ಕಥೆ ‍‍‍‍‍= ಅದೃಷ್ಟದಾಟ

ಕಥೆ ‍‍‍‍‍= ಅದೃಷ್ಟದಾಟ

ಅದು ಯಶವಂತಪುರ ರೈಲ್ವೆ ನಿಲ್ದಾಣ.

ಸಮಯ ಸುಮಾರು ರಾತ್ರಿ ಹತ್ತೂವರೆ ಘಂಟೆ.

ಅಲ್ಲಿದ್ದ ಸ್ಪೀಕರ್ ನಲ್ಲಿ ಮಧುರವಾದ ಧ್ವನಿಯೊಂದು ಯಾವುದೋ ಟ್ರೈನಿನ ಹೆಸರು ಹೇಳಿ ಇನ್ನೇನು ಕೆಲವೇ ನಿಮಿಷದಲ್ಲಿ ಪ್ಲಾಟ್ಫಾರ್ಮ್ ನಂಬರ್ ೧ಕ್ಕೆ ಬಂದು ನಿಲ್ಲುತ್ತದೆ ಎಂದು ಕನ್ನಡ, ಇಂಗ್ಲಿಶ್ ಹಾಗೂ ಹಿಂದಿಯಲ್ಲಿ ಬಡಬಡಿಸುತ್ತಿದ್ದಳು.

ಕೂಡಲೇ ಪ್ಲಾಟ್ಫಾರ್ಮ್ ಮೇಲಿದ್ದ ಜನ ತಮ್ಮ ತಮ್ಮ ಲಗೇಜನ್ನು ಸಿದ್ಧಪಡಿಸಿಕೊಂಡು ಪ್ಲಾಟ್ ಫಾರ೦ ತುದಿಗೆ ಬಂದು ನಿಲ್ಲುತ್ತಿದ್ದರು.

ಬಂದಿಳಿಯುವ ಪ್ರಯಾಣಿಕರ ಲಗೇಜನ್ನು ಕೊ೦ಡೊಯ್ಯೊಲು ಕೂಲಿಗಳು ಸಿದ್ಧರಾಗುತ್ತಿದ್ದರು.

ಪ್ಲಾಟ್ಫಾರ್ಮ್ ಮೇಲಿದ್ದ ಅಂಗಡಿಯವನು ತನ್ನ ಕಾಫಿ ಫಿಲ್ಟರ್ ಗೆ ಬಿಸಿ ನೀರನ್ನು ಮೇಲಿಂದ ಸುರಿಯುತ್ತಿದ್ದನು.

ಪ್ಲಾಟ್ಫಾರ್ಮ್ ಮೇಲೆ ನಿಂತಿದ್ದ ಹುಡುಗಿಯರ ಗುಂಪೊಂದು ರೈಲ್ವೆ ಹಳಿಯನ್ನು ನೋಡಿ ಮೂಗು ಮುಚ್ಚಿಕೊಂಡು ಮುಂದೆ ಸಾಗುತ್ತಿದ್ದರು.

ಅಷ್ಟರಲ್ಲಿ ಮತ್ತೊಮ್ಮೆ ಅದೇ ಮಧುರವಾದ ಧ್ವನಿಯಲ್ಲಿ ಟ್ರೈನಿನ ಹೆಸರು ಹೇಳಿ ಇನ್ನು ಕೆಲವೇ ಕ್ಷಣಗಳಲ್ಲಿ ಪ್ಲಾಟ್ಫಾರ್ಮ್ ಗೆ ಬಂದು ನಿಲ್ಲುತ್ತದೆ ಎಂದು ಕೂಗಿದ ಐದು ನಿಮಿಷದಲ್ಲಿ ಹಾರನ್ ಸದ್ದು ಮಾಡಿಕೊಂಡು ಟ್ರೈನ್ ಬಂತು.

ಕರ್ಕಶ ಶಭ್ದ ಮಾಡಿಕೊಂಡು ಟ್ರೈನ್ ಪ್ಲಾಟ್ಫಾರ್ಮ್ ಗೆ ಬಂದು ನಿಂತಿತು. ಕಾಫಿ, ಟೀ, ಕಾಫಿ ಟೀ, ಗರಂ ಗರಂ ಚಾಯಿ ಚಾಯಿ, ಎಂದು ಒಬ್ಬ ನನ್ನ ಕಿವಿಯ ಪಕ್ಕದಲ್ಲಿ ಜೋರಾಗಿ ಕೂಗಿಕೊಂಡು ಹೋಗುತ್ತಿದ್ದಾನೆ. ಅಲ್ಲಿವರೆಗೂ ಒಂದು ಕಡೆ ಲಗೇಜ್ ಹಿಡಿದುಕೊಂಡು ನಿಂತಿದ್ದ ಜನ ಈಗ ತಮ್ಮ ಲಗೇಜ್ ಗಳನ್ನು ಹಿಡಿದುಕೊಂಡು ಅತ್ತಿಂದಿತ್ತ ಅತ್ತಿಂದಿತ್ತ ಓಡಾಡುತ್ತಿದ್ದಾರೆ. ಇನ್ನೊಂದೆರಡು ನಿಮಿಷದಲ್ಲಿ ಟ್ರೈನ್ ಮತ್ತೆ ಹಾರನ್ ಮಾಡಿಕೊಂಡು ನಿಧಾನವಾಗಿ ನಿಲ್ದಾಣದಿಂದ ಹೊರಟಿತು.

