿಕ್ಷಣ ಸಚಿವರುಗಳನ್ನು ನನಗೆ ಪರಿಚಯಿಸಿದ್ದರು. ಹಲವು ಕೇಂದ್ರ ಸಚಿವರುಗಳೂ ಬಂದು ಹೋಗುತ್ತಿದ್ದರು. ಒಮ್ಮೆ ಜವಾಹರಲಾಲ್ ನೆಹರೂ ಕೂಡ ಜಾಬಲ್‌ಪುರಕ್ಕೆ ಭೇಟಿ ನೀಡಿದ್ದಾಗ ಇವರ ಅತಿಥಿಗಳಾಗಿದ್ದರು. ಹೀಗೆ ಡಾಕ್ಟರ್ ಗೋವಿಂದದಾಸರಿಂದಾಗಿ ಆ ಕಾಲದ ಎಲ್ಲ ಪ್ರಬಲ ರಾಜಕಾರಿಣಿಗಳ ಪರಿಚಯ ನನಗಾಯಿತು. ಮೈತ್ರೇಯನ ಪರಿಚಯವಾದದ್ದೂ ಅವರಿಂದಲೇ. ಅಲ್ಲದೆ ಗೋವಿಂದ ದಾಸ್ ನೂರಾರು ನಾಟಕಗಳನ್ನು ಬರೆದಿದ್ದರು. ಅಥವ ಹಣಕ್ಕಾಗಿ ಶಾಲ ಮಾಸ್ತರುಗಳು, ಕಲಾವಿದರು ಬರೆದು ಇವರಿಗೆ ಮಾರಿದ್ದರು. ಜಾಬಲ್‌ಪುರ ವಿಶ್ವವಿದ್ಯಾಲಯದ ಕುಲಪತಿಯೂ ತನ್ನನ್ನು ನೇಮಕ ಮಾಡಿದ್ದ ಕೃತಜ್ಞತೆಗೆ ಇವರಿಗೆ ಡಾಕ್ಟರೇಟ್ ನೀಡಿದ್ದ. ಇದಕ್ಕೂ ಮುನ್ನ ಅವರ ಹೆಸರು ಸೇಠ್ ಗೋವಿಂದದಾಸ್ ಎಂದಿತ್ತು. ಡಾಕ್ಟರೇಟ್ ಬಂದ ಮೇಲೆ ’ಡಾಕ್ಟರ್ ಸೇಠ್ ಗೋವಿಂದದಾಸ್’ ಎಂದು ಬರೆದುಕೊಳ್ಳುತ್ತಿದ್ದರು. ಒಮ್ಮೆ ಜವಾಹರಲಾಲ್ ನೆಹರೂ ಇವರನ್ನು ಕರೆದು “ಗೋವಿಂದದಾಸ್ ತಮ್ಮ ಹೆಸರಿಗೆ ಯಾರೂ ಹೀಗೆ ಎರಡೆರಡು ಬಿರುದುಗಳನ್ನು ಅಂಟಿಸಿಕೊಳ್ಳುವುದಿಲ್ಲ. ಎರಡರಲ್ಲಿ ಯಾವುದಾದರೂ ಒಂದನ್ನು ಉಳಿಸಿಕೊಳ್ಳಿ” ಎಂದು ಸಲಹೆ ನೀಡಿದರಂತೆ. ಆದರೆ ಅವರಿಗೆ ಎರಡರಲ್ಲಿ ಯಾವೊಂದು ಬಿರುದನ್ನೂ ಕೈಬಿಡಲು ಇಷ್ಟವಿರಲಿಲ್ಲ. ಕೂಡಲೆ ನನ್ನ ಬಳಿ ಓಡಿಬಂದರು, ಆಗ ನಾನು “ಡಾಕ್ಟರ್ (ಸೇಠ್) ಗೋವಿಂದದಾಸ್” ಎಂದು ಬರೆಯಲು ಸೂಚಿಸಿದ್ದೆ. ಇದನ್ನು ನೆಹರೂ ಗಮನಿಸಿ “ಯಾರು ನಿಮಗೆ ಈ ಸಲಹೆ ನೀಡಿದ್ದು” ಎಂದು ಕೇಳಿದ್ದರಂತೆ.

೧೯೬೬ರ ಆಗಸ್ಟ್ ೧ರಂದು ನಾನು ವಿಶ್ವವಿದ್ಯಾಲಯದ ಪ್ರೊಫೆಸರ್ ಹುದ್ದೆಗೆ ರಾಜಿನಾಮೆ ನೀಡಿ ಮರುದಿನವೇ ಎಲ್ಲ ಡಿಗ್ರೀ ಸರ್ಟಿಫಿಕೇಟ್‌ಗಳನ್ನೂ ಸುಟ್ಟುಹಾಕಿದೆ. “ರಾಜಿನಾಮೆ ನೀಡಿದ್ದು ಸರಿ, ಪ್ರಮಾಣಪತ್ರಗಳನ್ನು ನಾಶಪಡಿಸುವ ಅಗತ್ಯವೇನಿತ್ತು?” ಎಂದು ಸ್ನೇಹಿತರು ಕೇಳಿದರು. ಮುಂದೆಂದಾದರೂ ಉಪಯೋಗವಾಗಬಹುದು ಎಂದು ಅವರ ಯೋಚನೆ. ಅವರಿಗೆ “ಆ ಜೀವವಿಲ್ಲದ ಉದ್ಯೋಗ ಇನ್ನು ಸಾಕು. ನಡೆದುಬಂದ ದಾರಿಯಲ್ಲಿ ಮತ್ತೆ ಹಿಂದಿರುಗಿ ನೋಡುವುದು ಎಂದೂ ನನ್ನ ಜಾಯಮಾನವಲ್ಲ” ಎಂದು ಹೇಳಿದೆ. ನಾನು ಬದುಕಿನಲ್ಲಿ ಎಂದೂ ಯಾವ ಕಾರಣಕ್ಕೂ ರಾಜೀ ಮಾಡಿಕೊಂಡವನಲ್ಲ ಅದಕ್ಕೇ ರಾಜಿನಾಮೆ ನೀಡಬೇಕಾಯಿತು. ನಾನು ಸರಿಯಾಗಿ ಪಾಠ ಮಾಡುತ್ತಿರಲಿಲ್ಲ ಎಂದು ಸಾಕಷ್ಟು ದೂರುಗಳು ಉಪಕುಲಪತಿಗಳಿಗೆ ಹೋಗಿದ್ದವು. ಒಂದು ದಿನ ಅವರು ನನ್ನನ್ನು ಕರೆಸಿಕೊಂಡರು. ನನಗೆ ಪರಿಸ್ಥಿತಿ ಅರ್ಥವಾಯಿತು. ಅವರು ದೂರುಗಳ ಬಗ್ಗೆ ಪ್ರಸ್ತಾಪಿಸುವ ಮುನ್ನವೇ ನಾನು ರಾಜೀನಾಮೆ ಪತ್ರವನ್ನು ಮುಂದಿಟ್ಟೆ. ಅವರು ಆಘಾತಗೊಂಡು “ನಾನು ನಿಮ್ಮ ರಾಜೀನಾಮೆ ಕೇಳುತ್ತಿಲ್ಲ” ಎಂದು ಹೇಳಿದರು. ಆಗ ನಾನು “ಹಾಗಲ್ಲ, ನಾನು ಒತ್ತಡಗಳನ್ನು ಸಹಿಸುವವನಲ್ಲ. ಇದೋ ನನ್ನ ರಾಜೀನಾಮೆ ಪತ್ರ” ಎಂದು ಹೇಳಿ ಅದನ್ನು ಅವರ ಮೇಜಿನ ಮೇಲಿರಿಸಿ ಹೊರನಡೆದೆ. ನನ್ನ ಕಾರಿನವರೆಗೂ ಬಂದು “ಒಮ್ಮೆ ಯೋಚಿಸಿ ನೋಡಿ” ಎಂದು ಸಲಹೆ ನೀಡಿದರು. “ಯೋಚಿಸಿ, ತೀರ್ಮಾನಕ್ಕೆ ಬರುವುದು ನನ್ನ ಸ್ವಭಾವವಲ್ಲ. ತತ್ವಶಾಸ್ತ್ರವನ್ನು ಪಾಠ ಮಾಡಲು ನನ್ನಿಂದ ಸಾಧ್ಯವಾಗದು. ತರಗತಿಯಲ್ಲಿ ಎಲ್ಲ ತತ್ವಶಾಸ್ತ್ರಗಳನ್ನು ವಿರೋಧಿಸಿ ಮಾತನಾಡುತ್ತಿದ್ದೆ. ನನಗೆ ಗೊತ್ತಿತ್ತು ದೂರುಗಳು ಹೋಗುತ್ತವೆಂದು, ದೂರುಗಳು ಹೋಗಲೇ ಬೇಕು. ಅದಕ್ಕೇ ನಿಮ್ಮ ಕರೆಯನ್ನು ತುಂಬ ದಿನಗಳಿಂದ ಎದುರು ನೋಡುತ್ತಿದ್ದೆ” ಎಂದೆ. ರಾಜಿನಾಮೆ ಹಿಂಪಡೆಯಲು ಎಲ್ಲೆಡೆಯಿಂದ ಒತ್ತಡ ಬಂದಿತು, ನನ್ನ ಸಹೋದ್ಯೋಗಿಗಳು, ಸ್ನೇಹಿತರು, ರಾಜೀನಾಮೆಯನ್ನು ಹಿಂದಕ್ಕೆ ಪಡೆಯಲು ಸಲಹೆ ನೀಡಿದರು. ಶಿಕ್ಷಣ ಸಚಿವರೂ ದೂರವಾಣಿ ಕರೆ ಮಾಡಿ “ನನ್ನ ವಿರುದ್ಧವೂ ದಿನಬೆಳಗಾದರೆ ಸಾಕಷ್ಟು ದೂರುಗಳು ಬರುತ್ತವೆ. ದೂರುಗಳಿಗೆ ಹೆದರಿದರೆ ಆಗುವುದೇ?” ಎಂದರು. ಆದರೆ ಅದು ನನ್ನ ವಿರುದ್ಧದ ದೂರುಗಳ ಪ್ರಶ್ನೆಯಾಗಿರಲಿಲ್ಲ. ಆ ವೃತ್ತಿಯಲ್ಲಿ ಇನ್ನು ಮುಂದುವರೆಯುವುದು ಅರ್ಥಹೀನ ಎಂದು ನನಗನ್ನಿಸಿತ್ತು ಅಷ್ಟೆ. ಅಂದು ಸಂಜೆ ಕುಲಪತಿಗಳು ಮನೆಗೂ ಬಂದಿದ್ದರು. “ನಾನಿನ್ನೂ ನಿಮ್ಮ ರಾಜಿನಾಮೆ ಪತ್ರವನ್ನು ಅಂಗೀಕರಿಸಿ ಸಹಿ ಮಾಡಿಲ್ಲ ಕೊನೆಯದಾಗಿ ಮತ್ತೊಮ್ಮೆ ಯೋಚಿಸಿ” ಎಂದು ಹೇಳಿದರು “ಪ್ರಶ್ನೆ ಅದಲ್ಲ, ನನಗಿರುವುದು ವರ್ಷಕ್ಕೆ ೨೧ ರಜೆಗಳು. ನಾನಾದರೂ ತಿಂಗಳ ೨೧ ದಿನಗಳ ಕಾಲ ಹೊರಗೇ ಇರುತ್ತೇನೆ. ವರ್ಷವಿಡೀ ದೇಶ ಸುತ್ತುತ್ತಿರುತ್ತೇನೆ. ನಾನು ಪಾಠ ಮಾಡುತ್ತಿಲ್ಲ ಎಂದು ನೀವು ನನ್ನನ್ನು ದೂರುವಂತಿಲ್ಲ. ಏಕೆಂದರೆ ದೇಶದಾದ್ಯಂತ ನಾನು ಉಪನ್ಯಾಸಗಳನ್ನು ಕೊಡುತ್ತಾ ಸಂಚರಿಸುತ್ತಿದ್ದೇನೆ. ಈ ವಿಶ್ವವಿದ್ಯಾಲಯದ ಮಕ್ಕಳನ್ನೂ ಪರೀಕ್ಷೆಗೆ ಸಿದ್ಧಪಡಿಸುತ್ತಿದ್ದೇನೆ” ಎಂದೆ. ಅದಕ್ಕೆ ಅವರು “ಅದು ನನಗೆ ಗೊತ್ತು, ಅದಕ್ಕೇ ಹಿಂಪಡೆಯಲು ಕೇಳುತ್ತಿರುವುದು” ಎಂದರು. “ನನಗೆ ನಿಮ್ಮ ಮೇಲೆ ಖಂಡಿತ ಕೋಪವಿಲ್ಲ, ನನಗೆ ಇಲ್ಲಿ ಪಾಠಪ್ರವಚನ ಮಾಡುವುದು ಸಾಕೆನಿಸಿದೆ. ಒಮ್ಮೆಗೆ ೫೦,೦೦೦ ಜನರಿಗೆ ಪಾಠ ಮಾಡಬಲ್ಲ ನನಗೆ ನಾಲ್ಕು ಗೋಡೆಯ ಮಧ್ಯೆ ಬರೀ ೨೦ ಹುಡುಗರಿಗೆ ಬೋಧಿಸುವುದು ಅರ್ಥಹೀನ ಎನಿಸಿದೆ. ಹಾಗೆ ನೋಡಿದರೆ ನನಗೆ ನಿಮ್ಮಿಂದ ತುಂಬ ಉಪಕಾರವೇ ಆಗಿದೆ. ನನ್ನನ್ನು ಎಂದೋ ನೀವು ವಿಶ್ವವಿದ್ಯಾಲಯದಿಂದ ಹೊರಗಟ್ಟಬಹುದಿತ್ತು” ಎಂದು ಹೇಳಿ ಕಳಿಸಿದೆ.

