ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 6

ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 6

ಕಾಲಕ್ರಮೇಣ ನಾವು ಹೆಚ್ಚೆಚ್ಚು ಮಾತಾಡಿಕೊಳ್ಳಲು ಶುರು ಮಾಡಿದೆವು. ದಿನಕ್ಕೆ ಮೂರು ನಾಲ್ಕು ಬಾರಿ ಮಾತಾಡಿಕೊಳ್ಳುವವರೆಗೂ ಬಂದಿತ್ತು. ಅದಲ್ಲದೆ ಸಂದೇಶಗಳೂ ನಿರಂತರವಾಗಿ ಹರಿದಾಡುತ್ತಿದ್ದವು. ಅದರಲ್ಲಿ ೯೦ ಪ್ರತಿಶತ Forwarded message ಗಳು ಆಗಿದ್ದರೆ ಉಳಿದವು. Hi Good Morning , Good Afternoon , Good Evening , Good night ಆಗಿರುತ್ತಿದ್ದವು. ಒಮ್ಮೊಮ್ಮೆಯಂತೂ ನನಗೆ ಮೈ ಎಲ್ಲಾ ಉರಿಯುತ್ತಿತ್ತು. ಈ ಹುಡುಗಿ ಬೇಕಂತಲೇ ಹೀಗೆ ಆಟ ಆಡಿಸುತ್ತಾಳ ಎನಿಸುತ್ತಿತ್ತು. ಮತ್ತೊಮ್ಮೆ ಇನ್ನೇನಾದರೂ ಮಾತಾಡಿದರೆ ಅದಕ್ಕೂ ಎಲ್ಲಿ ಕಲ್ಲು ಬೀಳುತ್ತದೋ ಎಂದು ನಾನೂ ಸಹ ಅವಳ ಎಲ್ಲ ಸಂದೆಶಗಳಿಗೂ same to u ಎಂದು ಕಳುಹಿಸುತ್ತಿದ್ದೆ. ಕಾಲ ಕಳೆದಂತೆ ನಾವು ಸಂಭೋಧಿಸುವುದು ರೀ, ನೀವುತಾವು ಇಂದ ಲೋ, ಲೇ, ಹೋಗೋಹೋಗೆ ಗೆ ಬಂದು ನಿಂತಿತು.

