ಅಂತ್ಯ ( ಕಥೆ) ಭಾಗ 1

ಅಂತ್ಯ ( ಕಥೆ) ಭಾಗ 1

 


     ಪುರದಳ್ಳಿಯಿಂದ ಸೋಮೇಶ್ವರಕ್ಕೆ ಹೋಗುವ ಟಾರ್ ರಸ್ತೆಗುಂಟ ಸುಮಾರು ಹತ್ತು ಮೈಲುಗಳಷ್ಟು ದೂರ ಹೊದರೆ, ಬಲಕ್ಕೆ ಕಾಡಿನೊಳಕ್ಕೆ ತಿರುಗಿ ಕೊಳ್ಳುವ ಒಂದು ಬಂಡಿ ದಾರಿಯಿದೆ. ಆ ದಾರಿಗುಂಟ ಹಾಗೆಯೆ ಸ್ವಲ್ಪ ಮುಂದೆ ಸಾಗಿದರೆ ಎಡ ಬದಿಯಲ್ಲಿ ಒಬ್ಬ ಮನುಷ್ಯನ ತೆಕ್ಕೆ ಗಾತ್ರದ ದೊಡ್ಡ ಬೊಡ್ಡೆಯ ನೇರವಾಗಿ ಗಗನಚುಂಬಿ ಯಾಗಿ ಬೆಳೆದ ಒಂದು ಬೃಹತ್ತಾದ ತೇಗದ ಮರವಿದೆ. ಅದಕ್ಕೆ ಸ್ವಲ್ಪ ಎತ್ತರದಲ್ಲಿ ಒಂದು ಮರದ ಹಲಗೆಯನ್ನು ನೇತು ಹಾಕಿದ್ದು ಅದರ ಮೇಲೆ 'ದುಮ್ಮಳ್ಳಿ' ಎಂದು ಬರೆದಿದೆ. ಆ ನಾಮ ಫಲಕದ ಕೆಳಗೆ ಒಂದು ಬಾಣದ ಗುರ್ತನ್ನು ತೋರಿಸಲಾಗಿದೆ. ನೀವು ವಿಶೇಷವಾಗಿ ಆ ತೇಗದ ಮರವನ್ನು ಮತ್ತು ನಾಮಫಲಕವನ್ನು ಗಮನಿ ಸಿದರೆ ಮಾತ್ರ ನಿಮಗೆ ಗೋಚರಿಸುತ್ತದೆ. ನೀವು ಆ ಪರಿಸರಕ್ಕೆ ಹೊಸಬರಾದರೆ ಮಾಹಿತಿಯ ಕೊರತೆಯಿಂದ ಪರದಾಡ ಬೇಕಾಗುತ್ತದೆ. ನಾಮಫಲಕದ ಮೇಲೆ ತೋರಿಸಿರುವ ಬಾಣದ ಗುರ್ತನ್ನು ಅನುಸಿರಿಸಿ ನೀವು ದುಮ್ಮಳ್ಳಿಯನ್ನು ಹುಡುಕಿ ಹೊರಡುವಿರಾದರೆ ನೀವು ತೊಂದರೆಗೆ ಸಿಲುಕಿ ಹಾಕಿಕೊಳ್ಳುತ್ತೀರಿ. ಏಕೆಂದರೆ ಬಾಣದ ಗುರ್ತು ಆಕಾಶಕ್ಕೆ ಮುಖ ಮಾಡಿದೆ.


