ಅಂತ್ಯ ( ಕಥೆ ) ಭಾಗ 2

ಅಂತ್ಯ ( ಕಥೆ ) ಭಾಗ 2

                                  


     ಮಗ ತಿಮ್ಮಪ್ಪನ ಭವಿಷ್ಯದ ಬಗ್ಗೆ ಬಹಳಷ್ಟು ಭರವಸೆಯನ್ನು ಹೊಂದಿ ಆಶೆಯನ್ನಿಟ್ಟು ಕೊಂಡಿದ್ದ ಆತನ ತಂದೆ ದುರ್ಗಪ್ಪ ಆತನನ್ನು ಪುರದಳ್ಳಿ ಶಾಲೆಗೆ ಹಾಕಿದ. ವಿದ್ಯಾಭ್ಯಾಸದಲ್ಲಿ ಅಷ್ಟೇನೂ ಆಸಕ್ತಿ ವಹಿಸದ ತಿಮ್ಮಪ್ಪ ಇತರೆ ಹವ್ಯಾಸಗಳಲ್ಲಿ ತನ್ನನ್ನು ತೊಡಗಿಸಿಕೊಂಡ. ಅನೇಕ ದಂಡಯಾತ್ರೆಗಳನ್ನು ಮಾಡಿದರೂ ಮೆಟ್ರಿಕ್ಯುಲೇಶನ್ ಮುಗಿಸ ಲಾಗಲಿಲ್ಲ. ಮಹಾತ್ಮಾ ಗಾಂಧಿಯವರು ದೇಶದಾದ್ಯಂತ ' ಚಲೆಜಾವ ಚಳುವಳಿಗೆ ' ಕರೆಕೊಟ್ಟ ಕಾಲವದು. ತಿಮ್ಮಪ್ಪನೂ ಪುರದಳ್ಳಿ ವ್ಯಾಪ್ತಿಯಲ್ಲಿ ತನ್ನ ಸಮಾನ ಮನಸ್ಕರೊಡಗೂಡಿ ಅದಕ್ಕೆ ದನಿಗೂಡಿಸಿದ. ಆಳುವ ಬ್ರಿಟೀಷ್ ಸರ್ಕಾರದ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ. ಸ್ವಾತಂತ್ರ  ಚಳುವಳಿಗೆ ಸಮ್ಮಂಧ ಪಟ್ಟಂತೆ ಪ್ರಕರಣ ವೊಂದರಲ್ಲಿ ಪೋಲೀಸರ ಅತಿಥಿಯಾದ. ಇದನ್ನು ಕೇಳಿದ ದುರ್ಗಪ್ಪ ಹೌಹಾರಿ ಹೋದ. ಮೈಸೂರಿಗೆ ಹೋಗಿ ಪುಟ್ಟೇಗೌಡರನ್ನು ಕಂಡು ಬಂದ. ಪುಟ್ಟೇಗೌಡರು ತಮ್ಮ ಪ್ರಭಾವ ಬಳಸಿತಿಮ್ಮಪ್ಪ ಜೈಲಿಗೆ ಹೋಗುವುದನ್ನು ತಪ್ಪಿಸಿದರು. ಇನ್ನೆಂದೂ ಸರ್ಕಾರ ವಿರೋಧಿ ಚಟುವಟಿಕೆಗಳಲ್ಲಿ ತೊಡಗುವುದಿಲ್ಲವೆಂದು ಮುಚ್ಚಳಿಕೆ ಬರೆದು ಕೊಟ್ಟು ಬಂದ. ಯಾವಾಗ ದೇಶ ಸ್ವತಂತ್ರ ವಾಯಿತೋ ತಿಮ್ಮಪ್ಪ ನಂತಹ ಎಡ ಬಿಡಂಗಿಗಳು ಅಲ್ಲಲ್ಲಿ ರಾಜಕೀಯಕ್ಕೆ ನುಸುಳಿದಂತೆ ಪುರದಳ್ಳಿ ಸೀಮೆ ಯಿಂದ ತಿಮ್ಮಪ್ಪನ ರಾಜಕೀಯ ರಂಗ ಪ್ರವೇಶವಾಯಿತು. ವಿದ್ಯಾವಂತರು ರಾಜಕೀಯವನ್ನು ಕಡೆಗಣಿಸಿದಂತಹ ಸಂಧರ್ಭ ತಿಮ್ಮಪ್ಪ ನಂತಹವರ ರಾಜಕೀಯ ಪ್ರವೇಶವನ್ನು ಸುಲಭ ಗೊಳಿಸಿತು.


