ಪಾಪ ಪ್ರಜ್ಞೆ ( ಕಥೆ ) ಭಾಗ 2
ಶಾಲಾ ದಿನಗಳಲ್ಲಿ ನಮಗೆ ಹೊಲಕ್ಕೆ ಹೋಗುವುದು ಬಹಳ ಸಂತಸ ತರುವ ವಿಷಯವಾಗಿತ್ತು. ನಾವು ಮರ ಹತ್ತಲು ಕಲಿತದ್ದು, ಮರಕೋತಿಯಾಟ ಆಡಿದ್ದು ಮರದ ನೆರಳಲ್ಲಿ ಗಾಳಿಗೆ ಮೈಯೊಡ್ಡಿ ಮಲಗಿ ಸುಖಿಸಿದ್ದು ಎಲ್ಲವೂ ಸಿನೆಮಾದಲ್ಲಿಯ ಫ್ಲಾಶ್ಬ್ಯಾಕ್ ಗಳಂತೆ ನುಗ್ಗಿ ಬಂದವು. ಆ ಗಿರಿಯಣ್ಣನ ಮರ ಎಲ್ಲ ಮರಗಳಂತಲ್ಲ, ಭುಜಂಗ ಯ್ಯನಹಳ್ಳಿ ಭಾವಿಗಳಿಗೆ ಇರುವಂತೆ ಇದಕ್ಕೂ ಒಂದು ಐತಿಹ್ಯವುಂಟು. ಎಲ್ಲ ಮಾವಿನ ಮರಗಳಂತೆ ಇದೂ ಒಂದು ಮಾವಿನಮರ ಸ್ವಲ್ಪ ವಿಶಾಲವಾಗಿ ಬೆಳೆದಿರಬಹುದು, ಏನು ಇದರ ಹೆಚ್ಚುಗಾರಿಕೆ ? ಎಂದು ನೀವು ಕೇಳಬಹುದು, ಅದಕ್ಕೆ ಅದರದೇ ಆದ ವಿಶಿಷ್ಟ ಇತಿಹಾಸವಿದೆ.
ಸುಮಾರು ಒಂದು ನೂರು ವರ್ಷದ ಹಿಂದಿನ ಮಾತು ನಮ್ಮ ನರಹರಿಯ ವಂಶದ ಪೂರ್ವಿಕರಾದ ಗಿರಿಯಪ್ಪ ಎನ್ನುವವರು ತಮ್ಮ ಆಳುಮಗ ಗಿರಿಯಣ್ಣನೊಟ್ಟಿಗೆ ಕಾಶಿ ಹರಿದ್ವಾರ ಗಯಾ ಮುಂತಾದ ತೀರ್ಥಕ್ಷೇತ್ರಗಳಿಗೆ ತೀರ್ಥಯಾತ್ರೆ ಹೋಗಿದ್ದರು. ಆ ಕಾಲದ ತೀರ್ಥಯಾತ್ರ್ರೆಗಳು ಬಹಳ ಪ್ರಯಾಸಕರ ವಾಗಿದ್ದವು. ಹೆಚ್ಚಾಗಿ ಕಾಲ್ನಡಿಗೆ ಯನ್ನೆ ಅವಲಂಬಿಸ ಬೇಕಾದ ಪರಿಸ್ಥಿತಿ. ಈಗಿನಂತೆ ಆಗ ವಿಪುಲ ಪ್ರಮಾಣದಲ್ಲಿ ಪ್ರಯಾಣ ಸೌಕರ್ಯಗಳಿರಲಿಲ್ಲ. ರೋಗ ರುಜಿನುಗಳು ಮತ್ತು ವೈದ್ಯಕೀಯ ಸೌಲಭ್ಯಗಳಿಲ್ಲದೆ ಜೀವ ತೆತ್ತಬೇಕಾದ ಪ್ರಸಂಗಗಳು ಎದುರಾಗುತ್ತಿದ್ದವು. ಗಿರಿಯಪ್ಪ ಕಾಶಿಯಲ್ಲಿರುವಾಗ ಒಮ್ಮೆ ಮಾವಿನಹಣ್ಣುಗಳನ್ನು