ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 8

ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 8

 

ಒಂದು ಹತ್ತು ನಿಮಿಷ ಮಾತಾಡುತ್ತಲೇ ಇದ್ದಳು. ಒಂದು ಸಲ ನನ್ನ ಕಡೆ ನೋಡಿ ನಕ್ಕು ಮತ್ತೆ ಫೋನಿನಲ್ಲಿ ಬ್ಯುಸಿ ಆಡಲು. ಬಿಸಿ ಇದ್ದ ಕಾಫಿ ತಣ್ಣಗಾಗಿತ್ತು. ತಣ್ಣಗಾದ ಮೇಲೆ ಇನ್ನು ಕೆಟ್ಟದಾಗಿತ್ತು. ಇದಕ್ಕೆ ಅನ್ಯಾಯವಾಗಿ ಅಷ್ಟು ದುಡ್ಡು ಕುಕ್ಕಬೇಕಲ್ಲ ಎಂದುಕೊಂಡು ನನ್ನ ಮೊಬೈಲ್ ತೆಗೆದು ಹಳೆಯ ಮೆಸೇಜ್ ಗಳನ್ನು ನೋಡುತ್ತಿದ್ದೆ. ಎಲ್ಲ ಪಾವನಿ ಕಳಿಸಿದ ಮೆಸೇಜ್ ಗಳೇ ಆಗಿತ್ತು. ಇವತ್ತು ಮನೆಗೆ ಹೋದ ಮೇಲೆ ಎಲ್ಲ ಡಿಲೀಟ್ ಮಾಡಬೇಕು ಎಂದು ಆಲೋಚಿಸುತ್ತಿದ್ದೆ. ಅಷ್ಟರಲ್ಲಿ ಪಾವನಿ ಟೇಬಲ್ ಬಳಿ ಬಂದಳು. ಏನಮ್ಮ ಆಯ್ತಾ ಬಾಯ್ ಫ್ರೆಂಡ್ ಜೊತೆ ಮಾತು ಎಂದೆ. ಅದಕ್ಕವಳು ಏನು ಎಂದಳು. ಅಲ್ಲ ಏನೋ ಬಾಯ್ ಫ್ರೆಂಡ್ ಬಗ್ಗೆ ಹೇಳ್ತಾ ಇದ್ಯಲ್ಲ ಮುಂದುವರಿಸು ಎಂದೆ.

ಸಾರೀ ಕಣೋ ತುಂಬಾ ಕಾಯಿಸಿಬಿಟ್ಟೆ ನನ್ನ ಫ್ರೆಂಡ್ ಒಬ್ಬಳು ಫೋನ್ ಮಾಡಿದ್ದಳು. ಅವಳಿಗೆನೋ ಪ್ರಾಬ್ಲಮ್ ಅಂತೆ ತುಂಬಾ ಅಳುತಿದ್ದಳು ಅದಕ್ಕೆ ಸಮಾಧಾನ ಮಾಡುತ್ತಿದ್ದೆ. ಹಾ ಈಗ ವಿಷಯಕ್ಕೆ ಬರುತ್ತೇನೆ. ತಕ್ಷಣ ನಾನು ಅಲ್ಲ ಪಾವಿ ನಿನಗೆ ಬಾಯ್ ಫ್ರೆಂಡ್ ಇದಾನೆ ಅಂದ್ಯಲ್ಲ ಅವನನ್ನೇ ಕರೆದುಕೊಂಡು ಹೋಗಿ ನಿನ್ನ ಟೀಮ್ ಲೀಡ್ ಜೊತೆ ಮಾತಾಡಿಸಬೇಕಿತ್ತು ಪ್ರಾಬ್ಲಮ್ ಸಾಲ್ವ್ ಅಗಿಬಿಡೋದು. ಅದಕ್ಕೆ ನನ್ನನ್ನು ಯಾಕೆ ಕರೆಸಿದೆ ಎಂದು ತಲೆ ತಗ್ಗಿಸಿಕೊಂಡು ಕಾಫಿ ಕಪ್ ನೋಡಿಕೊಂಡೆ ಅವಳಿಗೆ ಹೇಳಿದೆ. ಅದಕ್ಕವಳು ಒಂದು ಸಾರಿ ಜೋರಾಗಿ ನಕ್ಕು ಲೋ ಲೂಸು ನೀನು ನಂಬಿ ಬಿಟ್ಟೆಯ ನಾನು ನನ್ನ ಟೀಮ್ ಲೀಡ್ ಕೈಯಲ್ಲಿ ತಪ್ಪಿಸಿಕೊಳ್ಳಲು ಹಾಗೊಂದು ಸುಳ್ಳು ಹೇಳಿದೆ. ನನಗ್ಯಾವ ಬಾಯ್ ಫ್ರೆಂಡೂ ಇಲ್ಲ ಗರ್ಲ್ ಫ್ರೆಂಡೂ ಇಲ್ಲ ಎಂದು ತುಂಟ ನಗೆ ಬೀರಿದಳು.