ನಾನು ಮಾತ್ರ ಅಲ್ಲೇ ನಿಂತಿದ್ದೆ, ನಾನು ಯಾವ ಊರಿಗೂ ಹೋಗಬೇಕಾಗಿರಲಿಲ್ಲ, ಯಾರನ್ನೂ ಟ್ರೈನ್ ಹತ್ತಿಸಲು ಬಂದಿರಲಿಲ್ಲ, ಯಾರನ್ನು ಕರೆದೊಯ್ಯಲೂ ಬಂದಿರಲಿಲ್ಲ, ಆದರೂ ಬಂದಿದ್ದೆ ಏಕೆ?

ಟ್ರೈನ್ ನಿಧಾನಕ್ಕೆ ವೇಗ ಪಡೆದುಕೊಂಡು ಮುಂದೆ ಸಾಗುತ್ತಿದ್ದಂತೆ, ನಾನು ನಿಲ್ದಾಣದ ಆಚೆ ಹೋಗುವ ಬದಲು ಪ್ಲಾಟ್ಫಾರ್ಮ್ ಕೆಳಗಿಳಿದು ಹಳಿಯ ಮೇಲೆ ನಡೆದುಕೊಂಡು ಸಾಗುತ್ತಿದ್ದೆ. ನನ್ನ ಕೈಲಿ ಏನೂ ಲಗೇಜ್ ಇರಲಿಲ್ಲ. ಅಲ್ಲಿ ನಿಂತಿದ್ದ ಗಾರ್ಡ್ ಒಬ್ಬ ಎಲ್ಲಿಗೆ ಹೋಗ್ತಾ ಇದ್ದೀರಾ? ನನ್ನ ಹಸ್ತದ ನಾಲ್ಕು ಬೆರಳನ್ನು ಮಡಚಿ ಕಿರುಬೆರಳನ್ನು ಮೇಲಕ್ಕೆತ್ತಿ ಸಂಜ್ಞೆ ಮಾಡಿದೆ. ಅವನು ಸುಮ್ಮನೆ ತಲೆ ಆಡಿಸಿ ಹೊರಟು ಹೋದ. ಆದರೆ ನಾನು ಅದರ ಸಲುವಾಗಿ ರೈಲ್ವೆ ನಿಲ್ದಾಣಕ್ಕೆ ಬಂದಿರಲಿಲ್ಲ. ನಾನು ಬಂದಿದ್ದ ಉದ್ದೇಶವೇ ಬೇರೆ ಆಗಿತ್ತು.

ನಾನು ಎಲ್ಲಿಗೋ ಹೋಗಬೇಕಿತ್ತು. ಆದರೆ ಅದಕ್ಕೆ ಟ್ರೈನ್ ಹತ್ತಿ ಹೋಗಲು ಸಾಧ್ಯವಿರಲಿಲ್ಲ, ಟ್ರೈನೆ ನನ್ನ ಮೇಲೆ ಹತ್ತಬೇಕಿತ್ತು. ಹೌದು ನಾನು ಸಾಯಬೇಕಿತ್ತು. ಸಾಯುವುದಕ್ಕೋಸ್ಕರ ಬಂದಿದ್ದೆ. ಆದರೆ ನಾನು ಸಾಯುವಂಥ ಘೋರ ಕಾರಣ ಏನೂ ಇರಲಿಲ್ಲ. ಆದರೆ ಸಣ್ಣ ಸಣ್ಣ ಕಾರಣಗಳೇ ಅತಿಯಾದಾಗ ಘೋರವಾದ ಕಾರಣವಾಗಿ ಬಿಡುತ್ತದೆ.

ಹಳಿಯ ಅಕ್ಕಪಕ್ಕ ನಡೆಯುತ್ತಿದ್ದರೆ ಕೆಟ್ಟ ವಾಸನೆ....ಥೂ ಅದು ಹೇಗಪ್ಪ ರೈಲ್ವೆ ಟ್ರಾಕ್ ಮೇಲೆ ಮಲಗುತ್ತಾರೆ? ನಾನು ಮಲಗುವುದಿಲ್ಲ ನಿಂತುಕೊಂಡೆ ಸಾಯುತ್ತೇನೆ.