     ಒಂದು ವೇಳೆ ನೀವು ಧೈರ್ಯಮಾಡಿ ಬಂಡಿದಾರಿಯನ್ನು ಅನುಸರಿಸಿ ದುಮ್ಮಳ್ಳಿಯನ್ನು ಹುಡುಕಿ ಹೊರಡುವಿ ರಾದರೆ ನೀವು ವಿವಂಚನೆ ಗೊಳಗಾಗುತ್ತೀರಿ. ದಾರಿಯ ಇಕ್ಕೆಲಗಳಲ್ಲಿ ಸಮೃದ್ಧವಾಗಿ ಬೆಳೆದುನಿಂತ ಬೃಹತ್ತಾದ ಬಿದಿರು ಮೆಳೆಗಳು, ಗಾಳಿ ಜೋರಾಗಿ ಬೀಸಿದರೆ ಕಟಕಟ ಸದ್ದು ಮಾಡುತ್ತ ತೊನೆಯುವ ಬೃಹತ್ತಾದ ಬೊಂಬು ಗಳ ಬಿದಿರು ಮೆಳೆಗಳು. ಕಾಡು ಮರಗಳ ಮಧ್ಯೆ ಇರುವ ಜಾಗದಲ್ಲಿ ಬರೆಳೆದಿರುವ ಪೊದೆಗಳು, ಲಂಟಾನ, ಕಾಂಗ್ರೆಸ್ ಹುಲ್ಲು ಮತು ಹಸಿರು ಹುಲ್ಲಿನಿಂದಾಚ್ಛಾದಿತ ಪರಿಸರ. ಆ ಪರಿಸರದಲ್ಲಿ ಹಾದು ಹೋಗುವ ಬಡಿದಾರಿಗುಂಟ ಸಾಗಿದರೆ ಮುಕ್ಕಾಲು ಮೈಲು ದೂರದಲ್ಲಿ ಜುಳು ಜುಳು ನಿನಾದ ಗೈಯ್ಯತ್ತ ಹರಿಯುತ್ತಿರುವ ನೀರಿನ ತೊರೆ ಕಾಣುತ್ತದೆ. ಬಿರು ಬೇಸಿಗೆಯಲ್ಲೂ ಸಹ ಮನುಷ್ಯನ ಪಾದ ಮುಳುಗುವಷ್ಟು ನೀರಿನ ಪಾತ್ರ ಆ ತೊರೆಯಲ್ಲಿರುತ್ತದೆ. ಅದರಲ್ಲಿ ಬೇಸಿಗೆ ಯಲ್ಲಿ ಮಾತ್ರ ಎತ್ತಿನ ಬಂಡಿಯನ್ನು ಹೊಡೆದುಕೊಂಡು ಹೋಗಬಹುದು, ಅದೂ ಪ್ರಯಾಸದಿಂದ. ಯಾರು ಅದಕ್ಕೆ ಬಂಡಿದಾರಿಯೆಂದು ನಾಮಕರಣ ಮಾಡಿದರೋ ಆ ದೇವನೆ ಬಲ್ಲ. ಬಂಡಿದಾರಿಯ ಬಲಕ್ಕೆ ಲಗತ್ತಾಗಿ ತೊರೆಯ ಆಚೆಯ ದಂಡೆಯ ದೊಡ್ಡ ಆಲದ ಮರಕ್ಕೆ ಹತ್ತಿರದಲ್ಲಿ ಒಂದು ಅಡಿ ಅಗಲದ ಬಲಿತ ಅಡಿಕೆ ಮರದ ದಬ್ಬೆಗಳಿಂದ  ಮಾಡಿದ ಸಂಕವಿದ್ದು ಅದು ಸರ್ವ ಕಾಲಕ್ಕೂ ದುಮ್ಮಳ್ಳಿಗೆ ಏಕ ಮಾತ್ರ ಸಂಪರ್ಕ ಕಲ್ಪಿಸುವ ಕೊಂಡಿ. ಸಂಕವನ್ನು ದಾಟಿ ಸುಮಾರು ಇನ್ನೂರು ಅಡಿಗಳಷ್ಟು ದೂರ ನೀವು ಮುಂದೆ ಸಾಗಿದಿರಾದರೆ ಒಂದು ವಿಶಾಲವಾದ ಕಣಿವೆ ಗೋಚರಿಸುತ್ತದೆ. ಅದರಲ್ಲಿ ಐದು ಎಕರೆ ವಿಸ್ತೀರ್ಣದ ಭತ್ತದ ಗದ್ದೆ, ಅದರಾಚೆ ಸುಮಾರು ಅಷ್ಟೆ ವಿಸ್ತೀರ್ಣದ ಅಡಿಕೆ ತೋಟ ಮತ್ತು ಮೂರು ಎಕರೆ ವಿಸ್ತೀರ್ಣದ ಬಾಳೆತೋಟ ಕಾಣುತ್ತೀರಿ. ಅವುಗಳ ಹಿನ್ನೆಲೆಯಲ್ಲಿ ಸ್ವಲ್ಪ ಎತ್ರರದಲ್ಲಿ ಸುಮಾರು ದೊಡ್ಡದಾದ ಮಂಗಳೂರು ಹಂಚಿನ ಮನೆಯನ್ನು ಕಾಣುತ್ತೀರಿ ಅದೇ ದುಮ್ಮಳ್ಳಿ. ಇಷ್ಟೆಲ್ಲ ವಿವರ ಏಕೆಂದರೆ ಈಗ ಹೇಳ ಹೊರಟಿರುವುದು ಮೇಲ್ಕಂಡ ಗದ್ದೆ ತೋಟ ಮನೆಗಳ ವಾರಸುದಾರ, ಅಲ್ಲಿಯೇ ಹುಟ್ಟಿ ಬೆಳೆದು ಠೇಂಕಾರ ದಿಂದ ಬಾಳಿ ಬದುಕಿ ಮಗನ ಅವಗಣನೆಗೆ ತುತ್ತಾಗಿ ಸಾವು ಕಂಡ ನಮ್ಮ ದುಮ್ಮಳ್ಳಿಯ ಕಥಾನಾಯಕ ತಿಮ್ಮಪ್ಪನ ಕಥೆಯನ್ನ. ಅದನ್ನು ನೀವು ಆತನ ಯಶೋಗಾಥೇ ಎಂದಾದರೂ ಕರೆಯಿರಿ ಇಲ್ಲ ದುರಂತ ಕಥೆ ಎಂದಾದರೂ ಕರೆಯಿರಿ, ಆಯ್ಕೆ ನಿಮಗೆ ಬಿಟ್ಟದ್ದು.


