ಸಮಯದ ಹಕ್ಕಿಯ ಹೆಗಲೇರಿ...
ಕುಂದಾಪುರದಲ್ಲಿ ನಡೆಸಿದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಕಾಲೇಜು ವಿದ್ಯಾರ್ಥಿಗಳಿಗೆ ನಾನು ಕೇಳಿದ ಪ್ರಶ್ನೆ: "ನೀವು ಯಾವ ವಿಷಯದ ಪರಿಣತರಾಗ ಬೇಕೆಂದಿದ್ದೀರಿ?"
ಅವರ ಉತ್ತರಗಳು: ಇಂಜಿನಿಯರ್, ಡಾಕ್ಟರ್, ಹಲ್ಲಿನ ಡಾಕ್ಟರ್, ಕಂಪ್ಯೂಟರ್ ಪರಿಣತ, ಅಕೌಂಟೆಂಟ್, ವಕೀಲ, ಲೆಕ್ಚರರ್, ನರ್ಸ್, ಕೈಗಾರಿಕೋದ್ಯಮಿ, ವ್ಯಾಪಾರಿ ಇತ್ಯಾದಿ.
ಅವರಿಗೆ ನಾನು ಕೇಳಿದ ಎರಡನೆಯ ಪ್ರಶ್ನೆ: "ನಿಮ್ಮ ಕನಸು ನನಸಾಗಬೇಕೆಂದರೆ ನಿಮಗಿರುವ ದೊಡ್ಡ ಅಡ್ಡಿ ಯಾವುದು?" ಇದಕ್ಕೆ ಬಹುಪಾಲು ಜನರ ಉತ್ತರ, "ಸಮಯದ ಅಭಾವ".
ಎಲ್ಲಿ ಪೋಲಾಗುತ್ತಿದೆ ಸಮಯ? ..... ಆ ಸಂದರ್ಭದಲ್ಲಿ ಹತ್ತು ಯಶಸ್ವಿ ವ್ಯಕ್ತಿಗಳ ಹೆಸರನ್ನು ಅವರಿಂದ ಬರೆಯಿಸಿದೆ. ಅನಂತರ ಒಂದು ನೇರ ಪ್ರಶ್ನೆ ಕೇಳಿದೆ, "ನೀವು ಹೆಸರು ಬರೆದಿರುವ ಯಶಸ್ವಿ ವ್ಯಕ್ತಿಗಳಲ್ಲಿ ಯಾರಿಗಾದರೂ ದಿನಕ್ಕೆ ೨೪ ಗಂಟೆಗಳಿಗಿಂತ ಜಾಸ್ತಿ ಸಮಯ ಸಿಗುತ್ತಿದೆಯೇ?" ಆಗ ಎಲ್ಲರೂ ಮುಗುಳ್ನಕ್ಕರು.
ಅವರಿಗೆಲ್ಲ ನನ್ನ ಮುಂದಿನ ಪ್ರಶ್ನೆ: ಪ್ರತಿದಿನ ನಿಮ್ಮ ಎಷ್ಟೆಷ್ಟು ಸಮಯವನ್ನು ಯಾವ್ಯಾವ ಉದ್ದೇಶಕ್ಕೆ ಬಳಸುತ್ತಿದ್ದೀರಿ? ಅವರ ಉತ್ತರಗಳ ವಿಶ್ಲೇಷಣೆ ಮಾಡಿದಾಗ, ಅವರೆಲ್ಲರಿಗೂ ಸೋಜಿಗ. ಯಾಕೆಂದರೆ, ಪ್ರತಿಯೊಬ್ಬರೂ ದಿನದಿನವೂ ೩ - ೪ ಗಂಟೆಗಳನ್ನು ಪೋಲು ಮಾಡುತ್ತಿದ್ದಾರೆ - ಹಗಲುಗನಸು, ಕಾಡುಹರಟೆ, ಒಣಚರ್ಚೆ,, ಉದ್ದೇಶವಿಲ್ಲದೆ ಟಿವಿ ನೋಡುವುದು ಇಂತಹ ಕೆಲಸಗಳಲ್ಲಿ.