ಹೀಗೆಯೇ ಮೂರು ತಿಂಗಳು ಕಳೆದವು. ಅಂದು ನಾನು ಆಫೀಸ್ ಮುಗಿಸಿಕೊಂಡು ಬಂದ ಮೇಲೆ ಊಟ ಮಾಡುತ್ತಿದ್ದಾಗ ಅಮ್ಮ ಇದ್ದಕ್ಕಿದ್ದಂತೆ ಯಾರೋ  ಹುಡುಗಿ ಎಂದರು. ನಾನು ತಕ್ಷಣ ಪೂಜಾ ಕಡೆ ನೋಡಿದೆ ಅವಳು ನನಗೇನು ಗೊತ್ತಿಲ್ಲ ಎಂದು ತಲೆ ಆಡಿಸಿದಳು. ನಾನು ಯಾರಮ್ಮ ಯಾವ ಹುಡುಗಿ ಎಂದು ಏನೂ ಗೊತ್ತಿಲ್ಲದವನಂತೆ ಕೇಳಿದೆ. ಅದೇನಪ್ಪ ಹಗಲೂ ರಾತ್ರಿ ಮೆಸೇಜ್ ಗಳು ಫೋನ್ ಗಳು ಮಾಡ್ತಾ ಇರ್ತ್ಯಲ್ಲ ಅದೇ ಹುಡುಗಿ ಎಂದರು. ಅದೇ ಧರ್ಮಸ್ಥಳದ ಹುಡುಗಿ ತಾನೇ ಎಂದರು. ನನಗೆ ಒಂದು ಕ್ಷಣ ಶಾಕ್ ಆದರೂ ಅದನ್ನು ತೋರಗೊಡದೆ ಅಯ್ಯೋ ಅಮ್ಮ ನೀನು ಅಂದುಕೊಳ್ಳುವ ಹಾಗೆ ಏನೂ ಇಲ್ಲ ನಾವಿಬ್ಬರೂ ಸ್ನೇಹಿತರು ಅಷ್ಟೇ ಎಂದೆ. ಅದಕ್ಕೆ ಅಮ್ಮಕೋಪಗೊಂಡು ನೋಡು ಭಗತ್ ನಮ್ಮ ಮರ್ಯಾದೆ ಕಳಿಯಬೇಡ ಲವ್ವು ಗಿವ್ವು ಎಂದುಕೊಂಡು ಕುಟುಂಬದ ಮರ್ಯಾದೆ ತೆಗೆಯಬೇಡ. ಅದೂ ಅಲ್ಲದೆ ನಿಮ್ಮಪ್ಪ ನಿನಗೆ ಮದುವೆ ಮಾಡಬೇಕು ಎಂದಿದ್ದಾರೆ  ಸಮಯದಲ್ಲಿ ಸುಮ್ಮನೆ ಎಡವಟ್ಟು ಮಾಡಿಕೊಬೇಡ. ಅದೂ ಅಲ್ಲದೆ ಅವರದು ಯಾವ ಜಾತಿಯೋ ಯಾವ ಕುಲವೋ ಗೊತ್ತಿಲ್ಲ. ನೋಡು ನೀನೇನಾದರೂ ನನ್ನ ಮಾತು ಮೀರಿದರೆ ಒಂದು ಕ್ಷಣ ಈ ಮನೆಯಲ್ಲಿ ಇರಬಾರದು. ನೀನುಂಟು ಆ ಹುಡುಗಿ ಉಂಟು ಏನಾದರೂ ಮಾಡಿಕೊ ಎಂದು ಎದ್ದು ಹೋದರು. ಅಡಿಗೆ ಮನೆಯಿಂದ ಪಾತ್ರೆಗಳ ಸದ್ದು ಜೋರಾಗಿ ಕೇಳುತ್ತಿತ್ತು. ನನ್ನ ಮೇಲಿನ ಕೋಪವನ್ನು ಪಾತ್ರೆಗಳ ಮೇಲೆ ತೋರಿಸುತ್ತಿದ್ದರು.

ನಾನು ಒಳಗೆ ಹೋಗಿ ಅಮ್ಮ ನೀನೇನು ಯೋಚಿಸಬೇಡ ನಾನು ಅಪ್ಪಿ ತಪ್ಪಿ ನನ್ನ ಜಾತಿಯವರನ್ನು ಬಿಟ್ಟು ಬೇರೆ ಜಾತಿಯವರನ್ನು ಮದುವೆಯಾಗುವುದಿಲ್ಲ.(ಏಕೆಂದರೆ ನಾನು ಮುಂಚೆಯೇ ಪಾವನಿಯ ಜಾತಿಯ ಬಗ್ಗೆ ತಿಳಿದುಕೊಂಡಿದ್ದೆಇಬ್ಬರದೂ ಒಂದೇ ಜಾತಿ ಆಗಿತ್ತು). ನನ್ನ ಮೇಲೆ ನಂಬಿಕೆ ಇಡಮ್ಮ ಎಂದು ಆಚೆ ಬಂದು ರೂಮಿಗೆ ಹೋದೆ. ಮೊಬೈಲ್ ತೆರೆದು ನೋಡಿದರೆ ಪಾವನಿ ಇಂದ ಒಂದು ಮಿಸ್ಡ್ ಕಾಲ್ ಹಾಗೂ ಎರಡು ಮೆಸೇಜ್ ಬಂದಿತ್ತು. ಲೋ ಎಲ್ಲೋ ಹೋಗಿದ್ಯಅರ್ಜೆಂಟಾಗಿ ಮಾತಾಡಬೇಕು ಫೋನ್ ಮಾಡು ಎಂದು ಮೆಸೇಜ್ ಕಳಿಸಿದ್ದಳು. ನಾನು ಅದಕ್ಕೆ ರಿಪ್ಲೈ ಕೊಟ್ಟೆಪಾವಿ ಈಗ ಮಾತಾಡಲು ಆಗಲ್ಲ ನಾನು ಬೆಳಿಗ್ಗೆ ಕಾಲ್ ಮಾಡ್ತೀನಿ ಪ್ಲೀಸ್ ಕಣೋ ಅರ್ಥ ಮಾಡ್ಕೋ ಎಂದು ಕಳಿಸಿದೆ. ಅದಕ್ಕೆ ಅವಳು ಹ್ಮ್ಮ್ ಆಯ್ತು ಬೆಳಿಗ್ಗೆ ತಪ್ಪದೆ ಕಾಲ್ ಮಾಡು ಎಂದು ಕಳಿಸಿದಳು.

