ಕಿನ್ನರಿ
ಕನ್ನಡದ ಕಿನ್ನುರಿಯ ನುಡಿಸಿ ಕಿನ್ನರ ಲೋಕವ ಸೃಷ್ಟಿಸುವ
ಕನ್ನುಡಿಯ ಕವನಗಳ ಕಂಪಿನಲೆಗಳ ಕನಸಿನ ಲೋಕದಲಿ
ಕಿನ್ನರ ಜೋಡಿಗಳಂದದಿ ಲಗ್ಗೆಯಿಡುವ ಹೊನ್ನ ಹರಿಗೋಲಿನಲಿ
ಪನ್ನೀರ ಪ್ರೇಮಸಾಗರ ಸುಂದರ ಶೃಂಗಾರ ಸ್ವಪ್ನ ಲೋಕಕೆ
ಸುಖವ ಸೂರೆಗೊಳಿಸುವ ಪ್ರೇಮಲೋಕದಲಿ ವಿರಹಿಗಳೆ
ವಿಹರಿಸಿ ಹೊನ್ನ ಹಾಯಿ ಹರಿಗೋಲಿನಲಿ
ಮತ್ತಿನಲೆಗಳ ಮೇಲೆ ಮುತ್ತುಗಳ ಮಳೆ ಸುರಿಸಿ
ತೊಯ್ದು ತೊಪ್ಪೆಯಾಗಲಿ ವಿರಹದುರಿಯ ಪ್ರತಾಪದಗ್ನಿ ಜ್ವಾಲೆ
ಭಾವ ಪ್ರಳಯದಲಿ ಮುಳುಗಿ ಹೋಗಲಿ ಭಗ್ನ ಪ್ರಣಯಲೀಲೆ
ಮಧು ಚಂದ್ರ ಲೋಕದಲಿ ಸ್ವರ್ಣ ಮುತ್ತಿನ ಮಾಲೆ
ಚಂದ್ರಚಕೋರಿಯ ಇಂದ್ರಚಾಪ ಮಧುಚಂದ್ರಲೀಲೆ
ನಿತ್ಯ ವಸಂತೋತ್ಸವ ಕೋಗಿಲೆಯ ಪಂಚಮದಿಂಚರ
ಸುಪ್ತಪ್ರೇಮ ಬಡಿದೆಬ್ಬಿಸುವ ಬೆಳದಿಂಗಳ ಭಾವಸಂಚಾರ
ಕಾಳಿದಾಸನ ಕಾವ್ಯ ಕನ್ನಿಕೆಯರಿಹರಿಲ್ಲಿ
ರವಿವರ್ಮನ ಕುಂಚದ ಕಾಮಿನಿಯರಿಹರಿಲ್ಲಿ
ರತಿಮನ್ಮಥರೆ ರಾಜ್ಯವಾಳುವರಿಲ್ಲಿ ಕಾಮರೂಪದಲಿ
ಕೂರಸಿಯ ಕೆಂಗಣ್ಣ ಕಿಡಿಗೇಡಿ ಕಿರಾತಕರಿಲ್ಲಿಲ್ಲ
ಕೂರಲಗ ಪಿಸುಮಾತ ಕಿಸುಬಾಯ ಗಯ್ಯಾಳಿಯರಿಲ್ಲಿಲ್ಲ
ನಾವೆ ರಾಜರಾಣಿಯರೀ ಪ್ರೇಮ ಸಾಮ್ರಾಜ್ಯದಲಿ
ವಿರೋಧಿಗಳ ಸೊಲ್ಲಿಲ್ಲಿಲ್ಲ ನೋಡಿದರಿಲ್ಲಿ ಪ್ರೇಮಿಗಳೆ ಎಲ್ಲ
ಮಧು ಮಕರಂದ ಚಂದ್ರ ಚಂದನ ಸುರಪಾರಿಜಾತ
ಮುದಬಿಂಬ ಮಧುಚಂದ್ರ ಸಪ್ತವರ್ಣ ಮೇಘಮಾಲೆ
ಪಂಚರಂಗಿ ಗಿಳಿವಿಂಡು ಕಾಮನಬಿಲ್ಲ ವಸಂತಮಾಸ
ಪಂಚಮರಾಗದ ಮಧುರ ಪ್ರೇಮ ಗಂಧರ್ವಗಾನ
ಸ್ವಾಗತಿಸುವರು ಸದಾ ರತಿಮನ್ಮಥರು ವಿಹರಿಸುವ ಅಮರ ಪ್ರೇಮಿಗಳಾಗಿ ಸದಾ
Comments
ಉ: ಕಿನ್ನರಿ
ಉ: ಕಿನ್ನರಿ