ಆ ಮಾತು ಕೇಳುತ್ತಲೇ ಮತ್ತೆ ನನ್ನ ಉತ್ಸಾಹ ವಾಪಸ್ ಬಂತು. ಒಂದು ದೀರ್ಘ ಉಸಿರು ಬಿಟ್ಟು ಸರಿ ಬಿಡು ಹೇಗಿದ್ದರೂ ಅವನಿಗೆ ಹೇಳಿದೆಯಲ್ಲ ಇನ್ಯಾಕೆ ಯೋಚಿಸುತ್ತಿ ಎಂದಿದ್ದಕ್ಕೆ. ಅಲ್ಲ ಕಣೋ ನಾನು ಹಾಗೆಂದ ಮೇಲೆ ಎರಡು ದಿನ ಸುಮ್ಮನಿದ್ದು ಈಗ ಮತ್ತೆ ಶುರು ಮಾಡಿದ್ದಾನೆ. ನಿನ್ನ ಬಿಟ್ಟು ಇರಕ್ಕಾಗಲ್ಲ ನನ್ನ ಕೈಲಿ ನೀನೇನಾದರೂ ಒಪ್ಪದಿದ್ದರೆ ನಾನು ಬದುಕುವುದಿಲ್ಲ ಎನ್ನುತ್ತಿದ್ದಾನೆ. ನನಗೇಕೋ ಭಯ ಆಗುತ್ತಿದೆ. ಅದಕ್ಕೆ ನೀನೊಂದು ಸಾರಿ ನನ್ನ ಜೊತೆ ಬಂದರೆ ನೀನೆ ನನ್ನ ಬಾಯ್ ಫ್ರೆಂಡ್ ಎಂದು ಅವನಿಗೆ ಹೇಳಿ ನೀನೆ ಸ್ವಲ್ಪ ಬುದ್ಧಿ ಹೇಳು ಅವನಿಗೆ ಎಂದಳು.

ಆ ಹುಡುಗನ ಪರಿಸ್ಥಿತಿ ನೆನೆಸಿಕೊಂಡು, ಪಾವಿ ನಾನು ಅದೇ ಪರಿಸ್ಥಿತಿಯಲ್ಲಿದ್ದೀನಿ ಕಣೆ ಅಂದುಕೊಂಡೆ. ಅವಳು ನನ್ನನ್ನು ಬಾಯ್ ಫ್ರೆಂಡ್ ಆಗಿ ಬಾ ಎಂದು ಹೇಳಿದ್ದಕ್ಕೆ ನನ್ನಲ್ಲಿ ಇನ್ನಷ್ಟು ಉತ್ಸಾಹ ಚೈತನ್ಯ ಮೂಡಿ ಬಂತು. ಪಾವಿ ನಾನೇನೋ ನಿನ್ನ ಜೊತೆ ಬಂದು ಅವನ ಹತ್ತಿರ ಮಾತಾಡಬಹುದು ಆದರೆ ಅವನು ನಿನ್ನ ಟೀಮ್ ಲೀಡ್ ಅಂತೀಯ ನಾಳೆ ಕೆಲಸದಲ್ಲಿ ಏನಾದರೂ ತೊಂದರೆ ಮಾಡಿದರೆ ಏನು ಮಾಡುತ್ತೀಯ. ಅದಕ್ಕೆ ಒಂದು ಕೆಲಸ ಮಾಡು ನೀನು ಸೀದಾ ಹೋಗಿ ನಿನ್ನ ಪ್ರಾಜೆಕ್ಟ್ ಮ್ಯಾನೇಜರ್ ಬಳಿ ಮಾತನಾಡು. ಅದೇ ಸರಿಯಾದ ಮಾರ್ಗ. ಆಗ ನಿನ್ನ ಕೆಲಸಕ್ಕೂ ಯಾವುದೇ ತೊಂದರೆ ಇರುವುದಿಲ್ಲ ಎಂದೆ. ಅದಕ್ಕವಳು, ಹೌದು ಕಣೋ ನೀನು ಹೇಳಿದ್ದು ಸರಿ ಹಾಗೆ ಮಾಡ್ತೀನಿ. ಸರಿ ಈಗ ಏನ್ಮಾಡೋಣ ಇನ್ನು ಸಾಕಷ್ಟು ಸಮಯ ಇದೆ ಎಲ್ಲಾದರೂ ಹೋಗೋಣ ಎಂದಳು.

