ಗಾಳಿ ಕಿರುಸುಳಿ ಹುಟ್ಟಿತು

ಗಾಳಿ ಕಿರುಸುಳಿ ಹುಟ್ಟಿತು

ಕಾವ್ಯವನ್ನು ಸಮುದ್ರಕ್ಕೆ ಹೋಲಿಸಿದ ಕವಿಗಳುಂಟು; ‘ಹನಿಗವನ’
ಎಂದು ಕರೆದು ಅದನ್ನು ನೀರಿನ ಒಂದು ಹನಿಗೆ ಹೋಲಿಸಿದವರೂ
ಉಂಟು. ನಿಜವೇನೆಂದರೆ, ಹನಿ ನೀರು ಮತ್ತು ಸಮುದ್ರ ಬೇರೆ
ಬೇರೆಯಲ್ಲ. ಒಂದು ಹನಿಯ ತತ್ವದಲ್ಲೇ ಸಮುದ್ರದ ತತ್ವವೂ
ಹುದುಗಿದೆ. ತಾತ್ವಿಕವಾಗಿ ಅವೆರಡೂ ಅಭಿನ್ನವೇ ಆದರೂ ಅವೆರಡರ
ಸ್ವರೂಪ ಹಾಗೂ ತಾಂತ್ರಿಕತೆಯಲ್ಲಿನ ವ್ಯತ್ಯಾಸವನ್ನು ಮತ್ತಷ್ಟು
ಪರಿಶೀಲಿಸಬೇಕಾಗುತ್ತದೆ. ಇಲ್ಲವಾದರೆ ಸಾಹಿತ್ಯ ವಲಯದಲ್ಲಿ
ಸಂಭವಿಸುವ ಎಲ್ಲ ಅನರ್ಥ, ಅಪರಾಧಗಳಿಗೂ ಬಡಪಾಯಿ
ವಿಮರ್ಶಕನನ್ನೇ ಅಪರಾಯನ್ನಾಗಿ ನಿಲ್ಲಿಸಬೇಕಾಗುತ್ತದೆ. ಇದು
ನಿಜಕ್ಕೂ ಅನ್ಯಾಯ. ನವ್ಯ ವಿಮರ್ಶಕರೂ ಆಗಿದ್ದ ಗುರುಗಳಾದ ದಿ.
ಕಿ.ರಂ. ನಾಗರಾಜ ಅವರು ಒಮ್ಮೆ ಮಹಾಕಾವ್ಯ ಹಾಗೂ
ಹನಿಗವನಗಳನ್ನು ಹೋಲಿಸಿ, ‘ಮ್ಯಾರಾಥಾನ್ ಓಟವೂ ಕ್ರೀಡೆಯೇ,
ನೂರು ಮೀಟರ್ ಓಟದ ಸ್ಪರ್ಧೆಯೂ ಕ್ರೀಡೆಯೇ, ಲೋಕದಲ್ಲಿ
ಎರಡಕ್ಕೂ ಸಮಾನ ಮಹತ್ವವಿದೆ’ ಎಂದಿದ್ದರು (ಕವಿ ಜರಗನಹಳ್ಳಿ
ಶಿವಶಂಕರ್ ಜತೆ ಸಂಭಾಷಿಸುತ್ತ). ಕಾವ್ಯದ ಚಾಂಚಲ್ಯ,
ಲಘುತ್ವಗಳನ್ನು ನಿರೂಪಿಸುವ ಬೇಂದ್ರೆಯರ ‘ಪಾತರಗಿತ್ತಿ’ ಪದ್ಯ
ಒಂದರ್ಥದಲ್ಲಿ ಚುಟುಕು ಕಾವ್ಯದ ಮೀಮಾಂಸೆಯಾಗಿದೆ.
