ಗಜೇಂದ್ರ ಮೋಕ್ಷ

ಗಜೇಂದ್ರ ಮೋಕ್ಷ

 ಸಮಸ್ಯಾ ಪೂರಣದ ಬಗ್ಗೆ ನೀವು ಕೇಳೇ ಇರಬೇಕು. ಹಿಂದೆ ನಾನೂ ಕೂಡ ಒಂದೆರಡು ಬಾರಿ ಈ ವಿಷಯದ ಬಗ್ಗೆ ಬರೆದಿದ್ದೆ. 
ಕಾಳಿದಾಸನ, ತೆನಾಲಿ ರಾಮನ, ಕಂತಿ ಹಂಪನ ಸಮಸ್ಯಾಪೂರಣಗಳು ಬಹಳ ಪ್ರಸಿದ್ಧವೇ ಆಗಿವೆ. ಇವುಗಳಲ್ಲಿ ಕೆಲವು ಕಟ್ಟುಕತೆಗಳೇ ಇರಬಹುದಾದರೂ ಆಸಕ್ತಿ ಮೂಡಿಸುವ ವಿಚಾರಗಳು ಎನ್ನುವುದರಲ್ಲೇನೂ ಅನುಮಾನವಿಲ್ಲ. ಕಾಳಿದಾಸನದು ಎನ್ನಲಾದ ಕಮಲೇ ಕಮಲೋತ್ಪತ್ತಿಃ,  ಕ ಖ ಗ ಘ , ಠಾಠಂಠಠಂ....ಇವುಗಳೆಲ್ಲ ಪಾದ ಪೂರಣದ ಸಮಸ್ಯೆಗಳು. ಅಂದರೆ ಪದ್ಯದ ಒಂದು ಸಾಲನ್ನು ಕೊಟ್ಟಿದ್ದಾಗ ಇನ್ನು ಉಳಿದ ಸಾಲುಗಳನ್ನು ಅರ್ಥ ಪೂರ್ಣವಾಗಿ ತುಂಬುವುದು ಇದರ ಗುರಿ.

ಇನ್ನೊಂದು ರೀತಿಯ ಸಮಸ್ಯಾಪೂರಣವೂ ಇದೆ -  ಕೊಟ್ಟಿರುವ ಪದಗಳನ್ನು ಬಳಸಿ ಪದ್ಯವನ್ನು ಬರೆಯುವುದು ಈ ರೀತಿಯ ಸಮಸ್ಯಾಪೂರಣದ ಗುರಿ.  ಈಚೀಚೆಗೆಪದ್ಯಪಾನದ ಸಹವಾಸ ಆದಮೇಲೆ ಈ ರೀತಿಯ ಹಲವು ಸಮಸ್ಯೆಗಳನ್ನುನೋಡಿದ್ದೆ. ಆದರೆ ಇವತ್ತಿನವರೆಗೆ ನಾನು ಆ ರೀತಿಯ ಪ್ರಶ್ನೆಯನ್ನು ಬಿಡಿಸಲು ಹೋಗಿರಲಿಲ್ಲ.


ಈ ಬಾರಿ ಅಲ್ಲಿ  Auto (ಆಟೊ), Rickshaw (ರಿಕ್ಷ), Volvo (ವೊಲ್ವೊ), Lorry (ಲಾರಿ) ಪದಗಳನ್ನುಪಯೋಗಿಸಿ ಶ್ರೀ ಹರಿಯು, ಭಕ್ತನ ನೆರವಿಗೆ ಬಂದ ಸಂದರ್ಭವನ್ನು ವಿವರಿಸಿ ಅಂತಿತ್ತು. ಸ್ವಲ್ಪ ತಲೆಯೇ ತಿರುಗಿ ಹೋಯಿತು ಅನ್ನಿ. ಮೊದಲೇ ನನಗಿರುವ ಛಂದಸ್ಸಿನ ತಿಳಿವು ಕಡಿಮೆಯೇ. ಆದರೂ ಇರಲಿ ಅಂತ ಸ್ವಲ್ಪ ಪ್ರಯತ್ನಿಸಿ ಅಂತೂ ಇಂತೂ ಗಜೇಂದ್ರ ಮೋಕ್ಷದ ಸಂದರ್ಭದ ಬಗ್ಗೆ ಒಂದು ಚೌಪದಿಯನ್ನು ಹೊಸೆದಿದ್ದೇನೆ

ಓದಿ ನೋಡಿ: 

ಮೊಸಳೆಯಾರ್ಭಟವೇನು! ಆಟೋಪವಿನ್ನೇನು!    
ಹಸುಳೆಯಾನೆಯ ಬಾಳೆಗಿಡದವೋಲ್ವೊರಗಿಸೆ
ಅಸುವಕಾಯೆಂಬ  ಮೊರೆಗೆಲ್ಲಾರಿಗೂ  ಮೊದಲು 
ನಸುನಗುತ  ಹರಿಯಂತರಿಕ್ಷದಲೆ ಪೊರೆದ!
 
-ಹಂಸಾನಂದಿ
 
ಚಿತ್ರ: ಗಜೇಂದ್ರ ಮೋಕ್ಷದ ದೃಶ್ಯ, ದೇವಘರ್ ನಲ್ಲಿರುವ ದಶಾವತಾರ ದೇವಾಲಯದ ಗೋಡೆಯ ಮೇಲಿನ ಶಿಲ್ಪ (ಕ್ರಿ.ಶ. ಐದು-ಆರನೇ ಶತಮಾನದ್ದು)



ಕೊ: ಗಜೇಂದ್ರ ನಿಜದಲ್ಲಿ ಎಳೆಯನೋ ಹಸುಳೆಯೋ ಆಗಿದ್ದನೋ ಇಲ್ಲವೋ ಅನ್ನುವುದು ಖಂಡಿತ ಗೊತ್ತಿಲ್ಲ! ಅದು ಪ್ರಾಸಕ್ಕೆ ಮಾಡಿಕೊಂಡಿದ್ದಷ್ಟೇ!

Rating
No votes yet

Comments