ಕಥೆ = ಪಾವನಿ (ಮರೆಯಲಾಗದ ನೆನಪುಗಳು) ಭಾಗ 19
ಅಪ್ಪ ಅಮ್ಮ ಪೂಜಾ ನಗು ನಗುತ್ತ ಏನೋ ಮಾತಾಡಿಕೊಳ್ಳುತ್ತಿದ್ದರು. ಬಹಳ ದಿನದ ಮೇಲೆ ಅಮ್ಮನ ಮುಖದಲ್ಲಿ ನಗು ಕಂಡಿದ್ದೆ. ಏನಪ್ಪಾ ನನ್ನ ಬಿಟ್ಟು ಎಲ್ರೂ ನಗ್ತಾ ಇದ್ದೀರಾ, ಏನು ಅಂತಾ ಹೇಳಿದ್ರೆ ನಾವು ನಗುತ್ತೀವಪ್ಪ. ಅದಕ್ಕೆ ಅಮ್ಮ, ನೀನು ನಮ್ಮ ಮಾತಿಗೆಲ್ಲ ಎಲ್ಲಪ್ಪ ನಗುತ್ತೀಯ? ಬರೀ ಪಾವನಿಯ ಮಾತಿಗೆ ಮಾತ್ರ ನಗುತ್ತೀಯ ಎಂದರು. ಅಮ್ಮ ಯಾಕಮ್ಮ ಚುಚ್ಚಿ ಮಾತಾಡ್ತ್ಯ. ಪ್ಲೀಸ್ ಹಾಗೆಲ್ಲ ಮಾತಾಡ ಬೇಡಮ್ಮ. ಅಷ್ಟರಲ್ಲಿ ಅಪ್ಪ, ಲೇ ಸುಮ್ನಿರೋ ಅವಳೇನೋ ತಮಾಷೆ
ನನಗೆ ಸಂತೋಷ ತಡೆಯಲು ಆಗದೆ ಕಣ್ಣಲ್ಲಿ ನೀರು ತುಂಬಿತ್ತು. ಅಮ್ಮನ ಬಳಿ ಹೋಗಿ ಅಮ್ಮ ತುಂಬಾ ಥ್ಯಾಂಕ್ಸ್ ಅಮ್ಮ ಒಪ್ಪಿದ್ದಕ್ಕೆ ಎಂದೆ. ನೋಡು ನಿಮ್ಮ ಅಪ್ಪನ ಮಾತು ಕೇಳಿ ನಮ್ಮ ಬಂಧುಗಳನ್ನು ಎದುರು ಹಾಕಿಕೊಂಡು ಒಪ್ಪಿಗೆ ಕೊಡುತ್ತಿದ್ದೇನೆ. ಆಮೇಲೆ ಏನಾದರೂ ಹೆಚ್ಚು ಕಮ್ಮಿ ಆದರೆ ನೀನುಂಟು ನಿಮ್ಮಪ್ಪ ಉಂಟು ನನ್ನನ್ನು ಏನೂ ಕೇಳಬಾರದು ಎಂದರು. ಅಮ್ಮ ನೀನಂದುಕೊಳ್ಳುವ ಹಾಗೆ ಏನೂ ಆಗಲ್ಲಮ್ಮ. ನಾನು ಯಾವತ್ತೂ ನಿಮಗೆ ಕೆಟ್ಟ ಹೆಸರು ತರಲ್ಲ. ನನ್ನ ಮೇಲೆ ನಂಬಿಕೆ ಇಡಮ್ಮ ಎಂದು ಮತ್ತೆ ಆಚೆ ಬಂದೆ. ಮೊದಲು ಪಾವನಿಗೆ ವಿಷಯ ತಿಳಿಸಬೇಕಿತ್ತು. ಆಚೆ ಬಂದು ಪಾವನಿಗೆ ವಿಷಯ ತಿಳಿಸಿದೆ. ಅವಳಿಗೂ ವಿಷಯ ಕೇಳಿ ಬಹಳ ಸಂತೋಷವಾಯಿತು. ಪಾವಿ ಇನ್ನು ನಿನ್ನ ಕೆಲಸ ಶುರು. ನಿಮ್ಮ ಮನೆಯಲ್ಲಿ ಒಪ್ಪಿಸುವ ಜವಾಬ್ದಾರಿ ನಿನ್ನದು. ನಾನು ನಾಳೆ ಊರಿಗೆ ಬಂದು ಭೇಟಿ ಮಾಡುತ್ತೇನೆ ಎಂದು ಫೋನ್ ಇಟ್ಟೆ.