ಇನ್ನೊಂದು ಟ್ರೈನ್ ಬರುವ ಸದ್ದಾಗುತ್ತಿದೆ. ದೂರದಲ್ಲಿ ಲೈಟ್ ಕಾಣುತ್ತಿದ್ದೆ. ಹಳಿಯ ಪಕ್ಕದಲ್ಲಿ ನಡೆಯುತ್ತಿದ್ದವನು ಹಳಿಯ ಮಧ್ಯಕ್ಕೆ ಬಂದೆ. ಟ್ರೈನ್ ನ ಶಭ್ದ ಹತ್ತಿರ ಆಗುತ್ತಿದೆ. ಕಾಲುಗಳು ಯಾಕೋ ನಡುಗಿದಂತೆ ಆಗುತ್ತಿದೆ. ಈಗ ಟ್ರೈನ್ ಸ್ಪಷ್ಟವಾಗಿ ಕಾಣುತ್ತಿದೆ. ಇನ್ನು ಎರಡು ನಿಮಿಷದಲ್ಲಿ ನನ್ನ ಹತ್ತಿರ ಇರುತ್ತದೆ. ಆಮೇಲೆ ನನ್ನ ಮೇಲೆ ಹೋಗಿರುತ್ತೆ. ಟ್ರೈನ್ ನ ಶಬ್ದ ಇನ್ನಷ್ಟು ಹತ್ತಿರವಾಗುತ್ತಿದೆ. ಯಾಕೋ ಧೈರ್ಯ ಸಾಲುತ್ತಿಲ್ಲ. ಆಗಲಿ ಪರವಾಗಿಲ್ಲ ಇದಿಲ್ಲ ಎಂದರೆ ಇನ್ನೇನು ಟ್ರೈನ್ ಗಳೇ ಬರುವುದಿಲ್ಲವ ಮುಂದಿನ ಟ್ರೈನ್ ಗೆ ಸಿಕ್ಕು ಸಾಯುತ್ತೆ. ಇನ್ನು ಕೆಲವೇ ಕೆಲವು ಸೆಕೆಂಡ್ ಗಳು ನಾನು ಅಲ್ಲಿದ್ದಿದ್ದರೆ ಆ ಟ್ರೈನ್ ಗುದ್ದಿದ ರಭಸಕ್ಕೆ ಏನಾಗುತ್ತಿದ್ದೇನೋ ಗೊತ್ತಿಲ್ಲ. ತಕ್ಷಣ ಪಕ್ಕಕ್ಕೆ ಹಾರಿಬಿಟ್ಟೆ.

ಹಳಿಯ ಮಧ್ಯಕ್ಕೆ ಹೋದಾಗ ಕಾಲನ್ನು ಯಾರೋ ಮಾಡಿದ ಅಸಹ್ಯದ ಮೇಲಿಟ್ಟಿದ್ದೆ. ಹೇಗಿದ್ದರೂ ಸಾಯುತ್ತಿದ್ದೇನೆ ಅದರ ಬಗ್ಗೆ ಯಾಕೆ ಯೋಚನೆ ಮಾಡಬೇಕು ಎಂದು ನಿಂತಿದ್ದೆ. ಆದರೆ ಈಗ ನನಗೆ ಅಸಹ್ಯ ಆಗುತ್ತಿದೆ. ಹೇಗಿದ್ದರೂ ಮುಂದಿನ ಟ್ರೈನಿಗೆ ಸಿಕ್ಕು ಸಾಯುವುದು ಖಂಡಿತ ಎಂದು ಅನಿಸಿ ಚಪ್ಪಲಿ ಬಿಟ್ಟು ಬರೀ ಕಾಲಲ್ಲಿ ನಡೆಯಲು ಶುರು ಮಾಡಿದೆ.

ಹೌದು ನಾನು ಸಾಯಲು ಕಾರಣ. ಚಿಕ್ಕಂದಿನಿಂದ ನನಗೆ ಓದೇ ತಲೆಗೆ ಹತ್ತಲಿಲ್ಲ. ಎಷ್ಟೆಷ್ಟೋ ಕಷ್ಟ ಪಟ್ಟರೂ ಓದು ಹತ್ತಲಿಲ್ಲ. ಮನೆಯಲ್ಲಿ ಅಪ್ಪ, ಅಪ್ಪ ಯಾವಾಗಲೂ ತಂಗಿಯ ಮುಂದೆ ನನ್ನನ್ನು ಅವಮಾನ ಮಾಡಿ ಮಾತಾಡುತ್ತಿದ್ದರು. ಅವರಿಗೆ ಎಷ್ಟೇ ಬಿಡಿಸಿ ಹೇಳಿದರೂ ನನ್ನ ಮಾತುಗಳನ್ನು ಅವರು ಅರ್ಥವೇ ಮಾಡಿಕೊಳ್ಳುತ್ತಿರಲಿಲ್ಲ.  ಮಾತೆತ್ತಿದರೆ ತಂಗಿಗೆ ಹೋಲಿಸಿ, ಇಲ್ಲ ಅಂದರೆ ನನಗೆ ಆಗದ ಹುಡುಗರಿಗೆ ಹೋಲಿಸಿ ಬೈಯ್ಯುತ್ತಿದ್ದರು. ಆ ಮೂಲೆ ಮನೆ ಹುಡುಗನ ಕಾಲ ಕೆಳಗೆ ನುಗ್ಗು ಬುದ್ಧಿ ಬರುತ್ತದೆ ಎಂದು. ಪದೇ ಪದೇ ಅದೇ ಮಾತನ್ನು ಕೇಳಿ ಅದನ್ನೂ ಪ್ರಯತ್ನ ಪಟ್ಟೆ...