ಮರುದಿನ ಊರಿನಿಂದ ಅಪ್ಪ ಪ್ರತ್ಯಕ್ಷರಾದರು. “ನೀವಾದರೂ ಬಂದು ನಿಮ್ಮ ಮಗನನ್ನು ಹೇಗಾದರೂ ಒಪ್ಪಿಸಿ” ಎಂದು ನನ್ನ ಸ್ನೇಹಿತರು ಅವರನ್ನು ಕೋರಿಕೊಂಡಿದ್ದರಂತೆ. “ನಿನ್ನ ಸ್ನೇಹಿತರಿಗಿಂತ ನಾನು ನಿನ್ನನ್ನು ಚೆನ್ನಾಗಿ ಬಲ್ಲೆ. ನಿನ್ನನ್ನು ಒಪ್ಪಿಸಲು ನಾನಿಲ್ಲಿ ಬಂದಿಲ್ಲ ಆ ಪ್ರಯತ್ನ ವ್ಯರ್ಥವೆಂದು ಬಲ್ಲೆ. ಹಣಕಾಸಿನ ಅವಶ್ಯಕತೆ ಇದ್ದರೆ ತಿಳಿಸು ಎಂದು ಹೇಳಲು ಬಂದೆ” ಎಂದರು. ’ನನ್ನಿಂದ ಮನೆಗೆ ಮೂರುಕಾಸಿನ ನೆರವು ಸಿಕ್ಕಿಲ್ಲ, ಸಾಲದ್ದಕ್ಕೆ ನಿನಗೂ ಹಣಕಾಸಿನ ಮುಗ್ಗಟ್ಟು ಇರುವುದು ನನಗೆ ತಿಳಿದಿದೆ” ಎಂದೆ. “ನಿನ್ನನ್ನು ಕೇಳಿ ಪ್ರಯೋಜನವಿಲ್ಲ, ನಾನೇ ನಿನ್ನ ಹೆಸರಿನಲ್ಲಿ ಏನಾದರೂ ಮಾಡುತ್ತೇನೆ” ಎಂದುಕೊಂಡು ಹೊರಟು ಹೋದರು. ಊರಿಗೆ ಬಂದ ಮೇಲೆ ನನ್ನ ಹೆಸರಿನಲ್ಲಿ ಒಂದು ಪುಟ್ಟ ಮನೆಯನ್ನೂ, ಅದರ ಸುತ್ತ ಒಂದು ಕೈತೋಟವನ್ನೂ ಮಾಡಿಸಿದ್ದರಂತೆ. ನನ್ನ ಅಭಿರುಚಿ ಏನೆಂದು ಅಪ್ಪನಿಗೆ ತಿಳಿದಿತ್ತು. ಜೊತೆಗೆ ಬ್ಯಾಂಕಿನಲ್ಲಿ ನನ್ನ ಹೆಸರಿನಲ್ಲಿ ಒಂದಷ್ಟು ಹಣವನ್ನೂ ಜಮಾ ಮಾಡಿದ್ದರಂತೆ. ಅಪ್ಪ ಸತ್ತ ಮೇಲೆ ಇದೆಲ್ಲ ನನಗೆ ನನ್ನ ತಮ್ಮಂದಿರಿಂದ ತಿಳಿದು ಬಂದಿತು. ಆದರೆ ನಾನು ಕಾಗದಪತ್ರಗಳಿಗೆ ಸಹಿ ಮಾಡುವ ವ್ಯವಹಾರವನ್ನು ಎಂದೋ ಬಿಟ್ಟಿದ್ದೆ. ನನ್ನ ಕಾರ್ಯದರ್ಶಿ ನನ್ನ ಪರವಾಗಿ ಎಲ್ಲ ವ್ಯವಹಾರಗಳಿಗೂ ಸಹಿ ಮಾಡುತ್ತಾರೆ ಎಂದು ಅಫಿಡವಿಟ್ ನೀಡಿದ್ದೆ. ಅಂತೆಯೇ ಆಕೆಯೇ ಎಲ್ಲ ವ್ಯವಹಾರಗಳನ್ನು ನಿಭಾಯಿಸಿದಳು. ಅಪ್ಪ ಮಾಡಿದ್ದ ಆಸ್ತಿಯನ್ನೆಲ್ಲ ಮಾರಲಾಯಿತು, ಬ್ಯಾಂಕಿನ ಹಣವನ್ನು ಕುಟುಂಬದವರಿಗೆ ಹಂಚಿ ಬ್ಯಾಂಕ್ ಖಾತೆಯನ್ನು ಮುಚ್ಚಲಾಯಿತು. ಗ್ರಾಮ ಪಂಚಾಯಿತಿಯವರು ನನ್ನ ಪರಿಚಿತರಾಗಿದ್ದರಿಂದ ಯಾವ ತಕರಾರುಗಳನ್ನೂ ಎಬ್ಬಿಸಲಿಲ್ಲ. ವಿಶ್ವಾವಿದ್ಯಾಲಯಕ್ಕೆ ರಾಜೀನಾಮೆ ನೀಡಿದ ಮರುಗಳಿಗೆಯೇ ನಾನು ನಿಜವಾಗಿಯೂ ಭಿಕ್ಷುಕನಾದೆ. ನಾನೆಂದೂ ಭಿಕ್ಷಾಟನೆ ಮಾಡಲಿಲ್ಲವಾದರೂ ನಿಜವಾದ ಅರ್ಥದಲ್ಲಿ ನಾನೊಬ್ಬ ಭಿಕ್ಷುಕ ಅಥವ ನನ್ನ ತರಹದ ಭಿಕ್ಷುಕ ಈ ಹಿಂದೆ ಹುಟ್ಟಿಲ್ಲವಾದ್ದರಿಂದ ಅದಕ್ಕೆ ಸರಿಯಾದ ಪದ ಏನೆಂದು ಯಾವ ಭಾಷೆಯಲ್ಲೂ ಹೇಳಲು ಬರುವುದಿಲ್ಲ. ಜೇಬಿನಲ್ಲಿ ನಯಾಪೈಸೆ ಇಲ್ಲದೆಯೂ ಇಡೀ ಜಗತ್ತಿಗೇ ಚಕ್ರವರ್ತಿ ಎನ್ನುವಂತೆ ನಾನು ವರ್ತಿಸುತ್ತಿದ್ದೆ.

 

 

 

 

ಸಂಚಾರದ ಅನುಭವಗಳು

 