ಅಂದು ಸಂಜೆ ಮತ್ತೊಮ್ಮೆ ದರ್ಶನಕ್ಕೆ ಹೋಗಿ ದೇವರ ಮುಂದೆ ನಿಂತು ಸ್ವಾಮಿ ಅಂತೂ ನನ್ನ ಮೊರೆ ಆಲಿಸಿದೆಯಲ್ಲ ಅಂದುಕೊಂಡು ನಮಸ್ಕಾರ ಹಾಕಿ ಆಚೆ ಬಂದು ಬೆಂಗಳೂರಿಗೆ ವಾಪಸ್ ಹೊರಟೆವು. ಬರಬೇಕಾದರೆ ಇದ್ದ ಭಯ, ದುಗುಡ ಎಲ್ಲವೂ ಕಳೆದು ಮನಸು ನಿರಾಳವಾಗಿತ್ತು. ಎಲ್ಲರೂ ನಗು ನಗುತ್ತ ಮಾತಾಡುತ್ತಿದ್ದರು. ಇನ್ನೇನು ಅವರ ಮನೆಯಲ್ಲಿ ಒಪ್ಪಿಬಿಟ್ಟರೆ ಸಾಕಪ್ಪ ಎಂದುಕೊಂಡೆ.
ಬೆಂಗಳೂರಿಗೆ ಬಂದು ಆಫೀಸಿಗೆ ಹೋದ ತಕ್ಷಣ ಪಾವನಿಗೆ ಕಾಲ್ ಮಾಡಿ ಕ್ಯಾಂಟೀನ್ ಗೆ ಬರಕ್ಕೆ ಹೇಳಿದೆ. ಕ್ಯಾಂಟೀನ್ ನಲ್ಲಿ ಭೇಟಿ ಆಗಿ ಮೊದಲು ಅವಳಿಗೆ ಪ್ರಸಾದ ಕೊಟ್ಟು ಪಾವಿ ನನಗೆಷ್ಟು ಸಂತೋಷ ಆಗಿದೆ ಎಂದು ಹೇಳಲು ಸಾಧ್ಯವಾಗುತ್ತಿಲ್ಲ. ಈಗಲೇ ನಿನ್ನನ್ನು ಗಟ್ಟಿಯಾಗಿ ಅಪ್ಪಿಕೊಂಡು ಒಂದು ಮುತ್ತು ಕೊಡಬೇಕು ಎನ್ನುವಷ್ಟು ಸಂತೋಷ ಆಗುತ್ತಿದೆ ಎಂದೆ. ಹಲೋ ಹಲೋ ಸಮಾಧಾನ ಹಾಗೇನಾದರೂ ಮಾಡಿಬಿಟ್ಟೆ ಆಮೇಲೆ ಇಬ್ಬರ ಮಾನವೂ ಹರಾಜಾಗಿ ಬಿಡುತ್ತದೆ. ಓಕೆ ಓಕೆ, ಅದು ಸರಿ ಪಾವಿ ಮನೆಯಲ್ಲಿ ಮಾತಾಡಿದೆಯ? ಇಲ್ಲ ಕಣೋ ಅಮ್ಮ ಊರಲ್ಲಿ ಇಲ್ಲ ಇವತ್ತು ಸಂಜೆ ಬರುತ್ತಾರೆ. ಮೊದಲು ಅಮ್ಮನ ಬಳಿ ಮಾತಾಡಿ ಆಮೇಲೆ ಅಪ್ಪನ ಹತ್ತಿರ ಮಾತಾಡೋಣ ಅಂತ ಇದ್ದೀನಿ. ಪಾವಿ, ನನಗೆ ಇವಾಗ ಅದೇ ಭಯ ಆಗುತ್ತಿದೆ. ಎಷ್ಟೋ ಕಷ್ಟ ಪಟ್ಟು ಮನೆಯಲ್ಲಿ ಒಪ್ಪಿಸಿದ್ದೇನೆ ಈಗ ನಿಮ್ಮ ಮನೆಯಲ್ಲಿ ಏನಾದರೂ ಒಪ್ಪದಿದ್ದರೆ ನಾನೇನು ಆಗುತ್ತೀನೋ ನನಗೆ ಗೊತ್ತಿಲ್ಲ.