     ' ಉಳುವವನೆ ಹೊಲದೊಡೆಯ' ಎಂಬ ಘೋಷಣೆ ಕಾನೂನು ಆದಂತಹ ಸಂಧರ್ಭ, ತಿಮ್ಮಪ್ಪ ತನ್ನ ತಂದೆ ದುರ್ಗಪ್ಪನನ್ನು ಪುರದಳ್ಳಿಗೆ ಕರೆದೊಯ್ದು ದುಮ್ಮಳ್ಳಿಯ ಪುಟೇಗೌಡರ ಮಾಲಿಕತ್ವದ ಸಮಸ್ತ ಜಮೀನಿನ ಉಳುಮೆ ದಾರ ತಾನು ಎಂದು ಭೂನ್ಯಾಯ ಮಂಡಳಿಗೆ ಅರ್ಜಿ ಕೊಡಿಸಿದ. ಕಾಲಾ ನಂತರ ಪುಟ್ಟೇಗೌಡರಿಗೆ ಭೂನ್ಯಾಯ ಮಂಡಳಿಯಿಂದ ನೋಟೀಸು ಹೋದಾಗಲೆ ಅವರಿಗೆ ಬಿಸಿ ತಾಗಿದ್ದು. 1930 ರಿಂದ 1960 ರ ವರೆಗೆ ದುಮ್ಮಳ್ಳಿಯ ಅವರ ತೋಟದ ಅಡಿಕೆಯನ್ನು ಅಡಿಕೆ ಮಂಡಿಗೆ ಕಳಿಸಿ ಪುಟ್ಟೇಗೌಡರಿಗೆ ತಿಳಿಸಿದರೆ ಆಯಿತು, ಅವರು ಧಾರಣಿ ನೋಡಿ ಮಾರಾಟ ಮಾಡಿಸಿ ಹಣ ಪಡೆಯುತ್ತಿದ್ದರು. ಐದು ಎಕರೆ ಗದ್ದೆಯ ಭತ್ತವನ್ನು ಮತ್ತು ಬಾಳೆಯನ್ನು ಪೂರ್ತಿ ಯಾಗಿ ದುರ್ಗಪ್ಪನಿಗೆ ಬಿಡುತ್ತಿದ್ಚರು. ಆಗಾಗ ತೋಟದ ಕೃಷಿ ಮತ್ತು ಗೊಬ್ಬರಕ್ಕೆಂದು ಯೋಗ್ಯ ಮೊತ್ತದ ಹಣ ವನ್ನೂ ಸಹ ಕೊಡುತ್ತಿದ್ಚರು. ದುರ್ಗಪ್ಪ ನಂತಹ ನಂಬಿಗಸ್ತ ಆಳು ಸಿಗುವುದು ಕಷ್ಟವೆಂದು ಪುಟ್ಟೇಗೌಡರು, ಅವರಂತಹ ಒಳ್ಳೆಯ ಉದಾರಿ ಒಡೆಯ ಸಿಗುವುದು ಕಷ್ಟವೆಂದು ದುರ್ಗಪ್ಪ ಪರಸ್ಪರ ನಂಬಿಕೊಂಡು ಬಂದಿದ್ದರು. ಹೀಗಾಗಿ ದುರ್ಗಪ್ಪನನ್ನು ನಂಬಿ ಪುಟ್ಟೇಗೌಡರು ದುಮ್ಮಳ್ಳಿ ಕಡೆಗೆ ಬರುವುದನ್ನೇ ಬಿಟ್ಟಿದ್ದರು. ಭೂನ್ಯಾಯ ಮಂಡಳಿ ಯ ನೋಟೀಸು ಅವರನ್ನು ವಿವಂಚನೆಗೀಡು ಮಾಡಿತ್ತು. ಒಳ್ಳೆಯತನಕ್ಕಿದು ಕಾಲವಲ್ಲವೆಂದು ಅವರ ಸ್ನೇಹಿತರು ಮಾತಾಡುವುದನ್ನು ಕೇಳುತ್ತಿದ್ದ ಪುಟ್ಟೇಗೌಡರು ಎಷ್ಟೋ ಸಲ ಮನದಲ್ಲಿಯೇ ನಕ್ಕಿದ್ದರು. ಈಗ ಅವರಿಗೆ ವಾಸ್ತವ ಎದುರಾಗಿತ್ತು. ಪುಟ್ಟೇಗೌಡರು ಯೋಚನೆಗೀಡಾದರು. ದುರ್ಗಪ್ಪನ ಮನದಲ್ಲಿ ದುಮ್ಮಳ್ಳಿಯ ಆಸ್ತಿ ಲಪಟಾಯಿಸುವ ಸಂಚು ಅಡಗಿತ್ತೆ? ಅವಕಾಶ ಕಾಯ್ದು ಈ ರೀತಿ ಮಾಡಿದನೆ? ಆದರೆ ಅವರ ಇಷ್ಟು ದೀರ್ಘಾವಧಿ ಜೀವನದಲ್ಲಿ ಯಾರೂ ಇಂತಹ ಬೆನ್ನಿಗಿರಿಯುವ ಕೆಲಸ ಮಾಡಿರಲಿಲ್ಲ. ದುರ್ಗಪ್ಪ ಮೊದಲ ಬಾರಿಗೆ ತನ್ನ ಬ್ರೂಟಸ್ ಬುದ್ಧಿಯನ್ನು ತೋರಿಸಿ ಬೆನ್ನಿಗಿರಿದಿದ್ದ. ಇದ್ದೊಬ್ಬ ಮಗ ಶ್ರೀನಿವಾಸ ಗೌಡ ಲಾಸ್ ಏಂಜಿಲ್ಸ್ಗೆ ತೆರಳಿದವನು ಅಲ್ಲಿಯೆ ನೆಲೆ ನಿಂತ. ಮೊಮ್ಮಕ್ಕಳು ಅಮೇರಿಕವೆ ತಮ್ಮ ದೇಶವೆಂಬಷ್ಟು ಮಟ್ಟಿಗೆ ಅಲ್ಲಿಯ ವಾತಾವರಣಕ್ಕೆ ಒಗ್ಗಿಕೊಂಡು ಬಿಟ್ಟಿದ್ದರು. ಮಗ ಶ್ರೀನಿವಾಸ ಗೌಡನಿಗೂ ತನ್ನ ದೇಶ ಮತ್ತು ದುಮ್ಮಳ್ಳಿ ಗ್ರಾಮಗಳ ಬಗೆಗೆ ವಿಶೇಷ ಆಸಕ್ತಿ ಇರಲಿಲ್ಲ. ಹೆಂಡತಿ ಲಕ್ಷ್ಮೀ ದೇವಮ್ಮ ಕಣ್ಮುಚ್ಚಿ ಆಗಲೇ ಒಂದು ದಶಕ ಸಂದಿತ್ತು. ತನ್ನ ತಂದೆ ರಾಮೇಗೌಡರು ಕಷ್ಟಪಟ್ಟು ಮಾಡಿದ ದುಮ್ಮಳ್ಳಿಯ ಗದ್ದೆ ತೋಟ ಮನೆ ಮತ್ತು ಪರಿಸರ ತಮ್ಮ ಕೈತಪ್ಪಿ ಹೋಗಲಿದೆ ಎಂಬ ಸಂಗತಿ ಅವರನ್ನು ವಿಷಣ್ಣರನ್ನಾಗಿ ಮಾಡಿತ್ತು.