ತಿನ್ನುವಾಗ ಆ ಹಣ್ಣುಗಳ ಪೈಕಿ ಒಂದು ಹಣ್ಣು ಅತ್ಯಂತ ರುಚಿಕರ ವಾಗಿದ್ದುದು ಅವರ ಅನುಭವಕ್ಕೆ ಬಂತು. ಅದರ ಗೊರಟವನ್ನು ಜೋಪಾನವಾಗಿ ತೆಗೆದುಕೊಂಡು ಬಂದು ನೆಟ್ಟು ಪೋಷಿಸಿ ಸಸಿಮಾಡಿ ರಾಮಲಿಂಗನ ಗುಡಿಯ ಹೊಲದ ಪಕ್ಕದ ಹೊಲದಲ್ಲಿ ನೆಟ್ಟರು. ಆಳುಮಗ ಗಿರಿಯಣ್ಣ ಅದನ್ನು ಪೋಷಿಸಿ ಬೆಳೆಸಿದ. ಆ ಮರವೆ ಈಗ ಬೃಹದಾಕಾರವಾಗಿ ಬೆಳೆದು ನಿಂತಿರುವ ಗಿರಿಯಣ್ಣನ ಮರ.
ಹಿರೆಕೆರಿ ಕಟ್ಟೆಯನ್ನು ದಾಟಿ ಒಂದು ಸಣ್ಣ ಹರಿಯುವ ನೀರಿನ ತೊರೆಯನ್ನು ನೆಗೆದು ದಾಟಿ ಎತ್ತರದ ಜಾಗದಲ್ಲಿ
ನಿಂತು ಕೊಂಡೆನು. ನನ್ನ ಹಿಂದಿನಿಂದ ನಾಯಿ ಕಾಳ ನೆಗೆದು ಬಂದು ನನ್ನ ಹತ್ತಿರ ನಿಂತು ಕೊಂಡ. ಆಲೋಚನಾ ಸರಣಿಯಲ್ಲಿ ಮುಳುಗಿ ಹೋಗಿದ್ದ ನಾನು ಅದು ನನ್ನನ್ನು ಅನುಸರಿಸಿ ಬಂದುದನ್ನು ಗಮನಿಸಿಯೇ ಇರಲಿಲ್ಲ. ಕಾಳ ಬಡಕಲು ಮೈಕಟ್ಟಿನ ಎತ್ತರದ ನಿಲುವಿನ ಮುಧೋಳ ಜಾತಿಯ ನಾಯಿ. ಅದು ಕರಿಯ ಬಣ್ಣದ್ದಾದ್ದರಿಂದ ಅದಕ್ಕೆ ಕಾಳ ಎಂದು ನಾಮಕರಣ ಮಾಡಿದ್ದರು. ಅದು ಬಹಳ ಚುರುಕಿನ ನಾಯಿ. ಕಲ್ಲಪ್ಪನ ಹಕ್ಕಲಿನಲ್ಲಿ ಬೆಳೆದ ಹೈಬ್ರೀಡ್ ಜೋಳದ ಮಧ್ಯದ ದಾರಿಗುಂಟ ಸಾಗಿದ ನಾನು ಸುಮ್ಮನೆ ನಮ್ಮ ಹೊಲದೆಡೆಗೆ ದೃಷ್ಟಿ ಹಾಯಿಸಿದೆ. ಆಗಲೇ ಮುಶಿಯಗಳ ಹಿಂಡು ಗಿರಿಯಣ್ಣನ ಮರದಲ್ಲಿ ತಮ್ಮ ಆಧಿಪತ್ಯ ಸ್ಥಾಪಿಸಿ ಮನಸೋಇಚ್ಛಿ ಹಾರಾಟ ಪ್ರಾರಂಭಿಸಿದ್ದವು. ನಾನು ಧಾವಿಸಿ ಓಡಿ ಹೋದೆ, ನನ್ನನ್ನು ಅನುಸರಿಸಿ ಕಾಳನೂ ಓಡಿ ಬಂದ.
