ಒಂದನೇ ತರಗತಿಯಿಂದ "ಇಂಗ್ಲಿಷ್" ಕಲಿಕೆ - ಒಂದು ಚಿಂತನೆ

ಒಂದನೇ ತರಗತಿಯಿಂದ "ಇಂಗ್ಲಿಷ್" ಕಲಿಕೆ - ಒಂದು ಚಿಂತನೆ

ಬರಹ

ಇಂಗ್ಲಿಷರ ಗುಲಾಮಗಿರಿಯಿಂದ ಬಿಡುಗಡೆ ಹೊಂದಿದ ಭಾರತ "ಇಂಗ್ಲಿಷ್" ಭಾಷೆಯ ಗುಲಾಮಗಿರಿಯಿಂದ ಬಿಡುಗಡೆ ಹೊಂದಿರಲಿಲ್ಲ. ಸ್ವಾತಂತ್ರ್ಯ ಸಿಕ್ಕಿ ೬೦ ವರ್ಷದ ಬಳಿ ಬಂದರೂ, "ಇಂಗ್ಲಿಷ್" ಭಾಷೆಯ ಗುಲಾಮಗಿರಿಯ ಹಗ್ಗ ಕೊರಳನ್ನು ಬಿಗಿಯತೊಡಗಿದೆ.
ಇಂಗ್ಲಿಷನ್ನು ನಿರಾಕರಿಸಿದರೆ, ಗ್ರಾಮೀಣ ಮಕ್ಕಳ ಪಾಡಂತೂ ಉದ್ಯೋಗದ ಮಾರುಕಟ್ಟೆಯಲ್ಲಿ ಶೋಚನೀಯವಾಗುವುದು. ನಮ್ಮ ದೇಶದ ಬುದ್ಧಿವಂತ, ಕ್ರಿಯಾತ್ಮಕ ಗ್ರಾಮೀಣ ಪ್ರತಿಭೆಗಳನ್ನು, ನಗರದ "ಎಬಿಸಿಡಿ" ಪ್ರತಿಭೆಗಳು(?) ಅವಕಾಶ ವಂಚಿತರನ್ನಾಗಿಸುತ್ತಿರುವುದು ಸತ್ಯ.
ಹಾಗಾದರೆ ಇಂಗ್ಲಿಷ್ ಭಾಷೆಯನ್ನು ಹೊಡೆದೋಡಿಸಲು ಸಾಧ್ಯವೇ? ಸದ್ಯದ ಪರಿಸ್ಥಿತಿಯಲ್ಲಂತೂ ಸಾಧ್ಯವಿಲ್ಲ. ಈ ಬಗ್ಗೆ ಭಾಷಣ ಹೊಡೆಯಬಹುದು. "ಸಿರಿಗನ್ನಡಂ ಗೆಲ್ಗೆ" ಎಂದು ಗಂಟಲು ಬಿರಿಯುವಂತೆ ಕೂಗಬಹುದು. ನಗರದ ಮಕ್ಕಳು "ಉದ್ಯೋಗದ ಮಾರುಕಟ್ಟೆ"ಯನ್ನು ಕಬಳಿಸುತ್ತಾರೆ. ಗ್ರಾಮೀಣ ಮಕ್ಕಳಿಗೆ ವ್ಯವಸಾಯವೇ ಗತಿ. ಈ ಪರಿಸ್ಥಿತಿ ಮುಂದುವರಿಯುತ್ತಲೇ ಇರುತ್ತದೆ. ಕನ್ನಡದ ಹೋರಾಟ ನಡೆಯುತ್ತಲೇ ಇರುತ್ತದೆ. ಹೋರಾಟಗಾರರ ಮಕ್ಕಳು "ಇಂಗ್ಲಿಷ್" ಮಾಧ್ಯಮದಲ್ಲಿ ಓದುತ್ತಿರುತ್ತಾರೆ. ಗ್ರಾಮೀಣ ಮಕ್ಕಳ ಗತಿ ಕೈಲಾಸ! "ಇಂಗ್ಲಿಷ್" ಭಾಷೆಯ ಗುಲಾಮಗಿರಿಯ ಹಗ್ಗ ಗ್ರಾಮೀಣ ಮಕ್ಕಳ ಕೊರಳನ್ನು ಬಿಗಿಯುತ್ತದೆ.
ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿಸಿದರೆ ಹೇಗೆ? ಎಂಬುದು ಕೆಲವು ಬುದ್ಧಿವಂತರ(?) ಅನಿಸಿಕೆ. ಇದಕ್ಕೆ ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತಾಯಿತು. ರೋಗಕ್ಕೆ ತಕ್ಕ ಮದ್ದು ನೀಡಬೇಕೇ ಹೊರತು, ಯಾವುದೋ ಮದ್ದು