ಆದರೆ ಏನು ಮಾಡುವುದು ಅದಕ್ಕೂ ಬುದ್ಧಿ ಬರಲಿಲ್ಲ. ಬದಲಿಗೆ ಅದಕ್ಕೂ ಬೈಸಿಕೊಂಡೆ ನಾಚಿಕೆ ಮಾನ ಮರ್ಯಾದೆ ಏನೂ ಇಲ್ಲ ನಿಂಗೆ ದಂಡ ಪಿಂಡ, ನಿನ್ನ ಬದಲು ಒಂದು ಎಮ್ಮೆನ ಸಾಕಿದ್ದರೆ ಕನಿಷ್ಠ ಪಕ್ಷ ಅದು ಹಾಲನ್ನಾದರೂ ಕೊಡುತ್ತಿತ್ತು. ಅಯೋಗ್ಯ ಅಯೋಗ್ಯ....

ಮನೆಯಲ್ಲಿ ಈ ಕಥೆ ಆದರೆ ಶಾಲೆಗೆ ಹೋದರೆ ಅಲ್ಲಿ ಟೀಚರ್ ಕೈಲಿ ಅರ್ಚನೆ ಆಗುತ್ತಿತ್ತು. ಮನೆಯಲ್ಲಿ ಬರೀ ಮೂರು ಜನರ ಮುಂದೆ ಅವಮಾನ ಆದರೆ ಶಾಲೆಯಲ್ಲಿ ನೂರು ಜನ ನನ್ನ ನೋಡಿ ನಗುತ್ತಿದ್ದರು. ಮೊದ ಮೊದಲು ಇದಕ್ಕೆಲ್ಲ ಬಹಳ ಅವಮಾನವಾಗುತ್ತಿತ್ತು. ಎರಡು ಮೂರು ಸಲ ಶಾಲೆಗೆ ಬಂಕ್ ಮಾಡಿ ಅದಕ್ಕೂ ಸಾಕಷ್ಟು ಬೈಗುಳ ತಿಂದಿದ್ದೆ. ಆಮೇಲೆ ಆಮೇಲೆ ಅದು ಮಾಮೂಲಾಗಿ ಅಭ್ಯಾಸವಾಗಿಬಿಟ್ಟಿತು. ಹಾಗೋ ಹೀಗೋ ಹತ್ತನೇ ತರಗತಿಗೆ ಬಂದಿದ್ದೆ. ಪರೀಕ್ಷೆಯ ದಿನ ಅಪ್ಪ ಬೆಳಿಗ್ಗೆ ಹೇಳಿ ಕಳುಹಿಸಿದ್ದರು. ಮಗನೆ ಈ ಸಲ ಏನಾದರೂ ಪರೀಕ್ಷೆ ಪಾಸಾಗದಿದ್ದರೆ ಮನೆ ಇಂದ ಆಚೆ ಹಾಕಿ ಬಿಡುತ್ತೇನೆ.

ಎಲ್ಲಿ ಮನೆ ಇಂದ ಆಚೆ ಹಾಕಿದರೆ ಊಟಕ್ಕೆ ತೊಂದರೆ ಆಗುತ್ತದೆ ಎಂದು ಪರೀಕ್ಷೆಯಲ್ಲಿ ಪಾಸಾಗಲೇ ಬೇಕು ಎಂದು ನಿರ್ಧರಿಸಿ ಬಹಳ ಶ್ರಮ ಪಟ್ಟು, ಹಗಲು ರಾತ್ರಿ ಕಷ್ಟ ಪಟ್ಟು, ಎಲ್ಲ ಪುಸ್ತಕಗಳು ಹಳೆ ಪ್ರಶ್ನೆ ಪತ್ರಿಕೆಗಳು ಎಲ್ಲವನ್ನೂ ಪರಿಶೀಲಿಸಿ ಚೀಟಿಗಳನ್ನು ತಯಾರು ಮಾಡಿಕೊಂಡು ಹೋಗಿದ್ದೆ. ಆದರೆ ಶನಿ ಮಹಾತ್ಮ ನನ್ನ ಹೆಗಲೇರಿದ್ದ ಅನಿಸತ್ತೆ ಪರೀಕ್ಷೆ ಶುರುವಾಗಿ ಒಂದು ಘಂಟೆಯಲ್ಲೇ ಮನೆಗೆ ಬಂದು ಬಿಟ್ಟೆ. ಅಪ್ಪನಿಗೆ ಆಶ್ಚರ್ಯವಾಗಿ ಯಾಕಪ್ಪ ಇಷ್ಟು ಬೇಗ ಪರೀಕ್ಷೆ ಬರೆದು ಬಿಟ್ಟೆಯ? ಇಲ್ಲಪ್ಪ ಇನ್ನು ಒಂದೇ ಒಂದು ಪ್ರಶ್ನೆಗೆ ಉತ್ತರ ಬರೀಬೇಕಿತ್ತು ಅಷ್ಟರಲ್ಲಿ ಮೇಡಂ ಬಂದು ನೀನು ಬರೆದಿದ್ದು ಸಾಕು ಹೋಗು ಎಂದರು. ಯಾಕಪ್ಪ ಅಂತ ಘನ ಕಾರ್ಯ ಎಂದು ಮಾಡಿದ್ರಿ ತಾವು? ಏನಿಲ್ಲಪ್ಪ ಚೀಟಿ ಇಟ್ಟುಕೊಂಡು ಬರೆಯುತ್ತಿದ್ದೆ ಅದಕ್ಕೆ ಡಿಬಾರ್ ಮಾಡಿಬಿಟ್ಟರು. ಅಂದು ಅಪ್ಪ ಅಮ್ಮ ಅಂದ ಮಾತುಗಳಿಗೂ ಸಾಯುವ ನಿರ್ಧಾರ ಮಾಡಿರಲಿಲ್ಲ. ಆದರೆ ಅಪ್ಪ ನನ್ನನ್ನೇನೂ ಮನೆ ಬಿಟ್ಟು ಆಚೆ ಕಳಿಸಲಿಲ್ಲ ಆದರೆ ಮನೆಯಲ್ಲಿದ್ದೂ ನನ್ನೊಡನೆ ಮಾತಾಡುವುದು ಬಿಟ್ಟರು.

