ಕಾಡುವ ಗೆಳತಿ
ಕಾಡುವ ಗೆಳತಿ
ಪ್ರೀತಿ-ಪ್ರೇಮದಲ್ಲಿ ನನಗೆ ನಂಬಿಕೆ ಇರಲಿಲ್ಲ. ಆದರೆ ಪ್ರೀತಿ ಅಂದರೆ ಏನು ಎಂದು ನನಗೆ ತಿಳಿದಿದ್ದು ನಿನ್ನ, ಹೃದಯದಲ್ಲಿ ನಾನು ಬಂಧಿಯಾದ ಬಳಿಕ. ಆದರೆ ಇಂದು ಅದೇ ಪ್ರೀತಿ ನನ್ನ ಮನಸ್ಸನ್ನು ಘಾಸಿಗೊಳಿಸಿದೆ. ಅದಕ್ಕೆ ಕಾರಣ ನೀನು.
ಅಂದು ನಮ್ಮ ಕಾಲೇಜು ವಾರ್ಷಿಕೋತ್ಸವ ದಿನ. ನಮ್ಮ ಸೆಕ್ಷನ್‌ನಲ್ಲಿ ಇದ್ದದ್ದು ನೀನೊಬ್ಬಳೆ. ಎಲ್ಲಾ ಹುಡುಗಿಯರು ಕಡ್ಡಾಯವಾಗಿ ಕಾರ್ಯಕ್ರಮಕ್ಕೆ ಸೀರೆಯುಟ್ಟುಕೊಂಡು ಬರಬೇಕೆಂದು ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ ಅಧಿಸೂಚನೆ ಹೊರಡಿಸಿದ್ದು ನಾನೇ. ನಮ್ಮ ಕಾರ್ಯಕ್ರಮದ ದಿನ ಚೆನ್ನೈನಲ್ಲಿ ಚಂಡಮಾರುತ ಉಂಟಾಗಿ ಬೆಂಗಳೂರಿನಲ್ಲಿ ಭಯಂಕರವಾಗಿ ಮಳೆ, ಚರಂಡಿಗಳೆಲ್ಲಾ ತುಂಬಿ ನೀರು ರಸ್ತೆಯ ಮೇಲೆ ಹರಿಯುತ್ತಿದ್ದ ಪರಿಸ್ಥಿತಿ.
ನಮ್ಮ ಕಾರ್ಯಕ್ರಮದ ವೇದಿಕೆಗೆ ಬರುವ ದಾರಿ ತುಂಬೆಲ್ಲಾ ನೀರು, ನಾನು ನಮ್ಮ ಸಂಘದ ಒಬ್ಬರಿಗೆ ಈ ನೀರನ್ನೆಲ್ಲಾ ತೆಗೆಯಲು ಹೇಳಿ, ಹಾಗೆ ಹಿಂದಕ್ಕೊಮ್ಮೆ ತಿರುಗಿದರೆ ನಿಮ್ಮಪ್ಪ ನಿನ್ನನ್ನು ಬೈಕ್‌ನಲ್ಲಿ ಡ್ರಾಪ್ ಮಾಡಿ ಹೋದರು.
ನೀನು ಹೈ ಹೀಲ್ಡ್ ಚಪ್ಪಲಿ ಹಾಕಿಕೊಂಡು ಒಂದು ಕೈಯಲ್ಲಿ ಕೊಡೆ ಹಿಡಿದು ಇನ್ನೊಂದು ಕೈಯಲ್ಲಿ ಸೀರೆಯನ್ನು ಬಿಗಿಯಾಗಿ ಹಿಡಿದು ನಡೆಯುತ್ತಿದ್ದರೆ ಫ್ಯಾಶನ್ ಟಿವಿಯ ರ್ಯಾಂಪ್‌ನ ಮೇಲೆ ನಡೆಯುವ ಬಿನ್ನಾಣಗಿತ್ತಿಯರು ಕೂಡ ನಿನ್ನ ನಡುಗೆಯನ್ನು ನೋಡಿ ನಾಚುತ್ತಿದ್ದರು.