ಮಾವಿನಮರದ ಹತ್ತಿರ ಧಾವಿಸಿ ಹೋಗಿ ನೋಡಿದೆ, ನೆಲದ ಮೇಲೆ ನೂರಾರು ಮವಿನಕಾಯಿಗಳು ಉದುರಿ ಬಿದ್ದಿವೆ. ಮುಶಿಯಗಳ ಹಾರಾಟಕ್ಕೆ ಮಿತಿಯೇ ಇಲ್ಲ. ಕಲ್ಲುಗಳನ್ನು ಬೀಸಿ ನೋಡಿದೆ, ಮುಶಿಯಗಳು ಅಲ್ಲಿಂದ ಕದಲುವ ಲಕ್ಷಣಗಳು ಕಾಣಿಸಲಿಲ್ಲ. ಕಾಳನೂ ಸಹ ಮುಶಿಯಗಳ ಹಿಂಡನ್ನು ನೋಡಿ ಬೊಗಳಲು ಪ್ರಾರಂಭಿಸಿದ. ಕಾಳನ ಬೊಗಳಿಕೆಗೆ ಮುಶಿಯಗಳು ಕ್ಯಾರೆ ಎನ್ನಲಿಲ್ಲ. ಕಾಳ ಮತ್ತಷ್ಟು ರೋಷಗೊಂಡು ಜೋರಾಗಿ ಬೊಗಳುತ್ತ ಮಾವಿಮರ ದ ರೆಂಬೆಗ ಳ ಕಡೆಗೆ ಹಾರುತ್ತ ಮುಶಿಯಗಳನ್ನು ಬೆದರಿಸುವ ತಂತ್ರ ಮಾಡಿದ. ಅವುಗಳು ಇದಾವು ದನ್ನೂ ಲೆಖ್ಖಕ್ಕೆ ತೆಗೆದುಕೊಳ್ಳಲಿಲ್ಲ. ಮುಶಿಯಗಳನ್ನು ಬೆದರಿಸುವ ನನ್ನ ಎಲ್ಲ ಪ್ರಯತ್ನಗಳು ವಿಫಲವಾಗಿದ್ದವು. ನಿರುಪಾಯನಾಗಿ ಏರ್ಗನ್ ಉಪಯೋಗಿಸಲು ನಿರ್ಧರಿಸಿದೆ. ಅದಕ್ಕೆ ಚರೆಗಳನ್ನು ತುಂಬಿ ಮುಶಿಯಗಳನ್ನು ಬೆದರಿಸುವ ತಂತ್ರವಾಗಿ ಅವುಗಳೆಡೆಗೆ ಹಾರಿಸಿದೆ. ಮತ್ತೆರಡು ಸಲ ಅದೇ ರೀತಿ ಮಾಡಿದೆ, ಏನೂ ಪ್ರಯೋಜನ ಆಗಲಿಲ್ಲ. ಕೊನೆಯ ಬಾರಿ ಚರೆಯನ್ನು ಏರ್ ಗನ್ ಗೆ ತುಂಬಿ ಆ ಮುಶಿಯಗಳ ಗುಂಪಿನ ನಾಯಕನಂತಿದ್ದ ಗಡವ ದೆಡೆಗೆ ಗುರಿಯಿಟ್ಟು ಹಾರಿಸಿದೆ. ಆ ಚರೆ ಅದಕ್ಕೆ ತಾಕಿತೋ ಏನೋ, ಆ ಗಡವ ನನ್ನ ಮೇಲೆ ನೇರವಾಗಿ ಆಕ್ರಮಣ ಮಾಡಿತು. ನಾನು ಆ ಆಕ್ರಮಣವನ್ನು ನಿರೀಕ್ಷಿಸಿರಲಿಲ್ಲ, ಒಂದು ಕ್ಷಣ ತಬ್ಬಿಬ್ಬಾದೆ. ಸುತ್ತ ಮುತ್ತ ಒಮ್ಮೆ ನೋಡಿದೆ ಯಾರೂ ಜನ ಇರಲಿಲ್ಲ. ನನ್ನ ರಕ್ಷಣೆಗೆ ನಾನೇ ಮುಂದಾದೆ, ಧೈರ್ಯಮಾಡಿ ಗಡವನನ್ನು ಜೋರಾಗಿ ದೂರ ತಳ್ಳಿದೆ. ಅದು