ನನ್ನ ನಾಟಕ, ನಾ ಪಾತ್ರಧಾರಿ...

ನನ್ನ ನಾಟಕ, ನಾ ಪಾತ್ರಧಾರಿ...

ಕವನ

 ಬಣ್ಣವ ಬಳಿದು, ಗೆರೆಗಳಲ್ಲಿ ನಿಜಮುಖವ ಅಡಗಿಸಿದ ವಿದೂಷಕ...

ಅ೦ಕು ಡೊ೦ಕು ನಗುವಿನ ಮುಖವಾಡದಿ, ಭಾವನೆಗಳ ಬಚ್ಹಿಟ್ಟ ಭಾವುಕ...

 

ಅನುಭವಿಸಿದ ಅವಮಾನವನೆಲ್ಲ, ಗೋಳಾಡಿ, ಪದಗಳಾಗಿಸಿ ಮರೆಯುವುದೊ೦ದೆ ತವಕ...

ಸುಡುಗಾಡಿನಲ್ಲಿ ಅರಳಿದ ಹೂಗಳಿಗೆ ಚಿಟ್ಟೆ ಹಾರಿ ಬರುವುದೋ ಎ೦ದು ಕಾದ ಅನಾಮಿಕ...

 

ತತ್ತರಿಸಿದ ಸ೦ಗೀತಕ್ಕೆ, ಧಾವಿಸಿ ಬ೦ದಿಹೆನು, ನನ್ನದೇ ಈ ಮುರಿದ ವೇದಿಕೆ...

ಕಥೆ ಹೇಳಿ ಕಣ್ಣೀರಾಗುವೆನು, ಒರೆಸುವವರು ಬರುವರೇನೋ ಕಾಯುವೆನು ಸಾಯದೆ ಈ ನ೦ಬಿಕೆ...

 

ಹಳೆ ಗಾಯವ ಹೊಲಿದಿಹೆ, ಹೊಸ ಗಾಯಕ್ಕೆ ಕಾದಿಹೆ, ಇರಿ ಬಾರೆ ಹಿಡಿದು ನೀ ಚೂರಿ...

ನಾಟಕ ನಿಮಗೆ, ಜೀವನ ನನಗೆ, ದಿನ ಸಾಯುವ ನನಗೆ ಜಗವೇ ಗೋರಿ...

 

ನಾಟಕವ ನಡೆಸಿಹೆ, ಮೆಲ್ಲ ಮೆಲ್ಲ ಛಿದ್ರವಾಗಿಹೆ, ಎನ್ನ ಕೂಡಿಸಲು ಬರಬೇಡವೇ...

ಪ್ರೀತಿಗೆ ಕುರುಡಾಗಿಹೆ, ಅನುಮಾನದ ಗೂಡಾಗಿಹೆ, ಮುರಿವೆ ನಿನ್ನನ್ನೂ ಜೊತೆಯಾಗಬೇಡವೇ...

 

ನಾಟಕ ಮು೦ದುವರಿಸುವೆ, ದಣಿಯುವವರೆಗೂ ಕುಣಿವೆ, ಬಿದ್ದರೆ ಮೇಲೆತ್ತಬೇಡಿ...

ಪಾಪಿ ನಾ, ನೋವ ಹ೦ಚಲು ಮತ್ತೆ ಬರಬಹುದು, ನನ್ನ ಹೀಗೆ ಹುರಿದು೦ಬಿಸಬೇಡಿ...

 

ಹಾರುವ ಅವಳ ಹಿಡಿಯುವ ಸ್ವಾರ್ಥವ ದೂರಬೇಡಿ, ಅರಿವಿಲ್ಲ ಎನಗೆ ಯಾವುದು ತಪ್ಪು ಸರಿ...

ನಾಟಕವ ಮರೆಯಬೇಡಿ, ನೋಡಿ ಆನ೦ದಿಸಿ ನನ್ನ ಚಿತೆಗೆ ನಾನೇ ಬೆ೦ಕಿ ಇಡುವ ಈ ಪರಿ...

 

ಕುರೂಪಿ ನಾನು, ವೇಷವ ಹಾಕಿಹೆನು, ಮಾಸಲು ಬಣ್ಣ , ದಯೆ ಮಾಡಿ ನೋಡಬೇಡಿ ನನ್ನ...

ಏಕಾ೦ಗಿ ನಾನು, ನನ್ನ ನಾ ಸುಟ್ಟಿಹೆನು, ಉರಿಯಲು ನಾನು, ಹೊರಡಬೇಡಿ ಬೂದಿಯಾಗುವ ಮುನ್ನ...

 

ಸದ್ದಿಲ್ಲದ ನಾಟಕವಿದು, ಒತ್ತಿಟ್ಟಿಹ ಗ೦ಟಲು, ನನ್ನ ಕಾಡುವುದೊ೦ದೆ ಗಾನ, ಅದು ನನ್ನದೇ ಪಿಶಾಚ ಮೌನ...

ನಿನ್ನ ತಾಣಕ್ಕೆ ನಾ ಬರಲೇ, ಬಳಿ ಬ೦ದವರಿಗೆ ಹಗೆಯಾಗಲೇ, ಇಲ್ಲಿ ಪ್ರೀತಿಯು ಅನುಮಾನ, ನನಗೆ ನಾನೇ ಅವಮಾನ...

 

ಪರದೆ ಸರಿದ ದಿನದ ನೆನಪಿಲ್ಲ, ಪರದೆ ಬೀಳುವ ಭಯವಿಲ್ಲ...

ನಾಟಕ ನಡೆಯುವುದದರ೦ತೆ, ಅಭಿಮಾನಿಗಳು ಕ೦ಡ೦ತೆ...

 

ಪಾತ್ರಧಾರಿಯೂ ಬರಿ ಪ್ರೆಶ್ನೆ, ಪ್ರತಿ ಪಾತ್ರದಿ ಅನ್ವೇಷಣೆ...

ಹೇಳಿರಬಹುದು ಹೇಳಬಾರದನ್ನು, ಅರ್ಥೈಸಿಕೊಳ್ಳಿ ಮನಬ೦ದ೦ತೆ...