ಉಪನ್ಯಾಸಕನಾಗಿದ್ದ ಹತ್ತೂ ವರ್ಷಗಳ ಕಾಲ ನಾನು ಒಂದು ಕ್ಷಣವೂ ಬಿಡುವಿಲ್ಲದಂತೆ ಒಂದೇ ಸಮನೆ ಪ್ರಯಾಣಿಸುತ್ತಿದ್ದೆ. ಬಸ್ಸಿನಲ್ಲೋ, ರೈಲಿನಲ್ಲೋ, ವಿಮಾನದಲ್ಲೋ ಕಾರಿನಲ್ಲೋ ಕುಳಿತು ಸಂಚರಿಸುತ್ತಲೇ ಇದ್ದೆ, ಒಂದೇ ಸಮನೆ ಉಪನ್ಯಾಸಗಳನ್ನು ನೀಡುತ್ತಿದ್ದೆ. ಹೋದೆಡೆಯಲ್ಲೆಲ್ಲ ಜನ ಮುತ್ತಿಕೊಳ್ಳುತ್ತಿದ್ದರು. ಹೀಗೆ ಸಂಚರಿಸುವಾಗ ಪದೇ ಪದೇ ನಾನು ಜಾಬಲ್‌ಪುರಕ್ಕೆ ಹಿಂದಿರುಗುತ್ತಿದ್ದೆ. ಅಲ್ಲಿ ಮೂರು ನಾಲ್ಕು ದಿನಗಳ ಕಾಲ ತಂಗಿದ್ದು ಅನಂತರ ಮತ್ತೆ ಬೇರೆ ಕಡೆ ಪ್ರಯಾಣಿಸುತ್ತಿದ್ದೆ. ಏಕೆಂದರೆ ಜಾಬಲ್‌ಪುರದಲ್ಲಿ ಮಾತ್ರ ನನಗೆ ಜನಜಂಗುಳಿಯಿಂದ ಬಿಡುವು ದೊರೆತು ನಾಲ್ಕು ದಿನ ನೆಮ್ಮದಿಯಿಂದ ಉಸಿರಾಡಲು ಸಾಧ್ಯವಾಗುತ್ತಿದ್ದುದು ಮತ್ತು ರೈಲುಗಳಲ್ಲಿಯೂ ನನಗೆ ವಿಶ್ರಾಂತಿ ಸಿಗುತ್ತಿತ್ತು. ಒಮ್ಮೆ ರೈಲಿನಿಂದ ಕೆಳಗಿಳಿದರೆ ಮುಗಿಯಿತು ದಿನಕ್ಕೆ ಕನಿಷ್ಟವೆಂದರೂ ಆರು ಉಪನ್ಯಾಸಗಳು ಇರುತ್ತಿದ್ದವು. ಇಪ್ಪತ್ತು ವರ್ಷಗಳ ಕಾಲ ನನ್ನ ಬಹುಪಾಲು ರಾತ್ರಿಗಳನ್ನು ರೈಲ್ವೇ ಬೋಗಿಗಳಲ್ಲೇ ಆ ಇಂಜಿನ್ ಶಬ್ದವನ್ನು, ಹಳಿಗಳ ಸದ್ದನ್ನು, ಪ್ಲಾಟ್‌ಫಾರಂ ಮಾರಾಟಗಾರರ ಕೂಗಾಟವನ್ನು, ಜನಜಂಗುಳಿಯ ಗದ್ದಲವನ್ನು ಕೇಳಿಸಿಕೊಳ್ಳುತ್ತ ಅರೆನಿದ್ರೆಯಲ್ಲಿ ಕಳೆದಿದ್ದೇನೆ. ಈ ಸದ್ದು ಗದ್ದಲಗಳು ನನಗೆ ಎಷ್ಟು ಹೊಂದಿಕೊಂಡುಬಿಟ್ಟಿತ್ತು ಎಂದರೆ ತುಂಬ ದಿನಗಳ ಕಾಲ ಆ ಸದ್ದುಗಳಿಲ್ಲದೆ ನಿದ್ದೆಯೇ ಬರುತ್ತಿರಲಿಲ್ಲ. ಇಪ್ಪತ್ತು ವರ್ಷಗಳ ಸಂಸ್ಕಾರ ಸುಲಭವಾಗಿ ಹೋಗುವುದುಂಟೇ? ಹೆಚ್ಚು ಕಡಿಮೆ ನಾನು ಭಾರತದ ಎಲ್ಲ ಪ್ಲಾಟ್‌ಫಾರಂಗಳಲ್ಲಿಯೂ ರೈಲಿಗಾಗಿ ಕಾದು ನಿಂತಿದ್ದೇನೆ. ಆ ದಿನಗಳಲ್ಲಿ ನನಗೆ ನಿದ್ರೆ ಮಾಡಲು ಕನಿಷ್ಟ ಮೂರು ದಿಂಬುಗಳಾದರೂ ಬೇಕಿತ್ತು. ಎರಡು ತಲೆಯ ಅಕ್ಕಪಕ್ಕದಲ್ಲಿ ಹಾಗು ಇನ್ನೊಂದು ತಲೆಯ ಕೆಳಗೆ. ಎಲ್ಲಿ ಪ್ರಯಾಣಿಸಿದರೂ ಈ ದೊಡ್ಡ ಗಾತ್ರದ ದಿಂಬುಗಳು ನನ್ನ ಬಳಿ ಇರುತ್ತಿದ್ದವು. ಇವಕ್ಕಾಗಿಯೇ ಒಂದು ದೊಡ್ಡ ಗಾತ್ರದ ಸೂಟ್‌ಕೇಸನ್ನೂ ಖರೀದಿಸಿದ್ದೆ.

 ಒಮ್ಮೆ ನಾನು ಜಾಬಲ್‌ಪುರದಿಂದ ಉದಯಪುರಕ್ಕೆ ಪ್ರಯಾಣಿಸುತ್ತಿದ್ದೆ ೩೬ ಗಂಟೆಗಳ ಈ ಪ್ರಯಾಣದ ಮಧ್ಯೆ ರೈಲು ಅಜ್ಮೀರ್‌ನಲ್ಲಿ ಒಂದು ಗಂಟೆಗಳ ಕಾಲ ನಿಲ್ಲುತ್ತದೆ. ನಾನು ರೈಲಿನಿಂದ ಕೆಳಗಿಳಿದು ಪ್ಲಾಟ್‌ಫಾರಂನ ಉದ್ದಕ್ಕೂ ಹಾಗೆಯೇ ಅಡ್ಡಾಡುತ್ತಿದ್ದೆ. ಅಜ್ಮೀರ್ ಮುಸ್ಲಿಮರು ಪ್ರಧಾನವಾಗಿರುವ ಊರು. ಪ್ಲಾಟ್‌ಫಾರಂನ ಉದ್ದಕ್ಕೂ ಎಲ್ಲೆಡೆ ಮುಸಲ್ಮಾನರು ನಮಾಜು ಮಾಡುತ್ತಿದ್ದರು.  ನನಗೆ ಈ ದೃಶ್ಯ ತುಂಬ ತಮಾಷೆ ಎನಿಸಿತು. ಹಾಗೆಯೇ ಸ್ವಲ್ಪ ಚೇಷ್ಟೆ ಮಾಡಬೇಕೆಂದುಕೊಂಡು ನಮಾಜ್ ಮಾಡುತ್ತಿದ್ದ ಒಬ್ಬನ ಬಳಿ ನಿಂತು “ಇನ್ನೇನು ರೈಲು ಹೊರಡುತ್ತದೆ” ಎಂದೆ, ಆತ ಕೋಪದಿಂದ “ಸುಮ್ಮನೆ ನನ್ನ ಪ್ರಾರ್ಥನೆಗೆ ತೊಂದರೆ ಕೊಡಬೇಡ” ಎಂದು ಸಿಟ್ಟು ಮಾಡಿಕೊಂಡ. “ನಾನು ಯಾರ ಪ್ರಾರ್ಥನೆಗೆ ಅಡಚಣೆ ಮಾಡುತ್ತಿದ್ದೇನೆ? ನನ್ನ ಪ್ರಾರ್ಥನೆಯನ್ನು ನಾನು ಮಾಡಿಕೊಳ್ಳುತ್ತಿದ್ದೇನೆ, ರೈಲು ಬೇಗ ಹೊರಡುತ್ತದೆ ಎಂಬುದು ನನ್ನ ಮನದಾಳದ ಬಯಕೆ, ಅದನ್ನು ಪ್ರಾರ್ಥಿಸಿದರೆ ತಪ್ಪೇನು?” ಎಂದು ಕೇಳಿದೆ. ಇನ್ನೂ ಹಲವರ ಬಳಿ ಹೋಗಿ ಹೀಗೆಯೇ ಕೀಟಲೆ ಮಾಡಿದೆ “ಇವನೆಂಥ ಮನುಷ್ಯನಯ್ಯ” ಎಂದು ಎಲ್ಲರೂ ನನ್ನ ಮೇಲೆ ಕಿಡಿಕಾರಿದರು. ಇದೊಂದು ತಮಾಷೆಯ ಪ್ರಸಂಗವಾದರೂ ಇಂಥದನ್ನೆಲ್ಲ ಪ್ರಾರ್ಥನೆ ಎನ್ನಲಾಗುವುದೇ? ನಾವು ಮಾಡುವ ಪ್ರಾರ್ಥನೆಗಳಾದರೂ ಎಂತಹುದು? ಅದು ನಮ್ಮೊಳಗಿನ ಭಿಕ್ಷುಕನನ್ನು ಅನಾವರಣಗೊಳಿಸುತ್ತಿರುವುದಲ್ಲ! ಧ್ಯಾನವಾದರೂ ನಮ್ಮನ್ನು ಸಾಮ್ರಾಟರನ್ನಾಗಿ ಮಾಡುತ್ತದೆ. ಎಲ್ಲ ಧರ್ಮಗಳೂ, ಎಲ್ಲ ಪ್ರಾರ್ಥನೆಗಳೂ ಕ್ರಮೇಣ ನಮ್ಮನ್ನು ದರಿದ್ರ ವ್ಯಕ್ತಿಗಳನ್ನಾಗಿ ಪರಿವರ್ತಿಸುತ್ತದೆ. ನಮ್ಮ ಪ್ರಾರ್ಥನೆಗಳು ನಿಜವಾಗಿಯೂ ಆಕಾಶದಲ್ಲಿ ಯಾರ ಕಿವಿಯನ್ನೂ ತಲುಪುವುದಿಲ್ಲ, ಅದಕ್ಕೆ ಯಾರಿಂದಲೂ ಉತ್ತರ ಸಿಗುವುದಿಲ್ಲ.

