ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 24

ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 24

ಅವರ ಮಾತುಗಳು ನನಗೆ ನಾಟಿದವು. ಅವರು ಹೋದ ಮೇಲೆ ಅಪ್ಪ ಅಮ್ಮ ಪೂಜಾ ಮೂವರೂ ನನ್ನ ಪಕ್ಕ ಬಂದು ಕುಳಿತು ಭಗತ್ ನಿಮ್ಮ ಮ್ಯಾನೇಜರ್ ಹೇಳಿದ್ದು ನೂರಕ್ಕೆ ನೂರು ನಿಜ. ಪಾವನಿಯ ಸಾವು ನಮ್ಮೆಲ್ಲರಿಗೂ ಬಹಳ ನೋವು ತಂದಿದೆ. ಆದರೆ ಅದನ್ನೇ ಜೀವನದ ಮುಕ್ತಾಯ ಎಂದು ತಿಳಿಯಲು ಆಗುವುದಿಲ್ಲ ಅಲ್ಲವೇ. ನೀನು ಪಾವನಿಯ ಸಾವಿನಿಂದ ಎಷ್ಟು ಒದ್ದಾಡುತ್ತಿದ್ದೀಯೋ ನಿನ್ನನ್ನು ನೋಡಿ ನಾವು ಅದಕ್ಕಿಂತಲೂ ಹೆಚ್ಚು ಒದ್ದಾಡುತಿದ್ದೇವೆ. ದಯವಿಟ್ಟು ನೀನು ಮುಂಚಿನಂತೆ ಆಗಬೇಕು. ಅದು ಅಷ್ಟು ಸುಲಭವಲ್ಲ ಎಂದು ಗೊತ್ತು ಆದರೆ ನೀನು ಬದಲಾಗಲೇ ಬೇಕು ಭಗತ್ ಎಂದರು. ಆಯ್ತು ನಾನು ಯೋಚಿಸುತ್ತೇನೆ ಎಂದು ರೂಮಿಗೆ ಹೋಗಿ ಕಣ್ಣು ಮುಚ್ಚಿಕೊಂಡು ಕುಳಿತೆ. ಕಣ್ಣ ಮುಂದೆ ಪಾವನಿ ಬಂದಳು. ಭಗತ್ ನೀನು ನನ್ನ ಮಾತು ಕೇಳ್ತೀಯ ತಾನೇ ಎಂದಳು. ಹೌದು ಪಾವಿ ಕೇಳ್ತೀನಿ ಹೇಳು. ಭಗತ್ ನೀನು ಮೊದಲಿನಂತಾಗಬೇಕು. ಎಲ್ಲರೊಡನೆ ನಗು ನಗುತ್ತಾ ಮಾತಾಡಬೇಕು ಗಲೇ ನನ್ನ ಆತ್ಮಕ್ಕೆ ಶಾಂತಿ ದೊರೆಯುವುದು ಎಂದಳು.

ಆ ವಾರ ಕಳೆದು ಸೋಮವಾರ ಬೆಳಿಗ್ಗೆ ಎದ್ದು ಕನ್ನಡಿಯಲ್ಲಿ ನನ್ನ ಮುಖ ನೋಡಿಕೊಂಡೆ. ಶೇವ್ ಮಾಡಿ ಹೆಚ್ಚು ಕಡಿಮೆ ಎರಡು ತಿಂಗಳಾಗಿತ್ತು. ಅತ್ತೂ ಅತ್ತೂ ಕಣ್ಣುಗಳು ಕಾಂತಿ ಹೀನವಾಗಿದ್ದವು. ುಚ್ಚನಂತೆ ಆಗಿದ್ದೆ. ಅಮ್ಮನ ಬಳಿ ಹೋಗಿ ಅಮ್ಮ ಕಾಸು ಕೊಡು ಸಲೂನ್ ಗೆ ಹೋಗಿ ಬರುತ್ತೇನೆ ಎಂದು ಕಾಸು ತೆಗೆದುಕೊಂಡು ಸಲೂನ್ ಗೆ ಬಂದೆ. ಮನೆಯಿಂದ ಆಚೆ ಬಂದು ಎರಡು ತಿಂಗಳಾಗಿತ್ತು. ಅಕ್ಕ ಪಕ್ಕದ ಮನೆಯವರೆಲ್ಲ ಹೇಗಿದ್ದೀಯ ಭಗತ್ಹುಶಾರಾಗಿದ್ಯ ಎಂದು ವಿಚಾರಿಸಿದರು. ಸಲೂನ್ ಗೆ ಹೋಗಿ ಕಟಿಂಗ್ ಶೇವಿಂಗ್ ಮಾಡಿಸಿ ಮನೆಗೆ ಬಂದೆ ಅಪ್ಪ ಅಮ್ಮ ನನ್ನನ್ನು ನೋಡಿ ಬಹಳ ಸಂತೋಷ ಪಟ್ಟರು. ಸ್ನಾನ ಮಾಡಿ ತಿಂಡಿ ತಿಂದು ಆಫೀಸಿಗೆ ಬಂದೆ. ರಿಸೆಪ್ಶನ್ ನಲ್ಲಿಕ್ಯಾಂಟೀನಿನಲ್ಲಿ ಎಲ್ಲಿ ಹೋದರು ಪಾವನಿಯೇ ನೆನಪಾಗುತ್ತಿದ್ದಳು. ಸಿಸ್ಟಂ ಮುಂದೆ ಕೂತರೆ ವಾಲ್ ಪೇಪರ್ ನಲ್ಲಿ ಅವಳದೇ ಫೋಟೋ ಇತ್ತು. ಅವಳ ಫೋಟೋ ನೋಡಿದ ತಕ್ಷಣ ದುಃಖ ತಡೆಯಲು ಆಗಲಿಲ್ಲ. ರೆಸ್ಟ್ ರೂಮಿಗೆ ಹೋಗಿ ಗಳಗಳನೆ ಅತ್ತು ಸಮಾಧಾನ ಮಾಡಿಕೊಂಡು ಬಂದು ಸಿಸ್ಟಂ ಮುಂದೆ ಕೂತೆ. ಏನು ಮಾಡಿದರೂ ಕೆಲಸ ಮಾಡಲು ಆಗುತ್ತಿಲ್ಲ. ಮೊದಲನೇ ದಿನ ಅರ್ಧ ದಿನಕ್ಕೆ ಮನೆಗೆ ಬಂದು ಬಿಟ್ಟೆ.