ಬೇಂದ್ರೆಯವರು ‘ಚುಟುಕು ರೂಪದಲ್ಲೇ ಕಾವ್ಯ ಹುಟ್ಟುವುದು’
ಎನ್ನುತ್ತಾರೆ (ಗಾಳಿ ಕಿರುಸುಳಿ ಹುಟ್ಟಿತು...). ಒಂದು ಸಣ್ಣ
ಕಿರುಸುಳಿಯಿಂದ ಬೃಹತ್ ಚಂಡಮಾರುತ ಉಂಟಾಗುವಂತೆ ಒಂದು
ಕಿರುಭಾವ ಸ್ಥಿತಿಯಿಂದ ಮಹಾಕಾವ್ಯ ಅವತರಿಸುತ್ತದೆ. ‘ಕ್ರೌಂಚವಧದ
ಅಳಲಿನ ಉದ್ವೇಗ ಬತ್ತಲೆ ಸುತ್ತ’ ರಾಮಾಯಣ ಶ್ಲೋಕ
ಪಸರಿಸುತ್ತದೆ.
ಕಾವ್ಯದ ಮೂಲಸ್ವರೂಪ ಎಂದಿಗೂ ಹನಿಗವನದ ರೂಪದಲ್ಲೇ
ಇರುವುದು. ಕೆಲವು ಸಲ ಕುಮಾರವ್ಯಾಸನ ರೂಪಕ ಪ್ರತಿಭೆಯನ್ನು
ಹನಿಗವನಗಳಲ್ಲೇ ಉದಾಹರಿಸಬೇಕಾಗುತ್ತದೆ. ನಮ್ಮ ಇಡೀ ಶರಣ
ಸಾಹಿತ್ಯ, ದಾಸ ಸಾಹಿತ್ಯ ಹಾಗೂ ತತ್ವಪದಗಳು ಒಂದರ್ಥದಲ್ಲಿ
ಹನಿಗವನಗಳೇ ಅಲ್ಲವೇ? ಉದಾಹರಣೆಗೆ, ಸ್ವರೂಪತಃ ಅಕ್ಕನ
ವಚನಗಳು ಹನಿಗವನದಷ್ಟೇ ಸಾಲುಗಳನ್ನು ಹೊಂದಿರುವುದಾದರೂ
ಅದನ್ನು ‘ಅಕ್ಕನ ಹನಿಗವನ’ ಎಂದು ಕರೆಯಲಾಗದು. ಅಕ್ಕನ
ವಚನಗಳು ಒಂದೇ ಭಾವಸ್ಥಿತಿಯನ್ನು ಬೇರೆ ಬೇರೆ ರೀತಿಯಲ್ಲಿ
ಅಭಿನಯಿಸುವುದರಿಂದ ಅವು ಅಕ್ಕನ ಸಮಗ್ರ ಭಾವ ನಿರೂಪಣೆಯ
ಒಂದು ರೂಪವಾಗಿದೆ. ಇಲ್ಲಿ ಸಮಗ್ರ ಎಂದರೆ ಒಟ್ಟಾರೆ ಬರವಣಿಗೆ
ಎಂದರ್ಥವಲ್ಲ. ‘ಒಟ್ಟೂ ಕಾವ್ಯದಲ್ಲಿನ ಭಾವಸ್ಥಿತಿ ಹೇಗೆಲ್ಲ ಬೆಳೆಯುತ್ತ
ಸಾಗುತ್ತದೆ ಮತ್ತು ಪರ್ಯವಸಾನವಾಗುತ್ತದೆ ಎಂಬುದರ ಅನ್ವೇಷಣೆ
ಹಾಗೂ ವಿವೇಚನೆ’ ಎಂದು ಅಡಿಗರು ತಮ್ಮ ಸಮಗ್ರ ಕಾವ್ಯದ
ಮುನ್ನುಡಿಯಲ್ಲಿ ಹೇಳುತ್ತಾರೆ.
ಆದರೆ ಇಂದು ಹನಿಗವನ ಎಂದು ಕರೆಸಿಕೊಳ್ಳುತ್ತಿರುವ
ಪ್ರಕಾರದಲ್ಲಿ ಭಾವದ ಇಂಥದೊಂದು ಸಮಗ್ರ ಬಂಧ ಹಾಗೂ
ಬೆಳವಣಿಗೆಗಳು ಕಾಣಸಿಗುವುದಿಲ್ಲ. ಕ್ಷಣಭಂಗುರವಾದ
ಭಾವಾನುಭಾವಕ್ಕೆ ಶ್ಲೇಷೆಯ ಸ್ಪರ್ಶ ಸಿಕ್ಕೊಡನೆ ಕವನವಾಗುವುದೇ?