ನಿಮ್ಮ ದಿನನಿತ್ಯದ ಸಮಯದ ಲೆಕ್ಕಾಚಾರ ನೀವೇ ಮಾಡಿ ನೋಡಿ. ಪ್ರತಿದಿನ ನಿದ್ದೆ, ಊಟ, ಸ್ನಾನ, ಪತ್ರಿಕೆ ಓದು, ಪ್ರಯಾಣ, ಹರಟೆ, ಬರವಣಿಗೆ ಇತ್ಯಾದಿ ಕೆಲಸಕಾರ್ಯಗಳಿಗೆ ಎಷ್ಟೆಷ್ಟು ಸಮಯ ವಿನಿಯೋಗಿಸುತ್ತಿದ್ದೀರಿ? ಹೀಗೆ ಪಟ್ಟಿ ಮಾಡಿದಾಗ ನಿಮ್ಮ ಸಮಯವನ್ನು ಯಾವುದರಲ್ಲಿ ಕಳೆದುಕೊಳ್ಳುತ್ತಿದ್ದೀರಿ ಎಂದು ತಿಳಿಯುತ್ತದೆ. ನಿಮ್ಮ ಕಾಲಹರಣದ ಅಭ್ಯಾಸ ಬದಲಾಯಿಸಿ ಕೊಳ್ಳುವುದು ನಿಮ್ಮ ಕೈಯಲ್ಲೇ ಇದೆ.
ಏನು ಸಾಧಿಸಬೇಕೆಂದಿದ್ದೀರಿ? .....ಅದಕ್ಕಾಗಿ, ಮುಂದಿನ ೨೫ ವರುಷಗಳಲ್ಲಿ ನೀವು ಏನನ್ನು ಸಾಧಿಸಬೇಕಾಗಿದೆ ಎಂದು ನಿರ್ಧರಿಸಿ. ಇದನ್ನು ಒಂದರಿಂದ ಹತ್ತು ವಾಕ್ಯಗಳಲ್ಲಿ ಬರೆಯಿರಿ.
ಈ ಗುರಿ ಸಾಧಿಸಲು ನಿಮಗೆ ಸಾಧ್ಯವಿದೆಯೇ? ಎಂದು ಪರಿಶೀಲಿಸಿ. ಉದಾಹರಣೆಗೆ ಭಾರತದ ಕ್ರಿಕೆಟ್ ಟೀಂಗೆ ಆಯ್ಕೆ ಆಗಬೇಕೆಂಬ ಗುರಿ ನಿಮಗಿರಬಹುದು. ಆದರೆ ಕಳೆದ ೧೦ - ೧೫ ವರುಷಗಳಲ್ಲಿ ನೀವು ಕ್ರಮಬದ್ಧವಾಗಿ ಕ್ರಿಕೆಟ್ ಆಡಿದ್ದರೆ ಮಾತ್ರ ಆ ಗುರಿ ಸಾಧನೆ ನಿಮಗೆ ಸಾಧ್ಯ.
ಅಂತಿಮವಾಗಿ, ನಿಮ್ಮ ಗುರಿಯಲ್ಲಿ ನಿಮಗೆ ಅಚಲ ಹಾಗೂ ಗಾಢವಾದ ಆಸಕ್ತಿ ಇದೆಯೇ? ಇಲ್ಲವೆಂದಾದರೆ, ಅಂತಹ ಆಸಕ್ತಿ ಇರುವ ಕ್ಷೇತ್ರದಲ್ಲೇ ನಿಮ್ಮ ಗುರಿಯನ್ನು ಗುರುತಿಸಿಕೊಳ್ಳಿ. ಯಾವ ವಿಷಯ ನಿಮ್ಮನ್ನು ಪ್ರಬಲವಾಗಿ ಸೆಳೆಯುತ್ತದೆ? ಯಾವ ಕೆಲಸವನ್ನು ಗಂಟೆಗಟ್ಟಲೆ ಮಾಡಿದರೂ ನಿಮಗೆ ದಣಿವು ಅಥವಾ ಬೋರ್ ಎನಿಸುವುದಿಲ್ಲ? ಅದುವೇ ನಿಮಗೆ ಅಪಾರ ಆಸಕ್ತಿ ಇರುವ ವಿಷಯ. ಯಂತ್ರಗಳು, ಸಸ್ಯಗಳು, ಪಕ್ಷಿಗಳು, ಕೀಟಗಳು, ಚಿತ್ರಗಳು, ಸಂಗೀತ - ಇಂತಹ ಯಾವುದೇ ವಿಷಯ ಅದಾಗಿರಬಹುದು. ಒಮ್ಮೆ ಇದನ್ನು ಗುರುತಿಸಿದರೆ, ನಂತರ ಸಮಯದ ಸದ್ಬಳಕೆ ನಿಮ್ಮ ಕೈಗೆಟಕುವ ಹಣ್ಣು.