ಏನಿದು ಇಷ್ಟು ಹೊತ್ತಾಯಿತು ಯಾವುದೇ ಟ್ರೈನ್ ಬರುತ್ತಿಲ್ಲ. ವಾಚಲ್ಲಿ ಟೈಮ್ ನೋಡಿದೆ ಸಮಯ ಹನ್ನೊಂದು ತೋರಿಸುತ್ತಿತ್ತು. ಇನ್ನು ಅಲ್ಲೊಂದು ಇಲ್ಲೊಂದು ದೀಪಗಳು ಉರಿಯುತ್ತಿದ್ದವು. ಗಾಳಿ ತಣ್ಣಗೆ ಬೀಸುತ್ತಿತ್ತು.  ಆದರೆ ಬೇಡ ಬಿಡಿ ಪದೇ ಪದೇ ವಾಸನೆ ಎಂದರೆ ನಿಮಗೂ ಅಸಹ್ಯ ಅನಿಸುತ್ತೆ. ಇದರ ಬದಲು ಬೇರೆ ಯಾವುದಾದರೂ ಮಾರ್ಗ ಹುಡುಕಬೇಕಿತ್ತು.  ಇನ್ನೇನು ಬಂದಾಗಿದೆ ಏನು ಮಾಡುವುದು ಟ್ರೈನ್ ಬರುವ ತನಕ ಕಾಯಲೇ ಬೇಕು. ಈ ಬಾರಿ ಏನೇ ಆದರೂ ಸಾಯಲೇ ಬೇಕು.

ಅಷ್ಟು ದಿನ ಬರೀ ಮನೆ, ಶಾಲೆಯಲ್ಲಿ ಮಾತ್ರ ಅವಮಾನ ಆಗುತ್ತಿತ್ತು. ಆದರೆ ಯಾವಾಗ ಡಿಬಾರ್ ಆದೇನೋ ಆಗಿನಿಂದ ಮನೆಯ ಸುತ್ತ ಮುತ್ತ ಜನರೂ, ಸ್ನೇಹಿತರು ಎಲ್ಲರೂ ಅವಮಾನಿಸಲು ಶುರುಮಾಡಿದರು. ಆಗಲೂ ಸಾಯಬೇಕು ಎನಿಸಿರಲಿಲ್ಲ.  ಓದಂತೂ ನಿನ್ನ ತಲೆಗೆ ಹತ್ತಲಿಲ್ಲ. ಹೋಗಲಿ ಯಾವುದಾದರೊಂದು ಕೆಲಸ ಹುಡುಕಿ ನಿಮ್ಮಪ್ಪನ್ಗೆ ಸ್ವಲ್ಪ ಸಹಾಯ ಮಾಡು. ಆಗಾದರೂ ಅವರು ಸಮಾಧಾನ ಆಗುತ್ತಾರೆ.

ಎಲ್ಲೇ ಕೆಲಸಕ್ಕೆ ಹೋದರು ಕನಿಷ್ಠ ಪಕ್ಷ ಹತ್ತನೇ ತರಗತಿ ಆದರೂ ಮುಗಿಸಿರಬೇಕು ಇಲ್ಲ ಎಂದರೆ ಕೆಲಸ ಇಲ್ಲ ಎನ್ನುತ್ತಿದ್ದರು. ಕೊನೆಗೂ ಹೇಗೋ ಮಾಡಿ ಒಂದು ಕೊರಿಯರ್ ಕಂಪನಿ ಒಂದರಲ್ಲಿ ಡೆಲಿವರಿ ಬಾಯ್ ಆಗಿ ಕೆಲಸಕ್ಕೆ ಸೇರಿ ಆರು ವರ್ಷದಲ್ಲಿ ಮ್ಯಾನೇಜರ್ ಆಗಿ ಭಡ್ತಿ ಪಡೆದೆ. ಏನೇ ಆದರೂ ಅಪ್ಪ ಮಾತ್ರ ಮಾತಾಡುತ್ತಿರಲಿಲ್ಲ. ಅಷ್ಟರಲ್ಲಿ ನಡೆಯಬಾರದ್ದೊಂದು ನಡೆದು ಹೋಯಿತು...