ಲೇ ಸಿಕ್ಕಾಪಟ್ಟೆ ಆತುರ ಕಣೋ ನಿನಗೆ. ಇನ್ನ ನಾನು ಮಾತೇ ಆಡಿಲ್ಲ ಆಗಲೇ ಯಾಕೆ ನೆಗೆಟಿವ್ ಆಗಿ ಯೋಚನೆ ಮಾಡ್ತೀಯ. ನನಗೆ ನಂಬಿಕೆ ಇದೆ ಅವರು ಖಂಡಿತ ಒಪ್ಪುತ್ತಾರೆ ಎಂದು. ನಾನು ಸಂಜೆ ಫೋನ್ ಮಾಡಿ ತಿಳಿಸುತ್ತೇನೆ ಸುಮ್ಮನೆ ತಲೆ ಕೆಡಿಸಿ ಕೊಳ್ಳಬೇಡ ಹೋಗು ಕೆಲಸ ಮಾಡು ಎಂದಳು. ಸಿಸ್ಟಂ ಬಳಿ ಕೂತು ಕೆಲಸ ಶುರು ಮಾಡಿದೆ. ಕೆಲಸ ಸಿಕ್ಕಾಪಟ್ಟೆ ಇದ್ದದ್ದರಿಂದ ಯಾವುದರ ಬಗ್ಗೆಯೂ ಯೋಚನೆ ಬರಲಿಲ್ಲ. ಊಟದ ಸಮಯ ಹಾಗೂ ಟೀ ಟೈಮ್ ನಲ್ಲಿ ಮಾತ್ರ ಪಾವನಿಯನ್ನು ಭೇಟಿ ಮಾಡಿದ್ದೆ. ಅವಳು ಅಂದು ಸ್ವಲ್ಪ ಬೇಗನೆ ಹೋಗುತ್ತೇನೆ ಎಂದಿದ್ದಳು. ನಾನು ಕೆಲಸ ಮುಗಿಸಿ ಹೊರಡುವ ಹೊತ್ತಿಗೆ ಎಂಟು ಗಂಟೆ ಆಗಿತ್ತು. ಅಲ್ಲಿಯವರೆಗೂ ಪಾವನಿ ಇಂದ ಯಾವುದೇ ಕರೆ ಬಂದಿರಲಿಲ್ಲ. ಮನೆಗೆ ಬಂದು ಊಟ ಮಾಡಿ ಕೈ ತೊಳೆದುಕೊಂಡು ಬಂದು ಟಿ ವಿ ಯ ಮುಂದೆ ಕೂತಿದ್ದಾಗ ಅಮ್ಮ ಎಂದರು ಲೋ ಇನ್ನೆರಡು ದಿನದಲ್ಲಿ ಆಷಾಢ ಮುಗಿಯತ್ತೆ. ಆಮೇಲೆ ಒಂದು ದಿನ ಅವರ ಮನೆಗೆ ಹೋಗಿ ಮಾತಾಡಿಕೊಂಡು ಬರಬೇಕು ನಾಳೆ ಹೋಗಿ ಒಳ್ಳೆ ದಿನ ಯಾವತ್ತು ಎಂದು ಕೇಳಿಕೊಂಡು ಬರುತ್ತೇನೆ.ಆಮೇಲೆ ಹೋಗೋಣ ಎಂದರು.