ಪದಚೇಷ್ಟೆ, ತೋರಿಕೆಯ ತುರಿಕೆ.

ಪದಚೇಷ್ಟೆ, ತೋರಿಕೆಯ ತುರಿಕೆ.

ಕಳೆದ ೬-೭ ತಿಂಗಳುಗಳಲ್ಲಿ ನಾನು ಕೆಲವು ಸಾಲುಗಳನ್ನು ಬರೆದಿರುವೆ. ಈ ಸಾಲುಗಳಲ್ಲಿ ಅರ್ಥ ಕಡಿಮೆಯಿದ್ದು , ಪದಚೇಷ್ಟೇಯೇ (wordplay) ಜಾಸ್ತಿಯಿದೆ. ಬಹಳ ಇಷ್ಟ-ಕಷ್ಟ ಪಟ್ಟು ಖುಶಿ ತುಂಬಿರುವ ಸಾಲುಗಳನ್ನು ಬರೆದಿದ್ದೇನೆ. ನೀವು ಓದಲೇಬೇಕು.

# ಅವನ ಅಪ್ಪ-ಅಮ್ಮನಿಗೆ ಮೊದಲನೇ ಮಗನಾತ. ಪ್ರೀತಿಯಿಂದ ಇಟ್ಟ ಹೆಸರು ಬಂಟಿ. ಇನ್ನೊಂದು ಮಗುವಿಗಾಗಿ ಬಹಳ ಸರ್ಕಸ್ ಮಾಡಿ ಸೋತರು. ಬೇಸರದಿಂದ ಮತ್ತೆ ಇವನಿಗೆ ಇಟ್ಟ ಹೆಸರು, ಒಬ್ಬಂಟಿ.

# ನನ್ನ ಕಂಡೊಡನೆಯೇ ಟೀ-ಅಂಗಡಿಯ ಅನ್ವರ್ ಕೂಗಿ ಹೇಳುತ್ತಾನೆ "ವನ್ ಟೀ" ಎಂದು. ಆ ಹೈದ ಲೋಕಕ್ಕೆ ಸಾರುತ್ತಿರುವಂತಿದೆ ನಾನು ಒಂಟಿ ಎಂದು.

# ಕೀಬೋರ್ಡು/ ಕೀಪ್ಯಾಡು ಅಬ್ಬರದಲ್ಲಿ ಮೂಲೆಗುಂಪಾಗಿರುವ hero pens, pilot pens, ball pens ಶೋಕದಲ್ಲಿ ಏನೆಂದು ಹಾಡುತ್ತಿವೆ?.................ಪೆನ್ನಲ್ಲವೇ ನಿಮ್ಮನೆಲ್ಲ ಪೊರೆದ ತಾಯಿ, ಪೆನ್ನಿಂದಲ್ಲವೇ ನೀವೆಲ್ಲ S.S.L.C/P.U.C ಬರೆದವರು, ಟೈಪು ಟೈಪೆಂದೇತಕೆ ಮುಗಿಬೀಳುವರು, ಕೈಬರಹವಿಲ್ಲದ ಗಾವಿಲರು.

# ಸರ್ಕಲ್ ಏರಿಯ ಗೊತ್ತು, ಟ್ರೈಯಾಂಗಲ್ ಏರಿಯ ಗೊತ್ತು, ಎಲ್ಲಿಪ್ಸ್ ಏರಿಯ ಗೊತ್ತು, ಹೈಪರ್ ಬೋಲ ಏರಿಯ ಗೊತ್ತು, ಆದರೆ ಬಡ್ಡಿಮಗಂದು ಈ ಬೆಂಗಳೂರು ಎರಿಯಗಳು ಮಾತ್ರ .....

# ಊರು ತುಂಬಾ ಮರ, ಇಡೀ ಬೆಂಗಳೂರು ವನವೇ ಆಗಿತ್ತು. ಈಗ ಮರ-ಗಿರ ಏನು ಇಲ್ಲಾ, ಇಡೀ ಬೆಂಗಳೂರು ಅವ್ನೌವ್ವನ್ ವನ್-ವೇ ಆಗಿದೆ.

# ಈ ಟ್ರಾಫಿಕ್ನೊಳಗೆ ಮೆಜೆಸ್ಟಿಕ್ ತಲುಪುವಷ್ಟರಲ್ಲಿ ಬಂತು ರಕ್ತಕಣ್ಣೀರು. ಅದಕ್ಕಾಗಿಯೇ ಇರಬೇಕು ಮೆಜೆಸ್ಟಿಕ್ ಹೋಗುವ ಬಸ್ಸಿನ ಮೇಲೆ ಬರೆದಿದೆ "ಕೆಂ. ಬ. ನಿ" ಎಂದು.

# ಸೆಹ್ವಾಗನ "no feet movement" ಬ್ಯಾಟಿಂಗ್ ಶೈಲಿಯಿಂದ ಆತ ಮತ್ತೆಮತ್ತೆ ಔಟಾಗುತಿರುವುದನ್ನು ನೋಡಿ, ಬಸವಣ್ಣನವರು ಏನು ಬುದ್ದಿಮಾತನ್ನು ಹೇಳುತ್ತಿದ್ದರು ?........... ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ.

# ಊಟ-ಗೀಟ, ಹೆಣ್ಣು-ಗಿಣ್ಣು ಕೇಳಿದ್ದೀನಿ, ಇದ್ಯಾವುದೋ SOPA-PIPA ಸುಡುಗಾಡು.

# ಎಲ್ಲಿ ಕಾಮ, ಹಾಕಬೇಕು, ಎಲ್ಲಿ, ಕಾಮ, ಹಾಕಬಾರದು ? ಈ ಕಾಮಸೂತ್ರ ಕಷ್ಟಕಷ್ಟ.

# ನಮ್ಮ ಹುಡುಗ ಬಹಳ ಡೈನಾಮಿಕ್ಕು , ಸ್ಟೇಷನರಿ ಶಾಪ್ ಇಟ್ಟುಕೊಂಡಿದ್ದಾನೆ.

# ಇರಲೇ ಬೇಕು ಗುಂಡಿಗೆ, ಇಲ್ಲದಿದ್ದರೆ ನೇರ ಗುಂಡಿಗೇ.

# ಒಬ್ಬ ಶಿವಾಜೀನಗರದ ಮುಸ್ಲಿಮ್ ಹುಡುಗ, ಹೆಂಗಸಿನೊಬ್ಬಳ ಬಳಿ ಆಕೆಯ ಮಗಳಾದ ಶೀಲಾಳ ಬಗ್ಗೆ ದೂರು ನೀಡುತ್ತಿದ್ದಾನೆ. " ಆಂಟೀ, ನಿಮ್ದುಕ್ಕೆ ಶೀಲಾ ಇಲ್ಲಾ .." ಫಟಾಕ್. ಕಪಾಳಮೋಕ್ಷ.

# ಸೆಮೀಕಂಡಕ್ಟರ್ ಗಳ ಬಗ್ಗೆ ಓದಿ ಓದಿ ಕೊನೆಗೆ ಏನ್ಸಿಕ್ತು ? ಬಾರಿ ಚಿಪ್ಪು.(chip)

 

Comments