ಪುನಃ ಮತ್ತಷ್ಟು ಜಿದ್ದಿನಿಂದ ನನ್ನ ಮೇಲೆ ಮರು ಆಕ್ರಮಣ ಮಾಡಿತು. ನನ್ನ ಮೈ ಕೈ ಪರಚಿ ಗಾಯಗೊಳಿ ಸಿತು. ಏರ್ಗನ್ಗೆ ಮತ್ತೆ ಚರೆ ತುಂಬುವಷ್ಟು ವ್ಯವಧಾನವಿರಲಿಲ್ಲ,,ಗನ್ನಿನ ಬ್ಯಾರೆಲ್ಲನ್ನು ಕೈಯಲ್ಲಿ ಹಿಡಿದು ಬಟ್ ಭಾಗದಿಂದ ಗಡವನ ಮೇಲೆ ನಾನು ಸಹ ಜೋರಾಗಿ ಪ್ರತಿ ಆಕ್ರಮಣ ಮಾಡಿದೆ. ಅದರ ಕೆನ್ನೆಗೆ ಜೋರಾಗಿ ಪೆಟ್ಟು ಬಿದ್ದಿರಬೇಕು, ಮತ್ತೆ ಆವೇಶದಿಂದ ನನ್ನ ಮೇಲೆ ಆಕ್ರಮಣ ಮಾಡಿ ನನ್ನ ಕುತ್ತಿಗೆಯನ್ನು ಬಲವಾಗಿ ಹಿಡಿಯಿತು. ಆ ಹಿಡಿತದಿಂದ ಬಿಡಿಸಿಕೊಳ್ಳಲು ಪ್ರಯತ್ನಿಸಿದೆ, ಆಗಲಿಲ್ಲ ಏನು ಮಾಡಬೇಕೆಂಬುದು ನನಗೆ ತೋಚಲಿಲ್ಲ. ಆಗ ಮುಶಿಯಗಳನ್ನು ನೋಡಿ ಬೊಗಳುತ್ತ ನಿಂತಿದ್ದ ಕಾಳನಿಗೆ ರೋಷ ಎಲ್ಲಿಂದ ಬಂತೊ ಏನೋ ನನ್ನೆಡೆಗೆ ಓಡಿಬಂದು ನನ್ನ ಮೇಲೆ ಆಕ್ರಮಣ ಮಾಡಿದ ಗಡವನ ಮರ್ಮಾಂಗವನ್ನು ತನ್ನ ಹಲ್ಲುಗಳಿಂದ ಬಲವಾಗಿ ಕಚ್ಚಿ ಹಿಡಿದು ಎಳೆಯ ತೊಡಗಿದ. ಇದರಿಂದ ಕಂಗಾಲಾದ ಗಡವ ನನ್ನ ಕುತ್ತಿಗೆಯನ್ನು ಹಿಡಿದಿದ್ಚ ಹಿಡಿತ ಸಡಿಲವಾಯಿತು, ಕೆಲವು ಮುಶಿಯಗಳು ಮೈಮೇಲೆ ಬೀಳಲು ನೋಡಿದವು ಅಲ್ಲಿಯೆ ಬಿದ್ದಿದ್ದ ಉದ್ದದ ಬಡಿಗೆಯಿಂದ ಬೀಸಿ ಹೊಡೆದು ಹೆದರಿಸಿ ಓಡಿಸಿದೆ. ಕಾಳನಿಗೆ ಎಷ್ಟು ಹೇಳಿದರೂ ಗಡವನ ಮೇಲಿನ ಆಕ್ರಮಣವನ್ನು ನಿಲ್ಲಿಸಲಿಲ್ಲ, ಸುಮಾರು ಅರ್ಧ ಗಂಟೆಯ ಹೋರಾಟದ ನಂತರ ಗಡವ ಪ್ರಾಣ ಬಿಟ್ಟಿತು. ಆ ನಂತರವೇ ಕಾಳ ತನ್ನ ಆಕ್ರಮಣವನ್ನು ಸಡಿಲಿಸಿದ. ಆ ಗಡವ ಸತ್ತ ನಂತರ ಚೀರಾಡುತ್ತಿದ್ದ ಮುಶಿಯಗಳ ಹಿಂಡು ಆ ಮಾವಿನಮರ ಬಿಟ್ಟು ಹೋದವು.
