ನಾನೇನು ಬೊಗಳಲಿ
ಇರುಳೆಲ್ಲಾ ನಿದ್ದೆಗೆಟ್ಟು ಬೀದಿಕಾಯ್ದು ಜೀವನ ಸವೆಸುತ್ತಿದ್ದೆ. ದಾರಿಹೋಕನು ಮುದುಕನೋ, ಹುಡುಗನೋ ಏನೊಂದನ್ನೂ ಅರಿಯದೆ, ನಾನೊಲ್ಲದ ಮನಸ್ಸಿಂದ ಅವನಿಗೆ ಕಣ್ಣು ಮಿಟುಕಿಸುತ್ತಾ, ಸೊಂಟ ಬಳುಕಿಸುತ್ತಾ, ನನ್ನ ಪುಟ್ಟ ಬಾಲವನ್ನು ಇತ್ತಲೂ ಅತ್ತಲೂ ಬಿಂಕ ವೈಯ್ಯಾರದಿಂದ ಅಲ್ಲಾಡಿಸಿ, ಉದ್ದನೆಯ ನಾಲಿಗೆಯನ್ನು ಹೊರಚಾಚಿ ಮೈಬಡಿದು ಕಿವಿನಿಮಿರಿಸಿ ಅವನ ಹಿಂದೆಯೇ ದಿಕ್ಕಿಲ್ಲದೆ ಹೋದರೂ, ಒಂದು ದೊಡ್ಡನೆಯ ಕಲ್ಲಿಂದಲೋ, ದಪ್ಪನೆಯ ದೊಣ್ಣೆಯಿಂದಲೋ, ಬಿಂದಿಗೆ ತಂಬಿಗೆಗಳಿಂದಲೋ ಪೆಟ್ಟು ತಿಂದು ಸುಂಕವಿಲ್ಲವೆಂಬಂತೆ ಮರುಗಿ ಮರಳಿ ಮತ್ತೊಬ್ಬನ ಹಿಂದೆ ಓಡುವ ನನ್ನ ನಾಯಿ ಜನ್ಮಕ್ಕೆ ಯಾವುದರ ಸಾಟಿ ??
ಸಾವಿರಾರು ವರ್ಷಗಳ ಹಿಂದೆ, ನನ್ನಜ್ಜಂದಿರು ಯಾರೋ ದೇವರನ್ನೊಲಿಸಲು ತಪಸ್ಸು ಮಾಡಿದ್ದರಂತೆ. ಮಾನವರ ತಪಸ್ಸುಗಳಿಗೆ ವರಕೊಟ್ಟು ಸಿಕ್ಕಿಹಾಕಿಕೊಳ್ಳುವುದೇಕೆಂದು ಹಿಮಾಲಯದ ಮಾನಸ ಸರೋವರದಲ್ಲಡುಗಿ ಕುಳಿತಿದ್ದ ಶಿವನ ಧ್ಯಾನವನ್ನೇ ಮೀರಿಸಿ, ನನ್ನಜ್ಜನ ತಪೋಶಕ್ತಿ ಅವನನ್ನು ಓಡಿಸಿಕೊಂಡು ಈ ಬೀದಿಗೆ ಎಳತಂದು ವರವನ್ನು ಕೇಳಿ ಪೀಡಿಸಿತ್ತಂತೆ. ಮಾನವರಂತೆಯೇ ಪ್ರಾಣಿಗಳೂ ತಪಸ್ಸುಮಾಡಿ ಹಿಂಸಿಸುವಂತಾಗಿ ತಾನು ಹಿಮಾಲಯದಿಂದ ತಲೆಮರೆಸಿಕೊಂಡು ಹೋಗಬೇಕೆಂದು ಆಗಲೇ ನಿಶ್ಚಯಿಸಿದ್ದ ಪರಶಿವನು ವರಕೊಟ್ಟು ಓಡಿದ್ದನಂತೆ. ಅವನು ಅಂದು ಕೊಟ್ಟ ವರದಿಂದಲೇ ಇಂದು ನಾವು ಎಲ್ಲಿಹೋದರೂ, ನಮ್ಮನ್ನೇ ನಾವು ಕಾಯದದಿದ್ದರೂ ಅವರ ಮನೆಕಾಯ್ವರೆಂದು ತಿಳಿದು ಮಾನವರು ನಮಗೆ ಭಕ್ಶ್ಯಭೋಜನ ಬಡಿಸುವರು. ಇಂದಿಗೂ ನಮ್ಮ ಬಾಲಕ್ಕೂ ಬಿಂಕಕ್ಕೂ ರಂಬೆ ಮೇನಕೆಯರೇ ನಾಚುತ್ತಾರೆ. ಅದೆಷ್ಟೋ ದಿನಗಟ್ಟಲೆ ಅನ್ನ ನೀರುಗಳಿಲ್ಲದೆಯೂ ಬದುಕುವ ಚಿರಂಜೀವಿಗಳು. ದೇವಕೊಟ್ಟ ದೇಹಕ್ಕೆ ಅರಿವೆಯೇಕೆ?? ನಾವಾರೂ ಎಂದೂ ಉಡುಗೆಯುಟ್ಟವರಲ್ಲ. ನಿರಂತರ ದಿಗಂಬರಿಗಳು. ದೇವರುಕೊಟ್ಟ ವರದಿಂದ ಇಂದಿಗೂ ನಮ್ಮ ಸೂಕ್ಷ್ಮವಾದ ಇಂದ್ರಿಯಗಳಿಗೂ ಬಿನ್ನಾಣಕ್ಕೂ ಕಾಲ ಕಾಲಕೆ ಸುಂಕವಿಲ್ಲದೆ ಸಿಕ್ಕುವ ಊಟಕ್ಕೂ, ಕೊಲೆ ಅಪರಾಧಗಳಿಲ್ಲದೆ ನಮ್ಮ ನಮ್ಮ ಬೀದಿಗೆ ನಾವೇ ರಾಜಾದಿರಾಜರಾಗಿ ಮೆರೆಯುವ ನಮ್ಮ ಈ ನಾಯಿ ಜನ್ಮಕ್ಕೆ ಯಾರು ಸಾಟಿ.