ನಾನು ಅವಳ ಆಫೀಸಿಗೆ ಬರುವಾಗ ಕಾವೇರಿ ಥಿಯೇಟರ್ ನಲ್ಲಿ "ರಂಗ್ ದೆ ಬಸಂತಿ" ಸಿನೆಮಾದ ಪೋಸ್ಟರ್ ನೋಡಿಕೊಂಡು ಬಂದಿದ್ದೆ. ಕೇಳಲೋ ಬೇಡವೋ, ಕೇಳಿದರೆ ಏನೆಂದು ಕೊಳ್ಳುತ್ತಾಳೋ ಎಂದುಕೊಂಡೆ ಪಾವಿ ಸಿನೆಮಾಗೆ ಹೋಗೋಣ ಎಂದೆ. ಹೋ ಒಳ್ಳೆ ಐಡಿಯಾ ಯಾವ ಸಿನೆಮಾಗೆ ಎಂದಳು. "ರಂಗ್ ದೆ ಬಸಂತಿ" ಎಂದೆ ಅದಕ್ಕವಳು. ಹೋದ ವಾರ ತಾನೇ ಫ್ಯಾಮಿಲಿ ಜೊತೆ ಹೋಗಿ ನೋಡಿಕೊಂಡು ಬಂದೆ ಕಣೋ ಇರ್ಲಿ ಪರವಾಗಿಲ್ಲ ಚೆನ್ನಾಗಿದೆ ಸಿನಿಮಾ ನಡೀ ಹೋಗೋಣ ಎಂದಳು. ಗಾಡಿಯಲ್ಲಿ ಬರುತ್ತಿದ್ದಾಗ ನಾನು ಕೇಳಿದೆ, ಪಾವಿ ನಿಜವಾಗಿಯೂ ನಿನಗೆ ಬಾಯ್ ಫ್ರೆಂಡ್ ಇಲ್ವೇನೆ ಎಂದು. ಅದಕ್ಕವಳು ಅಯ್ಯೋ ಇಲ್ಲ ಕಣೋ ಇದ್ರೆ ನಿನ್  ಹತ್ರ ಹೇಳಕ್ಕೆ ಏನು, ನಿನ್ ಹತ್ರ ಏನೂ ಮುಚ್ಚಿಟ್ಟಿಲ್ಲ ನಾನು. ನಮ್ಮಿಬ್ಬರ ಪರಿಚಯ ಆಗಿ ಕೇವಲ ಮೂರು ತಿಂಗಳಾದರೂ ಅದೇನೋ ಗೊತ್ತಿಲ್ಲ ಕಣೋ ನಾನು ನಿನ್ನನ್ನು ತುಂಬಾ ಹಚ್ಚಿಕೊಂಡು ಬಿಟ್ಟಿದ್ದೇನೆ. ಇದುವರೆಗೂ ಯಾರನ್ನೂ ನಾನು ಇಷ್ಟು ಹಚ್ಚಿಕೊಂಡಿರಲಿಲ್ಲ ಎಂದಳು.