ನಂತರ ನಿಧಾನವಾಗಿ ನನ್ನನ್ನು ನಾನು ಕೆಲಸದಲ್ಲಿ ತೊಡಗಿಸಿಕೊಂಡೆ. ಮನೆಯಲ್ಲಿದ್ದರೆ ಪಾವನಿಯ ನೆನಪು ಕಾಡುತ್ತದೆ ಎಂದು ಯೋಚಿಸಿ ಬೆಳಿಗ್ಗೆ ಇಂದ ರಾತ್ರಿವರೆಗೂ ಆಫೀಸಿನಲ್ಲೇ ಇರುತ್ತಿದ್ದೆ. ಶನಿವಾರ ಭಾನುವಾರ ಸಹ ಆಫೀಸಿಗೆ ಹೋಗುತ್ತಿದ್ದೆ. ನಾನು ರೂಮಿನಲ್ಲಿದ್ದ ಒಂದೂವರೆ ತಿಂಗಳು ನನ್ನ ಸ್ನೇಹಿತರು ಮಾತಾಡಿಸಲು ಮನೆಗೆ  ಬಂದಿದ್ದರೂ ನಾನು ಯಾರನ್ನೂ ಭೇಟಿ ಮಾಡಿರಲಿಲ್ಲ. ಆಮೇಲೆ ಒಂದೆರೆಡು ಬಾರಿ ಮನೆಗೆ ಬಂದು ಮಾತಾಡಿಸಿ ಆಚೆ ಬಾರೋ ಸ್ವಲ್ಪ ಮೈಂಡ್ ಫ್ರೆಶ್ ಆಗತ್ತೆ ಎಂದರು. ಆದರೆ ನನಗೆ ಯಾವುದರಲ್ಲೂ ಆಸಕ್ತಿ ಇರಲಿಲ್ಲ.  ಪಾವನಿಯ ಅಪ್ಪ ಅಮ್ಮ ಫೋನ್ ಮಾಡಿ ಮಾತಾಡಿಸಿದ್ದರು.