ಇದೇ ಸಮಯಕ್ಕಾಗಿ ಕಾಯುತ್ತಿದ್ದ ಹುಡುಗರು ನಿನ್ನನ್ನು ನೋಡಿ ಛೇಡಿಸುತ್ತಿದ್ದಾಗ ನಿನ್ನ ಮುಖದಲ್ಲಿ ಕಣ್ಣೀರಿನ ಕಾರಂಜಿ ಹರಿಯುವುದೊಂದೆ ಬಾಕಿ, ಅಷ್ಟರಲ್ಲಿ ನಾನು ನಿನ್ನ ಕೈ ಹಿಡಿದು ಡ್ರೆಸ್ಸಿಂಗ್ ರೂಮಿಗೆ ಬಿಟ್ಟು ಬಂದೆ. ನಿನ್ನ ಕೈ ಹಿಡಿದ ಕ್ಷಣ ಮನಸ್ಸು ನನ್ನ ಸ್ಥಿಮಿತದಲ್ಲಿರಲಿಲ್ಲ. ತಿಲ್ಲಾನ ಹಾಡುತ್ತಿತ್ತು.
ವಾರ್ಷಿಕೋತ್ಸವವಾದ ಮೇಲೆ ನೀನು ದಿನೇ ದಿನೇ ನನಗೆ ಹತ್ತಿರವಾದೆ. ನಾನು ವಿದ್ಯಾರ್ಥಿ ನಾಯಕನಾಗಿದ್ದರಿಂದ ನನ್ನ ಮೊಬೈಲ್ ಯಾವಾಗಲೂ ವಿದ್ಯಾರ್ಥಿಗಳ ಕರೆಗಳಿಗೆ ಮುಕ್ತವಾಗಿ ತೆರೆದಿರುತ್ತಿತ್ತು. ನೀನು ಕಾರ್ಯಕ್ರಮವಾದ ಮಾರನೇ ದಿನ ಥ್ಯಾಂಕ್ಸ್ ಹೇಳುವ ನೆಪದಲ್ಲಿ ರಾತ್ರಿ 12.00 ಕ್ಕೆ ಫೋನ್ ಮಾಡಿ ಅರ್ಧಗಂಟೆ ಮಾತನಾಡಿದೆ.
ಅಂದಿನಿಂದ ಶುರುವಾಯಿತು ನಮ್ಮ ಫೋನಾಯಣ. ದಿನವೂ ನಮ್ಮ ಹರಟೆಗಳು ಫೋನ್‌ನಲ್ಲಿ ಜಾಸ್ತಿಯಾಗುತ್ತ ಹೋಯಿತು. ಕೆಲವು ಸಲ ಸುಮ್ ಸುಮ್ನೆ ಕಾರಣವಿಲ್ಲದೆ ಫೋನ್ ಮಾಡ್ತೀಯಾ, ಏಕೆ ಮಾಡ್ದೆ ನಾನು ಬ್ಯುಸಿ ಅಂತಾ ಬೈದರೆ ಗೋಳೋ ಅಂತಾ ನೀನು ಅಳ್ತಿದ್ದೆ. ನಾನು ಒಂದು ದಿನ, ನೀನು ಏಕೆ ನನ್ನ ತಲೆ ತಿನ್ನುತ್ತಿಯಾ ಎಂದು ಕೇಳಿದಾಗ ನೀನು ಅದೆಷ್ಟೂ ಧೈರ್ಯವಾಗಿ ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿದಾಗ, ರೋಗಿ ಬಯಸಿದ್ದು ಹಾಲು. ವೈದ್ಯ ಹೇಳಿದ್ದು ಹಾಲು. ಅನ್ನುವ ರೀತಿ ನನಗೂ ಅದೇ ಬೇಕಾಗಿತ್ತು. ಅದೆಷ್ಟು ಧೈರ್ಯ ಈ ಹುಡುಗಿಯರಿಗೆ ಅಂತ ನಾನು ಆಗ ಅಂದು ಕೊಂಡಿದ್ದೆ. ನಾನು ಈ ಮೊದಲು ಹಲವು ಬಾರಿ ‘ಐ ಲವ್ ಯು’ ಹೇಳಲು ಪ್ರಯತ್ನಿಸಿದ್ದೆನಾದರೂ ಭಯದಿಂದ ಹೇಳಲು ಸಾಧ್ಯವಾಗಿರಲಿಲ್ಲ!
ಇದಾದ ನಂತರ ಕಾಲೇಜಿಗೆ ಬಂಕ್ ಹೊಡೆದು ಚಿತ್ರಮಂದಿರಲ್ಲಿ ಮುಂಗಾರುಮಳೆ ಸೇರಿದಂತೆ ಹಲವು ಚಿತ್ರಗಳನ್ನು ಜೊತೆಯಾಗಿ ಕೂತು ನೋಡಿ ಎಂಜಾಯ್ ಮಾಡಿದೆವು. ನನಗೆ ಇನ್ನೂ ನೆನಪಿದೆ. ಮುಂಗಾರು ಮಳೆ ಚಿತ್ರದ ಕೊನೆಯಲ್ಲಿ ಹೀರೋ ತನ್ನ ಪ್ರೀತಿಯನ್ನು ತ್ಯಾಗಮಾಡುವ ದೃಶ್ಯ ಕಂಡು ನೀನು ಅತ್ತಿದ್ದೆ. ಆದರೆ ಇಂದು ನಾನೇ ಅಳುವಂತೆ ನೀನು ಮಾಡಿದೆ.
