ವ್ಯಾಟಿಕನ್ ನಿಯಮ

ವ್ಯಾಟಿಕನ್ ನಿಯಮ

ಇತ್ತೀಚೆಗೆ ಕ್ರೈಸ್ತ ಧರ್ಮದ ಜಗದ್ಗುರು ಪೋಪ್ ರವರನ್ನು ಭೇಟಿಯಾಗಲು ಬ್ರಿಟನ್ ದೇಶದ ಕೆಲವು ಮಂತ್ರಿಗಳು ಹೋಗಿದ್ದರು. ಪೋಪ್ ಒಬ್ಬ ವಿಶ್ವದ ಗೌರವಾನ್ವಿತ ಮತ್ತು ಆದರಿಸಲ್ಪಡುವ ಧರ್ಮಗುರುಗಳು, ಹಾಗೆಯೇ head of state ಸ್ಥಾನವನ್ನು ಹೊಂದಿರುವವರು ಸಹ. ಇವರನ್ನು ಭೇಟಿಯಾಗಲು ಮಂತ್ರಿ ಮಹೋದಯರು, ಗಣ್ಯರು ಹೋಗುವುದು ಸಹಜವೇ. contraception (ಗರ್ಭನಿರೋಧಕ) ಬಳಕೆಯಿಂದ ಹಿಡಿದು climate change ವರೆಗೆ ಚರ್ಚಿಸಲು ಪೋಪ್ ರನ್ನು ಭೇಟಿಯಾಗುತ್ತಾರೆ ಜನ.   ಪೋಪ್ ರನ್ನು ಭೇಟಿಯಾದ ಬ್ರಿಟಿಷ ತಂಡದ ಕುರಿತು ನನ್ನ ಆಸಕ್ತಿ ಏನೆಂದರೆ, ತಂಡದಲ್ಲಿ ‘ಸಯೀದ ಹುಸೇನ್ ವಾರ್ಸಿ’ ಎನ್ನುವ ಮುಸ್ಲಿಂ ಮಹಿಳೆ ಸಹ ಇದ್ದರು. ಈಕೆ ಬ್ರಿಟಿಷ್ ಮಂತ್ರಿಮಂಡಲದ ಏಕೈಕ ಮುಸ್ಲಿಂ ಮಹಿಳಾ ಸಚಿವೆ. ವಾರ್ಸಿ ಪೋಪ್ ರನ್ನು ಕಾಣಲು ಹೋಗುವಾಗ vatican protocol ಪ್ರಕಾರ ಕಪ್ಪು ವಸ್ತ್ರ ಮತ್ತು ಸ್ಕಾರ್ಫ್ ಧರಿಸಿದ್ದರು. ಇದು ವಿಶ್ವದ ಅತಿ ಚಿಕ್ಕ ದೇಶವಾದ ಸುಮಾರು ೧೧೦ ಎಕರೆ ವಿಸ್ತೀರ್ಣದ   ವ್ಯಾಟಿಕನ್ ನ ನಿಯಮ.

ವ್ಯಾಟಿಕನ್ ಕ್ರೈಸ್ತರ ಅತ್ಯಂತ ಪವಿತ್ರ ಕ್ಷೇತ್ರ. ತೋಚಿದ ರೀತಿಯ ಉಡುಗೆ ತೊಡುಗೆ ಸಲ್ಲದು. ಶಿಷ್ಟಾಚಾರಗಳು ಎಲ್ಲೆಲ್ಲಿ ಅವಶ್ಯಕವೋ ಅವುಗಳನ್ನ ಗೌರವಿಸಿ,  ಅನುಸರಿಸಬೇಕು. ಈ ತೆರನಾದ ನಿಯಮಗಳು ಯಾವುದೇ ಸಮಾಜ ಅಥವಾ ಸಂಸ್ಕೃತಿಗಳಲ್ಲಿದ್ದರೆ ಅವುಗಳಿಗೆ ಬೇರೆಯೇ ತೆರನಾದ ಅರ್ಥ ಕೊಟ್ಟು ಟೀಕಿಸಬಾರದು. ನಮಗೊಂದು ನ್ಯಾಯ, ಪರರಿಗೊಂದು ನ್ಯಾಯ, ಈ ಬೇಧ ಭಾವ ಉದ್ಭವಿಸಿದಾಗ ಸಹಜವಾಗಿಯೇ ಸಂಘರ್ಷಕ್ಕೆ ಹಾದಿ ಮಾಡಿ ಕೊಡುತ್ತದೆ. ಕ್ರೈಸ್ತರ ಪವಿತ್ರ ಕ್ಷೇತ್ರದಂತೆಯೇ ಇಸ್ಲಾಮಿನ ಎರಡು ಪವಿತ್ರ ಕ್ಷೇತ್ರ ಗಳಾದ ಮಕ್ಕಾ ಮತ್ತು ಮದೀನಾ ನಗರಗಳು ಸೌದಿ ಅರೇಬಿಯಾದಲ್ಲಿವೆ. ವಿಶೇಷವೇನೆಂದರೆ ಕೇವಲ ಮಕ್ಕಾ, ಮದೀನ ಮಾತ್ರ ಪವಿತ್ರ ನಗರಗಳಲ್ಲ, ಬದಲಿಗೆ ಇಡೀ ಸೌದಿ ಅರೇಬಿಯಾ ದೇಶವೇ ಇಸ್ಲಾಮಿನ ಪುಣ್ಯ ಭೂಮಿ. ಹಾಗೆಂದು ಮುಸ್ಲಿಂ ವಿಧ್ವಾಂಸರ ಅಭಿಪ್ರಾಯ. ಮಕ್ಕಾ, ಮದೀನ ನಗರಗಳಿಗೆ ಮುಸ್ಲಿಮೇತರರು ಬರುವ ಹಾಗಿಲ್ಲ, ಹಾಗೆಯೇ ಸೌದಿ ಅರೇಬಿಯಾ ದೇಶಕ್ಕೆ ಬರುವವರೂ ವಸ್ತ್ರದ ವಿಷಯದಲ್ಲಿ modesty ತೋರಿಸಬೇಕು. ಮಹಿಳೆಯರು ನೀಳ, ಕಪ್ಪು ಬಟ್ಟೆ ಧರಿಸಬೇಕು. ಇದಕ್ಕೆ ಹಿಜಾಬ್ ಎನ್ನುತ್ತಾರೆ. ಸ್ವಾರಸ್ಯವೇನೆಂದರೆ ವ್ಯಾಟಿಕನ್ ವಿಷಯದಲ್ಲಿ ತೋರಿಸುವ ಸಜ್ಜನಿಕೆ ಮುಸ್ಲಿಂ ಧರ್ಮೀಯ ಆಚರಣೆಗೆ ಇಲ್ಲದಿರುವುದು. ಸೌದಿ ಅರೇಬಿಯಾದ ಉಡುಗೆ ಮತ್ತು ಇತರೆ ನಿಯಮಗಳ ಬಗ್ಗೆ ಟೀಕೆಗಳು ಕೇಳಿ ಬರುತ್ತಲೇ ಇರುತ್ತವೆ. ಭಾವನೆಗಳನ್ನು ಮನ್ನಿಸುವ ಔದಾರ್ಯ ಎಲ್ಲರಿಗೂ ಏಕೆ  ಲಭ್ಯವಲ್ಲ ಎನ್ನುವುದು ಒಂದು ದೊಡ್ಡ ಪ್ರಶ್ನೆ.        

 
Rating
No votes yet

Comments