ಸಾತೋಡಿಗೊಂದು ಅನಿರೀಕ್ಷಿತ ಪ್ರವಾಸ

ಸಾತೋಡಿಗೊಂದು ಅನಿರೀಕ್ಷಿತ ಪ್ರವಾಸ

ಸಾತೋಡಿ ಜಲಪಾತ



ನಿನ್ನೆ 15-2-2012 ಚಂದನ ವಾಹಿನಿಯ ಮಧುರ ಮಧುರವೀ ಮಂಜುಳಗಾನ ಕಾರ್ಯಕ್ರಮದ ನೃತ್ಯ ತಂಡಗಳ ಎರಡನೇ ಸುತ್ತಿನ  (ಮೊದಲ ಸುತ್ತಿನಲ ಆಯ್ಕೆ ಕೆಲವು ದಿನಗಳ ಹಿಂದೆ  ಮುಗಿದು ಆಯ್ಕೆಯಾಗಿದ್ದರು.) ಆಯ್ಕೆ ಬಯಸಿ ಯಲ್ಲಾಪುರದ ವಿಶ್ವದರ್ಶನ ಶಾಲೆಗೆ ಹೋದ ಸಿದ್ದಾಪುರದ ಸಿದ್ದಿವಿನಾಯಕ ಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿನಿಯರ ಜೊತೆ ಪ್ರಸಾದನಕ್ಕಾಗಿ ಹೋಗಿದ್ದೆ. ಒಟ್ಟ 12 ನೃತ್ಯ ತಂಡಗಳು ಆಯ್ಕೆ ಬಯಸಿ ಬಂದಿದ್ದವು. ನೃತ್ಯ ತಂಡಗಳ ಆಯ್ಕೆ ಪ್ರಕ್ರಿಯ ಸುಮಾರು ಮಧ್ಯಾಹ್ನ ಒಂದುಗಂಟೆ ಸುಮಾರಿಗೆ ಮುಗಿದು ತಂಡದ ಸದಸ್ಯರು ಮಹೇಶ್ ಜೋಷಿಯವರನ್ನು ಭೆಟ್ಟಿಯಾಗಿ ಯಲ್ಲಾಪುರದಲ್ಲಿ ಊಟ ಮುಗಿಸಿ ನಂತರ 3ಗಂಟೆಗೆ ಸಾತೊಡಿ ಜಲಪಾತ ನೋಡಲು ಹೋದೆವು.

ಉತ್ತರ ಕನ್ನಡ ಜಿಲ್ಲೆಯ ದಿಗ್ಗಿಯಲ್ಲಿ ಹುಟ್ಟುವ ಕಾಳಿ ನದಿ ಉತ್ತರ ಕನ್ನಡದ ಸುಮಾರು 4ಲಕ್ಷಜನರ ಜೀವನದಿ. ಮಲೆನಾಡಿನಲ್ಲಿ ಹುಟ್ಟುವ ಹೆಚ್ಚಿನ ನದಿಗಳಲ್ಲಿ ಸಮುದ್ರ ಸೇರುವುದಕ್ಕಿಂತ ಮುಂಚೆ ಜಲಪಾತ ಉಂಟಾಗುವಂತೆ ಈ ನದಿಗೂ ಯಲ್ಲಾಪುರ ತಾಲ್ಲೂಕಿನ ದೇಹಳ್ಳಿ ಗ್ರಾಮ ಪಂಚಾಯ್ತ ವ್ಯಾಪ್ತಿಯ  ಸಾತೋಡಿ ಎಂಬಲ್ಲಿ  ಸುಮಾರು 15 ಮೀಟರ್ (ಅಥವಾ ಸುಮಾರು 49.2 ಅಡಿ)   ಜಲಪಾತ ಇದೆ. ಯಲ್ಲಾಪುರದಿಂದ ಹುಬ್ಬಳ್ಳಿಗೆ ಹೋಗುವ ಮಾರ್ಗದಲ್ಲಿ ಸುಮಾರು 2ಕಿ.ಮೀ. ಕ್ರಮಿಸಿದರೆ ಎಡಭಾಗದಲ್ಲಿ ಸಾತೋಡಿಗೆ ಹೋಗುವ ದಾರಿ ಎಂಬ ಶಿರೋನಾಮೆ ಹೊಂದಿರುವ ಕಮಾನು ಕಾಣುತ್ತದೆ. ಈ ಮಾರ್ಗವಾಗಿ ಸಾಗಿ ಸುಮಾರು 10-12 ಕಿ. ಮೀ ಸಾಗಿದಂತೆ ಗಣೇಶಗುಡಿ (ಸೂಪಾ ಡ್ಯಾಂ ಹತ್ತರದ ಗಣೇಶಗುಡಿ ಇದಲ್ಲ)  ಎಂಬ ಊರೂ ಗಣೇಶ ದೇವರ ಗುಡಿಯೂ ಕಾಣುತ್ತದೆ. ನಂತರ