ಬೇಂದ್ರೆ ಇಂಥ ಸಾಲುಗಳನ್ನು ‘ಚತುರೋಕ್ತಿ’ ಎಂದು ಸರಿಯಾಗಿಯೇ
ಕರೆದಿರುವರು. ಜಾಣ್ಮೆಯ ಮಾತುಗಳು ಎಂದೂ ಕಾವ್ಯವಾಗದು.
ಜಾಣ್ಮೆ, ಚಾಲಾಕಿತನಗಳೆಲ್ಲ ವ್ಯರ್ಥವೆಂದು ಮನಗಂಡ ಮೇಲೆ
ನಿಜವಾದ ಕಾವ್ಯ ಹುಟ್ಟುತ್ತದೆ. ಅಡಿಗರ ‘ಕೂಪ ಮಂಡೂಕ’
ಇದಕ್ಕೊಂದು ಒಳ್ಳೆಯ ಉದಾಹರಣೆ. ಕುವೆಂಪು, ಬೇಂದ್ರೆ
ಮೊದಲಾದ ಹಿಂದಿನ ಕವಿಗಳು ಸಾಕಷ್ಟು ಸಂಖ್ಯೆಯ ಹನಿಗವನಗಳನ್ನು
ಬರೆದಿದ್ದಾರೆ ನಿಜ. ಒಂದು ಭಾವಸ್ಥಿತಿಯನ್ನು ಇನ್ನಾವ ರೀತಿಯಲ್ಲೂ
ಪೋಷಿಸಲು, ಬೆಳೆಸಲು ಸಾಧ್ಯವಾಗದೇ ಹೋದಾಗ ಅದಕ್ಕೆ ಶ್ಲೇಷೆಯ
ತೊಡವನ್ನು ಹೊದಿಸಿ ಹನಿಗವನಗಳನ್ನು ಮಾಡಿದ್ದಾರೆ. ಒಂದು ಭಾವ
ಸ್ಥಿತಿಯಲ್ಲಿ ಕವಿ ಪ್ರತಿಭೆಗೆ ಇನ್ನು ಉದ್ಯೋಗವಿಲ್ಲವೆಂದು ತಿಳಿದ ಮೇಲೆ
ಅದಕ್ಕೆ ಚತುರೋಕ್ತಿಯ ರೂಪವನ್ನು ನೀಡಿದ್ದಾರೆ. ಹಾಗಾಗಿ ಕುವೆಂಪು,
ಬೇಂದ್ರೆ ಮೊದಲಾದವರಲ್ಲಿ ಹನಿಗವನಗಳು ಕವಿಯ
ಮಹತ್ವಾಕಾಂಕ್ಷೆಯ ಸೋಲಾಗಿದೆ. ಮಹಾಕಾವ್ಯವಾಗದೇ ಸೋತ
ಭಾವಗಳು ಹನಿಗವನಗಳಾಗಿ ಉಳಿದಿವೆ.