ದಿನಗಳು ಕಳೆದಂತೆ ಒಂದೇ ತಟ್ಟೆಯಲ್ಲಿ ಊಟಮಾಡುವ, ಒಂದೇ ಬಾಟಲಿಗೆ ಎರಡು ಸ್ಟ್ರಾ ಹಾಕಿ ಜ್ಯೂಸ್ ಕುಡಿಯುವ ಮಟ್ಟಿಗೆ ನಮ್ಮ ಪ್ರೀತಿ ಮುಂದುವರೆಯಿತು.
ನೀನು ನಾನಿಲ್ಲದೇ ಯಾವ ಕೆಲಸವನ್ನೂ ಮಾಡುತ್ತಲಿರಲಿಲ್ಲ. ನೀನು ಸೀರೆ ಖರೀದಿಸಲು ಹೋಗಬೇಕೆಂದರೂ ನಾನೇ ಬೇಕು, ನಿನ್ನ ಫ್ರೆಂಡ್ಸ್ ಮದುವೆಗೆ ಗಿಫ್ಟ್ ಖರೀದಿಸಲು ನಿನ್ನ ಜೊತೆ ನಾನು ಬರಬೇಕು, ನನ್ನನ್ನು ಕೇಳಿ ನನ್ನ ಅಭಿರುಚಿಗೆ ತಕ್ಕಂತಹ ಒಡವೆ ವಸ್ತ್ರಗಳನ್ನು ನೀನು ಖರೀದಿಸುತ್ತಿದ್ದೆ. ಅಷ್ಟರಲ್ಲಿ ನಮ್ಮ ಪರೀಕ್ಷೆಗಳು ಮುಗಿದಿದ್ದವು. ನಾವು ನಮ್ಮ ಊರಿಗೆ ತೆರಳುವ ಸಮಯ ಬಂದಾಗಿತ್ತು.
ನೀನು ನಿಮ್ಮ ಮನೆಯ ಲ್ಯಾಂಡ್ ಲೈನ್ ನಂಬರ್ ಕೊಟ್ಟೆ. ಊರಿಗೆ ಹೋದ ಮರುದಿನವೇ ಫೋನ್ ಮಾಡಿದರೆ ನಿಮ್ಮಪ್ಪ ಪ್ರಶ್ನೆಗಳ ಮಳೆಯನ್ನೇ ಸುರಿಸಿದರು. ಇನ್ನು ಫೋನ್ ಮಾಡಬೇಡ, ಇವತ್ತು ಒಂದು ದಿನಕ್ಕೆ ಮಾತನಾಡು ಎಂದು ಹೇಳಿ ನಿನಗೆ ಕೊಟ್ಟರು. ನೀನು ಭಯದಿಂದಲೇ ಮಾತನಾಡಿದೆ.
ನಾನು ಮುಂದಿನ ಸಲ ನಿನಗೆ ಫೋನ್ ಮಾಡಲು ನನ್ನ ಗೆಳತಿಯ ಸಹಾಯ ಪಡೆದೆ. ಅವಳು ನಿನ್ನ ತಂದೆಯ ಜೊತೆ ಮಾತನಾಡಿ ನಿನ್ನ ಗೆಳೆತಿಯೆಂದು ಹೇಳಿದ ಮೇಲೆ ನಿನಗೆ ನಿಮ್ಮ ತಂದೆ ಫೋನ್ ಕೊಟ್ಟರು ಆಗ ನಾನು ಮಾತನಾಡಿದೆ. ನಮ್ಮ ಪ್ರೀತಿಗೆ ನಿಮ್ಮಪ್ಪನೇ ವಿಲನ್ ಕಣೇ. ನಿನಗೆ ಫೋನ್ ಮಾಡಬೇಕೆಂದಾಗಲೆಲ್ಲಾ ಎಲ್ಲಿಂದ ನನ್ನ ಗೆಳತಿಯನ್ನು ಹುಡುಕುವುದು ಎಂದು ನಾನೇ ಹುಡುಗಿಯ ಧ್ವನಿಯನ್ನು ಮಿಮಿಕ್ರಿ ಮಾಡುವುದನ್ನು ಕಲಿತೆ.
