ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 7

ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 7

ನನ್ನ ಆಫೀಸ್ ಎಲೆಕ್ಟ್ರೋನಿಕ್ ಸಿಟಿ ಯಲ್ಲಿ ಇದ್ದರೆ ಅವಳದ್ದು ಹೆಬ್ಬಾಳದಲ್ಲಿತ್ತು. ಅವಳು ಮುಂಚೆಯೇ ಹೇಳಿದ್ದರಿಂದ ಕ್ಯಾಬ್ ನಲ್ಲಿ ಬರದೆ ಬೈಕ್ ತಗೊಂಡು ಬಂದಿದ್ದೆ. ಮನೆಯಿಂದ ಬರಬೇಕಾದರೆ ಅಮ್ಮ, ಏನೋ ಬೈಕ್ ತಗೊಂಡು ಹೋಗ್ತಾ ಇದ್ದೀಯ ಕ್ಯಾಬ್ ಬರಲ್ವ ಎಂದಿದ್ದಕ್ಕೆ ಇಲ್ಲಮ್ಮ ಇವತ್ತು ಕ್ಯಾಬ್ ಲೇಟ್ ಅಗತ್ತಂತೆ ಅದಕ್ಕೆ ಬೈಕ್ ತಗೊಂಡು ಹೋಗ್ತಾ ಇದ್ದೀನಿ ಎಂದು ಹೇಳಿದ್ದೆ. ಆಫೀಸಿಗೆ ಬಂದು ಮ್ಯಾನೇಜರ್ ಬಳಿ ಹೋಗಿ ದುಶ್ಯಂತ್ ಇಂದು ಅರ್ಧ ದಿನ ಲೀವ್ ಬೇಕಿತ್ತು ಸ್ವಲ್ಪ ಕೆಲಸ ಇದೆ ಎಂದಿದ್ದಕ್ಕೆ ಆಯ್ತು ಹೋಗಿ ಬನ್ನಿ ಎಂದ. ಇದೇನಪ್ಪ ಯಾವತ್ತೂ ಕೇಳಿದ ತಕ್ಷಣ ಒಪ್ಪದ ಮನುಷ್ಯ ಇವತ್ತು ಏನೂ ಮಾತಾಡದೆ ಒಪ್ಪಿಬಿಟ್ಟ ಎಂದುಕೊಂಡು ಸಿಸ್ಟಂ ಬಳಿ ಬಂದು ಚಕಚಕನೆ ಕೆಲಸ ಮಾಡುತ್ತಿದ್ದೆ.

ಅಷ್ಟರಲ್ಲಿ ಪಾವನಿ ಫೋನ್ ಮಾಡಿದಳು. ಮಧ್ಯಾಹ್ನ ಬರ್ತಾ ಇದ್ಯಾ ತಾನೆ ಎಂದಳು. ಹೌದು ಬರ್ತಾ ಇದ್ದೀನಿ. ನಿಮ್ಮ ಕಂಪನಿ ಬಳಿ ಬಂದು ಫೋನ್ ಮಾಡುತ್ತೀನಿ ಆಚೆ ಬಾ. ಅದಿರಲಿ ವಿಷಯ ಏನೂ ಅಂತ ಹೇಳು ಪಾವಿ ನನಗೆ ರಾತ್ರಿ ಇಂದ ತಲೆ ಕೆಟ್ಟೋಗಿದೆ ಎಂದೇ. ಅದಕ್ಕವಳು ಅಯ್ಯೋ ತಲೆ ಕೆಡಿಸಿಕೊಳ್ಳುವಂಥದ್ದು ಏನೂ ಇಲ್ಲ ಇಲ್ಲಿ ಬಾ ಹೇಳ್ತೀನಿ ಬೈ ಎಂದು ಇಟ್ಟು ಬಿಟ್ಟಳು. ಒಂದು ಗಂಟೆಯ ಹೊತ್ತಿಗೆ ಕೆಲಸ ಮುಗಿಸಿ ಆಫೀಸ್ ನಿಂದ ಹೊರಟೆ. ಅಲ್ಲಿಂದ ಟ್ರಾಫಿಕ್ ನಲ್ಲಿ ಗಾಡಿ ಓಡಿಸಿಕೊಂಡು ಹೆಬ್ಬಾಳಕ್ಕೆ ಬರುವಷ್ಟರಲ್ಲಿ ಹುಚ್ಚು ಹಿಡಿದಂತಾಗಿತ್ತು. ಗಾಡಿ ನಿಲ್ಲಿಸಿ ಕೆಳಗಿಳಿದು ಒಮ್ಮೆ ಮೈ ಮುರಿದು ಪಾವನಿಗೆ ಕರೆ ಮಾಡಿ ಆಚೆ ಬಾ ಎಂದೆ. ಅಲ್ಲೇ ರಸ್ತೆಯ ಬದಿಯಲ್ಲಿ ನಿಂತು ಹೋಗಿ ಬರುವ ವಾಹನಗಳನ್ನು ನೋಡುತ್ತಾ ನಿಂತಿದ್ದೆ. ಹಿಂದಿನಿಂದ ಯಾರೋ ತಟ್ಟಿದಂತಾಯಿತು.

