ಡಾ. ಚಿದಾನಂದಮೂರ್ತಿಗಳ ಒಂದು ಪ್ರಸಂಗ - ಕಿರಂ ಹೇಳಿದ ಕತೆಗಳು
ಒಮ್ಮೆ ಚಿದಾನಂದಮೂರ್ತಿಗಳ ಸಂಶೋಧನಾ ಫಲಿತಾಂಶವು ಬಹುದೊಡ್ಡ ವಿವಾದವನ್ನೆಬ್ಬಿಸಿತ್ತು. ಲಿಂಗಾಯಿತ ಧರ್ಮದ ಮುಖ್ಯ ಗುರುಗಳಲ್ಲಿ ಒಬ್ಬರಾದ ರೇಣುಕಾಚಾರ್ಯರು ಕಮಲದ ಹೂವಿನೊಳಗಿಂದ ಉದ್ಭವಿಸಿದವರು ಎಂಬ ನಂಬಿಕೆ ಇದೆ. “ಅದೆಲ್ಲ ಶುದ್ಧ ಸುಳ್ಳು, ಬರೀ ಕಟ್ಟುಕತೆ” ಎಂಬ ಹೇಳಿಕೆ ನೀಡಿದ ಚಿ.ಮೂ ಅವರು ಶ್ರದ್ಧಾವಂತರ ಕೆಂಗಣ್ಣಿಗೆ ಗುರಿಯಾದರು. ಚಿದಾನಂದಮೂರ್ತಿಯವರ ವಿರುದ್ಧ ಎಲ್ಲೆಡೆ ವ್ಯಾಪಕವಾದ ಧಿಕ್ಕಾರ ಹಾಗು ಪ್ರತಿಭಟನೆಗಳು ಕೇಳಿಬಂದವು. ಈ ಸಿಟ್ಟು ಅಸಮಾಧಾನಗಳನ್ನು ಶಮನಗೊಳಿಸಬೇಕೆಂದು ನಿರ್ಧರಿಸಿದ ಚಿ.ಮೂ ಅವರು ಇನ್ನೂ ಮಹತ್ವದ ಹೆಜ್ಜೆಯೊಂದನ್ನಿಟ್ಟರು. ರೇಣುಕಾಚಾರ್ಯರ ಹುಟ್ಟೂರು, ಅವರ ತಂದೆ ತಾಯಿಗಳು, ಅವರ ಕಾಲ ದೇಶ ಇತ್ಯಾದಿಗಳನ್ನು ಕುರಿತು ಶಾಸ್ತ್ರೀಯವಾಗಿ ಸಂಶೋಧನೆ ನಡೆಸಿ ಶಾಸನಾಧಾರಗಳ ಸಮೇತ ವಿದ್ವತ್ ಲೇಖನವನ್ನು ಪ್ರಕಟಿಸಿ ರೇಣುಕಾಚಾರ್ಯರು ಹೇಗೆ ಕಮಲದ ಹೂವಿನಿಂದ ಉದ್ಭವಿಸಿದವರಲ್ಲ ಎಂದು ಪ್ರತಿಪಾದಿಸಿದರು. ಹೀಗೆ ಎಲ್ಲ ಧಿಕ್ಕಾರ, ಪ್ರತಿಭಟನೆಗಳಿಂದ ಬಚಾವಾದರು. ಆ ಸಂದರ್ಭದಲ್ಲಿ ಪೂರ್ಣಚಂದ್ರ ತೇಜಸ್ವಿ ಒಂದು ತಮಾಷೆ ಮಾಡಿದರು “ರೇಣುಕಾಚಾರ್ಯ ತನ್ನ ತಂದೆ ತಾಯಿಗಳಿಗೆ ಹುಟ್ಟಿದವನು ಎಂದು ತಿಳಿದುಕೊಳ್ಳಲು ಚಿದಾನಂದಮೂರ್ತಿಗಳು ಇಷ್ಟೆಲ್ಲ ಪ್ರಯಾಸ ಪಡಬೇಕಾಗಿತ್ತೇ? ಪ್ರೌಢಶಾಲೆಯ ಬಯಾಲಜಿ ಪುಸ್ತಕ ಓದಿದ್ದರೆ ಸಾಕಾಗಿತ್ತಲ್ಲ” ಎಂದಿದ್ದರು. ಚಿದಾನಂದಮೂರ್ತಿಗಳು ತೇಜಸ್ವಿಯ ಈ ಪ್ರತಿಕ್ರಿಯೆಯಿಂದ ವಿಪರೀತ ಸಿಡಿಮಿಡಿಗೊಂಡರು. ತೇಜಸ್ವಿಯನ್ನು ಮೆಚ್ಚುತ್ತಿದ್ದ ನನ್ನೊಡನೆ ಹಾಗು ಡಿ.ಆರ್. ನಾಗರಾಜ್‍ರೊಡನೆ ತಿಂಗಳಾನುಗಟ್ಟಲೆ ಮಾತನಾಡುವುದನ್ನೇ ಬಿಟ್ಟುಬಿಟ್ಟಿದ್ದರು. ನಾವು ಲೈಬ್ರರಿಗೆ ಹೋದಾಗಲೆಲ್ಲ ನಮ್ಮನ್ನು ಮಾತನಾಡಿಸಬಾರದೆಂದು ಯಾವುದೋ ಪುಸ್ತಕವನ್ನು ಪರಿಶೀಲಿಸುವ ನೆವದಲ್ಲಿ ದೂರವಿರುತ್ತಿದ್ದರು. ಆಗೆಲ್ಲ ಡಿ.ಆರ್. ’ನಿಶ್ಯಬ್ದ, ಚಿದಾನಂದಮೂರ್ತಿಗಳು ಬಯಾಲಜಿ ಅಧ್ಯಯನ ಮಾಡುತ್ತಿದ್ದಾರೆ!’ ಎಂದು ಕೀಟಲೆ ಮಾಡುತ್ತಿದ್ದರು.