ನನ್ನ ಅಜ್ಜಿ ಹುಟ್ಟಿದ್ದು ಅನಾದಿಕಾಲದಿಂದಲೂ ತಾಂತ್ರಿಕರ ಆವಾಸಸ್ಥಾನವಾಗಿದ್ದ ಖಜುರಾಹೋದಲ್ಲಿ. “ನೀನು ದೊಡ್ಡವನಾದ ಮೇಲೆ ಒಮ್ಮೆ ಖಜುರಾಹೋಗೆ ಭೇಟಿ ನೀಡಲೇಬೇಕು” ಎಂದು ಅಜ್ಜಿ ಆಗಾಗ ಹೇಳುತ್ತಿದ್ದಳು. ಆಕೆ ಬದುಕಿದ್ದ ಕೊನೆಯ ಇಪ್ಪತ್ತು ವರ್ಷಗಳ ಅವಧಿಯಲ್ಲಿ ನಾನು ಒಂದೇ ಸಮನೆ ದೇಶ ಸಂಚಾರ ಮಾಡುತ್ತಿದ್ದೆ. ಪ್ರತಿಸಲ ಊರಿನಿಂದ ಹೊರಡುವಾಗಲೂ ಅವಳು ಮೂರು ಮಾತುಗಳನ್ನು ಹೇಳಲು ಮರೆಯುತ್ತಿರಲಿಲ್ಲ “ಮೊದಲನೆಯದು, ರೈಲು ಹೋದಮೇಲೆ ಹತ್ತಲು ಪ್ರಯತ್ನಿಸಬೇಡ ಹಾಗು ಚಲಿಸುವ ರೈಲಿನಿಂದ ಎಂದೂ ಕೆಳಗಿಳಿಯಬೇಡ, ಎರಡನೆಯದು, ಪ್ರಯಾಣಿಸುವಾಗ ಯಾರೊಂದಿಗೂ ವಾದಕ್ಕಿಳಿಯಬೇಡ, ಮೂರನೆಯದು, ನಾನು ಇನ್ನೂ ಬದುಕಿದ್ದೇನೆ ಹಾಗು ನಿನ್ನ ಬರವನ್ನು ಎದುರು ನೋಡುತ್ತಿದ್ದೇನೆ ಎಂದು ಸದಾ ನೆನಪಿರಲಿ”. ಇಪ್ಪತ್ತು ವರ್ಷಗಳ ಕಾಲ ಈ ಸೂಚನೆಯ ಮಾತುಗಳನ್ನು ಕೇಳಿಯೇ ನಾನು ಊರಿನಿಂದ ಹೊರಡುತ್ತಿದ್ದುದು. ಅಜ್ಜಿಯ ಮಾತು ಮೀರಬಾರದು ಎಂದು ಒಮ್ಮೆ ಖಜುರಾಹೋಗೆ ಭೇಟಿ ನೀಡಿದ್ದೆ. ಆಮೇಲೆ ನೂರಾರು ನೆಪ ಮಾಡಿಕೊಂಡು ನೂರಾರು ಸಲ ಮತ್ತೆ ಮತ್ತೆ ಭೇಟಿ ನೀಡಿದ್ದೇನೆ. ಭಾರತದ ಇನ್ನಾವ ಸ್ಥಳಕ್ಕೂ ನಾನು ಅಷ್ಟು ಬಾರಿ ಭೇಟಿ ನೀಡಿಲ್ಲ. ಎಷ್ಟು ನೋಡಿದರೂ ಎಂದೂ ಪೂರ್ತಿ ನೋಡಿ ಮುಗಿಸಿದಂತೆ ಅನಿಸುತ್ತಿರಲಿಲ್ಲ. ಖಜುರಾಹೋದ ಇಂಚು ಇಂಚಿನಲ್ಲೂ ಗಹನವಾದ ರಹಸ್ಯ ಅಡಗಿದೆ. ನೂರಾರು ಜನ ಶಿಲ್ಪಿಗಳ ಶ್ರಮ ಪ್ರತಿಭೆಗಳು ಅಲ್ಲಿವೆ. ಅಷ್ಟೊಂದು ಪರಿಪೂರ್ಣ ಶಿಲ್ಪಕಲೆ ನನಗೆ ಮತ್ತೆಲ್ಲೂ ಕಂಡಿಲ್ಲ. ತಾಜ್ ಮಹಲ್ ಕೂಡ ಅದನ್ನು ಸರಿಗಟ್ಟದು. ತಾಜ್ ಮಹಲ್‌ನಲ್ಲೂ ದೋಷಗಳು ಇಲ್ಲದಿಲ್ಲ. ಹೆಚ್ಚೆಂದರೆ ತಾಜ್ ಮಹಲ್ ಒಂದು ಚೆಲುವಾದ ವಾಸ್ತುಶಿಲ್ಪ. ಆದರೆ ಖಜುರಾಹೋ ಮನುಷ್ಯನ ಅಂತರಂಗದ ತಾತ್ವಿಕತೆಯನ್ನು, ಮನೋವಿಜ್ಞಾನವನ್ನು ಒಳಗೊಂಡ ಕಲೆಯಾಗಿದೆ. ನನ್ನ ವಿಶ್ವವಿದ್ಯಾಲಯದಿಂದ ನೂರು ಮೈಲಿ ದೂರವಿದ್ದುದರಿಂದ ಬಿಡುವಾದಾಗಲೆಲ್ಲ ಖಜುರಾಹೋಗೆ ಹೊರಟುಬಿಡುತ್ತಿದ್ದೆ. ಅಲ್ಲಿ ಪ್ರತಿಯೊಂದು ಶಿಲ್ಪವೂ ನಗ್ನವಾದರೂ, ಪ್ರತಿಯೊಂದೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ಶಿಲ್ಪವಾದರೂ ಅವುಗಳಲ್ಲಿ - ನೋಡುವ ನಮ್ಮ ಮನಸ್ಸು ಶುದ್ಧವಾಗಿದ್ದರೆ - ಅಶ್ಲೀಲದ ಲವಲೇಶವೂ ಕಾಣಿಸುವುದಿಲ್ಲ.

ಉಪನ್ಯಾಸಕ ಹುದ್ದೆಗೆ ರಾಜಿನಾಮೆ ನೀಡಿ ಕಾಶ್ಮೀರದಲ್ಲಿ ಒಂದು ಆಶ್ರಮವನ್ನು ಸ್ಥಾಪಿಸಬೇಕೆಂಬ ಬಯಕೆ ನನಗಿತ್ತು. ಆದರೆ ಇಂದಿರಾ ಗಾಂಧಿ ಅದಕ್ಕೆ ಒಪ್ಪಲಿಲ್ಲ “ಕಾಶ್ಮೀರಕ್ಕೆ ಕಾಲಿಡುವ ಯೋಚನೆಯನ್ನೇ ಬಿಟ್ಟುಬಿಡಿ. ಆ ಜನ ಮಹಾ ಕ್ರೂರಿಗಳು, ನಿಮ್ಮಂಥವರನ್ನು ಒಂದು ದಿನವೂ ಅವರು ಸಹಿಸಿಕೊಳ್ಳುವುದಿಲ್ಲ” ಎಂದು ಸಲಹೆ ನೀಡಿದ್ದರು. ಆಕೆ ಸ್ವತಃ ಕಾಶ್ಮೀರಿ. ನನಗೆ ಮಾಸ್ತೋ ಬಾಬಾನಿಂದ ಶೇಕ್ ಅಬ್ದುಲ್ಲಾ ಪರಿಚಯವಾಯಿತು. ಅವರೂ ಸಹ “ನೀವು ಕಾಶ್ಮೀರಕ್ಕೆ ಅತಿಥಿಗಳಂತೆ ಬಂದು ಹೋಗಬಹುದು ಆದರೆ ಕಾಶ್ಮೀರ ಕಣಿವೆಯಲ್ಲಿ ವಾಸಿಸಲು ನಾವು ಅನುಮತಿ ನೀಡುವುದಿಲ್ಲ. ಅದರಲ್ಲೂ ಮಸ್ತಾ ಬಾಬಾರ ಕಡೆಯವರೆಂದರೆ ಖಂಡಿತ ಅನುಮತಿ ನೀಡಲಾರೆವು” ಎಂದರು. “ಆದರೆ ನೀವು ಮಸ್ತಾ ಬಾಬಾನನ್ನು ಅಷ್ಟೊಂದು ಗೌರವಿಸುತ್ತಿದ್ದಿರಲ್ಲ” ಎಂದು ಕೇಳಿದೆ. “ಆಂತರ್ಯದಲ್ಲಿ ನಾವು ನಮ್ಮ ಬಗ್ಗೆ ಅಲ್ಲದೆ ಇನ್ನಾರ ಬಗೆಯೂ ಗೌರವ ಇಟ್ಟುಕೊಳ್ಳುವವರಲ್ಲ. ಮಸ್ತಾಬಾಬಾಗೆ ಕಾಶ್ಮೀರದಲ್ಲಿ ಹಲವು ಆಗರ್ಭ ಶ್ರೀಮಂತ ಶಿಷ್ಯರಿದ್ದರು. ಅವರ ಮುಖ ನೋಡಿ ನಾವು ಬಾಬಾರನ್ನು ಸಹಿಸಿಕೊಂಡಿದ್ದೆವು” ಎಂದು ಹೇಳಿದ್ದರು.

ಈ ಕಾಲಘಟ್ಟದಲ್ಲಿ ನನ್ನನ್ನು ಎಲ್ಲೆಡೆ ’ಆಚಾರ್ಯ ಶ್ರೀ ರಜನೀಶ್’ ಎಂದು ಸಂಬೋಧಿಸುತ್ತಿದ್ದರು. ಜೀವಮಾನವಿಡೀ ಸಂವಾದ ಮಾಡುತ್ತಲೇ ಇದ್ದ ನನಗೆ ಸಂವಾದದಿಂದ ಇನ್ನೊಬ್ಬರನ್ನು ತಲುಪುದು ಎಷ್ಟು ಕಷ್ಟ ಎಂದು ತಿಳಿದಿದೆ. ಆದರೂ ನಾನು ಸಾವಿರಾರು ಮನಸ್ಸುಗಳನ್ನು ಯಶಸ್ವಿಯಾಗಿ ತಲುಪಿದ್ದೇನೆ ಎಂದು ಕಿಂಚಿತ್ತೂ ಗರ್ವವಿಲ್ಲದೆ ಹೇಳುತ್ತೇನೆ. ನನ್ನದು ತುಂಬ ವೈಯಕ್ತಿಕವಾದ ಉದ್ಯೋಗ. ನನ್ನನ್ನು ಸದಾಕಾಲ ಸಾವಿರಾರು ಜನ ಸುತ್ತುವರೆದಿರುವರಾದರೂ ಎಲ್ಲ ಸಂಬಂಧಗಳೂ ನನ್ನ ಪಾಲಿಗೆ ತುಂಬ ವ್ಯಕ್ತಿಗತವಾದವು. ಇದೊಂದು ಸಂಸ್ಥೆಯಲ್ಲ, ಸಂಸ್ಥೆಯಾಗಲು ಸಾಧ್ಯವೂ ಇಲ್ಲ. ಹದಿನೈದು ವರ್ಷಗಳ ಕಾಲ ಸಂಚರಿಸಿರುವ ನಾನು ಸಾವಿರಾರು ಜನರ ಹೆಸರುಗಳನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದೆ. ಐದಾರು ವರ್ಷಗಳಾದ ಮೇಲೆಯೂ ಅವರ ಮುಖಗಳನ್ನು, ಹೆಸರುಗಳನ್ನು ಗುರುತಿಸುತ್ತಿದ್ದೆ. ನನಗೆ ಅಸಾಧಾರಣವಾದ ನೆನಪಿನ ಶಕ್ತಿ ಇರುವುದೆಂದು ಭಾವಿಸಿ ನೂರಾರು ಜನ ಆಶ್ಚರ್ಯ ವ್ಯಕ್ತಪಡಿಸಿದ್ದುಂಟು. ನಿಜ ಹೇಳಬೇಕೆಂದರೆ ನನ್ನ ನೆನಪಿನ ಶಕ್ತಿ ತುಂಬ ದುರ್ಬಲವಾದುದು. ಆದರೆ ನನಗೆ ಜನಗಳ ಬಗ್ಗೆ ವಿಪರೀತ ಆಸಕ್ತಿ, ಕಳಕಳಿ ಇತ್ತು. ಯಾರಾದರೂ ಒಬ್ಬ ವ್ಯಕ್ತಿಯೊಡನೆ ಮಾತನಾಡುತ್ತಿದ್ದರೆ ಆ ಕ್ಷಣದಲ್ಲಿ ಇಡೀ ಜಗತ್ತನ್ನೇ ಮರೆತು ಮಾತನಾಡುವ ಸ್ವಭಾವ ನನ್ನದು. ಆ ಕ್ಷಣಕ್ಕೆ ಆ ವ್ಯಕ್ತಿಯೇ ನನ್ನ ಸಮಸ್ತ ಪ್ರಪಂಚವಾಗಿರುತ್ತಾನೆ. ಆ ಒಂದು ಕ್ಷಣದ ಅನುಸಂಧಾನ ಸಾಕು, ಕ್ಷಣಾರ್ಧದ ಅನುಸಂಧಾನವಾದರೂ ಸಾಕು, ಅಂತಹವನನ್ನು ಎಷ್ಟೋ ಜನ್ಮಗಳಾದ ಮೇಲೆ ಭೇಟಿ ಮಾಡಿದರೂ ಸುಲಭವಾಗಿ ಗುರುತಿಸಬಲ್ಲೆ. ಅಂಥವನನ್ನು ಮರೆಯಲು ನನಗೆ ಸಾಧ್ಯವೇ ಆಗದು.

