ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 20

ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 20

ಇನ್ನು ಪಾವಿ ಅವಳ ಮನೆಯಲ್ಲಿ ಮಾತಾಡಿಲ್ಲ ಎಂದು ಅಮ್ಮನಿಗೆ ಗೊತ್ತಾದರೆ ಖಂಡಿತ ಬೈಸಿಕೊಳ್ಳಬೇಕು ಎಂದು ಆಲೋಚಿಸುತ್ತಿದ್ದೆ ಅಷ್ಟರಲ್ಲಿ ಪಾವಿಯ ಫೋನ್ ಬಂತು. ರೂಮಿಗೆ ಬಂದು ಫೋನ್ ಎತ್ತಿ ಪಾವಿ ನಿನಗೆ ನೂರು ವರ್ಷ ಕಣೆ. ಈಗಷ್ಟೇ ನಿನ್ನ ಬಗ್ಗೆಯೇ ಯೋಚನೆ ಮಾಡುತ್ತಿದ್ದೆ ಅಷ್ಟರಲ್ಲಿ ನೀನೆ ಕರೆ ಮಾಡಿದೆ. ಮೊದಲು ಏನಾಯ್ತು ಎಂದು ಹೇಳು ಎಂದೆ. ಮನೆಯಲ್ಲಿ ಮಾತಾಡಿದೆ ಕಣೋ, ಅವರೂ ತುಂಬಾ ಖುಷಿಯಾಗಿ ನೀನು ಮದುವೆ ಮಾಡಿಕೊಳ್ಳುತ್ತೇನೆ ಎಂದರೆ ಅದಕ್ಕಿಂತ ಬೇರೆ ಸಂತೋಷ ಏನು ಬೇಕಮ್ಮ ನಮಗೆ ಎಂದು ಹೇಳಿದರು ಕಣೋ. ಅಮ್ಮ ಹೇಳಿದರು ಒಂದು ಸಲ ಮನೆಗೆ ನಿಮ್ಮ ಮನೆಯವರನ್ನು ಕರೆದುಕೊಂಡು ಬರಬೇಕಂತೆ. ಆಮೇಲೆ ಮುಹೂರ್ತ ನೋಡೋಣ ಎಂದಿದ್ದಾರೆ ಎಂದಳು. ನನಗೆ ಇನ್ನೇನು ಸ್ವರ್ಗಕ್ಕೆ ಮೂರೇ ಗೇಣು ನಿಸಿತು.

ಪಾವಿ ಅಮ್ಮ ಕೂಡ ಇವತ್ತು ಅದೇ ಹೇಳುತ್ತಿದ್ದರು ಇನ್ನೊಂದೆರಡು ದಿನದಲ್ಲಿ ಆಷಾಢ ಮುಗಿಯತ್ತಂತೆ. ಆಮೇಲೆ ಹೋಗಿ ಒಳ್ಳೆ ದಿನ ಯಾವುದೆಂದು ಕೇಳಿಕೊಂಡು ಬರುತ್ತಾರಂತೆ. ಆಮೇಲೆ ನಿಮ್ಮ ಮನೆಗೆ ಬರುತ್ತೇವೆ. ಥ್ಯಾಂಕ್ಸ್  ಲಾಟ್ ಪಾವಿ.  ಲವ್ ಯೂ ಸೊ ಮಚ್ ಎಂದು ಹೇಳಿ ಬಂದು ಮಲಗಿದೆ. ಮರುದಿನದಿಂದ ಪ್ರತಿ ದಿನವೂ ಅಮ್ಮನನ್ನು ಅಮ್ಮ ಯಾವಾಗ ಹೋಗೋಣ ಎಂದು ಪೀಡಿಸುತ್ತಿದ್ದೆ. ಆಷಾಢ ಮುಗಿದ ಮರುದಿನವೇ ಅಮ್ಮ ಹೋಗಿ ಒಳ್ಳೆ ದಿನ ಕೇಳಿಕೊಂಡು ಬಂದರು. ಅಂದು ಶುಕ್ರವಾರ ನಾನು ಹಾಗೂ ಪಾವಿ ಇಬ್ಬರೂ ಆಫೀಸಿಗೆ ರಜೆ ಹಾಕಿದ್ದೆವು. ಅಂದು ಬೆಳಿಗ್ಗೆ ಇಂದ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಅಂತೂ ಇಂತೂ ನಾ ಮೆಚ್ಚಿದ ಹುಡುಗಿ ನನ್ನ ಬಾಳ ಸಂಗಾತಿ ಆಗುತ್ತಿದ್ದಾಳೆ.  ಪಾವಿಗೆ ಫೋನ್ ಮಾಡಿ ಅವಳ ಮನೆ ಅಡ್ರೆಸ್ ತಿಳಿದುಕೊಂಡು ಅವರ ಮನೆಗೆ ಹೋಗುವಷ್ಟರಲ್ಲಿ ಹನ್ನೊಂದು ಗಂಟೆ ಆಗಿತ್ತು. ಪಾವಿಯೇ ನಮ್ಮನ್ನು ಸ್ವಾಗತಿಸಿದಳು. ಪಾವಿ ಕೆಂಪು ಬಣ್ಣದ ರೇಷ್ಮೆ ಸೀರೆ ಉಟ್ಟುಕೊಂಡು ಎಂದಿಗಿಂತ ಅದ್ಭುತವಾಗಿ ಕಾಣುತ್ತಿದ್ದಳು. ಅಥವಾ ನನಗೆ ಹಾಗೆ ಕಾಣಿಸಿದ್ದಳೋ ಗೊತ್ತಿಲ್ಲ. ಒಳಗೆ ಹೋಗಿ ಎಲ್ಲರೂ ಮಾತುಕತೆಯಲ್ಲಿ ಮುಳುಗಿ ಬಿಟ್ಟರು. ಪಾವಿಯ ತಂದೆ ನನ್ನ ಓದು, ಕೆಲಸ ಎಲ್ಲ ವಿಚಾರಿಸಿ ನಂತರ ಅಪ್ಪನನ್ನು ಕುರಿತು ನೋಡಿ ನಿಮಗೆ ಎಲ್ಲ ವಿಷಯ ತಿಳಿದಿದೆ ಎಂದು ಕೊಳ್ಳುತ್ತೇನೆ.

ನಾವೇ ಆತುರ ಬಿದ್ದು ಅವಳ ಬಾಳನ್ನು ಹಾಳು ಮಾಡಿದೆವು. ಈಗ ದೇವರ ದಯೆಯಿಂದ ಅವಳು ಮತ್ತೆ ನಗುವಂತಾಗಿದ್ದಾಳೆ. ಅದಕ್ಕೆ ನಿಮ್ಮ ಮಗನೆ ಕಾರಣ. ಅವಳಾಗೇ ಮದುವೆ ಆಗುತ್ತೇನೆ ಎಂದಿದ್ದಾಳೆ ಎಂದರೆ ಖಂಡಿತ ಅವಳು ನಿಮ್ಮ ಮನೆಯಲ್ಲಿ ಸುಖವಾಗಿರುತ್ತಾಳೆ ಎಂದು ನಂಬಿಕೆ ಇದೆ. ಆದಷ್ಟು ಬೇಗ ಒಳ್ಳೆಯ ಮಹೂರ್ತ ನೋಡಿ ಮದುವೆ ಮಾಡಿಬಿಡೋಣ ಎಂದು ಪಾವಿಯ ತಲೆಯನ್ನು ಸವರಿದರು. ಇನ್ನೊಂದು ಸ್ವಲ್ಪ ಹೊತ್ತು ಮಾತಾಡಿ ಆಮೇಲೆ ಅವರಪ್ಪ ಪಾವಿಗೆ ನಮ್ಮಪ್ಪ ಅಮ್ಮನಿಗೆ ನಮಸ್ಕಾರ ಮಾಡಲು ಹೇಳಿದರು. ಅಮ್ಮ ನನ್ನನ್ನು ಕಣ್ಸನ್ನೆ ಯಲ್ಲಿ ನಮಸ್ಕಾರ ಮಾಡಲು ಹೇಳಿದರು. ನಾನು ಪಾವಿ ಇಬ್ಬರೂ ಒಟ್ಟಿಗೆ ಎದ್ದು ಮೊದಲು ಅವರ ಅಜ್ಜಿಗೆ ನಮಸ್ಕಾರ ಮಾಡಿ ನಂತರ ನಮ್ಮಪ್ಪ ಅಮ್ಮನಿಗೆ ನಮಸ್ಕಾರ ಮಾಡಿ ಆಮೇಲೆ ಅವರ ಅಪ್ಪನಿಗೆ ನಮಸ್ಕಾರ ಮಾಡಿ ಹೊರಡಲು ಅನುವಾದೆವು.