ಅದೇಕೋ ತಿಳಿದಿಲ್ಲ - ಹಿಂದಿನಿಂದ ನಮಗೂ ಮನುಷ್ಯಪ್ರಾಣಿಗಳಿಗೂ ಅತ್ಯಂತ ನಿಕಟವಾದ ಸಂಬಂಧ. ನಂಬಿಕೆ, ನಿಯ್ಯತ್ತು ಎಂಬುದು ನಮ್ಮಿಂದಲೇ ಎಂಬಂತೆ ಆದರದಿಂದ ಕಾಣುತ್ತಾರೆ. ಅಯ್ಯೋ ಪಾಪ!! ನಮ್ಮನ್ನು ಮುದ್ದಿಸುವಷ್ಟು ಅವರ ಮಕ್ಕಳನ್ನೇ ಮುದ್ದಿಸುತ್ತಾರೋ ಇಲ್ಲವೋ. ನಾವು ಹುಟ್ಟಿದಾಗ ಅಯ್ಯೊ ಇಂಥ ಕುರೂಪ ಮರಿಗಳ ಹೆತ್ತೆನಲ್ಲಾ!! ಎಂದು ಮನನೊಂದು ನಮ್ಮನ್ನು ಅನಾಥರನ್ನಾಗಿ ಮಾಡಿ ಓಡುವಳು ನಮ್ಮ ತಾಯಿದೇವತೆ. ಆದರೆ ನಾವು ಅನಾಥರಾಗಲು ಆ ಶಿವ ಬಿಡಬೇಕಲ್ಲ! ನಾವು ಯಾವುದೋ ಬೀದಿಯ, ಸಂದಿಯಲ್ಲಿದ್ದರೂ ಸರಿ, ಮೋರಿಯಲ್ಲಿದ್ದರೂ ಸರಿ ನಾವು ಮಾಡುವ ಕರ್ಣ ಕಠೋರ ಕರ್ಕಶ ಧ್ವನಿಗೆ ನಮ್ಮಪ್ಪನೇ ಮೂರು ಮೈಲು ದೂರವೋಡಿದರೂ, ಇದನ್ನೇ ಮಧುರ ಗಾನವೆಂದು ತಿಳಿದು ಮುತ್ತಿಕ್ಕಿ, ಮುದ್ದಿಸಿ, ಹಾಲಿಕ್ಕಿ, ಅನುಕ್ಷಣವೂ ವಿಚಾರಿಸುವ ಆತಿಥ್ಯ ಪರಶಿವನಿಗೂ ಇಲ್ಲವಷ್ಟೆ. ನಾವು ಓಡಾಡಿದರೆ ಕಾಲು ಸವೆದುಹೋಗಬಹುದೆಂದು ಒಂದೇ ಜಾಗದಲ್ಲೆ, ಉದ್ದನೆಯ ಸರವನ್ನು ಹಾಕಿ ಕೂರಿಸಿ, ಕುಳಿತಲ್ಲೇ ಎಲ್ಲವನ್ನೂ ಕೊಟ್ಟು, ಸರ್ವಕಾರ್ಯಗಳಿಂದ ವಿಮುಕ್ತಿಗೊಳಿಸುವ ಮನುಷ್ಯರ ಮತ್ತು ನಮ್ಮ ಸಂಬಂಧ ಚಿರಶಾಶ್ವಥ.
