ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 18

ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 18

ಅಂದು ಮಾರ್ಚ್ ೩೧. ನನ್ನ ಹುಟ್ಟಿದ ಹಬ್ಬ. ಅಂದು ಆಫೀಸಿಗೆ ರಜೆ ಹಾಕಿ ಪಾವನಿಯ ಜೊತೆ ಆಚೆ ಹೋಗಬೇಕು ಅಂದುಕೊಂಡಿದ್ದೆ. ಆದರೆ ಅದೇ ದಿನ ಪಾವನಿಗೆ ನನ್ನ ಕಂಪನಿ ಯಲ್ಲಿ ಇಂಟರ್ವ್ಯೂ ಗೆ ಕಾಲ್ ಬಂದಿತ್ತು. ಮೊದಲೇ ಪಾವನಿಯ ಇಂಟರ್ವ್ಯೂ ಮಾಡುವವರು ಯಾರು ಎಂದು ಕೇಳಿಕೊಂಡು ಅವರಿಗೆ ಹೇಳಿದ್ದೆ. ನಮ್ಮ ಕಡೆಯವರು ಸ್ವಲ್ಪ ನೋಡಿ ಎಂದು. ಅಸಲಿಗೆ ಪಾವನಿಗೆ ಯಾವುದೇ ಶಿಫಾರಸು ಬೇಕಿರಲಿಲ್ಲ. ಏಕೆಂದರೆ ಅವಳು ಅಷ್ಟು ಬುದ್ಧಿವಂತೆ. ಹಿಂದಿನ ದಿನ ರಾತ್ರಿಯೇ ಅವಳು ನನಗೆ ಕರೆ ಮಾಡಿ ಹುಟ್ಟು ಹಬ್ಬದ ಶುಭಾಷಯ ತಿಳಿಸಿದ್ದಳು. ಬೆಳಿಗ್ಗೆ ಮನೆಯಲ್ಲಿ ಅಮ್ಮ ಪಾಯಸ ಮಾಡಿ ಪೂಜಾ ಕೈಲಿ ಹೇಳಿ ಕಳುಹಿಸಿದ್ದರು. ಅವನಿಗೆ ಪಾಯಸ ಕುಡಿದುಕೊಂಡು ಹೋಗಲು ಹೇಳು ಎಂದು. ನಾನು ಅಡಿಗೆ ಮನೆಗೆ ಬಂದು ಅಮ್ಮನ ಕೈಲಿ ಅಕ್ಷತೆ ಕೊಟ್ಟು ಅಪ್ಪನನ್ನು ಕರೆದು ಇಬ್ಬರಿಗೂ ನಮಸ್ಕಾರ ಮಾಡಿದೆ.  ಅಮ್ಮ ಇವತ್ತಾದರೂ ನಗುತ್ತ ಮಾತಾಡಮ್ಮ ಎಂದಿದ್ದಕ್ಕೆ ನಮ್ಮ ನಗುವಿಗೆಲ್ಲ ಬೆಲೆ ಎಂದಿದೆ ಎಂದು ತಮ್ಮ ಕೆಲಸದಲ್ಲಿ ಮುಳುಗಿದರು. ಇಲ್ಲಿ ಜಾಸ್ತಿ ಹೊತ್ತಾದರೆ ಅಲ್ಲಿ ಪಾವನಿ ಇಂಟರ್ವ್ಯೂ ಗೆ ಬಂದಿರುತ್ತಾಳೆ ಎಂದು ಯೋಚಿಸಿ ಪಾಯಸ ಕುಡಿದು ಹೊರಟು ಆಫೀಸಿನ ಬಳಿ ಬಂದೆ.

