ಹೋಳಿ ( ಕವನ )
ಕವನ
ಹೋಳಿ ಹುಣ್ಣಿಮೆ ರಂಗುಗಳ ಹಬ್ಬ
ಮನದ ಭಾವಗಳು ರಂಗು ತಳೆದು
ಅಣುರೇಣು ತೃಣಕಾಷ್ಟ ಸಕಲ ಜೀವಿಗಳಲ್ಲಿ
ಅನುಭೋಗದಾಶೆ ವಿಜ್ರಂಭಿಸಿ
ಆಗುವ ಹೊಸ ಸೃಷ್ಟಿಯ ಪಲ್ಲವ
ವಸಂತನಾಗಮನದ ಸಂಕೇತ
ಬಾಡಿ ಬಸಿದು ಬಸವಳಿದ ಪ್ರಕೃತಿ
ಶಿಶಿರನಿಗೆ ಕೊನೆ ಹೇಳಿ
ಕಾಯುವುದೇ ವಸಂತನಿಗಾಗಿ
ಕಾಮ ಅಂಕುರಗೊಂಡು ದೇಹ ಮನಸು
ಹೃದಯ ನರನಾಡಿಗಳಲ್ಲಿ ವಿಜ್ರಂಭಿಸಿ
ಉತ್ಕಟವಾಗುವುದೇ ವಸಂತದಲ್ಲಿ
ವಿರಕ್ತ ಮನಸೂ ಚಂಚಲವಾಗುವುದು
ಕಾಮೋದ್ದೀಪನ ವಾಗುವುದು
ವಸಂತದ ಅಗ್ಗಳಿಕೆ ಕಾಮನಿಗೆ ಕಣ್ಣಿಲ್ಲ
ಲಜ್ಜೆಯಿಲ್ಲ ಉಚಿತಾನುಚಿತ ಪ್ರಜ್ಞೆಯಿಲ್ಲ
ಮುಕ್ತವಾಗಿ ಪ್ರಕಟಗೊಳ್ಳುವ
ಕಾಮನದು ಸ್ವಚ್ಛಂದ ಸ್ವೈರ ವಿಹಾರ
ತಪಕೆ ಕುಳಿತ ಮುಕ್ಕಣ್ಣ
ಮದೋನ್ಮತ್ತ ಮನ್ಮಥ
ಸುಮಬಾಣ ಬಿಟ್ಟು ತಪೋಭಂಗ ಮಾಡಿ
ಕ್ರೋಧಗೊಳಿಸಿ ಉರಿಗಣ್ಣಿಗೆ ಸಿಕ್ಕು
ಭಸ್ಮವಾಗಿ ರತಿಯ ಕೃಪಾಕಟಾಕ್ಷದಲಿ
ಮರುಜನ್ಮ ಪಡೆದದ್ದು ವಸಂತದಲ್ಲಿ
ರಾಗ ಭಾವ ಕಾಮಕೆ
ಕಟ್ಟು ಪಾಡನು ವಿಧಿಸಿ ಸ್ವಚ್ಛಂದ
ಕಾಮಕ್ಕೆ ಕಡಿವಾಣ ಹಾಕಿ
ಕಾಮವನು ವ್ಯವಸ್ಥಿತ ಗೊಳಿಸುವುದೆ
ಕಾಮ ದಹನದ ಮೂಲತತ್ವ
ಹೋಳಿಯಾಚರಣೆ ಅದರ ಸಂಕೇತ