ಬೇಕಾದ್ದು, ಬೇಡವಾದದ್ದು ..... ಈಗ, ಪ್ರತಿದಿನ ಏನೇನು ಕೆಲಸ ಮಾಡುತ್ತಿದ್ದೀರಿ ಎಂಬುದನ್ನು ಪುನಃ ಪರಿಶೀಲಿಸಿ. ನಿಮ್ಮ ಮುಂದಿನ ೨೫ ವರುಷಗಳ ಪ್ರಮುಖ ಗುರಿಗೆ ಪೂರಕವಲ್ಲದ್ದನ್ನು ನೀವು ಮಾಡುತ್ತಿರಬಹುದು. ಉದಾಹರಣೆಗೆ, ಉತ್ತಮ ಚಿತ್ರಕಾರನಾಗ ಬೇಕು ಎಂಬುದು ನಿಮ್ಮ ಗುರಿ ಆಗಿರಬಹುದು. ನೀವು ಕ್ರಿಕೆಟ್ ಆಟದಲ್ಲಿ ಅಥವಾ ಚಲನಚಿತ್ರಗಳ ಹಾಡುಗಳನ್ನು ಕಲಿಯುವುದರಲ್ಲಿ ಸಮಯ ಕಳೆಯುತ್ತಿದ್ದರೆ, ಇದು ನಿಮ್ಮ ಪ್ರಧಾನ ಗುರಿಗೆ ಪೂರಕವಲ್ಲ. ನಿಮ್ಮ ಗುರಿ ಸಾಧಿಸಬೇಕೆಂದಾದರೆ, ಇಂಥದ್ದನ್ನೆಲ್ಲ ಬಿಟ್ಟು, ಅದೇ ಸಮಯವನ್ನು ಚಿತ್ರಕಲೆಯ ಅಭ್ಯಾಸಕ್ಕೆ ತೊಡಗಿಸಬೇಕು. ಇಲ್ಲವಾದರೆ, ಜೀವಮಾನವಿಡೀ ನಿಮ್ಮ ಶೇಕಡಾ ೮೦ ಸಮಯ ನಿಮಗೆ ಮುಖ್ಯವಲ್ಲದ ಕೆಲಸಗಳಲ್ಲೇ ಕಳೆದು ಹೋಗುತ್ತದೆ.
ನೀವು ಏನನ್ನು ಓದುತ್ತಿದ್ದೀರಿ, ಬರೆಯುತ್ತಿದ್ದೀರಿ, ಮಾತಾಡುತ್ತಿದ್ದೀರಿ, ಯೋಚಿಸುತ್ತಿದ್ದೀರಿ, ಯಾವ ಪುಸ್ತಕಗಳನ್ನು ಓದುತ್ತೀರಿ, ಪತ್ರಿಕೆಯಲ್ಲಿ ಏನು ಓದುತ್ತೀರಿ, ಟಿವಿಯಲ್ಲಿ ಯಾವ ಕಾರ್ಯಕ್ರಮ ನೋಡುತ್ತೀರಿ, ಗೆಳೆಯರೊಂದಿಗೆ ಏನು ಮಾತಾಡುತ್ತೀರಿ? ಇವೆಲ್ಲದರಲ್ಲಿಯೂ ಇದೇ ಪರೀಕ್ಷೆಗೆ ಒಡ್ಡಿಕೊಳ್ಳಿ. ನಿಮ್ಮ ಪ್ರಧಾನ ಗುರಿಗೆ ಪೂರಕವಾದದ್ದಕ್ಕೆ ಮಾತ್ರ ನಿಮ್ಮ ಸಮಯ ಮೀಸಲಿಟ್ಟಾಗ ನಿಮಗೆ ಪ್ರತಿದಿನವೂ ಕೈತುಂಬ ಸಮಯ ಸಿಗುತ್ತದೆ.
ನಿಮ್ಮ ದೀರ್ಘಕಾಲಿಕ ಗುರಿಗೆ ಪೂರಕವಾದ ಅಲ್ಪಕಾಲಿಕ ಗುರಿಗಳೂ ಮುಖ್ಯ. ಉದಾಹರಣೆಗೆ ಪದವಿ ಅಥವಾ ಡಿಪ್ಲೊಮಾ ಮುಗಿಸುವುದು, ಕಂಪ್ಯೂಟರ್ ಬಳಕೆ ಕಲಿಯುವುದು ಇತ್ಯಾದಿ. ಇವುಗಳ ಸಾಧನೆಗಾಗಿ ನೀವು ಶಿಸ್ತುಬದ್ಧ ದೈನಂದಿನ ವೇಳಾಪಟ್ಟಿ ಅನುಸರಿಸುವುದು ಅಗತ್ಯ.