ಅಷ್ಟರಲ್ಲಿ ಥಿಯೇಟರ್ ಬಳಿ ಬಂದೆವು. ಆಗಲೇ ಸಿನೆಮಾ ರಿಲೀಸ್ ಆಗಿ ಮೂರು ವಾರ ಆಗಿದ್ದರಿಂದ ಹೆಚ್ಚು ಜನ ಇರಲಿಲ್ಲ. ಅಲ್ಲೊಬ್ಬರು ಇಲ್ಲೊಬ್ಬರು ಇದ್ದರು. ಅದರಲ್ಲಿ ಬಹುಪಾಲು ಕಾಲೇಜ್ ಹುಡುಗ ಹುಡುಗಿಯರೇ ಇದ್ದರು. ಇನ್ನು ಸಿನಿಮಾ ಶುರುವಾಗಲು ಅರ್ಧ ಗಂಟೆ ಇತ್ತು. ಅಲ್ಲೇ ಥಿಯೇಟರ್ ನ ಆಚೆ ಕುಳಿತಿದ್ದೆವು. ಅಲ್ಲೇ ಆಚೆ ಇದ್ದ ಅಂಗಡಿಯಿಂದ ಚಿಪ್ಸ್ ಪಾಕೆಟ್ ಒಂದನ್ನು ತೆಗೆದುಕೊಂಡು ಬಂದು ತಿನ್ನುತ್ತ ನಾನೇ ಶುರು ಮಾಡಿದೆ. ನನಗೂ ಅಷ್ಟೇ ಪಾವಿ ನಿನ್ನನ್ನು ಹಚ್ಚಿಕೊಂಡಷ್ಟು ಯಾರನ್ನೂ ಹಚ್ಚಿಕೊಂಡಿಲ್ಲ. ನಿನ್ನನ್ನು ನೋಡಿದಾಗಿನಿಂದ ಸದಾ ನಿನ್ನದೇ ಯೋಚನೆ ಮಾಡುತ್ತಿರುತ್ತೇನೆ. ಎಷ್ಟೋ ವರ್ಷಗಳಿಂದ ಜೊತೆಗಿರುವ ಸ್ನೇಹಿತರಿಗಿಂತ ನೀನೆ ಹೆಚ್ಚಾಗಿ ನೆನಪಾಗುತ್ತೀಯ ಎಂದೆ. ಅವಳು ಚಿಪ್ಸ್ ಮೆಲ್ಲುತ್ತ ನನ್ನನ್ನು ನೋಡಿ ನಕ್ಕು ಅದೇ ಚಿಪ್ಸ್ ಮುಟ್ಟಿದ ಕೈಯಿಂದ ನನ್ನ ಕೆನ್ನೆಯನ್ನು ಗಿಂಡಿ choo chweeeeet  ಎಂದಳು.

ಯಾಕೆ ಹುಡುಗಿಯರು ತೀರ ಮುದ್ದಾಗಿ ಮಾತಾಡಲು ಪ್ರಯತ್ನಿಸುತ್ತಾರೆ ಎಂದುಕೊಂಡೆ. ಅಷ್ಟರಲ್ಲಿ ಸಿನೆಮಾ ಶುರುವಾಗುವ ಸಮಯ ಬಂತು. ಒಳಗಡೆ ಹೋಗಿ ಸಿನೆಮಾ ನೋಡುತ್ತಿದ್ದೆವು. ಪ್ರತಿ ದೃಶ್ಯ ಬಂದಾಗಲೂ ಮುಂದೆ ಹಾಗಾಗತ್ತೆ ಹೀಗಾಗತ್ತೆಇವಾ ಹಾಡು ಬರುತ್ತೆ, ಎಂದು ಹೇಳುತ್ತಿದ್ದಳು. ನಾನುಪಾವಿ ನೀನು ಒಂದು ಸಲ ಸಿನೆಮಾ ನೋಡಿದ್ದೀಯ ಎಂದು ಗೊತ್ತು ದಯವಿಟ್ಟು ನಿನ್ನ ರನ್ನಿಂಗ್ ಕಾಮೆಂಟರಿ ನಿಲ್ಲಿಸಿದರೆ ನಾವೂ ಸಿನಿಮಾ ನೋಡುತ್ತೇವೆ ಎಂದಿದ್ದಕ್ಕೆ ನೋಡ್ಕೋ ನನ್ನ ಮಾತಿಗಿಂತ ಸಿನೆಮಾನೇ ಜಾಸ್ತಿ ಆಯ್ತಾ ನಿಂಗೆ ಎಂದು ಹುಸಿ ಕೋಪ ಮಾಡಿಕೊಂಡಳು. ಪಾವಿ ಎಂದೆ...ಮತ್ತೆ ನನ್ನ ಕಡೆ ನೋಡಿ ತುಂಟ ನಗೆ ಬೀರಿ ನೋಡು ನೋಡು ಆಮೇಲೆ ಮಾತಾಡೋಣ ಎಂದಳು.

ಅಂತೂ ಒಂದೇ ದಿನದಲ್ಲಿ ನಾ ಮೆಚ್ಚಿದ ಹುಡುಗಿ ನನ್ನ ಜೊತೆ ಬೈಕಿನಲ್ಲಿಕಾಫಿ ಡೇ, ಸಿನೆಮಾನಲ್ಮೆಯಮೆಚ್ಚುಗೆಯ ಮಾತುಗಳು ಆಹಾ ಈ ದಿನವೆ ಸುದಿನ.....

Rating
No votes yet