ಭಾವಸ್ಥಿತಿ ಕೆಲವೊಮ್ಮೆ ಅಲ್ಪಾಯುಷಿಯಾಗಿರಬಹುದು. ಕೆಲವು
ಸಲ ದೀರ್ಘಾಯುಸ್ಸನ್ನು ಹೊಂದಿರಬಹುದು. ಕೆಲವು ಅಪರೂಪದ
ಭಾವಸ್ಥಿತಿಗಳು ಚಿರಾಯುಗಳಾಗಿರುವುದೂ ಉಂಟು. ಶ್ರೇಷ್ಠನಾದ
ಕವಿಯು ಭಾವದ ಕ್ಷಣಭಂಗುರತ್ವಕ್ಕೆ ಶಾಶ್ವತತೆಯನ್ನು
ಅನುಗ್ರಹಿಸಬಲ್ಲ. ಕಿರುರೂಪದಲ್ಲಿ ಹುಟ್ಟುವ ಕವನದ ಸಾಲನ್ನು
ಪೋಷಿಸಿ, ಬೆಳೆಸಿ ಅದನ್ನು ಮಹಾಕಾವ್ಯವನ್ನಾಗಿಸಬಲ್ಲ. ‘ಭೃಂಗದ
ಬೆನ್ನೇರಿ ಬಂತು ಕಲ್ಪನಾ ವಿಲಾಸ’ ಎಂದು ಕಿರುಗವನದ ರೂಪದಲ್ಲಿ
ಹುಟ್ಟುವ ಭಾವವು ಕ್ರಮೇಣ ಕವಿಯ ಹೃದಯ ಕಮಲದಲ್ಲಿ
ಭಾವಗೀತವಾಗುತ್ತದೆ; ಔದುಂಬರ ಗಾಥೆಯಾಗುತ್ತದೆ. ಟಾಲ್
ಟಾಯ್, ದಸ್ತಯೇವ್‌ಸ್ಕಿ ಮೊದಲಾದವರಲ್ಲಿ ಒಂದೇ ಒಂದು
ಭಾವಸ್ಥಿತಿಯು ಸಾವಿರಾರು ಪುಟಗಳವರೆಗೆ ಹರಡಿಬಿಡುತ್ತದೆ.
‘ನಿರಾಳವೆಂಬ ಕೂಸಿಂಗೆ ಬೆಣ್ಣೆಯನಿಕ್ಕಿ ಹೆಸರನಿಟ್ಟು
ಕರೆದವರಾರೋ? ಅಕಟಕಟಾ ಶಬ್ದದ ಲಜ್ಜೆಯ ನೋಡಾ’ ಎಂಬ
ಅಲ್ಲಮಪ್ರಭುವಿನ ವಚನವೊಂದಿದೆ. ಈ ವಚನದಲ್ಲಿ ಭಾವಸ್ಥಿತಿಯನ್ನು
ಅಲ್ಲಮ ಒಂದು ಕೂಸಿಗೆ ಹೋಲಿಸಿದ್ದಾನೆ. ಒಂದು ಕೂಸು ಹೆತ್ತವರಿಗೆ
ಹಾಗೂ ಸುತ್ತಣ ಬಂಧುಗಳಿಗೆ ಖುಷಿ, ಮನರಂಜನೆಗಳನ್ನು
ನೀಡುವುದಾದರೂ ಹಾಗೆ ಮನರಂಜನೆ ಪಡೆಯಲೆಂದೇ ಯಾರೂ
ಕೂಸುಗಳಿಗೆ ಜನ್ಮ ನೀಡುವುದಿಲ್ಲ. ಹೆತ್ತವರು ಆ ಕೂಸಿನ ಹೊಣೆ
ಹೊತ್ತು ಅದನ್ನು ಬೆಳೆಸಿ, ದೊಡ್ಡವನನ್ನಾಗಿಸಿ, ಅದು ಸಮಾಜದಲ್ಲಿ
ಹೇಗೆ ಬಾಳುತ್ತದೆ ಎಂದು ಕಂಡು ಖುಷಿ ಪಡಲು ತಮ್ಮ ಜೀವನವನ್ನೇ
ಸವೆಸುತ್ತಾರೆ. ಒಬ್ಬ ಕವಿ ತನ್ನ ಭಾವಸ್ಥಿತಿಯೊಂದಿಗೂ ಹೀಗೆಯೇ
ನಡೆದುಕೊಳ್ಳುತ್ತಾನೆ. ಮನರಂಜನೆಯೇ ಕಾವ್ಯದ ಏಕಮೇವ ಉದ್ದೇಶ
ಎಂದಾದಲ್ಲಿ ಸಹೃದಯನಾದವನು ಹನಿಗವನದ ಚಮತ್ಕಾರವನ್ನು
ಬಿಟ್ಟು ಬೇರೆ ಮತ್ತೊಂದನ್ನು ಕಾವ್ಯದಲ್ಲಿ ಹುಡುಕುವುದು ನಿಜಕ್ಕೂ
ಮೂರ್ಖತನವಾಗುತ್ತದೆ.
(ವಿಜಯಕರ್ನಾಟಕದಲ್ಲಿ ಪ್ರಕಟವಾದ ಲೇಖನ)


 

Rating
No votes yet