ತಪ್ಪಾದ......ಲೆಕ್ಕ (?!!!)

ತಪ್ಪಾದ......ಲೆಕ್ಕ (?!!!)

    ಒಂದು ವೇಳೆ ನಿಮ್ಮ ತಂದೆತಾಯಿಗಳಿಬ್ಬರೂ ಈಗ ಜರುಗಿದಂತೆ ನಿರ್ದಿಷ್ಠ ಸಮಯದಲ್ಲಿ ಒಂದುಗೂಡದಿದ್ದರೆ-ಬಹುಶಃ ಒಂದು ಕ್ಷಣಕ್ಕೆ ಅಥವಾ ಅದಕ್ಕೂ ಸೂಕ್ಷ್ಮವಾದ ಅರೆಕ್ಷಣಕ್ಕೆ- ಈ ಭೂಮಿಯ ಮೇಲೆ ನೀವು ಇಂದು ಇಲ್ಲಿ ಇರುತ್ತಿರಲಿಲ್ಲ. ಅಥವಾ ಅವರ ತಂದೆ ತಾಯಿಗಳೂ ಒಂದು ವೇಳೆ ಈ ರೀತಿಯಾದ ನಿರ್ಧಿಷ್ಠ ಸಮಯದಲ್ಲಿ ಒಂದುಗೂಡದಿದ್ದರೂ ಕೂಡ ನೀವು ಇಂದು ಇಲ್ಲಿ ಇರುತ್ತಿರಲಿಲ್ಲ. ಅದೇ ರೀತಿ ಅವರ ತಂದೆತಾಯಿಗಳೂ ಇದೇ ರೀತಿ ಒಂದು ಗೂಡದಿದ್ದರೆ; ಅದೇ ರೀತಿ ಅವರ ತಂದೆ ತಾಯಿಗಳು, ಅದೇ ರೀತಿ ಮತ್ತವರ ತಂದೆ ತಾಯಿಗಳು ಹೀಗೆ ಎಲ್ಲರ ಒಂದುಗೂಡುವಿಕೆಯು ಒಂದು ನಿರ್ಧಿಷ್ಠ ಸಮಯಕ್ಕೆ ಜರುಗದಿದ್ದರೆ ನೀವು ಇಂದು ಇಲ್ಲಿರುತ್ತಿರಲಿಲ್ಲ.

    ಹೀಗೆ ಕಾಲವನ್ನು ಹಿಂದಕ್ಕೆ ತಳ್ಳುತ್ತಾ ಹೋದರೆ ಪೂರ್ವಿಕರ ಈ ಕ್ರಿಯೆ ಸಾಲದಂತೆ ಬೆಳೆಯುತ್ತಾ ಹೋಗುವುದು ಕಾಣುತ್ತದೆ. ಕೇವಲ ಎಂಟು ತಲೆಮಾರುಗಳಷ್ಟು ಹಿಂದೆ ಅಂದರೆ ಚಾರ್ಲ್ಸ್ ಡಾರ್ವಿನ್ ಅಥವಾ ಅಬ್ರಹಾಂ ಲಿಂಕನ್ನರ ಕಾಲಕ್ಕೆ ಹೋದರೆ; ನಿಗಧಿತ ಸಮಯದಲ್ಲಿ ಒಂದುಗೂಡಿ ನಿಮ್ಮ ಜನನಕ್ಕೆ ಕಾರಣರಾದ ೨೫೬ (ಇನ್ನೂರ ಐವತ್ತಾರು) ಜನರು ಅದಾಗಲೇ ಇದ್ದರು.  ಹಾಗೆಯೇ ಮುಂದುವರಿದು ಶೇಕ್ಸ್ಪಿಯರ್ ಮತ್ತು 'ಮೇ ಫ್ಲವರ್' ಯಾತ್ರಿಕರ ಕಾಲಕ್ಕೆ ಹೋದರೆ, ತಮ್ಮ ವಂಶವಾಹಕಗಳನ್ನು ಆತೃತೆಯಿಂದ ಬದಲಾಯಿಸಿಕೊಳ್ಳುವ ಕಾತುರತೆಯಿಂದ ಕೂಡಿದ ಮತ್ತು ಪವಾಡ ಸದೃಶವಾಗಿ ನಮ್ಮ ಹುಟ್ಟಿಗೆ ಕಾರಣರಾದ ಸ್ವಲ್ಪ ಹೆಚ್ಚು ಕಡಿಮೆ ೧೬,೩೮೪ (ಹದಿನಾರು ಸಾವಿರದ ಮುನ್ನೂರ ಎಂಭತ್ತನಾಲ್ಕು) ಜನ ಪೂರ್ವಿಕರು ಅದಾಗಲೇ ಇದ್ದರು.
   