ಗ್ರಾಮ ಪಂಚಾಯ್ತಿಯ ಮುಖ್ಯ ಕೇಂದ್ರವಾದ ದೇಹಳ್ಳಿ ಬರುತ್ತದೆ. ಇಲ್ಲಿ ವಾಹನದಲ್ಲಿ ಹೋಗುವವರಿಗೆ ಚೆಕ್ ಪೋಸ್ಟ್ ಒಂದು ಸಿಗುತ್ತದೆ. ಸಂಜೆ 5 ಗಂಟೆಯ ನಂತರ ಪ್ರವೇಶವಿಲ್ಲ ಎಂಬ ಫಲಕವೂ ಕಾಣಬರುತ್ತದೆ.  ಇಲ್ಲಿ ಪಂಚಾಯ್ತಿಯವರಿಗೆ ತೆರಬೇಕಾದ ತೆರಿಗೆ ಪಾವತಿಸಿ 7-8 ಕಿ. ಮೀ. ಕ್ರಮಿಸಿದಾಗ ಡಾಂಬರು ರಸ್ತೆ ಮುಗಿದು ಹಳ್ಳಿಯ ಜಲ್ಲಿ ರಸ್ತೆಯಲ್ಲಿ ನಾಲ್ಕು ಕಿ.ಮೀ ಸಾಗಬೇಕು. ಈ ರಸ್ತೆಯಲ್ಲಿ 3 ಕಿ. ಮೀ. ಸಾಗಿದಂತೆ ಕೊಡಸನ ಹಳ್ಳಿ ಡ್ಯಾಂನ ಹಿನ್ನೀರಿನ ಹರವು ಕಾಣಸಿಗುತ್ತದೆ. ಹಿನ್ನೀರಿನ ಅಂಚಿನಲ್ಲಿ ಸುಮಾರು 30 ಅಡಿ ಕಡಿದಾದ ಎತ್ತರದಲ್ಲಿ ನೀರಿಗೆ ಸಮಾನಾಂತರವಾಗಿ 2 ಕಿ.ಮೀ.ಸಾಗಬೇಕು. ಇದು ದ್ವಿಚಕ್ರಿಗಳಿಗೆ ನೋಡುತ್ತಾ ಸಾಗುವುದೇ ಒಂದು ಅನುಭವ ನೀಡುವುದರಲ್ಲಿ ಸಂದೇಹವಿಲ್ಲ. (ಚತುಶ್ಚಕ್ರಿಗಳು ನೋಡಲು ಈ ಭಾಗ್ಯದಿಂದ ಸ್ವಲ್ಪಮಟ್ಟಿಗೆ ವಂಚಿತರೇ ಸರಿ.) ನಂತರ ವಾಹನಗಳನ್ನು ನಿಲ್ಲಿಸಿ ಸ್ವಾಗತ ಕಮಾನಿನ ಮೂಲಕ ಕಾಲ್ನಡಿಗೆಯಲ್ಲಿ ಪಯಣ ಆರಂಭಿಸಿದರೆ, ಮೊದಲು ಜೋಡಿ ಉಯ್ಯಾಲೆ, ಸನ್ನೆ ಮಣೆಗಳು, ತಿರುಗು ಮಂಚ, ಹಾಗೆಯೇ ಸಿಮೆಂಟಿನಿಂದ ಕಟ್ಟಿದ ಖುರ್ಚಿಗಳು, ಕುಡಿಯು ನೀರಿನ ವ್ಯವಸ್ಥೆಗಾಗಿ ಮಾಡಿದ್ದ ನೀರಿನ ಟ್ಯಾಂಕ್ ಗಳು (ಈಗ ನೀರಿನ ವ್ಯವಸ್ಥೆ ಹಾಳಾಗಿದೆ) ಎಲ್ಲವನ್ನೂ ದಾಟಿ ಮುಂದೆ ಸುಮಾರು ಅರ್ಧ ಕಿ ಮೀ ಸಾಗಿದಂತೆ ಎಲ್ಲ ಕಡೆ ಕಟ್ಟುವಂತೆ ಇಲ್ಲಿಯೂ ಕಟ್ಟಿರುವ ವೀಕ್ಷಣಾ ಗೋಪುರ (ಇದನ್ನು ಹತ್ತಿ ನೋಡಿದರೆ ಜಲಪಾತವಾಗಲೀ, ನದಿ ಕಣಿವೆಯಾಗಲಿ  ಯಾವುದೇ ಉತ್ತಮ ದೃಶ್ಯ ಕಾಣಲಿಲ್ಲ) ಇದೆ. ಇದರ ನಂತರ ಪಕ್ಕದಲ್ಲಿಯೇ ಸಾಗಿ ಬರುವ ನೀರಿನ ಕಾಲುವೆಯ ಮೂಲದೆಡೆಗೆ ಸಾಗಿ ಮುಕ್ಕಾಲು ಕಿ.ಮೀ. ಸಾಗಿದರೆ (ಅಲ್ಲಲ್ಲಿ ಪುಟ್ಟ ಪುಟ್ಟ ಸುಂದರ ಕಾಲು ಸೇತುವೆಯ ನಿರ್ಮಾಣ ಮಾಡಿದ್ದಾರೆ, ಹಾಗೆಯೇ ಚಿಕ್ಕದೊಂದೆರೆಡು ವಿಶ್ರಾಂತಿ ಕುಟೀರಗಳೂ ಇವೆ)  ಜಲಪಾತ ಕಣ್ಣಿಗೆ ಗೋಚರಿಸುತ್ತದೆ.