     ಪುರದಳ್ಳಿಯ ನ್ಯಾಯ ಮಂಡಳಿಗೆ ಬಂದಿದ್ದ ಪುಟ್ಟೇಗೌಡರು ತಮ್ಮ ಹುಟ್ಟೂರಿನ ವ್ಯಾಮೋಹ ತಡೆಯಲಾರದೆ  ದುಮ್ಮಳ್ಳಿಗೆ ಹೊರಟರು. ಕೈಮರದ ಹತ್ತಿರ ಇಳಿದ ಪುಟ್ಟೇಗೌಡರು ಸುತ್ತಲೂ ಒಮ್ಮೆ ಅವಲೋಕಿಸಿದರು. ಅವರು ಈ ಹಿಂದೆ ಕಂಡಿದ್ದ ಅಬೇಧ್ಯ ಕಾನನ ಈಗಿರದಿದ್ದರೂ ಸ್ವಲ್ಪ ಮಟ್ಟಿಗೆ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿತ್ತು. ಕಾಡು ಬೋಳಾದ ಕಡೆಯಲ್ಲೆಲ್ಲ ಲಂಟಾನ ಮತ್ತು ಕಾಂಗ್ರೆಸ್ ಹುಲ್ಲು ಬೆಳೆದು ನಿಂತಿತ್ತು. ಆಲೋಚನೆಯಲ್ಲಿ ದಾರಿಯನ್ನು ಕ್ರಮಿಸಿದ ಪುಟ್ಟೇಗೌಡರಿಗೆ ತಾವು ನೀರಿನ ತೊರೆಯ ವರೆಗೂ ಸಾಗಿ ಬಂದುದೆ ತಿಳಿದಿರಲಿಲ್ಲ. ಹಿಂದೆ ತಾವಿದ್ದಾಗ ಬೇಸಿಗೆ ಯಲ್ಲಿಯೂ ಸಹ ಮೊಣಕಾಲುದ್ದ ಹರಿಯುತ್ತಿದ್ದ ನೀರು, ಈಗ ಪಾದ ಮುಳುಗುವ ಮಟ್ಟಕ್ಕೆ ಹರಿಯುತ್ತಿದೆ. ಕಾಡು ಬೆಟ್ಟ ಗುಡ್ಡ ನದಿ ಝರಿ ತೊರೆಗಳಿಗೆ ಕೊನೆಗೆ ಮನುಷ್ಯನ ಮನಸ್ಸಿಗೂ ಕ್ಷಯ ತಗುಲಿದೆಯೆ? ಇದನ್ನು ತಟೆಗಟ್ಟಲು ಆಗುವುದಿಲ್ಲವೆ? ತಾವಿದ್ದ್ದಾಗ  ಹರಿಯುತ್ತಿದ್ದ ಹಳ್ಳಕ್ಕೆ ಅಡ್ಡಲಾಗಿ ಹಾಕಿದ್ದ ಅಡಿಕೆ ದಬ್ಬೆಗಳ ಸಂಕಕ್ಕೆ ಬದಲಾಗಿ ದಪ್ಪ ಮರದ ಹಲಗೆಗಳ ಸಂಕ ಹಾಕಲಾಗಿತ್ತು.ಸಂಕದ ಪಕ್ಕದ ಅತ್ತಿ ಮರದ ಬೊಡ್ಡೆಗೆ 'ದುಮ್ಮಳ್ಳಿ ಎಷ್ಟೇಟ್' ಎಂದು ಕಪ್ಪು ಬಣ್ಣದ ಅಕ್ಷರಗಳಲ್ಲಿ ಬರೆದ ಬೋರ್ಡ ಲಗತ್ತಿಸಿತ್ತು. ಅದರ ಕೆಳಗೆ ಸಣ್ಣ ಅಕ್ಷರಗಳಲ್ಲಿ ಮಾಲಿಕರು ತಿಮ್ಮಪ್ಪ ಎಂದು ಬರೆದಿತ್ತು. ಅಂತಹ ಸಂಧರ್ಭದಲ್ಲಿಯೂ ಗೌಡರ ತುಟಿಯಂಚಿನಲ್ಲಿ ಕಿರುನಗೆಯೊಂದು ಮೂಡಿ ಮಾಯವಾಯಿತು. ಭತ್ತದ ಗದ್ದೆ ಮತ್ತು ತೋಟವನ್ನು ಗೌಡರು ಗಮನಿಸಿದರು. ಅಡಿಕೆ ತೋಟ ಪೂರ್ತಿಯಾಗಿ ಬೆಳೆದು ನಿಂತಿದೆ. ಅಡಿಕೆ ಕೊನೆಗಳು ಗಾಳಿಗೆ ತೊನೆಯುತ್ತಿವೆ. ಒಂದು ಕಾಲದಲ್ಲಿ ತಮ್ಮದಾಗಿದ್ದ ತೋಟಕ್ಕೆ ಈಗ ತಾವು ಅಪರಿಚಿತನಂತೆ ಭೇಟಿ ನೀಡ ಬೇಕಿದೆ. ಅಡಿಕೆ ತೋಟ ದಾಟಿ ಮನೆಯ ಮುಂದಿನ ವಿಶಾಲ ಅಂಗಳಕ್ಕೆ ಬಂದ ಪುಟ್ಟೇಗೌಡರು ಅಡಿಕೆಯ ದಬ್ಬೆಗಳಿಂದ ಮಾಡಿದ ದೊಡ್ಡ ಚಪ್ಪರವನ್ನು ದಾಟಿ ಒಳ ಹಜಾರಕ್ಕೆ ಕಾಲಿಟ್ಟರು. ಒಮ್ಮೆ ಮನೆಯ ಒಳ ಹೊರಗನ್ನು ಸೂಕ್ಷ್ಮವಾಗಿ ಗಮನಿಸಿದರು. ನೆಲಕ್ಕೆ ಗಾರೆಯ ಬದಲಾಗಿ ಕಪ್ಪು ಬಿಳುಪು ಹೊಳಪು ಗಲ್ಲುಗಳ ನೆಲವಾಸು ಬಂದಿತ್ತು.