ಆಗಲೇ ಪಾವನಿ ಬಂದು ರಿಸೆಪ್ಶನ್ ನಲ್ಲಿ ಕೂತಿದ್ದಳು. ನಾನು ಅವಳನ್ನು ಮಾತಾಡಿಸಿ ಅವಳನ್ನು ಇಂಟರ್ವ್ಯೂ ಕೋಣೆಗೆ ಕರೆದುಕೊಂಡು ಹೋಗಿ ಬಿಟ್ಟು ಮುಗಿದ ತಕ್ಷಣ ಕರೆ ಮಾಡು ನಾನು ಬರುತ್ತೇನೆ ಎಂದೆ. ನನಗೆ ಆಫೀಸಿನಲ್ಲಿ ಎಲ್ಲರೂ ಶುಭ ಕೋರಿ ಏನಪ್ಪಾ ಪ್ರತಿ ಸಾರಿ ಹುಟ್ಟು ಹಬ್ಬಕ್ಕೆ ರಜಾ ಹಾಕುವವನು ಈ ಸಾರಿ ಆಫೀಸಿನಲ್ಲಿ ಕಾಣಿಸುತ್ತಿದ್ದೀಯ ಏನು ವಿಶೇಷ ಎಂದು ಕೇಳುತ್ತಿದ್ದರು. ಅವರಿಗೆಲ್ಲ ಏನೂ ಇಲ್ಲ ಎಂದು ಕೆಲಸ ಮಾಡಲು ಕೂತೆ. ದೇಹ ಮಾತ್ರ ಸಿಸ್ಟಂ ಮುಂದೆ ಇತ್ತು ಮನಸೆಲ್ಲ ಪಾವಿಯ ಮೇಲೆ ಇತ್ತು. ಸರಿಯಾಗಿ ಊಟದ ಸಮಯಕ್ಕೆ ಪಾವನಿ ಕಾಲ್ ಮಾಡಿದಳು. ರಿಸೆಪ್ಶನ್ ಬಳಿ ಹೋಗಿ ಅವಳನ್ನು ಭೇಟಿ ಮಾಡಿ ಏನಾಯಿತು ಇಂಟರ್ವ್ಯೂ ಎಂದೆ. ಎರಡೂ ರೌಂಡ್ ಯಶಸ್ವಿಯಾಗಿ ಮುಗಿಸಿದೆ. ಊಟ ಆದ ಮೇಲೆ HR ರೌಂಡ್ ಇದೆ ಅಂದಳು. congrats ಪಾವಿ. HR ರೌಂಡ್ ಅಂದರೆ ಹೆಚ್ಚೂ ಕಡಿಮೆ ಕೆಲಸ ಆದಂತೆ. ನನಗೆ ಮೊದಲೇ ಗೊತ್ತಿತ್ತು. ನೀನು ಖಂಡಿತ ಯಶಸ್ವಿ ಆಗುತ್ತೀಯ ಎಂದು ನಡಿ ಊಟಕ್ಕೆ ಹೋಗೋಣ ಎಂದು ಕ್ಯಾಂಟೀನ್ ಗೆ ಹೋಗಿ ಊಟ ಮಾಡಿ ಬಂದೆವು.

ಅವಳನ್ನು ಮತ್ತೆ HR ರೂಮಿನ ಬಳಿ ಬಿಟ್ಟು ಮುಗಿದ ಮೇಲೆ ಫೋನ್ ಮಾಡಲು ಹೇಳಿ ನಾನು ಅಲ್ಲೇ ತಿರುಗಾಡುತ್ತಿದ್ದೆ. ಒಂದು ಗಂಟೆಯ ನಂತರ ಪಾವನಿ ಫೋನ್ ಮಾಡಿದಳು. ತಕ್ಷಣ ಹೋಗಿ ಅವಳನ್ನು ಭೇಟಿ ಆದೆ. ಅವಳು ಕೈಯಲ್ಲಿದ್ದ ಕವರನ್ನು ನನ್ನ ಮುಂದೆ ಆಡಿಸಿ ಆಫರ್ ಲೆಟರ್ ಎಂದು ತೋರಿಸಿದಳು. Congrats ಪಾವಿ ವೆರಿ ಗುಡ್. ಯಾವಾಗಿನಿಂದ ಸೇರುವುದಕ್ಕೆ ಹೇಳಿದ್ದಾರೆ. ಹಳೆ ಕಂಪನಿ ಯಲ್ಲಿ ಒಂದು ತಿಂಗಳು ನೋಟಿಸ್ ಪೀರಿಯಡ್ ಇದೆ. ಆದರೆ ಸದ್ಯಕ್ಕೆ ಪ್ರಾಜೆಕ್ಟ್ ಇಲ್ಲದೆ ಇರುವುದರಿಂದ ಮುಂಚೆಯೇ ರಿಲೀವ್ ಮಾಡಿದರೂ ಮಾಡುತ್ತಾರೆ. ಅಲ್ಲಿ ರಿಲೀವ್ ಆದ ತಕ್ಷಣ ಸೇರುತ್ತೇನೆ ಎಂದು ಹೇಳಿದ್ದೇನೆ. ಓಕೆ ನಡೀ ಹಾಗಿದ್ರೆ ಪಾರ್ಟಿ ಕೊಡಿಸು ಎಂದೆ. ಅದಕ್ಕವಳು ಎಲ್ಲಾದರೂ ಗಂಡ ಹೆಂಡತಿಯನ್ನು ಪಾರ್ಟಿ ಕೇಳುತ್ತಾನ ಎಂದಳು. ಅಸಲಿಗೆ ನೀನು ಪಾರ್ಟಿ ಕೊಡಿಸಬೇಕು ಎಂದಳು. ಯಾವುದಕ್ಕೆ ಎಂದು ಕೇಳಿದ್ದಕ್ಕೆ ಸರ್ ಇವತ್ತು ನಿಮ್ಮ ಬರ್ತ್ ಡೇ ಯಾಕೆ ಮರೆತು ಹೋಯ್ತಾ? ನಿನ್ನ ಇಂಟರ್ವ್ಯೂ ಸಂಭ್ರಮದಲ್ಲಿ ನನ್ನ ಬರ್ತ್ ಡೇ ನೆನಪೇ ಇಲ್ಲ. ಆದರೂ ಎಲ್ಲಾದರೂ ಹೆಂಡತಿ ಗಂಡನನ್ನು ಪಾರ್ಟಿ ಕೇಳುತ್ತಾಳ ಎಂದು ಅವಳನ್ನು ನೋಡಿ ನಕ್ಕೆ. ಒಂದು ತಿಂಗಳ ನಂತರ ಅವಳು ನನ್ನ ಕಂಪನಿ ಗೆ ಸೇರಿದಳು. ವಾರಕ್ಕೊಮ್ಮೆ ಎರಡು ಬಾರಿ ಭೇಟಿ ಮಾಡುತ್ತಿದ್ದ ನನಗೆ ನಿಧಿಯೇ ಸಿಕ್ಕಂತಾಗಿತ್ತು. ಪ್ರತಿ ದಿನ ಅವಳ ಭೇಟಿ, ಅವಳ ಮಾತುಗಳು ನನಗೆ ಸಂತೋಷ ಎಷ್ಟರ ಮಟ್ಟಿಗೆ ಆಗಿತ್ತೆಂದರೆ ನಮ್ಮಿಬ್ಬರಿಗೆ ಮದುವೆ ಆಗಿಯೇ ಬಿಟ್ಟಿದೆ ಎನ್ನುವಷ್ಟು ಆಗಿತ್ತು.

ಅಷ್ಟರಲ್ಲಿ ಆಷಾಡ ಮಾಸ ಬಂದಿತ್ತು. ಇನ್ನು ಆಷಾಡ ಮುಗಿದ ಮೇಲೆ ಮದುವೆಯ ಸೀಸನ್ ಶುರು. ಅಷ್ಟರಲ್ಲೇ ಅಮ್ಮನನ್ನು ಒಪ್ಪಿಸಬೇಕು ಎಂದು ನಿರ್ಧರಿಸಿ ಎಲ್ಲಾದರೂ ಆಚೆ ಹೋಗೋಣ ಎಂದು ನಿರ್ಧರಿಸಿ ಮತ್ತೆ ಧರ್ಮಸ್ಥಳಕ್ಕೆ ಹೋಗೋಣ ಎಂದುಕೊಂಡು ಕುಟುಂಬ ಸಮೇತವಾಗಿ ಧರ್ಮಸ್ಥಳಕ್ಕೆ ಹೊರಟೆವು. ಅಲ್ಲಿ ಅಮ್ಮ ಸ್ವಲ್ಪ ಶಾಂತವಾಗಿದ್ದರು. ದರ್ಶನ ಮುಗಿಸಿ ರೂಮಿಗೆ ಬಂದ ಮೇಲೆ ಅಮ್ಮನ ತೊಡೆಯ ಮೇಲೆ ಮಲಗಿ ಅಮ್ಮ ಪ್ಲೀಸ್ ಅಮ್ಮ ಪಾವನಿಯನ್ನು ಮದುವೆ ಮಾಡಿಕೊಳ್ಳಲು ಒಪ್ಪಿಗೆ ಕೊಡಮ್ಮ. ನಾನು