ನದಿ ಪಾತಳಿಯ ಮೂಲಕವೇ ಸುಮಾರು ನೂರು ಮೀಟರ್  ದೂರದ ವರೆಗೆ ಕಲ್ಲು ಬಂಡೆಗಳನ್ನು ಹತ್ತುತ್ತಾ ಇಳಿಯುತ್ತ ಸುತ್ತಿ ಸುತ್ತಿ ಸಾಗಿದರೆ ಜಲಪಾತದ ಸನಿಹದ ವರೆಗೂ ಹೋಗಬಹುದು. ಇಲ್ಲಿ ನೀರಿನ ಹರಿವು ಕೊರೆದು ಕಡೆದು ಸೃಷ್ಟಿಸಿದ ಶಿಲಾಕೃತಿಗಳು  ನೋಡುವಂತಿವೆ. ಜಲಪಾತದ ತಳದಲ್ಲಿ ನೀರಿನ ಹರಿವಿಗೆ ಮರದ ಹಲಗೆಗಳಿಂದ ವಡ್ಡೊಂದನ್ನು (ನೀರಿಗೆ ತಡೆ) ನಿರ್ಮಿಸಿ ರೈತಾಪಿಗಳು ತಮ್ಮ ಬೆಳೆಗೆ ಮೇಲೆ ಹೇಳಿದ ಪುಟ್ಟ ಕಾಲುವೆಯ ಮೂಲಕ ನೀರನ್ನು ಹಾಯಿಸಿಕೊಂಡಿದ್ದಾರೆ.ಹೀಗೆ ನಿರ್ಮಿಸಿದ ವಡ್ಡಿನಲ್ಲಿ ನಿಂತ ನೀರಿನಲ್ಲಿ ಜಲಪಾತದ ಪ್ರತಿಬಿಂಬವನ್ನೂ ಸಹ ಕಾಣಬಹುದು. ಇದು ನಾನು ನೋಡಿದ ಬೇರಾವ ಜಲಪಾತದಲ್ಲಿಯೂ ನನಗೆ ದೊರೆತಿರಲಿಲ್ಲ.  ಜಲಪಾತದ ರಮಣೀಯತೆ, ರೌದ್ರತೆ ಎರಡೂ ಸಹ ಅಕ್ಷರಕ್ಕೆ ಇಳಿಸುವುದು ಕಷ್ಟಸಾಧ್ಯ ಇದು ಕೇವಲ ಅನುಭವ ವೇದ್ಯ. ಅದಕ್ಕಾಗಿ ಎಲ್ಲವುಗಳ ನೆನಪಿಗಾಗಿ ಒಂದಿಷ್ಟು ಚಿತ್ರಗಳನ್ನು ಸೆರೆ ಹಿಡಿದು ತಂದಿದ್ದೇನೆ. ಅದನ್ನಿಲ್ಲಿ ಇಟ್ಟಿದ್ದೇನೆ.