     ಮನೆಯ ಒಳಗೆ ಬಂದ ಗೌಡರನ್ನು ಆ ಮನೆಯ ಒಡತಿ ದೇವಮ್ಮ ' ಯಾರು ಏನಾಗ ಬೇಕಿತ್ತು ' ಎಂದು ಕೇಳಿದಳು. 
     ಅದಕ್ಕೆ ಗೌಡರು ' ದುರ್ಗಪ್ಪನನ್ನು ನೋಡ ಬೇಕಿತ್ತು ' ಎಂದರು.


     ದೇವಮ್ಮ ಹೊರ ಹಜಾರದ ಮೂಲೆಯೆಡೆಗೆ ಕೈಮಾಡಿ ತೋರಿದಳು. ಅಲ್ಲಿ ಒಂದು ಕೋಣೆಯಿತ್ತು, ಆದರೆ ಆ ಕೋಣೆ ಮೊದಲು ಅವರಿದ್ದಾಗ ಇರಲಿಲ್ಲ. ಆ ಕೋಣೆಯೆಡೆಗೆ ಸಾಗಿದ ಗೌಡರು ತಮ್ಮ ತೋರು ಬೆರಳಿನಿಂದ ಬಾಗಿಲು ತಟ್ಟಿದರು. ಒಂದು ಕಾಲದಲ್ಲಿ ತಮ್ಮ ಆಜ್ಞೆಗಾಗಿ ಮನೆಯ ಬಾಗಿಲಿನಲ್ಲಿ ಕೈ ಜೋಡಿಸಿ ನಿಲ್ಲುತ್ತಿದ್ದ ದುರ್ಗಪ್ಪ, ಈಗ ಆತನ ಕೋಣೆಯ ಹೊರಗೆ ಆತನ ಅಜ್ಞೆಗಾಗಿ ತಾವು ಕಾಯ ಬೇಕಾದ ಪರಿಸ್ಥಿತಿ. ಕೋಣೆಯ ಒಳಗಿನಿಂದ ಯಾರು ಎಂಬ ಕ್ಷೀಣ ಧ್ವನಿ ಕೇಳಿ ಬಂತು.


     ' ನಾನು ಪುಟ್ಟೇಗೌಡ '  ಎಂದು ಗೌಡರು ಉತ್ತರಿಸಿದರು.


     ಬಾಗಿಲು ತಳ್ಳಿಕೊಂಡು ಒಳಗೆ ಹೋದ ಗೌಡರಿಗೆ ಕಂಡಿದ್ದು ಒಂದು ಹಳೆಯ ಚಾಪೆಯ ಮೇಲೆ ಹರಕು  ಕಂಬಳಿಯೊಂದನ್ನು ಹೊದ್ದು ಮುದುಡಿ ಮಲಗಿದ ಹಿಡಿಯಂತಾದ ದೇಹದ ದುರ್ಗಪ್ಪ. ಪುಟ್ಟೇಗೌಡರೆ ಮಾತಿಗೆ ಮೊದಲಿಟ್ಟರು.


.     ' ದುರ್ಗಪ್ಪ ಚೆನ್ನಾಗಿದ್ದೀಯಾ ' ಎಂದು ಗೌಡರು ಪ್ರಶ್ನಿಸಿದರು.


     ಗೌಡರ ಆಗಮನವನ್ನು ದುರ್ಗಪ್ಪ ನಿರೀಕ್ಷಿಸಿರಲಿಲ್ಲವೆಂದು ಕಾಣುತ್ತದೆ. ಆತನ ಬಾಯಿಯಿಂದ ಮಾತುಗಳು ಹೊರಡಲಿಲ್ಲ, ಮಾತನಾಡುವ ಸ್ಥಿತಿಯಲ್ಲಿಯೂ ಆತನಿರಲಿಲ್ಲ ಆತನ ಗಂಟಲು ಕಟ್ಟಿ ಹಾಕಿದಂತಾಗಿತ್ತು. ತಾನು ಮಾಡಿದ ದ್ರೋಹ ಆತನ ಗಂಟಲನ್ನು ಕಟ್ಟಿ ಹಾಕಿತ್ತೆ? ಒಂದು ತರಹದ ವೈಚಾರಿಕ ತಾಕಲಾಟದಲ್ಲಿ ಆತ ಬಿದ್ದಂತೆ ಕಂಡು ಬಂತು.


     ' ದುರ್ಗಪ್ಪ ನಾನು ನಿನ್ನನ್ನು ನಂಬಿದ್ದೆ, ನೀನು ಈ ಪ್ರಮಾಣದ ಮೋಸ ಮಾಡಬಾರದಿತ್ತು ' ಎಂದರು ಗೌಡರು.  ದುರ್ಗಪ್ಪ ಕ್ಷೀಣವಾಗಿ ಕೆಮ್ಮಿದ. ಮಾತು ಮುಂದುವರಿಸಿದಿ ಗೌಡರು


      ' ನಾನು ನಿನ್ನನ್ನು ನಂಬಿ ನಾಲ್ವತ್ತು ವರ್ಷಗಳಷ್ಟು ಧೀರ್ಘ ಕಾಲ ದುಮ್ಮಳ್ಳಿಯ ನನ್ನ ಸಮಸ್ತ ಗದ್ದೆ ತೋಟ ಮನೆಗಳನ್ನು ನಿನ್ನ ಸುಪರ್ದಿಗೆ ಬಿಟ್ಟಿದ್ದೆ. ಒಮ್ಮೆಯೂ ನಿನ್ನನ್ನು ಶಂಕಿಸಲಿಲ್ಲ. ಭೂನ್ಯಾಯ ಮಂಡಳಿಯಿಂದ ನೋಟೀಸು ಕೊಡಿಸುವ ಮೊದಲು ವಿಷಯವನ್ನು ನನ್ನ ಗಮನಕ್ಕೆ ತರಬೇಕಿತ್ತು ' ಎಂದರು.


