ಕರ್ನಾಟಕದಲ್ಲಿ ಅವಧೂತ ಪರಂಪರೆ
(ಉಡುಪಿ ಜಿಲ್ಲೆಯ ಕಾಂತಾವರದಲ್ಲಿ ಸ್ಥಾಪನೆಯಾಗಿರುವ ಅಲ್ಲಮಪ್ರಭು ಪೀಠವು ಸಾಹಿತ್ಯ ಸಂಸ್ಕೃತಿ ಸಂವರ್ಧನ ಕಾರ್ಯಕ್ರಮವನ್ನು ಜನವರಿ ೨೦೧೨ರಿಂದ ಆರಂಭಿಸಿದೆ. ಈ ವರುಷ "ಅನುಭವದ ನಡೆ ಅನುಭಾವದ ನುಡಿ" ಎಂಬ ಉಪನ್ಯಾಸ ಸರಣಿಯಲ್ಲಿ ೧೨ ಮಾಸಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ೨೫ ಫೆಬ್ರವರಿ ೨೦೧೨ರ ಸಂಜೆ ಈ ಸರಣಿಯ ೨ನೇ ಉಪನ್ಯಾಸ ನೀಡಿದವರು ಡಾ. ಗೀತಾ ವಸಂತ. ಅವರೀಗ ತುಮಕೂರು ವಿಶ್ವವಿದ್ಯಾಲಯದ ವಿಜ್ನಾನ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು. "ಚೌಕಟ್ಟಿನಾಚೆಯವರು" ಕಥಾ ಸಂಕಲನ, "ಬೆಳಕಿನ ಬೀಜ " ವಿಮರ್ಶಾ ಗ್ರಂಥ, "ಪರಿಮಳದ ಬೀಜ " ಕವಿತಾ ಸಂಕಲನ ಇತ್ಯಾದಿ ಕೃತಿಗಳ ಮೂಲಕ ಕನ್ನಡಿಗರಿಗೆ ಪರಿಚಿತರು. "ಕರ್ನಾಟಕದಲ್ಲಿ ಅವಧೂತ ಪರಂಪರೆ " ಎಂಬ ಅಂದಿನ ಅವರ ಉಪನ್ಯಾಸದ ಭಾವರೂಪ ಇಲ್ಲಿದೆ.)
ಅನುಭಾವದ ನುಡಿ ಅನ್ನೋದನ್ನು ಶಬ್ದಗಳಲ್ಲಿ ಕಟ್ಟಿಕೊಡೋದೇ ಕಷ್ಟ. ಶಬ್ದಗಳಲ್ಲಿ ಹೇಳಲಾಗದ ಇಂತಹ ಎಷ್ಟೋ ವಿಷಯಗಳಿವೆ. ಇದನ್ನೇ ದ. ರಾ. ಬೇಂದ್ರೆಯವರು "ಅರಿಯದೆ ಆಳವು ..... ಕಣ್ಣಿಗೆ ಕಾಣದೊ ಬಣ್ಣ" ಎಂದಿರಬೇಕು.
"ಉಲಿಯ ಉಯ್ಯಾಲೆ ತಾಕದೇ ತೂಕುವುದು, ಶಬ್ದದ ಒಜ್ಜೆಯ ನೋಡೋ" ಎಂಬ ಅಲ್ಲಮನ ಮಾತು, ಅನುಭಾವದ ನುಡಿಗೊಂದು ಉತ್ತಮ ಉದಾಹರಣೆ.
ಅನುಭಾವದ ನುಡಿಗಳನ್ನಾಡಿದ ಅವಧೂತರು ನಡೆದದ್ದು ಮೆಟ್ಟಲುಗಳಿಲ್ಲದ ದಾರಿಯಲ್ಲಿ. ಅವರ ಹೆಜ್ಜೆಗಳನ್ನು ಗುರುತಿಸಲಾಗದು. ಅವರಿಗೆ ಲಕ್ಷಣಗಳಿಲ್ಲ. ವಿಲಕ್ಷಣತೆಯೇ ಅವರ ಸ್ವರೂಪ. ಇಂತಹ ಉಡುಪು, ಇಂತಹ ನಡೆ, ಇಂತಹ ಚಿಹ್ನೆ ಉಳ್ಳವರು ಅವಧೂತರು ಎಂದು ಹೇಳಲಿಕ್ಕಾಗದು. ಯಾಕೆಂದರೆ ಇವೆಲ್ಲ ಇರುವವರು ಅವಧೂತರಲ್ಲ.
