ಬದುಕಿನ ಅರ್ಥವೇನು?
ಕಳೆಗುಂದಿದ ಮುಖಗಳು, ನೀರವ ಮೌನ, ಮಧ್ಯೆ ಆಗಾಗ ಅಲ್ಲಲ್ಲಿ ಕೇಳಿಬರುವ ಬಿಕ್ಕಳಿಕೆಯ ಸದ್ದು,ಬೇಸಿಗೆಯ, ಬತ್ತಿಹೋದ ಕೊಳದಂತೆ,ಒಣಗಿಹೋದ ಕಣ್ಣಿರು.ಸುತ್ತಲು ಬಂಧು ಬಾಂಧವರಿದ್ದರೂ ಸಂಭ್ರಮಿಸಲಾಗದ (ಸಂಭ್ರಮಿಸಬಾರದ ?) ಏಕೈಕ ಸನ್ನಿವೇಶ ? ಹೌದು , ಅದು ಸಾವಿನ ಮನೆ.ನಿಶ್ಚಲವಾಗಿ,ಇಹದ ಬಂಧನಗಳನ್ನೆಲ್ಲ ತೊರೆದು,ನೀಲ ನಭದೆಡೆಗೆ ಮುಖಮಾಡಿ,ಅಂಗಾತ ಮಲಗಿರುವ ಶವ.ಹುಟ್ಟು, ಬಾಲ್ಯ,ತಾರುಣ್ಯಗಳನ್ನೆಲ್ಲ ದಾಟಿ,ವೃದ್ದಾಪ್ಯದೆಡೆಗೆ ಸಾಗುವಾಗ,ಪಯಣದ ನಡುವೆ ದೊರೆವ ಚಿರಂತನ ನೆಲೆ ಇದು.ಸಾನ್ನಿಧ್ಯ ಎಂದು ಬಲ್ಲವರು ಹೇಳಿದ್ದು ಇದನ್ನೇ ಇರಬಹುದೇ?
ಎಲ್ಲೋ ಹುಟ್ಟುವ ನೀರ ತೊರೆಗಳೆಲ್ಲ ಸೇರಿ,ಹಳ್ಳವಾಗಿ,ನದಿಯಾಗಿ,ಭೂಮಿಯ ದಾಹವನ್ನು ತಣಿಸಿ,ಕೊನೆಗೆ ವಿಶಾಲ ಸಾಗರವನ್ನು ಸೇರುವಂತೆ,ಮಾನವನ ಬದುಕೂ ಜಗದ ಅನಂತತೆಯಲ್ಲಿ ಲೀನವಾಗುವುದೇ? ನಮ್ಮ ಬದುಕನ್ನು ನದಿಗೆ/ನೀರಿಗೆ ಹೋಲಿಸಿದರೆ ಅತಿರೆಕವಾದೀತು.ಯಾಕೆಂದರೆ ಎಲ್ಲ ಜಲಮೂಲಗಳು ಉಪಯುಕ್ತ(ಸಾಗರವಿರದಿದ್ದರೆ ಉಪ್ಪೆಲ್ಲಿ? ).ಇದನ್ನೇ ಮಾನವನಿಗೂ ಅನ್ವಯಿಸಲಾದಿತೆ? "ನ್ಯೂಟನ್ನನ ನಿಯಮಗಳನ್ನು" ಸುಳ್ಳು ಎಂದು ಸಾಧಿಸುವಷ್ಟೇ ಕ್ಲಿಷ್ಟಕರ ವಿಚಾರ ಇದು."ನೀನಾರಿಗದೆಯೋ ಎಲೆ ಮಾನವ" ಎಂಬ ಕವಿಯ ಪ್ರಶ್ನೆಯೂ ಮಾನವನ ಬದುಕಿನ ಸತ್ಯಾನ್ವೇಷಣೆಯಂತೆ ಅನಿಸುತ್ತಿರುವುದು ನಿಜ. ಆದರೆ
"ಬೃಹ್ಮ ಸತ್ಯ ಜಗನ್ಮಿಥ್ಯ" ಎಂಬ ಮಾತು ನೆನಪಾದರೆ,ಸುಳ್ಳು ಸತ್ಯವೂ ಆಗಬಹುದು,ಸತ್ಯ ಸುಳ್ಳೂ ಆಗಬಹುದು (ಅಂದರೆ ನಾನಿಲ್ಲಿ ಬರೆಯುತ್ತಿರುವುದು ಸುಳ್ಳೋ ? ನಿಜವೋ?).
ಅರಿಯದೆ ಬರುವ ಸಾವಿಗೂ,ಕಾಯಿಸಿ ಸತಾಯಿಸಿ ಬರುವ ಸಾವಿಗೂ,ಇರುವ ಅಂತರವೇನು? ಒಂದು ಸುಖ(ಸತ್ತವರಿಗೆ ಮಾತ್ರ, ಇರುವವರಿಗಲ್ಲ),ಇನ್ನೊಂದು ದುಖ:(ಇರುವವರಿಗೆ ಮಾತ್ರ, ಸತ್ತವರಿಗಲ್ಲ). ಒಂದು ಪುಣ್ಯವಾದರೆ ಇನ್ನೊಂದು ಪಾಪ. ಮೊದಲನೆಯದನ್ನು ಸೌಭಾಗ್ಯ(?) ಎಂದು ಕರೆದರೆ ಎರಡನೆಯದೇ ದೌರ್ಭಾಗ್ಯ. ಹುಟ್ಟು ಅಥವಾ ಸಾವು ನಮ್ಮ ನಿಯಂತ್ರಣದಲ್ಲಿಲ್ಲ. ಅಂದ್ರೆ ಈ ಎರಡರ ನಡುವಿನ ಅಂತರವನ್ನೇ ಜೀವನ ಎಂದೆವೆ? ಅದನ್ನೇ ಬದುಕು ಎಂದು ಕರೆದೆವೇ?{ಸಾವು - ಹುಟ್ಟು = ಬದುಕು ?}. ಅದೇ ಹೌದಾದರೆ " ಅವನೇ ಜಗದ ಸೂತ್ರಧಾರಿ , ನಾನು ಇಲ್ಲಿ ಪಾತ್ರಧಾರಿ " ಎಂದು ಎಲ್ಲವನ್ನು ಪರಮಾತ್ಮನಿಗೆ (ಎನ್ನುವವ ಒಬ್ಬನಿದ್ದರೆ? ) ಅರ್ಪಿಸಿದ ಹಿರಿಯರ ಚಿಂತನೆಗಳು ಆಧಾರರಹಿತವೆ?. ಈ ಕ್ಷಣಿಕ ಬದುಕೂ ನಮ್ಮ ಕೈಲಿಲ್ಲವೇ? .
ಮಗುವಾಗಿದ್ದಾಗ ಬೆಳೆದು ದೊಡ್ದವರಾಗಬೇಕೆಂಬ ಕನಸು, ಸಾಧನೆಯ ಶಿಖರವನ್ನೆರಬೇಕೆಂಬ ಛಲ, ಯೌವನದಲ್ಲಿ ರೋಷಾವೇಶ, ಮಧ್ಯ ವಯಸ್ಸಿನಲ್ಲಿ ಹೊಂದಾಣಿಕೆಯ ಗುಣ. ಇವನ್ನೆಲ್ಲ ಸಹಜವಾಗಿ ಬೆಳೆಸಿಕೊಳ್ಳುವ ಮಾನವನೆಂಬ ಪ್ರಾಣಿ, ವೃದ್ದಾಪ್ಯದಲ್ಲಿ ಮತ್ತೆ ಯುವಕನಗುವ ಕನಸು ಕಾಣುತ್ತಾನೆ. ಅದು ತನು ಈ ಮೊದಲಿನ ದಿನಗಳನ್ನು ಸೂಕ್ತವಾಗಿ ಬಳಸಿಕೊಳ್ಳಲಿಲ್ಲ ಎಂಬ ನಿರಸೆಯೋ? ಅಥವಾ ಪುನ: ಏನನ್ನೋ ಸಾಧಿಸಬೇಕೆಂಬ ಛಲವೋ ಎಂಬುದು ವಯಕ್ತಿಕ ವಿಚಾರ.ಆದರೆ ಎಲ್ಲರೂ 'ಮರಣ ಮೃದಂಗ' ಬಾರಿಸಲೇ ಬೇಕೆಂಬುದು ಜೀವನದ ಸರಳ ಸತ್ಯ.