    ಸುಮಾರು ಇಪ್ಪತ್ತು ತಲೆಮಾರುಗಳಷ್ಟು ಹಿಂದಕ್ಕೆ ಹೋಗಿ ನೋಡಿದರೆ ನಿಮ್ಮ ಪರವಾಗಿ ಪುನರುತ್ಪತ್ತಿ ಕಾರ್ಯ ಕೈಗೊಂಡವರ ಸಂಖ್ಯೆ ೧೦,೪೮,೫೭೬ (ಹತ್ತು ಲಕ್ಷದ ನಲವತ್ತೆಂಟು ಸಾವಿರದ ಐದುನೂರ ಎಪ್ಪತ್ತಾರು) ಆಗುತ್ತದೆ. ಅದಕ್ಕೂ ಮುಂಚಿನ ಐದು ತಲೆಮಾರುಗಳನ್ನು ಒಳಹೊಕ್ಕು ನೋಡಿದರೆ ನಿಮ್ಮ ಜನನಕ್ಕೆ ಕಾರಣರಾಗಿ ಸಂತತಿಯ ಪುನರುತ್ಪತ್ತಿಯ ಕೈಂಕರ್ಯ ಕೈಗೊಂಡವರ  ಪುರುಷ ಮತ್ತು ಮಹಿಳೆಯರ ಸಂಖ್ಯೆ ಕಡಿಮೆಯಿಲ್ಲವೆಂದರೂ ೩೩,೫೫೪,೪೩೨ (ಮೂರು ಕೋಟಿ ಮೂವತ್ತೈದು ಲಕ್ಷದ ಐವತ್ತುನಾಲ್ಕು ಸಾವಿರದ ನಾಲ್ಕು ನೂರ ಮೂವತ್ತೆರಡು) ಇರತ್ತಿತ್ತು. ಹೀಗೆಯೇ ಮೂವತ್ತು ತಲೆಮಾರುಗಳಷ್ಟು ಹಿಂದೆ ಸಾಗಿದರೆ ನಿಮ್ಮ ಪೂರ್ವಜರ ಸಂಖ್ಯೆ..ನೆನಪಿನಲ್ಲಿಡಿ ಅವರು ನಿಮ್ಮ ದಾಯಾದಿಗಳಲ್ಲ ಅಥವಾ ನಿಮ್ಮ ಚಿಕ್ಕಪ್ಪ-ಚಿಕ್ಕಮ್ಮ/ದೊಡ್ಡಪ್ಪ-ದೊಡ್ಡಮ್ಮ ಮತ್ತವರ ಸಹೋದರ ಸಂಭಂದಿಗಳಲ್ಲ ಆದರೆ ಕೇವಲ 'ತಂದೆ-ತಾಯಿ'ಗಳು ಮತ್ತವರ 'ತಂದೆ-ತಾಯಿ'ಗಳು ಮತ್ತವರ 'ತಂದೆ-ತಾಯಿ'ಗಳು........ಮತ್ತವರ ತಂದೆ-ತಾಯಿ.....ಹೀಗೆ ನಿಮ್ಮ ಜನ್ಮಕ್ಕೆ ಕಾರಣರಾದ ವರಸೆಯಲ್ಲಿರುವವರ ಸಂಖ್ಯೆ ನೂರು-ಕೋಟಿಗೂ ಅಧಿಕ; ನಿಖರವಾಗಿ ಹೇಳಬೇಕೆಂದರೆ ಅದು ೧,೦೭,೩೭,೪೧,೮೨೪ (ನೂರಾ ಏಳು ಕೋಟಿ ಮೂವತ್ತೇಳು ಲಕ್ಷ ನಲವತ್ತೊಂದು ಸಾವಿರದ ಎಂಟುನೂರ ಇಪ್ಪತ್ತನಾಲ್ಕು).  ಹೀಗೆಯೇ ಅರತ್ತನಾಲ್ಕು ತಲೆಮಾರುಗಳಷ್ಟು ಹಿಂದೆ ಸಾಗಿ ರೋಮನ್ನರ ಕಾಲಕ್ಕೆ ಹೋದರೆ ನಮ್ಮ ಹುಟ್ಟಿಗೆ ಕಾರಣರಾದವರ ಸಂಖ್ಯೆ ೧,೦೦೦,೦೦೦,೦೦೦,೦೦೦,೦೦೦,೦೦೦ (ಒಂದು ಮಹಾಶಂಖ ಅಂದರೆ ಒಂದು ಅಕ್ಷೋಹಿಣಿಗಿಂತ ಸಾವಿರ ಪಟ್ಟು ಅಧಿಕ ಅಥವಾ ನಮ್ಮ ಮಾರ್ಡನ್ ಕನ್ನಡದಲ್ಲಿ ಹೇಳಬೇಕೆಂದರೆ 'ಬಿಲಿಯನ್-ಬಿಲಿಯನ್' ಅಥವಾ ನೂರು ಕೋಟಿ ಬಿಲಿಯನ್ನುಗಳು) - ಈ ಸಂಖ್ಯೆ ಈ ಭೂಗೋಳದ ಮೇಲೆ ಎಲ್ಲ ಕಾಲಕ್ಕೂ ವಾಸಿಸಿದ ಒಟ್ಟು ಜನಸಂಖ್ಯೆಗಿಂತ ಸಾವಿರಾರು ಪಟ್ಟು ಅಧಿಕ.

    ಆದ್ದರಿಂದ ನಮ್ಮ ಲೆಕ್ಕಚಾರದಲ್ಲಿ ಎಲ್ಲೋ ಏನೋ ಎಡವಟ್ಟಾಗಿದೆ.......ಮತ್ತು ಅದಕ್ಕೆ ಉತ್ತರ..................????
===========================================================================================

ವಿ.ಸೂ: ಇದು ಗೆಳೆಯ ಶ್ರೀಕರ್ ಅವರು ಮಿಂಚಂಚೆಯಲ್ಲಿ ಕಳುಹಿಸಿದ ಇಂಗ್ಲೀಷ್ ಚುಟುಕದ ಕನ್ನಡ ಅನುವಾದ
 

Rating
No votes yet

Comments