ದಕ್ಷತೆಯ ಹೊತ್ತಿನ ಬಳಕೆ ..... ನಿಮ್ಮ ದಕ್ಷತೆಯ ಹೊತ್ತನ್ನು ನೀವು ಚೆನ್ನಾಗಿ ದುಡಿಸಿಕೊಳ್ಳ ಬೇಕು. ಕೆಲವರಿಗೆ ಬೆಳಗ್ಗೆ ಪ್ರಶಾಂತ ವಾತಾವರಣದಲ್ಲಿ ಓದಿದ್ದು ಚೆನ್ನಾಗಿ ಅರ್ಥವಾಗುತ್ತದೆ ಮತ್ತು ನೆನಪಿರುತ್ತದೆ. ಇನ್ನು ಕೆಲವರಿಗೆ ರಾತ್ರಿಯ ನಿಶ್ಶಬ್ದ ಪರಿಸರದ ಓದು ಆಹ್ಲಾದಕರ. ನಿಮ್ಮ ದಕ್ಷತೆಯ ಅವಧಿ ಗುರುತಿಸಿಕೊಳ್ಳಿ. ಆ ಅವಧಿಯನ್ನು ಚಿಂತನೆ ಹಾಗೂ ಅಧ್ಯಯನಕ್ಕಾಗಿ ಮೀಸಲಿಡಬೇಕು. ಪ್ರತಿದಿನ ಮುಂಜಾನೆ ಅಥವಾ ರಾತ್ರಿ, ಮುಂದಿನ ೨೪ ಗಂಟೆಗಳ ನಿಮ್ಮ ಮುಖ್ಯ ಕೆಲಸಕಾರ್ಯಗಳ ಬಗ್ಗೆ ಯೋಚಿಸಿ, ನಿರ್ಧರಿಸಿ. ಆ ನಿರ್ಧಾರಗಳನ್ನು ಬರೆದಿಟ್ಟರೆ ಸ್ಪಷ್ಟವಾಗಿರುತ್ತದೆ. ಇದು ಸಮಯದ ಸದ್ಬಳಕೆಯ ಸನ್ನೆಗೋಲು.
ತತ್ಕಾಲದ ಮುಖ್ಯ ಕೆಲಸ ಗುರುತಿಸಿಕೊಂಡು, ಮುಂದಿನ ೨೪ ಗಂಟೆಗಳೊಳಗೆ ಅದನ್ನು ಆರಂಭಿಸಿ. ಮುಹೂರ್ತಕ್ಕಾಗಿ ಕಾಯಬೇಡಿ. ಕಾಯುತ್ತಾ ಕುಳಿತರೆ, ಕೆಲವೇ ದಿನಗಳಲ್ಲಿ ಅದು ತುರ್ತಿನ ಕೆಲಸವಾಗಿ ಕಾಡುತ್ತದೆ. ಆಗ ಅದನ್ನು ನಿಭಾಯಿಸಲಾಗದೆ, ಪರದಾಟ. ಇದರಿಂದಾಗಿ ಸಮಯದ ನಷ್ಟ.
ದೊಡ್ಡ ಕೆಲಸ ಪೂರೈಸಲಿಕ್ಕಾಗಿ ನಿರಂತರವಾಗಿ ಒಂದು ವಾರ ಅಥವಾ ಒಂದು ತಿಂಗಳು ಪುರುಸೊತ್ತು ಸಿಗಬೇಕೆಂದು ಕಾದು ಕೂರಬೇಡಿ. ಅಂತಹ ಪುರುಸೊತ್ತು ಯಾವತ್ತೂ ಸಿಗುವುದಿಲ್ಲ. ಕೆಲಸಗಳ ನಡುವೆ ನಿಮಿಷಗಳ ಬಿಡುವು ಸಿಕ್ಕಾಗ, ಬಸ್ ಕಾಯುವಾಗ, ಪ್ರಯಾಣಿಸುವಾಗ ಆ ದೊಡ್ಡ ಕೆಲಸದ ಪುಟ್ಟ ಅಂಶಗಳನ್ನು ಮಾಡುತ್ತಾ ಹೋಗಿ. ಹೀಗೆ ಮಾಡಿದರೆ ಕೆಲವೇ ದಿನಗಳಲ್ಲಿ ಶೇಕಡಾ ೫೦ ಕೆಲಸ ಮುಗಿದಿರುತ್ತದೆ!