ವಾಚ್ ನೋಡಿದರೆ ಟೈಮ್ ಹನ್ನೆರಡಕ್ಕೆ ಐದು ನಿಮಿಷ ಇದೆ ಎಂದು ತೋರಿಸುತ್ತಿತ್ತು. ಏನಪ್ಪಾ ಇದು ದರಿದ್ರ ಥೂ ಒಂದು ಘಂಟೆ ಇಂದ ನಡೀತಾ ಇದ್ದೀನಿ ಒಂದಾದರೂ ಟ್ರೈನ್ ಬಂದು ಸಾಯಬಾರದ. ನನ್ನ ಯೋಗ್ಯತೆಗೆ express ಬೇಡ ಒಂದು ಗೂಡ್ಸ್ ಟ್ರೈನ್ ಆದರೂ ಬರಬಾರದ ಥೂ....ಅದಕ್ಕೆ ಅಪ್ಪ ಅನ್ನುತ್ತಿದ್ದು ನಿನ್ನ ಹಣೆ ಬರಹನೆ ಇಷ್ಟು...ನೀನು ಏನು ಮಾಡಬೇಕೆಂದರೂ ಅದು ಆಗುವುದಿಲ್ಲ. ನಿನ್ನ ಕಾಲ್ಗುಣ ಚೆನ್ನಾಗಿಲ್ಲ ಎಂದು...

ಹೌದು ನನಗೆ ಪ್ರೀತಿ ಉಂಟಾಗಿತ್ತು. ಅಲ್ಲೇ ನನ್ನ ಸಹೋದ್ಯೋಗಿ ಒಬ್ಬಳನ್ನು ಇಷ್ಟ ಪಟ್ಟಿದ್ದೆ. ಅವಳೂ ನನ್ನನ್ನು ಇಷ್ಟಪಟ್ಟಿದ್ದಳು. ಈ ವಿಷಯ ಅದು ಹೇಗೋ ಮನೇಲಿ ಗೊತ್ತಾಗಿ. ಅಪ್ಪ ರಾದ್ಧಾಂತ ಮಾಡಿ ಬಿಟ್ಟಿದ್ದರು. ನಿನ್ನ ಯೋಗ್ಯತೆಗೆ ಇದು ಬೇರೆ ಬೇಕಿತ್ತಾ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆಯಂತೆ. ನೆಟ್ಟಗೆ ಒಂದು ಓದಿಲ್ಲ, ಬರಹ ಇಲ್ಲ ನಿನಗ್ಯಾಕೋ ಇದೆಲ್ಲ ಬೇಕು. ಅದೂ ಅಲ್ಲದೆ ನೀನು ಹಾಳಾಗಿದ್ದು ಸಾಲದು ಅಂತ ಅನ್ಯಾಯವಾಗಿ ಯಾಕೆ ಒಂದು ಹುಡುಗಿ ಬಾಳನ್ನು ಹಾಳು ಮಾಡ್ತೀಯ. ಅದೂ ಅಲ್ಲದೆ ಮನೇಲಿ ಅಪ್ಪನಿಗೆ ವಯಸ್ಸಾಗಿದೆ ತಂಗಿ ಮದುವೆ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂಬ ಯೋಚನೆ ಇಲ್ಲ ಇವನಿಗೆ ಲವ್ವಂತೆ ಲವ್ವು...ಇವಿಷ್ಟು ನನ್ನೊಡನೆ ನೇರವಾಗಿ ಅಂದಿದ್ದಲ್ಲ. ನನ್ನನ್ನು ಉದ್ದೇಶಿಸಿ ಅಮ್ಮನ ಎದುರು ಹೇಳಿದ್ದು...ಆಗಲೂ ನನಗೆ ಸಾಯಬೇಕು ಎನಿಸಲಿಲ್ಲ...

ಈಗ ದೀಪಗಳೂ ಮರೆಯಾದವೂ ಸುತ್ತಲೂ ಕಾರ್ಗತ್ತಲು ತುಂಬಿಕೊಂಡಿದೆ. ಬರೀ ಜೀರುಂಡೆಯ ಸದ್ದು ಕೇಳುತ್ತಿದೆ. ಅಕ್ಕಪಕ್ಕದಲ್ಲಿದ್ದ ಮರಗಳು ಗಾಳಿ ಬೀಸಿದಾಗ ಅದರ ಎಲೆಗಳು ಅಲ್ಲಾಡುವ ಸದ್ದು ಕೇಳುತ್ತಿದೆ. ಸ್ವಲ್ಪ ಹೊತ್ತು ಕೂರುವ ಎಂದು ಅಲ್ಲೇ ಪಕ್ಕದಲ್ಲಿದ್ದ ಕಲ್ಲಿನ ಮೇಲೆ ಕುಳಿತೆ. ಇನ್ನೇನು ಈಗಲೋ ಆಗಲೋ ಟ್ರೈನ್ ಬರುತ್ತದೆ..