ಅವಧೂತ ಅನ್ನುವುದು ಒಂದು ಪಂಥವಲ್ಲ. ಅದೊಂದು ಚಿತ್ತಸ್ಥಿತಿ. ಎಲ್ಲ ಹಂಗು, ಬಂಧನಗಳನ್ನು ಕಳಚಿಕೊಂಡಂತಹ ಸ್ಥಿತಿ. ಇದನ್ನು ಕುದುರೆ ಮೈಕೊಡವಿಕೊಳ್ಳುವುದಕ್ಕೆ ಹೋಲಿಸಬಹುದು. ಆಗ ಅದರ ಮೈಗಂಟಿಕೊಂಡ ಧೂಳೆಲ್ಲ ಕಳಚಿ ಬೀಳುತ್ತದೆ. ಅವಧೂತರೂ ಹಾಗೆ - ಎಲ್ಲ ಪ್ರಾಕೃತಿಕ, ಸಾಮಾಜಿಕ ಬಂಧನಗಳನ್ನು ಕೊಡವಿಕೊಂಡವರು. ಅವೆಲ್ಲದರಿಂದ ಬಿಡುಗಡೆ ಹೊಂದಿದವರು.
ನನ್ನ ಗುರುತು ಕಳಕೊಳ್ಳಬೇಕು. ಅನಂತವಾದ ವಿಶ್ವದಲ್ಲಿ ಕಳೆದುಹೋಗಬೇಕು ಎಂಬ ಆದಮ್ಯ ಆಶಯ ಅವಧೂತರದು. ಜಗತ್ತಿನ ಮೂಲ ಚೈತನ್ಯ ಒಂದಿದೆಯಲ್ಲ. ಅದನ್ನು ದೇವರೆನ್ನಿ, ಬ್ರಹ್ಮ ಎನ್ನಿ. ಅದರ ಜೊತೆ ಸೇರೋದು ಹೇಗೆ ಎಂಬುದೇ ಅವಧೂತರ ಅನುದಿನದ ಹುಡುಕಾಟ.
ಯಾವುದು ಬ್ರಹ್ಮಾಂಡದಲ್ಲಿದೆಯೋ ಅದು ನನ್ನೊಳಗೂ ಇದೆ ಎಂಬ ಅರಿವು ಮಹತ್ವದ್ದು. ಇದನ್ನೇ ಅಹಂ ಬ್ರಹ್ಮಾಸ್ಮಿ ಹಾಗೂ ತತ್ವಮಸಿ ಎಂಬ ಮಾತುಗಳಲ್ಲಿ ಹೇಳಿದ್ದಾರೆ. ಪಿಂಡ ಬ್ರಹ್ಮಾಂಡದ ಪರಿಕಲ್ಪನೆಯೂ ಇದೇ. ಮಡಕೆಯೊಳಗೆ ಕತ್ತಲಿದೆ. ಮಡಕೆ ಒಡೆದಾಗ ಅದು ಹೊರಗಿನ ಮಹಾ ಕತ್ತಲಿನಲ್ಲಿ ಲೀನ.
ಇದನ್ನೇ ಅಲ್ಲಮ ಹೇಳುತ್ತಾನೆ, "ಕತ್ತಲೂ ಅದೇ, ಬೆಳಕೂ ಅದೇ" ಎಂಬ ಮಾತಿನಲ್ಲಿ. "ಅಪರಿಮಿತ ಕತ್ತಲೆಯೊಳಗೆ ವಿಪರೀತ ಬೆಳಕನಿಕ್ಕಿದೊಡೆ" ಎಂಬುದೇ ಮೈ ಜುಂ ಎನ್ನಿಸುವ ಕಲ್ಪನೆ.
ಕತ್ತಲು ಮತ್ತು ಬೆಳಕು ಬೇರೆಬೇರೆ ಎಂದು ನಾವು ಭಾವಿಸುತ್ತೇವೆ, ಅಷ್ಟೇ. ನಿಜವಾಗಿ ಅದು ಬೇರೆ, ಇದು ಬೇರೆ ಅಲ್ಲ. ಇಂತಹ ಅರಿವಿನ ಅನುಸಂಧಾನಕ್ಕೆ ಇಳಿದವನು ಅಲ್ಲಮ.
