ಕಥೆ = ಪಾವನಿ (ಮರೆಯಲಾಗದ ನೆನಪುಗಳು) ಭಾಗ 21
ಪಾವಿಗೆ ಫೋನ್ ಮಾಡಿ ಪಾವಿ ಮದುವೆ ಡೇಟ್ ಕೇಳಿಕೊಂಡು ಬಂದರು ಅಪ್ಪ ಅಮ್ಮ, ನಾಳೆ ಬೆಳಿಗ್ಗೆ ಅಪ್ಪ ಫೋನ್ ಮಾಡಿ ನಿಮ್ಮ ಅಪ್ಪನ ಬಳಿ ಮಾತಾಡುತ್ತಾರಂತೆ. ಲೇ ಯಾವತ್ತೋ ಡೇಟ್? ನಾಳೆ ಬೆಳಿಗ್ಗೆ ಹೇಳ್ತಾರಲ್ಲ. ಹಲೋ ಅದು ಮನೆಯವರ ವಿಷಯ ನಾನು ಕೇಳ್ತಿರೋದು ನಿನ್ನನ್ನು ಪ್ಲೀಸ್ ಹೇಳೋ ಯಾವಾಗ ಡೇಟ್. ಸೆಪ್ಟೆಂಬರ್ ೧೮ ಕ್ಕೆ ಕಣೆ ಎಂದೆ. ಏನು ಸೆಪ್ಟೆಂಬರ್ ೧೮ಕ್ಕ ವೌ ಎಂದಳು. ಯಾಕೆ ಎಂದೆ. ಯಾಕೆ ಅಂತ ಕೇಳ್ತಿದ್ಯ ನಿನಗೆ ಗೊತ್ತಿಲ್ವಾ ಅಂದಳು. ಇಲ್ಲ ಕಣೆ ಗೊತ್ತಿಲ್ಲ ನೀನೆ ಹೇಳು ಏನು ವಿಶೇಷ ಅವತ್ತು ಎಂದಳು. ತಕ್ಷಣ ನನಗೆ ನೆನಪು ಬಂತು ಹೋ ಅವತ್ತು ನಿನ್ನ ಬರ್ತ್ ಡೇ ಅಲ್ವೇನೆ. ಗ್ರೇಟ್ ನಿನ್ನ ಬರ್ತ್ ಡೇ ಹಾಗೂ ಮದುವೆ ಒಂದೇ ದಿನ ವೌ ಸೂಪರ್. ಇನ್ನು ಮುಂದೆ ಒಂದು ಖರ್ಚು ತಪ್ಪಿತು ಎಂದೆ. ಯಾಕಪ್ಪ? ಇಲ್ಲಾಂದರೆ ಮುದುವೆ ದಿನ ಅಂತ ಅದಕ್ಕೊಂದು ಪಾರ್ಟಿ ನೋ, ಇಲ್ಲ ಅಂದ್ರೆ ಗಿಫ್ಟ್ ಕೊಡಬೇಕು, ತಿರ್ಗಾ ನಿನ್ನ ಬರ್ತ್ ಡೇ ಗೆ ಒಂದು ಗಿಫ್ಟ್, ಪಾರ್ಟಿ ಕೊಡಬೇಕಾಗಿತ್ತು. ಈಗ ಎರಡೂ ಒಂದೇ ದಿನ ಆದ್ದರಿಂದ ಒಳ್ಳೇದೆ ಆಯ್ತಾಲ್ವಾ ಅಂದೆ.