ಅವರಮ್ಮನ ಬಲವಂತಕ್ಕೆ ಅಲ್ಲೇ ಊಟ ಮಾಡಿ ಮನೆಗೆ ಬರುವಷ್ಟರಲ್ಲಿ ಸಂಜೆ ನಾಲ್ಕು ಗಂಟೆ ಆಗಿತ್ತು. ಅವರ ಮನೆಯಿಂದ ಬರುವಾಗ ಅಮ್ಮ ಪಾವನಿಯ ಜಾತಕ ತೆಗೆದುಕೊಂಡು ಬಂದಿದ್ದರು. ಸಂಜೆ ಅಪ್ಪ ಅಮ್ಮ ಇಬ್ಬರೂ ಮಹೂರ್ತ ಇಡಿಸಿಕೊಂಡು ಬರುತ್ತೇವೆ ಎಂದು ಆಚೆ ಹೊರಟರು. ನಾನು ಪಾವಿಗೆ ಫೋನ್ ಮಾಡಿ ಪಾವಿ ಇವತ್ತು ಸೂಪರ್ ಆಗಿ ಕಾಣ್ತಾ ಇದ್ದೆ ಕಣೆ ನೀನು. ತುಂಬಾ ಮುದ್ದಾಗಿ ಇದ್ದೆ ಕಣೆ. ಮೊದಲು ದೃಷ್ಟಿ ತೆಗೆಸಿಕೊ ನನ್ನ ದೃಷ್ಟಿಯೇ ಆಗಿರುತ್ತದೆ ನಿನಗೆ ಎಂದೆ. ಅವಳು ಸುಮ್ಮನೆ ನಕ್ಕು ಹಲೋ ಗಂಡನ ದೃಷ್ಟಿ ಒಳ್ಳೆಯದೇ ಏನೂ ಆಗಲ್ಲ ಎಂದಳು. ಪಾವಿ ಅಪ್ಪ ಅಮ್ಮ ಮಹೂರ್ತ ಇಡಿಸಕ್ಕೆ ಹೋಗಿದ್ದಾರೆ. ಎಷ್ಟು ಬೇಗ ಆದರೆ ಅಷ್ಟು ಬೇಗ ಒಳ್ಳೆಯದು ನನಗೆ ಜಾಸ್ತಿ ದಿನ ಕಾಯಕ್ಕಾಗಲ್ಲ. ಅವರು ಬಂದ ಮೇಲೆ ನಾನು ಡೇಟ್ ಕೇಳಿಕೊಂಡು ಫೋನ್ ಮಾಡ್ತೀನಿ ಎಂದು ಫೋನ್ ಇಟ್ಟೆ.

ಅಪ್ಪ ಅಮ್ಮ ಬರುವಷ್ಟರಲ್ಲಿ ಎಂಟು ಗಂಟೆ ಆಗಿತ್ತು. ಅವರು ಬಂದ ತಕ್ಷಣ ನಾನು ಹಾಗೂ ಪೂಜಾ ಇಬ್ಬರೂ ಒಟ್ಟಿಗೆ ಯಾವತ್ತು ಕೊಟ್ಟಿದ್ದಾರೆ ಡೇಟ್ ಎಂದು ಕೇಳಿದೆವು. ಅಪ್ಪ ಪೂಜಾಗೆ ನಿನಗ್ಯಾಕೆ ಅಷ್ಟು ಆತುರ ಮೊದಲು ಹೋಗಿ ಕಾಫಿ ಮಾಡಿಕೊಂಡು ಬಾ ಎಂದರು. ಯಾಕೆಂದರೆ ಪಾವನಿ ಮನೆಗೆ ಬಂದರೆ ನನಗೂ ಟೈಮ್ ಪಾಸ್ ಆಗತ್ತೆ ಅದಕ್ಕೆ ಎಂದು ಅಮ್ಮನ ಉತ್ತರಕ್ಕೆ ಕಾಯುತ್ತ ಅಲ್ಲೇ ನಿಂತಳು. ನೋಡಪ್ಪ ಎರಡು ಡೇಟ್ ಕೊಟ್ಟಿದ್ದಾರೆ ಒಂದು ಡಿಸೆಂಬರ್ ೮ ಅಂದರೆ ಇನ್ನೂ ಐದು ತಿಂಗಳು ಟೈಮ್ ಇದೆ, ಇನ್ನೊಂದು ಸೆಪ್ಟೆಂಬರ್ ೧೮ ಅಂದರೆ ಇನ್ನು ಮೂರು ತಿಂಗಳು ಇದೆ. ನೀನು ಯಾವಾಗ ಅಂದರೆ ಅವಾಗ ಮಾಡೋಣ. ಅದು ಬಿಟ್ಟರೆ ಈ ವರ್ಷದಲ್ಲಿ ನಿಮ್ಮ ಜಾತಕಕ್ಕೆ ಹೊಂದುವ ಹಾಗೆ ಯಾವ ಡೇಟ್ ಇಲ್ಲವಂತೆ ಎಂದರು.