ನನ್ನ ಜೀವನದಲ್ಲಿ ನಾನು ಕಳೆದುಕೊಂಡಿದ್ದ ಪ್ರೀತಿ ಎಲ್ಲವನ್ನೂ ಅವಳು ಕೊಟ್ಟಿದ್ದಳು. ನನ್ನ ಬದುಕಿನಲ್ಲಿ ಒಂದು ಆಶಾಕಿರಣವಾಗಿ ಬಂದಿದ್ದಳು. ನನ್ನ ಬದುಕನ್ನು ಚೆನ್ನಾಗಿ ತಿಳಿದುಕೊಂಡಿದ್ದಳು. ನನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಳು. ಆದರೆ ಇಂದು ಸಂಜೆ ಆಫೀಸಿನಲ್ಲಿ ಬಂದು ಕೈಗೊಂಡು ಕಾರ್ಡ್ ಕೊಟ್ಟು ಮುಂದಿನ ವಾರ ನನ್ನ ಮದುವೆ ಎಂದಿದ್ದಳು. ನನಗೆ ಆ ಕ್ಷಣಕ್ಕೆ ಕೋಪ ಬರಲಿಲ್ಲ. ಬದಲಿಗೆ ಅಪ್ಪನ ಮಾತು ನೆನೆಸಿಕೊಂಡು ನಗು ಬಂತು. ನೀನು ನೆನೆಸಿದ್ದು ಯಾವುದೂ ನಿನಗೆ ದಕ್ಕುವುದಿಲ್ಲ, ನಿನ್ನ ಅದೃಷ್ಟ ಸರಿ ಇಲ್ಲ. ಅವಳನ್ನು ಏನೇನೋ ಎಷ್ಟೆಷ್ಟೋ ಪ್ರಶ್ನೆಗಳು ಕೇಳಬೇಕು ಎಂದುಕೊಂಡರೂ ಏನೂ ಕೇಳಲು ಮನಸಾಗದೆ ಸುಮ್ಮನೆ ನಕ್ಕು ಕಾರ್ಡ್ ತೆಗೆದುಕೊಂಡೆ. ಅವಳೂ ಅಷ್ಟೇ ಏನೂ ನಡೆದೇ ಇಲ್ಲ ಎನ್ನುವಂತೆ ನಿರ್ಭಾವುಕಳಾಗಿ, ನಿರ್ಲಿಪ್ತವಾಗಿ ಹೊರಟು ಹೋದಳು. ದಾಸರ ಹಾಡೊಂದು ನೆನಪಾಯಿತು.."ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ...

ಇಷ್ಟು ವರ್ಷದಲ್ಲಿ ಎಂದೂ ಅನಿಸದಿದ್ದದ್ದು ಇಂದು ಅನಿಸಿತು. ಹೌದು ಇನ್ನು ನಾನು ಬದುಕಿದ್ದು ಪ್ರಯೋಜನವಿಲ್ಲ ಅಪ್ಪ ಅಮ್ಮನಿಗೆ ಒಳ್ಳೆಯ ಮಗನಾಗಲಿಲ್ಲ, ತಂಗಿಗೆ ಒಳ್ಳೆಯ ಅಣ್ಣನಾಗಲಿಲ್ಲ, ಶಾಲೆಗೆ ಒಳ್ಳೆಯ ವಿದ್ಯಾರ್ಥಿಯಾಗಲಿಲ್ಲ, ಸ್ನೇಹಿತರಿಗೆ ಒಳ್ಳೆಯ ಸ್ನೇಹಿತನಾಗಲಿಲ್ಲ, ನೆರೆಹೊರೆಯವರಿಗೆ ಆಪ್ತನಾಗಲಿಲ್ಲ, ಒಬ್ಬಳು ಪ್ರೇಮಿಗೆ ಪ್ರೇಮಿಯಾಗಲಿಲ್ಲ. ಇನ್ನು ಈ ವಿಷಯ ಮನೆಯಲ್ಲಿ ಗೊತ್ತಾಗಿ ಅವರಿಂದ ಇನ್ನಷ್ಟು ಅವಮಾನ ಮಾಡಿಸಿಕೊಳ್ಳುವುದಕ್ಕಿಂತ ಸಾವೇ ಸರಿ....