     ಬಂದವರು ಪುಟ್ಟೇಗೌಡರು ಎಂದು ತಿಳಿದ ದೇವಮ್ಮ ವಿಷಯವನ್ನು ತನ್ನ ಗಂಡ ತಿಮ್ಮಪ್ಪನಿಗೆ ತಿಳಿಸಿದಳು. ಹೊರ ಹಜಾರಕ್ಕೆ ಬಂದ ತಿಮ್ಮಪ್ಪ ಪುಟ್ಟೇಗೌಡರನ್ನು ಉದ್ದೇಶಿಸಿ ಒರಟಾಗಿ


     ' ಅವನನ್ನು ಏನು ಕೇಳುತ್ತೀರಿ? ನೋಟೀಸು ಕೊಟ್ಟಾಗಿದೆ ಭೂನ್ಯಾಯ ಮಂಡಳಿಗೆ ಹೋಗಿ ನೋಡಿ ಕೊಳ್ಳಿ ' ಎಂದು ಹೇಳಿದ. ತಿಮ್ಮ ಎಂದು ಗದರಲು ದುರ್ಗಪ್ಪ ಪ್ರಯತ್ನಪಟ್ಟ ಮಾತನಾಡಲು ಆಗಲಿಲ್ಲ, ಜೋರಾಗಿ ಕೆಮ್ಮಲು ಪ್ರಾರಂಭಿಸಿದ. ಆರೋಗ್ಯ ತೀವ್ರವಾಗಿ ಹದಗೆಟ್ಟು ಕುಟುಂಬದ ಸದಸ್ಯರ ಅವಗಣನೆಗೆ ತುತ್ತಾಗಿ ಅಂತಿಮ ದಿನಗಳನ್ನು ಎಣಿಸುತ್ತಿರುವ ದುರ್ಗಪ್ಪನನ್ನು ಏನು ಕೇಳಿದರೂ ಪ್ರಯೋಜನ ವಿಲ್ಲವೆಂದು ಭಾವಿಸಿದ ಪುಟ್ಟೇಗೌಡರು ಹೋಗುತ್ತೇನೆ ದುರ್ಗಪ್ಪ ಎಂದು ವಿದಾಯ ಹೇಳಿ ಆತನ ಕೋಣೆಯಿಂದ ಹೊರಬಂದು ಮನೆಯ ಅಂಗಳ ಇಳಿದು ಮರಳಿ ಹೊರಟರು.    


     ತಿರುಗಿ ಮತ್ತೊಮ್ಮೆ ತಮ್ಮದಾಗಿದ್ದ ದುಮ್ಮಳ್ಳಿಯ ಗದ್ದೆ ತೋಟ ಮನೆಯನ್ನು ಅವಲೋಕಿಸಿದರು. ಅವರ ಕಣ್ಣಂಚಿನಲ್ಲಿ ನೀರಿನ ಹನಿ ಕಾಣಿಸಿ ಕೊಂಡಿತು. ಅವರಿಗೆ ಯಾರೋ ತಮ್ಮ ಹೃದಯವನ್ನು ಕಿತ್ತಿಟ್ಟ ಅನುಭವ ವಾಯಿತು. ಏಕಾಂಗಿತನ ಅವರನ್ನು ತೀವ್ರವಾಗಿ ಕಾಡಿತು. ಹೆಂಡತಿ ಲಕ್ಷ್ಮೀದೇವಮ್ಮ ನೆನಪಿಗೆ ಬಂದಳು. ಹೆಂಡತಿಯ ಅಗಲಿಕೆ ಅವರನ್ನು ಬಹುವಾಗಿ ಕಾಡಿತು. ಮಗ ಶ್ರೀನಿವಾಸ ಗೌಡ ಯಾಕೋ ಅವರ ಆತ್ಮೀಯ ಮನೋವಲಯಕ್ಕೆ ಬರದೆ ದೂರ ನಿಂತುಬಿಟ್ಟ. ಅವರ ಎಲ್ಲ ಸಾಂಸಾರಿಕ ಬಂಧಗಳು ಕಳಚಿ ಹೋದಂತಾಯಿತು. ಪುರದಳ್ಳಿಯ ಭೂನ್ಯಾಯ ಮಂಡಳಿಗೆ ಹೋಗಿ ನೋಟೀಸಿಗೆ ಉತ್ತರ ಕೊಟ್ಟರು. ಅಲ್ಲಿ ಆತ್ಮೀಯರಾದವರು ಯಾರೂ ಅವರಿಗೆ ಕಾಣಲಿಲ್ಲ, ಯಾರನ್ನೂ ಹುಡುಕಿಕೊಂಡು ಅವರು ಹೋಗಲಿಲ್ಲ. ಎಲ್ಲ ಹೊಸತಲೆಮಾರಿನ ಜನ.