ಸೆಪ್ಟೆಂಬರ್ ೧೮ ಕ್ಕೆ ಆಗಿಬಿಡಲಿ. ಎಷ್ಟು ಬೇಗ ಆಗುತ್ತದೋ ಅಷ್ಟು ಒಳ್ಳೆಯದು. ಮದುವೆ ವಿಷಯದಲ್ಲಿ ನಿಧಾನ ಮಾಡುವುದು ಬೇಡ ಎಂದರು ಅಪ್ಪ. ಅಮ್ಮ ನನ್ನ ಕಡೆ ನೋಡಿ ನೀನೇನು ಹೇಳ್ತ್ಯಪ್ಪ ಎಂದರು. ನಿಮ್ಮಿಷ್ಟ ಹೇಗೋ ಹಾಗೆ ಎಂದೆ. ಸರಿ ನಾನು ಅವರ ಅಪ್ಪನ ಜೊತೆ ಮಾತಾಡುತ್ತೇನೆ ಎಂದು ಅಪ್ಪ ಫೋನ್ ಬಳಿ ಹೋದರು. ಇಷ್ಟೊತ್ತಿನಲ್ಲಿ ಯಾಕೆ ಬೆಳಗ್ಗೆ ಮಾಡಿ ಎಂದು ಅಮ್ಮ ಹೇಳಿದ್ದಕ್ಕೆ ಅಪ್ಪ ಸುಮ್ಮನಾದರು. ಸರಿ ಈಗ ಕಾಫಿ ಮಾಡುತ್ತೇನೆ ಎಂದು ಪೂಜಾ ಒಳಗಡೆ ಹೋಗುತ್ತಿದ್ದರೆ ಅಪ್ಪ ತಡೆದು ಬೇಡ ಬಿಡಮ್ಮ ಒಟ್ಟಿಗೆ ಊಟ ಮಾಡಿಬಿಡೋಣ ತಟ್ಟೆ ಹಾಕು ಎಂದರು. ಅಪ್ಪ ಅಮ್ಮ ಬರುವುದು ತಡವಾದ್ದರಿಂದ ಪೂಜಾನೆ ಅಡಿಗೆ ಮಾಡಿದ್ದಳು. ಊಟ ಮಾಡಿ ರೂಮಿಗೆ ಹೋದ ತಕ್ಷಣ ಹಿಂದೆಯೇ ಪೂಜಾ ಬಂದಳು. ಏನ್ಸಾರ್ ಎಲ್ಲ ನೀವಂದುಕೊಂಡಂತೆ ಆಗುತ್ತಿದೆ ಖುಷಿನ ಎಂದಳು. ಹೌದು ಕಣೆ ತುಂಬಾ ಖುಷಿ ಆಗುತ್ತಿದೆ. ಕೇಳೆ ನಿನಗೇನೂ ಬೇಕು ಕೇಳು ಮದುವೆಗೆ ಕೊಡಿಸುತ್ತೇನೆ ಎಂದೆ. ಏನೂ ಬೇಡ ಕಣೋ ನೀನು ಖುಷಿ ಇಂದ ಇದ್ರೆ ಸಾಕು ಅಂತ ಹೇಳ್ತೀನಿ ಅಂದು ಕೊಂಡ್ಯ ಅಷ್ಟೆಲ್ಲ ಸೀನ್ ಇಲ್ಲ. ನನಗೊಂದು ಡೈಮಂಡ್ ರಿಂಗ್ ಬೇಕು ಎಂದಳು. ಆಯ್ತು ಕಣೆ ಕೊಡಿಸುತ್ತೇನೆ ಎಂದೆ. ಥ್ಯಾಂಕ್ ಯೂ ಸೊ ಮಚ್ ಕಣೋ. ಯಾವಾಗ ಹೋಗೋಣ? ನಾನು ನೀನು ಪಾವಿ ಮೂರು ಜನ ಒಟ್ಟಿಗೆ ಹೋಗೋಣ ಈಗ ಸಧ್ಯಕ್ಕೆ ಮಲ್ಕೋ ಎಂದು ಹೇಳಿ ನಾನು ಪಾವಿಗೆ ಫೋನ್ ಮಾಡಲು ಫೋನ್ ಎತ್ತಿಕೊಂಡೆ

Rating
No votes yet