                                                                        ***


     ಸುಮಾರು ಒಂದೂ ಕಾಲು ಶತಮಾನದ ಹಿಂದಿನ ಮಾತು . ಪುರದಳ್ಳಿಯಿಂದ ಸೊಮೇಶ್ವರಕ್ಕೆ ಟಾರು ರಸ್ತೆ ಇಲ್ಲದಿದ್ದ ಕಾಲ. ದುಮ್ಮಳ್ಳಿಯ ಪುಟ್ಟೆಗೌಡರ ಹಂಚಿನ ಮನೆ ಮತ್ತು ಅವರ ಕೆಲಸಗಾರರ ಗುಡಿಸಲುಗಳನ್ನು ಬಿಟ್ಟರೆ ಬೇರೆ ಜನವಸತಿ ಇದ್ದಿಲ್ಲದಂತಹ ದುರ್ಗಮ ಅರಣ್ಯ ಪ್ರದೇಶವಾಗಿತ್ತು. ಕಾಡು ಪ್ರಾಣಿಗಳು ಮತ್ತು ಮಲೇರಿಯಾ ಹಾವಳಿ ವಿಪರೀತ ವಾಗಿದ್ದ ದಿನಗಳವು. ಯಥಾಸ್ಥಿತಿ ವಾದವನ್ನು ನಂಬಿ ದೈವ ಧರ್ಮ ದೇವರುಗಳಿಗೆ ಜೋತು ಬಿದ್ದು ಒಳ್ಳೆಯದಕ್ಕೂ ಕೆಟ್ಟದಕ್ಕೂ ಅವುಗಳನ್ನೆ ಹೊಣೆ ಮಾಡಿ ಜನ ಬದುಕುತ್ತಿದ್ದಂತಹ ದಿನ ಮಾನಗಳವು. ಕಳೆದ ಶತ ಮಾನದ ಎರಡನೆ ದಶಕದ ಕೊನೆಗೆ ಜಿಲ್ಲಾ ಕೇಂದ್ರದಿಂದ ಪುರದಳ್ಳಿ ಮಾರ್ಗವಾಗಿ ಸೋಮೇಶ್ವರಕ್ಕೆ ಡಾಂಬರು ರಸ್ತೆ ಯಾಗುವಾಗ, ರಸ್ತೆಯ ಕೆಲಸಕ್ಕೆ ಬಂದ ಬುಲ್ಡೋಜರನ್ನು ಅಲ್ಲಿಯ ಆಸುಪಾಸಿನ ಜನ ವಿಶೇಷ ಆಸ್ಥೆ ವಹಿಸಿ ನೋಡಿ ಬಂದ ಜನರಿದ್ದ ಕಾಲವದು. ಯಾವಾಗ ಡಾಂಬರು ರಸ್ತೆಯ ನಿರ್ಮಾಣ ಕಾರ್ಯ ಪ್ರಾರಂಭವಾಯಿತೊ ಆಗಲೆ ಆಧುನಿಕ ಕಾಲದ ಒಳಿತು ಕೆಡಕುಗಳ ಆಗಮನ ಪುರದಳ್ಳಿಯ ಸುತ್ತಮುತ್ತ ಆಯಿತು, ಕ್ರಮೇಣ ಅದರ ಸೋಂಕು ದುಮ್ಮಳ್ಳಿಗೂ ತಗುಲಿತೆಂದೆ ಹೇಳಬೇಕು. 