     ಅವರ ನೆನಪು ಐವತ್ತು ವರ್ಷಗಳ ಹಿಂದಕ್ಕೆ ಓಡಿತು. ಅವರು ಪುರದಳ್ಳಿ ಸೀಮೆಯಿಂದ ಮೈಸೂರು ಸಂಸ್ಥಾನ ದಲ್ಲಿ ಪ್ರತಿನಿಧಿಯಾಗಿದ್ದ ಕಾಲ. ಅವರು ಪ್ರಥಮ ಬಾರಿಗೆ ಪುರದಳ್ಳಿ ಸೀಮೆಯಿಂದ ಪ್ರಜಾ ಪ್ರತಿನಿಧಿಯಾಗಿ ಆಯ್ಕೆ ಯಾದಾಗ ಊರಿನ ಬೀದಿ ಬೀದಿಗಳಲ್ಲಿ ತಳಿರು ತೋರಣ ಕಟ್ಟಿ ಬಾಜಾ ಬಜಂತ್ರಿಯೊಂದಿಗೆ ಸ್ವಾಗತಿಸಿದ್ದು ತಮಗೆ ನಮಸ್ಕರಿಸಿ ಧನ್ಯತೆಯನ್ನು ಪಡೆದ ಜನ. ಆದರೆ ಈಗ ತಾವು ಯಾರೂ ಗಮನಿಸದ ಒಬ್ಬ ಅನಾಮಿಕ. ಅರ್ಧ ಶತ ಮಾನದ ಕಾಲಾವಧಿಯಲ್ಲಿ ಎಂತಹ ಬದಲಾವಣೆ, ಗಾಂಧಿ ಕಂಡ ಕನಸು ನನಸಾಗಿದೆಯೆ? ಯಾಕೋ ವ್ಯವಸ್ಥೆ ಹದ ತಪ್ಪುತ್ತಿರುವ ಹಾಗೂ ಜನರ ನೈತಿಕತೆ ಅಧಃಪತನ ವಾಗುತ್ತಿರುವುದನ್ನು ಕಂಡು ಚಿಂತೆಗೊಳಗಾದರು. ಅವರಿಗೆ ಈ ಸಂಕೀರ್ಣ ವ್ಯವಸ್ಥೆಯಿಂದ ಓಡಿ ಹೋಗಬೇಕೆನಿಸಿತು. ಆದರೆ ಎಲ್ಲಿಗೆ ಹೋಗುವುದು? ಮಗ ಶ್ರೀನಿವಾಸ ಗೌಡ ನೆನಪಾದ. ಒಮ್ಮೆಯೂ ಆತ ತನ್ನನ್ನು ಅಮೇರಿಕಾಗೆ ಬಾ ಎಂದು ಕರೆಯಲಿಲ್ಲ, ಕರೆದರೂ ಗೌಡರು ಹೋಗುತ್ತಿರ ಲಿಲ್ಲ. ಪರದೇಶದ ವ್ಯಾಮೋಹ ಅವರಿಗಿರಲಿಲ್ಲ. ಅವರಿಗೆ ಮೊದಲ ಬಾರಿಗೆ ಸಾವು ತಮ್ಮ ಹತ್ತಿರಕ್ಕೆ ಬರುತ್ತಿದೆ ಎನಿಸಿತು. ಯಾರಿಗಾಗಿ ಏತಕ್ಕಾಗಿ ಈ ಹೋರಾಟದ ಬದುಕು ಎಂಬ ಜಿಜ್ಞಾಸೆ ಅವರನ್ನು ಕಾಡಿತು. ಇಂದೋ ನಾಳೆಯೋ ಬಿದ್ದು ಹೋಗುವ ತನಗೇಕೆ ಇವೆಲ್ಲ ಎಂಬ ಹತಾಶ ಮನೋಭಾವ ಅವರನ್ನು ಕಾಡಿತು. ಸರ್ಕಾರ ರಚಿಸಿದ ಕಾನೂನು ಕಟ್ಟೆಳೆಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಚಿ ಸ್ವಾರ್ಥ ಸಾಧನೆಗೆ ಇಳಿದಿರುವ ಜನ ಮತ್ತು ಜನ ನಾಯಕರು. ವಿಶ್ವಾಸಾರ್ಹತೆ ಮನೋಬಲ ಕತವ್ಯಪ್ರಜ್ಞೆ ಮರೆತಿರುವ ಸರ್ಕಾರಿಯಂತ್ರ. ಸಜ್ಜನಿಕೆಗೆ ಇದು ಕಾಲವಲ್ಲ ಎನಿಸಿತು ಅವರಿಗೆ. ಏನೇ ಮಾಡಿದರೂ ದುಮ್ಮಳ್ಳಿಯ ಗದ್ದೆ ತೋಟ ಮನೆ ತಮ್ಮ ಕೈತಪ್ಪಿ ದಂತೆಯೆ ಎನ್ನುವ ಭಾವನೆ ಅವರಿಗೆ ಬಂದಿತು. ಯಾರ ಹಿತಕ್ಕಾಗಿ ಈ ಆಸ್ತಿಯ ಉಳಿಕೆಗಾಗಿ ತಾನು ಹೋರಾಟ ಮಾಡಬೇಕು ! ಹೆಂಡತಿ ಇಲ್ಲ, ಮಗ ವಿದೇಶದಲ್ಲಿ ನೆಲೆಸಿಯಾಗಿದೆ ಇನ್ನು ಮೊಮ್ಮಕ್ಕಳು ಅವರಿಗೆ ಈ ದೇಶದ ಸ್ವಂತ ನೆಲದ ಸಂಪರ್ಕವೆ ಇಲ್ಲ. ಪುರದಳ್ಳಿಯಿಂದ ಮೈಸೂರಿಗೆ ಮರಳಿದ ಗೌಡರು ಆಗಾಗ ನಡೆಯುವ ವಿಚಾರಣೆ ಪ್ರಕ್ರಿಯೆಗೆ ಪುರದಳ್ಳಿಗೆ ಬಂದು ಹೋಗುತ್ತಿದ್ಚರು. ಭೂನ್ಯಾಯ ಮಂಡಳಿಯ ತೀರ್ಮಾನ ಹೊರಬರುವ ಮುನ್ನವೆ ಗೌಡರು ವಿಧವಶರಾದರು. ನಿರೀಕ್ಷೆಯಂತೆ ದುಮ್ಮಳ್ಳಿಯ ಪುಟ್ಟೇಗೌಡರ ಗದ್ದೆ ತೋಟ ಮನೆಯ ಸ್ವಾನುಭವ  ದಾರನಾದ ತಿಮ್ಮಪ್ಪನ ಪರವಾಗಿ ಭೂನ್ಯಾಯ ಮಂಡಳಿಯಿಂದ ತೀರ್ಪು ಬಂತು. ತಂದೆಯ ಅಂತ್ಯಕ್ರಿಯೆಗೆ ಮೈಸೂರಿಗೆ ಬಂದಿದ್ದ ಶ್ರೀನಿವಾಸ ಗೌಡ ಬಂದ ಬೆಲೆಗೆ ಅವರ ಮೈಸೂರು ನಿವಾಸವನ್ನು ಮಾರಾಟ ಮಾಡಿ ಮರಳಿ ಲಾಸ್ ಏಂಜಿಲ್ಸ್ ಗೆ ಹೋಗಿ ನೆಲೆಸಿದ. ದುಮ್ಮಳ್ಳಿಯ ಗೌಡರ ಆಸ್ತಿಯ ಮಾಲಿಕನಾದ ತಿಮ್ಮಪ್ಪ ತನ್ನ ಕೈನಡೆಯುವ ವರೆಗೆ ಅಲ್ಪಕಾಲ ದರ್ಬಾರು ನಡೆಸಿದ. ತಿಮ್ಮಪ್ಪ ಬದಲಾದಂತೆ ಆತಯನ ಸುತ್ತಲಿನ ಜಗತ್ತು ಮತ್ತು ಜನಗಳೂ ಬದಲಾಗಿದ್ದರು. ಮಾನವೀಯತೆ ಪರಸ್ಪರ ಸಹಿಷ್ಣುತೆ ಹಿಂದಾಗಿ ಸಮಾಜದಲ್ಲಿ ಸ್ವಾರ್ಥ ಮತ್ತು ಸಮಯಸಾಧಕತನ ಮುಂದಾಗಿತ್ತು.