ವಿಶ್ವವಿದ್ಯಾಲಯದ ದಿನಗಳಲ್ಲಿ ನಾನು ’ನಾಸ್ತಿಕವಾದಿ’ ಎಂದು ಕರೆಸಿಕೊಂಡಿದ್ದೆ, ಈಗಲೂ ನನ್ನ ನಿಲುವು ಅದೇ, ಒಂದಿಂಚೂ ಬದಲಾಗಿಲ್ಲ. ಆದರೆ ಕ್ರಮೇಣ ಈ ’ನಾಸ್ತಿಕವಾದಿ’ ಎಂಬ ಹಣೆಪಟ್ಟಿಯು ನನಗೊಂದು ಅಡಚಣೆಯಾಯಿತು, ಅದು ನನ್ನ ಸುತ್ತ ಒಂದು ಗೋಡೆಯನ್ನು ನಿರ್ಮಿಸಿತು. ಆ ಗೋಡೆಯಿಂದ ನನಗೇನೂ ಬಾಧೆಯಿಲ್ಲ. ಆದರೆ ನನ್ನ ಅನುಭವವನ್ನು ಎಲ್ಲರೊಡನೆ ಹಂಚಿಕೊಳ್ಳಲು, ಎಲ್ಲರನ್ನೂ ತಲುಪಲು ಈ ಗೋಡೆ ಒಂದು ಅಡೆತಡೆಯಾಯಿತು. ’ನಾಸ್ತಿಕವಾದಿ’ ಎಂಬ ಹಣೆಪಟ್ಟಿಯಿಂದ ನನ್ನನ್ನು ಗುರುತಿಸಿದೊಡನೆಯೇ ತುಂಬ ವಿದ್ಯಾವಂತರು, ಸೂಕ್ಷ್ಮಮತಿಗಳೂ ಕೂಡ ನನ್ನ ಬಗ್ಗೆ ಒಂದು ಬಗೆಯ ಕಾಲ್ಪನಿಕ ತೀರ್ಮಾನಕ್ಕೆ ಬಂದುಬಿಡುತ್ತಿದ್ದರು. ನನ್ನ ನಿಲುವುಗಳು ನನಗರಿವಿಲ್ಲದೆಯೇ ಜನರ ಮಧ್ಯೆ ನನ್ನನ್ನು ಒಂದು ದ್ವೀಪವನ್ನಾಗಿಸಿತು. ಹಾಗಾಗಿ ನನ್ನ ಕಾರ್ಯವಿಧಾನದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡೆ. ನನ್ನ ಆಂತರ್ಯದ ಕಾಳಜಿಗಳನ್ನು ಅರ್ಥಮಾಡಿಕೊಳ್ಳಬಲ್ಲ, ಆಧ್ಯಾತ್ಮಿಕ ಮಾರ್ಗದಲ್ಲಿ ನನ್ನೊಡನೆ ನಿಜವಾಗಿ ಹೆಜ್ಜೆ ಹಾಕಬಲ್ಲ ನಿಜವಾದ ಸಾಧಕರು ಹಲವು ಧಾರ್ಮಿಕ ಪಂಥಗಳಲ್ಲಿ, ಸಂಪ್ರದಾಯಗಳಲ್ಲಿ ಚದುರಿ ಹೋಗಿದ್ದರು. ಇನ್ನು ನಾಸ್ತಿಕವಾದಿಗಳದೇ ಒಂದು ವರ್ಗವಿತ್ತಾದರೂ ಅಧ್ಯಾತ್ಮದ ಹಾದಿಯ ಕಡೆಗೆ ಅವರಿಗೆ ಕಿಂಚಿತ್ತೂ ಆಸಕ್ತಿ ಇರಲಿಲ್ಲ. ಹಣ, ಅಧಿಕಾರ, ರಾಜಕಾರಣ ಇಂತಹ ಕ್ಷುಲ್ಲಕ ವಿಷಯಗಳಲ್ಲಿ ಅವರು ತೊಡಗಿದ್ದರು. ಆಂತರ್ಯದಲ್ಲಿ ನನಗೆ ಅಂಥ ನಾಸ್ತಿಕರ ಬಗ್ಗೆ ಆಸಕ್ತಿ ಇರಲಿಲ್ಲ, ಅವರಿಗೂ ನನ್ನ ವಿಷಯಗಳು ಆಸಕ್ತಿ ಉಂಟು ಮಾಡಲಿಲ್ಲ. ಹಾಗಾಗಿ ನಾನು ತಾತ್ಕಾಲಿಕವಾಗಿ ಧಾರ್ಮಿಕ ವ್ಯಕ್ತಿಯ ಸೋಗು ಹಾಕಲೇ ಬೇಕಾಯಿತು. ಧರ್ಮ ಎಂಬ ಪದವೇ ನನಗೆ ಹೇಸಿಗೆ ಎನಿಸುತ್ತದೆ ಆದರೂ ನಾನು ಧರ್ಮದ ಬಗ್ಗೆ ಪ್ರವಚನ ನೀಡಬೇಕಾಗಿತ್ತು. ಆದರೆ ಧರ್ಮದ ಹೆಸರಿನಲ್ಲಿ ನಾನು ಅವರು ನಂಬಿದ್ದ ವಿಷಯಗಳ ಕುರಿತು ನುಡಿಯುತ್ತಿರಲಿಲ್ಲ, ಅದು ಬರೀ ಒಂದು ತಂತ್ರವಾಗಿತ್ತು. ಅವರು ಬಳಸುತ್ತಿದ್ದ ಮೋಕ್ಷ, ಧರ್ಮ, ದೇವರು ಇತ್ಯಾದಿ ಪರಿಕಲ್ಪನೆಗಳ ಮರೆಯಲ್ಲಿ ನಿಂತು ನಾನು ನನ್ನ ಅನುಭವವನ್ನೇ ನಿವೇದಿಸುತ್ತಿದ್ದೆ. ಎಲ್ಲ ಧಾರ್ಮಿಕ ಸಾಹಿತ್ಯವನ್ನೂ ನನ್ನದೇ ನೆಲೆಯಿಂದ ವ್ಯಾಖ್ಯಾನಿಸಲು ಪ್ರಾರಂಭಿಸಿದೆ. ನನ್ನ ಜನ ನನ್ನನ್ನು ಸಮೀಪಿಸಲು ಈ ತಂತ್ರ ತುಂಬ ನೆರವಿಗೆ ಬಂದಿತು.