ಪುನಃ ಹಿಂದಿರುಗಿ ಬರುವಾಗ (ಹೋಗುವಾಗ ಜಲಪಾತವೇ ನಮ್ಮ ಗುರಿಯಾದುದರಿಂದ) ಅಲ್ಲಿನ ಅರಣ್ಯ ನಮ್ಮ  ಗಮನ ಸೆಳೆದುದರಲ್ಲಿ ಅನುಮಾನವಿಲ್ಲ. ಎಲ್ಲ ದಟ್ಟಡವಿಯಂತೆ ಎಲೆ ನೋಡಿ ಗುರುತಿಸಲಾಗದಷ್ಟು ಎತ್ತರೆತ್ತರದ ಮರಗಳು, ಉರುಳಿಬಿದ್ದ ದಪ್ಪನೆಯ ಉದ್ದುದ್ದದ ಮರದ ದಿಮ್ಮಿಗಳು, ಕಟ್ಟೆಬಂದು (ಆಯುರ್ಮಾನ ತೀರಿದ) ಒಣಗಿ ನಿಂತ ಬಿದಿರಿನ ಮಟ್ಟಿಗಳು, ಎತ್ತರೆತ್ತರದ ಬಗಿನೆ ಮರಗಳು, ಅಲ್ಲಲ್ಲಿ ಮೈತುಂಬಾ ಮುಳ್ಳಿನ ಹೊದಿಕೆ ಹೊದ್ದುಕೊಂಡ ಬೆತ್ತದ ಗಿಡಗಳು, ಗರಿಗೆದರಿ ನಿಂತ ದಡಸಲು ಗಿಡಗಳು (ತೆಂಗಿನ ಗರಿಯಂತೆ ಕಡ್ಡಿಗಳನ್ನು ಹೊಂದಿದ ಎಲೆಗಳುಳ್ಳವುಗಳು, ಕಡ್ಡಿ ತೆಂಗಿನ ಕಡ್ಡಿಗಳಿಗಿಂತ ದಪ್ಪ ಮತ್ತು ಗಡುಸಾಗಿರುವುದರಿಂದ ರೈತರು ಇದರಿಂದ ಪೊರಕೆಗಳನ್ನು ತಯಾರಿಸಿ ಗದ್ದೆ, ಕಣ, ಅಂಗಳ, ಕೊಟ್ಟಿಗೆ ಗಳನ್ನು ಗುಡಿಸಲು ಬಳಸುತ್ತಾರೆ) ಪಕ್ಕದಲ್ಲಿಯೇ ಹರವಾದ ನೀರು, ಇನ್ನೊಂದು ಪಕ್ಕದಕಾಲುವೆಯಲ್ಲಿ ನಮ್ಮ ಜೊತೆಗೆ ಹರಿದು ಬರುವ ಜುಳು ಜುಳು ನೀರು, ಎಲ್ಲೆಲ್ಲಿಯೂ ಹೂಬಿಟ್ಟಿರುವ ಕರಿಗುರಿಗೆ, ಲಂಟಾನಗಳ ಪೊದೆ,  ಹೀಗೆ ಸಾಗಿಬರುವಾಗ ಗಂಟೆ ಆರು ದಾಟಿತ್ತು. ಪುನಃ ವಾಹನ ಏರಿದ ಮೇಲೆ ಕಡಿದಾದ ಗುಡ್ಡದ ರಸ್ತೆಯೇ ನಮ್ಮ ಸರ್ವಸ್ವ ನಂತರವಂತೂ ವಾಹನದ ಬೆಳಕು ಬೀಳುವ ಜಾಗವಷ್ಟೇ ನಮ್ಮ ಪ್ರಪಂಚ. ಸಿದ್ದಾಪುರ ತಲುಪಿದ ನಂತರ ವಿದಾಯ ಹೇಳಿ ನಮ್ಮ ನಮ್ಮ ಪಾಡಿಗೆ ನಾವು ನಾವು. ಹೀಗೆ ಪುಟಾಣಿಗಳ ದೆಸೆಯಿಂದ ನನಗೆ  ಅನಿರೀಕ್ಷಿತ ಪ್ರವಾಸ ಕೈಗೂಡಿತು

Rating
No votes yet

Comments