     ಅದು ಹತ್ತೊಂಭತ್ತನೆ ಶತಮಾನದ ಕಾಲಮಾನದ ಕೊನೆಯ ಘಟ್ಟ. ಸಹ್ಯಾದ್ರಿ ಬೆಟ್ಟ ಸಾಲುಗಳ ಶೃಂಗಗಿರಿಯ ವಾಯುವ್ಯಕ್ಕೆ ಸುಮಾರು ನಾಲ್ಕೈದು ಮೈಲು ದೂರದಲ್ಲಿ ರಾಮೇಗೌಡರ ಸಂಕಲ್ಪಶಕ್ತಿ ಮತ್ತು ಕಷ್ಟ ಸಹಿಷ್ಣುತೆ ಗಳ ಫಲವಾಗಿ ಮೈದಳೆದ ಕುಗ್ರಾಮವೆ ದುಮ್ಮಳ್ಳಿ. ಮಳೆಗಾಲದಲ್ಲಿ ಶೃಂಗಗಿರಿ ಬೆಟ್ಟಗಳಿಂದ ರಭಸದಿಂದ ಹರಿದು ಬರುತ್ತಿದ್ದ ನೀರು ಮುಂದೆ ಸುಮಾರು ವಿಸ್ತಾರಕ್ಕೆ ವ್ಯಾಪಿಸಿರುವ ಬಯಲನ್ನು ವ್ಯಾಪಿಸಿ, ಪ್ರಶಾಂತವಾಗಿ ಹರಿದು ಮತ್ತೆ ದಟ್ಟಕಾಡು ಸೇರಿ ಎಂಟು ಹತ್ತು ಮೈಲು ಸ್ವೇಚ್ಛೆಯಗಿ ಹರಿದು ಮುಂದೆ ಕುಡುಮೆ ಹೊಳೆ ಸೇರಿ ವಿಶಾಲ ಪಾತ್ರ ಪಡೆದು ವೇಗ ವನ್ನು ವರ್ಧಿಸಿಕೊಂಡು  ದಟ್ಟ ಬಿದಿರು ಮೆಳೆಗಳ ಕಾನನ್ನು ಹೊಕ್ಕು ಬೃಹತ್ತಾದ ಕಲ್ಲು ಬಂಡೆ ಗಳ ಮಧ್ಯೆ ದಾರಿ ಮಾಡಿ ಕೊಂಡು ಸುಮಾರು ನೂರೈವತ್ತು ಅಡಿಗಳಷ್ಟು ಕೆಳಗೆ ಧುಮುಕಿ ಬಿದಿರಬ್ಬೆ ಯೆಂಬ ಅಭಿದಾನವನ್ನು ಪಡೆದು ಪಶ್ಚಿಮಾಭಿಮುಖಿಯಾಗಿ ಹರಿದು ಹಲ ಕೆಲವು ಝರಿ ತೊರೆಗಳನ್ನು ಸೇರಿಸಿ ಕೊಂಡು ಅರಬ್ಬಿ ಸಮುದ್ರ ಸೇರುವ ಜಲ ಸಂಜೀವಿನಿ. ಆ ದಟ್ಟ ಕಣಿವೆಯಲ್ಲಿ ದುಮ್ಮಳ್ಳಿಯ ಆ ಹೊಳೆಯಲ್ಲಿ ಬೇಸಿಗೆಯಲ್ಲಿಯೂ ಸಹ ಮೊಣಕಾಲುದ್ಚದ ವಿಸ್ತಾರಕ್ಕೆ ನೀರಿನ ಪಾತ್ರವಿರುತ್ತಿತ್ತು. ಆ ದಟ್ಟ ಕಣಿವೆಯಲ್ಲಿ ಕಾಲೂರಿ ನಿಂತು ಕಾಡು ಪ್ರಾಣಿಗಳು ಮತ್ತು ಮಲೇರಿಯಾ ಹಾವಳಿ ಗಳನ್ನು ಎದುರಿಸಿ ನಿಂತು ಕಾಡನ್ನು ಸವರಿ ಜಮೀನನ್ನು ಬೇಸಾಯಕ್ಕೆ ಸಿದ್ಧ ಪಡಿಸಿ ನೆಲೆ ನಿಂತು ಧುಮ್ಮಿಕ್ಕುವ ಜಲಪಾತದ ಮುನ್ನೆಲೆ ಯನ್ನು ಹೊಂದಿದ ಅದಕ್ಕೆ ದುಮ್ಮಳ್ಳಿಯೆಂದು ನಾಮಕರಣ ಮಾಡಿದವರೂ ಅವರೆ. ಆದರೆ ಕೂಲಿಯಾಳುಗಳ ಸಮಸ್ಯೆ, ಯಾರು ಬಂದರೂ ಮಲೇರಿಯ ಮತ್ತು ಕಢು ಪ್ರಾಣಿಗಳ ಹಾವಳಿಗೆ ಹೆದರಿ ದುಮ್ಮಳ್ಳಿ ಯನ್ನು ಬಿಟ್ಟು ಹೋದವರೆ. ಈ ಸಮಸ್ಯೆಯಿಂದಾಗಿ ರಾಮೇಗೌಡರ ಅಡಿಕೆತೋಟ ಮಾಡುವ ಕನಸು ಕನಸಾಗಿಯೆ ಉಳಿದು ಮಲೇರಿಯಾಕ್ಕೆ ಬಲಿಯಾದವರು. ನಂತರದಲ್ಲಿ ದುಮ್ಮಳ್ಳಿಯ ಗೌಡರ ಮನೆಯ ಅಧಿಪತ್ಯವನ್ನು ವಹಿಸಿ ಕೊಂಡವರು ಅವರ ಏಕೈಕ ಸಂತಾನ ಪುಟ್ಟೆಗೌಡರು.