ಹೀಗೆ ನಾಸ್ತಿಕ ಎಂಬ ಹಣೆಪಟ್ಟಿ ಹೋಗಲು ಕೆಲವು ವರ್ಷಗಳು ತೆಗೆದುಕೊಂಡವು. ಕೃಷ್ಣ, ಬುದ್ಧ, ಮಹಾವೀರ ಮೊದಲಾದ ಹೆಸರುಗಳನ್ನು ಬಳಸಿ ಅವರುಗಳು ಎಂದೂ ಹೇಳದಿದ್ದ ಮಾತುಗಳನ್ನೆಲ್ಲ ಅವರ ಬಾಯಿಂದ ಹೇಳಿಸಿದೆ. ಇದೆಲ್ಲ ನನಗೆ ಅವಶ್ಯಕತೆ ಇರಲಿಲ್ಲ. ಆದರೆ ಜನ ಶಬ್ದಪ್ರಮಾಣವನ್ನು ನಂಬುತ್ತಾರೆ. ನಾನು ಗೀತೆಯ ಕುರಿತು ಪ್ರವಚನ ನೀಡಲಾರಂಭಿಸಿದಾಗ ಸಾವಿರಾರು ಜನ ನೆರೆದಿದ್ದರು. ನನಗೂ ಕೃಷ್ಣನಿಗೂ ಅಥವ ನನಗೂ ಯೇಸುವಿಗೂ ಎತ್ತಣಿಂದೆತ್ತಣ ಸಂಬಂಧ? ಯೇಸುವಿನ ಕಾಲದಲ್ಲಿ ನಾನೇನಾದರೂ ಹುಟ್ಟಿದ್ದರೆ “ನಿನಗಿಂತ ಮಹಾನ್ ಮೂಲಭೂತವಾದಿ ಇನ್ನೊಬ್ಬನಿಲ್ಲ, ನಿನಗೆ ಸ್ವಲ್ಪವಾದರೂ ಸಾಮಾನ್ಯಜ್ಞಾನ ಇದೆಯೇ? ನಿನ್ನನ್ನು ಶಿಲುಬೆಗೇರಿಸಿದ ಜನರನ್ನು ನಾನು ಖಂಡಿತ ನಿಂದಿಸಲಾರೆ. ನಿನ್ನಂಥವರ ವಿಷಯದಲ್ಲಿ ಅವರಿಗೆ ಬೇರೇನು ತಾನೆ ಮಾಡಲಾಗುತ್ತಿತ್ತು?” ಎಂದು ನೇರವಾಗಿಯೇ ಕೇಳುತ್ತಿದ್ದೆ. ನಾನು ಯೇಸುವಿನ ಕುರಿತು ಪ್ರವಚನ ನೀಡಲಾರಂಭಿಸಿದಾಗ ಬೇಕಾದಷ್ಟು ಕ್ರಿಶ್ಚಿಯನ್ ಸಂಸ್ಥೆಗಳು, ಥಿಯಾಲಜಿ ವಿದ್ಯಾಲಯಗಳು ನನ್ನನ್ನು ಆಹ್ವಾನಿಸುತ್ತಿದ್ದವು. ನನಗೆ ಒಳಗೊಳಗೇ ನಗು ಬರುತ್ತಿತ್ತು, ನನ್ನ ಮಾತುಗಳನ್ನೇ ಯೇಸುವೂ ನುಡಿದಿದ್ದ ಎಂದು ಅವರು ಭಾವಿಸುತ್ತಿದ್ದರು. ನಾನು ಯೇಸುವಿನ ನುಡಿಗಳನ್ನು ಬಳಸುತ್ತಿದ್ದೆ ನಿಜ, ಶಬ್ದಗಳೊಡನೆ ಸ್ವಲ್ಪ ಆಟವಾಡುವ ಕಲೆ ಕರಗತವಾದರೆ ಸಾಕು, ಯಾವ ಮಾತಿಗೆ ಯಾವ ಅರ್ಥವನ್ನಾದರೂ ಹಚ್ಚಬಹುದು, ಅದೇನೂ ಕಷ್ಟವಲ್ಲ. ಆದರೆ ನಾನು ಹಚ್ಚುತ್ತಿದ್ದ ಅರ್ಥಗಳೇ ಯೇಸುವಿನ ಪರಮ ಸಂದೇಶಗಳು ಎಂದು ಆ ಮೂರ್ಖರು ಭಾವಿಸುತ್ತಿದ್ದರು. “ನಮ್ಮ ಮಿಷಿನರಿಗಳೂ ನಿಮ್ಮಷ್ಟು ಯೇಸುವಿನ ಸೇವೆಯನ್ನು ಮಾಡಿಲ್ಲ” ಎಂದು ಕೊಂಡಾಡುತ್ತಿದ್ದರು. ನಿಜ ಹೇಳಬೇಕೆಂದರೆ ನಾನು ಹೇಳುತ್ತಿದ್ದ ಮಾತುಗಳು ಆ ಯೇಸುವಿಗೂ ಅರ್ಥವಾಗುತ್ತಿತ್ತೋ ಇಲ್ಲವೋ ಎಂದು ನನಗೆ ಅನುಮಾನ. ಎರಡು ಸಾವಿರ ವರ್ಷಗಳ ಹಿಂದೆ ಜೀವಿಸಿದ್ದ ಆ ಬಡಪಾಯಿ ಹಳ್ಳಿಗನಿಗೆ ಮೇಲಿನ ಲೋಕಕ್ಕೆ ಹೆದರುವ, ಸ್ವರ್ಗಲೋಕದ ಪ್ರಲೋಭನೆಗೆ ಬಾಯಿಬಿಡುವ ಅಮಾಯಕ ಹಳ್ಳಿ ಹೈದರುಗಳನ್ನು ಸೆಳೆಯುವ ಆಕರ್ಷಕ ವ್ಯಕ್ತಿತ್ವ ಖಂಡಿತ ಇತ್ತು, ಬಿಟ್ಟಿಯಾಗಿ ಇಲ್ಲಸಲ್ಲದ ಭರವಸೆಗಳನ್ನು ನೀಡಿಕೊಂಡು ಓಡಾಡುತ್ತಿದ್ದ ಈ ಹುಚ್ಚನನ್ನು ಸುಮ್ಮನೆ ನಂಬಿದರೆ ಏನು ಹಾನಿ ಎಂದು ಆ ಹಳ್ಳಿ ಹೈದರೂ ಅವನನ್ನು ಹಿಂಬಾಲಿಸುತ್ತಿದ್ದರು. ಯಾವ ಸುಸಂಸ್ಕೃತ ಯಹೂದೀ ಪಂಡಿತನೂ (ರಬ್ಬೀ) ಯೇಸುವನ್ನು ಅನುಸರಿಸಲಿಲ್ಲವಲ್ಲ ಏಕೆ? ಆ ರಬ್ಬೀಗಳಿಗೆ ಯೇಸುವಿಗಿಂತ ಒಳ್ಳೆಯ ಪಾಂಡಿತ್ಯವಿತ್ತು, ಅವನಿಗಿಂತ ಅದ್ಭುತವಾದ ವಾಕ್ ಸಾಮರ್ಥ್ಯವಿತ್ತು. ಇವನಾದರೂ ಮಹಾ ಹಟಮಾರಿ, ಯಾವ ವೈಚಾರಿಕ ಚಿಂತನಾ ವಿಧಾನವನ್ನೂ ಒಪ್ಪುತ್ತಿರಲಿಲ್ಲ ಅಥವ ಒಪ್ಪುವಷ್ಟು ತಿಳುವಳಿಕೆ ಹೊಂದಿರಲಿಲ್ಲ. ಆದರೂ ನಾನು ಯೇಸುವಿನ ಹೆಸರಿನಿಂದ ಅವರ ಸಮಾಜಗಳಲ್ಲಿ ಹಾಗೆಯೇ ಕೃಷ್ಣ, ಬುದ್ಧ, ಮಹಾವೀರರ ಹೆಸರು ಹೇಳಿಕೊಂಡು ಆಯಾ ಸಮಾಜಗಳಲ್ಲಿ ಪ್ರವೇಶ ಪಡೆದೆ. ಇಲ್ಲದಿದ್ದರೆ ಅವರು ಶಾಶ್ವತವಾಗಿ ನನ್ನನ್ನು ಬಹಿಷ್ಕರಿಸುತ್ತಿದ್ದರು. ಅವರ ಬಹಿಷ್ಕಾರ ತಪ್ಪು ಎಂದು ನಾನು ಅವರನ್ನು ನಿಂದಿಸಲಾರೆ. ನನ್ನ ಧೋರಣೆಯನ್ನು ಬದಲಿಸಿಕೊಳ್ಳದೆ ಅವರ ಸಮಾಜದಿಂದ ನಾನು ದೂರ ಇರುತ್ತಿದ್ದರೆ ನನ್ನನ್ನು ನಾನೇ ನಿಂದಿಸಿಕೊಳ್ಳಬೇಕಾಗುತ್ತಿತ್ತು. ಅವರ ಬಂದೂಕುಗಳಲ್ಲಿ ನನ್ನ ಕಾಡತೂಸುಗಳನ್ನು ತುಂಬಿ ಅವರತ್ತಲೇ ಗುರಿ ಇಟ್ಟೆ, ನನ್ನ ಗುರಿ ತಪ್ಪಲಿಲ್ಲ. ತರಹಾವರಿ ಜೈನ ಮುನಿಗಳು, ಬೌದ್ಧ ಭಿಕ್ಷುಗಳು, ಕ್ರಿಶ್ಚಿಯನ್ ಪಾದ್ರಿಗಳು, ಹಿಂದೂ ವಿದ್ವಾಂಸರುಗಳು ನನ್ನ ಬಳಿ ಬರುತ್ತಿದ್ದರು, ತಮ್ಮ ಶಾಸ್ತ್ರಗಳಲ್ಲಿನ ಧರ್ಮಸೂಕ್ಷ್ಮಗಳನ್ನು ನನ್ನ ಬಳಿ ಗಂಭೀರವಾಗಿ ಚರ್ಚಿಸುತ್ತಿದ್ದರು. ಅವರ ಪಾರಿಭಾಷಿಕ ಪದಗಳನ್ನು ಬಳಸಿ ನನ್ನ ತತ್ವಗಳನ್ನು ಅವರಿಗೇ ತಿರುಗಿಸುತ್ತಿದ್ದೆ. ಇದೊಂದು ಬಗೆಯ ಮೀನು ಹಿಡಿಯುವ ಕಲೆ. ಮೀನನ್ನು ಗಾಳಕ್ಕೆ ಸಿಕ್ಕಿಸಲು ಮೀನು ಇಷ್ಟ ಪಡುವ ತಿನಿಸನ್ನು ಗಾಳಕ್ಕೆ ಅಂಟಿಸಿರುತ್ತಾರೆ. ಹಾಗೆಯೇ ನಾನೂ ಅವರು ಇಷ್ಟಪಡುತ್ತಿದ್ದ ಪಾರಿಭಾಷಿಕ ಪದಗಳನ್ನು ಬಳಸಿ ಅವರನ್ನು ನನ್ನ ಗಾಳಕ್ಕೆ ಹಾಕಿಕೊಳ್ಳುತ್ತಿದ್ದೆ. ಒಂದೊಂದು ಮೀನು ಸಿಕ್ಕಾಗಲೂ ಒಳಗೇ ಖುಷಿ ಪಡುತ್ತಿದ್ದೆ. ಹೀಗೆ ಜೀವನವಿಡೀ ನಾನು ಎಲ್ಲ ಧಾರ್ಮಿಕ ವ್ಯಕ್ತಿಗಳನ್ನು, ಸಿದ್ಧಾಂತಿಗಳನ್ನು ಹಾಸ್ಯಾಸ್ಪದ ವಸ್ತುಗಳಂತೆ ಆಟವಾಡಿಸಿ ಸಂತೋಷ ಪಟ್ಟಿದ್ದೇನೆ.

ಒಮ್ಮೆ ಜಾಬಲ್‌ಪುರದ ಒಂದು ಮುಸ್ಲಿಂ ಕಾಲೇಜಿನಲ್ಲಿ ಸೂಫೀ ಧರ್ಮದ ಬಗ್ಗೆ ಮಾತನಾಡಲು ಆಹ್ವಾನ ಬಂದಿತ್ತು. ಆ ಕಾಲೇಜಿನ ಪ್ರಾಂಶುಪಾಲರು ನನಗೆ ವಿಶ್ವವಿದ್ಯಾಲಯದಲ್ಲಿ ಪಾಠ ಹೇಳಿದ್ದ ಮುಸ್ಲಿಮ್ ಪ್ರಾಧ್ಯಾಪಕರು. ಅವರು ನನ್ನನ್ನು ಕೂಡಲೇ ಗುರುತಿಸಿಬಿಟ್ಟರು. ನನ್ನೊಡನೆ ವೇದಿಕೆ ಹಂಚಿಕೊಂಡಿದ್ದ ಅವರು “ನಿನ್ನಂಥವನು ಸೂಫೀ ಧರ್ಮದ ಬಗ್ಗೆ ಮಾತನಾಡುವ ಮಟ್ಟಿಗೆ ಬದಲಾದೆಯೆಂದರೆ ಇನ್ನು ಮುಂದೆ ನಾನು ಪವಾಡಗಳಲ್ಲಿ ನಂಬಿಕೆ ಇಡಬೇಕು” ಎಂದರು ಆಗ ನಾನು ಅವರ ಕಿವಿಯಲ್ಲಿ ಹೇಳಿದೆ “ಸರ್, ನಿಮ್ಮ ಬಳಿ ನಾನು ಸುಳ್ಳು ಹೇಳಲಾರೆ. ನಾನು ಹಳೆಯ ಸಿದ್ಧಾಂತವನ್ನು ಬಿಟ್ಟಿಲ್ಲ.  ಕಿಂಚಿತ್ತೂ ಬದಲಾಗಿಲ್ಲ. ಇಲ್ಲಿಯೂ ಸಹ ಸೂಫೀ ಪರಿಭಾಷೆಯನ್ನು ಬಳಸಿ ನಾನು ನನ್ನದೆ ತತ್ವವನ್ನು ಪ್ರತಿಪಾದಿಸಲು ಬಂದಿರುವುದು” ಎಂದೆ “ಇದು ಇಡೀ ಸಭೆಯನ್ನು ಮೂರ್ಖರನ್ನಾಗಿಸುವ ಕೆಲಸ” ಎಂದು ಸಿಡಿಮಿಡಿಗೊಂಡರಾದರೂ ನನ್ನ ಭಾಷಣವನ್ನು ನಿಲ್ಲಿಸಲು ಅವರಿಂದಾಗಲಿಲ್ಲ. ಮುಖ ಗಂಟಿಕ್ಕಿಕೊಂಡೇ ನನ್ನ ಉಪನ್ಯಾಸ ಕೇಳಿದರು. ಉಪನ್ಯಾಸ ಮುಗಿದ ಮೇಲೆ ನನ್ನ ಬಳಿ ಬಂದು “ನೀನು ಸೂಫೀ ಬಗ್ಗೆ ಮಾತನಾಡಿದ್ದು ಮುಖ್ಯವಲ್ಲ, ಸಾಕ್ಷಾತ್ ಒಬ್ಬ ಸೂಫೀ ಸಂತನೇ ನನ್ನೆದುರು ನಿಂತಿದ್ದಾನೆ” ಎಂದು ಅಪ್ಪಿಕೊಂಡರು.