ಥೂ ನಿನ್ನ ಇಷ್ಟು ಜಿಪುಣನ ನೀನು. ನಂಗೆ ಅದೆಲ್ಲ ಗೊತ್ತಿಲ್ಲ ಇನ್ನು ಮುಂದೆ ಸೆಪ್ಟೆಂಬರ್ ೧೮ಕ್ಕೆ ನಂಗೆ ಎರಡು ಗಿಫ್ಟ್ ಬೇಕು. ಆಯ್ತು ಬಿಡು ಪಾವಿ ನಿನಗೋಸ್ಕರ ಅಷ್ಟು ಮಾಡಲ್ವಾ. ನಿನ್ನ ಪಡೆಯಕ್ಕೆ ಎಷ್ಟು ಕಷ್ಟ ಪಟ್ಟಿದ್ದೇನೆ ಅದರ ಮುಂದೆ ಇದು ಏನೂ ಇಲ್ಲ. ಅಂತೂ ಇನ್ನು ಮೂರು ತಿಂಗಳಲ್ಲಿ ನಾವು ಫೋನ್ ಮಾಡಿಕೊಳ್ಳುವುದು ತಪ್ಪತ್ತೆ. ಯಾಕೆಂದರೆ ಆಮೇಲೆ ಒಟ್ಟಿಗೆ ಇರುತ್ತೇವಲ್ಲ. ನನಗೆಷ್ಟು ಖುಷಿ ಆಗ್ತಿದೆ ಗೊತ್ತ ಪಾವಿ. ಹೌದು ಪಾವಿ ನಿನಗಿಷ್ಟವಾದ ಊರು ಯಾವುದು? ಯಾಕೋ? ಯಾಕೆಂದರೆ ಹನಿ ಮೂನ್ ಗೆ. ನಿನಗೆಲ್ಲಿ ಇಷ್ಟಾನೋ ಅಲ್ಲಿಗೆ ಹೋಗೋಣ. ನನಗೇನು ಇಂಥ ಕಡೆನೇ ಹೋಗಬೇಕು ಅಂತೇನೂ ಇಲ್ಲ. ಇರ್ಲಿ ನಿನಗಿಷ್ಟವಾದ ಪ್ಲೇಸ್ ಹೇಳು ಪಾವಿ. ನನಗೆ...ನನಗೆ ಶಿಮ್ಲಾ ಅಂದರೆ ತುಂಬಾ ಇಷ್ಟ ಕಣೋ. ಓಕೆ ಹಾಗಿದ್ರೆ ಅಲ್ಲೇ ಹೋಗೋಣ ಬಿಡು. ಲೇ ಹಾಗಲ್ಲ ಕಣೋ ನಾನು ಹೇಳಿದ್ದು. ಶಿಮ್ಲಾ ಎಲ್ಲ ಬೇಡ ಸಿಕ್ಕಾಪಟ್ಟೆ ದುಡ್ಡು ಖರ್ಚು ಆಗತ್ತೆ. ಇಲ್ಲೇ ಎಲ್ಲಾದರೂ ಹೋಗೋಣ. ಪಾವಿ ನೀನು ದುಡ್ಡಿನ ಬಗ್ಗೆ ಯೋಚನೆ ಮಾಡಬೇಡ. ಸರಿ ಬಿಡು ಅದೆಲ್ಲ ಆಮೇಲೆ ಯೋಚನೆ ಮಾಡೋಣ ಇವಾಗ ಮಲ್ಕೋ ನೀನು. ಮನೆಯಲ್ಲಿ ನೀನೇನು ಮದುವೆ ಡೇಟ್ ಬಗ್ಗೆ ಹೇಳಬೇಡ ಬೆಳಿಗ್ಗೆ ಅಪ್ಪ ಫೋನ್ ಮಾಡ್ತಾರೆ ಓಕೆ ನ ಗುಡ್ ನೈಟ್. ಲವ್ ಯೂ ಸ್ವೀಟ್ ಹಾರ್ಟ್.
ಮೂರು ತಿಂಗಳು ಇದೆ ಎಂದುಕೊಳ್ಳುವಷ್ಟರಲ್ಲಿ ದಿನಗಳು ಹೇಗೆ ಉರುಳಿದವೋ ಗೊತ್ತೇ ಆಗಲಿಲ್ಲ. ಸೆಪ್ಟೆಂಬರ್ ಬಂದೆ ಬಿಡ್ತು. ಮನೇಲಿ ಅಪ್ಪ ಅಮ್ಮ ಫುಲ್ ಬ್ಯುಸಿ ಆಗಿಬಿಟ್ಟಿದ್ದರು. ಆಹ್ವಾನ ಪತ್ರಿಕೆ ಪ್ರಿಂಟಿಂಗ್ ಮಾಡಿಸುವುದು, ಅದನ್ನು ಹಂಚುವುದು, ಜವಳಿ, ಪಾತ್ರೆ, ಬೆಳ್ಳಿ , ಬಂಗಾರ ಅದೂ ಇದೂ ಎಂದುಕೊಂಡು ಸಿಕ್ಕಾಪಟ್ಟೆ ಓಡಾಡುತ್ತಿದ್ದರು. ನನಗೆ ಆಶ್ಚರ್ಯವಾಯಿತು. ಮೂರು ತಿಂಗಳು ಹಿಂದೆ ಹೇಗಿದ್ದ ಅಮ್ಮ ಈಗ ಎಷ್ಟೊಂದು ಹುರುಪಿನಿಂದ ಓಡಾಡುತ್ತಿದ್ದಾರೆ. ಪೂಜಾ ಕೂಡ ಅವಳಿಗೆ ಕಾಲೇಜ್ ರಜಾ ಇದ್ದಾಗಲೆಲ್ಲ ಅಮ್ಮನಿಗೆ ಸಹಾಯ ಮಾಡುತ್ತಿದ್ದಳು. ನಾನು ಪಾವಿ ಇಬ್ಬರೂ ಮದುವೆಗೆ ಹದಿನೈದು ದಿನ ರಜೆ ಹಾಕಿದ್ದೆವು. ದಿನ ದಿನಕ್ಕೂ ಮನೆಯಲ್ಲಿ ಮದುವೆ ಕಳೆ ಎದ್ದು ಕಾಣುತ್ತಿತ್ತು.