ಮರೆವು ನಿಮ್ಮ ಸಮಸ್ಯೆಯೇ? ..... ಒಂದು ನೋಟ್ಪುಸ್ತಕ ಯಾವಾಗಲೂ ನಿಮ್ಮ ಜೇಬಿನಲ್ಲಿರಲಿ. ನಿಮ್ಮ ಐಡಿಯಾಗಳನ್ನು, ಮಾಡಬೇಕಾದ ಕೆಲಸಗಳನ್ನು, ನಿರ್ಧಾರಗಳನ್ನು ಅದರಲ್ಲಿ ಬರೆಯುತ್ತಾ ಹೋಗಿ. ಆಗ ಅವು ಸದಾ ನೆನಪಿನಲ್ಲಿರುತ್ತವೆ ಮತ್ತು ನೋಟ್ಪುಸ್ತಕ ನಿಮ್ಮನ್ನು ಎಚ್ಚರಿಸುತ್ತಿರುತ್ತದೆ. ಮರೆವಿನ ಸಮಸ್ಯೆ ಪರಿಹರಿಸಲಿಕ್ಕಾಗಿ ಪಟ್ಟಿ ಮಾಡುವುದು, ಡೈರಿ ಬರೆಯುವುದು, ಟೈಮರ್ ಬಳಕೆ, ಕ್ಯಾಲೆಂಡರ್ನಲ್ಲಿ ಗುರುತಿಸುವುದು, ವಿಷಯವಾರು ಫೈಲ್ ಅಥವಾ ಇಂಡೆಕ್ಸ್ (ವಿಷಯಸೂಚಿ) ಮಾಡುವುದು ಇಂತಹ ಸರಳ ಉಪಾಯಗಳನ್ನೂ ಬಳಸಿಕೊಳ್ಳಿ.
ಸಮಯದ ಹಕ್ಕಿ ಹಾರಿ ಹೋಗುವುದನ್ನು ಅಸಹಾಯಕರಾಗಿ ನೋಡುವ ಬದಲಾಗಿ, ಸಮಯದ ಹಕ್ಕಿಯ ಬೆನ್ನೇರಿ ಹಾರುವ ಅಪೂರ್ವ ಅನುಭವ ನಿಮ್ಮದಾಗಲಿ.
Comments
ಉ: ಸಮಯದ ಹಕ್ಕಿಯ ಹೆಗಲೇರಿ...
In reply to ಉ: ಸಮಯದ ಹಕ್ಕಿಯ ಹೆಗಲೇರಿ... by H A Patil
ಉ: ಸಮಯದ ಹಕ್ಕಿಯ ಹೆಗಲೇರಿ...
ಉ: ಸಮಯದ ಹಕ್ಕಿಯ ಹೆಗಲೇರಿ...
In reply to ಉ: ಸಮಯದ ಹಕ್ಕಿಯ ಹೆಗಲೇರಿ... by padma.A
ಉ: ಸಮಯದ ಹಕ್ಕಿಯ ಹೆಗಲೇರಿ...
ಉ: ಸಮಯದ ಹಕ್ಕಿಯ ಹೆಗಲೇರಿ...
In reply to ಉ: ಸಮಯದ ಹಕ್ಕಿಯ ಹೆಗಲೇರಿ... by makara
ಉ: ಸಮಯದ ಹಕ್ಕಿಯ ಹೆಗಲೇರಿ...
ಉ: ಸಮಯದ ಹಕ್ಕಿಯ ಹೆಗಲೇರಿ...
In reply to ಉ: ಸಮಯದ ಹಕ್ಕಿಯ ಹೆಗಲೇರಿ... by gopinatha
ಉ: ಸಮಯದ ಹಕ್ಕಿಯ ಹೆಗಲೇರಿ...
ಉ: ಸಮಯದ ಹಕ್ಕಿಯ ಹೆಗಲೇರಿ...
In reply to ಉ: ಸಮಯದ ಹಕ್ಕಿಯ ಹೆಗಲೇರಿ... by shekar_bc
ಉ: ಸಮಯದ ಹಕ್ಕಿಯ ಹೆಗಲೇರಿ...