ಗಡವನ ದುರಂತ ಸಾವಿನ ಬಗ್ಗೆ ವಿಷಾದ ಸೂಚಿಸಲೋ ಇಲ್ಲ ಕಾಳನ ಸಮಯ ಪ್ರಜ್ಞೆಯಿಂದ ನನ್ನ ಮೇಲಿನ ಹಲ್ಲೆಯನ್ನು ನಿಲ್ಲಿಸಿದ ಬಗ್ಗೆ ಮೆಚ್ಚುಗೆ ಸೂಚಿಸುವುದೋ ಎನ್ನುವುದು ನನಗೆ ತಿಳಿಯಲಿಲ್ಲ. ನಿಜಕ್ಕೂ ಕಾಳನ ಸ್ವಾಮಿ ಭಕ್ತಿ ನನ್ನನ್ನು ಅಚ್ಚರಿಯಲ್ಲಿ ಕೆಡವಿತ್ತು. ಒಂದು ತುತ್ತು ಅನ್ನ ಹಾಕಿದ್ದಕ್ಕೆ ಪ್ರತಿಯಾಗಿ ಎಷ್ಟೊಂದು ಕೃತಜ್ಞತೆ! ಕಾಳನ ತಲೆ ನೇವರಿಸಿದೆ. ನನ್ನ ಕಾಳನ ಸ್ವಾಮಿ ಭಕ್ತಿ ವಿಲಿಯಮ್ ವಡ್ರ್ಸವರ್ತನ ಫೀಡಿಲಿಟಿ ಕಥಾನಕದ ನಾಯಿಯ ಸ್ವಾಮಿಭಕ್ತಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ ಎನಿಸಿತು. ಗಡವನಿಗೆ ಗನ್ನಿನಿಂದ ಬೀಸಿ ಹೊಡೆದ ಸಂಧರ್ಭದಲ್ಲಿ ಅದರ್ ಬಟ್ ಸೀಳಿ ಹೋಗಿತ್ತು. ಸತ್ತ ಗಡವನನ್ನು ಏನು ಮಾಡಬೇಕು ಎನ್ನುವುದು ಹೊಳೆಯದೆ ಸ್ವಲ್ಪಹೊತ್ತು ಸುಮ್ಮನೆ ಕುಳಿತೆ. ಕಾಳ ತನ್ನ ಮುಂಗಾಲುಗಳ ಮೇಲೆ ಮುಖವನಿಟ್ಟುಕೊಂಡು ಸತ್ತ ಗಡವನಿಗೆ ಅಭಿಮುಖವಾಗಿ ನೆಲದ ಮೇಲೆ ವಿಶ್ರಾಂತಿ ಸ್ಥಿತಿಗೆ ಹೋದ. ನಾನು ಯೋಚನೆಯಲ್ಲಿ ಮಗ್ನನಾದೆ. ನಮ್ಮ ಹಿಂದೂ ಧರ್ಮದಲ್ಲಿ ಮುಶಿಯವನ್ನು ಹನುಮಂತ ದೇವರ ಅವತಾರವೆಂದು ಭಾವಿಸಿ ಗೌರವ ತೋರಿಸುವ ಜನ ಸಮೂಹ ಆ ಗಡವನ ಸಾವಿಗೆ ಕಾರಣನಾದ ನನ್ನನ್ನು ಯಾವ ರೀತಿ ಕಾಣಬಹುದೆಂದು