ಭಾವಕಲ್ಪಿತ

ಭಾವಕಲ್ಪಿತ

ಕವನ

  ಭಾವಕಲ್ಪಿತ

 
ಗರ್ಭಸಂಭವವೆಂಬಚ್ಚರಿಯ ಕರ್ಮಕೆ
ಜೀವಶಿಶುವು ಮೊಳೆತಿದೆ.
ಪ್ರಜ್ಞೆಯೆಂಬ ಕುರುಹು ಕಾಣದೆ
ನವಜೀವ  ನಿದ್ರೆಯ ತಾಳಿದೆ.
ನಿದ್ರೆಯಿಂದೊರಜಗಕೆ ಬಂದು
ಮತ್ತೆ ನಿದ್ರೆಗೆ ಜಾರಿದೆ.
 
ದಿವ್ಯ ನಿದ್ರೆಯ ನಿಮ್ನ ಸ್ಥರದಿ
ನಗುತಿದೆ ಶಿಶು ತಾನ್ ಅಳುತಿದೆ.
ನಿದ್ರಿಸಿಹ ಶಿಶು ಸ್ಮೃತಿಯಲಿ
ಕನಸು ಜಾಗೃತವಾಗಿದೆ.
ಕನಸೆ ನಗುವು, ಕನಸೆ ಅಳುವು
ಕನಸು ಅಜ್ಞಾತ ಭಾವ ಕಲ್ಪನೆ.
 
ಜೀವ ಬೆಳೆದು ಕನಸು ನನಸಾಗಲು
ನನಸು ಕೂಡ ಕಲ್ಪನೆ.
ಭಾವ ವೈವಿಧ್ಯಗಳರಳುವಂತ
ಮನವು ಕೂಡ ಕಲ್ಪನೆ.
ಭಾವ ಜಾಡನು ಹಿಡಿದು ನಡೆಯುವ 
ದಾರಿ ತಾನು ಕಲ್ಪನೆ.
 
ಹಲವು ದಾರಿಗಳನುಭವಿಸಿ ಭಾವಿಸಿ
ಪಡೆದ ಜ್ಞಾನವು ಕಲ್ಪನೆ.
ಹಲವು ಜ್ಞಾನ ಕೂಡಿ ತಳೆದ
ಗುರಿಯೆ ಮಹಾ ಸಾಧನೆ.
ಸಾಧನೆಯ ತಣ್ಣೆಲಲಿ ನಗುತಿಹ
ತೃಪ್ತಿ ತಾನ್ ಕಲ್ಪನೆ.
 
ತೃಪ್ತಿಯಿಲ್ಲದೆ ಭವಜಗವ ತೊರೆದು
ಅತೃಪ್ತಿ ಗೆಲುವುದು ಕಲ್ಪನೆ.
ಗೆಲುವು ಕಲ್ಪನೆ, ಸೋಲು ಕಲ್ಪನೆ
ಪ್ರೀತಿ, ದ್ವೇಷದ ತಿರುಳು ಕಲ್ಪನೆ.
ತರ್ಕ ಕಲ್ಪನೆ, ತತ್ವ ಕಲ್ಪನೆ,
ಧ್ಯಾನ ಜನ್ಯ ಜ್ಞಾನ ಕಲ್ಪನೆ.
 
ಎಲ್ಲ ಕಲ್ಪನೆಯೆಂದು ನಗುವ 
ಜ್ಞಾನಿಯ ಭಾವವೂ ಕಲ್ಪನೆ.
ಭಾವನೆಗಳ ಋತ ವಿಶದವಾಗಲು,
ಮೌನ ತಾಳಿದೆ ಕಲ್ಪನೆ.
ಕಾಣದ ಸಂಪರ್ಕ ಹೊಸೆದಿದೆ,
ವಿಶ್ವಮೌನಕೆ ವಿವೇಚನೆ.
 
ಭಾವಕಲ್ಪಿತ ಭವಜಗಕೆ ನಿಲುಕದು
ಅಖಿಲಾಂಡ ವಿಶ್ವದಾಭೀಲದಳತೆಯು.
ವಿವಶವಾಗಲು ಜೀವ ದೇಹಕೆ,
ವಿವಶ ಭಾವವು ಜೀವಕೆ.
ಜೀವ ಹರಿವುದು ನಿರ್ಜೀವಕೆ.
ಭಾವ ಹರಿವುದು ನವ ಭಾವಕೆ.
 
 
ಚಂದ್ರಹಾಸ - (೨೦ - ೦೨ - ೨೦೧೨)
 
 
 

Comments