ದೂರದಲ್ಲಿ ಟ್ರೈನ್ ಹಾರನ್ ಕೇಳಿತು. ಕುಳಿತಲ್ಲಿಂದ ಎದ್ದೆ. ಜೇಬಲ್ಲಿದ್ದ ಹಣ, ಕೈಯಲ್ಲಿದ್ದ ವಾಚ್, ಮೊಬೈಲ್ ಎಲ್ಲವನ್ನೂ ಕಟ್ಟೆಯ ಮೇಲಿಟ್ಟೆ. ನಾನು ಬದುಕಿದ್ದಾಗಲಂತೂ ನನ್ನಿಂದ ಒಬ್ಬರಿಗೆ ಪ್ರಯೋಜನವಾಗಲಿಲ್ಲ. ಕೊನೇಪಕ್ಷ ಹೇಗಾದರೂ ಯಾರಿಗಾದರೂ ಉಪಯೋಗವಾಗಲಿ. ಟ್ರೈನ್ ಹಾರನ್ ಸದ್ದು ಹತ್ತಿರ ಆಗುತ್ತಿತ್ತು. ಹಳಿಯ ಮಧ್ಯಕ್ಕೆ ಬಂದೆ ಈ ಬಾರಿ ನೋಡಿಕೊಂಡು ಬಂದೆ, ಯಾಕೆಂದರೆ ಕಾಲಿನಲ್ಲಿ ಚಪ್ಪಲಿಯೂ ಇರಲಿಲ್ಲ. ಟ್ರೈನ್ ನ ಲೈಟ್ ಕಂಡಿತು.

ಒಮ್ಮೆ ಆಗಸದ ಕಡೆ ನೋಡಿ ದೇವರೇ ದಯವಿಟ್ಟು ಮುಂದಿನ ಜನ್ಮದಲ್ಲಾದರೂ ನನ್ನನ್ನು ಅದೃಷ್ಟವಂತನಾಗಿ ಮಾಡಪ್ಪಾ. ಈ ರೀತಿ ಹಿಂಸೆ ಮಾತ್ರ ಕೊಡಬೇಡಪ್ಪ. ಟ್ರೈನ್ ಸದ್ದು ಮತ್ತಷ್ಟು ಜೋರಾಗುತ್ತಿದೆ. ಯಾಕೋ ಟ್ರೈನ್ ಹತ್ತಿರ ವಾದಂತೆ ಭಯವಾಗುತ್ತಿದೆ. ಇಲ್ಲ ಈ ಸಲ ಹೆದರ ಬಾರದು. ಎಂದು ಕಣ್ಣು ಮುಚ್ಚಿಕೊಂಡು ಕೈ ಕಾಲು ಕಟ್ಟಿ ಮಾಡಿಕೊಂಡು ನಿಂತುಕೊಂಡೆ. ಇನ್ನಷ್ಟು ಜೋರಾಗಿ ಮತ್ತಷ್ಟು ಜೋರಾಗಿ ಅತೀ ಭಯಂಕರ ಜೋರಾಗಿ, ಅರಿ ಭಯಂಕರ ಜೋರಾಗಿ ಕೇಳುತ್ತಿದೆ...ಇದ್ದಕ್ಕಿದ್ದಂತೆ ಆ ಸದ್ದು ಕಮ್ಮಿಯಾಗುತ್ತ ಹೋಯಿತು..ಮತ್ತಷ್ಟು ಕಮ್ಮಿಯಾಗುತ್ತ ಹೋಯಿತು...ಪೂರ್ತಿ ನಿಶಬ್ಧವಾಯಿತು. ಕಣ್ಣು ಬಿಟ್ಟು ನೋಡಿದರೆ ಟ್ರೈನ್ ಪಕ್ಕದ ಹಳಿಯಲ್ಲಿ ಹೋಗುತ್ತಿದೆ. ಮತ್ತೆ ಅಪ್ಪನ ಮಾತು ನೆನಪಾಯಿತು ನಿನ್ನ ಕಾಲ್ಗುಣ ಸರಿ ಇಲ್ಲ ಕಣೋ....ಆಗಸದ ಕಡೆ ನೋಡಿ ದೇವರೇ ಇಲ್ಲೂ ಕೈ ಕೊಟ್ಯ....

The End ...

ತೆರೆ ಮೇಲೆ rolling ಟೈಟಲ್ ಶುರುವಾಯಿತು...

ಫಳ್ಳನೆ ಬೆಳಕು ಹೊತ್ತಿಕೊಂಡಿತು. ಜನ ಆಚೆ ಹೊರಡಲು ಎಲ್ಲ ಬಾಗಿಲು ಕಡೆ ನುಗ್ಗುತ್ತಿದ್ದರು. ನಾನು ಆಚೆ ಬಂದು ಮತ್ತೊಮ್ಮೆ ಸಿನೆಮಾದ ಪೋಸ್ಟರ್ ನೋಡಿದೆ. ಸಿನೆಮಾದ ಹೆಸರು "ಅದೃಷ್ಟದಾಟ"ಎಂದಿತ್ತು. ಸಧ್ಯ ಹೇಗಪ್ಪ ಭಾನುವಾರ ಟೈಮ್ ಪಾಸ್ ಮಾಡೋದು ಅಂದುಕೊಂಡಿದ್ದೆ. ಪರವಾಗಿಲ್ಲ ಸಿನೆಮಾ ಬೋರ್ ಅಂತೂ ಆಗಲಿಲ್ಲ. ಎಂದುಕೊಂಡು ಮನೆ ಕಡೆ ಹೊರಟೆ.....

Rating
No votes yet

Comments