ಈ ಆತಿಥ್ಯ ಔಪಚಾರ್ಯಗಳೆಲ್ಲಾ - ಕೆಲಸ ಕಾರ್ಯವಿಲ್ಲದೆ, ಒಡೆಯ ಕೂಗಿದ ಕಂಡು ಬೊಗಳುವ, ನಿದ್ರಾಪ್ರಿಯ ಮನೆಯ ನಾಯಿಗಳಿಗಷ್ಟೆ. ನನ್ನಂಥ ಬೀದಿನಾಯಿಗಳದ್ದು ಬೇರೆಯದೇ ವೈಭೋಗ. ನಮ್ಮ ನಮ್ಮ ಬೀದಿಗಳಿಗೆ ನಾವೇ ಸರ್ವಾಧಿಕಾರಿಗಳು. ಪ್ರತಿಯೊಂದು ಬೀದಿಗೂ, ರಾಜರೂ, ರಾಣಿಯರೂ, ನರ್ತಕಿಯರೂ, ಸೈನಿಕರೂ ಇರುತ್ತಾರೆ. ನಮ್ಮ ರಾಜ್ಯಭಾರವೇನಿದ್ದರೂ ಇರುಳಿನಲ್ಲೇ. ಹಗಲು ಮನುಷ್ಯರದ್ದು. ಇರುಳಿನಲ್ಲಿ ನಾವು ಯಾವ ಮನುಷ್ಯರನ್ನು ನಡೆದಾಡಲು ಬಿಡುವುದಿಲ್ಲ. ಬೊಗಳಿ ಓಡಿಸುತ್ತೇವೆ. ಕೆಲ ಮನುಷ್ಯರು, ನಮ್ಮ ಬೊಗಳಿಕೆಯನ್ನು ನಿರ್ಲಕ್ಷಿಸಿ ಬರೀ ನಡೆಯುವುಡೇ, ಓಡಿಯೇ ಬಿಡುತ್ತೇವೆಂದು ಸವಾಲೆಸೆಯುತ್ತಾರೆ. ನಾವೇನು ಕಮ್ಮಿಯೇ? ಅಂಥವರ ಜಡುಹಿಡಿಯುತ್ತೇವೆ. ಪಕ್ಕದ ಬೀದಿಯ ಗೆಳೆಯರಿಗೆ ಬೊಗಳಿ ಎಚ್ಚರಿಸುತ್ತೇವೆ. ಅಂತೂ ಇಂತೂ ಬಡಪಾಯಿ ಕಚ್ಚಿಸಿಕೊಂಡೇ ಹೋಗುತ್ತಾನೆ. ಪಾಪ, ನಾವೇನೋ ಕಳ್ಳನನ್ನೇ ಓಡಿಸಿಬಿಟ್ಟೆವೆಂದು ಅರ್ಥಯಿಸಿ ಹೊಗಳುವ ಈ ಮಾನವರ ಮೂಢತ್ವದ ಪರಮಾವಧಿಗೆ ನಾನೇನೆಂದು ಬೊಗಳಿಲಿ. ನಮ್ಮ ಬೀದಿಯ ಗೆಳೆಯರೆಲ್ಲಾ ಕೂಡಿ, ಪ್ರತಿರಾತ್ರಿ- ವಿಷಯ, ವಿಮರ್ಷೆಗಳಲ್ಲಿ ತೊಡಗಿಸಿಕೊಳ್ಳುತ್ತೇವೆ. ಕೆಲವು ವೇಳೆ ಮನಸ್ತಾಪ, ಜಗಳಗಳೂ ಆಗಬಹುದಾದರೂ ಮನುಷ್ಯರಂತೆ ಮತ್ತೊಬ್ಬನನ್ನು ಕೊಲ್ಲುವುದು ನಮ್ಮ ಜಾಯಮಾನಕ್ಕಿಲ್ಲ. ಒಮ್ಮೊಮ್ಮೆ ಸಂಗೀತ ಕಛೇರಿಗಳೂ, ಕವಿಗೋಷ್ಟಿಗಳೂ ನಡೆಯುತ್ತವೆ. ಆಗಾಗ ಮಧ್ಯರಾತ್ರಿಯ ನರ್ತನ ಕಛೇರಿಗಳೂ ನಡೆಯುತ್ತವೆ.
ಆದರಕ್ಕೆ ಆದರದಿಂದ, ವಿಶ್ವಾಸಕ್ಕೆ ವಿಶ್ವಾಸದಿಂದ, ಮೋಸಕ್ಕೆ ಮೋಸದಿಂದ ಹೋರಾಡಿ ನಮ್ಮ ಪುಟ್ಟ ಜೀವಿತಾವಧಿಯಲ್ಲಿ ನಕ್ಕು, ನಲಿದು, ಕುಪ್ಪಳಿಸಿ, ನಮಗೂ, ನಮ್ಮ ನಿಕಟವರ್ತಿಗಳಾದ ಮನುಷ್ಯಪ್ರಾಣಿಗಳಿಗೂ ಸಂತಸವಿತ್ತು ಮೆರೆವ ನಮ್ಮ ವೈಭೋಗವನ್ನು ನಾನೇನೆಂದು ಬೊಗಳಲಿ....
Comments
ಉ: ನಾನೇನು ಬೊಗಳಲಿ