ಹೀಗೆ ಸಾಗುತ್ತಿದ್ದ ನಮ್ಮ ಫೋನಿನ ಲವ್ ಸ್ಟೋರಿಗೆ ಒಂದು ಭಯಾನಕವಾದ ತಿರುವು ಸಿಕ್ಕಿತು; ನನ್ನ ಆರೋಗ್ಯ ಹದಗೆಟ್ಟು ಒಂದು ತಿಂಗಳು ನಿನ್ನನ್ನು ಸಂಪರ್ಕಿಸಲಾಗಲಿಲ್ಲ. ನಂತರ ಸಂಪರ್ಕಿಸಿದರೆ ನೀವು ಕರೆ ಮಾಡುವ ನಂಬರ್ ಚಾಲ್ತಿಯಲಿಲ್ಲ ಎಂದು ಹೇಳುತ್ತಿತ್ತು. ನಾನೇನು ಮಾಡಲಿ ಹುಡುಗಿ, ನನಗಿದ್ದ ಇದೊಂದು ದಾರಿಯೂ ಮುಚ್ಚಿತ್ತು.
ಒಂದು ದಿನ ಮನೆಯೊಳಗೆ ಒಂದು ಕಾಗದ ಬಿದ್ದಿತ್ತು. ಅದನ್ನು ನಿರಾಸಕ್ತಿಯಿಂದಲೇ ಒಡೆದು ಓದಿದರೆ ಅದರಲ್ಲಿದ್ದುದು ನಿನ್ನ ಮುದ್ದು ಮುದ್ದು ಕನ್ನಡ ಅಕ್ಷರಗಳು...
ಸಾರಿ ಡಿಯರ್, ನನ್ನ ಅಂತಸ್ತಿಗೆ ಸರಿಹೊಂದುವ ಹುಡುಗ ಸಿಕ್ಕಿದ್ದಾನೆ ಮುಂದಿನ ತಿಂಗಳು ನನ್ನ ಮದುವೆ. ಮರೆತುಬಿಡು. ಎಂದು ಬರದಿದ್ದೀಯಲ್ಲಾ ಇದು ನ್ಯಾಯವೇ? ನಿನಗೋಸ್ಕರ ನಾನು ಮಾಡಿದ ಸಾಲಗಳೆಷ್ಟು, ಸೇವೆಗಳೆಷ್ಟು, ತ್ಯಾಗಗಳೆಷ್ಟು? ಅವೆಲ್ಲನ್ನೂ ಮರೆತಿದ್ದಿಯಾ? ನಾನು ನಿನಗೆ ಮಾಡಿದ ಸಹಾಯಗಳು ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಿದ್ದರಿಂದ ನನಗೇನು ಅನ್ನಿಸುತ್ತಿಲ್ಲ.
ನಾವು ಪ್ರೀತಿ ಮಾಡುವಾಗ ತೆಗೆಸಿದ ಫೋಟೋಗಳನ್ನು ತೋರಿಸಿ ನಿನ್ನ ಮದುವೆಯನ್ನು ನಿಲ್ಲಿಸಬಹುದು. ಆದರೆ ಆ ರೀತಿ ಮಾಡಲು ನಾನು ನಿನ್ನಷ್ಟು ನಿರ್ದಯಿ ಅಲ್ಲ. ನನ್ನದು ಕಪಟವಿಲ್ಲದ ನಿಷ್ಕಲ್ಮಶವಾದ ಪ್ರೀತಿ. ನೀನು ಅವನ ಜೊತೆಯಾದರೂ ಚೆನ್ನಾಗಿ ಬಾಳು. ನಾನು ದೂರದಿಂದಲೇ ಹಾರೈಸುತ್ತೇನೆ. ನನ್ನ ಕತೆಯಲ್ಲೂ ಪ್ರೀತಿ ಮಧುರ, ತ್ಯಾಗ ಅಮರ ಅನ್ನುವ ಮಾತನ್ನು ಹೇಳುವ ಹಾಗಾಯಿತಲ್ಲಾ ಅನ್ನುವ ನೋವು ಪ್ರತಿ ದಿನವೂ ಕಾಡುತ್ತಿದೆ.
ಗೆಳತಿ, ಪ್ರೀತಿಸಿ ನಡು ನೀರಿನಲ್ಲಿ ಕೈ ಬಿಟ್ಟೆಯಲ್ಲಾ ಇದು ನ್ಯಾಯನಾ?
ಇಂತಿ