     ದುಮ್ಮಳ್ಳಿಯ ಎಸ್ಟೇಟ್ನ ಮಾಲಿಕ ತಿಮ್ಮಪ್ಪನ ಏಕಮಾತ್ರ ಸಂತಾನ ದೇವರಾಜ ಅನುಕೂಲ ಸ್ಥಿತಿಯಲ್ಲಿಯೇ ಬೆಳೆದ. ತಿಮ್ಮಪ್ಪನ ನಡುವಳಿಕೆಯ ಪ್ರಭಾ ವಲಯದಲ್ಲಿಯೇ ಬೆಳೆದು ಬಂದ. ವೃದ್ಧಾಪ್ಯದಂಚಿಗೆ ಬಂದ ತಿಮ್ಮಪ್ಪ ತೀವ್ರ ಅಸ್ತಮಾ ಕಾಯಿಲೆಯಿಂದ ಹಾಸಿಗೆ ಹಿಡಿದ. ದುಮ್ಮಳ್ಳಿಯ ಸಮಸ್ತ ಎಸ್ಟೇಟ್ನ ಯಜಮಾನಿಕೆ ದೇವರಾಜನ ಕೈಗೆ ಬಂತು ಎಲ್ಲ ಕಲ್ಯಾಣ ಗುಣಗಳನ್ನು ಅಳವಡಿಸಿಕೊಂಡಿದ್ದ ದೇವರಾಜ ತಿಮ್ಮಪ್ಪನನ್ನು ಕಡೆಗಣಿಸಿದ. ಹಾಸಿಗೆ ಹಿಡಿದ ತಿಮ್ಮಪ್ಪನನ್ನು ಮಗನಾಗಲಿ ಸೊಸೆಯಾಗಲಿ ಯಾರೂ ಸರಿಯಾಗಿ ನೋಡಿಕೊಳ್ಳಲೆ ಇಲ್ಲ. ಸೊಸೆ ಜಯಮ್ಮ ಗಂಡ ದೇವರಾಜನಿಗೆ ತಕ್ಕ ಹೆಂಡತಿ. ತಿಮ್ಮಪ್ಪನ ಹೆಂಡತಿ ದೇವಮ್ಮ ಗತಿಸಿ ವರ್ಷಗಳೆ ಸಂದಿದ್ದವು. ಆಕೆಯೂ ಸಹ ಹಾಸಿಗೆ ಹಿಡಿದು ನರಳಿದಾಗ ಗಂಡ ತಿಮ್ಮಪ್ಪನೂ ಸೇರಿ ಯಾರೂ ಆಕೆಯನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ ಕೆಲವು ಸಾಂತ್ವನದ ನುಡಿಗಳನ್ನು ಆಡಿರಲಿಲ್ಲ. ಮಗನೆ ತಂದೆಯನ್ನು ಸರಿಯಗಿ ಗಮನಿಸ ದಾದಾಗ ಸೊಸೆಯಾದ ಅವಳೇಕೆ  ಮಾವನಸೇವೆ ಮಾಡಬೇಕು. ಸರಿಯಾದ ಊಟ ಉಪಚಾರ ಚಿಕಿತ್ಸೆಗಳಿಲ್ಲ, ಎಲ್ಲ ದೈಹಿಕ ಬಾಧೆಗಳು ಹಾಸಿಗೆಯ ಮೇಲೆಯೆ ಕುಡಿಯಲು ನೀರು ಬೇಕಿದ್ದರೂ ಕೂಗಿ ಕೂಗಿ ಕೇಳಿ ಪಡೆಯ ಬೇಕಾದಂತಹ ಪರಿಸ್ಥಿತಿ ಮೂತ್ರ ಕಟ್ಟಿಕೊಂಡು ಬಹಳ ಬಾಧೆ ಪಟ್ಟ ತಿಮ್ಮಪ್ಪ ವ್ಯಥೆಯಿದ ಕಣ್ಮುಚ್ಚಿದ. ಮೂತ್ರ ಕಟ್ಟಿಕೊಳ್ಳುವಿಕೆ ಅಂತಹ ಗಂಭೀರವಾದ ಕಾಯಿಲೆಯೇನೂ ಅಲ್ಲ. ಸಾಮಾನ್ಯ ವೈದ್ಯರೂ ಚಿಕಿತ್ಸೆ ನೀಡಬಲ್ಲಂತಹ ಕಾಯಿಲೆ. ಆದರೆ ವೃದ್ಧರೋಗಿ ತಿಮ್ಮಪ್ಪ ಮಗ ಸೊಸೆಯರಿಗೆ ಬೇಡವಾಗಿದ್ದ. ಮನುಷ್ಯ ಚಿರಂಜೀವಿಯಲ್ಲ ಯಾವತ್ತೂ ಸಾಯುವವನೆ, ತಿಮ್ಮಪ್ಪನ ಸಾವು ಸನ್ನಿಹಿತವಾಗಿತ್ತು. ಆದರೆ ಚಿಕಿತ್ಸೆ ಕೊಡಿಸಿ ಆತನ ನೋವಿನ ಬಾಧೆಯನ್ನು ಕಡಿಮೆ ಮಾಡಬಹುದಿತ್ತು. ಮಗ ದೇವ ರಾಜನಿಗಾಗಿ ಅನುಕೂಲವಾಗಿ ಬದುಕಲು ಎಲ್ಲ ಸೌಕರ್ಯಗಳನ್ನು ತಿಮ್ಮಪ್ಪ ಮಾಡಿ ಇಟ್ಟಿದ್ದ. ಯಾಕೆ ದೇವರಾಜ ತನ್ನ ತಂದೆ ತಾಯಿಗಳ ಬಗ್ಗೆ ಕಠಿಣನಾದ? ಮಗ ದೇವರಾಜನನ್ನು ತಿಮ್ಮಪ್ಪ ಬೆಳೆಸಿದ ರೀತಿ ಸರಿಯಿರಲಿಲ್ಲವೆ? ಇನ್ನು ಹೆಣ್ಣು ಮಮತೆಯ ಸಾಕಾರ ಮೂರ್ತಿ, ಜಯಮ್ಮ ತನ್ನ ತಂದೆಯ ವಯಸ್ಸಿನ ಮಾವ ತಿಮ್ಮಪ್ಪನನ್ನು ಏಕೆ ಕಡೆಗಣಿಸಿದಳು ಅದೂ ಅಷ್ಟು ನಿಕೃಷ್ಟವಾಗಿ? ಹೊರ ಜಗತ್ತಿಗೆ ತಿಮ್ಮಪ್ಪ ಸ್ವಾರ್ಥ ನೀಚ ಏನೇ ಆಗಿದ್ದಿರಲಿ ತನ್ನ ಕುಟುಂಬದ ಮಟ್ಟಿಗೆ ಒಳ್ಳೆಯದನ್ನೆ ಮಾಡಿದ್ದ,ಯಾಕೆ ತಿಮ್ಮಪ್ಪನ ಅಂತ್ಯ ಕರುಣಾಜನಕ ವಾಯಿತು? ಮಾನವೀಯ ಗುಣ ನಡತೆಗಳನ್ನು ದುರ್ಗಪ್ಪ ತನ್ನ ಮಗ ತಿಮ್ಮಪ್ಪನಿಗೆ ಹೇಳಲಿಲ್ಲ, ತಿಮ್ಮಪ್ಪ ತನ್ನ ಮಗ ದೇವರಾಜನಿಗೆ ಹೇಳಲಿಲ್ಲ. ತಂದೆ ಮಗ ಮೊಮ್ಮಗನ ಸಂಬಂಧ ಎಲ್ಲಿಯೂ ಗಟ್ಟಿಗೊಳ್ಳಲೇ ಇಲ್ಲ. ಕಾರಣ ದುರ್ಗಪ್ಪನ ಸಾವು ತಿಮ್ಮಪ್ಪನ ಮನ ತಟ್ಟಲಿಲ್ಲ. ತಿಮ್ಮಪ್ಪನ ದಾರುಣ ಸ್ಥಿತಿ ದೇವರಾಜನ ಮನ ಕರಗಿ ಸಲಿಲ್ಲ. ದೇವರಾಜನ ಕೊನೆ ಹೇಗೆ? ಇದಕ್ಕೆ ಕಾಲವೇ ಉತ್ತರ ಹೇಳಬೇಕು! ಇದು ಬರಿ ತಿಮ್ಮಪ್ಪನೊಬ್ಬನ ಅಂತ್ಯದ ಕಥೆ ಮಾತ್ರವಲ್ಲ, ನಮ್ಮ ಸುತ್ತ ಮುತ್ತಲಿನ ಸಮಾಜದ, ಹಾಗೂ  ದೇಶದ ಅನೇಕ ಕುಟುಂಬಗಳ ವಾಸ್ತವ ಸ್ಥಿತಿ. ದುಮ್ಮಳ್ಳಿಯ ತಿಮ್ಮಪ್ಪನ ಅಂತ್ಯ ಒಂದು ಉದಾಹರಣೆಯಷ್ಟೆ.


                                                                         ***  


                                                                                                                   ( ಮುಗಿಯಿತು )


 


 


 


 


 


 


 

Rating
No votes yet

Comments