     ದುಮ್ಮಳ್ಳಿಯ ಪುಟ್ಟೇಗೌಡರು ತಮ್ಮ ಕಾಲದಲ್ಲಿ ಅವರ ಭತ್ತದ ಗದ್ದೆಯ ಪಕ್ಕದ ಅದರಾಚೆಯ ಕಾಡನ್ನು ಕಡಿದು ಅಡಿಕೆತೋಟ ಮತ್ತು ಬಾಳೆತೋಟಗಳನ್ನು ಮಾಡಿದರು. ಮುಲ್ಕಿ ಪರೀಕ್ಷೆಯನ್ನು ದುಮ್ಮಳ್ಳಿ ಸೀಮೆಯಿಂದ ಮೊದಲು ಪಾಸು ಮಾಡಿದವರು ಪುಟ್ಟೇಗೌಡರು. ಈ ಸೀಮೆಯ ಸ್ಥಿತಿವಂತ ರಾಮೇಗೌಡರ ಮಗನಾದ ಅವರು ಆ ಭಾಗದ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ನಾಯಕತ್ವ ವಹಿಸಿದರು. 1920 ರಿಂದ 1930 ರ ವರೆಗಿನ ಕಾಲಾವಧಿ ಯಲ್ಲಿ ಹಳೆಯ ಮೈಸೂರು ಸಂಸ್ಥಾನದಲ್ಲಿ ಪುರದಳ್ಳಿ ಕ್ಷೇತ್ರದ ಪ್ರಜಾ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಿದರು. ಆ ಅವಧಿಯಲ್ಲಿ ಅವರು ತಮ್ಮಹೆಚ್ಚಿನ ಕಾಲವನ್ನುಮೈಸೂರಿನಲ್ಲಿಯೇ ಕಳೆಯ ಬೇಕಾಗಿ ಬಂದ ಕಾರಣ ಅವರು ಅಲ್ಲಿಯೆ ಮನೆಮಾಡಿ ಅಲ್ಲಯೆ ಶಾಶ್ವತವಾಗಿ ನೆಲೆ ನಿಂತರು. ಆಗ ದುಮ್ಮಳ್ಳಿಯ ಪುಟ್ಟೇ ಗೌಡರ ಸಮಸ್ತ ಆಸ್ತಿಯ ಉಸ್ತುವಾರಿಯುನ್ನು ವಹಿಸಿ ಕೊಂಡವನು ಅವರ ನಂಬಿಗಸ್ತ ಆಳು ದುರ್ಗಪ್ಪ. ಆತ ತಾನು ತನ್ನ ಕೈ ನಡೆಯುವ ವರೆಗೆ ಪುಟ್ಟೇಗೌಡರ ಜೊತೆಗೆ ವಿಶ್ವಾಸದಿಂದ ನಡೆದುಕೊಂಡವನು.