ನೀಡಿದರೆ ರೋಗ ವಾಸಿಯಾಗುವುದೇ? ಒಂದನೇ ತರಗತಿಯಿಂದ ಕಲಿಸಿದರೆ ಎಲ್ಲ ಮಕ್ಕಳಿಗೂ ಇಂಗ್ಲಿಷ್ ಬರುತ್ತದೆ ಎಂಬುದು ಶುದ್ಧ ಮೂರ್ಖ ಕನಸು. ನಾವು ಒಂದನೇ ತರಗತಿಯಿಂದ ಲೆಕ್ಕ ಕಲಿಸುತ್ತಿಲ್ಲವೇ? ಮಕ್ಕಳು ಲೆಕ್ಕದಲ್ಲಿ ದಡ್ಡರು ಯಾಕೆ? ಹಾಗಾದರೆ ಸಮಸ್ಯೆಗೆ ಪರಿಹಾರವೇನು?
ನಾವು ಈ ಎರಡು ಅಂಶಗಳನ್ನು ಮನಸ್ಸಿನಲ್ಲಿಟ್ಟು ಯೋಚಿಸಬೇಕಾಗುತ್ತದೆ.
೧. ಇಂಗ್ಲಿಷ್ ಒಂದು ವಿದೇಶಿ ಭಾಷೆ.
೨. ಇಂಗ್ಲಿಷ್ ನಮ್ಮ ಮಾತೃಭಾಷೆಯಲ್ಲವಾದ್ದದರಿಂದ ಮಾತನಾಡಲು, ಬರೆಯಲು ಮಕ್ಕಳಿಗೆ ಕಷ್ಟ.
ಹಾಗಾದರೆ ಪರಿಹಾರವೇನು?
೧. ನಾವು ವಿದೇಶಿ ಭಾಷೆಯನ್ನು ಕಲಿಸುವ ವಿಧಾನವನ್ನು ಬದಲಿಸಬೇಕು. ಈ ಬಗ್ಗೆ ಶಿಕ್ಷಣ ತಜ್ಞರ ಸಮಿತಿಯೊಂದನ್ನು ನೇಮಿಸಿ ಪಾಠಸೂಚಿಯನ್ನು ತಯಾರಿಸಬೇಕು.
೨. ಇಂಗ್ಲಿಷ್ ಭಾಷೆಯನ್ನು ಕಲಿಸುವ ಅಧ್ಯಾಪಕರು ಕನಿಷ್ಠ ಬಿ.ಎ.(ಇಂಗ್ಲಿಷ್) ಅಥವಾ ಎಂ.ಎ.(ಇಂಗ್ಲಿಷ್) ಪದವೀಧರರಾಗಿರಬೇಕು. ಆವರಿಗೆ ವಿದ್ಯಾರ್ಹತೆಗೆ ಅನುಸಾರವಾಗಿ ಸಂಬಳವನ್ನು ಪ್ರಾಥಮಿಕ ಅಧ್ಯಾಪಕರಿಗಿಂತ ಜಾಸ್ತಿ ನೀಡಬೇಕಾಗುತ್ತದೆ.
ಈ ಮೇಲಿನ ಹೆಜ್ಜೆಗಳನ್ನು ತೆಗೆದುಕೊಂಡರೆ ಮಾತ್ರ ಗ್ರಾಮೀಣ ಮಕ್ಕಳು ಇಂಗ್ಲಿಷ್ ಭಾಷೆಯನ್ನು ಕಲಿತು ನಗರದ ಮಕ್ಕಳೊಂದಿಗೆ ನ್ಯಾಯವಾದ ರೀತಿಯಲ್ಲಿ ಸ್ಪರ್ಧಿಸಬಹುದು. ಅಲ್ಲದೇ ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿಯುತ್ತಾರೋ? ಐದನೇ ತರಗತಿಯಿಂದ ಕಲಿಯುತ್ತಾರೋ? ಎನ್ನುವುದು ಮುಖ್ಯವಲ್ಲ. ಹೇಗೆ ಕಲಿಸುತ್ತೇವೆ? ಯಾರು ಕಲಿಸುತ್ತಾರೆ? ಎನ್ನುವುದು ಮುಖ್ಯ ಪ್ರಶ್ನೆ. ಎಸ್.ಎಸ್.ಎಲ್.ಸಿ. ಅಥವಾ ಪಿ.ಯು.ಸಿ. ಓದಿದವರು ಟಿ.ಸಿ.ಎಚ್. ಮಾಡಿ ವಿದೇಶಿ ಗುಲಾಮಗಿರಿಯ ಭಾಷೆಯಾದ ಇಂಗ್ಲಿಷನ್ನು ಕಲಿಸುವುದಾದರೂ ಹೇಗೆ? ಮೂಲತ: ತಪ್ಪು ತಪ್ಪು ಕಲಿತು ಮತ್ತೆ ಸರಿಪಡಿಸಲು ಮಕ್ಕಳು ಶ್ರಮಪಡಬೇಕಾಗುತ್ತದೆ.