ಪಾವನಿ ನಮ್ಮನ್ನು ಅಗಲಿ ಐದು ತಿಂಗಳಾಗಿತ್ತು. ಒಂದು ದಿನ ಕೆಲಸ ಮುಗಿಸಿ ಮನೆಗೆ ಬಂದು ಊಟ ಮಾಡಲು ಕುಳಿತಾಗ ಅಮ್ಮ ಭಗತ್ ನಿನ್ನ ಜೊತೆ ಸ್ವಲ್ಪ ಮಾತಾಡಬೇಕು ಊಟ ಆದ ಮೇಲೆ ಐದು ನಿಮಿಷ ಇಲ್ಲೇ ಇರು ಎಂದರು. ಆಯ್ತು ಎಂದು ಹೇಳಿ ಊಟ ಮುಗಿಸಿ ಬಂದು ಕುಳಿತೆ. ಅಪ್ಪ ಅಮ್ಮ ಪೂಜಾ ಸಹ ಊಟ ಮಾಡಿ ಬಂದು ಕುಳಿತರು. ನೋಡು ಭಗತ್ ಹೀಗೆ ಹೇಳುತ್ತೇವೆ ಎಂದು ಬೇಸರ ಪಟ್ಟು ಕೊಳ್ಳಬೇಡ. ಇನ್ನು ಎಷ್ಟು ದಿನ ಅಂತ ಹೀಗೆ ಇರುತ್ತೀಯ? ಅದಕ್ಕೆ ನಿನಗೊಂದು ಮದುವೆ ಮಾಡೋಣ ಎಂದು ನಾನು ನಿಮ್ಮಪ್ಪ ಅಂದುಕೊಂಡಿದ್ದೇವೆ ಎಂದರು. ನಾನು ಅಪ್ಪ ಅಮ್ಮನ ಕಡೆ ನೋಡಿ ಅಮ್ಮ ದಯವಿಟ್ಟು ಇನ್ಯಾವತ್ತೂ ಈ ವಿಷಯ ತೆಗೆಯ ಬೇಡಮ್ಮ. ಈ ಜೀವನಕ್ಕೆ ಪಾವಿ ಒಬ್ಬಳೇ. ಅವಳನ್ನು ಬಿಟ್ಟು ಬೇರ್ಯಾರಿಗೂ ನನ್ನ ಜೀವನದಲ್ಲಿ ಜಾಗ ಇಲ್ಲ ಎಂದು ರೂಮಿಗೆ ಬಂದು ಬಿಟ್ಟೆ.

ಒಂದು ವಾರದ ನಂತರ ಪಾವಿಯ ಅಮ್ಮ ಫೋನ್ ಮಾಡಿ ಭಗತ್ ನಿಮ್ಮ ಜೊತೆ ಮಾತಾಡಬೇಕು ದಯವಿಟ್ಟು ಮನೆಗೆ ಬರುತ್ತೀರಾ ಎಂದು ಕರೆದರು. ನಾನು ಆಯಿತು ಶನಿವಾರ ಬರುತ್ತೇನೆ ಎಂದು ಹೇಳಿ ಶನಿವಾರ ಅವರ ಮನೆಗೆ ಹೋದೆ. ಮನೆಯ ಹಾಲಿನಲ್ಲಿ ಪಾವನಿಯ ಫೋಟೋಗೆ ಹಾರ ಹಾಕಿದ್ದನ್ನು ಕಂಡು ದುಃಖ ಒತ್ತರಿಸಿಕೊಂಡು ಬಂತು. ಪಾವನಿಯ ಅಪ್ಪ ಬಂದು ನನ್ನೆದುರಲ್ಲಿ ಕೂತು ನೋಡಿ ಭಗತ್ ನಿಮ್ಮ ಹತ್ತಿರ ಒಂದು ಮುಖ್ಯವಾದ ವಿಷಯ ಮಾತಾಡಬೇಕು. ನಿಮ್ಮಂಥ ಒಳ್ಳೆ ಹುಡುಗನನ್ನು ಅಳಿಯನಾಗಿ ಮಾಡಿಕೊಳ್ಳುವ ಸೌಭಾಗ್ಯ ಅಂತೂ ದೇವರು ಬರೆದಿಲ್ಲ. ನೀವು ದೊಡ್ಡ ಮನಸು ಮಾಡಿ ಇನ್ನೊಂದು ಹುಡುಗಿಯನ್ನು ನೋಡಿ ಮದುವೆ ಮಾಡಿಕೊಂಡರೆ ಆ ಹುಡುಗಿಯಲ್ಲಿ ನನ್ನ ಮಗಳನ್ನು ಕಾಣುತ್ತೇವೆ. ದಯವಿಟ್ಟು ಇಲ್ಲ ಎಂದು ಮಾತ್ರ ಹೇಳಬೇಡಿ ಎಂದರು. ಅಂಕಲ್ ನೀವೇ ಹೀಗೆ ಎಂದರೆ ಹೇಗೆ? ಹೌದು ಭಗತ್ ನಾವು ಮತ್ತೆ ನಮ್ಮ ಪಾವನಿಯನ್ನು ಕಾಣಬೇಕಾದರೆ ಅದು ನೀವು ಮದುವೆ ಮಾಡಿಕೊಳ್ಳುವ ಹುಡುಗಿಯಲ್ಲಿ ಮಾತ್ರ ಸಾಧ್ಯ. ಇದರ ಮೇಲೆ ನಿಮ್ಮಿಷ್ಟ ನಾವು ಬಲವಂತ ಮಾಡುವುದಿಲ್ಲ. ಯೋಚನೆ ಮಾಡಿ ಎಂದು ಹೇಳಿದರು.

Rating
No votes yet