ಧರ್ಮಸ್ಥಳದಿಂದ ಬಂದ ಮೇಲೆ ಬರೀ ಫೋನ್ ಹಾಗೂ ಮೆಸೇಜ್ ನಲ್ಲೆ ನಮ್ಮ ಮಾತು ಕಥೆ ನಡೆದಿತ್ತು ಹೊರತೂ ಒಂದು ದಿನವೂ ಮುಖಾ ಮುಖಿ ಭೇಟಿ ಆಗಿರಲಿಲ್ಲ. ಏನು ವಿಷಯ ಹೇಳಲು ಅರ್ಜೆಂಟಾಗಿ ಮಾತಾಡಬೇಕು ಎಂದಳು ಎಂದು ತಲೆ ಕೆಡಿಸಿಕೊಳ್ಳುತ್ತಾ ಮಲಗಿದೆ. ಸುಮಾರು ಹೊತ್ತು ನಿದ್ದೆ ಬರಲಿಲ್ಲ ಆಮೇಲೆ ನಿದ್ದೆ ಹತ್ತಿತು. ಬೆಳಿಗ್ಗೆ ಎಂದಿನಂತೆ ಆಫೀಸಿಗೆ ಹೊರಡುತ್ತೇನೆ ಎಂದು ಮನೆ ಇಂದ ಆಚೆ ಬಂದು ಸ್ವಲ್ಪ ದೂರ ಬಂದ ಮೇಲೆ ಅವಳಿಗೆ ಕರೆ ಮಾಡಿದೆ. ಹೇಳು ಪಾವಿ ಏನು ಅರ್ಜೆಂಟಾಗಿ ಮಾತಾಡಬೇಕು ಅಂದ್ಯಲ್ಲ ಅಂದೆ.ಅದಕ್ಕವಳು ಲೋ ಇವತ್ತು ಮಧ್ಯಾಹ್ನ ನನ್ನ ಆಫೀಸ್ ಹತ್ರ ಬಂದು ಪಿಕಪ್ ಮಾಡ್ತ್ಯ ನಿನ್ನ ಹತ್ತಿರ ಮಾತಾಡಬೇಕು ಎಂದಳು. ನನಗೆ ಒಂದು ಕಡೆ ಅವಳನ್ನು ಮುಖತಃ ಭೇಟಿ ಮಾಡುತ್ತೇನೆ ಎಂದು ಸಂತೋಷ ಆದರೆ ಇನ್ನೊಂದು ಕಡೆ ಅರ್ಜೆಂಟ್ ಆದ ವಿಷಯ ಏನಪ್ಪಾ ಎಂದುಕೊಂಡು ಆಯ್ತು ಪಾವಿ ಬರ್ತೀನಿ ಆದರೆ ಏನು ವಿಷಯ ಅಂತ ಹೇಳು ಅಂದಿದ್ದಕ್ಕೆ ನೀನು ಇಲ್ಲಿ ಬಾ ಹೇಳ್ತೀನಿ ಎಂದು ಕಟ್ ಮಾಡಿದಳು.

ನನ್ನ ತಲೆಯಲ್ಲಿ ಯೋಚನೆಯ ಮಷಿನ್ ಚಾಲೂ ಆಯಿತುಎನಿರಬಹುದಪ್ಪ ಅರ್ಜೆಂಟ್ ಆದ ವಿಷಯ? ಅವಳೇ ನನಗೆ ಪ್ರಪೋಸ್ ಮಾಡುತ್ತಾಳ? ಅಥವಾ ನಮ್ಮ ಮನೆಯಲ್ಲಿ ಗೊತ್ತಾದ ಹಾಗೆ ಅವರ ಮನೆಯಲ್ಲೂ ಏನಾದರೂ ಜಗಳ ಆಗಿದೆಯ? ಅಥವಾ ಅವಳಿಗೆ ಮದುವೆ ಏನಾದರೂ.....

Rating
No votes yet