ಈ ಜಗತ್ತು ಎಂಬುದೊಂದು ಚೈತನ್ಯದ ನಿರಂತರ ಹರಿವು. ಇದರ ಮಧ್ಯಬಿಂದುಗಳು ಮನುಷ್ಯಜೀವಿಗಳು ಎಂಬ ಅರಿವಿನಲ್ಲಿ ಮಿಂದವರು ಅನುಭಾವಿಗಳು. ಅವರದು ಕಾಲ -ದೇಶ ಮೀರಿದ ನಡೆ. ಸಕಲ ಅವಸ್ಥೆಗಳಿಂದ, ಕಾಲದ ಹಾಗೂ ದೇಶದ ಮಿತಿಗಳಿಂದ ಮುಕ್ತವಾದ ನಡೆ.
ಇಂತಹ ಒಂದು ಸ್ಥಿತಿ ಸಾಧ್ಯವೇ? ಇದು ಸಾಧ್ಯವೆಂದು ತೋರಿಸಿಕೊಟ್ಟಿದ್ದಾರೆ, ಸಾವಿರಾರು ಅವಧೂತರು. ಇಂತಹ ಸ್ಥಿತಿಯ ಶಿಖರ ತಲಪಿದವರು ಹಲವರಿದ್ದಾರೆ. ಅವರಲ್ಲೊಬ್ಬ ಅಲ್ಲಮ.
ಇಂತಹ ಅವಧೂತರಲ್ಲಿ ಹಲವು ಪಂಗಡಗಳಿವೆ: ನಾಗಪಂಥದವರು, ಕಾಪಾಲಿಕರು, ಸಿದ್ಧರು, ಅವಧೂತರು. ಈ ಅವಧೂತರಲ್ಲಿಯೂ ಒಳಪಂಗಡಗಳಿವೆ. ಮಂತ್ರತಂತ್ರಗಳ ಸಾಧನೆ ಮಾಡುವವರೂ ಇದ್ದಾರೆ.
ಸರಳವಾಗಿ ಹೇಳಬೇಕೆಂದರೆ ಇವರು ನೆಲದ ಸಂತರು. ಇವರು ತ್ಯಾಗಿಗಳೂ ಹೌದು, ಭೋಗಿಗಳೂ ಹೌದು. ಇವರಿಗೆ ಧರ್ಮದ ಹಂಗಿಲ್ಲ, ಶಾಸ್ತ್ರದ ಹಂಗಿಲ್ಲ. ಅವೆಲ್ಲ ಚೌಕಟ್ಟುಗಳನ್ನು ಮೀರಿ ನಿಂತವರು.
ಇಂತಹ ಅವಧೂತರು ತಮಗೆ ತಿಳಿದದ್ದನ್ನು ತಮಗೆ ತಿಳಿದ ಭಾಷೆಯಲ್ಲಿ, ಅಂದರೆ ದೇಸಿ ಭಾಷೆಯಲ್ಲಿ ಹೇಳಿದ್ದಾರೆ. ಅದು ಜನಸಾಮಾನ್ಯರ ಅಧ್ಯಾತ್ಮ. ಆದರೂ ಅದರಲ್ಲಿ ನಿಗೂಢ ಅರ್ಥವಿದೆ, ಅನುಭವವಿದೆ.
ಇವರನ್ನು ವಚನಕಾರರು, ತತ್ವಪದಕಾರರು ಎಂದು ಸಾಹಿತ್ಯ ಚರಿತ್ರೆಯಲ್ಲಿ ಗುರುತಿಸುತ್ತೇವೆ. ಉದಾಹರಣೆಗೆ ಅಲ್ಲಮಪ್ರಭು, ರೇವಣಸಿದ್ಧ, ಮರುಳಸಿದ್ಧ. ಆದರೆ ಇವರನ್ನು ಸಾಹಿತಿಗಳು ಅಂತಷ್ಟೇ ಕಾಣಬಾರದು. ಯಾಕೆಂದರೆ ಇವರು ಸಾಧಕರೂ ಹೌದು. ಅವರ ಸಾಧನೆಯ ಬೆಳಕು ಎಲ್ಲವನ್ನೂ ಮುಟ್ಟುತ್ತದೆ ಮತ್ತು ಸುಡುತ್ತದೆ.
ಕರ್ನಾಟಕದಲ್ಲಿ ಇಂಥವರ ಪರಂಪರೆ ಬೇಂದ್ರೆಯವರ ವರೆಗೂ ಮುಂದುವರಿದಿದೆ. ಅವರ ಹಲವು ಕವನಗಳಲ್ಲಿ ನಾವು ಕಾಣುವುದು ಅನುಭಾವದ ನುಡಿ.