ಅಂದು ಸೆಪ್ಟೆಂಬರ್ ೧೩. ಸರಿಯಾಗಿ ಇನ್ನು ಐದು ದಿನಕ್ಕೆ ಪಾವಿ ಜೊತೆ ಮದುವೆ. ಕೆಲಸಕ್ಕೆ ರಜೆ ಶುರುವಾಗಿತ್ತು. ನಾನು ನನ್ನ ಸ್ನೇಹಿತರನ್ನೆಲ್ಲ ಕರೆದು ಮನೆಗೆ ಬಂದು ಕೂತಿದ್ದೆ. ಮನೆಯಲ್ಲಿ ಬಂಧುಗಳು ಬಂದಿದ್ದರು. ಅಷ್ಟರಲ್ಲಿ ಪಾವಿ ಫೋನ್ ಮಾಡಿದಳು. ಭಗತ್ ಅಪ್ಪ ಹೇಳಿದರು ನಿನಗೆ ಯಾವ ವಾಚ್ ಬೇಕೋ ನೀನೆ ಸೆಲೆಕ್ಟ್ ಮಾಡ್ಕೊಬೇಕಂತೆ. ಅವರು ದುಡ್ಡು ಕೊಟ್ಟಿದ್ದಾರೆ. ಪಾವಿ ಅದೆಲ್ಲ ಏನೂ ಬೇಡ ಅಂತ ಹೇಳು. ಹಲೋ ಅವರು ಕೇಳ್ತಾ ಇಲ್ಲ ತಗೊಳ್ಳೇ ಬೇಕಂತೆ, ಬೇಕಿದ್ದರೆ ನೀನೆ ಅಪ್ಪನ ಜೊತೆ ಮಾತಾಡು. ಹ್ಮ್ಮ್ ಬೇಡ ಬಿಡು ಸರಿ ನೀನು ಬರ್ತ್ಯಾ ಹೋಗೋಣ. ಆಯ್ತು ಮನೆಗೆ ಬಾ ಇಲ್ಲೇ ಮಲ್ಲೇಶ್ವರಂ ನಲ್ಲಿ ತಗೋ. ಆಯ್ತು ಇನ್ನೊಂದು ಅರ್ಧ ಗಂಟೆಯಲ್ಲಿ ಬರ್ತೀನಿ ಎಂದು ಫೋನ್ ಇಟ್ಟು ಅಮ್ಮ ನಾನು ಪಾವಿ ಮನೆಗೆ ಹೋಗಿ ಬರ್ತೀನಿ. ಅವರ ಅಪ್ಪ ಏನೋ ವಾಚ್ ತಗೋ ಅಂತ ಹೇಳಿದ್ದಾರಂತೆ. ಸರಿ ಹೋಗಿ ಬಾ ನಾಳೆ ಇಂದ ಮದುವೆ ಆಗೋವರೆಗೂ ಎಲ್ಲೂ ಹೋಗೋ ಹಾಗಿಲ್ಲ ಎಂದರು.