ಚಿಂತಿತನಾದೆ. ಕೊನೆಗೆ ಬೇರೆ ದಾರಿ ಕಾಣದೆ ಆ ಸತ್ತ ಗಡವನ ಎರಡೂ ಕಾಲುಗಳನ್ನು ಹಿಡಿದು ಎಳೆದುಕೊಂಡು ಹೋಗಿ ರಾಮಲಿಂಗನ ಗುಡಿಯ ಹತ್ತಿರದ ಗದ್ದೆಯ ಬದುವಿನಲ್ಲಿದ್ದ ಮುತ್ತುಗದ ಮರದ ಕೆಳಗೆ ಬೆಳೆದ ಕರಡದ ಹುಲ್ಲಿನ ಮಧ್ಯೆ ಎಸೆದೆ. ಆ ಕ್ಷಣಕ್ಕೆ ಅದರ ದುರಂತ ಸಾವು ನನ್ನ ಮನ ಕಲುಕಿತ್ತು. ಅದೊಂದು ಅನಿರೀಕ್ಷಿತವಾಗಿ ನಡೆದು ಹೋದ ಘಟನೆಯಾಗಿತ್ತು. ರಾಮಲಿಂಗನ ಗುಡಿಯ ಪಕ್ಕದ ಸಣ್ಣ ಹೊಂಡದಲ್ಲಿ ಕೈಕಾಲು ಮುಖ ತೊಳೆದುಕೊಂಡು ಬಂದು ಬುತ್ತಿಯ ಗಂಟು ಬಿಚ್ಚಿದೆ. ಕಾಳನಿಗೆ ಒಂದು ದೊಡ್ಡ ಮುತ್ತುಗದ ಎಲೆಯ ಮೇಲೆ ಅನ್ನ ಹಾಕಿ ನಾನೂ ಸಹ ಊಟಕ್ಕೆ ಕುಳಿತೆ. ಆದರೆ ನನಗೆ ಯಾಕೋ ಊಟ ಸೇರಲಿಲ್ಲ, ಕಾಳನೂ ಸಹ ಅನ್ನವನ್ನು ಮುಟ್ಟಲಿಲ್ಲ. ಗದ್ದಯ ಬದುವಿನ ಒಂದು ಮೂಲೆಯಲ್ಲಿ ಅನ್ನವನ್ನು ಒಯ್ದು ಹಾಕಿದೆ, ಕಾಗೆಗಳ ಹಿಂಡು ಬಂದು ಅನ್ನವನ್ನು ಖಾಲಿ ಮಾಡಿದವು.
ಸಾಯಂಕಾಲ ಮನೆಗೆ ವಾಪಾಸು ಬಂದವನು ನರಹರಿಗೆ ನಡೆದ ವಿಷಯವನ್ನು ಸಾದ್ಯಂತವಾಗಿ ವಿವರಿಸಿ ಏರ್ಗನ್ ಹಾಳಾದ ವಿಷಯ ತಿಳಿಸಿದೆ. ಯಂಕಣ್ಣನ ಮನೆಗೆ ಹೋಗಿ ಏರ್ಗನ್ ತೋರಿಸಿ ಅದು ಹಾಳಾಗಲು ಕಾರಣವಾದ ವಿಷಯವನ್ನು ತಿಳಿಸಿದೆ. ಅದರ ರಿಪೇರಿಗೆ ತಗಲುವ ವೆಚ್ಚವನ್ನು ಭರಿಸುವುದಾಗಿ ನರಹರಿ ಹೇಳಿದ. ಯಂಕಣ್ಣ ಅದನ್ನು ನಿರಾಕರಿಸಿದ.
