ಹಿಮಗಿರಿ

ಹಿಮಗಿರಿ

ಕವನ

 ಭಾರತ ಭೂಮಿಯ ಪುಣ್ಯದ ಪುಂಜವು

ಬಡಗಿನ ದೆಸೆಯಲಿ ಮೆರೆಯುವುದು

ನದಿಗಳ ಕಳುಹಿಸಿ ಭೂಮಿಗೆ ಸಾರವ 

ಹಿಮಗಿರಿ ಕರುಣೆಯಲೀಯುವುದು॥              ೧

ಕೋಟೆಯೆ ತಾನಾಗುತ ವೈರಿಗಳನು

ತಡೆಯುತ ನಾಡನು ರಕ್ಷಿಪನು

ಭಾರತ ಮಾತೆಯ ಪುತ್ರರು ನಮ್ಮನು

ಪೊರೆಯುತ ಇಂದಿಗು ನಿಂತಿಹನು॥               ೨

ಶೈತ್ಯವ ತಡೆಯುತ ತಾನೇ ಹಿಮದಲಿ

ಮುಳುಗಿಹನೀ ಕರುಣಾಮಯನು

ಭಾರತ ಮಾತೆಯ ರಜತದ ಮಕುಟದ

ತೆರದಲಿ ರಂಜಿಸಿ ಶೋಭಿಪನು॥                  ೩

ಗೌರೀಶಂಕರ ಶಿಖರದಲೀತನ

ಜಾತೆಯು ಗೌರಿಯು ನೆಲೆಸಿಹಳು

ಪಾವನ ಮೂರುತಿ ಗಂಗಾಧರನೊಡ

ಗೂಡಿರೆ ಮಾತೆಯು ಶೋಭಿಪಳು ॥             ೪

ಹಿಮವಂತನ ಕೀರ್ತಿಯ ಬಾವುಟವದು

ದಶದಿಕ್ಕುಗಳಲಿ ಹಾರುತಿದೆ

ವಿಶ್ವದಲೀತನೆ ನಗಗಳ ರಾಜನು

ಎಂದಿದೊ ಲೋಕವೆ ಸಾರುತಿದೆ॥                 ೫

ಭಾರತ ದೇಶದ ಸಂಸ್ಕೃತಿ ಪ್ರಕೃತಿ

ಹಿಮಗಿರಿಯಾಧಾರದೊಳಿಹುದು

ನಮ್ಮಯ ನಗವಿದು ಬಾಳುವ ವರೆಗೂ

ಭಾರತ-ಸಂಸ್ಕೃತಿ ಬಾಳುವುದು॥                   ೬