ಒಮ್ಮೆ ಅಮೃತಸರದ ಸ್ವರ್ಣಮಂದಿರದಲ್ಲಿ ಸಿಖ್ಖ್ ಧರ್ಮದ ಬಗ್ಗೆ ಪ್ರವಚನ ನೀಡಿದ ಬಳಿಕ ಒಬ್ಬ ವೃದ್ಧರು ನನ್ನ ಬಳಿ ಬಂದು “ಸರ್ದಾರ್ಜಿ, ನಿಮ್ಮ ಮಾತುಗಳೆಲ್ಲ ಸರಿ, ಇಷ್ಟು ದೊಡ್ಡ ಧಾರ್ಮಿಕ ವ್ಯಕ್ತಿಯಾದ ನೀವು ಗಡ್ಡವನ್ನೇಕೆ ಕತ್ತರಿಸಿಕೊಳ್ಳುವಿರಿ?” ಎಂದು ತುಂಬ ವಿನಯ ಶ್ರದ್ಧೆಗಳಿಂದ ಕೇಳಿದರು. ಅವರು ದಾಡಿ ಬಿಟ್ಟಿದ್ದ ನನ್ನನ್ನೂ ಒಬ್ಬ ’ಸರ್ದಾರ್’ ಎಂದು ಭಾವಿಸಿದ್ದರು. ಸಂತತ್ವಕ್ಕೂ ದಾಡಿಗೂ ಎಲ್ಲಿಯ ಸಂಬಂಧ? ಆದರೂ ನಾನು ಅವರ ನಂಬಿಕೆಯನ್ನು ಕಡೆಗಣಿಸಲಿಲ್ಲ ಅವರಷ್ಟೇ ವಿನಯದಿಂದ “ಅದಕ್ಕೆ ಕಾರಣವಿದೆ. ನಾನೊಬ್ಬ ಪರಿಪೂರ್ಣ ’ಸರ್ದಾರ್’ ಎಂದು ಇನ್ನೂ ನನಗೆ ಅನ್ನಿಸಿಲ್ಲ. ಹಾಗೆ ಪರಿಪೂರ್ಣನಾಗದೇ ತೋರಿಕೆಯ ಸರ್ದಾರ್ ಆಗಲು ನನಗಿಷ್ಟವಿಲ್ಲ. ನಾನು ಪರಿಪೂರ್ಣ ಸರ್ದಾರ್ ಆದ ಮೇಲೆ ಕೂದಲು ಕತ್ತರಿಸುವುದನ್ನು ನಿಲ್ಲಿಸುತ್ತೇನೆ” ಎಂದೆ. ಆಗ ಆ ವೃದ್ಧ “ಪ್ರತಿಯೊಬ್ಬರೂ ನಿನ್ನಂತೆ ಯೋಚಿಸಬೇಕು. ಸುಮ್ಮನೆ ವೇಷ ತೊಟ್ಟರೆ ಏನು ಬಂತು?” ಎನ್ನುತ್ತ ಹೊರಟುಹೋದರು. ಇಂತಹ ಸಮುದಾಯಗಳ ಮುಗ್ಧ ಶ್ರದ್ಧಾವಂತರಿಂದ ನನಗೆ ನನ್ನ ಬಹುತೇಕ ಸಂಗಡಿಗರು ಸಿಕ್ಕಿದರು. ನನ್ನ ಹೆಚ್ಚಿನ ಶಿಷ್ಯರು ಬಿಹಾರ ಮೂಲದವರು. ಒಮ್ಮೆ ಬಿಹಾರದಲ್ಲಿ ನಡೆದ ಹಿಂದೂ ಮಹಾಸಭೆಯಿಂದ ಆಹ್ವಾನ ಬಂದಿತ್ತು, ಪುರಿ ಶಂಕರಾಚಾರ್ಯ ಪೀಠದ ಮಠಾಧಿಪತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ನಾನು ನನ್ನ ಉಪನ್ಯಾಸದಲ್ಲಿ ಶಂಕರರ ಅದ್ವೈತ ಸಿದ್ಧಾಂತದ ಪರಿಭಾಷೆಗಳನ್ನು ಬಳಸಿಕೊಂಡೇ ಆ ಸಿದ್ಧಾಂತವನ್ನು ಹಂತ ಹಂತವಾಗಿ ಖಂಡಿಸತೊಡಗಿದೆ. ಕೂಡಲೇ ಮಠಾಧಿಪತಿ ನನ್ನ ಧ್ವನಿವರ್ಧಕವನ್ನು ಕಿತ್ತುಕೊಳ್ಳಲು ಮುಂದಾದ. ಆಗ ನಾನು “ತಾವು ಸಭೆಯ ಅಧ್ಯಕ್ಷರು. ನಿಮ್ಮ ಅಪ್ಪಣೆಯನ್ನು ನಾನು ಉಲ್ಲಂಘಿಸಲಾರೆ. ಆದರೆ ಕಡೆಯದಾಗಿ ಸಭಿಕರಿಗೆ ಒಂದು ಮಾತು ಹೇಳಲು ಅವಕಾಶ ಕೊಡಿ” ಎಂದು ಕೇಳಿದೆ. ಅವರು ಒಂದು ನಿಮಿಷ ಕಾಲಾವಕಾಶ ನೀಡಿದರು. ಎರಡು ಸಾವಿರ ಸಭಿಕರು ಸೇರಿದ್ದರು. ನಾನು ಅವರನ್ನು ಕುರಿತು “ಅಧ್ಯಕ್ಷರು ನನ್ನ ಮಾತುಗಳನ್ನು ನಿಲ್ಲಿಸಲು ಅಪ್ಪಣೆ ನೀಡಿದ್ದಾರೆ. ನಾನು ಅವರ ಮಾತುಗಳನ್ನು ಮೀರಲಾರೆ. ನಾನು ಉಪನ್ಯಾಸವನ್ನು ಮುಂದುವರೆಸುವ ಇಚ್ಛೆ ನಿಮಗಿದ್ದರೆ ದಯವಿಟ್ಟು ಕೈಯೆತ್ತಿ” ಎಂದು ಕೇಳಿದೆ. ಆಗ ಎರಡು ಸಾವಿರ ಕೈಗಳು ಮೇಲಕ್ಕೆದ್ದವು. ನಾನು ಅವರತ್ತ ತಿರುಗಿ “ದಯವಿಟ್ಟು ನಿಮ್ಮ ಜಾಗದಲ್ಲಿ ಆಸೀನರಾಗಿ. ಈ ಎರಡು ಸಾವಿರ ಕೈಗಳು ನಿಮ್ಮ ಅಧ್ಯಕ್ಷತೆಯನ್ನು ವಜಾಗೊಳಿಸಿವೆ” ಎಂದು ಹೇಳಿ ಉಪನ್ಯಾಸವನ್ನು ಮುಂದುವರೆಸಿದೆ.

ನನ್ನ ಪ್ರವಚನದ ಮಧ್ಯೆ ಜನ ಘೋಷಣೆಗಳನ್ನು ಕೂಗುತ್ತಿದ್ದರು, ವೇದಿಕೆಯನ್ನು ಏರದಂತೆ ತಡೆಯುತ್ತಿದ್ದರು, ಕೆಲವೊಮ್ಮೆ ರಸ್ತೆ ತಡೆ ನಡೆಸುತ್ತಿದ್ದರು. ಭಾಷಣದ ಮಧ್ಯೆ ಹಠಾತ್ತಾಗಿ ವಿದ್ಯುತ್ ಸರಬರಾಜು ನಿಲ್ಲಿಸುತ್ತಿದ್ದರು. ಕಲ್ಲುಗಳನ್ನು, ಚಪ್ಪಲಿಗಳನ್ನು ವೇದಿಕೆಯತ್ತ ಎಸೆಯುತ್ತಿದ್ದರು. ನನಗೆ ಜನರ ವರ್ತನೆಯಿಂದ ಸಿಟ್ಟು ಬರುತ್ತಿರಲಿಲ್ಲ. ಏಕೆಂದರೆ ಇವರ ಕಷ್ಟ, ನೋವುಗಳನ್ನು ಚೆನ್ನಾಗಿ ಬಲ್ಲ ನನಗೆ ಈ ವರ್ತನೆ ನನ್ನ ಪಾಲಿಗೆ ಅವಮಾನಕರ ಎನಿಸುತ್ತಲೇ ಇರಲಿಲ್ಲ. ಒಮ್ಮೆ ಬರೋಡಾದಲ್ಲಿ ಒಂದು ಘಟನೆ ನಡೆಯಿತು. ನನ್ನ ಮಾತುಗಳನ್ನು ಮುಂದಿನ ಸಾಲಿನಲ್ಲಿಯೇ ಕುಳಿತು ಕೇಳುತ್ತಿದ್ದ ಒಬ್ಬ ವ್ಯಕ್ತಿ ಒಮ್ಮೆಲೆ ಸಹನೆ ಕಳೆದುಕೊಂಡು ಎದ್ದು ನಿಂತು ತನ್ನ ಕಾಲಿನ ಒಂದು ಷೂವನ್ನು ನನ್ನತ್ತ ಎಸೆದ. ಮಾತನಾಡುತ್ತಿದ್ದ ನನಗೆ ಕೂಡಲೆ ವಾಲಿಬಾಲ್ ಆಡುತ್ತಿದ್ದ ನನ್ನ ಶಾಲಾದಿನಗಳು ನೆನಪಾದವು. ನಾನು ಕೂಡಲೆ ಆ ಶೂವನ್ನು ಹಿಡಿದು, “ಎಲ್ಲಿ ಇನ್ನೊಂದನ್ನೂ ಎಸೆಯಿರಿ” ಎಂದೆ. ಅವನಿಗೆ ಏನು ಹೇಳಬೇಕೋ ತೋಚಲಿಲ್ಲ. ಸುಮ್ಮನೆ ಹಾಗೆಯೇ ನಿಂತಿದ್ದ. ಆತ ಒಬ್ಬ ಸಂಸ್ಕೃತ ವಿದ್ವಾಂಸನಂತೆ. ಸಂಘಟಕರಿಂದ ನನಗೆ ತಿಳಿಯಿತು. ಆಮೇಲೆ ರಾತ್ರಿ ಆತ ನನ್ನ ಬಳಿ ಬಂದು “ನನ್ನಿಂದ ಅಚಾತುರ್ಯವಾಯಿತು, ದಯವಿಟ್ಟು ನನ್ನನ್ನು ಕ್ಷಮಿಸಿ” ಎಂದು ಕಾಲು ಹಿಡಿದುಕೊಂಡ. “ನನಗೆ ನಿಮ್ಮ ಮೇಲೇನೂ ಸಿಟ್ಟಿಲ್ಲ, ಹೇಗೆ ಕ್ಷಮಿಸಲಿ? ನೀವು ಮಾಡಿದ್ದು ಒಳ್ಳೆಯದೇ ಆಯಿತು. ಪ್ರವಚನದ ಸಂದರ್ಭದಲ್ಲಿ ತುಂಬ ಜನ ತೂಕಡಿಸುತ್ತಿದ್ದರು.  ನೀವು ಹಾಗೆ ಮಾಡಿದ ಮೇಲೆ ಎಲ್ಲರೂ ಎಚ್ಚೆತ್ತರು. ನಿಮ್ಮಿಂದ ಒಳ್ಳೆಯದೇ ಆಯಿತು. ಇನ್ನು ಮುಂದೆ ನಾನು ಪ್ರವಚನ ಮಾಡುವಾಗ ಯಾರಾದರೂ ತೂಕಡಿಸುತ್ತಿದ್ದರೆ ನನ್ನ ಸಂಗಡಿಗರನ್ನು ಮೊದಲ ಸಾಲಿನಲ್ಲಿ ಕೂರಿಸಿ ಆಗಾಗ ಅವರ ಕೈಲಿ ಚಪ್ಪಲಿಗಳನ್ನು ವೇದಿಕೆಯತ್ತ ತೂರಿಸಬೇಕು ಎಂದು ಯೋಚಿಸುತ್ತಿದ್ದೇನೆ, ಹಾಗಾಗಿ ನಾನು ನಿಮಗೆ ಕೃತಜ್ಞತೆ ಹೇಳಬೇಕು” ಎಂದು ಹೇಳಿ ನಡೆದೆ. ಆಮೇಲೆಯೂ ಆತ ಒಂದೇ ಸಮನೆ ನನಗೆ ಪತ್ರಗಳನ್ನು ಬರೆಯುತ್ತಿದ್ದ, “ನೀವು ದಯವಿಟ್ಟು ನನ್ನನ್ನು ಕ್ಷಮಿಸುವವರೆಗೂ ಪತ್ರಗಳನ್ನು ಬರೆಯುತ್ತಲೇ ಇರುತ್ತೇನೆ” ಎಂದು ಬರೆದಿದ್ದ. ಆಗ ನಾನು ಅವನಿಗೆ ಬರೆದೆ “ನಿಮ್ಮನ್ನು ಕ್ಷಮಿಸುವುದೆಂದರೆ ನಾನು ಕೋಪಿಸಿಕೊಂಡಿದ್ದೆ ಎಂದು ಒಪ್ಪಿಕೊಳ್ಳಬೇಕು. ಆದರೆ ನನಗೆ ಅಂದು ಕೋಪವೇ ಬಂದಿರಲಿಲ್ಲವಲ್ಲ! ನೀವು ನಿರೀಕ್ಷಿಸಿದಂತೆ ವರ್ತಿಸಲು ನನ್ನಿಂದ ಆಗಲಿಲ್ಲವಲ್ಲ ಎಂದು ನನಗೆ ಖೇದವಾಗುತ್ತಿದೆ, ಹಾಗಾಗಿ ನೀವು ನನ್ನನ್ನು ಕ್ಷಮಿಸಬೇಕು” ಎಂದು ಉತ್ತರಿಸಿದ್ದೆ. ಆಮೇಲೆ ಅದೇಕೋ ಅವನು ಪತ್ರ ಬರೆಯುವುದನ್ನು ನಿಲ್ಲಿಸಿದ.