ಬೇಕಿದ್ದರೆ ಅಂದೇ ಓಡಿ ಹೋಗಿ ಮದುವೆ ಮಾಡಿಕೊಳ್ಳಬಹುದಿತ್ತು. ಆದರೆ ನನಗೆ ಮೊದಲು ನೀವು ಮುಖ್ಯ ನಿಮ್ಮ ಮನಸಿಗೆ ತೊಂದರೆ ಉಂಟು ಮಾಡಲು ನನಗಿಷ್ಟ ಇಲ್ಲ. ಅದೂ ಅಲ್ಲದೆ ಹಾಗೇನಾದರೂ ನಾನು ಓಡಿ ಹೋಗಿದ್ದರೆ ನಮ್ಮ ಕುಟುಂಬದ ಮರ್ಯಾದೆ ಇನ್ನೂ ಹಾಳಾಗುತ್ತಿತ್ತು. ನನಗೂ ಮನೆ ಮರ್ಯಾದೆ ಎಲ್ಲ ಗೊತ್ತಮ್ಮ. ಅದಕ್ಕೆ ದುಡುಕದೆ ನಿಮ್ಮ ಒಪ್ಪಿಗೆಗಾಗಿ ಕಾಯುತ್ತಿರುವುದು ಎಂದೆ. ಅಮ್ಮ ಸ್ವಲ್ಪ ಹೊತ್ತು ಏನೂ ಮಾತಾಡಲಿಲ್ಲ. ನನಗೆ ಏನು ಮಾಡಬೇಕೋ ಗೊತ್ತಾಗದೆ ಎದ್ದು ಆಚೆ ಬಂದು ನಾನು ಪಾವನಿಯನ್ನು ಮೊದಲ ಬಾರಿ ಭೇಟಿ ಆಗಿದ್ದ ಜಾಗಕ್ಕೆ ಹೋಗಿ ಕುಳಿತೆ. ಅಲ್ಲಿ ಹಾವು ಬಂದಿದ್ದು, ನಾನು ಅದನ್ನು ನೋಡಿ ಮಾತಾಡಿದ್ದುಾವಿ ನನಗೆ ಬೈದದ್ದು ಎಲ್ಲ ನೆನೆಸಿಕೊಂಡು ನಗು ಬಂತು. ಬಹುಷಃ ಪಾವಿ ಅಂದಂತೆ ದೇವರೇ ಸರ್ಪದ ರೂಪದಲ್ಲಿ ಬಂದು ಮ್ಮಿಬ್ಬರನ್ನು ಭೇಟಿ ಆಗುವಂತೆ ಮಾಡಿದ್ದರು ಅನಿಸತ್ತೆ. ದೇವರೇ ಹಾಗೆಯೇ ಅಮ್ಮನ ಮನಸು ಬದಲಾಗಿ ಮದುವೆಗೆ ಒಪ್ಪಿಗೆ ಕೊಡುವ ಹಾಗೆ ಮಾಡಪ್ಪಾ ಎಂದುಕೊಂಡು ಪಾವಿಗೆ ಫೋನ್ ಮಾಡಿದೆ. ಏನಪ್ಪಾ ಆಯ್ತಾ ದರ್ಶನಎಲ್ಲಿದ್ದೀಯ ನೆನ್ನೆ ರಾತ್ರಿ ಇಂದ ಫೋನ್ ಇಲ್ಲ ಮರೆತು ಬಿಟ್ಯ ನನ್ನನ್ನು ಎಂದಳು. ಪಾವಿ ದರ್ಶನ ಎಲ್ಲ ಆಯ್ತು ಈಗ ಎಲ್ಲಿದ್ದೀನಿ ಗೊತ್ತ? ನಾನು ನಿನ್ನನ್ನು ಮೊದಲ ಬಾರಿ ಭೇಟಿ ಮಾಡಿದೆ ಗೊತ್ತ ಅಲ್ಲಿದೀನಿ. ಅಂದಿನ ದಿನದ ಘಟನೆ ನೆನೆಸಿಕೊಂಡು ನಗು ಬರುತ್ತಿದೆ. ಎಷ್ಟು ಸಿಲ್ಲಿ ಆಗಿತ್ತು ಅಲ್ವಾ ಅವತ್ತಿನ ಘಟನೆ ಎಂದು ಮಾತಾಡಲು ಶುರು ಮಾಡಿದವನು ಸುಮಾರು ಒಂದು ಘಂಟೆಯವರೆಗೂ ಮಾತಾಡಿ ಆಮೇಲೆ ರೂಮಿಗೆ ಬಂದೆ

Rating
No votes yet