ತಿರುಗಿ ನೋಡಿದರೆ ಪಾವನಿ ನಿಂತಿದ್ದಾಳೆ. ಕಡು ನೀಲಿ ಬಣ್ಣದ ಸೀರೆ ಅದಕ್ಕೆ ಹೊಂದುವಂತೆ ನೀಲಿ ಮತ್ತು ಬಿಳಿ ಬಣ್ಣದ ಮುತ್ತುಗಳನ್ನು ಪೋಣಿಸಿದ್ದ ಸರವನ್ನು ಹಾಕಿದ್ದಳು. ಕೈಯಲ್ಲೂ ಅದೇ ಬಣ್ಣದ ಬಳೆಗಳು ತಲೆ ತುಂಬಾ ಹೂವು ಅಬ್ಬಾ ಅಪ್ಸರೆಯೇ ನಿಂತಿದ್ದಾಳೆನೋ ಇಲ್ಲ ಅಪ್ಸರೆಯೂ ನಾಚುವಂಥಹ ಸೌಂದರ್ಯ ಅವಳದ್ದು. ಧರ್ಮಸ್ಥಳದಲ್ಲಿ ನೋಡಿದ್ದಕ್ಕೂ ಈಗ ನೋಡುತ್ತಿರುವುದಕ್ಕೂ ಬಹಳ ವ್ಯತ್ಯಾಸ ಇತ್ತು. ಈಗ ಇನ್ನಷ್ಟು ಸುಂದರವಾಗಿದ್ದಳು. ಅವಳನ್ನೇ ನೋಡುತ್ತಾ ನಿಂತ ನನ್ನನ್ನು ಅವಳೇ ಎಚ್ಚರಿಸಿದಳು ಏನೋ ಹಾಗೆ ನೋಡ್ತಾ ಇದ್ದೀಯ? ಚೆನ್ನಾಗಿಲ್ವಾ ಎಂದಳು. ನಾನು ಮತ್ತೆ ವಾಸ್ತವಕ್ಕೆ ಬಂದು ಚೆನ್ನಾಗಿಲ್ವಾ ಯಾರು ಹಾಗಂದಿದ್ದು ಸೂಪರ್ ಆಗಿದ್ಯ. ನನ್ನ ದೃಷ್ಟಿ ನೆ ಆಗತ್ತೆ ನಿಂಗೆ. ಏನು ಸ್ಪೆಷಲ್ ಇವತ್ತು, ಬರ್ತ್ ಡೇ ನ ಎಂದೆ. ಅದಕ್ಕವಳು ಇಲ್ಲ ಕಣೋ ಇವತ್ತು ಆಫೀಸಲ್ಲಿ ಎಥ್ನಿಕ್ ಡೇ ಅದಕ್ಕೆ ಎಂದು ನಕ್ಕಳು. ಸರಿ ಈಗಲಾದರೂ ಹೇಳುತ್ತೀಯ ಅದೇನು ಅರ್ಜೆಂಟ್ ವಿಷಯ ಅಂತ ಎಂದೆ. ಸರಿ ಮೊದಲು ನಡಿ ಇಲ್ಲಿಂದ ಹೋಗೋಣ ಎಂದು ನನ್ನ ಗಾಡಿ ಹತ್ತಿದಳು.