     ದೇಶದ ಸ್ವಾತಂತ್ರಾ ನಂತರ ಎಲ್ಲ ಸಂಸ್ಥಾನ ಮತ್ತು ರಾಜ್ಯಗಳು ವಿಲೀನ ಗೊಂಡು ರಚನೆಗೊಂಡ ಪ್ರಜಾತಂತ್ರ ಗಣರಾಜ್ಯ ಒಕ್ಕೂಟಕ್ಕೆ ಮೈಸೂರು ಸಹ ಸೇರಿ ಕನ್ನಡಿಗರ ಕನ್ನಡ ಭಾಷಾವಾರು ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ನಂತರ ಪ್ರಾರಂಭವಾದದ್ದು ಹೊಸ ಶೈಲಿಯ ರಾಜಕಾರಣ. ವಯಸ್ಸಿನ ಕಾರಣದಿಂದಲೋ ಹಳೆಯ ವಸ್ತುನಿಷ್ಟ ರಾಜಕಾರಣ ಸ್ವತಂತ್ರ ಭಾರತದಲ್ಲಿ ಪ್ರಸ್ತುತ ವಲ್ಲದ್ಚಕ್ಕೊ ಪುಟ್ಟೇಗೌಡರ ರಾಜಕೀಯ ಪ್ರಭಾವಳಿ ಮಸಕಾಗುತ್ತ ನೆಡೆಯಿತು. ಅವರ ಹೆಂಡತಿ ಲಕ್ಷ್ಮೀದೇವಮ್ಮ ಅನಾರೋಗ್ಯ ಕಾರಣದಿಂದ ಮರಣ ಹೊಂದಿದರು. ಅವರ ಏಕಮಾತ್ರ ಪುತ್ರ ಡಾ|| ಶ್ರೀನಿ ವಾಸ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅಮೇರಿಕದ ಲಾಸ್ ಏಂಜಲಿಸ್ಗೆ ತೆರಳಿದವನು ಮರಳಿ ಭಾರತಕ್ಕೆ ಬಂದಾಗ ಆತನ ಪ್ರತಿಭೆಗೆ ತಕ್ಕ ಉದ್ಯೋಗ ಇಲ್ಲಿ ದೊರೆಯದ ಕಾರಣ ಆತ ಲಾಸ್ ಏಂಜಲಿಸ್ಗೆ ತೆರಳಿ ಅಲ್ಲಯೆ ನೆಲೆ ನಿಂತ. ದುಮ್ಮಳ್ಳಿಯ ತನ್ನ ಮನೆ ಮತ್ತು ಆಸ್ತಿಯ ತೀವ್ರ ವ್ಯಾಮೋಹವೂ ಆತನಿಗೆ ಇರಲಿಲ್ಲ. ದುಮ್ಮಳ್ಳಿಯ ಬಗೆಗೆ ಆತನಿ ಗಿದ್ದುದು ಬರಿ ಮಸುಕು ನೆನಪಷ್ಟೆ.