ಪಾವಿಯ ಮನೆಗೆ ಹೋಗುವಷ್ಟರಲ್ಲಿ ಅವಳು ಸಿದ್ಧವಾಗಿದ್ದಳು. ಅವರ ಅಮ್ಮ ಕೂಡ ಅದೇ ಹೇಳಿದರು. ನೋಡಿ ನಾಳೆ ಇಂದ ಇಬ್ಬರೂ ಆಚೆ ಹೋಗಬಾರದು. ಅಮ್ಮ ಹಾಗೆ ನಾನು ನನ್ನ ಫ್ರೆಂಡ್ಸ್ ಗೆ ಕಾರ್ಡ್ ಕೊಟ್ಟು ಬರುತ್ತೇನೆ ಎಂದು ಒಂದಷ್ಟು ಕಾರ್ಡ್ ತೆಗೆದುಕೊಂಡಳು. ಇಬ್ಬರೂ ಆಚೆ ಬಂದು ಅಲ್ಲೇ ಇದ್ದ ಒಂದು ವಾಚ್ ಅಂಗಡಿಗೆ ಹೋಗಿ ವಾಚ್ ತೆಗೆದುಕೊಂಡು ಅವಳ ಒಂದಿಬ್ಬರು ಸ್ನೇಹಿತರ ಮನೆಗೆ ಹೋಗಿ ಕಾರ್ಡ್ ಕೊಟ್ಟು ವಾಪಸ್ ಅವಳನ್ನು ಮನೆಗೆ ಬಿಡಲು ಹೋಗುತ್ತಿದ್ದೆ. ಅವಳು ಭಗತ್ ಒಂದು ನಿಮಿಷ ಇಲ್ಲಿ ನಿಲ್ಲಿಸೋ ನಾಳೆ ಇಂದ ಇನ್ನು ಆಚೆ ಬರುವ ಹಾಗಿಲ್ಲ. ಪಾನಿ ಪೂರಿ ಕೊಡಿಸೋ ಎಂದಳು. ಅಯ್ಯೋ ಅಷ್ಟೇ ತಾನೇ ಎಂದು ಗಾಡಿ ನಿಲ್ಲಿಸಿ ಅವಳಿಗೆ ಪಾನೀ ಪೂರಿ ಕೊಡಿಸಿ ಮತ್ತೆ ಇನ್ನೇನು ಬೇಕು ಅಂದೆ. ಐಸ್ ಕ್ರೀಂ ಎಂದಳು. ಇಬ್ಬರೂ ಒಂದೊಂದು ಐಸ್ ಕ್ರೀಂ ತಗೊಂಡು ತಿಂದು ಇನ್ನೇನು ಎಂದೆ. ಸಾಕಪ್ಪ ಇವತ್ತಿಗೆ ನಡಿ ಮನೆಗೆ ಹೋಗೋಣ ನಿನಗೂ ಲೇಟ್ ಆಗತ್ತೆ ಎಂದು ಗಾಡಿ ತಿರುಗಿಸಿ ಮನೆಯ ಕಡೆ ಹೊರಟಿದ್ದೆ. ಕಾಡು ಮಲ್ಲೇಶ್ವರ ದೇವಸ್ಥಾನ ದಾಟಿದರೆ ಎರಡು ರಸ್ತೆ ಅವರ ಮನೆ. ಅಷ್ಟರಲ್ಲಿ ಅಡ್ಡರಸ್ತೆಯಿಂದ ಕಾರೊಂದು ಸ್ಪೀಡಾಗಿ ಬಂದು ನಮ್ಮ ಗಾಡಿಗೆ ಗುದ್ದಿತು.
ಕಣ್ಣುಗಳು ಸಿಕ್ಕಾಪಟ್ಟೆ ಭಾರವಾದಂತೆ ಅನಿಸುತ್ತಿತ್ತು. ತಲೆ ಸಿಡಿಯುವಂತೆ ಆಗುತ್ತಿತ್ತು. ಕಣ್ಣು ತೆರೆಯಲು ಪ್ರಯತ್ನಿಸುತ್ತಿದ್ದೇನೆ ಆದರೆ ಆಗುತ್ತಿಲ್ಲ. ಬಹಳ ಕಷ್ಟ ಪಟ್ಟು ಕಣ್ಣು ಬಿಟ್ಟೆ. ಒಂದು ಕ್ಷಣ ನಾನು ಎಲ್ಲಿದ್ದೇನೆ ಎಂದು ಗೊತ್ತಾಗಲಿಲ್ಲ. ಮತ್ತೆ ಕಣ್ಣು ಮುಚ್ಚಿ ನಿಧಾನಕ್ಕೆ ಕಣ್ಣು ತೆರೆದು ನೋಡಿದರೆ ಅದ್ಯಾವುದೋ ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿದ್ದೇನೆ. ಸುತ್ತಲೂ ಅದೆಂಥದೋ ಮೆಷಿನ್ ಗಳಿದ್ದವು. ಒಂದೊಂದು ಕುಯ್ ಕುಯ್ ಎಂದು ಶಭ್ದ ಮಾಡುತ್ತಿದ್ದಾರೆ ಇನ್ನೊಂದರಲ್ಲಿ ಗ್ರಾಫ್ ತರಹ ಏನೋ ಚಲಿಸುತ್ತಿತ್ತು. ಮತ್ತೆ ನನ್ನ ಕಣ್ಣುಗಳು ಭಾರವಾದಂತಾಗಿ ಕಣ್ಣು ಮುಚ್ಚಿಬಿಟ್ಟೆ