ನಿಜಕ್ಕೂ ಗಡವನ ಸಾವು ನನ್ನನ್ನು ಚಿಂತೆಗೀಡು ಮಾಡಿತ್ತು, ಅದನ್ನು ಕೊಲ್ಲುವ ಉದ್ದೇಶ ನನಗಿರಲಿಲ್ಲ. ಕಾಳ ಅದನ್ನು ಸಾಯಿಸಿ ತನ್ನ ಸ್ವಾಮಿಭಕ್ತಿಯನ್ನು ಮೆರೆದಿದ್ದ. ಸಾಂಪ್ರದಾಯಿಕ ಕುಟುಂಬದಲ್ಲಿ ಬೆಳೆದೆ ನನಗೆ ಆ ಗಡವನ ಸಾವು ನನ್ನನ್ನು ಪಾಪಪ್ರಜ್ಞೆ ಯಿಂದ ನರಳುವಂತೆ ಮಾಡಿತ್ತು. ಕೊನೆಗೂ ತಡೆಯಲಾರದೆ ಅಜ್ಜಿಯ ಎದುರು ಹೊಲದಲ್ಲಿ ನಡೆದ ಎಲ್ಲ ವಿಷಯವನ್ನು ವಿವರಿಸಿದೆ.
ಆಕೆ ' ಮುಶಿಯ ಮಾರುತಿಯ ಅವತಾರ ಅದನ್ನು ಏಕೆ ಹೊಡೆದೆ ? ಸತ್ತ ಅದನ್ನು ಸುಟ್ಟು ಬರಬೇಕಿತ್ತು. ' ಎಂದಳು.
ಮಾರನೇದಿನ ಹೊಲಕ್ಕೆ ನಾನು ಮತ್ತು ನರಹರಿ ಹೋಗಿ ನೋಡಲಾಗಿ ಅದರ ಅಸ್ತಪಂಜರ ಮಾತ್ರ ಉಳಿದಿತ್ತು. ಅದನ್ನು ಕಟ್ಟಿಗೆಗಳನ್ನು ಒಟ್ಟು ಮಾಡಿ ಅದರ ಮೇಲಿಟ್ಟು ಅದರ ಅಂತ್ಯ ಸಂಸ್ಕಾರ ನಡೆಸಿದೆವು. ಮನೆಗೆ ಬಂದು ಅಜ್ಜಿಯ ಸಲಹೆಯಂತೆ ಇಪ್ಪತ್ತೊಂದು ದಿನಗಳ ಕಾಲ ಪ್ರತಿದಿನ ಮುಂಜಾನೆ ಸ್ನಾನ ಮಾಡಿ ಶುಭ್ರ ಬಟ್ಟೆಯಲ್ಲಿ ಹನುಮಂತ ದೇವರ ಗುಡಿಗೆ ಹೋಗಿ ಎಣ್ಣೆಯ ದೀಪವನ್ನು ಹಚ್ಚಿಬಂದೆ. ಇದನ್ನೆಲ್ಲ ನನ್ನ ಮನಸ್ಸು ಒಪ್ಪುತ್ತಿರಲಿಲ್ಲ, ಆದರೂ ಅಜ್ಜಿಯ ತೃಪ್ತಿಗೋಸ್ಕರ ಆ ರೀತಿ ಮಾಡಿದೆ. ನನ್ನೆಲ್ಲ ತೊಂದರೆಗಳಿಗೆ ನಾನು ಮುಶಿಯನ ಸಾವಿಗೆ ಕಾರಣ ನಾದದ್ದನ್ನು ನೆನೆದು ವ್ಯಾಕುಲ ಗೊಳ್ಳುತ್ತಿದ್ದಳು.