     ಹೆಚ್ಚು ಕಡಿಮೆ ಪುಟ್ಟೇಗೌಡರ ಸಮಕಾಲೀನ ದುರ್ಗಪ್ಪ ದುರ್ಬಲನಾಗುತ್ತ ಸಾಗಿದ. ಆಗ ದುಮ್ಮಳ್ಳಿಯ ಪುಟ್ಟೇ ಗೌಡರ ಸಮಸ್ತ ಆಸ್ತಿಯ ಉಸ್ತುವಾರಿಯನ್ನು ತನ್ನ ಕೈಗೆ ತೆಗೆದು ಕೊಂಡವನು ನಮ್ಮ ಕಥಾನಾಯಕ ತಿಮ್ಮಪ್ಪ. ಉಸ್ತುವಾರಿ ಎನ್ನುವದಕ್ಕಿಂತ ಮಾಲಿಕತ್ವ ಎಂಬ ಶಬ್ದ ಇಲ್ಲಿ ಸಮಂಜಸ ವಾಗುತ್ತದೋ ಏನೋ. ದುರ್ಗಪ್ಪನ ಅವ ಸಾನದ ನಂತರ ಪುಟ್ಟೇಗೌಡರು ದುಮ್ಮಳ್ಳಿಯನ್ನು ಗಮನಿಸದೆ ಉದಾಸೀನ ಮಾಡಿದುದು, ಶ್ರೀನಿವಾಸ ಗೌಡ ತನ್ನ ಊರನ್ನು ಸಂಪೂರ್ಣ ಮರೆತುದು ತಿಮ್ಮಪ್ಪನ ದಾರಿಯನ್ನು ಸುಗಮ ಗೊಳಿಸಿತು ಎಂದೇ ಹೇಳಬೇಕು. ಸ್ವಾತಂತ್ರಾ ನಂತರ ಬಂದ ಕಾನೂನು ಸಹ ಆತನಿಗನುಕೂಲಕರ ರೀತಿಯಲ್ಲಿಯೇ ಬಂದಿತು. ತಿಮ್ಮಪ್ಪ ಪುಟ್ಟೇಗೌಡರ ಮಗ ಶ್ರೀನಿವಾಸಗೌಡನಿಗಿಂತ ಐದಾರು ವರ್ಷ ಕಿರಿಯ. ಪುಟ್ಟೇಗೌಡರು ಹೆಂಡತಿ ಮಗನೊಂದಿಗೆ ಮೈಸೂರಿಗೆ ಹೋದ ನಂತರ ಹುಟ್ಟಿದವನು. ಪುಟ್ಟೇಗೌಡರು ದುಮ್ಮಳ್ಳಿಯನ್ನು ಪೂರ್ತ ಮರೆತಂತೆ ಆದಾಗ ಅವರ ಮನೆಯ ಸುರಕ್ಷತೆಯ ನೆಪಮಾಡಿ ದುರ್ಗಪ್ಪ ತನ್ನ ಬಿಡಾರವನ್ನು ಅವರ ವಾಸದ ಮನೆಗೆ ಬದಲಾ ಯಿಸಿದ. ದುರ್ಗಪ್ಪ ನಂಬಿಕಸ್ತ ಯಾಕೆ ಹೀಗೆ ಮಾಡಿದ? ಪುಟ್ಟೇಗೌಡರ ಮನೆಯ ಸುರಕ್ಷತೆ ಪ್ರಧಾನ ಅಂಶ ವಾಗಿತ್ತೆ? ಈ ಬಗ್ಗೆ ಒಂದು ಮಾತನ್ನೂ ದುರ್ಗಪ್ಪ ಪುಟ್ಟೇಗೌಡರಿಗೂ ತಿಳಿಸಲಿಲ್ಲ. ಬೇರೇನಾದರೂ ದೂರಾ ಲೋಚನೆ ಆತನ ಮನದಲ್ಲಿತ್ತೆ? ಕ್ರಮೇಣ ದುಮ್ಮಳ್ಳಿಯ ಪುಟ್ಟೇಗೌಡರ ಮನೆ ಮತ್ತು ಗದ್ದೆ ತೋಟಗಳ ಯಜಮಾನ ತಾನೇ ಎಂಬಂತಾದ ಎಂದು ಅಲ್ಲಿಯ ಕೂಲಿಯಾಳು ಗಳು ಮಾತನಾಡಿ ಕೊಳ್ಳುವುದನ್ನು ಕೇಳ ಬಹುದಿತ್ತು.


                                                                                                      (  ಮುಂದುವರಿದಿದೆ )


 



 
 

Rating
No votes yet

Comments