ಹುಟ್ಟಿದ್ದೆಲ್ಲವೂ ಒಂದಲ್ಲ ಒಂದು ದಿನ ಸಾಯಲೇಬೇಕು ಎಂಬ ಕಹಿ ಸತ್ಯದ ಅರಿವಿದ್ದರೂ, ನಾಳೆಗಳ ಕನಸು ಕಾಣುತ್ತೇವೆ. ಭವಿಷ್ಯ ರೂಪಿಸಲು ಹೆಣಗಾಡುತ್ತೇವೆ. ಹೋರಾಡುತ್ತೇವೆ. ಮತ್ತದೆ ಸಂಸಾರದ ನೊಗಕ್ಕೆ ಹೆಗಲು ಕೊಡುತ್ತೇವೆ. ಅದೆಷ್ಟು ಬಂಧು-ಬಾಂಧವರು?,ಮಿತ್ರರು?,ಆಪ್ತರು?, ಆದರೆ.......
ಮತ್ತೆ ನೆನಪಾಗುವವನು ಅದೇ ಅಲೆಕ್ಸಾಂಡರ್,ಅದೇ ಸಿದ್ಧಾರ್ಥ,ಯೋಗಿ ಗೌತಮ ಬುದ್ಧ. ಈ ಭೂಮಿಯಲ್ಲಿ ಅದೆಷ್ಟು ಜ್ಞಾನ? ಅದೆಷ್ಟು ಭೋದನೆಗಳು? ನಮ್ಮ ಮೌಢ್ಯವನ್ನು ಹೋಗಲಾಡಿಸಲು ಪಟ್ಟ ಶ್ರಮವೆಷ್ಟು? ನಾವು ಬದಲಾದೆವೆ? ಮತ್ತದೇ ಕಾಡುವ ಗೌಪ್ಯ ಪ್ರಶ್ನೆ ಈ 'ಬದುಕಿನ ಅರ್ಥವೇನು'?
"We are not coming from somewhere else, we are growing within the Existence" ಎಂದು ಓಶೋ ಹೇಳುತ್ತಾರೆ. ಅಂದರೆ ಈ ಸೃಷ್ಟಿ, ಸ್ಥಿತಿ, ಲಯಗಳ ಕತೆ ಏನು?. ಅವೆಲ್ಲವೂ ಮಿಥ್ಯವೆ? ಮತ್ತದೇ "ಜಗನ್ಮಿಥ್ಯ" ನಿತ್ಯ ಸತ್ಯವಾದಂತೆ.(ಸತ್ಯ ಯಾವದು ಮಿಥ್ಯ ಯಾವುದು ಎನ್ನುವ ನಿರಂತರ ಹುಡುಕಾಟ?).
ಸಾವಿನ ಮನೆಯೊಂದನ್ನು ಹತ್ತಿರದಿಂದ ಕಂಡಾಗ, ಮೂಡಿದ ಯೋಚನಾ ಲಹರಿ ಇದು. ಆ ಲಹರಿಯಿಂದ ಹೊರಬಂದು, ಮತ್ತೆ ವರ್ತಮಾನವನ್ನು ಪ್ರವೇಶಿಸಿ, "ನೈನಂ ಚಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ " (Soul never dies) ಎಂಬ ಸಮಾಧಾನದ(?) ಮಾತುಗಳಿಗೆ ಬದ್ಧನಾಗಿ, "ಮತ್ತದೇ ನಾಳೆಗಳ ಕನಸ್ಸಿನಲ್ಲಿ, ಭವಿಷ್ಯದ ಆಲೋಚನೆಗಳಲ್ಲಿ".
Comments
ಉ: ಬದುಕಿನ ಅರ್ಥವೇನು?
In reply to ಉ: ಬದುಕಿನ ಅರ್ಥವೇನು? by harishsharma.k
ಉ: ಬದುಕಿನ ಅರ್ಥವೇನು?
In reply to ಉ: ಬದುಕಿನ ಅರ್ಥವೇನು? by hvravikiran
ಉ: ಬದುಕಿನ ಅರ್ಥವೇನು?