ನಂತರ ನನಗೆ ಕೆಲಸ ದೊರೆತು ಊರಿನಿಂದ ದೂರವಾದೆ, ಭೂಮಿಯ ಋಣ ಮುಗಿದು ಅಜ್ಜಿ ತೀರಿಕೊಂಡಳು. ನರಹರಿಯಿಂದ ಟೆಲಿಗ್ರಾಮ್ ಮೂಲಕ ವಿಷಯ ತಿಳಿದು ಆಕೆಯ ಕೊನೆಯ ಭೇಟಿಗೆಂದು ಭುಜಂಗಯ್ಯನ ಹಳ್ಳಿಗೆ ಹೋದೆ. ನಾನು ಮನೆಗೆ ಹೋಗುವಷ್ಟರಲ್ಲಿ ಅಜ್ಜಿಯ ಅಂತ್ಯ ಸಂಸ್ಕಾರ ಮುಗಿಸಿ ಬಂದಿದ್ದರು. ನನ್ನ ಕೆಲವೇ ಬೆರಳೆಣಿಕೆಯ ಹಿತೈಷಿಗಳ ಪೈಕಿ ಒಬ್ಬಳಾಗಿದ್ದ ಅಜ್ಜಿ ನಮ್ಮನ್ನಗಲಿ ವರ್ಷಗಳೇ ಗತಿಸಿವೆ, ಈಗ ಆಕೆ ಬರಿ ನೆನಪು ಮಾತ್ರ. ಗಿರಣ್ಣನಮರದ ಹೊಲಕ್ಕೆ ಹೋದರೆ ಏನಿದೆ ಅಲ್ಲಿ? ಗಿರಣ್ಣನ ಮಾವಿನಮರದ ಅಸ್ತಿತ್ವವೇ ಇಲ್ಲ, ಕಳ್ಳಭಟ್ಟಿ ಮಾಡುವವರ ದಾಳಿಗೆ ಸಿಕ್ಕು ಅದರ ಕುರುಹೂ ಇಲ್ಲದಂತೆ ಕಣ್ಮರೆಯಾಗಿ ಹೋಗಿದೆ. ಗಡವನಿಂದ ನನ್ನನ್ನು ಪಾರು ಮಾಡಿದ ಕಾಳನೂ ಈಗಿಲ್ಲ. ಅದೂ ಸಹ ತನ್ನ ಇಹಲೋಕ ಯಾತ್ರೆಯನ್ನು ಮುಗಿಸಿ ವರ್ಷಗಳೇ ಕಳೆದಿವೆ. ಆಗಾಗ ನೆನಪುಗಳು ಮಾತ್ರ ಕಾಡುತ್ತಿರುತ್ತವೆ ಎಲ್ಲ ಘಟನೆಗಳಿಗೆ ಮೂಕ ಸಾಕ್ಷಿಯಾಗಿ. ಕಾಲ ಕಳೆಯುತ್ತಿದ್ದೇನೆ ಕಾಲನ ಕರೆಯ ನಿರೀಕ್ಷೆಯಲ್ಲಿ, ಮತ್ತೆ ಬಾರದೆ ಆ ಗತಕಾಲ ! ಹೇಗೆ ಸಾಧ್ಯ ? ಗತಕಾಲ ಇತಿಹಾಸ ಸೇರಿಯಾಗಿದೆ.
*****
( ಮುಗಿಯಿತು )
Comments
ಉ: ಪಾಪ ಪ್ರಜ್ಞೆ ( ಕಥೆ ) ಭಾಗ 2
In reply to ಉ: ಪಾಪ ಪ್ರಜ್ಞೆ ( ಕಥೆ ) ಭಾಗ 2 by venkatb83
ಉ: ಪಾಪ ಪ್ರಜ್ಞೆ ( ಕಥೆ ) ಭಾಗ 2
ಉ: ಪಾಪ ಪ್ರಜ್ಞೆ ( ಕಥೆ ) ಭಾಗ 2
In reply to ಉ: ಪಾಪ ಪ್ರಜ್ಞೆ ( ಕಥೆ ) ಭಾಗ 2 by H A Patil
ಉ: ಪಾಪ ಪ್ರಜ್ಞೆ ( ಕಥೆ ) ಭಾಗ 2