ಅವಳು ನನ್ನ ಗಾಡಿ ಹತ್ತಿ ನನ್ನ ಭುಜದ ಮೇಲೆ ಕೈ ಇಡುತ್ತಿದ್ದ ಹಾಗೆ ನನ್ನ ದೇಹ ಗಾಳಿಯಲ್ಲಿ ತೇಲುತ್ತಿರುವಂತೆ ಭಾಸವಾಯಿತು. ಆ ಸ್ಪರ್ಶದಲ್ಲಿ ಅದೊಂಥರ ಮ್ಯಾಜಿಕ್ ಇತ್ತು. ಅವಳು ಹಾಕಿದ್ದ ಸುಗಂಧ ದ್ರವ್ಯದ ವಾಸನೆ ಮೂಗಿಗೆ ಬಡಿದು ಮತ್ತಷ್ಟು ತೇಲುವಂತಾಯಿತು. ಅವಳು, ಯಾಕೋ ಏನು ಯೋಚನೆ ಮಾಡ್ತಾ ಇದ್ದೀಯ ನಡೀ ಹೊರಡೋಣ. ಇಲ್ಲೇ ರಸ್ತೆ ತುದಿಯಲ್ಲಿ ಕಾಫಿ ಡೇ ಇದೆ ಅಲ್ಲಿಗೆ ಹೋಗೋಣ ಎಂದಳು. ಕಾಫಿ ಡೇ ನಲ್ಲಿ ಮಧ್ಯಾಹ್ನದ ಹೊತ್ತಾದರಿಂದ ಯಾರೋ ಒಂದಿಬ್ಬರು ಕಾಲೇಜ್ ಹುಡುಗಿಯರು ಬಿಟ್ಟರೆ ಯಾರೂ ಇರಲಿಲ್ಲ. ಮೊಟ್ಟ ಮೊದಲ ಬಾರಿಗೆ ಒಂದು ಹುಡುಗಿಯ ಜೊತೆ ಅದೂ ನಾನು ಮೆಚ್ಚಿದ ಹುಡುಗಿಯ ಜೊತೆ ಬೈಕಿನಲ್ಲಿ ಬಂದು ಕಾಫಿ ಡೇ ನಲ್ಲಿ ಕುಳಿತಿರುವುದು, ಇದು ಕನಸೋ ನನಸೋ ಒಂದೂ ಗೊತ್ತಾಗುತ್ತಿಲ್ಲ ನನಗೆ. ಏನೋ ಆವಾಗಿನಿಂದ ಏನು ಯೋಚನೆ ಮಾಡ್ತಾ ಇದ್ದೀಯ, ಆಫೀಸಲ್ಲಿ ಕೆಲಸ ಇತ್ತು ಅನಿಸತ್ತೆ ನಿನಗೆ. ನಾನು ಡಿಸ್ಟರ್ಬ್ ಮಾಡಿದ್ನ? ಸಾರೀ ಕಣೋ ಎಂದಳು. ನಾನು ಮನಸಿನಲ್ಲಿ (ಮೂರು ತಿಂಗಳ ಹಿಂದೆಯೇ ಅಂದರೆ ನಿನ್ನನ್ನು ನೋಡಿದ ದಿನವೇ ಡಿಸ್ಟರ್ಬ್ ಆಗಿಬಿಟ್ಟೆ ಈಗ ಹೊಸದಾಗಿ ಆಗುವುದಕ್ಕೆ ಏನಿದೆ ಎಂದುಕೊಂಡು) ಅಯ್ಯೋ ಹಾಗೇನು ಇಲ್ಲ ಕಣೆ ನಿನ್ನನ್ನು ನೋಡ್ತಾ ಇದ್ದಾರೆ ನೋಡ್ತಾನೆ ಇರಬೇಕು ಅನಿಸ್ತಿದೆ ಪ್ಚ್...