ನಾನು ಸಾಕಷ್ಟು ಜನರ ದ್ವೇಷ, ಸಿಟ್ಟು ಹಗೆತನಗಳನ್ನು ಎದುರಿಸಿದ್ದೇನೆ. ಅವರ ದುಷ್ಟತನವನ್ನು ನನ್ನ ಪ್ರೀತಿಗೆ ಸವಾಲು ಎಂಬಂತೆ ಸ್ವೀಕರಿಸಿದ್ದೇನೆ. ಅವರ ವಿಷವನ್ನೆಲ್ಲ ನುಂಗಿಯೂ ಅವರನ್ನು ದ್ವೇಷಿಸಲು ಅಸಾಧ್ಯವಾದಾಗ ಮಾತ್ರ ನನಗೆ ನನ್ನ ಪ್ರೀತಿಯ ಮೇಲೆ ನಂಬಿಕೆ ಹುಟ್ಟುತ್ತದೆ. ಹಾಗಲ್ಲದೆ ನನ್ನನ್ನು ಇಷ್ಟ ಪಡುವವರಿಗೆ ಮಾತ್ರ ಪ್ರೀತಿ ತೋರಿಸುವುದರಲ್ಲೇನಿದೆ? ಅದು ಒಂದು ಧಂಧೆಯಾಗುತ್ತದೆ ಅಷ್ಟೆ. ಚಿಕ್ಕಂದಿನಿಂದಲೂ ನಾನು ಮಹಾ ಬಂಡಾಯದ ಸ್ವಭಾವದವನು. ಹಾಗಾಗಿ ಎಲ್ಲರನ್ನೂ ಸುಲಭವಾಗಿ ರೊಚ್ಚಿಗೆಬ್ಬಿಸುತ್ತಿದ್ದೆ, ಅವಮಾನಿತರಾಗುವಂತೆ ಮಾಡುತ್ತಿದ್ದೆ. ಆದರೆ ಯಾರನ್ನೂ ಮನಸಾರೆ ದ್ವೇಷಿಸಲು ನನ್ನಿಂದ ಆಗಲಿಲ್ಲ. ನಾನು ಬಂಡಾಯದ ಸ್ವಭಾವದವನಾಗಿದ್ದೆ, ಕೋಪಿಷ್ಟನಾಗಿರಲಿಲ್ಲ, ಅವಿಧೇಯನಾಗಿದ್ದೆ ಆದರೆ ಯಾರನ್ನೂ ಕೀಳಾಗಿ ನೋಡುತ್ತಿರಲಿಲ್ಲ, ತುಂಬ ಗೌರವದಿಂದ ನಿಮ್ಮನ್ನು ವಿರೋಧಿಸುತ್ತೇನೆ ಎಂದು ಪ್ರಾಮಾಣಿಕವಾಗಿ ನಿವೇದಿಸಿಕೊಳ್ಳುತ್ತಿದ್ದೆ. ನನ್ನನ್ನು ದ್ವೇಷಿಸುತ್ತಿದ್ದವರೂ ಸಹ ನನ್ನ ಪ್ರಾಮಾಣಿಕತೆಯನ್ನು ಅನುಮಾನಿಸುತ್ತಿರಲಿಲ್ಲ. ಜಗತ್ತಿನ ಯಾವ ಹಗೆತನವೂ, ದ್ವೇಷವೂ ನನ್ನನ್ನು ವಿಚಲಿತನನ್ನಾಗಿಸಲಿಲ್ಲ, ಬದಲಿಗೆ ಅವೆಲ್ಲ ನನ್ನ ವಿಶ್ವಾಸವನ್ನು ಇನ್ನೂ ಗಟ್ಟಿಗೊಳಿಸಿದವು. ಆದರೆ ಈ ಸಂಚಾರದ ದಿನಗಳಲ್ಲಿ ನಾನು ಆರೋಗ್ಯವನ್ನು ಸಂಪೂರ್ಣ ಕೆಡಿಸಿಕೊಂಡೆ. ಆಗ ನಾನು ನೂರಾತೊಂಬತ್ತು ಪೌಂಡ್‌ಗಳಿದ್ದೆ. ಹಾಗೆ ನೋಡಿದರೆ ನನ್ನದೇನೂ ಕೊಬ್ಬಿನ ಮೈಯಲ್ಲ. ಕಲ್ಲು ಬಂಡೆಯಂತಿದ್ದ ನನಗೆ ಕಾಯಿಲೆ ಎಂದರೆ ಏನೆಂದೇ ಗೊತ್ತಿರಲಿಲ್ಲ. ಆದರೆ ದೇಹ ಕ್ಷೀಣಿಸತೊಡಗಿದ ಮೇಲೆ ತಲೆನೋವು, ಹೊಟ್ಟೆನೋವು, ಮಧುಮೇಹ, ಆಸ್ತಮಾ ಹೀಗೆ ಒಂದೊಂದಾಗಿ ಎಲ್ಲ ಕಾಯಿಲೆಗಳ ಪರಿಚಯವಾದವು. ಆಮೇಲೆ ನನ್ನ ದೇಹದ ತೂಕ ನೂರ ಮೂವತ್ತೊಂದು ಪೌಂಡ್‌ಗಳಿಗೆ ಇಳಿಯಿತು. ಮತ್ತೆ ಹೆಚ್ಚಾಗಲೇ ಇಲ್ಲ.

ಒಂದು ಪತ್ರದ ಭಾಗ:

“ನನಗೆ ಸತ್ಯ ಪ್ರಾಪ್ತವಾದಾಗ ನಿಮಗೆ ತಿಳಿಸುತ್ತೇನೆ” ಎಂದು ಹಿಂದಿನ ಜನ್ಮದಲ್ಲಿ ಹಲವು ಸ್ನೇಹಿತರಿಗೆ ಆಶ್ವಾಸನೆ ನೀಡಿದ್ದೆ. ಅದಕ್ಕಾಗಿ ನಾನು ಭಾರತದಾದ್ಯಂತ ಸಂಚಾರ ಮಾಡಬೇಕಾಯಿತು. ಕೆಲವರು ವಿದೇಶಗಳಲ್ಲಿ ಇದ್ದಾರೆ, ಅವರನ್ನೂ ಸಂಪರ್ಕಿಸುತ್ತೇನೆ. ಅವರಾರಿಗೂ ಇದೆಲ್ಲದರ ನೆನಪಿಲ್ಲದಿದ್ದರೂ ನನ್ನ ಕರ್ತವ್ಯವನ್ನು ನಾನು ಪೂರೈಸಲೇ ಬೇಕಲ್ಲವೇ? ಇನ್ನು ಮುಂದೆ ನಾನು ಸಂಚಾರವನ್ನು ನಿಲ್ಲಿಸಿ ಒಂದು ಜಾಗದಲ್ಲಿ ವಾಸಿಸಲಾರಂಭಿಸುತ್ತೇನೆ. ಆಗ ಸಾಧಕರಿಗೆ ನೆರವಾಗಲು ಅನುಕೂಲವಾಗುತ್ತದೆ. ನಿಜವಾಗಿಯೂ ನನ್ನ ಅವಶ್ಯಕತೆ ಇದೆ ಎಂದು ಭಾವಿಸುವವರಿಗಾಗಿ ನಾನು ಬೆವರು ಸುರಿಸಬೇಕು. ಅಂತಹವರಿಗೆ ನಾನು ಸಂಚರಿಸದಿದ್ದರೂ ನನ್ನ ಸಂಚಾರ ನಿಂತಿಲ್ಲದಂತೆ ಭಾಸವಾಗುತ್ತದೆ, ಸುಮ್ಮನಿದ್ದರೂ ನುಡಿದಂತೆ ಅನ್ನಿಸುತ್ತದೆ. ನನ್ನ ದೇಹವೇ ಇಲ್ಲವಾದಾಗಲೂ ನನ್ನ ಸಹಾಯ ಹಸ್ತ ಶಾಶ್ವತವಾಗಿ ಅಂಥವರ ಮೇಲಿರುತ್ತದೆ. ಏಕೆಂದರೆ ಇದಾವುದೂ ನನ್ನ ಕೈಲಿಲ್ಲ, ಎಲ್ಲವನ್ನೂ ಭಗವಂತ ನಡೆಸುತ್ತಿದ್ದಾನೆ. ವಿವೇಕವುಳ್ಳವರಿಗೆ ಇದು ಅರ್ಥವಾಗುತ್ತದೆ. ಬುದ್ಧ ಮಹಾವೀರರ ಕಾಲದಲ್ಲಿ ಬಿಹಾರದಲ್ಲಿ ಏನು ಸಂಭವಿಸಿತೋ ಅದು ಇನ್ನು ಕೆಲವೇ ವರ್ಷಗಳಲ್ಲಿ ಜಗತ್ತಿನಾದ್ಯಂತ ಸಂಭವಿಸಲಿದೆ. ಅದಕ್ಕಾಗಿ ಒಂದು ಹೊಸ ಸಂನ್ಯಾಸ ಪದ್ಧತಿಯನ್ನು, ಒಂದು ಹೊಸ ಧ್ಯಾನ, ಯೋಗದ ವಿಧಾನವನ್ನು ಆವಿಷ್ಕರಿಸಬೇಕಿದೆ.