ಅದು ಬಿಡು ಅಟ್ಲೀಸ್ಟ್ ಈಗಲಾದರೂ ಹೇಳ್ತ್ಯ ಅದೇನು ಅರ್ಜೆಂಟ್ ವಿಷಯ ಅಂತ. ಹಾ ಹೇಳ್ತೀನಿ ಕೇಳು. ನಾನು ಹೋದ ವಾರದಿಂದ ಆಫೀಸ್ ಗೆ ಜಾಯಿನ್ ಆಗಿದ್ದು ಅಲ್ವಾ ಮೊದಲನೇ ದಿನಾನೆ ನನ್ನ ಟೀಮ್ ಲೀಡ್ ಬಂದು ನಾನು ನಿನ್ನನ್ನು ಇಷ್ಟ ಪಡುತ್ತಿದ್ದೇನೆ ಎಂದುಬಿಟ್ಟ ಕಣೋ. ಅವಳ ಮಾತು ಕೇಳಿ ನನಗೆ ಮೈ ಎಲ್ಲ ಉರಿದು ಹೋಯಿತು. ಮೂರು ತಿಂಗಳಾಯಿತು ಅವಳನ್ನು ಭೇಟಿ ಮಾಡಿ ನಾನೇ ಇನ್ನು ಅವಳಿಗೆ ಪ್ರಪೋಸ್ ಮಾಡಿಲ್ಲ ಆಗಲೇ ಒಬ್ಬ ಕಾಂಪಿಟಿಟಾರ್ ಬಂದನ. ಆದರೂ ಅವನ ಧೈರ್ಯಕ್ಕೆ ಮೆಚ್ಚಿಕೊಬೇಕು ಎಂದುಕೊಂಡು ಅದಕ್ಕೆ ನೀನೆನಂದೆ (ದಯವಿಟ್ಟು ಒಪ್ಪಿರಬಾರದು). ಅದಕ್ಕವಳು, ನಾನು ನನಗೆ ಆಗಲೇ ಬಾಯ್ ಫ್ರೆಂಡ್ ಇದಾನೆ ಅಂತ ಹೇಳಿಬಿಟ್ಟೆ ಕಣೋ ಎಂದಳು. ಅಷ್ಟರಲ್ಲಿ ಅವಳ ಫೋನ್ ರಿಂಗಾಯಿತು.

ಬಾಯಲ್ಲಿದ್ದ ಬಿಸಿ ಕಾಫಿ ಬಾಯ್ ಫ್ರೆಂಡ್ ಎಂದು ಕೇಳಿದ ತಕ್ಷಣ ಗಂಟಲಿಗೆ ಹೋಗಿ ಚುರ್ ಎಂದಿತು. ಇದೇನಪ್ಪ ಹೊಸ ತಿರುವು ಆಗಲೇ ಅವಳಿಗೊಬ್ಬ ಬಾಯ್ ಫ್ರೆಂಡ್ ಇದಾನ. ಛೆ ಮೊದಲೇ ಇದು ಗೊತ್ತಿದ್ದರೆ ನಾನು ಇಷ್ಟು ಮುಂದುವರಿಯುತ್ತಲೇ ಇರಲಿಲ್ಲ. ಅನ್ಯಾಯವಾಗಿ ಅವಳ ಬಗ್ಗೆ ತಲೆ ಕೆಡಿಸಿಕೊಂಡು ನನ್ನ ಸಮಯವೆಲ್ಲ ವ್ಯರ್ಥ ಮಾಡಿಕೊಂಡೆ. ಇನ್ನು ಅವಳ ಜೊತೆ ಸ್ನೇಹವನ್ನು ಮುಂದುವರಿಸುವುದಂತೂ ನನ್ನ ಕೈಲಿ ಆಗಲ್ಲ. ಅದು ಸರಿ ಅವಳಿಗೆ ಬಾಯ್ ಫ್ರೆಂಡ್ ಇದ್ದರೆ ಈ ವಿಷಯವನ್ನು ಅವನ ಬಳಿಯೇ ಹೇಳಬಹುದಿತ್ತು ನನ್ನ ಬಳಿ ಅದೂ ಎಲೆಕ್ಟ್ರೋನಿಕ್ ಸಿಟಿ ಇಂದ ಅರ್ಧ ದಿನ ರಜೆ ಹಾಕಿಸಿ ಇಲ್ಲಿಗೆ ಕರೆಸಿ ಈ ಅರವತ್ತು ರೂಪಾಯಿ ಡಬ್ಬ ಕಾಫಿ ಕುಡಿಸಿ ನನಗೆ ಹೇಳುವ ಅವಸರವೇನಿತ್ತು. ಈಗ ಫೋನ್ ಬಂದಿರುವುದು ಅವನಿಂದಲೇ ಅನಿಸುತ್ತೆ. ಅದ್ಯಾ ನನ್ ಮಗನೋ ಇವಳ ಬಾಯ್ ಫ್ರೆಂಡ್ ಅದೃಷ್ಟವಂತ ಎಂದುಕೊಂಡು ಅವಳು ಫೋನ್ ಇಟ್ಟ ತಕ್ಷಣ ಅರ್ಜೆಂಟ್ ಕೆಲಸ ಇದೆ ಎಂದು ಹೇಳಿ ಹೊರಟು ಬಿಡೋಣ ಎಂದುಕೊಂಡು ಅವಳು ಫೋನ್ ಇಡುವವರೆಗೂ ಕಾಯುತ್ತಿದ್ದೆ

Rating
No votes yet